
ಡಾ ಪಾರ್ವತಿ ಜಿ ಐತಾಳ್
ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ. ಸ್ವತಂತ್ರವಾಗಿ ಕಥೆ, ಕಾದಂಬರಿ, ನಾಟಕ, ವೈಚಾರಿಕ ಲೇಖನಗಳನ್ನು ಸಾಕಷ್ಟು ಬರೆದಿದ್ದಾರಾದರೂ ಅನುವಾದ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆಗಳಿಂದಾಗಿ ಖ್ಯಾತ ಅನುವಾದಕಿ ಎಂದು ಗುರುತಿಸಿಕೊಂಡಿದ್ದಾರೆ.
ಇವರು ಇಂಗ್ಲೀಷ್ ನಿಂದ ಅನುವಾದಿಸಿದ ಪರ್ಲ್ ಎಸ್.ಬಕ್ ಕಾದಂಬರಿ ‘ಗುಡ್ ಅರ್ತ್’, ಮಲೆಯಾಳದಿಂದ ಅನುವಾದಿಸಿದ ಎಂ.ಟಿ.ವಾಸುದೇವನ್ ನಾಯರ್ ಕಾದಂಬರಿಗಳು , ಕಮಲಾದಾಸ್ ಆತ್ಮಕಥೆ ‘ನೀರ್ಮಾದಳ ಹೂಬಿಟ್ಟ ಕಾಲ’ ಸಾರಾ ಜೋಸೆಫ್ ಕಾದಂಬರಿ ‘ಆಲಾಹಳ ಹೆಣ್ಣು ಮಕ್ಕಳು’, ಸುಕುಮಾರ ಅಳೀಕ್ಕೋಡರ ‘ಉಪನಿಷತ್ ಚಿಂತನೆ’, ವೈಕಂ ಮಹಮ್ಮದ್ ಬಷೀರ್ ಕಾದಂಬರಿಗಳು, ಮಲೆಯಾಳದ ಮಹಿಳಾ ಕಥನ’ವೇ ಮೊದಲಾದ ೪೦ಕ್ಕೂ ಮಿಕ್ಕಿದ ಅನುವಾದ ಕೃತಿಗಳು ಪ್ರಸಿದ್ಧವಾಗಿವೆ.
ಹತ್ತಕ್ಕೂ ಹೆಚ್ಚು ಆಕಾಶವಾಣಿ ರಾಷ್ಟ್ರೀಯ ನಾಟಕಗಳನ್ನು ಅನುವಾದಿಸಿದ್ದಲ್ಲದೆ ಇಂಗ್ಲೀಷ್, ಮಲೆಯಾಳ ಮತ್ತು ತುಳು ಭಾಷೆಗಳಲ್ಲೂ ಕೃತಿಗಳನ್ನು ರಚಿಸಿದ್ದಾರೆ. ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯ ಶ್ರೀ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪುಸ್ತಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಈ ಸಂಚಿಕೆಯಲ್ಲಿ ಸೂರ್ಯ ಗೋಪಿ ಅವರ ಕತೆಯನ್ನು ಮಲೆಯಾಳಂನಿಂದ ಅನುವಾದಿಸಿದ್ದಾರೆ.

ಡಾ. ಸೂರ್ಯ ಗೋಪಿ ಇಂದು ಮಲೆಯಾಳದ ಪ್ರಸಿದ್ಧ ಯುವ ಕಥೆಗಾರ್ತಿ. ಇವರು ೧೯೮೭ರಲ್ಲಿ ಕ್ಯಾಲಿಕಟ್ ನಲ್ಲಿ ಪ್ರಸಿದ್ಧ ಕವಿ ಪಿ.ಕೆ.ಗೋಪಿ ಮತ್ತು ಕೋಮಲಾ ಅವರ ದ್ವಿತೀಯ ಪುತ್ರಿಯಾಗಿ ಜನಿಸಿದರು. ಕಲಾಲಯ ಸಂಸ್ಥೆಯು ಏರ್ಪಡಿಸಿದ ಸಾಹಿತ್ಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತ ಬರವಣಿಗೆಯನ್ನು ಆರಂಭಿಸಿದರು.
‘ಪೂಕ್ಕಳೆ ಸ್ನೇಹಿಚ್ಚ ಪೆಣ್ ಕುಟ್ಟಿ'(ಹೂಗಳನ್ನು ಪ್ರೀತಿಸಿದ ಹುಡುಗಿ) ಎಂಬ ಇವರ ಮೊದಲ ಕಥಾ ಸಂಕಲನಕ್ಕೆ ೨೦೧೬ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಲಭಿಸಿತು. ಇಷ್ಟೇ ಅಲ್ಲದೆ ಕೇರಳದ ಪ್ರತಿಷ್ಠಿತ ಸಂಘ-ಸಂಸ್ಥೆಗಳಿಂದ ಅನೇಕ ಪ್ರಶಸ್ತಿ-ಪುರಸ್ಕಾರಗಳು ಇವರಿಗೆ ಲಭಿಸಿವೆ. ಸಮಾಜಶಾಸ್ತ್ರದಲ್ಲಿ ಪ್ರಥಮ ರ್ಯಾಂಕಿನೊಂದಿಗೆ ಎಂ.ಎ.ಪದವಿ ಪಡೆದ ಸೂರ್ಯಾ ಅವರು ಮಹಾತ್ಮಾಗಾಂಧಿ ವಿ.ವಿ.ಯಿಂದ ಡಾಕ್ಟರೇಟ್ ಪಡೆದರು. ಪ್ರಸ್ತುತ ಕೊಲ್ಲಂನ ಶ್ರೀನಾರಾಯಣಗುರು ಮುಕ್ತ ವಿ.ವಿ.ಯಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನಕ್ಸಲರ ಮೂಳೆ ಮುರಿದು ನಾಯಿಗಳಿಗೆ ಹಾಕುತ್ತೇನೆಂದು ಗುಡುಗಿ ಮುಖ್ಯಮಂತ್ರಿ ಪತ್ರಿಕಾ ಹೇಳಿಕೆ ಕೊಟ್ಟದ್ದು ವಿವಾದಕ್ಕೆಡೆ ಮಾಡಿ ಕೊಟ್ಟ ಸ್ಥಿತಿಯಲ್ಲಿ ಮಧು ಬಸಂತನ ಜಾಣ ಸೂತ್ರದ ಅಡಗುದಾಣದ ಆಕ್ರಮಣವನ್ನು ಪಾರುವಟ್ಟಿಯ ಮಂದಿ ಪ್ರತಿ ಕ್ಷಣವೂ ನಿರೀಕ್ಷಿಸಿದರು.
ಇದು ಎಂಬತ್ತರ ದಶಕದ ಪಾರುವಟ್ಟಿಯ ಕಥೆ. ವಲಸೆ ಬಂದ ಜಾಂಬುಗಳು ಪಾರುವಟ್ಟಿಯ ಶಿಖೆಯಿಲ್ಲದ ಜಮೀನುದಾರರಾಗಿ ಮೆರೆಯುತ್ತಿದ್ದ ಕಾಲ. ಗಾರುಗಳು ಮತ್ತು ಸೀತಗಳು ಜನಿವಾರ ಭಕ್ತಿಯಿಂದ ಸೀತಾಪಥು ಮತ್ತು ತುಂಗಸಿರ್ಣಿಗಳನ್ನು ಕ್ರಯಕ್ಕೆ ಕೊಂಡುಕೊಂಡ ಕರಾಳ ದಿನಗಳು. ಗುಂಡು ಶರೀರದ ರೆಡ್ಡಿಗಳು ಮತ್ತು ಕರಿದೊಗಲಿನ ಕುಡಿಯರ ಬಹುಜನ ಪಕ್ಷಗಳು ಅಜ್ಞಾನದ ಙಙ್ಮಢ ತಲೆಗೆ ಒಂದು ಲಕ್ಷವೆಂದು ಪತ್ರಿಕೆಗಳಲ್ಲಿ ಆಗಲೇ ಲುಕೌಟ್ ನೋಟೀಸು ಫೋಟೋ ಸಮೇತ ಅಚ್ಚಾಗಿತ್ತು.
ಮೈಸೂರಿನ ಮುಖಲಿಂಗದವರ ನಡುವಣ ಧೂಮ್ರ ಯುದ್ಧದ ಪ್ರಾಥಮಿಕ ತರಬೇತಿ ಕಾಲದಲ್ಲಾಗಿತ್ತು ಮಧು ಬಸಂತ್ ಭೂಗತನಾಗಬೇಕಾಗಿ ಬಂದದ್ದು. ಇಚ್ಛಾಭಂಗವಾಗಿ ಆತ ಮಾಂಧ್ಯಾರಣ್ಯವನ್ನು ಬಿಟ್ಟ. ಚಿಕ್ಕಮಗಳೂರು ದಾರಿಯಾಗಿ ಕಾರವಾರಕ್ಕೆ ಹೋದ. ಪಾರುವಟ್ಟಿ ಅವನ ಲಕ್ಷ್ಯಸ್ಥಳವಾಗಿರಲಿಲ್ಲ. ನಲ್ಲಮಲೆಯ ಕಣಿವೆಯ ಮೂಲಕ ಹಾದು ವಾರ್ಧಾದ ಸೇವಾಗ್ರಾಮಕ್ಕೆ ಹೋಗುವುದು ಅವನ ಗುರಿಯಾಗಿತ್ತು. ಆದರೆ ನಾಲ್ಗೊಂಡದ ಗೊಂಡಾರಣ್ಯದಲ್ಲಿ ಮಧು ಬಸಂತ್ ಸಿಕ್ಕಿ ಹಾಕಿಕೊಂಡ. ದಿಕ್ಕುಗಳು ಗೊತ್ತಾಗದೆ ವಿಭ್ರಾಂತನಾದ.
ಸೂರ್ಯನೇ ದಿಕ್ಕು ತಪ್ಪಿಸಿದನೆಂದು ಗೊಣಗುತ್ತಾ ಅವನು ತೆಂಕು ದಿಕ್ಕು ಹಿಡಿದ. ಏಲೂರು, ನೆಲ್ಲೂರು, ಚಿತ್ತೂರುಗಳು ದಾಟಿ ಹೋದದ್ದು ಅವನಿಗೆ ಗೊತ್ತಾಗಲೇ ಇಲ್ಲ. ಒಡಿಸ್ಸಾದ ಗಡಿಯ ಸಮೀಪ ಅವನ ಪ್ರಜ್ಞೆ ತಪ್ಪಿತು. ಕಣ್ಣು ತೆರೆದು ನೋಡಿದಾಗ ಪರಿಸರವು ಬೆಳದಿಂಗಳಲ್ಲಿ ಮೀಯುತ್ತಿತ್ತು. ಅವನು ಬೆಳಕಿನ ತುಣುಕುಗಳನ್ನು ಹಿಡಿದುಕೊಂಡು ಕಾಲೆಳೆಯುತ್ತ ಮಯೂರ್ ಭಂಜ್ ತಲುಪಿದ. ಅದೊಂದು ದಾಳಿಂಬ ಕಾಡಾಗಿತ್ತು. ಪಾರುವಟ್ಟಿಗೆ ತಾಗಿ ನಿಂತಿದ್ದ ಕಪ್ಪು ಕಾಡು. ದಾಳಿಂಬ ಹಣ್ಣುಗಳನ್ನು ಹೆಕ್ಕಲು ಬಂದ ಹಾವಾಡಿಗರ ಜತೆ ಮಾರನೇ ದಿನ ಮುಂಜಾನೆ ಮಧು ಬಸಂತ್ ಪಾರುವಟ್ಟಿಗೆ ಕಾಲಿಟ್ಟ.
ಗರ್ಭಪಾತ್ರೆಯ ಆಕಾರವಿರುವ ಒಂದು ಊರದು. ಅಂಡಾಶಯ ನಳಿಕೆಗಳಾಗಿ ಎರಡೂ ಬದಿಗಳಲ್ಲಿ ಹೊಳೆಗಳು ಹರಿಯುತ್ತಿದ್ದವು. ಗರ್ಭಾಶಯದ ಮುಖವಾಗಿ ಮಯೂರ್ ಭಂಜ್ ಎಂಬ ದಾಳಿಂಬ ಕಾಡು. ಹೊಳೆಗಳ ಬೆರಳುಗಳಿಂದ ಕಳಚಿ ಬಿದ್ದ ದಾಳಿಂಬ ಹಣ್ಣುಗಳ ಬೀಜಕೋಶಗಳು ಚಕ್ರೀಯ ಯಾತ್ರೆ ಆರಂಭಿಸಿದ್ದವು. ಮಧು ಬಸಂತನಿಗೆ ಪ್ರಕೃತಿಯ ಆ ತರ್ಜುಮೆ ಚೆನ್ನಾಗಿ ಅರ್ಥವಾಯಿತು. ಪಾರುವಟ್ಟಿಯ ಒಡಲನ್ನು ಅಳೆಯಲು ಇನ್ನೇನು ಕಷ್ಟ?
‘ಮೊದಲ ಪಾಠ ಮಣ್ಣಿನಲ್ಲಿ ಮೊಳೆಯಿಸುವುದು.. ‘ನೇಗಿಲಿನ ಉಳುಮೆಯ ತಾಳದೊಂದಿಗೆ ಮಕ್ಕಳು ಮಧುಬಸಂತನಿಗೆ ಸುತ್ತು ಬಂದವು.
‘ಐದನೇ ಪಾಠ ಎದೆಯೊಳಗೆ ಹಬ್ಬಿಸುವುದು..’
ಪಾರುವಟ್ಟಿಯ ಹಳೆಯ ಒಂದು ಕಟ್ಟಡವನ್ನು ಆತ ಅಕ್ಷರಗಳಿಂದ ತುಂಬಿಸಿದ.
‘ಏಳನೇ ಪಾಠ ಉತ್ತು ಹಸನು ಮಾಡುವುದು…’ ಏಳನೇ ಹಗಲಲ್ಲಿ ಪಾರುವಟ್ಟಿಯ ಮೊತ್ತ ಮೊದಲ ಒಕ್ಕಲು ತನ್ನ ಹೆಸರನ್ನು ಕಪ್ಪು ಮಣ್ಣಿನಲ್ಲಿ ಬರೆದ. ಮಧುಬಸಂತನ ಕಣ್ಣುಗಳಲ್ಲಿ ಕುಡುಗೋಲಿನ ಕನಸು ಚಂದ್ರನಾಗಿ ಉದಿಸಿತು. ‘ಎಂಟನೇ ಪಾಠ ಒಡೆದು ಪುಡಿ ಮಾಡುವುದು.’ ಸಾಕ್ಷರಳಾದ ಮೊದಲ ಹುಡುಗಿ ಆಲಿಫ್ ಮಧು ಬಸಂತನ ಎದೆಗೆ ಕೊಳ್ಳಿಯಿಂದ ಬೀಸಿದಳು. ಪ್ರೇಮವು ಬುದ್ಧಿಯ ಮೂಲಕ ಗುಣವಾಗುವ ರೋಗವಲ್ಲವಲ್ಲ? ಮಧು ಬಸಂತ ರೋಗಬಾಧಿತನಾದ. ಅವನು ಮುಖಲಿಂಗದವರನ್ನು ಮರೆತ. ಸೇವಾಗ್ರಾಮವನ್ನು ಕೈಬಿಟ್ಟ. ಪಾರುವಟ್ಟಿಯ ಹೊರದಾರಿಗಳನ್ನು ಮರೆತು ಬಿಟ್ಟ.
‘ದಾಳಿಂಬ ಹಣ್ಣಿಗೆ ಬೀಜಗಳೆಷ್ಟು?’
‘ಬೀಜಗಳಲ್ಲ. ಮಕ್ಕಳು’ ಆಲಿಫ್ ಸರಿಪಡಿಸಿದಳು. ‘ ‘ಆರುನೂರಾ ಹದಿಮೂರು.’
‘ಸರಿಯಾದ ಲೆಕ್ಕವೇ?’
ಸಂದೇಹ ನಿವಾರಣೆಗಾಗಿ ಅವರು ದಾಳಿಂಬ ಹಣ್ಣನ್ನು ಮಧ್ಯದಿಂದ ಸೀಳಿದರು. ಕಡಲಿನ ಬೆವರುಪ್ಪಿನ ಹೊಳೆ ನಾಚಿಕೆಯಿಂದ ದಂಡೆಯಂಚನ್ನು ಹಿಡಿದು ನಿಂತಿತು.
‘ ಈ ಹಣ್ಣು ನಿಜವಾಗಿಯೂ ಒಂದು ಹೆಣ್ಣು.’ ಮಧು ಹೇಳಿದ.
‘ಯಾಕೆ?’
‘ಒಳಗೇನಿದೆಯೆಂದು ಯಾರಿಗೂ ಗೊತ್ತಿಲ್ಲ!..’

ದಾಳಿಂಬದ ಮರಿಗಳು ಹೊಳೆಯಲ್ಲಿ ಕೊಚ್ಚಿಕೊಂಡು ಹೋದವು. ಮಧುವಿನ ಕೆನ್ನೆಯನ್ನು ಮೃದುವಾಗಿ ಕಚ್ಚಿ ಆಲಿಫ್ ಅಲ್ಲಿಂದ ಓಡಿ ಮರೆಯಾದಳು. ದಾಳಿಂಬ ಹಣ್ಣಿನ ರಸವು ಅವನ ಕೆನ್ನೆಗೆ ಮೆತ್ತಿಕೊಂಡಿತು. ಮಯೂರ್ ಭಂಜದ ಹೊಳೆಗಳಲ್ಲಿ ಪರಸ್ಪರರ ಮೇಲೆ ನೀರು ಹಾರಿಸುತ್ತ ಅವರು ಹಲವು ಬಾರಿ ಕುಳಿತರು. ಒದ್ದೆಯಾಗಿ ಜತೆಗೆ ಮಲಗುವಾಗ ಆಲಿಫ್ ಕಾಡೊಳಗಿನ ಬಿಳಿಯಾನೆಗಳ ಕುರಿತು ಆತನ ಬಳಿ ಹೇಳಿದಳು. ಸಾಲ್ವದೋರ್ ದಾಲಿಯ ಕೊಕ್ಕರೆ ಕಾಲಿನ ಐರಾವತವನ್ನು ಮಾತಿನಲ್ಲೇ ಪಳಗಿಸಿದಳು. ಮಯೂರಭಂಜದ ಏಷ್ಯನ್ ಆನೆಗಳನ್ನು ಅವನು ಮರೆತ. ಪಿಯಾ ಝಾ ಡೆಲ್ ಮಿನರ್ವಾನ ಬೆರ್ನಿನಿಯ ಮಾರ್ಬಲ್ ಆನೆಗಳ ಕುರಿತು ಹೇಳಿ ಅವನು ಆಲಿಫಳ ಕಣ್ಣುಗಳಲ್ಲಿ ಅಚ್ಚರಿ ಅರಳಿಸಿದ. ಚಿಲ್ಕಾ ನದಿಯ ನಾಡು ಗುಬ್ಬಚ್ಚಿಗಳ ಮರಣಗೀತೆಗಳನ್ನು ಗುನುಗಿದ. ಆಲಿಫ್ ಚಡಪಡಿಸಿದಳು. ಟ್ರಿನಿಡಾಡ್ ದ್ವೀಪದ ಮೈಟೀ ಸ್ಪಾರೋಗಳ ಆಫ್ರೋ ಕರೀಬಿಯನ್ ಸಂಗೀತಸುಧೆಯ ಅಲೆಗಳನ್ನು ಮೀಟಿ ಮಧು ಬಸಂತ್ ಜೋರಾಗಿ ನಕ್ಕ.
ಕಾಡಿನ ಕಡು ಹಸಿರಿನ ಮೂಲಕ ವನ್ಯವಾದ ಒಂದು ಹಳದಿ ಬೆಳಕು ಮಿಂಚಿ ಮರೆಯಾಗುವಂತೆ ಆಲಿಫಳ ಕಣ್ಣುಗಳು ಮಿನುಗಿದವು. ೧೯೩೮ರಲ್ಲಿ ನಾಲ್ಕು ಮಂದಿಯನ್ನು ಕೊಂದು ತಿಂದ ಝೆಕ್ ಹುಲಿಯ ಬಗ್ಗೆ ಆಲಿಫ್ ಕಂಪಿಸುತ್ತ ಹೇಳಿದಳು. ಕಾಟ್ ಸಿಂಡ್ರಿಯಾ ಮಲೆಯ ಕಣಿವೆಗಳಲ್ಲಿ ಜಿಮ್ ಕಾರ್ಬೆಟ್ ಅದರ ಕಥೆಯನ್ನು ಮೊದಲೇ ಮುಗಿಸಿದ್ದನೆಂದು ನಿರ್ಲಕ್ಷ್ಯದಿಂದ ಹೇಳಿ ಮಧು ಬಸಂತ್ ತನ್ನ ಸರ್ವಜ್ಞಾನವನ್ನು ಪ್ರಕಟ ಪಡಿಸಿದ.
ಅನಂತರ ಅವನು ದಾಳಿಂಬ ಹಣ್ಣುಗಳಿಂದ ಸಿಡಿದೆದ್ದು ನೆಗೆಯುವ ಹುಲಿಗಳ ದಾಲಿಯ ಚಿತ್ರದತ್ತ ಆಸೆಗಂಗಳಿಂದ ನೋಡಿದ. ಆಕಾಶ ನೀಲಿಯ ಆಳವಿರುವ ಶೂನ್ಯತೆಯತ್ತ ನೋಡುತ್ತ ಅವನು ಆಲಿಫಳ ಕೈ ಹಿಡಿದ. ಹೊಳೆಯ ಮೇಲಿಂದ ಹರಿಯುವ ತಣ್ಣಗಿನ ಬಂಡೆಯ ಮೇಲೆ ದಾಲಿಯ ಹೆಂಡತಿ ಗಾಲಾಳಂತೆ ಆಲಿಫ್ ಮಲಗಿದಳು. ಒಡಲ ತುಂಬಾ ಕಪ್ಪು ಪಟ್ಟೆಗಳಿರುವ ಒಂದು ಹಳದಿ ಮೃಗ ಮಯೂರ ಭಂಜದ ನಟ್ಟ ನಡುವೆ. ಎಲ್ಲದಕ್ಕಿಂತ ಹೆಚ್ಚು ಎತ್ತರವಿದ್ದ ಕನ್ನೆಯರ ತೇಗಮರದಿಂದ ನೆಗೆಯುವ ಗುರಿಯ ಬಗ್ಗೆ ಅವರು ಆಲೋಚಿಸ ತೊಡಗಿದರು.
‘ನಾನು ಹೋಗಬೇಕಾಗಬಹುದು.’ ಮಧು ಬಸಂತ್ ಹೇಳಿದ.
‘ನನ್ನನ್ನು ಬಿಟ್ಟು ಹೋಗಬೇಡ.’ ಆಲಿಫಳ ಪ್ರೇಮ ಸುಳಿಯತ್ತ ಜಾರಿತು. ಕಡಿಮೆಯೆಂದರೆ ಹನ್ನೆರಡಡಿಯಿರುವ ದಾಳಿಂಬ ಮರದ ದುರ್ಬಲವಾದ ಮೇಲುಕೊಂಬೆಗಳಿಂದ ನೆಲದ ವರೆಗೆ ತೂಗಿ ನಿಂತ ಅಪ್ಪನ ತಣ್ಣಗೆ ಕೊರೆಯುತ್ತಿದ್ದ ದೇಹದ ಬಗ್ಗೆ ಆಲಿಫ್ ಅವನ ಬಳಿ ಹೇಳಿದಳು. ಅವಳ ಕಣ್ಣೀರು ಜಲವನ್ನು ಬಿಸಿ ಮಾಡಿತು. ಶ್ರೀಮಂತ ನಾಯಕರು ಹೊಡೆದು ಕೊಂದು ಹೂಳಿಟ್ಟ ತನ್ನ ಅಪ್ಪನ ನೆನಪುಗಳು ಅವನ ಮನಸ್ಸನ್ನೂ ತುಂಬಿದವು. ಅವನು ಕಣ್ಣೀರನ್ನು ಕೊಡವಿ ಧೈರ್ಯದಿಂದ ಎದ್ದು ನಿಂತ.
‘ಮುಂದಿನ ಅಡಗು ಯುದ್ಧದ ನಂತರ ನಾನು ಇಲ್ಲಿಂದ ಹೋಗಿ ಬಿಡುತ್ತೇನೆ.’ ಭಯದ ಭೂಗತ ಯುದ್ಧಗಳ ಅದೃಷ್ಟದಾಟವು ಮಧುವಿನ ಮೆದುಳಿನಲ್ಲಿ ಮತ್ತೆ ಉರುಳಾಡ ತೊಡಗಿತು.
ಆಲಿಫಳಿಗೆ ದಾಳಿಂಬದ ಎಣ್ಣೆಯ ಪರಿಮಳವಿತ್ತು. ಅನಂತರ ಬಂದ ಬೇಸಿಗೆ ಕಾಲದಲ್ಲಿ ಹೊಳೆದಂಡೆಯಿಂದ ಬೇರ್ಪಟ್ಟು ಹರಿದ ಹಗಲುಗಳಲ್ಲಿ. ಗೆದ್ದಲು ತಿಂದ ಮರದಿಂದ ಬರುವಂಥ ಆ ದುರ್ಗಂಧವು ತನಗೆ ಒಮ್ಮೆ ಹೇಗೆ ಸುಗಂಧವಾಯಿತು ಎಂದು ನೆನೆದ ಮಧು ಬಸಂತನಿಗೆ ಮನಸ್ಸು ವಂಚಿಸಿತು ಶುಷ್ಕಗೊಂಡು ಚದುರಿದ ರಾತ್ರಿಯ ಮೋಡಗಳ ನೆರಳು ದಾರಿಗಳ ಮೂಲಕ ಕಾಡಿನಿಂದ ಹೊರಬಂದ ಹುಲಿಯ ಕುರಿತು ಆಲಿಫ್ ಅವನಿಗೆ ನಡುನಡುವೆ ಹೇಳಿದಳು. ವಂಚನೆಗೆ ಉತ್ತರ ಸಾವೆಂದು ಯಾವ ಪ್ರೇಯಸಿ ತಾನೇ ಎಚ್ಚರಿಸುವುದಿಲ್ಲ?
ಜಾಂಬುಗಳು ಕಚ್ಚಿ ಎಸೆದ ಹೆಣ್ಣುಮಕ್ಕಳ ಕುರಿತು ಪಾರುವಟ್ಟಿಗರು ನೆನೆದರು. ಬಾವಲಿಗಳು ಮೆದ್ದು ಮುಗಿಸಿದ ಮಕ್ಕಳ ನರಳಾಟವು ಅವರ ಕರುಳನ್ನಿರಿಯಿತು. ಅದು ವಿಯೆಟ್ನಾಮಿನ ಗೆರಿಲ್ಲಾ ಯುದ್ಧದ ಹಾಗೆ ಇರಬಹುದೆ? ಅದರ ನಂತರ ನಾವು ಸ್ವತಂತ್ರರಾಗಿ ಬಿಡುತ್ತೇವೆಯೆ? ಕಪ್ಪು ಒಡಲಿನ ಉಪ್ಪಿನಿಂದ ಮೊಳೆತು ಮೇಲೆದ್ದ ಧಾನ್ಯಶೇಖರವನ್ನು ಅವರು ಮಧು ಬಸಂತನಿಗೆ ತೋರಿಸಿ ಕೊಟ್ಟರು. ರಹಸ್ಯಗಳ ಹೊಗೆ ಗೂಡಿನಲ್ಲಿ ನಕ್ಸಲರು ನಿಶ್ಶಬ್ಧ ಪಾಲಿಸಬೇಕೆಂದಿದೆ. ಜನಿವಾರಗಳು ತುಂಡಾಗುವ ಮೊದಲು ಗುರಿಯನ್ನು ಖಚಿತ ಪಡಿಸಿಕೊಳ್ಳುವುದು ಆಗ. ಧಾನ್ಯಗಳನ್ನು ದಾಸ್ತಾನಿಡುವ ಪತ್ತಾಯಗಳ ಒಳಗೆ ಅಡಗಿ ನಿಂತು ಕೊರಳುಗಳನ್ನು ಕತ್ತರಿಸಬೇಕು. ಜಮೀನ್ದಾರರ ಮನೆಯ ಸುತ್ತ ಕಂದಕಗಳನ್ನು ತೋಡಿ ಕೋವಿ ಮದ್ದಿಗೆ ಬತ್ತಿ ಉರಿಸಿಡ ಬೇಕು. ಅರಮನೆಗಳ ಗಾಯಗೊಂಡ ಹೆಣ್ಣುಮಕ್ಕಳನ್ನು ರಕ್ಷಿಸಬೇಕು. ರೂಪುರೇಷೆಗಳ ಪ್ರಕಾರ ಮಧು ಬಸಂತ್ ಶಸ್ತ್ರಗಳನ್ನು ಸಿದ್ಧಪಡಿಸಿಕೊಂಡ.
‘ಇವತ್ತು ಅನ್ ಸಾಫ್ ನ ಹಾಗೆ ರಾತ್ರಿ ಹೋರಾಟ!’ ದಾಳಿಂಬ ಹಣ್ಣುಗಳ ಸಿಪ್ಪೆ ಬಿಡಿಸಿ ಅವನು ಸುತ್ತ ನಿಂತವರಿಗೆ ಕೊಟ್ಟ. ಚಂದ್ರೋದಯಕ್ಕೆ ಮೊದಲು ಒಟ್ಟು ಸೇರೋಣವೆಂದು ಹೇಳಿ ಅವರೆಲ್ಲರೂ ಚದುರಿದರು.
ರಾತ್ರಿ ಎಷ್ಟೋ ಹೊತ್ತಿಗೆ ಕಂಪಿಸುವ ಕೆನ್ನೆ, ಬಿಳಿಚಿಕೊಂಡ ತುಟಿಗಳೊಂದಿಗೆ ಆಲಿಫ್ ಅವನನ್ನು ಕಾಣಲು ಬಂದಳು. ಬೆಳದಿಂಗಳ ಬೆಳ್ಳಿ ಚುಕ್ಕೆಗಳ ನಸು ಬೆಳಕಲ್ಲಿ ಅವಳು ಅವನ ಮುಖದತ್ತ ಪ್ರೀತಿಯಿಂದ ನೋಡಿದಳು.
‘ಇವು ಎಳೆಯ ಶಿಶುಗಳನ್ನು ಗರ್ಭದೊಳಗಿಟ್ಟುಕೊಳ್ಳುವ ದಾಳಿಂಬ ಹಣ್ಣುಗಳು’ ಆಲಿಫ್ ಮಣಮಣಿಸಿದಳು.
ಅದನ್ನು ಕೇಳಿದ ಮಧು ಬಸಂತ್ ಬೆರಗಾದವನಂತೆ ನೋಡಿ ತಲೆಯಾಡಿಸಿ ಹೇಳಿದ :
‘ಅಲ್ಲ. ಅದು ಸತ್ತವನ ರಕ್ತ..!’
ಪಡೆಯ ಉಪಕರಣಗಳನ್ನು ತುರ್ತಾಗಿ ಬದಲಾಯಿಸಬೇಕಾಗಿದೆ ಎಂದು ಮಧು ಬಸಂತ್ ಚಿಂತಿಸಿದ. ದಾಳಿಂಬ ಕಾಡಿನೊಳಗೆ ಏಕಾಂಗಿಯಾಗಿ ಪ್ರವೇಶಿಸಿದ. ಹಣ್ಣುಗಳ ಒರಟು ಸಿಪ್ಪೆಗಳನ್ನು ಮೆಟ್ಟಿ ಒಡೆದ. ನಡು ಮುರಿದು ಹಾಕಿದ. ಕೆಂಪು ಮೊಗ್ಗುಗಳನ್ನು ಚಚ್ಚಿ ಅರೆದ. ಬಿದಿರ ಕಾಂಡದ ಬುಡವನ್ನು ತೆರೆದು ಕೋವಿ ಮದ್ದನ್ನು ಅಲ್ಲಿ ರಾಶಿ ಕೂಡಿದ. ದಾಳಿಂಬ ಹಣ್ಣುಗಳೆಡೆಯಿಂದ ಹುಡಿ ನೊರೆ ಬಂತು. ಮಧು ಬಸಂತನ ಬೆರಳುಗಳಲ್ಲಿ ದಾಳಿಂಬದ ರಸ ರಕ್ತದಂತೆ ಹರಿಯಿತು. ಆಲಿಫಳ ನೀಲ ಉಡುಪಿನಲ್ಲಿ ರಕ್ತ ಹರಡಿ ಭೂಪಟವಾಯಿತು. ಕೊಲ್ಲುವ ನೋವಿನೆಡೆಯಲ್ಲೂ ಅವಳು ದಾಳಿಂಬ ಹೂವಿನಂತೆ ನಕ್ಕಳು. ಅವಳ ಬಟ್ಟಲು ಕಣ್ಣುಗಳೊಳಗೆ ತೆರೆಯೆದ್ದಿತು. ಗಾಯದ ಮಿಂಚು ಹೊಡೆದಾಗ ಅವಳು ಬಾಗಿ ನಿಂತಳು. ಹಣ್ಣುಗಳ ಬಣ್ಣ ತುಂಬಿದ ಒಳ ಭಾಗದಲ್ಲಿ ಹೊಗೆ ತುಂಬಿತು. ಪಾರುವಟ್ಟಿಯ ಗರ್ಭಪಾತ್ರೆಯ ಒಳಭಾಗವು ಮದ್ದಿನ ಪ್ರಯೋಗದಿಂದ ಕರಗಿತು.
‘ಕೇಳಿಲ್ಲವೇ…ಇದು ದಾರ್ಲಿಸನ ಧೂಪಯುದ್ಧ…! ‘
‘ನಿಜವಾಗಿಯೂ ನೀವು ನಮ್ಮನ್ನು ಬಿಡುಗಡೆಗೊಳಿಸುತ್ತೀರಾ?’ ಪಾರುವಟ್ಟಿಗರು ಹುಬ್ಬೇರಿಸಿ ಕೇಳಿದರು.
‘ನಿಜವಾಗಿಯೂ ನೀವು ನನ್ನನ್ನು ಬಿಡುಗಡೆಗೊಳಿಸುತ್ತೀರಾ? ‘ ಆಲಿಫ್ ಕೇಳಿದಳು.
ಉರಿಯ ತೊಡಗಿದ ಕನ್ಯಾವನವು ಕೆಂಡ ನುಂಗಿದ ಮಾತುಗಳನ್ನುಗುಳಿತು. ಒಂದು ಸ್ಫೋಟ ! ಮಲೆಕಾಗೆಗಳು ಭಯದಿಂದ ತತ್ತರಿಸುತ್ತ ಅಲ್ಲಿಂದ ಹಾರಿ ಹೋದವು. ಹಸುಗಳು ನೊರೆ ಕಾರಿದವು. ನಾಯಿಗಳು ನಿರ್ಬಾಧಿತವಾಗಿ ಊಳಿಟ್ಟವು. ಜಮೀನ್ದಾರರ ಮಹಡಿ ಮನೆಗಳು ಒಡೆದು ಕುಸಿದು ಬಿದ್ದವು.

‘ಇದು ಕನ್ನೆಯ ದಿಟ್ಟ ಹೋರಾಟ ! ‘ಅವನು ಉನ್ಮತ್ತನಾಗಿ ಹೇಳಿದ.
ಮಯೂರಭಂಜ್ ಹೋಳು ಹೋಳಾಯಿತು. ದಾಳಿಂಬ ಹಣ್ಣುಗಳು ಅಗ್ನಿಯುಂಡೆಗಳಾಗಿ ತೂಗಾಡಿದವು. ಆಗಸವು ಹೊಗೆಯ ಪಟಲಗಳಿಂದ ಆವೃತವಾಯಿತು.
‘ಮಂಗೋಲಿಯಾದ ಚೆಂಗಿಸ್ ಖಾನನ ತಂತ್ರವಿದು ! ‘ ಪಾರುವಟ್ಟಿಯ ಮುಗ್ಧತೆಗೆ ಅವನು ಸುಳ್ಳಿನ ಬೆಂಕಿಯನ್ನು ಬಾಚಿ ತುಂಬಿದ.
ಮರು ಕ್ಷಣ ಅವನ ಪಾದದಡಿಯಿಂದ ಒಂದು ಬಿರುಗಾಳಿಯ ಒಡಲು ಬಾಯಿ ಬಿಟ್ಟು ತನ್ನ ನೇರಕ್ಕೆ ಕಣ್ಣಿಟ್ಟಿರುವುದು ಅವನ ಗಮನಕ್ಕೆ ಬಂತು. ಭಯದ ಸೀಸದುಂಡೆಗಳು ಅವನ ಕಿಬ್ಬೊಟ್ಟೆಯೊಳಗೆ ಉರುಳತೊಡಗಿದವು.
ಕಿವಿಯ ಸುತ್ತಲೂ ಸೊಳ್ಳೆಗಳ ಸಂಗೀತ. ಸೊಂಟದ ಸುತ್ತ ಕೆಂಜಿರುವೆಗಳ ಸೇನಾ ಕವಾಯತು. ಎದೆಗೂಡಿನಲ್ಲಿ ಸುಟ್ಟು ಕರಕಲಾದ ಪೊದೆಗೂದಲ ತುರಿಕೆ. ಮಾಂಸ ಕೊಳೆತ ದುರ್ಗಂಧವು ದಾಳಿಂಬದೆಣ್ಣೆಯ ತೀಕ್ಷ್ಣ ವಾಸನೆಯೊಂದಿಗೆ ಅವನ ಮೂಗಿನೊಳಗೆ ಹೊಕ್ಕಿತು.
ಹಳದಿ ಬಣ್ಣದ ಮೈ..! ಅದರಲ್ಲಿ ಹಬ್ಬಿಕೊಂಡ ಕಪ್ಪು ಪಟ್ಟೆಗಳು..! ಕನ್ನೆಯರ ತೇಗಮರದ ಕಾಂಡದತ್ತ ಆ ಪ್ರಾಣಿಯು ಒಂದೇ ನೆಗೆತಕ್ಕೆ ಹಾರಿತು. ರಾತ್ರಿಯ ಕತ್ತಲಲ್ಲಿ ಆ ಹೆಣ್ಣು ಹುಲಿ ಭಯಾನಕ ನೋಟವನ್ನು ಅವನತ್ತ ಹರಿಯಿಸಿತು. ಅಸಹಾಯಕತೆಯ ಪುರುಷಮುಖದತ್ತ ನೋಡಿ ಕೆಲವೊಮ್ಮೆ ದಾಳಿಂಬ ನಗುವನ್ನು ಧರಿಸಿತು. ಸ್ವಾದಿಷ್ಟವಾದ ಮಾಂಸದ ತುಂಡಾಗಿ ಅವನನ್ನು ನೋಡಿ ನಾಲಿಗೆ ಚಪ್ಪರಿಸಿತು. ಸಾವಿನ ಕೋರೆದಾಡೆಗಳನ್ನು ಮಿನುಗಿಸಿ ನಿಶ್ಚಲವಾಗಿ ಕಾದು ಕುಳಿತಿತು.
ಅವನು ಅರೆತೆರೆದ ಕಣ್ಣುಗಳಿಂದ ದಾಳಿಂಬಕಾಡಿನ ಕೊಳಚೆ ಪ್ರದೇಶದತ್ತ ಮುಖ ಮಾಡಿದ. ಗರ್ಭಜಲದ ಕೆಂಪಿನಲ್ಲಿ ನಿಶ್ಚಲ ಶಿಶುವಿನಂತೆ ಮಲಗಿದ. ಆಲಿಫಳ ಬಿಳಿಚಿಕೊಂಡ ಮುಖವು ಅವನಿಗೆ ಚಂದ್ರನಲ್ಲಿ ಕಾಣಿಸಿತು.
‘ಎರಡನೇ ಕಾಂಪೈನಸ್ ನ ಮಾರ್ಜಾಲ ಯುದ್ಧವೇ? ಟೈಗರಿನ ಒಂಟೆ ಯುದ್ಧವೇ? ಇನ್ನು ಬೇರೇನಿದೆ? ‘ಅವನು ಕಲಿತ ಯುದ್ಧ ರಹಸ್ಯಗಳನ್ನು ನೆನಪು ಮಾಡಿಕೊಳ್ಳಲು ಪ್ರಯತ್ನಿಸಿದ.
ಸುತ್ತಲೂ, ಸತ್ತವಳ ರಕ್ತದ ವಾಸನೆ!
(ಟಿಪ್ಪಣೆ : ಕನ್ನೆಯರ ತೇಗದ ಮರ ಅಂದರೆ ಎಲ್ಲದಕ್ಕಿಂಂತ ಎತ್ತರವಾದ ತೇಗದ ಮರ. ಅದಕ್ಕೆ ಕನ್ಯೆಯರು ಪ್ರದಕ್ಷಿಣೆ ಹಾಕಿದರೆ ಒಳ್ಳೆಯ ಪತಿ ಸಿಗುತ್ತಾನೆ ಎಂಬ ನಂಬಿಕೆಯಿದೆ.)
ನಾನೇಕೆ ಅನುವಾದಿಸುತ್ತೇನೆ?
ಈ ಪ್ರಶ್ನೆಯನ್ನು ನನಗೆ ನಾನೇ ಅನೇಕ ಬಾರಿ ಕೇಳಿಕೊಂಡಿದ್ದೇನೆ. ಅನೇಕ ಬಾರಿ ಸಂದರ್ಶನಗಳಲ್ಲಿ ಇತರರೂ ಕೇಳಿದ್ದಿದೆ. ನಾನು ಅನುವಾದ ಕ್ಷೇತ್ರವನ್ನು ಪ್ರವೇಶಿಸಿದ್ದು ಎಂಬತ್ತರ ದಶಕದಲ್ಲಿ. ಆಗ ನಾನು ಈ ಬಗ್ಗೆ ಆಲೋಚಿಸಿರಲೇ ಇಲ್ಲ. ಐದು ಭಾಷೆಗಳು ತಿಳಿದಿವೆ. ನಾನ್ಯಾಕೆ ಕಥೆಗಳನ್ನು ಅನುವಾದಿಸ ಬಾರದು ಎಂದಷ್ಟೇ ಯೋಚಿಸಿ ಕಾರ್ಯ ತತ್ಪರಳಾದೆ. ಆದರೆ ಕಾಲಕ್ರಮೇಣ ಹೆಚ್ಚು ಹೆಚ್ಚು ಕೃತಿಗಳನ್ನು ಪ್ರಕಟಿಸಿದಷ್ಟೂ ನನ್ನ ಜವಾಬ್ದಾರಿಗಳು ಹೆಚ್ಚಾದವು. ಅಕಡೆಮಿಕ್ ವಲಯದಲ್ಲಿದ್ದದ್ದರಿಂದ ಕೇರಳದಲ್ಲೂ ಕರ್ನಾಟಕದಲ್ಲೂ ಹತ್ತಾರು ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಬೇಕಾಗಿ ಬಂತು. ಭಾಷಾಂತರವೆಂಬುದು ಒಂದು ಅಧ್ಯಯನ ಶಿಸ್ತಾಗಿ ಬೆಳೆಯುತ್ತಿದ್ದ ಕಾಲ. ನಾನು ಇಂದಿನ ಸಾಂಸ್ಕ್ರತಿಕ ಸಂದರ್ಭದಲ್ಲಿ ಅನುವಾದದ ಅಗತ್ಯ ಮತ್ತು ಮಹತ್ವಗಳ ಕುರಿತು ಗಂಭೀರವಾಗಿ ಅಧ್ಯಯನ ಮಾಡಬೇಕಾಗಿ ಬಂತು.
ಸಾಹಿತ್ಯವಿರುವುದೇ ಬದುಕನ್ನು ಅರ್ಥ ಮಾಡಿಕೊಳ್ಳಲು ಮತ್ತು ಮನುಷ್ಯ ಸಂಬಂಧಗಳ ಬಗ್ಗೆ ತಿಳಿದುಕೊಂಡು ಸಾಮರಸ್ಯದ ಬದುಕಿನ ಸಾಧ್ಯತೆಗಳ ಬಗ್ಗೆ ಚಿಂತಿಸಲು. ಈ ನಮ್ಮ ಜಗತ್ತಿನಲ್ಲಿ ಸಾವಿರಾರು ಭಾಷೆಗಳಿವೆ ಮತ್ತು ಪ್ರತಿಯೊಂದು ಭಾಷೆಗೂ ಅದರದ್ದೇ ಆದ ಸಂಸ್ಕೃತಿಯಿದೆ. ನಾವು ಕೇವಲ ನಮ್ಮ ಭಾಷೆಯಲ್ಲಿ ಬರುವ ಸಾಹಿತ್ಯ ಕೃತಿಗಳನ್ನು ಓದುತ್ತಿದ್ದರೆ ಜಗತ್ತಿನ ಇತರ ಜನರು ಹೇಗೆ ಬದುಕುತ್ತಿದ್ದಾರೆ, ಅವರ ಜೀವನ ಕ್ರಮ, ರೀತಿ ನೀತಿ, ನಂಬಿಕೆ ಆಚರಣೆಗಳು ಹೇಗಿರಬಹುದು ಎಂಬ ಕಲ್ಪನೆಯೂ ಇಲ್ಲದೆ ನಾವು ಬಾವಿಯೊಳಗಿನ ಕಪ್ಪೆಗಳಾಗುತ್ತೇವೆ. ನಮ್ಮ ಭಾಷೆ ಎಂಬ ಮನೆಯ ಕಿಟಿಕಿ- ಬಾಗಿಲುಗಳನ್ನು ಮುಚ್ಚಿ ಇದುವೇ ನಮ್ಮ ಪ್ರಪಂಚವೆಂಬ ಭ್ರಮೆಗೊಳಗಾಗುತ್ತೇವೆ.
ಈ ಕೊರತೆಯನ್ನು ನೀಗಿಸಿ, ನಮ್ಮ ಕಿಟಿಕಿ ಬಾಗಿಲುಗಳನ್ನು ತೆರೆದಿಟ್ಟು ಹೊಸ ಬೆಳಕು ಹೊಸ ಗಾಳಿಗಳನ್ನು ಅನುಭವಿಸಲು ಸಾಧ್ಯವಾಗುವುದು ಭಾಷೆಗಳ ನಡುವೆ ಅನುವಾದದ ಮೂಲಕ ಸಾಹಿತ್ಯ ಕೃತಿಗಳು ವಿನಿಮಯಗೊಂಡಾಗ ಮಾತ್ರ. ಇವತ್ತು ನಾವು ಪಾಶ್ಚಾತ್ಯ ಸಾಹಿತ್ಯ ಮತ್ತು ತೃತೀಯ ಜಗತ್ತಿನ ದೇಶಗಳ ಸಾಹಿತ್ಯಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಿದ್ದು ಅನುವಾದದ ಮೂಲಕ. ಈ ರೀತಿ ಸಾಂಸ್ಕೃತಿಕ ಸಂವಹನವನ್ನು ಸಾಧ್ಯವಾಗಿಸುವ ಅನುವಾದಕರು ಒಂದು ಮಹತ್ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ನನಗನ್ನಿಸಿತು. ಮುಖ್ಯವಾಗಿ ಒಂದು ಬಹುಭಾಷಾ ದೇಶವಾದ ಭಾರತದಲ್ಲಿ ಎಲ್ಲರೂ ಸಂವಹನಕ್ಕೆ ಬಳ ಬಹುದಾದ ಒಂದು ಸಾಮಾನ್ಯ ಭಾಷೆ ಇಲ್ಲದಿರುವ ಸ್ದಿತಿಯಲ್ಲಿ ರಾಷ್ಟ್ರೀಯ ಭಾವೈಕ್ಯತೆಯ ದೃಷ್ಟಿಯಿಂದ ಅನುವಾದದ ಅಗತ್ಯ ಹೆಚ್ಚೇ ಇದೆ ಅನ್ನುವ ವಾಸ್ತವದ ಅರಿವು ನನ್ನಲ್ಲಿ ಉಂಟಾಯಿತು. ಇಂಥ ಆಲೋಚನೆಯಿಲ್ಲದೆಯೇ ಅನುವಾದವನ್ನು ಗಂಭೀರವಾಗಿ ತೆಗೆದುಕೊಂಡು ಆ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಲು ಸಾಧ್ಯವಾಗಿದ್ದಕ್ಕೆ ನಾನು ಹೆಮ್ಮೆ ಪಡುತ್ತೇನೆ.






0 Comments