ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೀತಿ ಪ್ರೇಮದಲ್ಲಿ ಬೀಳುವವರು 99%..

ಆನಂದ್ ಋಗ್ವೇದಿ

’99’ ಎಂಬ 99% ದೀಪಾವಳಿ ಹಬ್ಬದ ನಾಲ್ಕು ದಿನಗಳ ರಜೆಯಲ್ಲಿ, ಹಬ್ಬದ ತಯಾರಿ ಗಡಿಬಿಡಿ ಮಧ್ಯದ ಬಿಡುವಿನಲ್ಲಿ, 2019ರಲ್ಲಿ ಬಂದಿದ್ದ ಗಣೇಶ್ ಅಭಿನಯದ ಸಿನೆಮಾ ’99’ ನೋಡಿದೆ. ಹೈಸ್ಕೂಲಿನಲ್ಲಿ ಒಟ್ಟಿಗೇ ಕಲಿತ ಸಹಪಾಠಿಗಳ ಈ ಪುನರ್ ಮಿಲನ(re union) ಕತೆಯು ಮೂಲ ತಮಿಳಿನ ಸಿನೆಮಾ 96 ರದು. ವಿಜಯ್ ಸೇತುಪತಿ ಮತ್ತು ತ್ರಿಶಾ ಅಭಿನಯದ ಈ ಸಿನೆಮಾವನ್ನೇ ಕನ್ನಡದಲ್ಲಿ ಗಣೇಶ್ – ಭಾವನಾ ಮೆನನ್ ಜೋಡಿಯೊಂದಿಗೆ ರಿಮೇಕ್ ಮಾಡಲಾಗಿದೆ.

ಕತೆ ಸಹಜ ಭಾವುಕವಾದದ್ದು. ತೀರ್ಥಹಳ್ಳಿ ಊರಿನಲ್ಲಿ ಓದಿದ್ದ, 1999 ರಲ್ಲಿ ಹತ್ತನೆಯ ತರಗತಿ ಮುಗಿಸಿದ ಸಹಪಾಠಿಗಳು ಮತ್ತೆ ಸಂಧಿಸುವುದು, ಅದರಲ್ಲಿ ರಾಮ್ ಮತ್ತು ಜಾನಕಿಯರ ಭಾವುಕ ಪ್ರೇಮದ ಸಂಗತಿಯೇ ಕತೆ. ಇದು ಬಹುತೇಕ ರೀ-ಯೂನಿಯನ್ ಗಳ ಕತೆ. ಅದು ಹೈಸ್ಕೂಲ್, ಕಾಲೇಜ್, ಯೂನಿವರ್ಸಿಟಿ ಯಾವುದೇ ಆಗಿರಲಿ ಅದರ ಒಡಲಲ್ಲಿ ಈ ತರಹದ ಕ್ಯಾಂಪಸ್ ಇನ್ಪ್ಯಾಚುಯೇಷನ್, ಕಾಫ್ ಲವ್ ಕೇಸ್ ಗಳು ಒಂದೆರಡಾದರೂ ಇದ್ದೇ ಇರ್ತವೆ! ಅವುಗಳಲ್ಲಿ ವಿಫಲ ಪ್ರೇಮಕತೆಗಳೇ ಹೆಚ್ಚು!!ಒಂದು ಕಾಲದಲ್ಲಿ ಪರಸ್ಪರ ಅಥವಾ ಒಬ್ಬರೇ ಮತ್ತೊಬ್ಬರನ್ನು ಇಷ್ಟಪಟ್ಟು/ ಪ್ರೀತಿಸಿ, ಆ ಕನಸು ಸಾಕಾರವಾಗದೇ ಬೇರೆಯವರನ್ನು ಮದುವೆಯಾಗಿ ಮಕ್ಕಳ ತಂದೆ ತಾಯಿಯಾದವರು 99%. ಎಲ್ಲೋ ಒಂದು ಎರಡು ಸಂಗತಿಗಳಲ್ಲಿ ಆ ಪ್ರೇಮಿಗಳು ಮದುವೆ ಆಗಿರಬಹುದು. ಹಾಗೆ ಆದವರೂ ನಂತರ ಭ್ರಮನಿರಸನಗೊಂಡು ಎಲ್ಲರಂತೆ ಗಂಡ ಹೆಂಡಿರಾಗಿ ಗುದ್ದಾಡಿಕೊಂಡವರೇ ಹೆಚ್ಚು. ಅದರಲ್ಲೂ ಹೈಸ್ಕೂಲ್ ಕಾಲದಲ್ಲಿ….. ಪ್ರೀತಿ ಪ್ರೇಮ!!

ನಿಜ, ಹೈಸ್ಕೂಲ್ ಎನ್ನುವುದು ಬಹುತೇಕ ಟೀನ್ ಏಜ್ ನ ಜವ್ವನ ಕಾಲದ್ದು. ಆಗಷ್ಟೇ ಹದಿಮೂರಕ್ಕೆ ಬಿದ್ದ, ಹದಿನಾರರವರೆಗಿನ ಟೀನ್ ಏಜ್ ಆರಂಭದ – ಹುಚ್ಚು ಖೋಡಿ ಮನಸ್ಸಿನ – ವಯಸ್ಸು ಅದು. ಕಾರಣವಿಲ್ಲದೇ ಎದೆ ಬಡಿತ ಜೋರಾಗುವ, ಮನಸ್ಸಿನಲ್ಲಿ ಆಗುವ ರಾಸಾಯನಿಕ ಕ್ರಿಯೆ ಮತ್ತು ಹಾರ್ಮೋನ್ ಏರಿಳಿತಗಳಿಂದಾಗಿ ಆ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬೀಳದಿರುವವರೇ ಅಪರೂಪ! ಹಾಗೆ ಸಂಭವಿಸಿದ ಪ್ರೀತಿಯನ್ನು ಹೇಳಿಕೊಂಡವರು ಅತ್ಯಲ್ಪ. ಅದರಲ್ಲೂ ಸಹವರ್ತಿಯ ಪ್ರೀತಿಯನ್ನು ದಕ್ಕಿಸಿಕೊಂಡವರು – ವಿರಳಾತಿವಿರಳ.ಈ ಹೈಸ್ಕೂಲ್ ಹುಡುಗರ ಮನಸ್ಸನ್ನು ಚೆನ್ನಾಗಿ ಅರ್ಥಮಾಡಿಕೊಂಡ (ಸ್ವತಃ ಹೈಸ್ಕೂಲ್ ಅಧ್ಯಾಪಕಿ ಆಗಿದ್ದ) ಕವಯತ್ರಿ ಅರುಧತಿ ರಮೇಶರು – ನನ್ನ ‘ಇನ್ನೊಬ್ಬ’ ಅಮ್ಮ – ಅವರ ಗ್ರಹಿಕೆಯನ್ನು ಹದಿಹರೆಯದ ಹುಡುಗಿಯರ ಬಗ್ಗೆ ‘ಈ ಪರಿಯ ಸೊಬಗು’ ಕವಿತೆಯಲ್ಲಿ ಮತ್ತು ಹುಡುಗರ ಪರಿಯನ್ನು ‘ಬಂಡುಂಬ ಗಿಳಿಗಳು’ ಕವಿತೆಯಲ್ಲಿ ಕಟ್ಟಿ ಕೊಟ್ಟಿದ್ದರು.

ನಾನೂ ಹದಿಹರೆಯಕ್ಕೆ ಕಾಲಿಟ್ಟ ವೇಳೆ ನನ್ನ ಸಹಪಾಠಿ ಹುಡುಗಿಯನ್ನು ಇಷ್ಟಪಟ್ಟಿದ್ದ ಗೆಳೆಯನಿಗೆ ನಾನೇ – ಓದಿದ ಸಾಹಿತ್ಯ ಪುಸ್ತಕಗಳಿಂದ ಕದ್ದ ಸಾಲುಗಳಿಂದ – ಪ್ರೇಮಪತ್ರವನ್ನು ಡಿಕ್ಟೇಷನ್ ಕೊಟ್ಟು ಬರೆಸಿದ್ದೆ! ಆ ಊರ ಪಾರ್ಕಿನಲ್ಲಿ ಅವ ಮರವೊಂದರ ಮೇಲೆ ತನ್ನ ಮತ್ತು ಅವಳ ಇನಿಶಿಯಲ್ ಕೆತ್ತಿದ್ದಾಗ ನಾನೂ ನನ್ನ ಇನಿಶಿಯಲ್ ಸೇರಿಸಿದ್ದೆ! ಮುಂದೆ ಆಕೆಯ ಮದುವೆಗೆ- ಆತನಿಗೆ ಸಂಪರ್ಕವೇ ಇರದೇ ಕರೆ ಇರಲಿಲ್ಲವಾದರೂ – ನಾನು ಆಮಂತ್ರಿತನಾಗಿ ಹೋಗಿ ಭಾಗವಹಿಸಿದ್ದೆ!ನನಗೆ ಆಗಲೂ ಈಗಲೂ ಈ ಪ್ರೀತಿ/ಪ್ರೇಮ ಎಂಬ ಸಂಗತಿಗಳು ಅರ್ಥವೇ ಆಗಿಲ್ಲ! ನಾನು ಕೆಲವರನ್ನ ಇಷ್ಟ ಪಟ್ಟಿರಬಹುದು, ಆದರೆ ಯಾರೂ ನನ್ನ ಇಷ್ಟಪಟ್ಟು ಪ್ರೀತಿ ಅರುಹಲೇ ಇಲ್ಲ! ಪ್ರೀತಿ/ಪ್ರೇಮ ಎಂಬುದು ಕೇವಲ ಸೌಂದರ್ಯದ ಹೊಗಳಿಕೆ, ವ್ಯಕ್ತಿತ್ವದ ಆರಾಧನೆ, ವ್ಯಕ್ತಿಯ ಬಗೆಗಿನ ಮೆಚ್ಚುಗೆ ಅಷ್ಟೇ ಅಲ್ಲ. ಅದು ಸಹ ಪ್ರೇಮಿಯ ಎಲ್ಲಾ ದೌರ್ಬಲ್ಯ ಅರಿತು, ಅವರ ನೋವು ನಿರಾಸೆ, ಅಸಹಾಯಕತೆ ಹತಾಶೆ, ಸೋಲು ಅವಮಾನದ ಸಂದರ್ಭಗಳಲ್ಲಿ ಜೊತೆಗಿರುವ ಬದ್ಧತೆ. ಅದು ಎಲ್ಲಾ ರಿ ಯೂನಿಯನ್ ಗಳಲ್ಲಿ ಭೇಟಿಯಾಗುವ ಪ್ರೇಮಿಗಳಲ್ಲಿ ಇತ್ತೇ!!?ಹಾಗಾಗಿ ನನಗನ್ನಿಸುತ್ತದೆ – ಪ್ರೀತಿ/ಪ್ರೇಮದಲ್ಲಿ ಬೀಳುವವರು 99%, ಆದರೆ ತಾವಂದುಕೊಂಡಂತಹ ಪ್ರೀತಿ/ಪ್ರೇಮ ದಕ್ಕದೇ ಅಬ್ಬೇಪಾರಿಯಾದವರೂ 99%. ನೀವೇನಂತೀರಿ?

‍ಲೇಖಕರು Admin

25 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading