ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫೇಸ್ ಬುಕ್ ಪಿಕ್ : ಅಜ್ಜಿ ಪಿಂಚಣಿ ಆಂದೋಲನ

ದಯಾನಂದ ಟಿ ಕೆ

ಮೊನ್ನೆ ಯಾವುದೋ ಕೆಲಸದ ನಿಮಿತ್ತ ನಮ್ಮೂರಿಗೆ ಹೋಗಿದ್ದೆ, ಕಂಡರಲ್ಲಪ್ಪ ನಮ್ಮ ಏರಿಯಾದ ಕುಲ್ಡವ್ವ, ಗಂಗವ್ವ, ಸಟ್ಟಾಳಮ್ಮ, ಬಂಬಾಲಿ, ಸಾಕಮ್ಮ ಅನ್ನೋ ನಟೋರಿಯಸ್ ಮುದುಕಿಯರು.. ಬತ್ತಾವ್ನೆ ನೋಡ್ರೇ ಕೆಂಚಪ್ಪನ ಮಗ, ಹಿಡಕಳ್ರೇ ಎಲೆಅಡ್ಕೆ ಹೊಗೆಸೊಪ್ಪಿಗೆ ಕಾಸು ಈಸ್ಕಂಡು ಕಳಸನ ಅಂತ ಡಿಸೈಡು ಮಾಡಿಕೊಂಡೇ ಎದ್ದ ಅವರು.. ಯೇನೋ ಮರಿ ಯಮ್ಮೆಕರ ಊದಕಂಡಂಗೆ ಊದಕಂತ ಇದೀಯ, ಯಂಡ್ರು ಹಸನಾಗಿ ಮಾಡಿಕ್ತಳೆ ತಿಂದು ಒಳ್ಳೆ ಗುಂಡ್ ಗುಂಡಗಾಗಿದೀಯ ಅಂದು ಎಲೆಅಡ್ಕೆಗೆ ಕಾಸು ಕೇಳಲು ಪದ ಹುಡುಕುತ್ತಿದ್ದರು.

ಅಷ್ಟರಲ್ಲಿ ಕುಲ್ಡವ್ವ ಲೇ ನರಸಕ್ಕ.. ಇವನ ಜೋಬಗೆ ಎಷ್ಟದೆ ಅಷ್ಟನ್ನೂ ಕೊಡವಿಕಳೆ ಎಲ್ಲಾರೂ ಸಮನಾಗಿ ಹಂಚಿಕಳನ ಅಂತ ಡೈರೆಕ್ಟಾಗಿ ಪ್ಯಾಂಟ್ ಜೇಬಿಗೆ ಕೈ ಇಳಿಬಿಡ್ತು.. ಕೊಡವಿಕೊಂಡು ದೂರ ನಿಂತರೂ ಬಿಡದೆ, ಯಲ್ಲಾರಿಗೂ ಇಪ್ಪಿಪ್ಪತ್ ಕೊಟ್ಟು ಮಂತಕೋಗು, ಇಲ್ಲಾಂದ್ರೆ ಬ್ಯಾಗ್ ಕಿತ್ಕಂಡ್ ಕಳುಸ್ತೀವಿ ಅಂತ ಬೆದರಿಕೆಯನ್ನೂ ಹಾಕಿದ್ರು. ಈ ಕಿರಾತಕಿಯರ ಸವಾಲು ಒಪ್ಪಿಕೊಂಡರೆ ಬ್ಯಾಗೇನು ಬಟ್ಟೇನೂ ಕಿತಕಂಡು ಕಳುಸ್ತರೆ ಅಂತ ಗೊತ್ತಿದ್ದ ನಾನು ಎಲ್ರಿಗೂ ಇಪ್ಪಿಪ್ಪತ್ತು ಕೊಟ್ಟು ಮನೆ ಕಡೆ ಹೊರಟೆ. ಕುಲ್ಡವ್ವ ಲೇ ಮರಿ, ಕಣ್ಣು ಪರೆ ಬಂದದೆ ಕಣ್ಲ.. ಎಷ್ಟರ ನೋಟು ಇದು ಅಂತು, ಅದಕ್ಕೆ ಬಂಬಾಲಜ್ಜಿ 5 ರುಪಾಯ್ ಕೊಟ್ಟವನೆ ಕಣೆ ಕೆಂಚಪ್ಪನ ಮಗ ತತ್ತ ಇಲ್ಲಿ ಚಿಲ್ರ ಕೊಡ್ತಿನಿ ಅಂತ ಕುಲ್ಡವ್ವನ 20ರುಪಾಯ್ ದರೋಡೆಗೆ ಮುಂದಾಯಿತು. ತಡೆದೆ.

ಆಮೇಲೆ ಪಿಂಚಣಿ ಕೊಡ್ತನೆ ಇಲ್ಲ ಕಣ ಮರೀ, ಅವುನ್ಯಾವನೋ ಬರಕಂಡೋದ, ಇನ್ನಾತಕ ವಾಪಸ್ ಬಂದಿಲ್ಲ ನೋಡು, ಪಿಂಚಣಿ ಮಾಡಿಸಕೆ ಅರ್ಜಿ ತಗಳಕೆ ಓದ್ರೆ ಸಾವ್ರ ಕೇಳ್ತನೆ ಬಡ್ಡಿಮಗಾ.. ಜೊತೆಗೆ ನಮ್ ವಯಸ್ಸಿನ್ ಸಟ್ರಿಪಿಕೇಟ್ ಬೇರೆ ಮಾಡುಸ್ಬೇಕಂತೆ.. ನಮ್ಮನ್ನ ನೋಡಿದ್ರೆ ಗೊತ್ತಾಗಲ್ವ ವಯಸಾದೋರು ಅಂತ.. ಪೋಟ ಬೇರೆ ತೆಗುಸಬೇಕ ಅದಕ್ಕೆ. ಯಾರ್ಯಾರ್ ಅಜ್ಜೀರು ಇದೀರ ಕೈ ಎತ್ರಿ ಅಂದ್ರೆ ಕೈ ಎತ್ತುತೀವಪ್ಪ. ಅವಾಗ ಹಲ್ಲುಬಾಯಿ ನೋಡಿ ಪಿಂಚಣಿ ಕೊಡ್ಬೇಕು. ಇಲ್ನೋಡು ಹಲ್ಲೆಲ್ಲ ಉದುರೋಗ್ತ ಅವೆ ಅಂತ ಗಂಗವ್ವ ಆ… ಅಂತ ಬಾಯ್ ತೆಗೀತು.

ಪಿಂಚಣಿ ಒಂದ್ ಮಾಡಿಸ್ಕೊಡಪ್ಪ ತಿಂಗಳಿಗೆ ಎಲಡ್ಕೆ ಖರ್ಚಿಗಾತದೆ.. ಇಂತ ಕಡೀಕ್ ಬಾ ಅಂತ ಅನ್ನು ನಿನ್ ಹಿಂದ್ ಹಿಂದೆನೇ ಬತ್ತಿವಿ ಮಾಡುಸ್ಕೊಡು.. ಯಾವಳಿಗೂ ಪಿಂಚಣಿ ಕೊಡ್ತಿಲ್ಲ ಕಣ ಮರಿ ಅಂತು ಸಟ್ಟಾಳಮ್ಮ. ಕರುಳೆಲ್ಲ ಕಿವುಚಿದಂಗಾಯ್ತು. ಸರಿ ಮಾಡಸನ ಬಿಡ್ರಿ ವಾರ ಬಿಟ್ಕಂಡ್ ಬತ್ತಿನಿ ಒಟ್ಟಿಗೆ ಅರ್ಜಿ ಬರ್ದು ಕೊಡನ ಅಂದೆ. ಕೆಲಸ ಮುಗಿಸಿ ವಾಪಸ್ಸು ಬರುವಾಗೆಲ್ಲ ಈ ಅಜ್ಜಿಯರ ಪಿಂಚಣಿ ಪ್ರಹಸನಕ್ಕೆ ಒಂದು ಅಂತ್ಯ ಕಾಣಿಸ್ಬೇಕು ಅನ್ನಿಸ್ತ ಇತ್ತು. ಇಷ್ಟರಲ್ಲೇ ಬಿಡುವಾದಾಗ ಹೋಗಿ ಒಂದು ಪಿಂಚಣಿ ಆಂದೋಲನ ಮಾಡೇ ಬಿಡೋಣ್ವ ಅಂತ ಜರ್ನಲಿಸ್ಟ್ ಗೆಳೆಯನೊಬ್ಬನಿಗೆ ಕೇಳಿದೆ. ನಡಿ ಹೋಗೋಣ ಸಾರಾಸಗಟಾಗಿ ಅರ್ಜಿ ಬರೆದುಕೊಟ್ಟು ಸಬ್ಮಿಷನ್ ಮಾಡಿ ಪಿಂಚಣಿಗೆ ವ್ಯವಸ್ಥೆ ಮಾಡಿ ಬರೋಣ ಅಂದ. ಹಂಗಾಗಿ ಇಷ್ಟರಲ್ಲೇ ನಮ್ಮ ಅಜ್ಜಿಯರ ಪಿಂಚಣಿ ಆಂದೋಲನ ಚಾಲೂ ಆಗತ್ತೆ.

ದಯವಿಟ್ಟು ನಮ್ಗೂ ನಮ್ಮಜ್ಜಿಯರಿಗೂ ಸಾರಾಸಗಟಾಗಿ ಒಳ್ಳೇದಾಗಲಿ ಅಂತ ಒಂದೇಟಿಗೇ ಆಶೀರ್ವದಿಸಿ.

‍ಲೇಖಕರು avadhi

29 May, 2013

2 Comments

  1. Radhika

    Glad to know about the initiative. Best wishes.

  2. mmshaik

    nija naavellaru seri maadabEkaad turtu kelasa..oLedaagli!!!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading