ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫೇಸ್‌ಬುಕ್ ಪಿಕ್ : ’ಮುಗ್ಧ ಪ್ರೇಮಿ ಐತು, ಪ್ರೌಢ ಪ್ರಿಯತಮೆ ಪೀಂಚಲು…’

ವಿಕಾಸ್ ನೇಗಿಲೋಣಿ

ಫೋಟೋ : ಸುರೇಶ್ ಕುಮಾರ್
ಮುಗ್ಧ ಪ್ರೇಮಿ ಐತು, ಪ್ರೌಢ ಪ್ರಿಯತಮೆ ಪೀಂಚಲು, ದುಡುಕು ಪ್ರಿಯಕರ ನಾಯಿಗುತ್ತಿ, ಪ್ರಬುದ್ಧ ಪ್ರೇಮಿ ಮುಕುಂದ, ತಪ್ತಕಾಮಿ ಕುಂಟ ಯಂಕಟಪ್ಪ, ಯಾವುದಾದರೊಂದು ಪ್ರೇಮಕ್ಕಾಗಿ ಕಾದ ತಿಮ್ಮಿ, ಚಂದ್ರಿ, ಕಾವೇರಿ ಮತ್ತಿತರರು.
ನಾಲ್ಕು ವೇದಿಕೆ, ಹೆಚ್ಚುಕಡಿಮೆ ಒಂದೊಂದು ಮಂಟಪದಲ್ಲೂ ಎರಡೂವರೆಗಂಟೆ ಕತೆಯ ಬೆಳವಣಿಗೆ, ಕಣ್ಣೆತ್ತಿದರೆ ಹುಲಿಯಿದೆಯೆನ್ನುವ ಪ್ರತೀತಿಯ ದೂರಬೆಟ್ಟ, ಅಲ್ಲೊಂದು ಮಂಟಪದ ಮೇಲೆ ವಿವೇಕಾನಂದರ ಭಾಷಣ, ಇಲ್ಲೊಂದು ಗದ್ದೆ ಬಯಲಲ್ಲಿ ನೆಟ್ಟಿ, ನಾಯಿಗುತ್ತಿಯ ಜೊತೆಗಾರ ಹುಲಿಯ ನಾಯಿಗೆ ಎಷ್ಟು ಓಡಿದರೂ ಮುಗಿಯದ ಹಾದಿ, ನದಿಯ ಪಕ್ಕದಲ್ಲಿ ನಿಂತ ಮುಕುಂದನ ಮನದಲ್ಲಿ ಚಂದ್ರಿ, ಐತುಗೆ ಈ ಜಗತ್ತಲ್ಲಿ ಪೀಂಚಲು ಒಬ್ಬಳೇ ಸುಂದ್ರಿ, ರಾತ್ರಿಪೂರಾ ಜೀರೆನ್ನುವ ಜೀರುಂಡೆ, ಹಗಲಾದರೆ ಅಂತಕ್ಕನ ಬೆಲ್ಲದ ಕಾಫಿ, ಬಿದ್ದು ಸಾಯುವುದಕ್ಕೆಂದೇ ಅಷ್ಟು ಬಂದೋಬಸ್ತಾಗಿ ನಿಂತ ಮಿಷನರಿ ಸ್ಕೂಲ್ ಬಾವಿ, ಅಂತಕ್ಕನ ಮಗಳು ಕಾವೇರಿಯನ್ನು ಸುಖಾಸುಮ್ಮನೆ ಹರಸುವ ಸುಬ್ಬಣ್ಣ ಹೆಗಡೇರು, ಮೈಯೇರಲು ಬರುವ ಬೃಹತ್ ಇಂಬುಳ, ತನ್ನ ಆಹಾರವನ್ನು ನಿಧಾನವಾಗಿ ಉರುಳಿಸಿಕೊಳ್ಳುತ್ತಾ ನಡೆವ ವಿಚಿತ್ರ ಜೀವಿ, ತುಳಸಿಕಟ್ಟೆ ಬೀಳಿಸುವ ಹಂದಿ, ನಾಯಿ ಜೊತೆ ಕಾದಾಡುವ ಕುರ್ಕ…
ಮಲೆನಾಡಲ್ಲೇ ಕುಳಿತು, ಯೌವನದ ಪ್ರಾರಂಭ ಕಾಲದಲ್ಲಿ ಓದಿದ ‘ಮಲೆಗಳಲ್ಲಿ ಮದುಮಗಳು’ ಮತ್ತೊಮ್ಮೆ ಕಣ್ಣೆದುರು ಕುಣಿದಳು ನಿನ್ನೆರಾತ್ರಿ, ಮಲ್ಲತ್ತಳ್ಳಿಯ ಕಲಾಗ್ರಾಮದಲ್ಲಿ. ತೀರ್ಥಹಳ್ಳಿಯ ಮೇಗರವಳ್ಳಿ, ಬೆಂಗಳೂರಲ್ಲಿ ರಾತ್ರಿಯಿಡೀ ಜೀವಂತವಾದ ಸಡಗರವನ್ನು ಹೇಗೆ ವಿವರಿಸುವುದು. ಕಡಿಮಾಡು, ಅಯ್ಯ, ಅಗೇಡಿ, ಕಿರಸ್ತಾನರು ಮೊದಲಾದ ಹೆಚ್ಚುಕಡಿಮೆ ಮರೆತೇಹೋದ ಪದ ಮತ್ತು ಪ್ರಪಂಚಗಳೆಲ್ಲಾ ಕಣ್ಣೆದುರು ಕಿನ್ನರ ಲೋಕದಂತೆ ತೆರೆದುಕೊಳ್ಳುತ್ತಾ ಹೋದಂತೇ ಕುವೆಂಪು ಅವರು ನಿರ್ದೇಶಕ ಸಿ ಬಸವಲಿಂಗಯ್ಯ ಮತ್ತು ಬಳಗದವರ ವತಿಯಿಂದ ಮತ್ತೆ ಮೈತಾಳಿದರು.
ಈವರೆಗೆ ನೋಡದವರು ಮತ್ತು ಕಾದಂಬರಿಯನ್ನು ಓದಿದವರು ನೋಡಲೇಬೇಕಾದ ನಾಟಕ. ರಂಗಭೂಮಿಯ ಸಾಧ್ಯತೆಗಳ ವಿಸ್ತಾರ ಭೂಮಿಕೆ ಇದು.

‍ಲೇಖಕರು avadhi

27 April, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading