ಫನ್ ವಿದ್ ‘ಫ’

ಕೆ.ವಿ. ತಿರುಮಲೇಶ್

ನುಡಿದಂತೆ ಬರೆಯಬೇಕು, ಬರೆದಂತೆ ನುಡಿಯಬೇಕು ಎನ್ನುವುದು ಒಳ್ಳೆಯ ಆದರ್ಶವೇನೋ ಸರಿ, ಆದರೆ ನೈಸರ್ಗಿಕ ಭಾಷೆಗಳು ನಮ್ಮ ಇಷ್ಟದಂತೆ ವರ್ತಿಸುವುದಿಲ್ಲ.

ವಿಶ್ವದ ಯಾವ ಜೀವಂತ ಭಾಷೆಯಲ್ಲೂ ಇದು ನೂರಕ್ಕೆ ನೂರರ ಪ್ರಮಾಣದಲ್ಲಿ ಈ ಆದರ್ಶವನ್ನು ಪಾಲಿಸುವುದಿಲ್ಲ.

ಅಲ್ಲದೆ ಭಾಷೆಗಳು ನಮಗೆ ಗೊತ್ತಿಲ್ಲದಂತೆ ಬದಲಾಗುತ್ತ ಇರುತ್ತವೆ. ಈ ಬದಲಾವಣೆಯ ಒಂದು ವಿಧವೆಂದರೆ ಬೇರೆ ಭಾಷೆಗಳ ಪದಗಳು ಬಂದು ಸೇರಿಕೊಳ್ಳುವುದು. ಭಾಷೆ ಬಳಸುವ ಜನರು ಹೆಚ್ಚೆಚ್ಚು ಕ್ರಿಯಾಶೀಲರಾದಷ್ಟೂ ಈ ವಿದ್ಯಮಾನ ತೀವ್ರವಾಗಿರುತ್ತದೆ.

ಜೀವಂತವಲ್ಲದ ಭಾಷೆ ಮಾತ್ರವೇ ‘ಶುದ್ಧ’ವಾಗಿರುವುದು ಸಾಧ್ಯ.

ಇಂದು ಲ್ಯಾಟಿನ್ ಮತ್ತು ಸಂಸ್ಕೃತ ಶುದ್ಧವಾಗಿರುವಂತೆ ಕಾಣಿಸುವುದು ಅವು ಜೀವಂತವಾಗಿ ಇಲ್ಲದ ಕಾರಣಕ್ಕೇ. ಕನ್ನಡ ಹಾಗಲ್ಲ, ಅದು ಜೀವಂತ, ಆದ್ದರಿಂದ ಪರಿಶುದ್ಧವಲ್ಲ. ಅದಕ್ಕೆ ಹೊರ ಭಾಷೆಗಳ ಶಬ್ದಗಳು, ಧ್ವನಿಗಳು ಲಾಗಾಯ್ತಿನಿಂದಲೂ ಹರಿದು ಬಂದಿವೆ, ಈಗಲೂ ಬರುತ್ತಿವೆ. ಅಲ್ಲದೆ ಜನ ಯಾವಾಗಲೂ ಫ್ಯಾಶನೆಬ್ಲ್ ಆಗಿರಲು ಕೂಡ ಬಯಸುತ್ತಾರೆ. ಪರ ಭಾಷೆಗಳಿಂದ ಬಂದ ಪದಗಳನ್ನು ಉಪಯೋಗಿಸುವುದು ಇದರ ಒಂದು ರೀತಿ. ಇದನ್ನೆಲ್ಲ ನಾವು ಫರ್ಮಾನು ಹೊರಡಿಸಿ ತಡೆಯುವ ಹಾಗಿಲ್ಲ. ಇದೆಲ್ಲವೂ ಒಂದು ತರದ ಎನ್ರಿಚ್ಮೆಂಟ್ ಎಂದು ತಿಳಿಯಬೇಕಲ್ಲದೆ ಸೊರಗುವಿಕೆಯೆಂದು ತಿಳಿಯಬಾರದು.

ಕನ್ನಡವನ್ನು ಆದಷ್ಟೂ ಚುರುಕುಗೊಳಿಸಬೇಕಾದರೆ, ಅದರ ಬಲವರ್ಧನೆ ಮಾಡಬೇಕಾದರೆ ಅದನ್ನು ಹತ್ತು ಹಲವು ಕ್ಷೇತ್ರಗಳಲ್ಲಿ ಬಳಸಬೇಕೇ ವಿನಾ ಅದರ ಕುರಿತು ಅನಗತ್ಯವಾಗಿ ಮಡಿವಂತರಾಗಬಾರದು. ನಮ್ಮ ಜೀವನಕ್ರಮದಲ್ಲಿ ನಾವು ಮಡಿವಂತರಲ್ಲ, ಇನ್ನು ಭಾಷೆಯಲ್ಲಿ ಆಗಿರಬೇಕೆಂದರೆ ಹೇಗೆ? ನಿಜ, ಭಾಷೆ ಹೆಚ್ಚು ಕನ್ಸರ್ವೇಟಿವ್, ಹೆಚ್ಚು ಸ್ಥಿತಿಸ್ಥಾಪಕ ಗುಣವುಳ್ಳದ್ದು.

ಸ್ಥಿರತೆಯ ದೃಷ್ಟಿಯಿಂದ ಇದು ಅಗತ್ಯ. ದಿನವೂ ಬದಲಾಗುತ್ತ ಹೋದರೆ ಗುರುತು ಸಿಗುವುದಿಲ್ಲ. ಬೆಳವಣಿಗೆಯೆಂದರೆ ಸ್ಥಿರತೆ ಮತ್ತು ಬದಲಾವಣೆಯ ನಡುವಿನ ಅನುಸಂಧಾನದಲ್ಲಿ ಆಗುವ ಕ್ರಿಯೆ. ಇದು ಯಾವತ್ತೂ ಒಂದು ಗ್ರೇ ಏರಿಯಾವನ್ನು, ಎಂದರೆ ಮಬ್ಬುಗತ್ತಲ ಒಂದು ಪ್ರದೇಶವನ್ನು, ಸೃಷ್ಟಿಸುತ್ತಲೇ ಇರುತ್ತದೆ. ಕೆಲವೊಮ್ಮೆ ಹೆಚ್ಚು, ಕೆಲವೊಮ್ಮೆ ಕಡಿಮೆ. ಎಂದರೆ ಅನಿಶ್ಚಿತತೆ ಮತ್ತು ಅನುಮಾನಗಳ ತಾಣ. ಇದನ್ನು ಸಹಿಸಿಕೊಳ್ಳಲೇ ಬೇಕಾಗುತ್ತದೆ. ಇಂಗ್ಲಿಷ್ ಭಾಷೆ ಬೆಳೆದು ಬಂದ ಬಗೆ ಇದಕ್ಕೊಂದು ಉದಾಹರಣೆ. ಆದರೆ ನಾನಿಲ್ಲಿ ಹೇಳುತ್ತಿರುವುದು ಇಂಗ್ಲಿಷ್ ಬಗ್ಗೆ ಅಲ್ಲ, ಕನ್ನಡದ ಬಗ್ಗೆ.

ಕನ್ನಡದ ಮಹಾಪ್ರಾಣ ಅಕ್ಷರಗಳಲ್ಲಿ ‘ಫ’ಕಾರವೂ ಒಂದು. ಇದು ಸಂಸ್ಕೃತದಿಂದ ಕನ್ನಡ ಯಾವುದೋ ಒಂದು ಕಾಲದಲ್ಲಿ ತೆಗೆದುಕೊಂಡುದು. ಮಹಾಪ್ರಾಣಗಳ ಪ್ಯಾಕೇಜಿನಲ್ಲಿ ಬಂದುದು. ಆದರೆ ಇಂದು ‘ಫ’ಕಾರವನ್ನು ಒಂಟಿಯಾಗಿ ಕೊಟ್ಟರೆ ನೀವು ಹೇಗೆ ಉಚ್ಚರಿಸುತ್ತೀರೋ ಗೊತ್ತಿಲ್ಲ ಕನ್ನಡದಲ್ಲಿ ಈಗಾಗಲೇ ಇದ್ದ ಅಲ್ಪಪ್ರಾಣ ‘ಪ’ಕಾರಕ್ಕೆ ಸಂವಾದಿಯಾಗಿ ಅದೇ ಉಚ್ಚಾರಣೆಯ ಸ್ಥಾನದಲ್ಲಿ ಬಂದ ಮಹಾಪ್ರಾಣ ಇದು.

‘ಪ’ಕಾರ ಮತ್ತು ಸಂಸ್ಕೃತಮೂಲದ ‘ಫ’ಕಾರ ಎರಡೂ ‘ಓಷ್ಠ್ಯ’ಗಳು. ಓಷ್ಠ್ಯವೆಂದರೆ ಮೇಲ್ದುಟಿ ಮತ್ತು ಕೆಳ ತುಟಿಗಳನ್ನು ಒಟ್ಟಿಗೆ ತಂದು ಸ್ಪರ್ಶಿಸಿ ಹೊರಡಿಸುವ ಧ್ವನಿ. ‘ಫ’ಕಾರಕ್ಕೆ ‘ಪ’ಕಾರದ ಉಚ್ಚಾರಕ್ಕಿಂತ ಹೆಚ್ಚಿನ ಉಸಿರು ಬೇಕಾದ್ದರಿಂದ, ‘ಫ’ಕಾರ ಮಹಾಪ್ರಾಣ ಎನಿಸುತ್ತದೆ. ಕನ್ನಡಕ್ಕೆ ಸಂಸ್ಕೃತದಿಂದ ಬಂದ ಎಲ್ಲ ಮಹಾಪ್ರಾಣಗಳೂ ಹೀಗೆಯೇ. ಸಂಸ್ಕೃತದಿಂದ ಕನ್ನಡಕ್ಕೆ ಬಂದಾಗ ತದ್ಭವವಾಗದೆ ತತ್ಸಮವಾಗಿ ಉಳಿದ ಪದಗಳಲ್ಲಿ ನಾವು ಮಹಾಪ್ರಾಣ ಅಕ್ಷರಗಳನ್ನು ಕಾಣುತ್ತೇವೆ. ‘ಫ’ಕಾರ ಕೆಲವೇ ಕೆಲವು ಪದಗಳಲ್ಲಿ ಮಾತ್ರ ಕಾಣಸಿಕೊಳ್ಳುವುದು: ಫಲ, ಸಫಲ, ವಿಫಲ, ಫಾಲಾಕ್ಷ, ಕಫ ಇತ್ಯಾದಿ. ಆದರೆ ಇಂದು ಇಂಗ್ಲಿಷ್ ಮತ್ತು ಇತರ ಭಾಷೆಗಳ ಸಂಪರ್ಕದಿಂದಾಗಿ ಫಕಾರದ ಬಳಕೆ ಕನ್ನಡದಲ್ಲಿ ವ್ಯಾಪಕವಾಗಿದೆ. ಉದಾಹರಣೆಗೆ:

ಇಂಗ್ಲಿಷ್ ಮೂಲದಿಂದ: ಫಿಲ್ಮ್, ಫೀಸು, ಫ್ಯೂಸು, ಫೆಲೋ, ಫೂಲ್, ಕಾಫಿ, ಕೆಫೆ, ಫೈಲು, ಫೇಲು, ಫಂಡು, ಫಾರ್ಮು, ಫಿಸಿಕ್ಸ್, ಫಿಲಾಸಫಿ, ಫೋಟೋ, ಫ್ಯಾನ್, ಫೇಸ್ ಬುಕ್, ಫೈನು, ಫರ್, ಸಿಂಫನಿ ಇತ್ಯಾದಿ.

ಇತರ ಮೂಲಗಳಿಂದ: ಫಕ್ರುದ್ದೀನ್, ಸೈಫ್, ರಫಿ, ಫಾತಿಮಾ, ಇಫ್ತಾರ್, ಸೂಫಿ, ನಫೆ, ಫಾಯ್ದೆ, ಅಫಿದವಿತ್, ಆಫ್ರಿಕ, ಫಿಲಿಪೀನ್ಸ್, ಫಿಜಿ, ಫಿನ್ಲೆಂಡ್, ಫಾಸಿ, ಮಾಫಿ, ಫಿಕೃ, ಫಿರ್ಯಾದಿ, ದಫನ, ಫೇರೋ (ಪುರಾತನ ಈಜಿಪ್ಶಿಯನ್ ರಾಜರು) ಇತ್ಯಾದಿ.

ಆದರೆ ಸಂಸ್ಕತದ ‘ಫ’ಕಾರಕ್ಕೂ ಈ ಎರಡನೆಯ ಘಟ್ಟದಲ್ಲಿ ಪ್ರವೇಶಿಸಿದ ಇಂಗ್ಲಿಷ್ ಮತ್ತಿತರ ಮೂಲಗಳ ‘ಫ’ಕಾರಕ್ಕೂ ಲಿಪಿ ಒಂದೇ ಆದರೂ ಉಚ್ಚಾರಣೆಯ ರೀತಿಯಲ್ಲಿ ವ್ಯತ್ಯಾಸವಿದೆ: ಮೊದಲನೆಯದು ಒಷ್ಠ್ಯವಾದರೆ, ಎರಡನೆಯದು ‘ದಂತೋಷ್ಠ್ಯ’. ದಂತೋಷ್ಠ್ಯವೆಂದರೆ ಕಳ ತುಟಿಯನ್ನು ಮೇಲಿನ ಪಂಕ್ತಿಯ ಹಲ್ಲುಗಳಿಗೆ ತಂದು ಹೊರಡಿಸುವ ಧ್ವನಿ. ಇಂಥವನ್ನು ಘರ್ಷಕ’ಗಳು (Fricatives) ಎನ್ನುತ್ತಾರೆ. ಇಲ್ಲಿ ನಿಶ್ವಾಸಕ್ಕೆ ಪೂರ್ತಿ ತಡೆಯಿಲ್ಲ. ಒಂದೇ ಅಕ್ಷರ ಎರಡು ವಿಭಿನ್ನ ಧ್ವನಿಗಳಿಗೆ ಚಿಹ್ನೆಗಳಾಗುವ ಚಮತ್ಕಾರವನ್ನು ನೋಡಿ! ಇದರಿಂದ ಗೊಂದಲ ಉಂಟಾಗುವುದಿಲ್ಲವೇ ಎಂದು ಕೇಳಿದರೆ ಇಲ್ಲ ಎನ್ನುವಂತೆಯೂ ಇಲ್ಲ.

‘ಕಫ’ವನ್ನು ಸಂಸ್ಕತದ ಹಾಗೆ ಓಷ್ಠ್ಯವಾಗಿ ಹೇಳಬೇಕೋ ಅಥವಾ ಇಂಗ್ಲಿಷ್ ಮತ್ತಿತರ ರೀತಿಯ ದಂತೋಷ್ಠ್ಯವಾಗಿ ಹೇಳಬೇಕೋ ಎನ್ನುವ ಗೊಂದಲ ಕೆಲವರಿಗಿದೆ. ಆದರೂ ಈ ಸಂಸ್ಕೃತ ಮೂಲದ ಫಕಾರ ಪದಗಳು ಹೆಚ್ಚಿಲ್ಲದ ಕಾರಣ ಅವುಗಳನ್ನು ಕಲಿತುಕೊಳ್ಳುವುದು ಕಷ್ಟವೇನಲ್ಲ. ಹಾಗೆ ನೋಡಿದರೆ ಇಂಗ್ಲಿಷ್ ಸ್ಪೆಲ್ಲಿಂಗ್ ಗೊಂದಲದ ಗೂಡು. ಆದರೆ ಅದನ್ನು ನಾವು ನಿಭಾಯಿಸಿಕೊಳ್ಳುತ್ತೇವೆ. ಉದಾಹರಣೆಗೆ, ಅ ಎಲ್ಲಿ ಕಕಾರವಾಗುತ್ತದೆ (Create, Cup,
Call, Care, Celt), ಎಲ್ಲಿ ಸಕಾರವಾಗುತ್ತದೆ (Cell, Cease, Cite, Cent, Receive) ಎನ್ನುವುದನ್ನು ಕಲಿತುಕೊಳ್ಳುವುದು ಸುಲಭವೇನಲ್ಲ. ಆದರೂ ಕಲಿತುಕೊಳ್ಳುತ್ತೇವೆ. ಕನ್ನಡ ಮಾತ್ರವೇ ಪಾರದರ್ಶಕವಾಗಿರಬೇಕು ಎಂದರೆ ಹೇಗೆ?

ಒಂದು ವೇಳೆ ‘ಫ’ಕಾರದ ಬಾಲವನ್ನು ತೆಗೆದುಬಿಟ್ಟು ‘ಪ’ಕಾರ ಮಾಡಿದರೆ ಸಮಸ್ಯೆ ಮುಗಿಯುತ್ತದೆಯೇ/ ಇಲ್ಲ, ಜಾಸ್ತಿಯಾಗುತ್ತದೆ. ಫಿಲ್ಮನ್ನು ಪಿಲ್ಮ್ ಎಂದೂ, ರಫಿಯನ್ನು ರಪಿ ಎಂದೂ ಕೆಫೆಯನ್ನು ಕೆಪೆ ಎಂದೂ ಬರೆಯುವುದಾಗಲಿ ಉಚ್ಚರಿಸುವುದಾಗಲಿ ಹಿತವೆನಿಸುವುದಿಲ್ಲ; ಯಾಕೆಂದರೆ ಅದು ನಮ್ಮ ಅಭ್ಯಾಸಕ್ಕೆ ವಿರುದ್ಧ. ಹಾಗೇನೇ, ಅವುಗಳನ್ನು ಸಂಸ್ಕೃತದ ‘ಫ’ಕಾರದ ತರ ಉಚ್ಚರಿಸುವುದೂ ಆಭಾಸವಾಗುತ್ತದೆ.

ಇನ್ನು ಈ ‘ತೊಂದರೆ’ ಕೊಡುವ ಪದಗಳನ್ನು ಕನ್ನಡದಲ್ಲಿ ಬಳಸಲೇಬಾರದು, ಅವುಗಳ ಜಾಗದಲ್ಲಿ ‘ಕನ್ನಡದ್ದೇ ಆದ’ ಪದಗಳನ್ನು ಕಂಡು ಹುಡುಕಿ ಅಥವಾ ಉಂಟುಮಾಡಿ ಬಳಸಬೇಕು ಎಂದು ಒತ್ತಾಯಿಸುವುದು ಸಾಧ್ಯವಿಲ್ಲ. ಈ ಮೇಲಿನ ಉದಾಹರಣೆಗಳಿಗೆ ‘ಅಚ್ಚಗನ್ನಡ’ದ ಪದಗಳನ್ನು ಸೃಷ್ಟಿಸಲು ಪ್ರಯತ್ನಿಸಿದರೆ ನಿಮಗೇ ಗೊತ್ತಾಗುತ್ತದೆ.

ಇವನ್ನೆಲ್ಲ ಈಗಿನ ರೀತಿಯಲ್ಲೇ ಮುಂದುವರಿಸಿಕೊಂಡು ಹೋಗುವುದೇ ಸರಿಯಾದ ಮಾರ್ಗ. ವಾಸ್ತವದಲ್ಲಿ ಬೇರೆ ಮಾರ್ಗವೇ ಇಲ್ಲ. ಯಾವ ಪಂಡಿತರು ಎಷ್ಟು ಒದರಾಡಿದರೂ, ಭಾಷೆ ಜನರ ಇಷ್ಟದಂತೆ ಸಾಗುತ್ತದೆ.

ಸೋ ಹ್ಯಾವ್ ಫನ್ ವಿದ್ ಫ!

‍ಲೇಖಕರು admin

July 13, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. C P Nagaraja

    ಮತ್ತೊಂದು ಬಗೆಯಲ್ಲಿ ಆಲೋಚನೆ ಮಾಡುವವರನ್ನು ಕುರಿತು ” ಯಾವ ಪಂಡಿತರು ಎಷ್ಟು ಒದರಾಡಿದರೂ , ಭಾಷೆ ಜನರ ಇಷ್ಟದಂತೆ ಸಾಗುತ್ತದೆ ” ಎಂಬ ಅಸಹನೆಯ ನುಡಿಗಳು ಸರಿಯಲ್ಲ. ಸಿ ಪಿ ನಾಗರಾಜ

    ಪ್ರತಿಕ್ರಿಯೆ
    • Swamy

      ‘ಮತ್ತೊಂದು ಬಗೆಯಲ್ಲಿ ಆಲೋಚನೆ ಮಾಡುವವರೇ’ ಬೇರೆ, ‘ಪಂಡಿತರ ಒದರಾಟ’ವೇ ಬೇರೆ. “ಇವನ್ನೆಲ್ಲ ಈಗಿನ ರೀತಿಯಲ್ಲೇ ಮುಂದುವರಿಸಿಕೊಂಡು ಹೋಗುವುದೇ ಸರಿಯಾದ ಮಾರ್ಗ” ಎಂಬ ಘೋಷಣೆ ಸಮಂಜಸವಲ್ಲದಿರಬಹುದು, ಆದರೆ “ಭಾಷೆ ಜನರ ಇಷ್ಟದಂತೆ ಸಾಗುತ್ತದೆ” ಎಂಬುದು ವಾಸ್ತವದ ಸತ್ಯ… ಇದನ್ನು ‘ಅಸಹನೆಯ ನುಡಿಗಳಿ’ಗಿಂತಾ ‘ಹೇಳಿಕೆ’ ಎನ್ನಬಹುದೇನೋ!? (“ಬಯ್ಗುಳ”ವಂತೂ ಅಲ್ಲ…;-)

      ಪ್ರತಿಕ್ರಿಯೆ
  2. Krishna

    ಈ ಲೇಖನಗಳು ಪಾ. ವೆಂ. ಆಚಾರ್ಯರ ‘ಪದಾರ್ಥ ಚಿಂತಾಮಣಿ’ ಯನ್ನು ನೆನಪಿಸುತ್ತವೆ… ಧನ್ಯವಾದಗಳು ತಿರುಮಲೇಶ್ ಸರ್

    ಪ್ರತಿಕ್ರಿಯೆ
  3. Sathyakama Sharma K

    ತುಂಬಾ ಉಪಯುಕ್ತ ಲೇಖನ ಮಾಲೆ. ತಿರುಮಲೇಶರಿಗೆ ಧನ್ಯವಾದಗಳು. ಹಳೆಗನ್ನಡದಲ್ಲಿ ಕಾಣಿಸುವ, ಳ ಮತ್ತು ರ ವನ್ನು ಹೋಲುವ, ಕನ್ನಡಿಗರು ಕೈಬಿಟ್ಟ ಎರಡು ಅಕ್ಷರಗಳ ಕುರಿತು ಇದೆ ರೀತಿ ಸಂಶೋಧನೆ ನಡೆಸಿದರೆ ಚೆನ್ನಾಗಿರುತ್ತದೆ. ಮಲಯಾಳಂ ನಲ್ಲಿ ಈ ರೀತಿ ಎರಡು ಅಕ್ಷರಗಳು ಇವೆ ಮತ್ತು ಅವುಗಳ ಉಚ್ಚಾರಣೆ ಕ್ಲಿಷ್ಟವಾಗಿದೆ. ಕನ್ನಡಿಗರು ಈ ಕಾರಣಕ್ಕೆ ಇವನ್ನು ಕೈಬಿಟ್ಟರೆ? ಅವುಗಳ ಉಚ್ಚಾರಣೆ ನಿಜಕ್ಕೂ ಮಲಯಾಳಂ ( ಇನ್ನೊಂದು ದ್ರಾವಿಡ ಭಾಷೆ)ನ ಅಕ್ಷರಗಳಂತೆಯೇ ಇದ್ದುವೇ? (ಕೆಲವು ವರ್ಷಗಳ ಹಿಂದೆ ಶಿಕ್ಷಣ ಇಲಾಖೆ ಋ ಅಕ್ಷರವನ್ನು ಕನ್ನಡ ಅಕ್ಷರಮಾಲೆಯಿಂದ ಕೈಬಿಟ್ಟಾಗ ಕೆಲವರು ಆ ನಿಲುವನ್ನು ಸಮರ್ಥಿಸಿದ್ದು ‘ಅದರ ಉಚ್ಚಾರಣೆ ಕ್ಲಿಷ್ಟ’ ಎಂದು! ) ಇಂಗ್ಲಿಷ್ ನಿಘಂಟುಗಳು ಪ್ರತಿ ವರ್ಷ ಪರಿಷ್ಕರಿಸಲ್ಪಡುತ್ತವೆ. ಹೊಸ ಆವೃತ್ತಿಗಳು ಬಿಡುಗಡೆಯಾಗುತ್ತವೆ ಕನ್ನಡ -ಕನ್ನಡ ನಿಘಂಟುಗಳಿಗೆ ಈ ಭಾಗ್ಯ ಇದೆಯೇ?

    ಪ್ರತಿಕ್ರಿಯೆ
  4. ತುರಂಗ

    ನಾವು ಕನ್ನಡದಲ್ಲಿ ಉಚ್ಚಾರಿಸುವ ಇಂಗ್ಲಿಷಿನ ಫಕಾರ, ಇಂಗ್ಲೀಷಿನ ಫಕಾರಕ್ಕಿಂತ ಸ್ವಲ್ಪ ಬೇರೆ ಎಂದು ಕಾಣುತ್ತದೆ. ಅದು ಕನ್ನಡದ ವಕಾರದ “ವಾಯ್ಸ್ ಲೆಸ್” ರೂಪ. ಇಂಗ್ಲಿಷಿನ ವಕಾರಕ್ಕೆ, ಕನ್ನಡದ ವಕಾರಕ್ಕೆ ವ್ಯತ್ಯಾಸ, ಇಂಗ್ಲಿಷಿನಲ್ಲಿ ವಕಾರವನ್ನು (ಮತ್ತು ಫಕಾರವನ್ನು) ತುಟಿಯನ್ನು ಸ್ವಲ್ಪ ಹೆಚ್ಚು ಒಳಕ್ಕೆ ಮಡಚಿ ಇನ್ನೂ ಹೆಚ್ಚು ಗಾಳಿ ಊದಿ ಉಚ್ಛರಿಸಲಾಗುತ್ತದೆ.

    ಇಂಗ್ಲಿಷಿನಲ್ಲಿ ನಮ್ಮ ಮಹಾಪ್ರಾಣದ ಫಕಾರ ಉಂಟು. ಅದು ಆ ಭಾಷೆಯನ್ನು ಮಾತೃಭಾಷೆಯಾಗಿ ಬಳಸುವ ಜನಕ್ಕೆ ಗುರುತಿಸಲು ಆಗುವುದಿಲ್ಲ. ಉದಾಹರಣೆಗೆ spin ಮತ್ತು pin ಎಂಬ ಪದಗಳನ್ನು ನೋಡಬಹುದು. ಮೊದಲ ಪಾದದಲ್ಲಿ ಪಿ ಅಲ್ಪಪ್ರಾಣವಾಗಿಯೂ ಎರಡನೆಯದರಲ್ಲಿ ಮಹಾಪ್ರಾಣವಾಗಿಯೂ ಬಳಸಲಾಗುತ್ತದೆ. ಇವಕ್ಕೆ ಕಾರಣ ಈ ಎರಡೂ ಶಬ್ದಗಳು ಇಂಗ್ಲಿಷಿನಲ್ಲಿ ಒಂದೇ ಫೋನೀಮಿಗೆ ಸೇರಿದ ಶಬ್ದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: