ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಿಯ ಶಿವಪ್ರಕಾಶ್, ಹಾಗೆ ಒರಟಾದ ಕೋಲಿನಿಂದ ಹೊಡೆಯಬಾರದು ನೋಡಾ. . .

ತುಮಕೂರಿನಲ್ಲಿ ನಾಟಕದ ಮನೆ ಏರ್ಪಡಿಸಿದ್ದ ಸಂಕಿರಣವೊಂದರಲ್ಲಿ ರು ಖ್ಯಾತ ನಾಟಕಕಾರ ಎಚ್ ಎಸ್ ಶಿವಪ್ರಕಾಶ್  ‘ಪ್ರಾದೇಶಿಕ ರಂಗಭೂಮಿ  ಸಬಲಗೊಳಿಸುವ ಸಲುವಾಗಿ ಹುಟ್ಟಿಕೊಂಡ ರಂಗ ಮಂಡಲಗಳು ರಮ್ ಮಂಡಲಗಳಾಗಿವೆ. ನೀನಾಸಂ ನಾನೀಸಂ ಆಗಿದೆ’ ಎಂದು ಕಿಡಿ ಕಾರಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.

ನೀನಾಸಂ ಹಣ ಎತ್ತುವ ಸಂಘಟನೆಯಾಗಿದೆ ಎಂದು ಸಂಕಿರಣದಲ್ಲಿ ಆರೋಪಿಸಿರುವ ಅವರು ಸ್ಥಳೀಯ ಸಂಸ್ಕೃತಿ, ರಂಗ ಚಟುವಟಿಕೆ ಉಳಿಸಲು ಫೋರ್ಡ್ ಸಂಸ್ಥೆಯಿಂದ ಉದಾರ ನೆರವು ಪಡೆದ ನೀನಾಸಂ ವರ್ಷಕ್ಕೆ ಒಂದು ಮಕ್ಕಳ ನಾಟಕ ಸೇರಿ ಮೂರು ನಾಟಕಗಳನ್ನಾಡಿಸುತ್ತಾ ಹಣ ಎತ್ತುವ ಕೆಲಸಕ್ಕಷ್ಟೇ ಸೀಮಿತವಾಗಿದೆ. ‘ಒಂದು ಅಕಾಡೆಮಿಗೆ ಕೊಡುವಷ್ಟು ಹಣವನ್ನು ಸರ್ಕಾರವು ನೀನಾಸಂಗೆ ನೀಡುತ್ತಿದೆಯಾದರೂ ಮುಂಬೈ ಸಂಸ್ಥೆಯೊಂದರ ಜೊತೆ ಸೇರಿ ವಿದೇಶಿ ಸಂಸ್ಥೆಗಳಿಂದ ಹಣ ಎತ್ತುವಳಿ ಬಗ್ಗೆ ತಲೆ ಕೆಡೆಸಿಕೊಂಡಿದೆಯೆ ಹೊರತು ಸ್ಥಳೀಯ ರಂಗಭೂಮಿ ಸಬಲೀಕರಣ ಅದರ ಆದ್ಯತೆಯಾಗಿಲ್ಲ’ ಎಂದಿದ್ದಾರೆ ಎಂದು ವರದಿಯಾಗಿದೆ.

ಪ್ರಜಾವಾಣಿ ವರದಿ ಇಲ್ಲಿದೆ-

ಶಿವಪ್ರಕಾಶ್ ಅವರ ನೋಟದ ಬಗ್ಗೆ ಈ ಬಾರಿಯ ಜುಗಾರಿ ಕ್ರಾಸ್. ಜುಗಾರಿ ಕ್ರಾಸ್ ಹೇಳಿ ಕೇಳಿ ಚರ್ಚೆಗಾಗಿ ಇರುವ ಅಂಗಳ.

ಈ ಬಗ್ಗೆ ರಂಗಕರ್ಮಿ, ಹೆಸರಾಂತ ನಿರ್ದೇಶಕ ನಟರಾಜ ಹೊನ್ನವಳ್ಳಿ ಕಳಿಸಿದ ಪ್ರತಿಕ್ರಿಯೆ ಇಲ್ಲಿದೆ.

ನಟರಾಜ ಹೊನ್ನವಳ್ಳಿ ಅವರ ಪ್ರತಿಕ್ರಿಯೆಯ ಬಗ್ಗೆಯೂ ಶಿವಪ್ರಕಾಶ್ ನೋಟದ ಬಗ್ಗೆಯೂ ಚರ್ಚೆಗೆ ಸ್ವಾಗತ ಬನ್ನಿ ಭಾಗವಹಿಸಿ.

ನಟರಾಜ ಹೊನ್ನವಳ್ಳಿ

ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ರಂಗಭೂಮಿ ತೆಗೆದುಕೊಂಡಿರುವ ಮತ್ತು ತೆಗೆದುಕೊಳ್ಳುತ್ತಿರುವ ಹೊಸ ಆಯಾಮಗಳ ಬಗ್ಗೆ ಸಂಪೂರ್ಣ ಅಜ್ಞಾನಿಯಾದ ನಮ್ಮ ಪ್ರಸಿದ್ಧ ಕವಿ ಹಾಗೂ ನಾಟಕಕಾರ ಎಚ್. ಎಸ್. ಶಿವಪ್ರಕಾಶರು, ನೀನಾಸಂ, ಮುಂಬೈ ಸಂಸ್ಥೆಯೊಂದರ ಜತೆ ಸೇರಿ ವಿದೇಶಿ ಸಂಸ್ಥೆಗಳಿಂದ ಹಣ ಎತ್ತುವಳಿ ಬಗ್ಗೆ ಯೋಚಿಸುತ್ತಿದೆಯೇ ಹೊರತು ರಂಗಭೂಮಿಯ ಸಬಲೀಕರಣದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದಿರುವುದು ನಿಜಕ್ಕೂ ಶೋಚನೀಯ.

ಇದರ ಜೊತೆ, ಇವತ್ತಿನ ರಂಗಭೂಮಿ ತೆಗೆದುಕೊಂಡಿರು ಹೊಸ ಆಯಾಮಗಳಲ್ಲಿ ಕೆಲಸ ಮಾಡುತ್ತಿರುವ ನಟ, ನಟಿಯರು, ತಂತ್ರಜ್ಞರು, ವಿನ್ಯಾಸಕಾರರು – ಎಲ್ಲರೂ ನೀನಾಸಂನಿಂದ ಬಂದವರಾಗಿ ಅವರಾರೂ ನೀನಾಸಂನ ಅಲೋಚನ್ನಷ್ಟೇ ಮುಂದುವರಿಸಿಲ್ಲ. ಅದಕ್ಕೆ ಹೊಸರೀತಿಯ ದೃಷ್ಟಿಕೋನವನ್ನು ನೀಡಿ ತಮ್ಮ ಕಾಲದ ರಂಗಭೂಮಿಯನ್ನಾಗಿ ಅವಿಷ್ಕರಿಸಿಕೊಂಡಿರುವುದು ನೀನಾಸಂ ನಡೆಸಿದ ಹಲವಾರು ವರ್ಷಗಳ ತಪಸ್ಸಿನ ಭಾಗ ಎಂದು ತಿಳಿದಿದ್ದೇನೆ.

ಒಮ್ಮೆ ನಾನು, ಅಚ್ಯುತ, ಧರ್ಮೇಂದ್ರ ಮಿಕ್ಕ ನಟ-ನಟಿಯರು ಎಲ್ಲರೂ ಸೇರಿ ತಿಪಟೂರಿನಲ್ಲಿ ‘ಪ್ರೊಥಿಯೂ’ ಎಂಬ ರಂಗ ತಂಡವೊಂದನ್ನು ಹುಟ್ಟುಹಾಕಿ ಆ ಮೂಲಕ ಸಾಹಿತ್ಯ, ಸಂಸೃತಿ, ಚಲನಚಿತ್ರ, ಬರವಣಿಗೆ ಎಲ್ಲವನ್ನೂ ಮಾಡಲು ವೇದಿಕೆ ಸೃಷ್ಟಿಯಾಗಿದ್ದು ಕೂಡ ನೀನಾಸಂನ ಮುಂದುವರಿದ ಭಾಗವೇ. ಆದರೆ ಅದು ಸಂಪೂರ್ಣ ನೀನಾಸಂನ ಮುಂದುವರಿಕೆಯಾಗದೆ, ಸ್ಥಳೀಯ ಸಂಪನ್ಮೂಲಗಳನ್ನು ಹೊಂದಿಸಿಕೊಂಡು ದುಡಿಯುವ ಒಂದು ದೊಡ್ಡ ಪಡೆಯೇ ಸೃಷ್ಟಿಯಾಗಿದೆ. ಈ ಹಂತದಲ್ಲಿ ನಮ್ಮ ಕನ್ನಡ ಸಾಹಿತ್ಯದ ಹಲವಾರು ಕೃತಿಗಳನ್ನು, ಕತೆ, ಸಣ್ಣಕತೆ, ಕಾವ್ಯ, ಕಾದಂಬರಿ, ಮಹಾಕಾವ್ಯ, ಆತ್ಮಕಥೆ ಎಲ್ಲವನ್ನು ರಂಗದ ಮೇಲೆ ತಂದು ಹಲವಾರು ಪ್ರದರ್ಶನಗಳನ್ನು ಕೊಟ್ಟು ರಂಗಭೂಮಿಗೆ ಹೊಸರೀತಿಯ ಆಯಾಮಗಳನ್ನು ಕೊಟ್ಟಿರುವುದು ಕೂಡ ನೀನಾಸಂನಲ್ಲಿ ಕಲಿತು ಬಂದವರೇ ಎಂಬುದನ್ನು ಸ್ಪಷ್ಟಪಡಿಸುತ್ತೇನೆ.

ಚಿತ್ರಕೃಪೆ: ಉಗಮ ಶ್ರೀನಿವಾಸ್

ನಾನು ಕಂಡಹಾಗೆ ನೀನಾಸಂಗೆ ಬರುವ ಅನುದಾನಗಳು, ತಿರುಗಾಟದಿಂದ ಬರುವ ಆದಾಯ ಎಲ್ಲವನ್ನು ಜತನದಿಂದಿ ರಂಗಭೂಮಿಗೆ ವಿವೇಚನೆಯಿಂದ ಖರ್ಚು ಮಾಡುವ ನೀನಾಸಂನಂತಹ ಸಂಸ್ಥೆಯನ್ನು ಈ ರೀತಿ ಅಗ್ರಹಾರ ಎನ್ನುವ ಒಂದೇ ಕಾರಣಕ್ಕೆ ಹಣಿಯುವುದರ ಮೂಲಕ ಅದು ಇಷ್ಟು ವರ್ಷಗಳಲ್ಲಿ ಮಾಡಿರುವ ಪರಿಣಾಮಕಾರಿ ಸಂಸ್ಕೃತಿಯ ಕೆಲಸಗಳನ್ನು ಅಲ್ಲಗೆಳೆಯುವುದು ಸರಿಯಾದ ಕ್ರಮವಲ್ಲ.

ನೀನಾಸಂನಲ್ಲಿ ಎಲ್ಲ ರೀತಿಯ ಸಂವಾದಗಳಿಗೆ, ಪ್ರಯೋಗಗಳಿಗೆ ಇರುವಷ್ಟು ಜಾಗ ಬೇರೆ ಕಡೆ ಇಲ್ಲ ಎಂದು ನನಗೆ ಅನುಭವವಾಗಿದೆ. ಆ ಜಾಗ ನಿಜಕ್ಕೂ ಒಂದು ಪ್ರಜಾಪ್ರಭುತ್ವ ಮಾದರಿ ಜಾಗ. ಸುಬ್ಬಣ್ಣನಂತಹ ಹಿರಿಯರು ವಿವೇಚನೆಯಿಂದ, ವ್ಯವಧಾನದಿಂದ ಕಟ್ಟಿದ ಆ ಮಣ್ಣಿನ ಮಡಕೆಯನ್ನ ಶಿವಪ್ರಕಾಶ್ರವರು ಅಷ್ಟು ಒರಟಾದ ಕೋಲಿನಿಂದ ಹೊಡೆಯಬಾರದು.

ಇನ್ನು ಫೋರ್ಡ್ ಫೌಂಡೇಶನ್ನ ಹಣದ ವಿಷಯಕ್ಕೆ ಬಂದರೆ ಇದನ್ನು ಹಲವಾರು ರಂಗಸಂಸ್ಥೆಗಳಿಗೆ ಕೊಟ್ಟು ಅದನ್ನು ಸದೃಢಗೊಳಿಸುವ ಆಲೋಚನೆಯಿದ್ದ ಇದ್ದ ನೀನಾಸಂ ನಂತರದ ದಿನಗಳಲ್ಲಿ ನನಗೆ ಇರುವ ಮಾಹಿತಿ ಪ್ರಕಾರ ಯಾವುದೇ ರೀತಿಯ ಹಣವನ್ನು ತೆಗೆದುಕೊಂಡು ಲಾಭ ಮಾಡುವ ಉದ್ದೇಶದಿಂದ ಬಳಸಿಲ್ಲ.

ಬೇರೆ ಬೇರೆ ಕನ್ನಡದ ರೆರ್ಪಟರಿಗಳು ಪ್ರತಿ ನಟರಿಗೆ ಒಂದೂವರೆ-ಎರಡು ಸಾವಿರ ರೂಪಾಯಿಗಳನ್ನು ಸಂದರ್ಭದಲ್ಲಿ ನೀನಾಸಂ ಆರು ಸಾವಿರ ರೂಪಾಯಿ ಕೊಡುವ ಮೂಲಕ ಆ ನಟನಿಗೆ ಶಕ್ತಿಯನ್ನು ತಂದುಕೊಟ್ಟಿದೆ. ಕೇಂದ್ರ ಸರ್ಕಾರ ಕೊಡುವ ಸ್ಯಾಲರಿ ಗ್ರ್ಯಾಂಟ್ ಅನ್ನು ನೀನಾಸಂನಷ್ಟು ಸಮರ್ಥವಾಗಿ ವಿಲೇವಾರಿಯನ್ನು ಯಾವ ಸಂಸ್ಥೆಯೂ ಮಾಡುತ್ತಿಲ್ಲ. ನನಗೆ ಇರುವ ಮಾಹಿತಿ ಪ್ರಕಾರ ಕರ್ನಾಟಕದ ಹಲವಾರು ರಂಗಸಂಸ್ಥೆಗಳು ತೆಗೆದುಕೊಳ್ಳುವ ಲಕ್ಷಾಂತರ ರೂಪಾಯಿ ಅನುದಾನದಿಂದ ಯಾವ ಘನವಾದ ರಂಗಭೂಮಿಯ ಕೆಲಸವನ್ನಾಗಲೀ, ಪ್ರಾದೇಶಿಕ ರಂಗಭೂಮಿಯ ಕೆಲಸವನ್ನಾಗಲೀ ಮಾಡಿರುವ ದಾಖಲೆ ಇಲ್ಲ. ಜತೆಗೆ ನೀನಾಸಂನಲ್ಲಿ ಓದಿ ತಯಾರಾದ ನಟ-ನಟಿಯರೇ ಪುಟ್ಟಪುಟ್ಟ ರೆಪರ್ಟರಿಯನ್ನು ಕಟ್ಟಿಕೊಂಡು, ಹೊಸಹೊಸ ರಂಗಪಠ್ಯವನ್ನು ಶೋಧಿಸಿ ಘನತೆಯಿಂದ ಪ್ರದರ್ಶನಗಳನ್ನು ಕಟ್ಟುವ ಎಚ್ಚರಿಕೆ, ತಾಳ್ಮೆ ಬಂದದ್ದು ನೀನಾಸಂನಿಂದ ಎಂದು ನಿರ್ವಿವಾದವಾಗಿ ಹೇಳಬಹುದು.

ರಂಗಭೂಮಿಯಲ್ಲಿ ಪ್ರಾದೇಶಿಕತೆ ಸಾಧ್ಯವಾಗಿಲ್ಲ ಎನ್ನುವ ಶಿವಪ್ರಕಾಶ್ ಕರ್ನಾಟಕದಲ್ಲಿ ಈ ದಿನಗಳಲ್ಲಿ ನಡೆಯುತ್ತಿರುವ ಪ್ರಯೋಗ – ಪ್ರದರ್ಶನಗಳನ್ನು ಅದರ ಶಕ್ತಿ ಸಾಧ್ಯತೆಗಳನ್ನು ನೋಡಿ ಅನುಭವಿಸಿಲ್ಲ ಎಂಬುದು ಅವರ ಮಾತುಗಳಿಂದ ಸ್ಪಷ್ಟವಾಗುತ್ತದೆ. ಶಿವಪ್ರಕಾಶರಿಗೆ ನೀನಾಸಂ ಮಾದರಿಯನ್ನು ಅಥವ ರಂಗಮಂಡಲ ಮಾದರಿಯನ್ನು ಒಡೆದು ಹೊಸದಾಗಿ ಕಟ್ಟುವ ತಾಳ್ಮೆ ಇದ್ದರೆ ಅವರು ಈ ರೀತಿ ಮಾತನಾಡುತ್ತಿರಲಿಲ್ಲ.

ಯಾವುದೇ ಸಂಸ್ಥೆ ಅಥವ ವ್ಯಕ್ತಿಗಳಿಗೆ ಆಗುವ ದಣಿವನ್ನು ಅದರ ದುರ್ಬಲತೆ ಎಂದು ತಿಳಿಯುವುದು ಮಹಾ ಮೂರ್ಖತನ. ಇತ್ತೀಚಿನ ದಿನಗಳಲ್ಲಿ ನೀನಾಸಂನಿಂದ ಕಲಿತು ಬಂದ ಹುಡುಗರೇ ಹೊಸ ದೃಷ್ಟಿಕೋನಗಳಿಂದ ರಂಗಭೂಮಿಯನ್ನು ನೋಡುವ ಛಾತಿ ಬೆಳೆಸಿಕೊಂಡದ್ದು ಕೂಡ ನೀನಾಸಂನಿಂದಲೇ.

ನೀನಾಸಂ, ರಂಗಾಯಣ, ಭೂಪಾಲ್ನ ರಂಗಮಂಡಲ, ಸಾಣೇಹಳ್ಳಿಯ ಶಿವಸಂಚಾರ ಇವೆಲ್ಲಾ ಇವತ್ತು ದೊಡ್ಡ ಹಡಗುಗಳಾಗಿ ನನಗೆ ಕಂಡಿದೆ. ಆದರೆ ಪುಟ್ಟ ಪುಟ್ಟ ದೋಣಿಗಳಾಗಿ ಎಲ್ಲಕಡೆ ಕೆರೆ, ತೊರೆ, ಸಮುದ್ರ, ನದಿ ಎಲ್ಲವನ್ನೂ ಏಕಕಾಲದಲ್ಲಿ – ಹಡಗಿನ ಪಕ್ಕದಲ್ಲಿಯೂ ಕೂಡ – ಓಡಾಡಬಹುದಾದ ಹೊಸ ಸಾಧ್ಯತೆಯನ್ನು ತರೆಸಿದ್ದು ಕೂಡ ಈ ದೊಡ್ಡ ಹಡುಗುಗಳೇ. ಹಾಗಾಗಿ ನೀನಾಸಂ ನೀನಾಸಂ ತನ್ನ ತಿರುಗಾಟ, ರಂಗಶಿಕ್ಷಣ ಕೇಂದ್ರದ ಮೂಲಕ ಪ್ರದರ್ಶಿಸಿದ ನಾಟಕಗಳು, ಸೃಷ್ಟಿಸಿದ ಪಠ್ಯಗಳು, ನಡೆಸಿದ ಸಂವಾದಗಳು ಇವೆಲ್ಲವನ್ನೂ ಒರೆಗೆ ಹಚ್ಚಿದರೆ ಇವತ್ತಿನ ರಂಗಭೂಮಿಯ ಪ್ರಾದೇಶಿಕ ಶಕ್ತಿ ಅರಿವಾಗುತ್ತದೆ.

ಶಿವಪ್ರಕಾಶರ ಮಾತುಗಳು ಇವತ್ತಿನ ಹವ್ಯಾಸಿ ರಂಗಭೂಮಿಯ ಪ್ರಾತಿನಿಧಿಕ ಮಾತುಗಳು ಎಂದು ನಾನು ತಿಳಿಯುತ್ತೇನೆ. ಈ ದಿನಗಳಲ್ಲಿ ಕನ್ನಡ ರಂಗಭೂಮಿ ಆಧುನಿಕ ವೃತ್ತಿ ರಂಗಭೂಮಿಯಾಗಿ ಮಾರ್ಪಾಟುಗೊಂಡಿರುವುದು, ಪ್ರದರ್ಶನ, ಪ್ರಯೋಗ, ತಾಲೀಮು, ಪಠ್ಯಗಳ ಆಯ್ಕೆ, ವಿನ್ಯಾಸ ಎಂಬ ಹಲವು ಮಜಲುಗಳಲ್ಲಿ ಅಭ್ಯಾಸ ಮಾಡಿ ಕಟ್ಟುತ್ತಿರುವ ಈ ಹೊತ್ತಿನ ರಂಗಭೂಮಿಗೆ ಶಿವಪ್ರಕಾಶರ ಮಾತುಗಳು ಕೇವಲ ಪಾಂಪಸ್ ಆಗಿ ಕಂಡರೆ ಆಶ್ಚರ್ಯವಿಲ್ಲ. ಈ ಹೊತ್ತು ಅಗ್ರಹಾರ, ಹಟ್ಟಿ, ತಾಂಡ್ಯದಿಂದ – ಎಲ್ಲಾ ಕಡೆಯಿಂದ – ತಂದ ಗರಿ, ಹುಲ್ಲು, ಹತ್ತಿ, ಕಾಳು ಎಲ್ಲದರಿಂದ ಮನೆಕಟ್ಟಿಕೊಳ್ಳಬೇಕಾದ ಸಂದರ್ಭದಲ್ಲಿರುವ ನಾವು ಶಿವಪ್ರಕಾಶರ ಮಾತುಗಳಿಗೆ ಗಮನಕೊಡಬೇಕಾಗಿಲ್ಲ ಎಂದು ನಮ್ರವಾಗಿ ಸೂಚಿಸಬಯಸುತ್ತೇನೆ.

‍ಲೇಖಕರು G

17 May, 2011

ನಿಮಗೆ ಇವೂ ಇಷ್ಟವಾಗಬಹುದು…

2 Comments

  1. mahesh

    ಶಿವ್ ಪ್ರಕಾಶರಿಗೆ ಸರಿಯಾಗೆ ಮನವರಿಕೆ ಮಾಡಿ ಕೊಡುವ ಲೇಖನ ವಿದು. ಇನ್ನು ಮುಂದೆಯಾದರು ದೊಡ್ಡವರು ಮಾತನಾಡುವಾಗ ಎಚ್ಚರ ವಹಿಸಲಿ. ಕೇವಲ ಪ್ರಾಸಕ್ಕೆ ಮಾತನಾಡಿ ಪ್ರಯೋಜನವಿಲ್ಲ.

  2. subbanna mattihalli

    karnaatakadalli vishishta ranga kraanti
    yanne huttu haakida NEENAASUM bagege
    S.prakaash vyakta padisida abhipraaya
    da hinneleyalli mattenoo purvagraha
    iddantide. adannaadaru spastavaagi hela
    baarade???

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading