ಜಗದೀಶ್ ಕೊಪ್ಪ
ಕನ್ನಡ ಮಾಧ್ಯಮದಲ್ಲಿ ಮಕ್ಕಳು ಓದಿದರೆ, ಅವರ ಭವಿಷ್ಯ ಹಾಳಾಗಿ ಹೋಗುತ್ತೆ ಎಂದು ನಂಬಿದವರಿಗೆ ಒಂದು ಶಾಕಿಂಗ್ ನ್ಯೂಸ್. ಪಿ.ಯು.ಸಿ.ಯವರೆಗೆ ಅಪ್ಪಟ ಕನ್ನಡ ಮಾಧ್ಯದಲ್ಲಿ ಓದಿದ ನನ್ನ ಮಗಳು ಅಪೂರ್ವ, ಇಂಗ್ಲೀಷ್ ಸಾಹಿತ್ಯದದಲ್ಲಿ ಎಂ.ಎ. ಮಾಡಬೇಕು ಎಂಬ ಉದ್ದೇಶದಿಂದ ಬಿ.ಎ.. ಪದವಿಗೆ ಇಂಗ್ಲೀಷ್ ಮಾಧ್ಯಮ ಆಯ್ಕೆ ಮಾಡಿಕೊಂಡಿದ್ದಳು. ಈದಿನ ಅವಳ ಅಂತಿಮ ಪದವಿಯ ಫಲಿತಾಂಶ ಹೊರಬಿದ್ದಿತು. ಶೇಕಡ 81ರಷ್ಟು ಅಂಕ ಗಳಿಸಿದ್ದಾಳೆ.
***
ಮಿತ್ರರೇ, ನಿನ್ನೆ ನನ್ನ ಮಗಳ ಫಲಿತಾಂಶ ಮತ್ತು ಆಕೆಯ ಮಾಧ್ಯಮ ಆಯ್ಕೆ ಕುರಿತು ನಾನು ಫೇಸ್ ಬುಕ್ ಗೆ ಹಾಕಿದ ಮಾಹಿತಿಗೆ ಬಂದ ಪ್ರತಿಕ್ರಿಯೆ ನೋಡಿ ನನಗೆ ಶಾಕ್ ಆಯಿತು. ಹಾಗೆ ನೋಡಿದರೆ, ಇದರಲ್ಲಿ ನನ್ನದು ಮತ್ತು ಪತ್ನಿಯ ಪಾತ್ರ ಏನೂ ಇರಲಿಲ್ಲ. ನಾವಿಬ್ಬರೂ ಮಕ್ಕಳು ಬೆಳೆಯುತ್ತಿದ್ದಂತೆ ಒಂದು ನಿರ್ಧಾರಕ್ಕೆ ಬಂದಿದ್ದವು. ಯಾವ ಕಾರಣಕ್ಕೂ ನಮ್ಮ ಆಸೆ, ಅಭಿಲಾಸೆಗಳನ್ನು ಮಕ್ಕಳ ಮೇಲೆ ಹೇರಬಾರದು ಎಂಬುದು ನಮ್ಮ ನಿರ್ಧಾರವಾಗಿತ್ತು. ಎಂದಿಗೂ ಕೂಡ ನಮ್ಮ ಮಕ್ಕಳ ವಿಷಯದಲ್ಲಿ , ಅವರು ಆಯ್ಕೆ ಮಾಡಿಕೊಳ್ಳಬಹುದಾದ ಅಧ್ಯಯನ ಕುರಿತಂತೆ ನಾವು ಹಾಕಿಕೊಂಡಿದ್ದ ಲಕ್ಷಣ ರೇಖೆಯನ್ನು ದಾಟಲಿಲ್ಲ. ಆರು ವರ್ಷದ ಹಿಂದೆ ಮಂಡ್ಯ ನಗರದಲ್ಲಿ ಪಿ.ಯು.ಸಿ. ಮುಗಿಸಿ ಶೇಕಡ 89 ರಷ್ಟು ಅಂಕ ಗಳಿಸಿದ್ದ ಮಗ(ಅನನ್ಯ) ಸಿ.ಇ.ಟಿ. ಪರೀಕ್ಷೆ ತೆಗೆದುಕೊಳ್ಳಲಿಲ್ಲ. ನನಗೆ ಇಂಜಿನಿಯರಿಂಗ್, ವೈದ್ಯಕೀಯ ಆಸಕ್ತಿ ಇಲ್ಲ ಎಂದ. ನಾವು ಮರು ಮಾತನಾಡಲಿಲ್ಲ. ಧಾರವಾಡದಲ್ಲಿ ಜೈವಿಕ ತಂತ್ರ ಜ್ಙಾನ ದಲ್ಲಿ ಪದವಿ (ಶೇಕಡ 91) ನಂತರ ಮೈಸೂರು ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ ( ಶೇಕಡ 88) ಸಾಧನೆ ಮಾಡಿದ. ಆತನಿಗೆ ಪಿ.ಹೆಚ್.ಡಿ. ಅಧ್ಯಯನ ಮಾಡುವ ಆಸಕ್ತಿ ಇತ್ತು. ಕಳೆದ 2011 ರಲ್ಲಿ ಗೌರಿ-ಗಣೇಶ ಹಬ್ಬಕ್ಕೆ ಬಂದವನು, ನನ್ನಿಂದ ನೂರು ರೂಪಾಯಿ ಪಡೆದು. ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಹಾಕಿದ್ದ. 4700 ಮಂದಿ ಪ್ರಥಮ ದರ್ಜೆಯ ಬಿ.ಎಸ್.ಸಿ. ಪದವೀಧರರ ಪೈಕಿ ಎರಡನೇ ಸ್ಥಾನ ಗಳಿಸಿ. ಹುದ್ದಗೆ ಆಯ್ಕೆಯಾದ.
ಕಳೆದ ವರ್ಷ ಜೂನ್ 29 ಕ್ಕೆ ಸ್ನಾತಕೋತ್ತರ ಪದವಿ ಮುಗಿಸಿ ಮೈಸೂರಿನಿಂದ ಧಾರವಾಡಕ್ಕೆ ಬಂದ ಮಗ ಅನನ್ಯ, ಕೇವಲ ನಾಲ್ಕುದಿನ ಮನೆಯಲ್ಲಿದ್ದು, ಜುಲೈ 3ನೇ ತಾರೀಕು ತರಬೇತಿಗಾಗಿ ಅಮ್ಮನ ಜೊತೆ ಮಧ್ಯಪ್ರದೇಶ ಮತ್ತು ಛತ್ತೀಸ್ ಗಡದ ಅರಣ್ಯಕ್ಕೆ ಹೊರಟು ನಿಂತ. ಆ ವೇಳೆಗೆ ಆತನ ವಯಸ್ಸು 22 ವರ್ಷ, ಮೂರು ತಿಂಗಳು. ( ಈ ವಯಸ್ಸಿನಲ್ಲಿ ನಾನು ಪ್ರಥಮ ಬಿ.ಎ. ಓದುತ್ತಿದ್ದೆ. ಏಕೆಂದರೆ, ನನ್ನಪ್ಪ, ನನ್ನನ್ನು ಎಸ್.ಎಸ್.ಎಲ್.ಸಿ. ನಂತರ ಓದಿಸಲಾರದೆ ನಾಲ್ಕು ವರ್ಷಗಳ ಕಾಲ ಹಸು, ಕುರಿ ಮೇಯಿಸಲಿಕ್ಕೆ ಹಾಕಿದ್ದ.)
ನಾವು ಮಕ್ಕಳಿಗೆ ಸದಾ ಹೇಳುತ್ತಿದ್ದ ಮಾತು ಒಂದೇ, ನೀವು ಏನೇ ಆಗಿ ನಮ್ಮ ಅಭ್ಯಂತರವಿಲ್ಲ, ಅದರೆ, ಮನುಷ್ಯರಾಗಿ ಇರಬೇಕು.ಇದೊಂದು ಷರತ್ತನ್ನು ಸದಾ ಮಕ್ಕಳಿಗೆ ವಿಧಿಸುತ್ತಿದ್ದೆವು. ಈ ಕಾರಣಕ್ಕಾಗಿ ಅವರನ್ನು ದೇವರು, ಜಾತಿ, ಧರ್ಮ ಇವುಗಳ ವೃತ್ತದ ಹೊರಗಿಟ್ಟು ಬೆಳಸಿದೆವು. ಕೊನೆಗೂ ನಮ್ಮ ಪ್ರಯೋಗ ವಿಫಲವಾಗಲಿಲ್ಲ. ಅದೋಂದೆ ನಮಗೆ ನೆಮ್ಮದಿಯ ಸಂಗತಿ.








hats off u sir..