ಟಿ ತಿಮ್ಮಪ್ಪ
ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಅವರ ನಡುವೆ ಇದ್ದುದು ಅಂತಿಂಥ ಪ್ರೀತಿಯಲ್ಲ. ಕಲ್ಲು ತುಂಬಿದ ಬೆಟ್ಟವೇ ಕರಗಿ ನೀರಾಗಿ ಹರಿಯಬಹುದು, ನೀಲಿಸಾಗರವೇ ಒಂದಾನೊಂದು ದಿನ ಆವಿಯಾಗಿ ಒಣಗಿಹೋಗಬಹುದು ಆದರೆ ನಮ್ಮ ಪ್ರೀತಿ ಎಂದೆಂದಿಗೂ ಕರಗಲಾರದು, ಎಂದೆಂದಿಗೂ ಬತ್ತಲಾರದು ಎಂದು ಅವರಿಬ್ಬರೂ ನಂಬಿದ್ದರು. ಅಂತಹ ಅದಮ್ಯ ಪ್ರೀತಿಯ ಬೆಳಕಲ್ಲಿ ಅವರು ಬದುಕಿಗೆ ಪಾದಾರ್ಪಣೆ ಮಾಡಿದ್ದರು.
ವಿದ್ಯಾಥರ್ಿದೆಸೆಯಲ್ಲಿ ಅವರಿಬ್ಬರೂ ಪ್ರೇಮದ ಉತ್ತುಂಗ ಸ್ಥಿತಿಯಲ್ಲಿದ್ದ ಆಗೊಂದು ದಿನ ಅವಳು ಅವನಿಗೆ ಸರಿರಾತ್ರಿಯಲ್ಲಿ ಕರೆ ಮಾಡಿ ‘ಚಿರೂ.. ಯಾಕೋ ನಿದ್ದೇನೆ ಬರ್ತಾ ಇಲ್ಲ ಕಣೋ.. ನಿನ್ನತ್ರ ಓಡೋಡಿ ಬಂದು ನಿನ್ನನ್ನ ಅಪ್ಪಿಕೊಂಡು ಮಲಗೋಣ ಅನ್ನಿಸ್ತಿದೆ..’ ಎಂದಿದ್ದಳು. ಅವನು ಸುಮ್ಮನೆ ನಕ್ಕಿದ್ದ. ಅವನೊಂದು ಬಾರಿ ಬೆಳಕು ಹರಿಯುವ ಮುನ್ನವೇ ಅವಳಿಗೆ ಕಾಲ್ ಮಾಡಿದ್ದ. ‘ಏನೋ.. ಇಷ್ಟು ಬೇಗ ಎದ್ದು ಬಿಟ್ಟಿದ್ದೀಯೇನೋ..? ಇನ್ನೂ ಬೆಳಕೇ ಆಗಿಲ್ಲ.. ಈಗಿನ್ನೂ ನಾಲ್ಕು ಗಂಟೆ..’ ಎಂದು ನಿದ್ರೆಯಲ್ಲಿಯೇ ಮೊಬೈಲ್ ಹಿಡಿದು ಕನವರಿಸಿದ್ದಳು. ‘ಸೋನೂ.. ಸ್ವಲ್ಪ ನಿನ್ನ ರೂಮಿನ ಕಿಟಕಿ ಹತ್ರ ಬಂದು ನೋಡು..’ ಎಂದಿದ್ದನ್ನು ಕಂಡು ದಡಬಡಾಯಿಸಿ ಎದ್ದು ಕಿಟಕಿಯ ಪರದೆ ಸರಿಸಿ ನೋಡಿದ್ದಳು. ಅವನು ಅಲ್ಲಿಯೇ ಕೆಳಗೆ ರಸ್ತೆಯಲ್ಲಿ ರಾತ್ರಿಯುಡುಗೆಯಲ್ಲಿ ಬೈಕಿನ ಮೇಲೆ ಕುಳಿತಿದ್ದ. ಇವಳಿಗೆ ಹೃದಯ ತುಂಬಿ ಬಂದಿತು. ‘ಪ್ಲೀಸ್ ಹೊರಟೋಗೋ.. ಬೆಳಿಗ್ಗೆ ಸಿಕ್ತೀನಿ.. ಪ್ಲೀಸ್..’ ಎಂದು ಬೇಡಿಕೊಂಡಿದ್ದಳು. ಅವನು ಕಿಟಕಿಯಲ್ಲಿ ಅವಳ ಮುಖ ಕಂಡು ಸಂತೃಪ್ತನಾಗಿ ಹೋರಟುಹೋಗಿದ್ದ.
ಅವೆಲ್ಲವೂ ಅವರಿಬ್ಬರಿಗೂ ಆಗಾಗ ನೆನಪಾಗುತ್ತಿರುತ್ತವೆ. ಇಬ್ಬರೂ ಈಗ ಒಟ್ಟಿಗೇ ಬದುಕುತಿದ್ದೇವೆ. ನಮ್ಮ ಪ್ರೀತಿ ಸಾಕಾರವಾಗಿದೆ. ಆದರೆ ಯಾವಾಗಲೂ ಸನಿಹವನ್ನೇ ಬಯಸುತಿದ್ದ ಆಗಿನ ಪ್ರೀತಿಯ ಥ್ರಿಲ್ ಎಲ್ಲಿ ಮಾಯವಾಯಿತೆಂದು ಎಷ್ಟೇ ಯೋಚಿಸಿದರೂ ಅವರಿಗೆ ತಿಳಿಯುತ್ತಿಲ್ಲ. ಅವರ ನಿಷ್ಕಲ್ಮಶ ಪ್ರೇಮಕ್ಕೆ ಜಗತ್ತಿನಲ್ಲಿ ಯಾವುದೂ ಮತ್ತು ಯಾರೂ ಅಡ್ಡಿಯಾಗಿರಲಿಲ್ಲ. ಎಲ್ಲವೂ ನಿರಾತಂಕವಾಗಿ ಸುಸೂತ್ರವಾಗಿ ಮುಗಿದಿತ್ತು. ಅವಳು ನಗುನಗುತ್ತಲೇ ಅವನ ಮನೆಯನ್ನು ಪ್ರವೇಶಿಸಿದ್ದಳು. ಜೊತೆಗಿದ್ದ ಅತ್ತೆ-ಮಾವ, ನಾದಿನಿ ಎಲ್ಲರೂ ಒಳ್ಳೆಯವರೇ. ಆದರೂ ಅವಳಿಗೆ ಎಲ್ಲೋ ಏನೋ ತನ್ನ ಖಾಸಗಿತನವನ್ನು ಕಳೆದುಕೊಂಡಂತೆ ಅನಿಸಿ ಮನಸ್ಸಿಗೆ ಹೇಳಲಾರದ ತಲ್ಲಣವಾಗುತಿತ್ತು. ಬೇರೆ ಮನೆ ಮಾಡೋಣ ಎಂದು ಹಟ ಹಿಡಿದಳು. ಮನಸ್ಸಿಲ್ಲದ ಮನಸ್ಸಿನಿಂದ ಅವನು ತಂದೆ-ತಾಯಿ ತಂಗಿಯರಿದ್ದ ಕೂಡುಕುಟುಂಬದಿಂದ ಹೊರಗೆ ನಡೆದು ಬೇರೆ ಮನೆಯೊಂದನ್ನು ಮಾಡಿದ.
ಅವರಿಬ್ಬರೂ ಕೆಲಸ ಮಾಡುತಿದ್ದರು. ಕೈತುಂಬಾ ಹಣವಿತ್ತು. ಆದರೆ ಮನೆಯನ್ನು ನಿಭಾಯಿಸುವ ಹೊಣೆಗಾರಿಕೆಯನ್ನು ಹೊರುವ ಮನಸ್ಸು ಇಬ್ಬರದೂ ಆಗಿರಲಿಲ್ಲ. ಕೂಡುಕುಟಂಬದಲ್ಲಿ ಸುತ್ತಲಿದ್ದವರಿಗೆ ಹೆದರಿ ಹಾಗೆಯೇ ಗಟ್ಟಿಯಾಗಿದ್ದ ಅವರಿಬ್ಬರ ನಡುವಿನ ಬಿನ್ನಾಭಿಪ್ರಾಯಗಳು ಎಳೆಎಳೆಯಾಗಿ ಬಿಡಿಸಿಕೊಳ್ಳತೊಡಗಿದವು. ಅವನು ಅಷ್ಟೊಂದು ಕೋಪಿಷ್ಟನೆಂದು ಅವಳಿಗೆ ತಿಳಿದೇ ಇರಲಿಲ್ಲ. ಅವಳು ಇಷ್ಟು ಹಟಮಾರಿಯೆಂದು ಅವನಿಗೂ ತಿಳಿದಿರಲಿಲ್ಲ. ಅವರಿಬ್ಬರೂ ಆಗಾಗ ಎದುರಿಗೇ ಒಬ್ಬರನ್ನೊಬ್ಬರು ಬೈದಾಡಿಕೊಳ್ಳತೊಡಗಿದರು. ಪ್ರೀತಿಯ ಬಂಧನದಲ್ಲಿ ಬಂಧಿಯಾಗಿದ್ದ ಸಮಯದಲ್ಲಿ ನಾವಿಬ್ಬರೂ ಎರಡು ದೇಹ ಒಂದೇ ಮನಸ್ಸಿನವರು ಎಂದು ಅಂದುಕೊಳ್ಳುತ್ತಿದ್ದರು. ಆದರೆ ಈಗ ಅವರಿಬ್ಬರ ನಡುವೆ ಇದ್ದ ಅಗಾಧ ಕಂದಕಗಳು ನಿಚ್ಚಳವಾಗಿ ಅವರಿಗೆ ಕಾಣಿಸತೊಡಗಿದವು. ಒಬ್ಬರ ಮೇಲೆ ಇನ್ನೊಬ್ಬರಿಗೆ ಎಂತಹುದೋ ಅಸಹನೆ, ಅನುಮಾನ. ಅದನ್ನು ಮುಕ್ತವಾಗಿ ವ್ಯಕ್ತಪಡಿಸದೇ ಅವರ ಮನಸ್ಸುಗಳಲ್ಲಿ ಅವೆಲ್ಲವೂ ಹಿಮಗಟ್ಟಿದ್ದವು. ಎಂದಾದರೊಂದು ದಿನ ಬದುಕಿನ ತಾಪಕ್ಕೆ ಕರಗಿ ಅವೂ ನೀರಾಗುವ ಕ್ಷಣವೂ ಬಂದೀತೆಂಬ ಕಿಂಚಿತ್ತೂ ಅರಿವು ಅವರಿಗಿದ್ದಂತೆ ತೋರುತ್ತಿರಲಿಲ್ಲ.

ಮದುವೆಯಾದ ಮೇಲೆ ಶುರುವಾದ ದೈಹಿಕ ಒಡನಾಟ ಸ್ವಲ್ಪ ಕಾಲದಲ್ಲಿಯೇ ಅವನಲ್ಲಿ ಅವಳ ಬಗ್ಗೆ ಇದ್ದ ಪ್ರೀತಿಯನ್ನು ಕರಗಿಸಿ ಮೇಲುಗೈ ಪಡೆದಿತ್ತು. ಅವಳಿಗೂ ಅದೊಂದು ಮೈಮನಸ್ಸುಗಳನ್ನು ಮುದಗೊಳಿಸುವ ವೈವಾಹಿಕ ಜೀವನದ ಮೂಲಭೂತ ಕ್ರಿಯೆಯಾಗಿ ಆಪ್ತವಾದರೂ ಮನಸ್ಸು ತುಂಬದ ಕೆಲವೊಂದು ದಿನಗಳಲ್ಲಿ ಅದರ ಸಹವಾಸದಿಂದ ಅತೀವ ಬೇಸರವಾಗುತಿತ್ತು. ಆದರೆ ಅವನಿಗೆ ಮಾತ್ರ ಏನು ಹುಚ್ಚು ಹಿಡಿದಿತ್ತೋ ಅವಳಿಗೆ ತಿಳಿದಿರಲಿಲ್ಲ. ಅವನು ಹೊತ್ತುಗೊತ್ತಿಲ್ಲದ ಸಮಯದಲ್ಲಿ, ಅವಳು ದೈಹಿಕವಾಗಿ ದಣಿದಿದ್ದರೂ ಬಿಡದೆ ಆವರಿಸಿಕೊಳ್ಳುತಿದ್ದ. ಹತ್ತಿರ ಬಿಟ್ಟುಕೊಳ್ಳದಿದ್ದರೆ ಕೋಪಿಸಿಕೊಳ್ಳುತಿದ್ದ. ಆಗೆಲ್ಲಾ ಅವಳು ಸುಮ್ಮನೆ ಸೂರು ನೋಡುತ್ತಾ ಮರದ ಕೊರಡಿನಂತೆ ಬಿದ್ದುಕೊಳ್ಳುತಿದ್ದಳು.
ಅವರಿಬ್ಬರೂ ಮಗು ಈಗಲೇ ಬೇಡವೆಂದು ನಿರ್ಧರಿಸಿದ್ದರು. ಅವರಿಬ್ಬರಿಗೂ ಅವರ ಕುಟುಂಬವನ್ನು ಹೊರತುಪಡಿಸಿ ಅವರದೇ ಆದ ಮಹಾತ್ವಾಕಾಂಕ್ಷೆಗಳಿದ್ದವು. ಏನೆಲ್ಲಾ ಸಾಧಿಸಬೇಕು, ಎಷ್ಟೆಲ್ಲಾ ಎತ್ತರಕ್ಕೇರಬೇಕು, ನೋಡುವರ ಕಣ್ಣುಗಳಲ್ಲಿ ಮತ್ಸರ ತುಂಬಿಸಬೇಕೆಂಬ ಕನಸುಗಳು ಅವರ ಮನಸ್ಸುಗಳಲ್ಲಿ ಮನೆ ಮಾಡಿದ್ದವು. ಎಲ್ಲಾ ಹಸಿವುಗಳನ್ನು ತೀರಿಸಿಕೊಳ್ಳಲು ಅವರಿಗೆ ಒಟ್ಟಿಗೆ ಇರಲೊಂದು ಮನೆ ಮಾತ್ರ ಬೇಕಾಗಿತ್ತು. ದಿನಗಳು ಕಳೆದಂತೆಲ್ಲಾ ಅವರಿಗೆ ತಾವು ಪ್ರೀತಿಸಿ ಮದುವೆಯಾದವರು ಎಂಬುದು ಮರತೇಹೋಗಿತ್ತು. ಪ್ರೀತಿಯೆಂದರೇನು ಎಂಬುದರ ಬಗ್ಗೆ ಹೊಸ ವ್ಯಾಖ್ಯಾನಗಳಿಗಾಗಿ ಅವರು ಹುಡುಕಾಡುತಿದ್ದರು. ಅಪರಿಮಿತ ಅಸಮಾಧಾನ, ಭಿನ್ನಾಭಿಪ್ರಾಯಗಳ ನಡುವೆ ಅವರು ಒಟ್ಟಿಗೇ ಒಂದು ವಿಪರ್ಯಾಸದಂತೆ ಬದುಕುತಿದ್ದರು. ಮನೆಯ ಒಳಗಿನ ಬದುಕಿಗಿಂತ ಅವರಿಗೆ ಮನೆಯ ಹೊರಗಿನ ಬದುಕೇ ಹೆಚ್ಚು ಆಪ್ತವಾಗತೊಡಗಿತ್ತು. ಯಾಕೆಂದರೆ ಅವರು ತಮ್ಮ ಹೆಚ್ಚು ಸಮಯವನ್ನು ಮನೆಯಿಂದ ಹೊರಗೇ ಕಳೆಯುತಿದ್ದರು.
ಪ್ರೀತಿ ತುಂಬಿದ ಅವನ ಮನಸ್ಸಿಗೆ ಅವಳೊಬ್ಬಳೇ ಅಪ್ಸರೆಯಾಗಿ ಕಾಣಿಸುತಿದ್ದಳು. ಆದರೆ ಇತ್ತೀಚೆಗೆ ಯಾಕೋ ಏನೋ ಅವನಿಗೆ ಅವಳನ್ನು ಹೊರತುಪಡಿಸಿ ಹೊರಗೆ ಕಾಣಿಸುತಿದ್ದ ಯುವತಿಯರೆಲ್ಲ ಸುಂದರವಾಗಿ ಕಾಣುತಿದ್ದರು. ಅವಳಿಗೂ ಅಷ್ಟೆ. ಆಗೆಲ್ಲಾ ಅವನೊಬ್ಬನೇ ಮನ್ಮಥನಾಗಿದ್ದ. ಈಗೀಗ ಯಾರಾದರೂ ಸುಂದರಯುವಕನೊಬ್ಬ ಕಾಣಿಸಿ ಮರೆಯಾದಾಗ ಅವಳಿಗೂ ಒಂಥರಾ ಚೆನ್ನಾಗಿದ್ದಾನಲ್ಲವಾ ಅಂತ ಅನ್ನಿಸುತಿತ್ತು. ಆದರೆ ಅವರಿಬ್ಬರೂ ಎಂದೂ ತಮ್ಮ ಮನಸ್ಸಿನ ಇಂತಹ ಭಾವನೆಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಿರಲಿಲ್ಲ. ಅವರ ಮನಸ್ಸಿನಲ್ಲಿ ಅವರಿಗೇ ತಿಳಿಯದಂತೆ ಎಷ್ಟೆಷ್ಟೋ ರಹಸ್ಯಗಳು ಅಡಗಿಕೊಳ್ಳತೊಡಗಿದವು. ಅವರು ಅವುಗಳನ್ನೆಲ್ಲಾ ಏಕಾಂಗಿಯಾಗಿದ್ದಾಗ ಮಾತ್ರ ಹೊರತೆಗೆದು ಆಸ್ವಾದಿಸುತಿದ್ದರು. ಅವರಿಬ್ಬರಿಗೂ ಅವರ ಬದುಕಿನ ಬಗ್ಗೆ ಬದ್ಧತೆಯೇ ಇಲ್ಲದೆ ಜೀವನ ಯಾಂತ್ರಿಕವಾಗಿ ಸಾಗತೊಡಗಿತು. ತಾವು ಉತ್ಕಟವಾಗಿ ಪ್ರೀತಿಸಿದ್ದುದು ಯಾತಕ್ಕಾಗಿ ಮತ್ತು ಏನನ್ನು ಎಂದು ತಿಳಿಯದೆ ಅಂದಿನ ಪ್ರೀತಿಯನ್ನು ನೆನೆದಾಗಲೆಲ್ಲಾ ಅವರಿಗೆ ನಗು ಬರುತಿತ್ತು. ಅದೊಂದು ಮತ್ತೆ ಬಾರದ ಸವಿಗನಸೆಂದೇ ಅವರಿಬ್ಬರಿಗೂ ಭಾಸವಾಗತೊಡಗಿತು.
ಬದುಕಿನ ಸಣ್ಣಪುಟ್ಟ ಘಟನೆಗಳು ಅವರ ಮೇಲೆ ಗಾಢವಾದ ಪರಿಣಾಮವನ್ನು ಉಂಟುಮಾಡತೊಡಗಿದವು. ಅದೊಂದು ಕೆಟ್ಟದಿನ ಅವಳು ತನ್ನ ಕಛೇರಿಯಲ್ಲಿ ಬಹುಮುಖ್ಯವಾದ ಕೆಲಸದಲ್ಲಿ ತೊಡಗಿಕೊಂಡಿದ್ದಳು. ಕೆಲಸ ಮುಗಿಸುವಷ್ಟರಲ್ಲಿ ರಾತ್ರಿ ಒಂಬತ್ತು ಗಂಟೆಯಾಗಿತ್ತು. ಒಬ್ಬಳೇ ನಡೆದು ಬಸ್ ನಿಲ್ದಾಣದ ಬಳಿ ಬಂದು ಸಿಟಿಬಸ್ಸಿಗಾಗಿ ಕಾಯತೊಡಗಿದ್ದಳು. ಅಷ್ಟರಲ್ಲಿ ಅವಳ ಜೊತೆಯೇ ಕೆಲಸ ಮಾಡುತಿದ್ದ ಸಹೋದ್ಯೋಗಿಯೊಬ್ಬನ ಬೈಕು ಕಾಣಿಸಿ, ಪ್ಲೀಸ್ ಸ್ವಲ್ಪ ಮನೆಯ ಬಳಿ ಡ್ರಾಪ್ ಮಾಡಿ ಎಂದು ಬೇಡಿಕೊಂಡು ಅವನ ಬೈಕು ಏರಿಕೊಂಡು ಮನೆಯವರೆಗೆ ಬಂದಿದ್ದಳು. ಆಗಲೇ ಮನೆಗೆ ಬಂದು ಇವಳು ಇನ್ನೂ ಬಂದಿಲ್ಲವೆಂಬ ಅಸಮಾಧಾನದಿಂದಲೇ ಅವನು ಒಲೆಯ ಮೇಲೆ ಕುಕ್ಕರ್ ಇಟ್ಟಿದ್ದ. ಕುಕ್ಕರಿನಲ್ಲಿನ ಒತ್ತಡ ಹೇರಿದಂತೆ ಅವನ ಮನಸ್ಸಿನ ಒತ್ತಡವೂ ಏರಿ ಮನಸ್ಸು ಇನ್ನೇನು ಸಿಡಿದುಹೋಗುವ ಹಂತದಲ್ಲಿತ್ತು. ಅಗ ಅವಳು ಮನೆಗೆ ಬಂದಳು. ಅದೂ ಯಾರದೋ ಒಬ್ಬನ ಬೈಕಿನ ಹಿಂದೆ ಕುಳಿತು ಬಂದಿದ್ದಳು. ಅವನಿಗೆ ಅಷ್ಟೇ ಸಾಕಾಗಿತ್ತು. ಅವನಿಗೆ ಅವಳನ್ನು ಕಂಡು ಮೈಯ್ಯೆಲ್ಲಾ ಉರಿದುಹೋಯಿತು. ಅವನು ಯಾಕೆ, ಏನು, ನಿನ್ನ ಕಷ್ಟಗಳೇನು ಎಂದು ಅವಳನ್ನು ಕೇಳಲೇ ಇಲ್ಲ. ಅವಳೂ ಹೇಳಲೇ ಇಲ್ಲ. ಅವಳಿಗೆ ಹೇಳುವುದೂ ಬೇಕಾಗಿರಲಿಲ್ಲ. ಬೆಳಗಿನಿಂದ ಒಂದೇ ಸಮನೆ ಕೆಲಸ ಮಾಡಿ ಆಯಾಸವಾಗಿದ್ದರಿಂದ ಸುಮ್ಮನೆ ಬೇಸರವಾಗಿ ಉಟ್ಟಬಟ್ಟೆಯಲ್ಲಿಯೇ ಹಾಸಿಗೆಯಲ್ಲಿ ಉರುಳಿದಳು. ಅವನ ಮನಸ್ಸಿನಲ್ಲಿ ಸಂಶಯದ ಹುತ್ತ ಬೆಳೆಯಲಾರಂಭಿಸಿತು. ಮೂರು ದಿನ ಅವನು ಅವಳನ್ನು ಮಾತನಾಡಿಸುವ ಗೋಜಿಗೇ ಹೋಗಲಿಲ್ಲ. ಅವನ ದಪ್ಪಗಾಗಿದ್ದ ಮೋರೆ ನೋಡಿ ಅವಳೂ ಅವನನ್ನು ಮಾತನಾಡಿಸಲೇ ಇಲ್ಲ. ಹಾಸಿಗೆಯಲ್ಲಿ ಒಟ್ಟಿಗೇ ಮಲಗಿದ್ದರೂ ಅವರಿಬ್ಬರ ಬೆನ್ನುಗಳು ಮಾತ್ರ ಒಂದಕ್ಕೊಂದು ಮುಖಾಮುಖಿಯಾಗಿದ್ದವು.
ಅದಾದ ನಂತರ ಅವರಿಬ್ಬರ ನಡುವೆ ದೈನಂದಿನ ಬದುಕನ್ನು ಕಳೆಯಲು ಎಷ್ಟು ಬೇಕೋ ಅಷ್ಟು ಮಾತುಕತೆಗಳು ಮಾತ್ರ ನಡೆಯುತಿದ್ದವು. ಅವನು ಏನೂ ಕೆಲಸವಿಲ್ಲದಿದ್ದರೂ ಆಗಾಗ ತಡವಾಗಿ ಮನೆಗೆ ಬರತೊಡಗಿದ. ಮನೆಗೆ ಬಂದರೂ ತನ್ನ ಲ್ಯಾಪ್ಟಾಪಿನಲ್ಲೋ ಮೊಬೈಲಿನಲ್ಲೋ ಹುದುಗಿಹೋಗುತಿದ್ದ. ಅಂತಹ ದಿನಗಳಲ್ಲಿ ಮನೆಯ ಕೆಲಸವೆಲ್ಲಾ ಅವಳೊಬ್ಬಳ ಮೇಲೆ ಬೀಳುತಿತ್ತು. ಆದರೂ ಅವಳು ಅದನ್ನು ಸಹಿಸಿಕೊಂಡು ಅವನೊಂದಿಗೆ ಬದುಕು ಸಾಗಿಸುತಿದ್ದಳು. ಅವರಿಬ್ಬರ ನಡುವೆ ಮುಕ್ತ ಸಂಹವನದ ಕೊರತೆಯಿಂದಾಗಿ ಅವರ ಜೀವನ ನಲುಗತೊಡಗಿತು.
ಅದೊಂದು ಕರಾಳ ದಿನ ಅವನು ತಡವಾಗಿ ಮನೆಗೆ ಬಂದ. ಅವಳು ಮೈಹುಷಾರಿಲ್ಲದೆ ಹೊದ್ದುಕೊಂಡು ಮಲಗಿದ್ದಳು. ಅವನಿಗೆ ಅದು ತಿಳಿದಿರಲಿಲ್ಲ. ಅಡುಗೆ ಮನೆಯಲ್ಲಿ ಪಾತ್ರೆಗಳೆಲ್ಲಾ ಸಿಂಕಿನಲ್ಲಿ ಮುಸುರೆ ಕಟ್ಟಿಕೊಂಡು ಹಾಗೆಯೇ ಬಿದ್ದಿದ್ದವು. ಮನೆಯಲ್ಲಿ ತಿನ್ನಲು ಏನೂ ಇರಲಿಲ್ಲ. ಇಡೀ ಮನೆಯೇ ಅಸ್ತವ್ಯಸ್ತವಾದಂತೆ ಅವನಿಗೆ ಕಾಣಿಸಿತು. ಅವನು ಹೊದ್ದು ಮಲಗಿದ್ದ ಅವಳ ಬಳಿ ಬಂದು ‘ಅಡುಗೆಯನ್ನೂ ಮಾಡದೇ ಸುಖವಾಗಿ ಮಲಗಿದ್ದೀಯಲ್ಲಾ.. ನಾನು ಹಸಿದು ಬಂದಿದ್ದೇನೆ..’ ಎಂದು ಕಿರುಚಿದ. ಅವಳು ಗಾಬರಿಯಾಗಿ ಎದ್ದವಳೇ ‘ನೀನು ಇಷ್ಟು ಹೊತ್ತು ಎಲ್ಲಿ ಹೋಗಿದ್ದೆ..’ ಎಂದು ತುಸು ಕಟುವಾಗಿಯೇ ಪ್ರಶ್ನಿಸಿದಳು. ಅವಳನ್ನು ಬಗ್ಗುಬಡಿಯಲೇಬೇಕೆಂಬ ತೀಮರ್ಾನ ತೆಗೆದುಕೊಂಡಿದ್ದ ಅವನು ‘ಕಂಪೆನಿಯಲ್ಲಿ ಕೆಲಸ ಮುಗಿಸುವುದು ತಡವಾಯಿತು. ನನ್ನ ಗೆಳತಿಯೊಬ್ಬಳನ್ನು ಮನೆಗೆ ತಲುಪಿಸಲು ಹೋಗಿದ್ದೆ..’ ಎಂದು ಸುಳ್ಳು ಹೇಳಿದ. ಅವಳ ಮೈಯ್ಯೆಲ್ಲಾ ಬೆಂಕಿಯಾಯಿತು. ‘ಮನೆಯಲ್ಲಿ ನಾನು ಜ್ವರ ಬಂದು ಸಾಯುತಿದ್ದೇನೆ. ಒಂದು ಲೋಟ ನೀರು ಕೊಡುವವರು ಯಾರೂ ಇಲ್ಲ. ನಿನಗೆ ನಿನ್ನ ಗೆಳತಿಯೇ ಹೆಚ್ಚಾದಳೇನು..?’ ಅವಳು ಅವನ ಮೇಲೆ ಕೆಂಡ ಕಾರಿದಳು. ಅವನ ಸಂಯಮ ಮೀರಿತು. ‘ನಿನಗೆ ಹುಷಾರಿಲ್ಲವೆಂದು ನನಗೇನಾದರೂ ಕನಸು ಬಿದ್ದಿತ್ತೇ.. ಸುಮ್ಮನೆ ನಾಟಕವಾಡುವುದು ನನಗೆ ಇಷ್ಟವಾಗುವುದಿಲ್ಲ..’ ಎಂದು ತಣ್ಣಗೆ ನುಡಿದ. ಅವಳ ಸಹನೆಯೂ ಕರಗಿಹೋಯಿತು. ಮಾತಿಗೆ ಮಾತು ಬೆಳೆಯಿತು. ಅಕ್ಕಪಕ್ಕದ ಮನೆಯವರ್ಯಾರಾದರೂ ಕೇಳಿಸಿಕೊಂಡಾರು ಎಂಬ ಕಿಂಚಿತ್ತೂ ಭೀತಿಯಿಲ್ಲದೆ ಅಲ್ಲಿಯವರೆಗೆ ಮನಸ್ಸಿನಲ್ಲಿ ಮಡುಗಟ್ಟಿದ್ದ ಅಸಹನೆ, ಅಸಮಾಧಾನ, ಕೋಪತಾಪಗಳೆಲ್ಲಾ ಇಬ್ಬರ ಬಾಯಿಗಳ ಮೂಲಕ ಶಬ್ದಗಳಾಗಿ ಹೊರಬಂದವು.
ಅವರಲ್ಲಿದ್ದ ಶಬ್ದಭಂಡಾರಗಳು ಎಲ್ಲವೂ ಖಾಲಿಯಾದ ಮೇಲೆ ಅಂದು ರಾತ್ರಿ ಸರಿಹೊತ್ತಿನಲ್ಲಿ ಇಬ್ಬರೂ ಒಟ್ಟಿಗೇ ಕುಳಿತು ಮುಕ್ತವಾಗಿ ಚರ್ಚಿಸಿ ಅವರ ಜೀವನದ ಗತಿಯನ್ನೇ ಬದಲಿಸುವ ಮಹತ್ವದ ನಿರ್ಧಾರವೊಂದನ್ನು ತೆಗದುಕೊಂಡರು.






0 Comments