ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫೇಸ್ ಬುಕ್ ಪಿಕ್ : ಸ್ಕೌಟ್ ದಿನಗಳ ನೆನಪು

ಸ್ಕೌಟ್ ನೆನಪು!

ಟಿ ಕೆ ತ್ಯಾಗರಾಜ್

ಇತ್ತೀಚೆಗೆ ನಾನು ಮಾರ್ಕೆಟ್ ದಾಟಿ ಪದ್ಮನಾಭನಗರಕ್ಕೆ ವಾಪಸಾಗುತ್ತಿದ್ದಾಗ ಜೋರಾಗಿ ಮಳೆ ಬೀಳತೊಡಗಿತು ಅಂತ ಸಮೀಪದಲ್ಲೇ ಇದ್ದ ಸ್ಕೌಟ್ ಭವನದ ಆವರಣದಲ್ಲಿರುವ ಮರದ ಅಡಿಯಲ್ಲಿ ನಿಂತೆ.ಮಳೆ ಇನ್ನಷ್ಟು ಜೋರಾಗಿ ಮರದ ಆಶ್ರಯವೂ ಸಾಲದಾಯಿತು.ಸ್ಕೌಟ್ ಗಳಾದವರು ಇನ್ನೊಬ್ಬರಿಗೆ ನೆರವಾಗುತ್ತಾರೆ ಅಂತ ಹೇಳಿಕೊಳ್ಳುತ್ತಾರಲ್ಲಾ? ನೋಡೋಣ ನನ್ನ ಜತೆ ಹೇಗೆ ವರ್ತಿಸುತ್ತಾರೋ ಅಂತ ನೋಡಬೇಕು ಅಂದುಕೊಳ್ಳುವಷ್ಟರಲ್ಲಿ ‘ಯಾರೋ ಒಬ್ಬರು ಬಂದು ಬಿಲ್ಡಿಂಗ್ ಒಳಗೆ ಬನ್ನಿ, ಮಳೆ ನಿಂತ ಮೇಲೆ ಹೋಗಬಹುದು’ ಅಂದರು. ನಾನು ಒಳಗಡೆ ಹೋಗಿ ನಿಂತುಕೊಂಡೆ. ‘ಇಲ್ಲೇ ಚೇರ್ ನಲ್ಲಿ ಕೂತ್ಕೊಳ್ಳಿ’ ಅಂದರು. ಆನಂತರ ಒಬ್ಬೊಬ್ಬರೇ ಬಂದು ಮಾತನಾಡತೊಡಗಿದರು. ಅಲ್ಲಿವರೆಗೆ ನನ್ನ ಪರಿಚಯ ಮಾಡಿಕೊಂಡಿರಲಿಲ್ಲ.ಅಲ್ಲಿನವರ ವರ್ತನೆ ಹೇಗಿರುತ್ತದೋ ಅಂತ ಸಂಶಯಿಸುತ್ತಿದ್ದವನಿಗೆ ನಿಜಕ್ಕೂ ಸಂತೋಷವಾಯಿತು.ಆ ಹೊತ್ತಿಗೆ ಅಲ್ಲಿಗೆ ಬಂದ ಒಬ್ಬರು ನನ್ನ ಗುರುತು ಹಿಡಿದು ‘ನೀವು ಲಂಕೇಶ್ ಪತ್ರಿಕೆ ತ್ಯಾಗರಾಜ್ ಅಲ್ವಾ?’ ಅಂದರು.ಅದಕ್ಕೆ ನಾನು ,’ಹೌದು . ನಾನು ಟಿ.ಕೆ.ತ್ಯಾಗರಾಜ್. ಈಗ ಲಂಕೇಶ್ ಪತ್ರಿಕೆಯಲ್ಲಿ ಇಲ್ಲ.ಆದರೆ ನೀವೆಲ್ಲ ನನ್ನ ಪರಿಚಯ ಇಲ್ಲದೆಯೂ ನನ್ನ ಬಗ್ಗೆ ತೋರಿದ ಪ್ರೀತಿಗೆ ಕೃತಜ್ಞನಾಗಿದ್ದೇನೆ. ಅಪರಿಚಿತನಾಗಿದ್ದ ನನಗೆ ಮಳೆಯಲ್ಲಿ ಆಶ್ರಯ ಕೊಟ್ಟಿದ್ದೀರಿ.ನಿಜಕ್ಕೂ ಖುಷಿಯಾಯಿತು. ನಿಮ್ಮ ನಿಜವಾದ ಸ್ಕೌಟ್ ತನ ತೋರಿದ್ದೀರಿ. ನಾನೂ ಕೂಡಾ ಸ್ಕೌಟ್ ಆಗಿದ್ದೆ. ೧೯೭೧-೭೨ ರಲ್ಲಿ ಮಡಿಕೇರಿಯ ಸೇಂಟ್ ಮೈಖೇಲ್ಸ್ ನಲ್ಲಿ ಓದುತ್ತಿದ್ದಾಗ ಬೆಸ್ಟ್ ಸ್ಕೌಟ್ ಪ್ರಶಸ್ತಿ ತೆಗೆದುಕೊಂಡಿದ್ದೆ.’ ಅಂತ ಹೇಳಿದಾಗ ಅವರೆಲ್ಲರಿಗೂ ಖುಷಿಯಾಯಿತು. ಸ್ಕೌಟ್ ನ ಪ್ರಮುಖ ಪದಾಧಿಕಾರಿಯೊಬ್ಬರು ” ಈ ತಿಂಗಳು ನಮ್ಮ ಸ್ಕೌಟ್ ಪತ್ರಿಕೆಗೆ ನಿಮ್ಮ ಅನುಭವವನ್ನು ಬರೆದು ಕೊಡಿ. ರಾಜ್ಯಪಾಲರು ಕೂಡಾ ಬರೆದುಕೊಟ್ಟಿದ್ದಾರೆ’ ಅಂದರು. ‘ಪ್ರಯತ್ನಿಸುತ್ತೇನೆ ‘ಎಂದೆ.

ನಾನು ಮಡಿಕೇರಿಯವನು ಅಂತ ಗೊತ್ತಾದಾಗ ಅಲ್ಲಿದ್ದವರೊಬ್ಬರು ‘ ಮಡಿಕೇರಿಯಲ್ಲಿ ಎಲ್ಲಿ?’ ಅಂತ ಪ್ರಶ್ನಿಸಿ ವಿವರ ಗೊತ್ತಾದಾಗ ‘ನಾನು ನಿಮ್ಮ ತಂದೆಯ ಸ್ಟೂಡೆಂಟ್. ಅವರು ಹೇಗಿದ್ದಾರೆ?’ ಅಂತ ಪ್ರಶ್ನಿಸಿದರು.’ಇಲ್ಲ. ಅವರು ಹೋಗಿ ೮ ವರ್ಷಗಳಾದವು’ ಎಂದಾಗ ನನ್ನ ಕಣ್ಣು ತುಂಬಿದ್ದು ನೋಡಿ ಅವರಲ್ಲೂ ಬೇಸರದ ಭಾವ ವ್ಯಕ್ತವಾಯಿತು.ಹಾಗೇ ಸ್ವಲ್ಪ ಹೊತ್ತು ಕಳೆದು ಮಳೆ ನಿಂತ ನಂತರ ವಾಪಸಾದೆ. ಇವತ್ತಿಗೂ ಅವರಿಗೆ ಕೊಟ್ಟ ಮಾತಿನಂತೆ ಲೇಖನ ಬರೆದುಕೊಡಲು ಸಾಧ್ಯವಾಗಲಿಲ್ಲ ಎಂಬ ನೋವು ಈಗಲೂ ಕಾಡುತ್ತಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಇದೆಯಲ್ಲ ? ತುಂಬ ಮುಜುಗರ ಉಂಟು ಮಾಡುತ್ತದೆ. ಹಾಗೆ ಮಾಡುವುದು ಅಪರಾಧವೂ ಹೌದು. ನನ್ನ ಸ್ಕೌಟ್ ದಿನಗಳು, ನನ್ನ ತಂದೆ, ತಾಯಿ, ನನ್ನ ಮಡಿಕೇರಿ ಎಲ್ಲ ನೆನೆಪಾಗಿ ಇದೆಲ್ಲ ಹೇಳಬೇಕೆನಿಸಿತು.ಬೇರೇನೂ ಕಾರಣವಿಲ್ಲ.

‍ಲೇಖಕರು G

14 November, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading