ಫ್ರೆಂಚ್ ತರಗತಿಯ ಹುಡುಗ-ಹುಡುಗಿಯರ ನಡುವೆ ನಾನು ಮತ್ತು ರಾಜಕುಮಾರ್!
ಎಂ ಆರ್ ಕಮಲಾ
ಐದು ವರ್ಷಗಳ ಕಾಲ ಫ್ರೆಂಚ್ ಕಲಿಕೆಗೆ ಮಣ್ಣು ಹೊತ್ತೆನಲ್ಲ! ಮೊದಮೊದಲು ಒಂದಕ್ಷರವೂ ಅರ್ಥವಾಗುತ್ತಿರಲಿಲ್ಲ. ಥೇಟ್ ಇಂಗ್ಲಿಷ್ ವಿಂಗ್ಲೀಷ್ ಸಿನೆಮಾದ ಶ್ರೀದೇವಿಯಂತೆ ಅವಮಾನಕ್ಕೊಳಗಾಗುತ್ತಿದ್ದೆ! ಯಾರನ್ನಾದರೂ ಕೇಳೋಣವೆಂದರೆ ಫ್ರೆಂಚ್ ತರಗತಿಯಲ್ಲಿ ನನಗೆ ಗೆಳೆಯರೇ ಇರಲಿಲ್ಲ ಕನ್ನಡದ ಅನೇಕ ಹುಡುಗ-ಹುಡುಗಿಯರು ಇದ್ದರೂ ತರಗತಿಯ ಹೊರಗೆ ಯಾರೊಬ್ಬರು ಕನ್ನಡ ಮಾತನಾಡುತ್ತಿರಲಿಲ್ಲ.. ತಾವು ಕನ್ನಡಿಗರು ಎಂದು ಹೇಳಲೂ ನಾಚುತ್ತಿದ್ದರು. ಅದರಲ್ಲೂ ವಿಶೇಷವಾಗಿ ಹುಡುಗಿಯರು! ಮೇಡಮ್ ಬರುವುದು ತಡವಾದರೆ ನಾನು ಅಲ್ಲಿದ್ದ ರೇಡಿಯೊ ಹಾಕಿಕೊಂಡು ಕನ್ನಡ ಸಿನೆಮಾ ಹಾಡುಗಳನ್ನು ಕೇಳುತ್ತಿದ್ದೆ.

ನಮ್ಮ ಕನ್ನಡದ ಹುಡುಗಿಯರು ಪಟ್ ಎಂದು ಆರಿಸಿಬಿಡುತ್ತಿದ್ದರು. ಅವರೊಂದಿಗೆ ವಾಗ್ವಾದ ಮಾಡುವುದು ನನಗಿಷ್ಟವಿರಲಿಲ್ಲ. ಹಿಂದಿನ ಲೆವೆಲ್ ನಲ್ಲಿ ಶಿಕ್ಷಕರು ಸಹಪಾಠಿಯ ಚಿತ್ರ ಬರೆಯಿರಿ ಎಂದು ಹೇಳಿದ್ದಾಗ, ಸೀರೆಯುಡುತ್ತಿದ್ದ ನನ್ನನ್ನು ಯಾರೋ ಹುಡುಗ ‘ಮಾರಿ ದೇವತೆ’ಯಂತೆ ಚಿತ್ರಿಸಿದ್ದನಲ್ಲ! ನಾನು ಬೇರೆ ಉಡುಪುಗಳನ್ನು ತೊಡುತ್ತಿದ್ದರೂ ಫ್ರೆಂಚ್ ತರಗತಿಗಳಿಗೆ ಮಾತ್ರ ಕಡ್ಡಾಯವಾಗಿ ಸೀರೆಯುಟ್ಟೆ ಹೋಗುತ್ತಿದ್ದೆ. ನನ್ನ ಉಡುಪನ್ನು ಗೇಲಿಯ ವಸ್ತು ಮಾಡಿಕೊಂಡಿದ್ದ ಹುಡುಗರ ಬಗ್ಗೆ ಒಂದು ‘ಬಂಡಾಯ’ ಮನೋಧರ್ಮ ಬೆಳೆದು ಬಿಟ್ಟಿತ್ತು..
ಯಾವ ವಿಷಯದ ಚರ್ಚೆಯನ್ನೇ ಮಾಡಲಿ ಕನ್ನಡ, ಕರ್ನಾಟಕದ ಉದಾಹರಣೆಗಳನ್ನೇ ನೀಡುತ್ತಿದ್ದೆ.. ಒಮ್ಮೆ ತರಗತಿಯಲ್ಲಿ ಒಬ್ಬ ವ್ಯಕ್ತಿಯನ್ನು ವರ್ಣಿಸಲು ಬೇಕಾದ ‘ಗುಣ ವಿಶೇಷಣಗಳನ್ನು’ ಮೇಡಮ್ ಹೇಳಿಕೊಟ್ಟರು. ಉದಾಹರಣೆಗೆ: ಅವನು ಎತ್ತರವಾಗಿದ್ದಾನೆ, ಕೂದಲು ಕಪ್ಪಾಗಿದೆ, ಶಾಂತ, ಸೂಕ್ಷ್ಮ ಸ್ವಭಾವ..
ಹೀಗೆ, ಒಬ್ಬ ನಟ ಅಥವಾ ನಟಿಯನ್ನು ಆರಿಸಿಕೊಂಡು ಬರೆಯಬೇಕಿತ್ತು.. ನನ್ನ ಸುತ್ತ ಮುತ್ತಲಿದ್ದವರೆಲ್ಲ.. Angelina Jolie-Brad Pitt, Tom Cruise-Katie Holmes, James Cameron-Kate Winslet, Jeniffer Aniston-Justin Theroux, Will Smith-Jada Pinkett, Aishwarya Rai-Abhishek Bacchan, Shahrukh Khan ಎಂಬೆಲ್ಲ ಹೆಸರುಗಳನ್ನು ಹೇಳಿದರು.

ನಾನು ನನ್ನ ಮೆಚ್ಚಿನ ನಟ ‘ರಾಜ್ ಕುಮಾರ್’ ಎಂದು ಅತ್ಯಂತ ಆತ್ಮ ವಿಶ್ವಾಸದ ದನಿಯಲ್ಲಿ ಹೇಳಿದೆ. ಅವರಿಗೆಲ್ಲ ನಗಲು ಧೈರ್ಯ ಬರಲಿಲ್ಲ. ಯಾವುದಾದರೂ ಐತಿಹಾಸಿಕ ಸ್ಥಳದ ಬಗ್ಗೆ ಬರೆಯಿರಿ ಎಂದಾಗ ಬೇಕೆಂದೇ ‘ಹಂಪಿ’ಯ ಬಗ್ಗೆ ಬರೆದೆ.. ನದಿ ಎಂದಾಗ ಕಾವೇರಿ.. ರೋಮ್ ನಗರವನ್ನೇ ನೋಡದ ಹುಡುಗ-ಹುಡುಗಿಯರು ನೋಡಿದಂತೆ ನಟಿಸುತ್ತ ಮಾತನಾಡುತ್ತಿದ್ದರು. ಸೋಗಲಾಡಿತನವನ್ನೇ ಕಂಡರಾಗದಿದ್ದ ನನಗೆ ಕೊಂಚ ಒಳಗೊಳಗೆ ಸಿಟ್ಟು ಬರುತ್ತಿದ್ದರೂ ಚಿಕ್ಕವರನ್ನು ಅರ್ಥಮಾಡಿಕೊಳ್ಳಬೇಕೆಂದು ಸುಮ್ಮನಿದ್ದೆ.
ಸ್ವಲ್ಪ ದಿನಗಳಲ್ಲಿಯೇ ವಾತಾವರಣ ಬದಲಾಗುತ್ತ ಹೋಯಿತು. ಅನೇಕ ಹುಡುಗರು ತಾವು ತಿಳಿದಿದ್ದನ್ನೇ ಮಾತನಾಡಲು ಆರಂಭಿಸಿದರು. ತರಗತಿಯ ಹೊರಗೆ ನಾನು ಅವರನ್ನು ಕನ್ನಡದಲ್ಲಿ ಮಾತನಾಡಿಸುತ್ತಿದ್ದೆ.. ಲೋ ಮಚ್ಚಾ, ಶಿಷ್ಯ ಇತ್ಯಾದಿ ಶಬ್ದಗಳು ಮೇಡಮ್ ಇಲ್ಲದ ಸಮಯದಲ್ಲಿ ಕೇಳತೊಡಗಿದವು!






0 Comments