ಸೋಷಿಯಲ್ ಮೀಡಿಯಾ ಎಂಬುದು ಲವೆಲ್ ಪ್ಲೇಯಿಂಗ್ ಫೀಲ್ಡ್ ಎಂದು ಹೇಳಿದವರು ಯಾರು?
ಫೇಸ್ ಬುಕ್, ಟ್ವಿಟ್ಟರ್ ನಂತಹ ಸೋಷಿಯಲ್ ಮೀಡಿಯಾಗಳು ನ್ಯೂಟ್ರಲ್ ಆಗಿ ನಿಂತು ಅಲ್ಲಿ ಪಾಲ್ಗೊಳ್ಳುವ ಮನಸ್ಸುಗಳನ್ನೆಲ್ಲ ಇದ್ದದ್ದು ಇದ್ದಂತೆ ಸಾರ್ವಜನಿಕವಾಗಿ ತೆರೆದಿಡುವ ನೋಟೀಸು ಬೋರ್ಡ್ ಗಳಲ್ಲ; ಬದಲಾಗಿ ಖಾಸಗಿ ಕಾರ್ಪೋರೇಷನ್ ಗಳು
ತಮ್ಮ ಲಾಭಕ್ಕಾಗಿ, ತಮ್ಮ ಆಯ್ಕೆಯ ವಿಚಾರಗಳನ್ನು ಮಾತ್ರ ಸಾರ್ವಜನಿಕ ಅಭಿಪ್ರಾಯವೆಂಬಂತೆ ಬಿಂಬಿಸುವ ಜಾಲಗಳು ಎಂಬುದು ಅರ್ಥವಾದ ದಿನ ಇಡಿಯ “ಸೋಷಿಯಲ್ ಮೀಡಿಯಾ” ಆಟದ ನಿಯಮವೇ ಬದಲಾಗಿ ಬಿಡುತ್ತದೆ.
ಪತ್ರಕರ್ತೆ ಸ್ವಾತಿ ಚತುರ್ವೇದಿ ಅವರು ಸಂತೆಗೊಂದು ಮೊಳದಂತೆ ಹೊಸೆದಿರುವ I AM A TROLL ಪುಸ್ತಕ ಓದಿದ ಬಳಿಕ ನನಗೆ ತಕ್ಷಣಕ್ಕೆ ಅನ್ನಿಸಿದ್ದಿಷ್ಟು.
ಮೊತ್ತಮೊದಲ ಬಾರಿಗೆ ಮತದಾನ ಯಂತ್ರಗಳು ಬಂದಾಗಲೇ, “ಓ ಇದು ಏನೋ ಕುತಂತ್ರ. ಅವರು ಗೆಲ್ಲುವುದಕ್ಕೆಂದೇ ಈ ತಂತ್ರಜ್ನಾನ ತಂದಿದ್ದಾರೆ, ಅದನ್ನು ಬಳಸಿಕೊಂಡೇ ಗೆಲ್ಲುತ್ತಾರೆ” ಎಂದು ಎಲ್ಲರಿಗೆ ಕೇಳುವಷ್ಟು ಗಟ್ಟಿಯಾಗಿಯೇ ವದಂತಿಗಳನ್ನು ಉದಂತ ಮಾಡಿದ ದೇಶ ನಮ್ಮದು. ಹೊಸತನ್ನು ಸಂಶಯದಿಂದ ನೋಡಿ, ವಿವೇಚಿಸಿದ ಬಳಿಕವೇ ಒಪ್ಪಿಕೊಳ್ಳುವ ಸಂಪ್ರದಾಯ ನಮಗೆ ನಮ್ಮ ಸಂಸ್ಕ್ರತಿಯ ಬಳುವಳಿ.
ಆದರೆ, ನಮ್ಮ ಶಿಕ್ಷಣ ಪದ್ಧತಿ ಮತ್ತು ಇತ್ತೀಚೆಗೆ ಐಟಿ ಕ್ಷೇತ್ರದ ಬೆಳವಣಿಗೆಗಳು ನಮ್ಮಲ್ಲಿ ಎಷ್ಟೊಂದು ಗಮಾರತನವನ್ನು ತುಂಬತೊಡಗಿವೆ ಎಂದರೆ, ಸಂಶಯ-ವಿವೇಚನೆಗಳೆಲ್ಲ ಹಿಂದಿನ ಸೀಟಿಗೆ ಹೋಗಿ, ಕುರುಡು ನಂಬಿಕೆಗಳು ಚಾಲಕನ ಸೀಟು ಹತ್ತಿ ಕುಳಿತಿವೆ. ಈವತ್ತು ಸಾಕ್ಷರರೆಲ್ಲರೂ ಶಿಕ್ಷಿತರಲ್ಲ.
ನಮ್ಮಲ್ಲಿ ಎಷ್ಟು ಮಂದಿ, ಫೇಸ್ ಬುಕ್ ಅಥವಾ ಟ್ವಿಟ್ಟರಿನಲ್ಲಿ ತಮ್ಮ ಅಕೌಂಟ್ ತೆರೆಯುವಾಗ, ಅದರ ನಿಯಮಗಳು ಮತ್ತು ಷರತ್ತುಗಳಿಗೆ ನಮ್ಮ ಒಪ್ಪಿಗೆ ಇದೆ ಎಂದು ಕ್ಲಿಕ್ ಮಾಡುವ ಮುನ್ನ ಅದನ್ನು ಓದಿ ಅರ್ಥಮಾಡಿಕೊಂಡಿದ್ದೀರಿ?
ಅದರಲ್ಲಿ ಆ ಕಂಪನಿಗಳು ನಮ್ಮ ಬಗ್ಗೆ ಸಂಗ್ರಹಿಸುವ ಮಾಹಿತಿ ಮತ್ತು ಅದನ್ನು ಬಳಸಿಕೊಳ್ಳುವ ವಿಧಾನಗಳ ಬಗ್ಗೆ ವಿವರಿಸಲಾಗಿದೆ. ಮೇಲ್ನೋಟಕ್ಕೆ ಇವು ಸುರಕ್ಷಿತವೆಂದುಕೊಂಡರೂ, ಕಾರ್ಯರೂಪಕ್ಕೆ ಬರುವಾಗ ಸುರಕ್ಷಿತವಾಗಿರಬೇಕೆಂದೇನಿಲ್ಲ. ಉದಾಹರಣೆಗೆ, ಫೇಸ್ ಬುಕ್ ನಂತಹ ಸೋಷಿಯಲ್ ಮೀಡಿಯಾಗಳ ಮೂಲಕವೇ ಬೇರೆ ಸೈಟ್ ಗಳಿಗೆ ಲಾಗಿನ್ ಆಗಲು ಅವಕಾಶ ನೀಡಲಾಗುತ್ತದೆ. ಅಲ್ಲಿ ನೀವು ಒಂದು ಆನ್ ಲೈನ್ ಖರೀದಿ ಅಥವಾ ಏನೋ ಒಂದು ವಾಣಿಜ್ಯ ಮಾಹಿತಿ ಹುಡುಕಾಟ ಮಾಡಿದಿರೆಂದಿಟ್ಟುಕೊಳ್ಳಿ. ಮರುದಿನದಿಂದಲೇ ಆ ಹುಡುಕಾಟ ಸಂಬಂಧಿ ಜಾಹೀರಾತುಗಳು ನಿಮ್ಮನ್ನು ಎಡತಾಕತೊಡಗುತ್ತವೆ. ಈ ಮೂರನೇ ಪಾರ್ಟಿಗಳು ನೀವು ಅಗ್ರೀಮೆಂಟು ಮಾಡಿಕೊಂಡು ಅಕೌಂಟ್ ತೆರೆದಿರುವ ಮೊದಲನೇ ಪಾರ್ಟಿಯವರಂತೆ “ನೈತಿಕತೆ” ಹೊಂದಿರಬೇಕೆಂದಿಲ್ಲ.
ಇನ್ನು, ಕಾರ್ಪೋರೇಟ್ ಆಡಳಿತದ ಮಟ್ಟದಲ್ಲಂತೂ ಇದು ಬೇರೆಯೇ ರೀತಿ ಕೆಲಸ ಮಾಡುತ್ತದೆ. ಫೇಸ್ ಬುಕ್, ಗೂಗಲ್ ಗಳಂತಹ ವರ್ಚುವಲ್ ಜಗತ್ತಿನ ಮುಖ್ಯಸ್ಥರು ಈಗೀಗ ವಾಸ್ತವ ಜಗತ್ತಿನ ರಾಷ್ಟ್ರ ಮುಖ್ಯಸ್ಥರನ್ನು ಇನ್ನೊಂದು ರಾಷ್ಟ್ರದ ಮುಖ್ಯಸ್ಥರ ರೀತಿಯಲ್ಲೇ ಸಂದರ್ಶಿಸುವ ಪರಿಪಾಠ ಬೆಳೆಯುತ್ತಿದೆ. (ಭಾರತದ ಪ್ರಧಾನಿ ಮೋದಿ – ಫೇಸ್ ಬುಕ್ ಮಾಲಕ ಮಾರ್ಕ್ಸ್ ಝುಕರ್ ಬರ್ಗ್ ಭೇಟಿಯನ್ನು ನೆನಪಿಸಿಕೊಳ್ಳಿ.)
ಈ ರೀತಿಯ ವರ್ಚುವಲ್ ಮತ್ತು ವಾಸ್ತವ ಜಗತ್ತಿನಲ್ಲಿ ಪರಸ್ಪರ ಕೊಡುಕೊಳ್ಳುವಿಕೆಗಳಿಗೆ ಈವತ್ತು ಯಾವುದೇ ಕಾನೂನಿನ ಅಡ್ಡಿ ಇಲ್ಲ. ಫೇಸ್ ಬುಕ್ಕಿಗೆ ಭಾರತದಲ್ಲಿ ಬೇರು ಬಿಡಲು ದೇಶದೊಳಗೆ ವಿದೇಶಿ ಹೂಡಿಕೆಯ ಕೆಂಪುಹಾಸಿನ ಹಾದಿಯಿದೆ. ಅದೇರೀತಿ ಆಳುವವರಿಗೂ ಫೇಸ್ ಬುಕ್ಕನ್ನು ಒಳಬಿಟ್ಟುಕೊಂಡದ್ದಕ್ಕೆ ಪ್ರತಿಯಾಗಿ ಇನ್ನೇನಾದರೂ ಖಾಸಗಿ ಕೋರಿಕೆ ಮಂಡಿಸಲು ಅವಕಾಶ ಇದ್ದಿರಬಾರದೆಂದೇನಿಲ್ಲ.
ಫೇಸ್ ಬುಕ್, ಟ್ವಿಟ್ಟರ್ ಗಳ ಮಾಲಕರಿಗೆ ತಮ್ಮ ಸೈಟುಗಳಲ್ಲಿ ತಮಗೆ ಅಗತ್ಯವಿರುವುದನ್ನು ಮಾತ್ರ “ಟ್ರೆಂಡ್” ಮಾಡಿಕೊಳ್ಳುವ, ಅಗತ್ಯ ಇಲ್ಲದ್ದನ್ನು ಮುಚ್ಚಿಹಾಕುವ, ತಲುಪಿಸಬೇಕಾದಲ್ಲಿಗೆ ತಲುಪಬೇಕಾದಾಗ ತಲುಪಿಸದಿರುವ ಮತ್ತು ಅಗತ್ಯ ಬಿದ್ದಲ್ಲಿ ತಮಗೆ ಅಗತ್ಯ ಇರುವವರಿಗೆ ಏನನ್ನೂ ಮಾಡಿಕೊಡಬಲ್ಲ ಎಲ್ಲ ಸಾಮರ್ಥ್ಯಗಳೂ, ತಾಂತ್ರಿಕ ಪರಿಣತಿಗಳೂ ಇವೆ. ಇಂತಹ ಒಂದೆರಡು ಪ್ರಕರಣಗಳು ಈಗಾಗಲೇ ಸುದ್ದಿ ಆದದ್ದೂ ಇದೆ.
ನೋಟು ರದ್ಧತಿಯಾದ ಬಳಿಕ ರಿಸರ್ವ್ ಬ್ಯಾಂಕಿನಂತಹ ಸರ್ಕಾರಿ ಸಂಸ್ಥೆಯೊಂದರಿಂದಲೇ ಗರಿಗರಿಯಾದ ನೋಟಿನ ಅಟ್ಟಿಗಳು ಉಳ್ಳವರ ಮನೆ ಸೇರಬಹುದೆಂದಾದರೆ, ಸೋಷಿಯಲ್ ಮೀಡಿಯಾಗಳು ಯಾವ ಸೀಮೆ ದೊಣ್ಣಾಯಕರು?!
ಕಾಸುಕೊಟ್ಟು ಪ್ರಚಾರ/ಅಪಪ್ರಚಾರಕ್ಕೆಂದು ಜನ ನೇಮಿಸಿಕೊಳ್ಳುವ “ಛಾತಿ ಪೀಟ್” ಸಂಸ್ಕ್ರತಿ ಭಾರತಕ್ಕೇನೂ ಹೊಸದಲ್ಲ. ಹುಟ್ಟಿದರೆ, ಸತ್ತರೆ ಅವರನ್ನು ಕರೆಸಿಕೊಳ್ಳುವುದು ಕೆಲವೆಡೆ ಚಾಲ್ತಿ ಇರುವ ದೇಶ ನಮ್ಮದು. ಈ ಕಾಸು ಪಡೆದು ರಾಜಕೀಯ ಅಪಪ್ರಚಾರದಲ್ಲಿ ತೊಡಗಿಕೊಳ್ಳುವ TROLLಗಳು ಈಗಕ್ಕೆ ಅಪಾಯಕಾರಿ ಎನ್ನಿಸಿದರೂ, ಮುಂದೊಂದು ದಿನ ತಮ್ಮ ಹಿಂದಿರುವ ಗುಟ್ಟಿನ ಕಾಳುದುರಿಸತೊಡಗಿದಾಗ, ಅವರನ್ನು ಬಳಸಿಕೊಂಡವರು ಸಂಪೂರ್ಣ ಬೆತ್ತಲಾಗಿರುತ್ತಾರೆ.





0 Comments