ಅಮ್ಮ… ಪುಸ್ತಕಕ್ಕೆ ಅವರು ಚಿನ್ನದ ಗರಿ ಸಿಕ್ಕಿಸಿದ್ದಾರೆ!
ಅವರ ಹೆಸರು ಮಹಾದೇವ ಸ್ವಾಮಿ . ವರ್ಷದ ಹಿಂದೆ ಅವರು ಫೋನ್ ಮಾಡಿ ಹೇಳಿದರು : ” ೨೦೦೯ ರಲ್ಲಿ ನಾನು ಟಿ ಸಿ ಎಚ್ ಮಾಡಿಕೊಂಡ ಶಿಕ್ಷಕ ಆಗಿದ್ದೆ . ಆ ವರ್ಷದ ಜೂನ್ ತಿಂಗಳಲ್ಲಿ ಗೆಳೆಯನೊಬ್ಬ ನನಗೆ ಉಡುಗೊರೆಯ ರೂಪದಲ್ಲಿ ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಪುಸ್ತಕವನ್ನು ಕೊಟ್ಟ . ಆ ಪುಸ್ತಕದಲ್ಲಿ ” ಸೈಕಲ್ ರಿಕ್ಷಾದವನ ಮಗ ಐ ಏ ಎಸ್ ಮಾಡಿದ” ಎಂಬ ಸ್ಟೋರಿ ಇದೆ . ಅದನ್ನು ಓದಿದ ನಂತರ – “ಎಲ ಎಲಾ , ಸೈಕಲ್ ರಿಕ್ಷಾದವನ ಮಗ ಐ ಏ ಎಸ್ ಮಾಡಲು ಸಾಧ್ಯ ಅನ್ನುವುದಾದರೆ, ನಾನು ಕನಿಷ್ಠ ಡಿಗ್ರಿ ಮಾಡಬಹುದಲ್ಲ ಅನ್ನಿಸಿತು . ಮುಕ್ತ ವಿ ವಿ ಯಲ್ಲಿ ಪದವಿ ಓದಲು ಶುರು ಮಾಡಿದೆ . ಕೊನೆಯ ವರ್ಷ ದ ಪರೀಕ್ಷೆ ಬರೆದಾಗಲೇ ಕೆ ಏ ಎಸ್ ಪರೀಕ್ಷೆ ಗೆ ಪತ್ರಿಕೆಯಲ್ಲಿ ಪ್ರಕಟಣೆ ಬಂತು . ಒಂದು ಕೈ ನೋಡೋಣ ಎಂದು ಪರೀಕ್ಷೆ ತಗೊಂಡಿದ್ದೇನೆ . ನನ್ನಲ್ಲಿ ಇಂಥದೊಂದು ಬದಲಾವಣೆ ಆಗಲಿಕ್ಕೆ ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಪುಸ್ತಕವೇ ಕಾರಣ .ದಯವಿಟ್ಟು ಅಂಥದೇ ಇನ್ನೊಂದು ಪುಸ್ತಕ ಹೊರತನ್ನಿ… “
ನಾನು ‘ಅಪ್ಪ ಅಂದ್ರೆ ಆಕಾಶ’ ಪುಸ್ತಕ ಹೊರತರಲಿಕ್ಕೆ ಮಹಾದೇವ ಸ್ವಾಮಿ ಅವರ ಈ ಮಾತುಗಳೂ ಸ್ವಲ್ಪ ಮಟ್ಟಿಗೆ ಕಾರಣ . ಮುಂದೆ ನಾನು ಹೊಸ ಪುಸ್ತಕದ ಸಿದ್ದತೆಯ ಗಡಿಬಿಡಿಯಲ್ಲಿ ಮುಳುಗಿದ್ದಾಗಲೇ ಮತ್ತೆ ಮಹಾದೇವ ಸ್ವಾಮಿ ಫೋನ್ ಮಾಡಿ ಹೇಳಿದರು : “ಸಾರ್… ನನ್ನ ಕೆ ಏ ಎಸ್ ಪ್ರಿಲಿಮ್ಸ್ ಪಾಸ್ ಆಗಿದೆ . ಮುಖ್ಯ ಪರೀಕ್ಷೆಗೆ ಸಿದ್ದತೆ ನಡೆಸಿದ್ದೇನೆ . ಈ ಎಲ್ಲ ಬದಲಾವಣೆಗೆ ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಪುಸ್ತಕವೇ ಕಾರಣ . ಒಂದು ಬೆಸ್ಟ್ ಆಫ್ ಲಕ್ ಹೇಳಿ …. ” (ತಮಾಷೆ ಎಂದರೆ ಅದುವರೆಗೂ ನಾನು ಮಹಾದೇವ ಸ್ವಾಮಿ ಅವರನ್ನು ನೋಡಿರಲಿಲ್ಲ . ಈಗ ಕೂಡ ಅವರನ್ನು ನೋಡಿಲ್ಲ . ಕೇವಲ ಎಸ್ ಎಂ ಎಸ್ ಮತ್ತು ಫೋನ್ ಮೂಲಕ ನಮ್ಮ ಮಾತು ಕಥೆ . ಅವರು ಮಳವಳ್ಳಿ ಹತ್ತಿರ ಶಿಕ್ಷಕರಂತೆ … )
ಸ್ವಾಮಿಯವರೇ, ನಿಮಗೆ ಯಾವತ್ತೂ ಗೆಲುವಾಗಲಿ. ಶುಭವಾಗಲಿ ಎಂದಿದ್ದೆ …
‘ಅಪ್ಪ ಅಂದ್ರೆ ಆಕಾಶ’ ಪುಸ್ತಕ ಬಿಡುಗಡೆಯ ದಿನ ಮಹದೇವಸ್ವಾಮಿ ಅವರನ್ನು ವೇದಿಕೆಗೆ ಕರೆದು ಗೌರವಿಸುವ ಉದ್ದೇಶ ಕೂಡ ನನ್ನದಿತ್ತು . ಆದರೆ ಪುಸ್ತಕ ಬಿಡುಗಡೆಗೆ ಎರಡು ದಿನ ಬಾಕಿ ಇದ್ದಾಗಲೇ ರಸ್ತೆ ಅಪಘಾತದಲ್ಲಿ ಸ್ವಾಮಿ ಅವರ ತಂದೆ ತೀರಿಕೊಂಡರು .ಹಾಗಾಗಿ ಸ್ವಾಮಿಯವರು ಕಾರ್ಯಕ್ರಮಕ್ಕೆ ಬರಲೇ ಇಲ್ಲ . ಮೊನ್ನೆ ಶುಕ್ರವಾರ ಮನೆ ತಲುಪಲು ಬಸ್ ಇಲ್ಲದೆ ಮೆಜೆಸ್ಟಿಕ್ ನಲ್ಲಿ ನಾನು ಪರದಾಡುತ್ತಿದ್ದಾಗ ಅದೇ ಮಹದೇವಸ್ವಾಮಿ ಮೆಸೇಜ್ ಕಳಿಸಿದರು : ಸರ್ , ನನ್ನ ನೆನಪಿದೆ ತಾನೇ?
ನಾನು ಮಹಾದೇವ ಸ್ವಾಮಿ . ನಿಮ್ಮ ಬರಹಗಳ ಅಭಿಮಾನಿ .’ ಅಮ್ಮ ಹೇಳಿದ ಎಂಟು ಸುಳ್ಳುಗಳು’ ಪುಸ್ತಕ ನನ್ನ ಬದುಕನ್ನೇ ಬದಲಿಸಿತು . ಕೆ ಏ ಎಸ್ ಪರೀಕ್ಷೆ ಬರೆದಿದ್ದೇನೆ ಅಂದಿದ್ದೆನಲ್ಲ : ಈಗ ಫಲಿತಾಂಶ ಬಂದಿದೆ . ೧೧೧ ನೆ ರಾಂಕ್ ಬಂದಿದ್ದೇನೆ . ಈಗ ಮತ್ತೆ ಶುಭ ಹಾರೈಸಿ … ಇವತ್ತು ನಾನು ಏನೇ ಆಗಿದ್ದರೂ ಅದಕ್ಕೆ ‘ ಅಮ್ಮ ಹೇಳಿದ ಎಂಟು ಸುಳ್ಳುಗಳು ‘ ಪುಸ್ತಕವೇ ಕಾರಣ . ನಿಜ ಹೇಳಬೇಕೆಂದರೆ, ಮಹಾದೇವ ಸ್ವಾಮಿ ಅವರ ಪರಿಶ್ರಮ ಅವರನ್ನು ಯಶಸ್ಸಿನ ಹಳಿಗೆ ತಂದು ನಿಲ್ಲಿಸಿದೆ . ಆದರೆ ಅವರು -” ಅಮ್ಮ ಹೇಳಿದ ಎಂಟು ಸುಳ್ಳುಗಳು” ಪುಸ್ತಕವೇ ತಮ್ಮ ಯಶಸ್ಸಿಗೆ ಕಾರಣ ಎಂಬಂಥ ದೊಡ್ಡ ಮಾತು ಹೇಳುವ ಮೂಲಕ ನನ್ನ ಪುಸ್ತಕಕ್ಕೆ ಒಂದು ಚಿನ್ನದ ಗರಿ ಸಿಕ್ಕಿಸಿದ್ದಾರೆ . ಮಹಾದೇವ ಸ್ವಾಮಿ ಅವರ ಯಶೋಗಾಥೆ ಎಲ್ಲ ಕಿರಿಯರಿಗೂ ಮಾರ್ಗದರ್ಶಿಯಾಗಲಿ ಎಂಬುದು ನನ್ನ ಪ್ರಾರ್ಥನೆ .







ಸರ್, ನಮಸ್ಕಾರಗಳು.
ಮಹಾದೇವ ಸ್ವಾಮಿಯವರ ಸಾಧನೆ ಸ್ವಲ್ಪ ಪರಿಶ್ರಮ ಬಯಸುವಂಥದ್ದಲ್ಲ.ನಾನಿಟ್ಟ ಕೆ.ಎ.ಎಸ್.ನ ಗುರಿ ಕೆ.ಇ.ಎಸ್. ಗೆ ತಂದು ನಿಲ್ಲಿಸಿದಾಗ,ಓದುವ ಪರಿಶ್ರಮ ಮಾತ್ರವಲ್ಲ,ಒತ್ತಡ,ಜಂಜಾಟ,ಪರಿಸ್ಥಿತಿ ಮತ್ತು ಆರ್ಥಿಕಮುಗ್ಗಟ್ಟುಗಳೊಂದಿಗೆ ಗುದ್ದಾಡುತ್ತಲೇ ಓದುವುದಿದೆಯಲ್ಲ…ಅದು ಮತ್ತೂ ಹೆಚ್ಚಿನ ಪರಿಶ್ರಮ,ಅವಧಾನ ಬಯಸುವಂಥದ್ದೆಂದು ಮನವರಿಕೆ ಆಯಿತು. ಬಹಿರಂಗದಲ್ಲಿ ಯಾರಿಗೆ ಯಾರು,ಎನೂ ಮಾಡಿರದಿದ್ದರೂ,ಅಂತರಂಗದಲ್ಲಿ ಪ್ರತಿ ಕೆಲಸಕ್ಕೆ ಒತ್ತು ಕೊಡುವ,ಆಧಾರವಾಗಿನಿಲ್ಲಬಲ್ಲ ನೆಟ್ಟನೆಯ ಮರಕ್ಕೆ ಸುತ್ತುಹಾಕಿದ ಬಳ್ಳಿ ಎಂದೆಂದಿಗೂ ಋಣಿಯಾಗಿರುತ್ತದೆ.ತನಗೆ ಗೊತ್ತಿಲ್ಲದೆ ಮಹಾದೇವ ಸ್ವಾಮಿಯವರ ವರ್ತನೆಯಲ್ಲಿ ಬದಲಾವಣೆ ತಂದುದು ನಿಮ್ಮ ಅಮೂಲ್ಯ ಗ್ರಂಥ.
ಈಗ ನಮ್ಮದೇ ಇಲಾಖೆಯಲ್ಲಿರುವ ಮಹಾದೇವಸ್ವಾಮಿಯವರಿಗೆ ಮೌಖಿಕ ಸಂದರ್ಶನವಾಗಿ ,ನೇಮಕಾತಿ ಆದೇಶ ಸಿಕ್ಕ ಸುದ್ದಿ ಆದಷ್ಟೂ ಬೇಗ ಮರೆಯದೆ ತಿಳಿಸುವಂತಾಗಲಿ.
ಗುಡ್ಲಕ್ ಟು ಮಹಾದೇವಸ್ವಾಮಿ ಮತ್ತು ತಮಗೆ ವಂದನೆಗಳು.
ಮಣಿಕಾಂತ್ ನಿಮ್ಮ ಬರಹಗಳು ನಮ್ಮೆಲ್ಲರಿಗೂ ಇಸ್ಟ
nimage nive sati sir