ಪ್ರೀತಿಸಿದೋಳ್ನ ಮರಿಬೇಕು ಅಂದ್ರೆ ಕಟ್ಕೊಂಡೋಳ್ನ ಪ್ರೀತಿಸ್ಬೇಕು…

ಮಂಜುನಾಥ. ಅಮರಗೋಳ

ಆವತ್ತು ಹುಣ್ಣಿಮೆ ಬೆಳದಿಂಗಳು ಮೌಂಟ್ ಎವರಡಸ್ಟನಲ್ಲಿನ ಐಸ್ ತುಂಡುಗಳನ್ನು ಎಲ್ಲೆಡೆ ಹರಡಿದಂತೆ ಬಾನಂಗಳದಿಂದ ಬೆಳಕು ಚೆದುರಿತ್ತು. ಅಮ್ಮನೊಂದಿಗೆ ಜಗಳ ಕಾಯ್ದು ಮನಸ್ಸಿನ ಅಳಲನ್ನು ಪ್ರಕೃತಿಯೊಡನೆ ತೋಡಿಕೊಳ್ಳಲು ಹೊರಗಡೆ ಬಂದಿದ್ದೆ. ಆದ್ರೆ ನನ್ನ ಗ್ರಹಚಾರವೇನೋ? ಯಾವುದೊಂದು ಬಸ್ಸು, ಟೆಂಪೊಗಳಿಲ್ಲದ್ದರಿಂದ ಕರಿ ಮೋಡದ ಸುತ್ತ ಕಣ್ಣು ಕುಕ್ಕುವ ಬೆಳ್ಳಿ ಚುಕ್ಕಿಯನ್ನು ಕಣ್ಣ ರೆಪ್ಪೆಯನ್ನು ಕದಲಿಸದೇ ನೋಡುತ್ತ ಕುಳಿತಿದ್ದೆ. ಎಡಗಡೆ ಸ್ವಲ್ಪ ದೂರದಲ್ಲಿ ಆಟೋವೊಂದು ನಿಂತಂಗಾಯ್ತು. ಪಕ್ಕದಲ್ಲಿ ಸಿಗರೇಟ ಸೇದುತ್ತ ತಲೆಯೆತ್ತರಕ್ಕೆ ಸುರುಳಿಯಾಗಿ ಓರ್ವ ಹೊಗೆ ಉಗುಳುತ್ತಿದ್ದ. ಎಸ್.. ಅವ್ನೆ ಆಟೋ ಡ್ರೈವರ್ ಅಂತಾ ಗೊತ್ತಾಯ್ತು. ‘ ಏ..ಆಟೋ,ಇಲ್ಲೇ ಪಕ್ಕದಲ್ಲಿ ಹೋಗ್ಬೇಕು ಬರ್ತೀಯಾ?’ ಅಂತಾ ವಿಜಿಲ್ ಹಾಕಿದೆ. ಬೆರಳಿನ ನಡುವೆ ಉಸಿರುಗಟ್ಟುತ್ತಿದ್ದ ಸಿಗರೇಟಿನ ಅಲ್ಪಾಯುಷ್ಯವನ್ನು ಬಲಗಾಲ ಕೆಳಗೆ ಹೊಸಕು ಹಾಕಿ ನನ್ನ ಹತ್ತಿರ ಆಟೋ ಬಂದು ಸದ್ದು ಮಾಡಿದಾಗ ಜಸ್ಟ್ ಎರಡೇ ನಿಮಿಷಗಳು ಕಳೆದಿತ್ತು.
ಆಟೋದಲ್ಲಿ ಕುಳಿತು ಮೂರ್ನಾಲ್ಕು ಹೆಜ್ಜೆ ದೂರ ಹೋಗಿರಲಿಲ್ಲ. ಯಾಕೆ, ಸಾರ್.. ಈ ಟೈಂನಲ್ಲಿ ಏಕಾಂಗಿಯಾಗಿ ಹೊರಗಡೆ ಹೋಗ್ತಿದ್ದೀರಲ್ಲಾ? ಲವ್ ಪ್ರಾಬ್ಲಮ್ಮಾ! ಅಂತಾ ಮೊಣಚು ಮಾತನ್ನಾಡುತ್ತ ನನ್ನ ಚಿಂತೆಯ ಕಂತೆಗೆ ಸ್ವಲ್ಪ ಮಟ್ಟಿನ ಕಡಿವಾಣ ಹಾಕಿದ. ಛೇ..ಛೇ..ಹಾಗೇನಿಲ್ಲ ಮಾರಾಯಾ, ಮನೇಲಿ ಅಮ್ಮನೊಂದಿಗೆ ಕೊಂಚ ಮುನಿಸು ಎನ್ನುತ್ತ ನೇತುಹಾಕಿದ ಕನ್ನಡಿಗೆ ನನ್ನ ಬಾಡಿದ ಮುಖ ತೋರಿಸಿದೆ. ಅಲ್ಲಿ ‘ಪ್ರೀತಿಸಿದೋಳ್ನ ಮರಿಬೇಕು ಅಂದ್ರೆ ಕಟ್ಕೊಂಡೋಳ್ನ ಪ್ರೀತಿಸ್ಬೇಕು’ ಅನ್ನೋ ಅಕ್ಷರಗಳು ಕಣ್ಣಿಗೆ ರಾಚುತ್ತಿದ್ದವು. ಏನಿದು? ಸಾರ್.. ಎಂದು ರಾಗವೆಳೆದೆ. ಏನ್ಮಾಡೋದು ಸಾರ್..ಕಳೆಗುಂದಿದ ಹೃದಯದಲ್ಲಿನ ಭಾವನೆಗಳು ಅಂತಃಪುರದ ಬತ್ತಳಿಕೆಯಿಂದ ಅಕ್ಷರಗಳಾಗಿ ಹೊರಬಂದಿವೆ ಎಂದು ಒಗಟು ಒಗಟಾಗಿ ಹೇಳಿದ. ನುಗ್ಗಿಕೇರಿ ಹನುಮಪ್ಪನಾಣೆ ನನಗೇನೂ ತಿಳಿಯಲಿಲ್ಲ. ತಲೆಕೆರೆದುಕೊಳ್ಳುತ್ತ ಹಾಗೇ ಕುಳಿತೆ.

ಸಾರ್..ನಮ್ಮಿಬ್ಬರದು ನಾಲ್ಕು ವರ್ಷದ ಪ್ರೀತಿ ಎನ್ನುತ್ತ ತನ್ನ ಪ್ರೇಮಪುರಾಣಕ್ಕೆ ಮುನ್ನುಡಿ ಬರೆದ. ಪಕ್ಕದ್ಮನೆ ಹುಡುಗಿಯನ್ನು ಉಸಿರಿಗಿಂತ ಹೆಚ್ಚಾಗಿ ಪ್ರೀತಿಸಿದವ್ನು ನಾನು. ಈ ಅಡ್ನಾಡಿ ಮನಸ್ಸು ಆಗ ಒಂದು ಘಳಿಗೇನೂ ಅವಳನ್ನು ಬಿಟ್ಟಿರ್ತಿಲಿಲ್ಲ. ಹೀಗಾಗಿ ಬ್ರೆಷ್ ಗೆ ಪೇಸ್ಟ್ ಕಚ್ಕೊಂಡಂಗೆ ನಾ ಅವಳ ಹತ್ತಿರವೇ ಇರ್ತಿದ್ದೆ. ಮುಂಗಾರಿನ ಮೇಘರಾಜನಲ್ಲಿ ನೆನೆದರೆ ಎಲ್ಲ ನೆನಹುಗಳು ಹಸಿಹಸಿ ಎಂದುಕೊಂಡು ಅವಳೊಂದಿಗೆ ಕಳೆದ ಕ್ಷಣಗಳನ್ನು ಮನಸ್ಸಲ್ಲೇ ಸವಿಯುತ್ತ ಆವತ್ತು ಬಾನಿನಿಂದ ಸ್ವಾತಿಮಳೆ ಹನಿಗಳಿಗೆ ಮೈಯೊಡ್ಡಿದ್ದನ್ನು ಹೇಳಿದ. ಆದರೆ
ಈ ಜಾತಿ, ಅಂತಸ್ತು, ಐಶ್ವರ್ಯಗಳೆಂಬ ಆಡಂಬರದ ತೋರಿಕೆಗಳು ನನ್ನವಳ ತಂದೆ-ತಾಯಿಗಳ ಮನಸ್ಸಿನ ಮೂಲೆಯಲ್ಲಿ ಗಾಢವಾಗಿ ಮೂಡಿ ಪವಿತ್ರ ಪ್ರೀತಿಗೆ ಮಂಕು ಕವಿದವು. ಅಮರ ಪ್ರೀತಿಯನ್ನು ಬಲಿಕೊಟ್ಟು ಮಗಳ ಆಸೆಗೆ ಬೆಂಕಿ ಹಚ್ಚಿ (ಮದುವೆ ಮಾಡಿ) ಮರ್ಯಾದೆ ಎಂಬ ಸೌಧ ಕಟ್ಟಿ ನಮ್ಮಿಬ್ಬರ ಜೀವನವನ್ನೇ ಕತ್ತಲನ್ನಾಗಿಸಿದರು. ಕನಸೆಂಬ ತೂಗುಮಂಚದ ಮೇಲೆ ಅವಳೊಂದಿಗೆ ಕಳೆದ ನೆನಪುಗಳ ಹೂರಣವನ್ನು ಬಿಚ್ಚಿಟ್ಟು ದಿಗಂತದಂಚಿನವರೆಗೂ ಜೀಕು ಹೊಡೆದದ್ದೇ ತಪ್ಪಾಯಿತೇನೋ? ಅವಳ ಎಡಗೈ ಕಿರುಬೆರಳಿಗೆ ನನ್ನ ಬಲಗೈ ಕಿರುಬೆರಳನ್ನು ಬಂಧಿಸಿ ಅಗ್ನಿದೇವನ ಸುತ್ತ ಪ್ರದಕ್ಷಿಣೆ ಹಾಕುವ ಭವಿಷ್ಯತ್ತನ್ನು ವರ್ತಮಾನದಲ್ಲಿ ಮೆಲಕು ಹಾಕಿದ್ದೇ ಯಡವಟ್ಟಾಯಿತೇನೋ? ಆದರೆ ಈಗ ನನ್ನವಳ ಚಿಂತೆಯಲ್ಲಿ ಕೊರಗುವುದಕ್ಕಿಂತ ನನ್ನನ್ನೇ ನಂಬಿ ಬಂದವಳ ಪ್ರೀತಿಯನ್ನು ಪ್ರೀತಿಸುತ್ತಿರುವೆ ಎಂದು ಹೇಳುತ್ತಿದ್ದಂತೆ ಮನಸ್ಸು ಭಾರವೆನಿಸಿ ಕಣ್ಣರೆಪ್ಪೆಗೆ ಅಂಟಿಕೊಂಡಿದ್ದ ಹನಿಗಳು ಧರೆಗುರುಳುತ್ತಿರುವುದನ್ನು ನಾ ಆವತ್ತು ಅವನ ಮುಖದಲ್ಲಿ ಕಂಡೆ.
ಹೋಗ್ಲಿ ಬಿಡಿ ಸಾರ್.. ಕಳೆದು ಹೋಗಿರುವುದರ ಬಗ್ಗೆ ಚಿಂತಿಸಿ ಫಲವಿಲ್ಲ. ಸೌಂದರ್ಯದ ಕನಸು ಕಂಡು ಜೀವನ ಹಾಳು ಮಾಡುವುದಕ್ಕಿಂತ ಜೀವನದ ಬಗ್ಗೆ ಕನಸು ಕಂಡು ಜೀವನಕ್ಕೆ ಸೌಂದರ್ಯ ತುಂಬೋಣ ಎನ್ನುತ್ತ ಬಿಕ್ಕಿ ಅಳುತ್ತಿರುವ ಹೃದಯವನ್ನು ಸಮಾಧಾನಿಸಿದೆ. ಅವನ ವೇದನೆಯನ್ನು ಕೇಳಿ , ಯಾಕೋ ಆತನನ್ನು ಡ್ರೈವರ್/ ಸಾರ್.. ಅನ್ನೋದಕ್ಕೆ ಮನಸ್ಸು ಸುತಾರಾಮ್ ಒಪ್ಪಲಿಲ್ಲ. ಯಾಕಂದ್ರೆ ಅವ್ನು ನನ್ನ ಮನಸ್ಸಿಗೆ ಗಾಳ ಹಾಕಿದ ಸ್ನೇಹಿತರ ಸಾಲಿನಲ್ಲಿ ಒಬ್ಬನಾಗಿಬಿಟ್ಟಿದ್ದ. ಬಲಗೈ ಮುಷ್ಟಿಯಲ್ಲಿ ನೂರರ ನೋಟನ್ನಿಟ್ಟು ಕೈ ಕುಲುಕುತ್ತಿದ್ದಾಗ “ಅಂಗೈಯಷ್ಟಿರೋ ಹೃದಯವನ್ನು ಮುಚ್ಚಿಡಬಹುದು ಆದರೆ ಅದರೊಳಗಿನ ಭಾವನೆಗಳನ್ನು ಮುಚ್ಚಿಡೋಕಾಗೊಲ್ಲ” ಸಾರ್.. ಎಂದಾಗ ಎದೆಯೊಳಗೆ ಬಚ್ಚಿ ಕುಳಿತಿದ್ದ ನನ್ನ ಹೃದಯವನ್ನು ಹಿಂಡಿದಂತಾಯ್ತು.
 

‍ಲೇಖಕರು G

December 25, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Prabhakar M. Nimbargi

    Nice effort. “ಅಂಗೈಯಷ್ಟಿರೋ ಹೃದಯವನ್ನು ಮುಚ್ಚಿಡಬಹುದು ಆದರೆ ಅದರೊಳಗಿನ ಭಾವನೆಗಳನ್ನು ಮುಚ್ಚಿಡೋಕಾಗೊಲ್ಲ” Well attempted.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: