ಫೋನನ್ನು ಕೈಯಲ್ಲಿ ಹಿಡಿದುಕೊಂಡಷ್ಟು ಹೊತ್ತು ನಿಮ್ಮ ಮಗುವನ್ನು ಎತ್ತಿಕೊಂಡಿದ್ದೀರಾ? – ಶ್ರೀನಾಥ್ ಭಲ್ಲೆ

ಶ್ರೀನಾಥ್ ಭಲ್ಲೆ

ಇಲ್ಲಿ ನಾನು ಎಂದರೆ ನಾನೇ ಅಲ್ಲ. ನಾನು, ನನ್ನಿಂದ, ಎಂಬುದನ್ನು ಹೊತ್ತುಕೊಂಡೇ ಸಾಗುವ ಯಾರೂ ಆಗಿರಬಹುದು.
ಒಂದು ಶುಭ ಮುಸ್ಸಂಜೆ, ಹೊಟ್ಟೆಪಾಡಿಗಾಗಿ ಅಮೇರಿಕದಲ್ಲಿ ಕೆಲಸ ಮಾಡುವ ನಾನು, ಘನ ಬೆಂಗಳೂರಿನ ಪಾರ್ಕ್ ಒಂದರಲ್ಲಿ ಕುಳಿತಿದ್ದೆ. ಇಲ್ಲ ಬಿಡಿ, ಸಂಜೆಯವರೆಗೂ ಅಮೇರಿಕದಲ್ಲಿ ಕೆಲಸ ಮಾಡಿ ನಂತರ ಹುಟ್ಟೂರಿನ ಪಾರ್ಕಿನಲ್ಲಿ ತಂಗಾಳಿ ಸೇವನೆಗೆಂದು ಬಂದಿರಲಿಲ್ಲ. ಕೆಲಸಕ್ಕೆ ರಜೆ ಹಾಕಿ ಬಂದವ ಒಂದು ಸಂಜೆ ಇಲ್ಲಿಗೆ ಬಂದಿದ್ದೆ ಅಷ್ಟೇ. ತೀರಾ ಹತ್ತಿರದ ಸಂಬಂಧಿಯ ಮದುವೆಗೆ ರಜೆ ಹಾಕಲೇ ಬೇಕಾಗಿದ್ದರಿಂದ ಮೂರು ವಾರ ರಜೆ ಹಾಕಿದ್ದೆ. ನಾಲ್ಕು ದಿನ ಮದುವೆ ಅಂತ ಕಳೆದರೆ, ಒಂದೈದು ದಿನಕ್ಕೆ ಕೆಲಸ ಹವಣಿಸಿಕೊಂಡಿದ್ದೆ. ಮಿಕ್ಕ ದಿನಗಳು ಇಲ್ಲಿಂದಲೇ ಕೆಲಸ ಮಾಡುವ ಇರಾದೆ ಇದೆ. ಧರ್ಮಪತ್ನಿ ಮಗನ ಜೊತೆ ಅವಳ ಮನೆ ಜನರೊಂದಿಗೆ ಎಲ್ಲಿಗೆ ಹೋಗ್ತಾರೋ ಹೋಗಿ ಬರಲಿ. ನನಗೆ ಅದಕ್ಕೆಲ್ಲ ಪುರುಸೊತ್ತಿಲ್ಲ. ಈಗಲೇ ಕೆಲಸ ಕ್ಯಾಚ್-ಅಪ್ ಮಾಡದಿದ್ದರೆ ವಾಪಸ್ ಹೋದ ಮೇಲೆ ಖಂಡುಗ ಕೆಲಸ ಕಾದಿರುತ್ತೆ. ಉಸಿರು ತೆಗೆದುಕೊಳ್ಳೋಕ್ಕೂ ಬಿಡುವಾಗೋಲ್ಲ.
ಶನಿವಾರ ಬೆಳಿಗ್ಗೆಯ ಚುಮು ಚುಮು ಚಳಿಯಲಿ ಬೆಂಗಳೂರಿನ ನೆಲದ ಮೇಲೆ ಬಲಗಾಲಿಟ್ಟಿದ್ದೆ. ಏರ್ಪೋರ್ಟ್’ನಿಂದ ಮನೆಗೆ ಬರುವ ಹಾದಿಯಲ್ಲೇ ಮೇನೇಜರ್’ಗೆ ಬಂದು ಸೇರಿದ್ದಕ್ಕೆ ಈ-ಮೈಲ್ ಬರೆದೆ. ವಾರಾಂತ್ಯವಾದರೂ ಅರ್ಧಘಂಟೆಗೊಮ್ಮೆ ಕೆಲಸದ ಈ-ಮೈಲ್ ಚೆಕ್ ಮಾಡುತ್ತಲೇ ಅಪ್ಪ, ಅಮ್ಮ, ಅಣ್ಣ, ಅಕ್ಕ, ತಮ್ಮ ಅಂತ ಎಲ್ಲರೊಡನೆ ಮಿತವಾಗಿ ಹರಟೆ ಹೊಡೆದಿದ್ದೆ. ಫೇಸ್ಬುಕ್ನಲ್ಲಿ ಮೆಸೇಜ್ ಕಳಿಸಿದರೆ ಉತ್ತಾರಾನೇ ಇಲ್ವಲ್ಲೋ ಎಂದ ತಮ್ಮನಿಗೆ ಅದಕ್ಕೆಲ್ಲ ನನಗೆ ಟೈಮ್ ಇಲ್ಲ, ಸುಮ್ನೆ ಅವು ಟೈಮ್ ವೇಸ್ಟು ಎಂದು ಬಾಯಿ ಮುಚ್ಚಿಸಿದ್ದೆ. ಭಾನುವಾರ ಹೆಂಡತಿ-ಮಗ ಅವಳ ತೌರಿಗೆ ಹೋದರು. ಸೋಮವಾರ ಮಿಕ್ಕೆಲ್ಲ ಹಕ್ಕಿಗಳು ಗೂಡುಬಿಟ್ಟು ಕೆಲಸಕ್ಕೆ ಹೋದಮೇಲೆ ಮನೆಯಲ್ಲಿ ಉಳಿದುಕೊಂಡದ್ದು ನಾನು ಮತ್ತು ನನ್ನೊಳಗಿನ ನಾನು, ಇಬ್ಬರೇ. ಬೆಳಿಗ್ಗೆ ಏನೋ ಕೆಲಸ ಮಾಡುತ್ತ ಕುಳಿತಿದ್ದು ಸಂಜೆಗೆ ಪಾರ್ಕ್ ಬಳಿ ಬಂದಿದ್ದೆ.
ಅಲ್ಲೇ ಒಂದು ಕಲ್ಲು ಬೆಂಚಿನ ಮೇಲೆ ಚಕ್ಕಂಬಕ್ಕಳ ಹಾಕಿಕೊಂಡು ತಲೆ ಬಾಗಿಸಿ, ಎರಡೂ ಅಂಗೈಗಳನ್ನು ಸೇರಿಸಿ ಕುಳಿತಿದ್ದೆ. ಬಹಳ ಸೀರಿಯಸ್ಸಾಗಿ ಕುಳಿತಿದ್ದ ನನಗೆ, ನನ್ನ ಪಕ್ಕದಲ್ಲೊಬ್ಬರು ಬಂದು ಕೂತಿದ್ದಾರೆ ಎಂಬೋದೇ ಗೊತ್ತಾಗಲಿಲ್ಲ. ಅವರು ಸಣ್ಣಗೆ ಕೆಮ್ಮಿನ ನಗೆ ನಕ್ಕಾಗ, ನವಿರಾಗಿ ಬೆಚ್ಚಿ ತಿರುಗಿ ನೋಡಿದೆ. “ಧ್ಯಾನ ಮಾಡ್ತಿದ್ದೀರಾ ಅಂದುಕೊಂಡೆ. ಸ್ಮಾರ್ಟ್ ಫೋನ್ ನೋಡ್ತಿದ್ದೀರಾ?” ಎಂದು ಮತ್ತೊಮ್ಮೆ ಹುಸಿನಗೆ ನಕ್ಕರು. ನನ್ನಷ್ಟಕ್ಕೆ ನಾನು ಐ-ಫೋನ್’ನಲ್ಲಿ ಈ-ಮೇಲ್ಸ್ ನೋಡ್ತಾ ಕೂತಿದ್ದರೆ, ಅದನ್ನ ಇವರು ಧ್ಯಾನ ಅಂತ ಅಂದುಕೊಂಡರೆ ನನ್ನ ತಪ್ಪೇ? ಅದೂ ಅಲ್ದೇ ನಾನು ಎಲ್ಲಿದ್ದರೂ ನನ್ನನ್ನು ಆಫೀಸಿನ ಜನರಿಗೆ ತಲುಪೋ ಹಾಗಿರಬೇಕು ಅಂತ ಇಂಟರ್-ನ್ಯಾಷನಲ್ ಪ್ಲಾನ್ ಬೇರೆ ಹಾಕಿಸಿಕೊಂಡು ಬಂದಿದ್ದೆ. ಬಳಸದೆ ಬಿಟ್ಟರೆ ದುಡ್ಡು ದಂಡ ತಾನೇ?
ಆ ಅಪರಿಚಿತರನ್ನು ಒಮ್ಮೆ ನೋಡಿದೆ. ಸುಮಾರು ಎಪ್ಪತ್ತು ವರ್ಷದ ಹಿರಿಯರು. ಮುಖದ ಮೇಲೆ ಮಂದಹಾಸ ನಿಚ್ಚಳವಾಗಿ ಎದ್ದು ಕಾಣುತ್ತಿತ್ತು. ಏನೋ ಪ್ರಸನ್ನತೆ. ರಿಟೈರ್ ಆಗಿರ್ತಾರೆ, ಇನ್ಯಾವ ಟೆನ್ಷನ್ ಇರೋಲ್ಲ. ಮಂದಹಾಸ ಇಲ್ಲದೇ ಇನ್ನೇನು ಎಂದು ಉಡಾಫೆ ತೋರಿ ಮತ್ತೆ ನನ್ನ ಫೋನಿನಲ್ಲಿ ಮಗ್ನನಾದೆ. ಅವರು “ಇದು ಹೊಸ ಫೊನಾ?” ಎಂದು ಕೇಳಿದರು. ಹಲವಾರು ಘಂಟೆಗಳಿಂದ ಮನದೊಳಗೇ ಮಾತನಾಡಿಕೊಂಡಿದ್ದ ಎನಗೆ ಒಬ್ಬರು ಸಿಕ್ಕಿದರಲ್ಲ ಅನ್ನೋ ಸಂತಸಕ್ಕಿಂತ ನನ್ನ ಐ-ಫೋನ್ ಬಗ್ಗೆ ಮಾತನಾಡೋಕೆ ಒಬ್ಬರು ಸಿಕ್ಕಿದ್ದು ಇನ್ನೂ ಸಂತೋಷವಾಯಿತು. “ಹೌದ್, ಹೌದು. ಇದು ನನ್ನ ಹೊಸ ಫೋನು. ಐ-ಫೋನ್ ೬ ಪ್ಲಸ್. ಒಳ್ಳೇ ರೆಸಲ್ಯೂಷನ್ ಫೋಟೋ ತೆಗೆಯಬಹುದು, ಆಟ ಆಡಬಹುದು ಫೇಸ್ಬುಕ್ ನೋಡಬಹುದು. ನನಗೆ ಅದಕ್ಕೆಲ್ಲ ಟೈಮ್ ಇಲ್ಲ ಬಿಡೀ. ಮುಖ್ಯವಾಗಿ ಈ-ಮೈಲ್ ಬರೆಯಬಹುದು. ಕೆಲಸದಿಂದ ದೂರ ಇದ್ರೂ, ದಿನ ನಿತ್ಯದ ವಹಿವಾಟು ತಕ್ಷಣ ತಿಳಿದುಕೊಳ್ಳಬಹುದು. ಅಷ್ಟರ ಮಟ್ಟಿಗೆ ಲೇಟೆಸ್ಟ್. ಅಷ್ಟೇ ಅಲ್ಲದೇ “. ನನ್ನ ವಾಗ್ಝರಿಯನ್ನು ತುಂಡರಿಸಿ ಕೇಳಿದರು ಆ ಹಿರಿಯರು “ನಿಮ್ಮೀ ಐ-ಫೋನ್ ಬಳಸಿ, ಫೋನ್ ಕೂಡ ಮಾಡಬಹುದಾ?”. ಒಂದು ಕ್ಷಣ ಮೂಕಾಗಿ ಮತ್ತೆ ನುಡಿದೆ “ಹೌದು, ಫೋನ್ ಮಾಡುವುದರ ಜೊತೆ ಮಿಕ್ಕೆಲ್ಲ ಸೌಲಭ್ಯವೂ ಇದೇ ಎಂದೆ.” ಅವರದಕ್ಕೆ ನಕ್ಕು “ಹೆಸರಲ್ಲೇನಿದೆ ಬಿಡಿ. ಮನುಷ್ಯನಂತೆ ಯಂತ್ರಗಳೂ ಕೂಡ. ತಮಗಿರೋ ಟೈಟಲ್’ಗೆ ತಕ್ಕಂತೆ ಮಾತ್ರ ಕೆಲಸ ಮಾಡಿದರೆ ಸಾಲದು. ಇನ್ನೂ ಹೆಚ್ಚು ಕೆಲಸ ಮಾಡಬೇಕು, ಮಾಡುತ್ತಲೇ ಇರಬೇಕು. ಎಲ್ಲರಿಗೂ ಎಲ್ಲ ಕೆಲಸ ಗೊತ್ತಿರಬೇಕು ಈ ಕಾಲದಲ್ಲಿ. ಇಲ್ದಿದ್ರೆ ಮಾರುಕಟ್ಟೆಯಲ್ಲಿ ಅವುಗಳಿಗೆ ಬೆಲೆ ಇರೋಲ್ಲ. ಏನಂತೀರಿ?”. ಈ ಹಿರಿಯರು ಸಾಮಾನ್ಯರಲ್ಲ ಅನ್ನಿಸಿತು. ನಾನೇನೂ ಹೇಳಲಿಲ್ಲ.
“ಹಾಗೇ, ಒಂದು ಫೋಟೋ ತೆಗೆದು ತೋರಿಸಿ. ಹೇಗೆ ಬರುತ್ತೋ ನೋಡೋಣ?” ಅಂತ ಕೇಳಿದರು. ಈ ವಯಸ್ಸಿನಲ್ಲೂ ವಿಷಯ ಅರಿವ ಕುತೂಹಲ ಹೆಚ್ಚೇ ಇದೆ ಅಂತ ಮೆಚ್ಚಿಕೊಂಡೆ. ಅವರದೇ ಚಿತ್ರ ತೆಗೆದು ತೋರಿಸಿದೆ. ಅಡ್ಡಕ್ಕೆ (ಲ್ಯಾಂಡ್ಸ್ಕೇಪ್) ತೆಗೆದ ಫೋಟೋ ಅವರಿಗೆ ತೋರಿಸುವಾಗ ಉದ್ದಕ್ಕೆ (ಪೋರ್ಟ್ರೈಟ್) ಆಗಿ ಚಿಕ್ಕದಾಗಿ ಕಂಡಿತು. ಫೋನನ್ನು ಸ್ವಲ್ಪ ವಾಲಿಸಿ ಹಿಡಿದಾಗ, ಅವರ ಚಿತ್ರ ಮತ್ತೆ ಅಡ್ಡಲಾಗಿ ತೋರಿ, ಹಿರಿದಾಗಿ ಕಂಡಿತು. ಆ ಹಿರಿಯರು ಈ ಬಾರಿ ಸ್ವಲ್ಪ ಜೋರಾಗೇ ನಕ್ಕರು. ಯಾಕೆ ಎಂಬಂತೆ ನೋಡಿದೆ. “ನಾನು ಕೆಲಸಕ್ಕೆ ಸೇರಿದ ಆರಂಭದ ದಿನಗಳಲ್ಲಿ ನನ್ನ ಹತ್ತಿರ ಒಂದು ಹಳೇ ಸ್ಕೂಟರ್ ಇತ್ತು. ಅದೂ ಅಷ್ಟೇ, ನೀವು ವಾಲಿಸಿದ ಹಾಗೆ ವಾಲಿಸದೇ ಇದ್ದರೆ ಸ್ಟಾರ್ಟ್ ಆಗ್ತಾನೇ ಇರಲಿಲ್ಲ. !”. ಅಕಟಕಟಾ !! ಎಲ್ಲಿಯ ಹಳೇ ಸ್ಕೂಟರ್, ಎಲ್ಲಿಯ ನನ್ನ ಹೊಸಾ ಐ-ಫೋನು !!!
“ಚಿತ್ರ ಚೆನ್ನಾಗಿ ಬಂದಿದೆ. ಈ ಚಿತ್ರಗಳೇ ಹಾಗೆ. ನಾವಿದ್ದಂತೇ ಅದು ತೋರಿಸುತ್ತಾದರೂ ನಾವು ನಮ್ಮ ಕಲ್ಪನೆಗಳನ್ನು ಅದರೊಂದಿಗೆ ಬೆರೆಸಿ ನೋಡ್ತೀವಿ. ಅಲ್ಲವೇ?” ವಿಚಾರ ಚೆನ್ನಾಗಿದೆ. ನಾನೆಂದೂ ಆ ದೃಷ್ಟಿಯಲ್ಲಿ ನೋಡೇ ಇರಲಿಲ್ಲ. ಬೀಸೋ ತಂಗಾಳಿಯಂತೆ, ಹರಿಯೋ ನೀರಿನಂತೆ ಅವರ ಮಾತು ಸಾಗೇ ಇತ್ತು. ನನ್ನ ಮೌನ ಅವರಿಗೆ ನಿಂತ ಮರವೂ ಆಗಿರಲಿಲ್ಲ, ನೀರೊಳಗಿನ ಬಂಡೆಯೂ ಆಗಿರಲಿಲ್ಲ.
“ನೀವು ಎಲ್ಲಿಯವರು?” ಎಂದು ಕೇಳಿದರು. ತಕ್ಷಣವೇ ನಾನು “ಇರೋದು ಅಮೇರಿಕದಲ್ಲಿ. ವೆಕೇಷನ್ ಮೇಲೆ ಬಂದಿದ್ದೇನೆ” ಅಂತ ಅಂದೆ. ಅವರು ನಕ್ಕು “ಹೌದು, ನೀವು ವೆಕೇಷನ್ ಮೇಲೆ ಬಂದವರೂ ಅಂತ ಅನ್ನಿಸಿತು. ಇಲ್ಲಿನವರಾರೂ ಇಷ್ಟು ಬೇಗ ದಿನದ ಕೆಲಸ ಮುಗಿಸಿ ಪಾರ್ಕಿನಲ್ಲಿ ಬಂದು ಕೂಡುವವರಲ್ಲ. ನಮ್ಮ ದೇಶದ ಸಮಯದಲ್ಲಿ ದುಡಿಯೋದಲ್ಲದೇ, ಬೇರೆ ದೇಶದವರ ಸಮಯದಲ್ಲೂ ದುಡಿಯಬೇಕಾದ ಪರಿಸ್ಥಿತಿ. ಇದು ಸರಿ ತಪ್ಪು ಅಂತ ನಾನು ಹೇಳ್ತಿಲ್ಲ. ಆದರೆ ಬದಲಾಗಿರೋ ಜಗತ್ತಿನ ಬಗ್ಗೆ ಹೇಳಿದೆ ಅಷ್ಟೇ! ಹೋಗ್ಲಿ ಬಿಡಿ. ಈ ದೇಶ ಬಿಟ್ಟು ಆ ದೇಶಕ್ಕೆ ಹೋಗಿ ಎಷ್ಟು ವರ್ಷ ಆಯ್ತು?”

ನಾನೆಂದೆ “ಅಂಥಾ ಹೆಚ್ಚೇನಿಲ್ಲ. ಹನ್ನೆರಡು ವರ್ಷ ಆಯ್ತು ಅಷ್ಟೇ!” ಬಾಯಲ್ಲಿ ಅಷ್ಟೇ ಅಂದರೂ ಅದರಲ್ಲಿ ಹೆಮ್ಮೆ ಎದ್ದು ಕಾಣುತ್ತಿತ್ತು. ಹಿರಿಯರು ಮತ್ತೆ ನಕ್ಕು “ಅಂದರೆ ವನವಾಸ ಮುಗೀತು. ಅಜ್ಞ್ನಾತವಾಸ ಶುರು ಅಂತಾಯ್ತು. ನಂತರ, ಮತ್ತೆ ವನವಾಸ. ಪರದೇಶದಲ್ಲಿರೋ ನಮ್ ದೇಶದವರು ಇತ್ಲಾಗೆ ಅಲ್ಲಿಯವರೂ ಅಲ್ಲ, ಇಲ್ಲಿಯವರೂ ಅಲ್ಲ. ಅಲ್ವೇ? ಏನಂತೀರೀ?”. ಇದೊಳ್ಳೇ ಆಯ್ತಲ್ಲ? ಈ ಹಿರಿಯರಿಂದ ನನ್ನ ಬಗ್ಗೆ “ಹನ್ನೆರಡು ವರ್ಷವಾ?” ಎಂಬ ಉದ್ಗಾರ ಬರುತ್ತೇನೋ ಅಂದುಕೊಂಡಿದ್ದೆ. ಅವರು ಅದನ್ನು ಪರಿಗಣಿಸಿಯೇ ಇಲ್ಲ ಅನ್ನಿಸುತ್ತೆ. ಇರಲಿ ಅಂತ ನಾನು ಮತ್ತೆ ಮಾತು ಮುಂದುವರೆಸಿ “ಕಂಪ್ಯೂಟರ್ ಇಂಜಿನೀರಿಂಗ್ ವಿದ್ಯಾಭ್ಯಾಸ ಮುಗಿಸಿ, ಇಲ್ಲಿ ಒಂದೈದು ವರ್ಷ ಕೆಲಸ ಮಾಡಿ ನಂತರ ದೇಶ ಬಿಟ್ಟೆ” ಅಂತ ನನ್ನ ಓದು ಕೆಲಸ, ಸಾಧನೆ ಎಲ್ಲ ಹೇಳಿಕೊಂಡೆ, ಅಲ್ಲ ಕೊಚ್ಚಿಕೊಂಡೆ !
ಹಿರಿಯರು ಬಿಟ್ಟ ಬಾಯಿ ಬಿಟ್ಟಂತೇ ನನ್ನನ್ನು ನೋಡುತ್ತಿದ್ದರು. ನನಗೆ ಇದೇನೂ ಹೊಸದಲ್ಲ. ಆದರೆ ಅವರು ಪ್ರತಿ ನುಡಿದಿದ್ದು ಮಾತ್ರ ಜನ್ಮೇಪಿ ಜೀರ್ಣಿಸಿಕೊಳ್ಳಲಾಗೋದಿಲ್ಲ. ಅವರು ಕೇಳಿದರು “ವಿದ್ಯಾಭ್ಯಾಸ ಮುಗಿಸಿ ಅಂದ್ರಲ್ಲಾ ಅದಕ್ಕೆ ಅಚ್ಚರಿಯಾಯ್ತು. ಎಪ್ಪತ್ತು ವರ್ಷ ಆದರೂ ನನ್ನ ವಿದ್ಯಾಭ್ಯಾಸ ಮುಗೀತು ಅಂತ ಹೇಳಿಕೊಳ್ಳೋ ಧೈರ್ಯ ನನಗಿಲ್ಲ. ನನಗೆ ಏನೂ ಗೊತ್ತಿಲ್ಲ. ಏನೋ ಓದಿದೆ, ಏನೋ ಬರೆದೆ, ಪೇಪರ್ ಕರೆಕ್ಷನ್ ಮಾಡಿದವರು ಮಾರ್ಕ್ಸ್ ಕೊಟ್ಟರು. ಇನ್ಯಾರೋ ಅವುಗಳನ್ನು ಒಗ್ಗೂಡಿಸಿ ಮೊದಲ ಸ್ಥಾನ ಅಂತ ಘೋಷಿಸಿದರು. ಆಗ ಶುರುವಾಯ್ತು ಹುಚ್ಚು ಕುದುರೆ ಹಿಂದೆ ಓಟ. ಆ ಓದು ಈ ಓದು ಅಂತೆಲ್ಲ ಏನೇನೋ ಓದಿದೆ. ಕೊನೆಗೊಮ್ಮೆ ಪಿ.ಎಚ್.ಡಿ ಮಾಡಿದೆ. ನನಗೆ ಡಾಕ್ಟ್ರೇಟ್ ಕೊಟ್ಟರು. ಎಷ್ಟೋ ವರ್ಷಗಳ ಕಾಲ ನಾನು, ನನ್ನ ಓದು, ಸಾಧನೆ, ಡಾಕ್ಟರೇಟು ಅನ್ನೋ ಗದ್ದುಗೆ ಮೇಲೇ ಕುಳಿತಿದ್ದೆ. ಈಗ ಕೆಲವು ವರ್ಷಗಳಿಂದ ನನ್ನ ಹೆಸರಿನ ಹಿಂದೆ ಡಾಕ್ಟರ್ ಎಂದಿರುವುದಕ್ಕೆ ನೋವಾಗ್ತಿದೆ. ಒಂದು ಸಣ್ಣ ನೆಗಡಿ ವಾಸಿ ಮಾಡಲಾಗದ, ಒಂದು ಇಂಜಕ್ಷನ್ ನೀಡಿ ನೋವನ್ನು ಶಮನಗಳಿಸಲಾಗದ, ಒಂದು ಜೀವ ಉಳಿಸಲಾಗದ ’ಡಾಕ್ಟರ್’ಗಿರಿ ನನಗೇಕೆ ಅಂತ. ನಾನದಕ್ಕೆ ಅರ್ಹನೇ ಅಂತ”.
ಶಾಲಿನಲ್ಲಿ ಸುತ್ತಿ ಹೊಡೆದಂತಾಯಿತು ಎನಗೆ. ಸಣ್ಣ ಸ್ವಂತ ಸಾಧನೆಯ ದೊಡ್ಡ ಭಾರದ ಕಿರೀಟ ಇಟ್ಕೊಂಡ್ ಒಡಾಡ್ತಿದ್ದ ನನಗಿಂದು ಸರಿಯಾಗೇ ತಾಗಿತ್ತು ಪೆಟ್ಟು.
ಹಿರಿಯರು ನುಡಿದರು “ಮತ್ತೇ, ನಿಮ್ಮ ವೆಕೇಷನ್ ಹೇಗೆ ಕಳೀಬೇಕು ಅಂತ ಇದ್ದೀರ? ಪ್ರೇಕ್ಷಣೀಯವೋ? ಯಾತ್ರಾ ತೀರ್ಥವೋ? ಹೇಗೇ? ಹೇಳಲೇಬೇಕು ಅಂತೇನೂ ಇಲ್ಲ. ನಿಮ್ಮ ವಿಷಯ ತಿಳಿದುಕೊಂಡು ನಿಮಗೆ ತೊಂದರೆ ಉಂಟು ಮಾಡೋಲ್ಲ.” ಅಂತ ನಕ್ಕರು. “ಇಲ್ಲಿಲ್ಲ, ಹಾಗೇನಿಲ್ಲ. ನಾಳೆಯಿಂದ ಒಂದು ವಾರ ಊರ ಹೊರಗಿರೋ ಒಂದು ಆಶ್ರಮದಲ್ಲಿರೋ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ದಿನ ನಿತ್ಯ ಜೀವನದಲ್ಲಿ ಆಗೋ ಟೆನ್ಷನ್ ಅನ್ನು ಕಂಟ್ರೋಲ್ ಮಾಡೊದು ಹೇಗೆ ಎಂಬ ವಿಚಾರ.”
ಒಂದೆರಡು ಕ್ಷಣ ಗಂಭೀರರಾದವರು “ನಿಮ್ಮ ವೈಯುಕ್ತಿಕ ವಿಚಾರ ನನಗೇನೂ ಗೊತ್ತಿಲ್ಲ. ಸದ್ಯಕ್ಕಂತೂ ಬೇಡ. ಆದರೆ ನಿಮಗೆ ಮನ:ಶಾಂತಿ ಇಲ್ಲ ಎಂದೇಕೆ ಅನ್ನಿಸಿತು?”. ನಾನೆಂದೆ “ನನ್ನ ಕೆಲಸದ ವೈಖರಿ ಹೇಳ್ತೇನೆ. ದಿನಾ ಬೆಳಿಗ್ಗೆ ನಮ್ಮ ಅಲ್ಲಿನ ಕಂಪನಿಗೆ ಇಲ್ಲಿಂದ ಕೆಲಸ ಮಾಡುವವರ ಜೊತೆ ಮಾತುಕತೆ. ಮತ್ತೆ ರಾತ್ರಿಗೆ ಇದೇ ಕೆಲಸ. ಹಗಲು-ಇರುಳಿನ ನಡುವೆ ಇರುವ ಸಮಯದಲ್ಲಿ ಆಫೀಸ್ ಕೆಲಸ. ಹೀಗಾಗಿ ಇಡೀ ದಿನ ಟೆನ್ಷನ್ ಮಯ”. ಅವರು ತಲೆ ಅಡ್ಡಡ್ಡಕ್ಕೆ ಆಡಿಸುತ್ತ “ಸರಿ, ಆದರೆ ನಿಮ್ಮ ಸಮಸ್ಯೆ ಏನು ಅಂತ್ಲೇ ಹೇಳಲಿಲ್ಲವಲ್ಲ? ಬರೀ ಕೆಲಸದ ಬಗ್ಗೆ ಮಾತನಾಡಿದಿರಿ. ಹೋಗಲಿ ಆಫೀಸ್ ಕೆಲಸ ಮಾಡದ ಸಮಯದಲ್ಲಿ ಏನು ಮಾಡ್ತೀರ?”. ಆಫೀಸ್ ಕೆಲಸ ಮಾಡದ ಸಮಯ ಅಂದರೇನು ಎಂದೇ ಅರಿವಾಗುತ್ತಿಲ್ಲ. ಸದಾ ಕೈಯಲ್ಲಿ ಫೋನು. ತಲೆಬಿಸಿಯಾದಾಗ ಬಿಸಿ ಬಿಸಿ ಕಾಫಿ ಜೊತೆಗೆ ಕೈಯಲ್ಲಿ ಫೋನು. ಸಮಯ ಸಿಕ್ಕಾಗ ಊಟ, ನಿದ್ದೆ. ಊಟಕ್ಕೂ ಅಷ್ಟೇ ಇಂಥದೇ ಅಂತೇನೂ ಇಲ್ಲ. ಯಾವುದೂ ನೆಡೆದೀತು.
ಹಿರಿಯರು ಮುಂದುವರೆಸಿದರು “ಹೋಗ್ಲಿ ಬಿಡಿ. ಈಗ ಒಂದು ವಾರ ಆಶ್ರಮದಲ್ಲಿ ಇದ್ದ ಮಾತ್ರಕ್ಕೆ ನಿಮಗೆ ನೆಮ್ಮದಿ ಸಿಗುತ್ತೆ ಅಂತ ಏಕೆ ಅನ್ನಿಸುತ್ತದೆ?”. ನಾ ತೆಗೆದುಕೊಂಡ ನಿರ್ಧಾರವನ್ನು ಹೆಮ್ಮೆಯಿಂದಲೇ ಹೇಳಿಕೊಂಡೆ “ನಾನು ಈ ಆಶ್ರಮದ ಬಗ್ಗೆ ಬಹಳಷ್ಟು ರಿಸರ್ಚ್ ಮಾಡಿದ್ದೇನೆ. ಅಲ್ಲಿ ಶಿಸ್ತಿನ ಪರಿಪಾಠ ಇದೆ. ಬೆಳಿಗ್ಗೆ ಐದಕ್ಕೆ ವ್ಯಾಯಾಮ, ಪ್ರಾರ್ಥನೆ. ಆರೋಗ್ಯಕರವಾದ ಬ್ರೇಕ್-ಫಾಸ್ಟು, ಲಘು ಸಂಗೀತ, ವಯಸ್ಸಿನ ತಾರತಮ್ಯವಿಲ್ಲದೆ ಎಲ್ಲರೊಡನೆ ಸ್ನೇಹ, ಊಟ, ಮಧ್ಯಾನ್ನ ಮನ:ಶಾಂತಿ ಬಗ್ಗೆ ಉಪನ್ಯಾಸ ಮತ್ತು ಚರ್ಚೆ, ಸಂಜೆ ವಾಕ್, ರಾತ್ರಿ ಎಂಟಕ್ಕೆ ನಿದ್ದೆ. ಪೇಪರ್, ಐ-ಫೋನು, ಟಿವಿ ಇತ್ಯಾದಿ ಮಾಧ್ಯಮವೆಲ್ಲ ಕಟ್.”
ಅವರು “ನಿಮಗೆ ಮದುವೆ ಆಗಿದೆಯೇ ಎಂದು ಕೇಳಬಹುದೇ?” ಎಂದರು. ನಾನು “ಅದರಲ್ಲೇನಿದೆ? ಮದುವೆ ಆಗಿದೆ. ಮೂರು ವರ್ಷದ ಮಗನೂ ಇದ್ದಾನೆ” ಎಂದೆ.
“ಒಳ್ಳೇದು. ಈಗ ನೀವು ಒಂದು ವಾರ ಆ ಆಶ್ರಮದಲ್ಲಿ ಇದಿಷ್ಟು ಕಾರ್ಯಗಳನ್ನು ಮಾಡಿದರೆ ನಿಮಗೆ ಮನ:ಶಾಂತಿ ಸಿಕ್ಕಿಬಿಡುತ್ತೆ. ಇದು ನಿಮ್ಮ ನಂಬಿಕೆ. ಅಲ್ಲಾ, ನೀವು ಇಷ್ಟು ಹೊತ್ತೂ ಹೇಳಿದ್ದನ್ನು ಸ್ವಂತವಾಗೇ ಮಾಡಬಹುದಲ್ಲವೇ? ಅಶ್ರಮವೇ ಬೇಕೆ? ಮೂಗು ಹಿಡಿದು ಕೂತವನೇ ಯೋಗಿಯೇ? ವಯಸ್ಸಿನ ತಾರತಮ್ಯ ಇಲ್ಲದೇ ನನ್ನ ಜೊತೆ ಮಾತನಾಡುತ್ತಿರುವಂತೆ ಮನೆಯಲ್ಲಿ ಮನೆ ಸುತ್ತಲಲ್ಲಿ ಇರುವ ಹಿರಿಯರನ್ನು ಮಾತನಾಡಿಸಿ. ಮಡದಿ ಮಕ್ಕಳು, ಮನೆಯ ಜನಕ್ಕಿಂತ ಸ್ನೇಹಿತರು ನಿಮಗೆ ಬೇಕೆ? ಮೂರು ವರ್ಷದ ಮಗುವಿಗಿಂತ ನಿಮ್ಮ ಮನಸ್ಸಿಗೆ ಖುಷಿ ಕೊಡುವ ಸಾಧನ ಬೇರೇನಿದೆ? ಮಡದಿಯೊಡನೆ ಮನೆ ಕೆಲಸದಲ್ಲಿ ಭಾಗಿಯಾಗಿ. ಹೀಗೆ ಒಂಟಿಯಾಗಿ ಇಲ್ಲಿಗೆ ಬರುವ ಬದಲು ಅವರೊಡನೆ ಬರಬಹುದಿತ್ತಲ್ಲವೇ? ಬೇಸರ ಮಾಡಿಕೊಳ್ಳಬೇಡಿ. ನಾನ್ಯಾರೋ ಹೊರಗಿನವ. ಆದರೂ ಒಂದು ಮಾತು ಹೇಳ್ತೇನೆ. ನಾವ್ಯಾರೂ ಈ ಜಗತ್ತಿಗೆ ಅನಿವಾರ್ಯ ಅಲ್ಲ. ಇಂದು ನೀವಿದ್ದಾಗ ನಿಮ್ಮನ್ನೇ ನಂಬಿ ನೆಡೆಯೋ ಕೆಲಸಗಳು, ಮುಂದೆ ನೀವಿಲ್ಲದಾಗ ತುಕ್ಕು ಹಿಡಿದು ಕುಳಿತುಕೊಳ್ಳುತ್ತದೆ ಎಂದು ನಿಮಗೆ ಅನ್ನಿಸಿದರೆ, ಅದು ತಪ್ಪು. ನಾವು ನಿಮಿತ್ತ ಮಾತ್ರ.”
ನನಗೇನು ಉತ್ತರ ನೀಡಬೇಕೆಂದೇ ತೋಚುತ್ತಿಲ್ಲ !
ಮತ್ತೆ ಅವರೇ ನುಡಿದರು “ನಿಮ್ಮ ಐ-ಫೋನ್ ಬಗ್ಗೆ ಮಾತನಾಡಿದಿರಲ್ಲಾ, ಈ ಸಾಧನ ಜಗತ್ತಿನ ಮೊಲೆ ಮೂಲೆಯಲ್ಲಿರೋ ಮಾಹಿತಿಗಳನ್ನು ಕಲೆ ಹಾಕಿ ನಿಮ್ಮ ಅಂಗೈಯಲ್ಲಿ ಇಡುತ್ತೆ. ಬೇಕಿದ್ದು ಬೇಡದ್ದು ಎಂದು ತೊಗೊಳ್ಳೋದು ಬಿಡೋದು ನಮಗೆ ಬಿಟ್ಟದ್ದು ಅಲ್ವೇ? ಮೈಲಿಗಟ್ಟಲೇ ದೂರವಿರುವ ನೋಡಿಯೇ ಇರದ ಜನರನ್ನು ಅವರುಗಳ ಸಂವೇದನೆಗಳಿಗೆ ಸ್ಪಂದಿಸಲು ಸಹಕಾರಿಯಾಗೋ ಈ ಸಾಧನ ಮಾರುದ್ದ ದೂರದಲ್ಲಿರೋ ಹೃದಯದಲ್ಲಿ ನಿಮ್ಮ ಸ್ವಂತ ಜನರ ನೋವಿಗೆ ನಲಿವಿಗೆ ಸ್ಪಂದಿಸಲು ತರಂಗವನ್ನೆಬ್ಬಿಸಲು ಏಕೆ ಸೋಲುತ್ತೆ ಅಂತ? ವಾಯುವುಳ್ಳ ಜೀವಕ್ಕಿಂತ ವಾಯುರಹಿತ ವಸ್ತುಗಳಿಗೇ ನಾವು ಪ್ರಾಮುಖ್ಯತೆ ನೀಡುತ್ತೇವೆ. ನೀವು ನಿಮ್ಮ ಫೋನನ್ನು ಕೈಯಲ್ಲಿ ಹಿಡಿದುಕೊಂಡಷ್ಟು ಹೊತ್ತು ನಿಮ್ಮ ಮಗುವನ್ನು ಹೊತ್ತುಕೊಂಡಿದ್ದೀರಾ? ಏನಂತೀರಾ?”.
ಅನ್ನೋದೇನಿದೆ? ಏಟಿನ ಮೇಲೆ ಏಟು. ಪಾಠದ ಮೇಲೆ ಪಾಠ.
 
“ಏತಕ್ಕಾಗಿ ಈ ಓಟ? ನಾವೆಷ್ಟು ಕೈ ಚಾಚಿ ಓಡುತ್ತಿದ್ದರೂ ಒಂದರ ನಂತರ ಮತ್ತೊಂದು ಆಸೆ ಮೂಡುತ್ತಲೇ ಹೋಗುತ್ತದೆ. ನಾನೂ ಹೀಗೇ ಇದ್ದೆ. ಒಮ್ಮೆ ತಲೆ ತಗಲಿತು. ಒಂದೊಂದು ಗುರಿ ಸಾಧಿಸುತ್ತಲೇ ಮುಮ್ಮುಖವಾಗಿ ಸಾಗಿ ಸಾಗಿ, ಇನ್ನು ಓಟ ಸಾಕು ಎಂದು ಅಂದುಕೊಂಡು ನಿಂತಾಗ ಅರಿವಾಯ್ತು, ನನ್ನೊಂದಿಗೆ ನನ್ನವರು ಯಾರೂ ಓಡುತ್ತಲೇ ಇಲ್ಲ ಎಂದು. ಅವರನ್ನೆಲ್ಲ ಎಂದೋ ಕಳೆದುಕೊಂಡಿದ್ದೆ. ಅದರ ಅರಿವೂ ಆಗಿರಲಿಲ್ಲ. ಹಾಗಾಗಿ ನಾನಲ್ಲಿಗೆ ಒಂಟಿ. ಯೋಚನೆ ಮಾಡಿ. ಸದ್ಯಕ್ಕೆ ನಾನು ಹೊರಟೆ”.
 
ಎಷ್ಟೋ ಹೊತ್ತು ಹಾಗೇ ಕೂತಿದ್ದೆ. ದೊಣ್ಣೆ ಹಿಡಿದು ಬಂದ ಪಾರ್ಕಿನ ಕಾವಲಿನವನು ಹೇಳಿದ “ಏನ್ರೀ ಇನ್ನೂ ಕತ್ತಲಲ್ಲಿ ಕೂತಿದ್ದೀರ? ಹೊರಡಿ ಹೊರಡಿ”.
 
 

‍ಲೇಖಕರು G

January 22, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

12 ಪ್ರತಿಕ್ರಿಯೆಗಳು

  1. ಅಕ್ಕಿಮಂಗಲ ಮಂಜುನಾಥ

    ದೂರವಿರುವ ನೋಡಿಯೇ ಇರದ ಜನರನ್ನು ಅವರ ಸಂವೇದನೆಗಳಿಗೆ ಸ್ಪಂದಿಸುವ ಈ ಸಾಧನ ಮಾರುದ್ದ ಇರುವ ಹೃದಯದಲ್ಲಿ ನಿಮ್ಮ ಸ್ವಂತ ಜನರ ನೋವಿಗೆ ನಲಿವಿಗೆ ಸ್ಪಂದಿಸಲು ಏಕೆ ಸೋಲುತ್ತೆ ? ವಾಯುವುಳ್ಳ ಜೀವಕ್ಕಿಂತ ವಾಯುರಹಿತ ವಸ್ತುಗಳಿಗೆ ನಾವು ಪ್ರಾಮುಖ್ಯತೆ ನೀಡುತ್ತೇವೆ . ನೀವು ಪೋನನ್ನು ಕೈಯಲ್ಲಿ ಹಿಡಿದು ಕೊಂಡಷ್ಟು ಹೊತ್ತು ನಿಮ್ಮ ಮಗನನ್ನು ಹೊತ್ತು ಕೊಂಡಿದ್ದೀರಾ ?
    ನಿಮಗಲ್ಲ ನನಗೆ ಚಾಟಿ ಏಟು ತಿಂದಂತೆ ಅನುಭವವಾಯಿತು.ನಾವೆಲ್ಲಾ ಮಾಡುತ್ತಿರುವುದು ಇದನ್ನೇ. ನಮ್ಮ ಮಕ್ಕಳ ಬಗ್ಗೆ , ಸಂಸಾರದ ಬಗ್ಗೆ , ಪೋಷಕರ ಬಗ್ಗೆ , ನೆರೆ ಹೊರೆಯವರ ಬಗ್ಗೆ ಕಿಂಚಿತ್ತಾದರೂ ಕಾಲ ಕಳೆದಿದ್ದೇವೆಯೇ ? ಕಷ್ಟ ಸುಖಗಳಲ್ಲಿ ಬಾಗಿಗಳಾಗುತ್ತಿದ್ದೇವೆಯೇ ? ವಾಹ್ ! ಲೇಖನ ವಂಡರ್ ಫುಲ್. ಲೇಖಕರಿಗೆ ಅಭಿನಂದನೆಗಳು.

    ಪ್ರತಿಕ್ರಿಯೆ
    • Bhalle

      ಮಂಜುನಾಥರಿಗೆ ವಂದನೆಗಳು … ಸಾಮಾಜಿಕ ತಾಣಗಳಲ್ಲಿ ಹುಟ್ಟುಹಬ್ಬದ ಶುಭಾಶಯಗಳನ್ನು ಸುರಿವ ನಾವು ಎದುರಿಗೆ ಇರುವ ಅಪ್ಪ-ಅಮ್ಮನ ಹುಟ್ಟುಹಬ್ಬ ಯಾವ ದಿನ ಎಂಬ ಅರಿವೂ ಇರುವುದಿಲ್ಲ … ಇಂದು ನಾವೆಲ್ಲ ಈ ಪಿಡುಗಿಗೆ ಬಲಿಯಾಗಿದ್ದೇವೆ, ಈ ಕಥೆ ಕಾಲ್ಪನಿಕವೇ ಆದರೂ ಸತ್ಯಕ್ಕೂ ಒಂದಿನಿತೂ ದೂರವಿಲ್ಲ. ಜಗತ್ತಿನ ವಿಷಯವೆಲ್ಲ ಅರಿತಿರುವ ನಾವು, ಎಲ್ಲರೊಂದಿಗೆ ಅಕ್ಷರ ಹಂಚಿಕೊಳ್ಳುವ ನಾವು ನಿಜಕ್ಕೂ ಒಂಟಿ !!! ಸ್ಮಾರ್ಟ್ ಫೋನಿಗೂ ಅಫೀಮಿಗೂ ಹೆಚ್ಚು ವ್ಯತ್ಯಾಸವಿಲ್ಲ :-(((((

      ಪ್ರತಿಕ್ರಿಯೆ
    • Anonymous

      ಅರತಿಯವರೇ ಧನ್ಯವಾದಗಳು … ಇತ್ತೀಚಿನ ದಿನಗಳಲ್ಲಿ ನಾವುಗಳು ಎಷ್ಟರ ಮಟ್ಟಿಗೆ ಅಂಗೈ ಅಗಲದ ಸಾಧನಕ್ಕೆ ಜೋತು ಬಿದ್ದಿದ್ದೇವೆ ಎಂದರೆ ಹೊರಗೆ ಅಡಿಯಿಟ್ಟು ಛಳಿ, ಮಳೆ ನೋಡುವ ಬದಲು ಫೋನಿನಲ್ಲೇ ಹವಾಮಾನ ನೋಡುವ ಹಾಗಾಗಿದ್ದೇವೆ 🙁

      ಪ್ರತಿಕ್ರಿಯೆ
    • Bhalle

      ಅರತಿಯವರೇ ಧನ್ಯವಾದಗಳು … ಇತ್ತೀಚಿನ ದಿನಗಳಲ್ಲಿ ನಾವುಗಳು ಎಷ್ಟರ ಮಟ್ಟಿಗೆ ಅಂಗೈ ಅಗಲದ ಸಾಧನಕ್ಕೆ ಜೋತು ಬಿದ್ದಿದ್ದೇವೆ ಎಂದರೆ ಹೊರಗೆ ಅಡಿಯಿಟ್ಟು ಛಳಿ, ಮಳೆ ನೋಡುವ ಬದಲು ಫೋನಿನಲ್ಲೇ ಹವಾಮಾನ ನೋಡುವ ಹಾಗಾಗಿದ್ದೇವೆ 🙁

      ಪ್ರತಿಕ್ರಿಯೆ
  2. Bhalle

    ಧನ್ಯವಾದಗಳು ಉಮೇಶ್ … ಕೆಲವೊಮ್ಮೆ ನಮ್ಮ ಅಭ್ಯಾಸಕ್ಕೆ ನಮಗೇ ಭಯವಾಗುತ್ತೆ 🙁

    ಪ್ರತಿಕ್ರಿಯೆ
  3. Raghavendra rao

    Awesome..felt like I’m sitting there and talking to that respected elder..

    ಪ್ರತಿಕ್ರಿಯೆ
    • Srinath

      Thank you Raghevndra Rao … Feels good to give you that experience … we need such elders around us ….

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: