ಪಂಡಿತಾರಾಧ್ಯ, ಮೈಸೂರು
ಆಕಸ್ಮಿಕವಾಗಿ ದೊರೆತ ಲೇಖನ. ಪ್ರೌಢಶಾಲೆಯ ಒಂಬತ್ತನೆಯ ತರಗತಿಯ ಮಗು ಆನ್ನಫೂರ್ಣ ತಮ್ಮ ಊರಿನ ಭಾಷೆಯಲ್ಲಿ ತಮ್ಮ ಊರಿನ ಆಚರಣೆಯ ಬಗ್ಗೆ ಬರೆದಿದ್ದಾಳೆ. ಮಕ್ಕಳಿಗೆ ತಮ್ಮ ಊರಿನ ಬಗ್ಗೆ, ತಮ್ಮ ಜನರ ಬಗ್ಗೆ, ಅವರಾಡುವ ಭಾಷೆಯ ಬಗ್ಗೆ ಪ್ರೀತಿ ಬೆಳೆಸುವ ಕೆಲಸವನ್ನು ಶಾಲೆಗಳು ಮಾಡುವ ಅಗತ್ಯವಿದೆ. ಇಂಥ ಶಾಲಾ ಪತ್ರಿಕೆಯನ್ನು ಸಂಪಾದಿಸಿದ ಶಾಲೆಯ ಅಧ್ಯಾಪಕರು ಮತ್ತು ಸಂಬಂಧಪಟ್ಟ ಎಲ್ಲರಿಗೂ ಅಭಿನಂದನೆಗಳು. ಮಗುವಿನ ಪ್ರಾಥಮಿಕ ಶಿಕ್ಷಣವನ್ನು ಆದರ ಮಾತೃಭಾಷೆ ಅಥವಾ ಪರಿಸರದ ಭಾಷೆಯಲ್ಲಿ ನೀಡಬೇಕು. ಐದನೆಯ ತರಗತಿಯಿಂದ ಮಾತ್ರ ಶಿಷ್ಟ ಕನ್ನಡವನ್ನು ಕಲಿಸಬೇಕು. ಇದರಿಂದ ಮಕ್ಕಳಿಗೆ ತಮ್ಮ ನೆಲದ ಸಂಬಂಧ ಉಳಿಯಲು ಸಾಧ್ಯ.
ಈ ಬಗ್ಗೆ, ಅನ್ನಪೂರ್ಣಳ ಲೇಖನದ ಬಗ್ಗೆ ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತವಿದೆ.
ಕುಂದಾಪ್ರ ಭಾಷೆ ಲೇಖನ
ಹೊಸ್ತ್ (ಹೊಸತು)
ಹೋಯ್ ಹೊಸ್ತಿಗೋಪುಕಿತ್ತೆ. ಬತ್ತಿ ಅಕ್ಕಾ ಅಂದ್ರೆ ಇಲ್ಲೊಬ್ಬಳ್ ಎಂತದೇ ಹೊಸ ಶೀರಿ ತೆಕಂಡಿರ್ಯಾ ಅಂತ ರಾಗ ಎಳೀತ್ಳ. ಈ ಹೆಂಗ್ಸ್ರಿಗ್ ಇದೇ ಕನ್ಸ್ ಅಲ್ದೇ ಏಗಳಿಕೂ ಹೊಸ ಶೀರಿ, ಚಿನ್ನೊ ಅಂದೇಳಿ. ಹಾಂಗಲ್ಲ ಮಾರಾಯ್ರ ಹೊಸ್ತ್ ಅಂದ್ರೆ ನಂಬದಿಲೆಲ್ಲ ಕನ್ನೆ ತಿಂಗ್ಳ ಹತ್-ಹದ್ನಾಲ್ಕ್ ದಿನ ಅಂದ್ರೆ ನವರಾತ್ರಿ ಹೊತ್ತಿಗೆ ಹೊಸ ಅಕ್ಕಿ ಬಾನ ಮಾಡಿ, ಬಗೀ ಬಗೀ ಬಣ್ಣದ್ ಕಜ್ಜಾಯ ಭಕ್ಷ್ಯ ಮಾಡ್ಕಂಡ್, ವಷಿ೯ಡೀ ದುಡದ್ ಕಷ್ಟದ್ ದಿನ ಕಳ್ದ್ ಕುಸಿಗೆ ದೇವ್ರ ದಿಂಡ್ರನ್ನೆಲ್ಲಾ ನೆನ್ಸ್ಕಂಡ್, ನೈವೇದ್ಯ ಮಾಡಿ, ದೇವ್ರಿಗ್ ನಮ್ಸ್ಕಾರ ಮಾಡಿ, ಎಲ್ಲಾರೂ ಒಟ್ಟಾಯಿ ಉಂಬುದೇ ಹೊಸ್ತ್ ಮಾರಾಯ್ರ. ಅರೇ ಹೊಸಕ್ಕಿ ಬಾನ ಮಾಡೂಕೂ ಕ್ರಮ ಇತ್ತೆ, ಹಿತ್ತಾಳಿ ಅಥ್ವಾ ತಾಮ್ರದ್ ಚರ್ಗಿಗೆ ವಿಭೂತಿ ಬರ್ದ್ ಅದ್ಕೆ ಹೂಗಿನ್ ಮಾಲಿ ಹಾಕಿ, ಸಿಂಗಾರ ಮಾಡ್ಕಂಡ್ ಅದ್ರಾಗ್ ಮಾಡ್ಕೆ. ಉಂಬು ಮೊದ್ಲ್ ಹಿರೀರಿಗೆಲ್ಲಾ ಅಡ್‍ಬಿದ್ಕಂಡ್, ಹೊಸ್ತ್ ಉಂತೆ ಅಕ್ಕಾ ಅಂದೇಳಿ ಆಸೀವಾ೯ದ ತಕ್ಕಣ್ಕೆ. ಚಣ್ ಚಣ್ ಮಕ್ಕಳಿಗೂ ಹೊಸ್ತ್ ಉಂತೆ ಅಕ್ಕಾ ಅಂದೇಳಿಕಿ ಎಲ್ಲಾ ಒಟ್ಟಾಯಿ ಉಂಬುದೇ ಒಂದ್ ನಮೂನಿ ಗಮ್ಮತ್ ಅಲ್ದೆ. ಇದ್ರಾಗ್ ಒಂದಿತ್ತೆ, ಆಚಿ ಮನಿ ಈಚಿ ಮನಿಯವ್ರನ್, ನೆಂಟ್ರಿಸ್ಟರನೆಲ್ಲಾ ಕರೀಕ್ಕೆ. ಅರೇ ಅವರೆಲ್ಲಾ ಆವ್ರವ್ರ್ ಮನಿಯಂಗ್ ಹೊಸ್ತ್ ಆಗದೇ ಬೇರೆ ಮನಿ ಹೊಸ್ತಿನ್ ಗಂಜಿ ಉಂಬುಕಾಗ ಅಂತ್ರಪ್ಪ. ಮತ್ತಿದ್ದ ಅಡ್ಗಿಯೆಲ್ಲಾ ತಿನ್ಲಕ್ ಕಾಣಿ. ನಮ್ಮ ಬದಿಯಾಗ್ ಹೊಸ್ತ ಮಾಡೂ ಪರಿ ಹೀಂಗ್ ಕಾಣಿ. ಊಟ ಆದಗತಿಲ್ ಎಲ್ಲಾರೂ ಮಾತಾಡ್ದೆ ಬಂದ್ ಎಲಿ, ಅಡ್ಕಿ ಹಾಕ್ಕಣ್ಕಂಬ್ರ್ ಯಾಕ್ ಅಂದೇಳಿ ನಂಗೊತ್ತಿಲ್ಲೆ. ಎಲ್ಲಾರೂ ಉಂಡ್ಕಂಡ್ ಮಾತಾಡ್ದೇ ಎಲಿ ತಿನ್ನಿ ಆಂದೇಳಿ ನಮ್ ದೊಡ್ಡೋರೆಲ್ಲ ಹೇಳಿದ್ ರಿವಾಜ್ ಇತ್. ಇದೆಲ್ಲಾ ನಮ್ ಕನ್ನಡ ಜಿಲ್ಲಿ ರಿವಾಜ್ ಕಾಣಿ, ಭಾರೀ ಚಂದ ಆಲ್ದೆ.
ಆದೇ ಬೇರೆ ಬದಿಯಾಂಗ್ ಬೇರೆ ಬೇರೆ ನಮೂನಿ ಇಲ್ಲಂಬ್ರ್. ಗಟ್ಟದಾಗೆಲ್ಲಾ ಮೂರ್ದಿನ ಹೊಸ್ತ್ ಮಾಡ್ತ್ರೆ. ಹೊಸ ಮದ್ಮಕ್ಕಳಿಗೆಲ್ಲಾ ಉಡುಗ್ರಿ ಕೊಡು ಪದ್ಧತಿ ಇತ್ತಂಬ್ರ್. ಒಂದಿನ ಹೊಸಕ್ಕಿ ರೊಟ್ಟಿ ಅಂಬ್ರ್, ಇನ್ನೊಂದಿನ ಹೊಸಕ್ಕಿ ಕಡ್ಬ್ ಅಂಬ್ರ್, ಮತ್ತೊಂದಿನ ಹೊಸಕ್ಕಿ ಬಾನ(ಗಂಜಿ) ಅಂಬ್ರ್. ಮಲ್ನಾಡಿನಾಗೆಲ್ಲಾ ಹಿಂಗಂಬ್ರ್, ಕ್ರಮ.
ಇನ್ ಕೇರಳದವ್ರೆಲ್ಲ ಓಣಂ ಅಂದೇಳಿ ಮಾಡು ಪದ್ಧತಿ ಇತ್ತೆ. ಇದೂ ನಮ್ ಬದಿ ಹೊಸ್ತಿನ್ ಹಾಂಗೆ ಭಾರೀ ಗೌಜಂಬ್ರ್. ಚೆನ್ನೈ ಅಂದೇಳಿ ಇತ್ತಲ್ಲೆ ಅಲ್ಲೆಲ್ಲಾ ಮಕರ ತಿಂಗ್ಳಾಗಿನ್ ಸಂಕ್ರಾಂತಿ ಹಬ್ಬ ಬತ್ತಲೇ ಆಗಳಿಕೆ ಮಾಡೂ ಹಬ್ಬ ನಮ್ ಹೊಸ್ತಿನ ಹಾಂಗೇ ಕಾಣಿ. ಇನ್ ಕೆಲವ್ರ್ ದೀಪಾವಳಿ ಸಮೀಗೂ ಮಾಡೂದ್ ಇತ್ತಂಬ್ರ್. ಹೊರ್ಗಿನ್ ರಾಜ್ಯದಾಗಿನವ್ರೆಲ್ಲ ಬೇರೆ ಬೇರೆ ನಮೂನೀಲೆ ಹೊಸ್ತ್ ಮಾಡ್ತ್ರಂಬ್ರ್. ಬಂಗಾಳದಾಗ್ ಮಾಡೂ ಬಿಸೂ ಆಂಬು ಹಬ್ಬು ಇದೇ ಬಗೀದಂಬ್ರ್. ಈಗಿನವ್ರೆಲ್ಲ ಇದೆಲ್ಲ ಎಂತ ಮೂಢನಂಬೀಕಿ ಅಂದೇಳಿ ಕುಶಾಲ್ ಮಾಡೂದಿತ್ತ್. ಅರೇ ಹಿಂದಿನ್ ಕಾಲದವ್ರಿಗ್ ಗೊತ್ತಿತ್ ಆ ಮಳಿ, ಚಳಿ, ಬಿಸ್ಲಾಗ್ ದುಡ್ದ್, ಕಡೀಕ್ ಬರೂ ಆ ಹೊಸಕ್ಕಿ ಉಂಬೂ ಸಂಭ್ರಮ ಎಂತದಂದೇಳಿ. ಒಬ್ಬೊಬ್ರಿಗಂತೂ ಕುಸಿ ತಡೂಕಾಗ್ದೇ ಹೊಸ್ತ್ ಉಂತೇ ಅಂಬೂ ಸಮೀಗೆ ಕಣ್ಣಾಗ್ ನೀರೇ ಬಪ್ಪುದಿತ್ತೆ.
ಹೊಯ್, ಈಗ್ ಸುಮಾರಿಗೆ ಹೊಸ್ತಿನ್ ಬಗ್ಗೆ ಒಂಚೂರ್ ಅಂದಾಜಾಯ್ತಲ್ದೆ. ನಂಗ್ ಗೊತ್ತಿದ್ದಷ್ಟ್ ಬರ್ದೀದಿ ಕಾಣಿ. ಇನ್ ನಂಗ್ ಗೊತ್ತಿಲ್ಲ್ಯೆ. ನಿಮ್ಗ್ ಏನಾರೂ ಗೊತ್ತಿದ್ರೆ ಇದ್ರ್ ಬಗ್ಗೆ ಒಂಚೂರು ತಿಳ್ಸನಿ ಅಕ್ಕಾ?
ಇಂತೀ ನಿಮ್ಸಾಲಿ ಹೆಣ್ಣ್, ಅನ್ನಪೂಣ೯ ಪಿ, 9ನೇ ತರಗತಿ ‘ಬಿ’ ವಿಭಾಗ
ಜ್ಯೋತಿಷ್ಮತೀ 2011-12 ಪು 43
ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಹಟ್ಟಿಯಂಗಡಿ ಕುಂದಾಪುರ ತಾ ಉಡುಪಿ ಜಿಲ್ಲೆ







ನಮ್ಮ ಕುಂದಾಪ್ರ ಹೆಣ್ಣು ಎಷ್ಟ್ ಚಂದ ಬರದಿತ್ತು. ಅಭಿನಂದನೆಗಳು ಅನ್ನಪೂರ್ಣ.