
ಪ್ರಿಯದರ್ಶಿನಿ ಶೆಟ್ಟರ್
ನೈಜೀರಿಯಾದ ಬರಹಗಾರ್ತಿ, ಸ್ತ್ರೀವಾದಿ ಚಿಮಮಾಂದ ಗೋಝಿ ಅಡಿಚೆ ಅವರು ಬರೆದ ‘ಫೆಮಿನಿಸ್ಟ್ ಮ್ಯಾನಿಫೆಸ್ಟೊ’ ಕೃತಿಯನ್ನು ೨೦೧೯ರಲ್ಲಿ ಡಾ. ಕಾವ್ಯಶ್ರೀ ಎಚ್. ಅವರು ಕನ್ನಡಕ್ಕೆ ತಂದಿದ್ದಾರೆ. ಕಾರ್ಲ್ ಮಾಕ್ಸ್ ಮತ್ತು ಫ್ರೆಡೆರಿಕ್ ಎಂಗೆಲ್ಸ್ರ ‘ಕಮ್ಯೂನಿಸ್ಟ್ ಮೆನಿಫೆಸ್ಟೊ’ ಎಂಬ ತಲೆಬರಹ ನೆನಪಿಸುವ ರೀತಿಯ ಚಿಕ್ಕಪುಸ್ತಕ ಫೆಮಿನಿಸ್ಟ್ ಮ್ಯಾನಿಫೆಸ್ಟೊ ಕೂಡ ತನ್ನ ಉದ್ದೇಶದಲ್ಲಿ ಜನಸಮುದಾಯ ಸಂಕೋಲೆಗಳನ್ನು ಕಳಚಿಕೊಳ್ಳಬೇಕೆಂಬ ಆಶಯವನ್ನೇ ಹೊಂದಿದೆ. “ತನ್ನ ಹೆಣ್ಣುಮಗುವನ್ನು ಸ್ತ್ರೀವಾದಿಯಾಗಿ ಬೆಳೆಸುವುದು ಹೇಗೆ?” ಎಂಬ ತನ್ನ ಸ್ನೇಹಿತೆ ಇಜಾವಿಲೆಯವರ ಪ್ರಶ್ನೆಗೆ ಉತ್ತರವಾಗಿ ಬರೆದ ಸುದೀರ್ಘ ಫೇಸ್‌ಬುಕ್ ಪೋಸ್ಟ್ ಇದಾಗಿದ್ದು, ತದನಂತರ ಪುಸ್ತಕರೂಪ ಪಡೆದ ಅಪರೂಪದ ಕೃತಿ. ಇಜಾವಿಲೆ ಮತ್ತು ಅವರ ಮಗಳು ಚಿಝಾಲಮ್ ಮಾತ್ರವಲ್ಲ, ಹೆಣ್ಣುಮಕ್ಕಳನ್ನು ಬೆಳೆಸಬೇಕಾದವರೆಲ್ಲ ಓದಬೇಕಾದ ಪುಸ್ತಕವಿದು.
‘ಸ್ತ್ರೀವಾದ’ ಎಂದೊಡನೆ ‘ಹೀಗೆ….., ಇಷ್ಟೇ…..’- ಇಂಥದೇ ಧೋರಣೆ ಎನ್ನುವುದು ಅನೇಕರಲ್ಲಿದೆ. ‘ಪುರುಷ ವಿರೋಧ’ ಅಥವಾ ‘ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಇಲ್ಲವೇ ತಮ್ಮ ಮೇಲಿನ ದೌರ್ಜನ್ಯಗಳ ವಿರುದ್ಧ ನಡೆಸುವ ಹೋರಾಟ-ಅರಚಾಟ’ – ಇಂತಹ ಹಲವು ಸಿದ್ಧಮಾದರಿಯ ವಿಚಾರಗಳು ನಮ್ಮನ್ನಾವರಿಸುವುದುಂಟು. ಆದರೆ ಈ ಪುಸ್ತಕ ಅಂತಹ ಎಲ್ಲ ವಿಚಾರಗಳನ್ನು ಪಕ್ಕಕ್ಕಿರಿಸಿ ‘ಸ್ತ್ರೀವಾದ’ ಎಂದರೇನೆಂಬುದನ್ನು ಕೇವಲ ೧೫ ಸಲಹೆಗಳ ಮುಖಾಂತರ ಓದುಗರಿಗೆ ತಿಳಿಸುತ್ತದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿ ದರೆ, ಬೀದಿಗಿಳಿದು ಆಕ್ರೋಶ ಹೊರಹಾಕಿ ಹೋರಾಟ ನಡೆಸುವುದು ಒಂದು ಕಡೆಯಾದರೆ, ಸೃಜನಶೀಲ ಬರವಣಿಗೆಯ ಮೂಲಕ ಜನರನ್ನು ತಲುಪಿ ಅವರನ್ನು ಕೆಲವೊಂದು ಸೂಕ್ಷ್ಮ ವಿಚಾರಗಳೆಡೆಗೆ ಸೆಳೆಯುವುದು ಇನ್ನೊಂದು ಕಡೆ.
ಇದೊಂದು ರೀತಿಯ ಸಾಹಸವೇ ಸರಿ. ಪುಟ್ಟ ಗಾತ್ರದ ಈ ಕೃತಿ ಹೇಳಬೇಕಾದ ವಿಚಾರಗಳನ್ನು ನೇರವಾಗಿ, ಸ್ಫುಟವಾಗಿ ಮತ್ತು ಪರಿಣಾಮಕಾರಿಯಾಗಿ ಹೇಳುವಲ್ಲಿ ಯಶಸ್ವಿಯಾಗಿದೆ. ಇದನ್ನು ಒಂದೇ ಸಿಟ್ಟಿಂಗ್‌ನಲ್ಲಿ ಓದಿ ಮುಗಿಸಬಹುದಾಗಿದೆ. ಇಲ್ಲಿನ ಎಲ್ಲ ಸಲಹೆಗಳನ್ನು ಕೆಲ ಘಟನೆಗಳೊಂದಿಗೆ ಉದಾಹರಿಸಿರುವುದರಿಂದ ವಿಷಯಗಳ ಗ್ರಹಿಕೆ ಸರಳವಾಗುತ್ತದೆ. ಜೊತೆಗೆ ಓದುಗರಿಗೆ ತಮ್ಮ ನಾಡು, ಸಂಸ್ಕೃತಿಗಳಾಚೆ ಬೇರೆ ಸಂಪ್ರದಾಯಗಳ, ಆಚರಣೆಗಳ, ಅಲ್ಲಿಯ ಜನರ ಮನಸ್ಥಿತಿಗಳ ಪರಿಚಯವಾಗುತ್ತದೆ. ಇವುಗಳನ್ನೆಲ್ಲ ಓದುಗರು ತಮ್ಮ ಪರಿಸರದೊಡನೆ ಹೋಲಿಸಿದಾಗ ಸ್ವಾಭಾವಿಕವಾಗಿ ಸಾಕಷ್ಟು ಸಾಮ್ಯತೆ ಹಾಗೂ ವೈರುಧ್ಯಗಳು ಕಾಣಸಿಗುತ್ತವೆ.

‘ಬೌದ್ಧಿಕವಲ್ಲ, ಭಾವುಕವೂ ಅಲ್ಲ, ಜೀವಸತ್ಯದ ಬೆಳಕಿನ ಕಿರಣಗಳು’ ಎನ್ನುವ ಚೆಂದದ ಶೀರ್ಷಿಕೆಯಡಿ ಮುನ್ನುಡಿ ಬರೆದಿರುವ ಎಂ. ಎಸ್. ಆಶಾದೇವಿಯವರು “ಹೆಣ್ಣಿನ ಮಟ್ಟಿಗೆ ಹೆಣೆಯಲಾದ ಸುಳ್ಳುಗಳು ಬಹಳ ಬಲವಾಗಿ ನಮ್ಮಲ್ಲಿ ಬೇರೂರಿವೆ. ಎಷ್ಟೆಂದರೆ ಸುಳ್ಳು-ಸತ್ಯಗಳ ಮಧ್ಯದ ಅಂತರವನ್ನೇ ಗುರುತಿಸಲಾಗದಷ್ಟು” ಎಂದಿದ್ದಾರೆ. ಚಿಮಮಾಂದಳ ಸಲಹೆಗಳು ಸರಳವಾಗಿವೆಯಾದರೂ ಸಾಧಿಸಲು ಕಷ್ಟಸಾಧ್ಯ ಎನ್ನುವ ಅವರು ಪ್ರಸ್ತುತ ಕಾಲಘಟ್ಟದಲ್ಲಿ ಈ ಸಲಹೆಗಳನ್ನು ಕಾರ್ಯರೂಪಕ್ಕೆ ತರುವುದು ಎಷ್ಟು ಅವಶ್ಯಕ ಎಂಬುದನ್ನು ಮನಗಾಣಿಸಿದ್ದಾರೆ. ‘ಫೆಮಿನಿಸ್ಟ್ ಮ್ಯಾನಿಫೆಸ್ಟೊ’ ಬಗೆಗಿನ ಒಟ್ಟಾರೆ ಆಶಯ ಇಲ್ಲಿ ಬಿಂಬಿತವಾಗಿದೆ. ಲೇಖಕಿ ಕಾವ್ಯಶ್ರೀ ಅವರು ‘ಚುಕ್ಕಿಗಳ ಜೋಡಿಸುತ್ತಾ’ ಎಂಬ ಪುಟ್ಟ ಬರಹದಲ್ಲಿ ಸ್ತ್ರೀವಾದದ ಒಳನೋಟ, ಮಹಿಳೆಯರ ಅಸ್ಮಿತತೆ, ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರಿಗಷ್ಟೇ ಅಲ್ಲದೇ ಪುರುಷರಿಗೂ ಸಂಬಂಧಿಸಿದ ಅನೇಕ ಸೂಕ್ಷ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಈ ಕೃತಿಯಲ್ಲಿರುವ ಚಿಮಮಾಂದ ಗೋಝಿ ಅಡಿಚೆಯವರ ಕಿರುಪರಿಚಯ ಓದಿದಾಗ ಸ್ತ್ರೀವಾದದ ವ್ಯಾಪ್ತಿ ಮತ್ತು ಯಾವೆಲ್ಲ ಸೂಕ್ಷö್ಮ ವಿಷಯಗಳು ಅದರ ಸುತ್ತಮುತ್ತ ಹರಡಿಕೊಂಡಿವೆ ಎಂಬುದು ಸ್ಪಷ್ಟವಾಗುತ್ತದೆ. ಅವರ ಬಾಲ್ಯ, ವಿದ್ಯಾಭ್ಯಾಸ, ಕುಟುಂಬದ ಹಿನ್ನೆಲೆ, ಎದುರಿಸಿದ ತಾರತಮ್ಯ – ಇವೆಲ್ಲದರ ಜೊತೆಗೆ ಅವರ ಪುಸ್ತಕಗಳು, ಭಾಷಣಗಳು ಹಾಗೂ ಅವರಿಗೆ ಸಂದ ಪ್ರಶಸ್ತಿಗಳು – ಹೀಗೆ ಅನೇಕ ವಿವರಗಳು ಇಲ್ಲಿವೆ.
ಪ್ರೀತಿಯ ಇಜಾವಿಲೆ
ಇಲ್ಲಿವೆ ಹದಿನೈದು ಸಲಹೆಗಳು:
೧) ಒಬ್ಬ ಪರಿಪೂರ್ಣ ವ್ಯಕ್ತಿಯಾಗಿರು: ದುಡಿಮೆ ಹಾಗೂ ತಾಯ್ತನದ ಬಗೆಗಿನ ಬಹಳಷ್ಟು ಗೊಂದಲಗಳನ್ನು ಕುರಿತ ಸಲಹೆ ಇದಾಗಿದೆ. ಇಲ್ಲಿ ಅಡಿಚೆ ಒಂದು ಉದಾಹರಣೆ ಕೊಟ್ಟಿದ್ದಾರೆ. ವಿಯೆಟ್ನಾಂನಿಂದ ಯುದ್ಧದ ವರದಿ ಮಾಡಿದ ಮೊದಲ ಮಹಿಳಾ ಪತ್ರಕರ್ತೆ ಮರ್ಲಿನ್ ಸ್ಯಾಂಡರ್ಸ್ ತನ್ನ ಕಿರಿಯ ಸಹೋದ್ಯೋಗಿಯೊಬ್ಬಳಿಗೆ ನೀಡಿದ ಸಲಹೆ – “ದುಡಿಮೆಯ ಕಾರಣಕ್ಕಾಗಿ ಎಂದೂ ಕ್ಷಮೆ ಕೇಳಬೇಡ. ನೀನು ಮಾಡುವ ಕೆಲಸವನ್ನು ಪ್ರೀತಿಸುವುದೇ ನಿನ್ನ ಮಗುವಿಗೆ ನೀನು ಕೊಡುವ ಉಡುಗೊರೆ.” ಎಷ್ಟು ಸತ್ಯವಲ್ಲವೇ? ‘ಒಬ್ಬ ಹೆಣ್ಣು ಸಂಪ್ರದಾಯಸ್ಥ ತಾಯಿಯಂತೆ ಮನೆಯಲ್ಲಿರಬೇಕು’ ಎಂಬ ಧೋರಣೆ ಹಲವರಲ್ಲಿದೆ. ಆದರೆ ವಿದ್ಯಾವಂತ, ಬುದ್ಧಿವಂತ, ಉದ್ಯೋಗಸ್ಥೆಯಾಗ ಬಯಸುವವರಿಗೆ ಇಂತಹ ವಿಚಾರಗಳು ಜೀರ್ಣಿಸಲಸಾಧ್ಯ. ಒಬ್ಬ ಹೆಣ್ಣು ತನಗೇನು ಬೇಕು / ತಾನೇನು ಮಾಡಬೇಕು ಎಂಬ ಆಯ್ಕೆಯ ಬಗ್ಗೆ ಅವರವರಿಗೆ ಅವರದೇ ಅಭಿಪ್ರಾಯಗಳಿರುತ್ತವೆ. ಆಗ ಅವಳು ತನಗೇನು ಬೇಕು ಎಂಬುದಕ್ಕೆ ಪ್ರಾಮುಖ್ಯತೆ ಕೊಡಬೇಕೇ ಹೊರತು ಇತರರೇನೆನ್ನುತ್ತಾರೆ ಎಂಬುದರ ಬಗೆಗಲ್ಲ. ಲೇಖಕಿ ಇಲ್ಲಿ ‘ಸೂಪರ್ ವುಮನ್’ ಮನಸ್ಥಿತಿಯ ಬಗ್ಗೆ ಮಾತಾಡುತ್ತಾ, ‘ಅಂತಹದ್ದೇನೂ ಇಲ್ಲ, ಹೊಸದಾಗಿ ತಾಯಿಯಾದವಳಿಗೆ ಎಲ್ಲವೂ ಗೊತ್ತಿರಬೇಕೆಂದಿಲ್ಲ. ಅನೇಕ ವಿಷಯಗಳನ್ನು ಟ್ರಯಲ್ ಆ್ಯಂಡ್ ಎರರ್ ಮೂಲಕ ತಿಳಿದುಕೋ’ ಎನ್ನುತ್ತಾರೆ. ಜೊತೆಗೆ ಗೃಹಕೃತ್ಯ ಹಾಗೂ ಆರೈಕೆ ಲಿಂಗ ತಟಸ್ಥವಾಗಿರಬೇಕೆಂದು ಹೇಳುತ್ತಾರೆ.
೨) ಒಟ್ಟಿಗೆ ಮಾಡಿ: ಮನೆಗೆಲಸದಲ್ಲಿ ಮಹಿಳೆ ಹಾಗೂ ಪುರುಷರಿಬ್ಬರೂ ಸಮಾನವಾಗಿ ತೊಡಗಿಕೊಳ್ಳಬೇಕು. ಅದರಲ್ಲೂ ಮಗುವಿನ ಆರೈಕೆಯಂತಹ ವಿಷಯದಲ್ಲಿ ಪುರುಷರು ವಿಶೇಷ ಕೃತಜ್ಞತೆ ಅಥವಾ ಹೊಗಳಿಕೆಗೆ ಪಾತ್ರರಾಗಬಾರದು. ಏಕೆಂದರೆ ಅದು ಅವರ ಜವಾಬ್ದಾರಿಯೂ ಹೌದು. ಆದರೆ ಎಷ್ಟೋ ಮನೆಗಳಲ್ಲಿ ಎಲ್ಲ ಕೆಲಸಗಳನ್ನು ತಾವೇ ಮಾಡುವ ತಾಯಂದಿರು ತಂದೆಯ ಭಾಗವಹಿಸುವಿಕೆಯನ್ನು ಕುಗ್ಗಿಸುತ್ತಾರೆ ಎನ್ನುತ್ತಾರೆ ಚಿಮಮಾಂದ ಅಡಿಚೆ. ಈ ರೀತಿಯ ಹೊಸ ವಿಷಯಗಳನ್ನೋದಿದಾಗ ಎಷ್ಟೋ ಸಲ ನಾವು ಹೀಗೆ ಯೋಚಿಸುವುದೇ ಅಪರೂಪ ಅನಿಸುತ್ತದೆ.

೩) ಲಿಂಗಾಧಾರಿತ ನಡವಳಿಕೆ ಎಂಬ ಅರ್ಥಹೀನ ಪರಿಕಲ್ಪನೆ: ಬಾಲಕಿಯೊಬ್ಬಳು ಪ್ರೌಢಾವಸ್ಥೆಗೆ ಬಂದಳೆಂದರೆ ಮನೆಯಲ್ಲಿ ಕೇಳಿಬರುವ ಮಾತುಗಳು ಹೀಗಿರುತ್ತವೆ: “ಹುಡುಗಿಯರ ಹಾಗೆ ನಡುಬಗ್ಗಿಸಿ ಕಸಗುಡಿಸು.” – ಇದು ಹೆಣ್ಣುಮಕ್ಕಳ ಕೆಲಸವೆಂಬಂತೆ ಬಿಂಬಿಸಲಾಗುತ್ತದೆ. ಜೊತೆಗೆ ಸ್ವಚ್ಛತೆ ಹಾಗೂ ಅಡುಗೆಯ ವಿಷಯಕ್ಕೆ ಬಂದರೆ ಅವು ಬರೀ ಹೆಣ್ಣುಮಕ್ಕಳ ಕೆಲಸಗಳೆಂದೇ ಅನೇಕರು ತಿಳಿದಿರುವುದು ವಿಪರ್ಯಾಸವೇ ಸರಿ. ಕೆಲಸಗಳಷ್ಟೇ ಅಲ್ಲ ಜೀವನ ಕೌಶಲಗಳಿವು. ‘ಹೆಣ್ಣಿಗೆ ಮದುವೆ ದೊಡ್ಡ ಬಹುಮಾನ’ ಎಂದು ಬಿಂಬಿಸುವುದನ್ನು ಇಲ್ಲಿ ಪ್ರಶ್ನಿಸುವ ಅಡಿಚೆ ಈ ಬಹುಮಾನ ಗಳಿಸಲು ಅಡುಗೆ ಕಲಿಯುವುದೇ ಆ ಅರ್ಹತೆ ಪಡೆಯಲು ಎಂಬಂತಹ ವಿಚಾರವನ್ನೂ ತರ್ಕಕ್ಕೆ ಹಚ್ಚುತ್ತಾರೆ.
ಹುಡುಗಿಯರು ಬಹಳಷ್ಟು ಆಯ್ಕೆಗಳನ್ನು ಎದುರಿಸುವಾಗ ಮದುವೆ ಎಂಬ ಬಂಧವನ್ನು ಗಮನದಲ್ಲಿಟ್ಟುಕೊಂಡೇ ತೀರ್ಮಾನಿಸುವಂತೆ ಹೇಳಿಕೊಡಲಾಗುತ್ತದೆ. ಆದರೆ ಹುಡುಗರಿಗೆ ಇಂತಹ ಯಾವುದೇ ಕಟ್ಟುಪಾಡುಗಳಿಲ್ಲ! ಹುಡುಗಿಯರು ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಬಂದಾಗ ಪುರುಷರೆದುರು ಹೇಗೆ ಮಾತನಾಡಬೇಕು, ಹೇಗೆ ವರ್ತಿಸಬೇಕು ಎಂದು ಕಲಿಸಿಕೊಡುವಂತೆ ಹುಡುಗರಿಗೂ ಕೂಡ ಇವೆಲ್ಲವನ್ನೂ ಅವರಿಗೆ ಅರ್ಥವಾಗುವ ರೀತಿಯಲ್ಲಿ ಕಲಿಸುವುದೂ ಅಷ್ಟೇ ಅವಶ್ಯಕ.
ಲಿಂಗಸಮಾನತೆ ಎನ್ನುವುದು ಶುರುವಾಗುವುದೇ ಮನೆಯಿಂದ. ಜೆಂಡರ್ ರೋಲ್ ನಮ್ಮಲ್ಲಿ ಯಾವ ಮಟ್ಟಿಗಿದೆ ಎಂದರೆ ಮಕ್ಕಳ ಬಟ್ಟೆ, ಆಟಿಕೆಗಳೂ ಇದಕ್ಕೆ ಹೊರತಾಗಿಲ್ಲ! ಹುಡುಗಿಯರ ಬಟ್ಟೆಯೆಂದರೆ ಪಿಂಕ್ ಬಣ್ಣದಂತಹ ಮಾಸಲು ಬಣ್ಣ, ಅದೇ ಹುಡುಗರ ಬಟ್ಟೆಗಳು ಚೆಂದದ, ಎದ್ದುಕಾಣುವ ಗಾಢಬಣ್ಣ ಎಂಬುದಿದೆ. ಆಟಿಕೆಗಳಲ್ಲೂ ಇದೇ ತರಹ – ಹುಡುಗರಿಗೆ ರೈಲು, ಕಾರುಗಳಿದ್ದರೆ ಹುಡುಗಿಯರಿಗೆ ಗೊಂಬೆಗಳು, ಕಿಚನ್ ಸೆಟ್, ಇತ್ಯಾದಿಗಳು! ಮಕ್ಕಳ ಮೇಲೆ ಇಂತಹ ವಿಭಾಗೀಕರಣ ಹೇರದೆ ಅವರಿಗಿರುವ ಸಾಮರ್ಥ್ಯ ಹೊರಬರಲು ಉತ್ತೇಜಿಸಬೇಕೆನ್ನುತ್ತಾರೆ ಅಡಿಚೆ.
೪) ಲಘು ಸ್ತ್ರೀವಾದದ ಅಪಾಯಗಳು: ಈ ಪರಿಕಲ್ಪನೆ ಷರತ್ತುಬದ್ಧ ಸ್ತ್ರೀಸಮಾನತೆಯನ್ನು ಒಳಗೊಂಡಿದೆ. ಅದಕ್ಕೆ ಉದಾಹರಣೆ – ‘ರಾಜಕಾರಣಿ ಫಿಲಿಪ್ ಮೇ ಅವರು ತಮ್ಮ ಪತ್ನಿ ತೆರೆಸಾ ಮೇ ಅವರಿಗೆ ಪ್ರಧಾನಮಂತ್ರಿಯಾಗಲು ಅವಕಾಶ ನೀಡಿದ್ದಾರೆ’ ಎಂಬ ಪತ್ರಿಕಾ ವರದಿ. ಫೆಮಿನಿಸಂ ಲೈಟ್ ವಿವರಿಸಲು ಅವರು ಬಳಸಿದ ಉತ್ತಮ ಉದಾಹರಣೆ ಇದಾಗಿದೆ.
೫) ಓದಲು ಕಲಿಸು: ಮಕ್ಕಳಿಗೆ ಓದುವುದನ್ನು, ಪುಸ್ತಕಗಳನ್ನು ಪ್ರೀತಿಸಲು ಕಲಿಸಬೇಕೆನ್ನುತ್ತಾರೆ ಅಡಿಚೆ. ಪಾಲಕರು ಓದುವುದನ್ನು ನೋಡಿದರೆ ಮಕ್ಕಳಿಗೆ ಅದರ ಮೌಲ್ಯ ತಿಳಿಯುತ್ತದೆ. ಸಾಂಪ್ರದಾಯಿಕ ಶಿಕ್ಷಣ ಪಡೆದ ಮಗು ಮುಂದೆ ಯಾವ ವೃತ್ತಿ ಆಯ್ಕೆ ಮಾಡಿಕೊಂಡರೂ ಉತ್ತಮ ಬದುಕು ಕಟ್ಟಿಕೊಳ್ಳಬಹುದು. ಏಕೆಂದರೆ ನಾವು ಜಗತ್ತನ್ನು ಅವಲೋಕಿಸಲು, ಪ್ರಶ್ನಿಸಲು ಓದುವ ಹವ್ಯಾಸ ಕಲಿಸುತ್ತದೆ. ಉಡುಗೊರೆಗಳ ಆಮಿಷವೊಡ್ಡಿಯಾದರೂ ಮಕ್ಕಳನ್ನು ಓದಿಸಲು ಸಲಹೆ ನೀಡುತ್ತಾರೆ.

೬) ಭಾಷೆಯನ್ನು ಪ್ರಶ್ನಿಸುವುದನ್ನು, ಸಂದೇಹಿಸುವುದನ್ನು ಕಲಿಸು: ಎಷ್ಟೋ ಸಲ ನಾವು ಬಳಸುವ ಭಾಷೆ ಪೂರ್ವಾಗ್ರಹಗಳಿಂದ ಕೂಡಿರುತ್ತದೆ. ಸ್ತ್ರೀ ದ್ವೇಷ, ಪಿತೃಪ್ರಾಧಾನ್ಯತೆ – ಇಂತಹ ಪದಗಳನ್ನು ಮಕ್ಕಳ ಮುಂದೆ ಹೆಚ್ಚು ಬಳಸದಂತೆ ಹೇಳುತ್ತಾರೆ ಅಡಿಚೆ. ಸ್ತ್ರೀ ವಿರೋಧ ಎನ್ನುವುದು ಸೂಕ್ಷ್ಮವಾಗಿ ಅಥವಾ ಬಹಿರಂಗವಾಗಿ ಇರಬಹುದು. ಆದರೆ ಎರಡೂ ಅಸಹ್ಯಕರ ಎಂದು ತಿಳಿಸಿಕೊಡು ಎನ್ನುತ್ತಾರೆ ಅವರು.
೭) ಮದುವೆಯನ್ನು ಒಂದು ಸಾಧನೆ ಎಂಬಂತೆ ಎಂದಿಗೂ ಮಾತಾಡಬೇಡ: ಇಲ್ಲಿ ಓದುಗರು ಗಮನಿಸಬೇಕಾದ ಅಂಶಗಳೆಂದರೆ, ‘ಮದುವೆ’ ಎಂದರೆ ಅಸಮಾನ ಕೊಡುಕೊಳ್ಳುವಿಕೆ ಎಂಬಂತಹ ಕಲ್ಪನೆ, ಹುಡುಗಿಯರಿಗೆ ಮದುವೆಯೇ ಜೀವನದ ಸಾಧನೆ, ಹುಡುಗರಿಗೆ ಕರಿಯರ್ ಮುಖ್ಯ ಎಂಬಂತಹ ಮನಸ್ಥಿತಿ, ಮುಂತಾದವು. ಅನೇಕ ಮನೆಗಳಲ್ಲಿ ಹೆಣ್ಣುಮಕ್ಕಳೇ ಹೆಚ್ಚು ತ್ಯಾಗ ಮಾಡಿ ತಮಗೆ ಹಾನಿ ಮಾಡಿಕೊಳ್ಳುವ ಪ್ರಸಂಗಗಳು, ಮದುವೆಯ ನಂತರ ತಮ್ಮ ಹೆಸರನ್ನು ಉಳಿಸಿಕೊಳ್ಳುವ ಆಯ್ಕೆ ಮಹಿಳೆಯರಿಗೆ ಇರಬೇಕೆನ್ನುತ್ತಾರೆ ಅಡಿಚೆ. ವಿವಾಹದ ನಂತರ ‘ಶ್ರೀಮತಿ’ ಎಂಬ ಬಿರುದು ಪಡೆಯುವುದು ಹೆಣ್ಣು ಮಾತ್ರ. ಆದರೆ ಪುರುಷರ ಹೆಸರಿನ ಹಿಂದಿನ ‘ಶ್ರೀ’ ಬದಲಾಗುವುದೇ ಇಲ್ಲ! ಇಂತಹ ಬಹಳಷ್ಟು ಸೂಕ್ಷ್ಮ ವಿಷಯಗಳು ಈ ಕೃತಿಯಲ್ಲಿ ಚರ್ಚೆಯಾಗಿವೆ. ಇವೆಲ್ಲ ನಮ್ಮ ಸುತ್ತ ನಡೆವ ಸಂಗತಿಗಳೇನೋ ಎಂದೆನಿಸಿಬಿಡುತ್ತದೆ. ಜೊತೆಗೆ ಜಾಗತಿಕವಾಗಿ ಹೆಣ್ಣುಮಕ್ಕಳ ಕತೆ ಎಲ್ಲ ಕಾಲಕ್ಕೂ ಒಂದೇ ತೆರನಾಗಿದೆ ಎಂಬುದು ಮನದಟ್ಟಾಗುತ್ತದೆ.
೮) ತಾನು ಎಲ್ಲರಿಗೂ ಪ್ರಿಯಳಾಗಿರಬೇಕೆಂಬುದನ್ನು ನಿರಾಕರಿಸಲು ಕಲಿಸು: ಏನೇ ಮಾಡಿದರೂ ಎಲ್ಲರನ್ನೂ ಮೆಚ್ಚಿಸುವುದು ಅಸಾಧ್ಯ. ಅದರ ಬದಲು ಪರಿಪೂರ್ಣ ವ್ಯಕ್ತಿಯಾಗಲು ಹೆಣ್ಣುಮಕ್ಕಳಿಗೆ ಕಲಿಸಬೇಕು ಎನ್ನುತ್ತಾರೆ ಲೇಖಕಿ. ಇದನ್ನು ಹುಡುಗರಿಗೆ ಹೇಳಿಕೊಡದೇ ಇರುವುದರಿಂದ ಲೈಂಗಿಕ ದೌರ್ಜನ್ಯದಂತಹ ಅಪಾಯಕಾರಿ ಘಟನೆಗಳಿಗೂ ಅನೇಕ ಹುಡುಗಿಯರು ಒಳಗಾಗುತ್ತಾರೆ. ಜೊತೆಗೆ ‘ಪರ್ಫೆಕ್ಟ್ ಫಿಗರ್’ ಎಂಬಂತಹದನ್ನೆಲ್ಲ ತಲೆಗೆ ತುಂಬಿಕೊಂಡು ಇತರರನ್ನು ಮೆಚ್ಚಿಸಲೆಂದೇ ಬಸವಳಿಯುವ ಹೆಂಗಳೆಯರು ನಮ್ಮ ಸುತ್ತಲೂ ಬಹಳಷ್ಟಿದ್ದಾರೆ. ಎಲ್ಲರಿಗೂ ಇಷ್ಟವಾಗುವುದಕ್ಕಿಂತ ಪ್ರಾಮಾಣಿಕವಾಗಿರುವುದು ಮುಖ್ಯ. ಹಾಗೆಯೇ ಅವಳ ಮೃದುಸ್ವಭಾವವನ್ನು ಯಾರೂ ದುರುಪಯೋಗಪಡಿಸಿಕೊಳ್ಳಲು ಆಕೆ ಬಿಡಬಾರದೆನ್ನುವುದನ್ನು ಕಲಿಸಬೇಕೆನ್ನುತ್ತಾರೆ.
೯) ಅಸ್ಮಿತೆಯ ಪ್ರಜ್ಞೆ: ಉದ್ದೇಶಪೂರ್ವಕವಾಗಿ ಚಿಝಾಲಮ್‌ಗೆ ಅಸ್ಮಿತೆಯ ಅರಿವು ಮೂಡಿಸುವುದು ಮುಖ್ಯ ಎನ್ನುತ್ತಾರೆ ಅಡಿಚೆ. ಜೊತೆಗೆ ಇಗ್ಬೊ ಸಂಸ್ಕೃತಿಯ ಒಳ್ಳೆಯ ಅಂಶಗಳನ್ನು ಸ್ವೀಕರಿಸುವುದರೊಂದಿಗೆ ಅದರ ಋಣಾತ್ಮಕ ಅಂಶಗಳನ್ನು ನಿರಾಕರಿಸುವುದನ್ನು ಕಲಿಸಲು ಸ್ನೇಹಿತೆಗೆ ಹೇಳುತ್ತಾರೆ.
೧೦) ಅವಳು ಮತ್ತು ಅವಳ ಉಡುಗೆ ತೊಡುಗೆಗಳ ಬಗ್ಗೆ ಎಚ್ಚರಿಕೆಯಿಂದ ನಡೆದುಕೊ: ಸಾಮಾನ್ಯವಾಗಿ ಹುಡುಗಿಯರು ಶಾಲಾದಿನಗಳ ನಂತರ ಆಟವಾಡುವುದನ್ನು ನಿಲ್ಲಿಸಿಬಿಡುತ್ತಾರೆ. ಆಟವಾಡುವುದು ಕೇವಲ ದೈಹಿಕ ಆರೋಗ್ಯಕ್ಕಾಗಿ ಮಾತ್ರವಲ್ಲ ಜೊತೆಗೆ ಹುಡುಗಿಯರ ಮೇಲೆ ಹೇರಲಾಗಿರುವ ದೇಹಾಕೃತಿಯ ಅಭದ್ರತೆಯನ್ನು ಎದುರಿಸಲು ಸಹಾಯವಾಗುತ್ತದೆ ಎನ್ನುವ ಅವರ ಸೂಕ್ಷ್ಮಮತಿಯ ಬಗ್ಗೆ ಅಚ್ಚರಿ ಎನಿಸದೇ ಇರದು. ಮೇಕಪ್ ಮಾಡಿಕೊಳ್ಳುವುದಾಗಲಿ, ಫ್ಯಾಷನಬಲ್ ಬಟ್ಟೆ ತೊಡುವುದಾಗಲಿ ಅವರವರ ಇಷ್ಟ. ಹೆಣ್ಣುಮಕ್ಕಳ ಉಡುಗೆ ತೊಡುಗೆಯನ್ನು ನೈತಿಕತೆಯೊಂದಿಗೆ ತಳಕು ಹಾಕಬಾರದು ಎನ್ನುತ್ತಾರೆ ಅಡಿಚೆ.

೧೧) ಸಾಮಾಜಿಕ ನಡಾವಳಿಗಳ ಸಮರ್ಥನೆಗಾಗಿ ಜೀವಶಾಸ್ತ್ರದ ಬಳಕೆಯ ನಿರಾಕರಣೆ: ಮಕ್ಕಳಿಗೆ ಜೀವಶಾಸ್ತ್ರ ಒಂದು ಕುತೂಹಲಕಾರಿ ಮತ್ತು ಆಕರ್ಷಕವಾದ ವಿಷಯವೆಂಬುದನ್ನು ಕಲಿಸಬೇಕು ಆದರೆ ಪುರುಷಪಾರಮ್ಯದ ಸಾಮಾಜಿಕ ರೂಢಿಗಳ ಮುಂದುವರಿಕೆಗೆ ಅದನ್ನು ಸಮರ್ಥನೆಯಾಗಿ ಬಳಸಬಾರದು. ಏಕೆಂದರೆ ಅಂತಹ ರೂಢಿಕಟ್ಟಳೆಗಳು ಮಾನವನಿರ್ಮಿತ ಮತ್ತು ಯಾವುದೇ ಸಂಪ್ರದಾಯವನ್ನು ಬದಲಾಯಿಸುವುದು ಅಸಾಧ್ಯವಲ್ಲ. – ಇಂತಹ ಸಲಹೆ ಓದುಗರನ್ನು ಚಿಂತನೆಗೆ ಹಚ್ಚುತ್ತದೆ. ಇಲ್ಲಿಯವರೆಗಿನ ನಮ್ಮ ನಂಬಿಕೆಗಳನ್ನು ನಾವೇ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತದೆ.
೧೨) ಲೈಂಗಿಕತೆಯ ಬಗ್ಗೆ ಅವಳೊಂದಿಗೆ ಮಾತನಾಡು, ಮುಂಚಿತವಾಗಿಯೇ ಆರಂಭಿಸು: ಲೈಂಗಿಕತೆಯೊಂದಿಗಿನ ದೈಹಿಕ ಹಾಗೂ ಭಾವನಾತ್ಮಕ ಪರಿಣಾಮಗಳನ್ನು ಮಗಳಿಗೆ ಕಲಿಸಬೇಕು ಜೊತೆಗೆ ಆಕೆಗಿಷ್ಟವಿಲ್ಲದ ಯಾವುದಕ್ಕೂ ಒಪ್ಪಿಗೆ ನೀಡುವ ಅಗತ್ಯವಿಲ್ಲ. ಬೇಡ ಎಂದು ಹೇಳುವುದೂ ಹೆಮ್ಮೆಯ ಸಂಗತಿ ಎಂಬುದನ್ನೂ ಕಲಿಸಬೇಕು ಹಾಗೂ ಲೈಂಗಿಕತೆಯನ್ನು ನಾಚಿಕೆಯೊಡನೆ ತಳಕುಹಾಕಬಾರದೆಂದು ಇಜಾವಿಲೆಗೆ ಸಲಹೆ ನೀಡುತ್ತಾರೆ. ಋತುಚಕ್ರದ ಕುರಿತು ನಮ್ಮಲ್ಲಿ ಅನೇಕರು ತಗ್ಗಿದ ದನಿಯಲ್ಲೇ ಮಾತನಾಡುತ್ತಾರೆ. ಆದರೆ ಇತ್ತೀಚೆಗೆ ಅದರ ಕುರಿತು ವೈಜ್ಞಾನಿಕ ಜಾಗೃತಿ ಮೂಡುತ್ತಿರುವುದೂ ಆಶಾದಾಯಕ ಬೆಳವಣಿಗೆಯಾಗಿದೆ.
೧೩) ಪ್ರೇಮ ಪ್ರಸಂಗವಂತೂ ನಡೆದೇ ನಡೆಯುತ್ತದೆ ಸಿದ್ಧವಾಗಿರು: ಪ್ರೀತಿಸುವುದೆಂದರೆ ಕೇವಲ ಕೊಡುವುದಲ್ಲ, ಪಡೆಯುವುದೂ ಕೂಡ ಎಂಬುದನ್ನು ಕಲಿಸಬೇಕು. ಪ್ರೀತಿಸುವುದೆಂದರೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವುದೆಂದೇ ಹುಡುಗಿಯರಿಗೆ ಕಲಿಸಲಾಗುತ್ತದೆ. ಆದರೆ ಹುಡುಗರೊಂದಿಗೆ ಇದನ್ನೆಲ್ಲ ಚರ್ಚಿಸುವುದೇ ಇಲ್ಲ!
೧೪) ದಬ್ಬಾಳಿಕೆಯ ಕುರಿತು ಹೇಳಿಕೊಡುವಾಗ ಎಚ್ಚರಿಕೆಯಿಂದಿರು, ಶೋಷಿತರನ್ನು ಸಂತರನ್ನಾಗಿಸುವುದು ಬೇಡ: ಸ್ತ್ರೀಯರ ಸದ್ಗುಣಗಳಷ್ಟೇ ಅವರ ದುಷ್ಟತನವೂ ಸಹಜವಾದದ್ದು ಎನ್ನುತ್ತಾರೆ ಅಡಿಚೆ. ಮಹಿಳೆಯರು ನೈತಿಕವಾಗಿ ಪುರುಷರಿಗಿಂತ ಉತ್ತಮವಾಗಿರಬೇಕೆಂದು ಭಾವಿಸಲಾಗುವ ಹಿನ್ನೆಲೆಯಲ್ಲಿ ಈ ರೀತಿ ಹೇಳಿದ್ದಾರೆ. ಸ್ತ್ರೀವಾದವನ್ನು ವಿರೋಧಿಸುವ ಮಹಿಳೆಯರಿಂದಾಗಿ ಸ್ತ್ರೀವಾದದ ಪ್ರಸ್ತುತತೆ ಕಡಿಮೆಯಾಗದು ಎಂಬ ದಿಟ್ಟತನದ ಉತ್ತರ ಕೊಡುವ ಅವರು ‘ಎಲ್ಲ ಮಹಿಳೆಯರೂ ಸ್ತ್ರೀವಾದಿಗಳಲ್ಲ ಹಾಗೂ ಎಲ್ಲ ಪುರುಷರೂ ಸ್ತ್ರೀದ್ವೇಷಿಗಳಲ್ಲ’ ಎಂಬುದನ್ನು ಇಲ್ಲಿ ಪ್ರಸ್ತಾಪಿಸುತ್ತಾರೆ.
೧೫) ಭಿನ್ನತೆಯ ಬಗ್ಗೆ ಅವಳಿಗೆ ತಿಳಿಸು: ಭಿನ್ನತೆ ಎನ್ನುವುದು ಸಹಜವಾದದ್ದು. ಇದರ ಕಲಿಯುವಿಕೆಯು ನಮ್ಮನ್ನು ಈ ವೈವಿಧ್ಯಮಯ ಪ್ರಪಂಚದಲ್ಲಿ ಬದುಕಲು ಸಹಾಯ ಮಾಡುತ್ತದೆ. ಧರ್ಮ ಮತ್ತು ವಿಜ್ಞಾನದಲ್ಲಿ ನಮಗೆ ತಿಳಿಯದೇ ಇರುವ ಸಂಗತಿಗಳೂ ಬೇಕಾದಷ್ಟಿವೆ. ಎಲ್ಲವನ್ನು ತಿಳಿಯುವುದೂ ಸಾಧ್ಯವಿಲ್ಲ. ಯಾವುದೇ ಮಹಿಳೆ ತನ್ನ ಅನುಭವವನ್ನು ಸಾರ್ವತ್ರಿಕಗೊಳಿಸುವುದು ಮುಖ್ಯ. ಅದು ಅವಳ ಅಸ್ಮಿತೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಅವಳ ಮುಂದಿನ ಬೆಳವಣಿಗೆಗೆ ಸಹಾಯಕವಾಗುತ್ತದೆ. ಯಾರ ಬಗೆಗೂ ಯಾವ ನಿಲುವನ್ನೂ ಹೊಂದಿರಬಾರದೆನ್ನುವ ಇತ್ತೀಚಿನ ಮನೋವೃತ್ತಿಯ ಕುರಿತು ಆತಂಕ ವ್ಯಕ್ತಪಡಿಸುವ ಅಡಿಚೆ ಅದಕ್ಕೆ ಪರಿಹಾರವನ್ನೂ ಸೂಚಿಸುತ್ತಾರೆ: ‘ವ್ಯಕ್ತಿಗತ ಅಭಿಪ್ರಾಯ ಹೊಂದಿರಬೇಕು ಹಾಗೂ ಅದನ್ನು ಮಾಹಿತಿಪೂರ್ಣ, ಮಾನವೀಯ ಮತ್ತು ವಿಶಾಲ ಮನೋಭಾವನೆಯಿಂದ ಪಡೆದಿರಬೇಕು.’ ಇಂತಹ ಸಾಮಾನ್ಯ ವಿಚಾರಗಳಿಗೆ ಅಸಾಮಾನ್ಯ ಆಯಾಮ ಕೊಟ್ಟು ಓದುಗರಿಗೆ ಸ್ತ್ರೀವಾದದ ಕುರಿತಾದ ತಪ್ಪುಕಲ್ಪನೆಯಿಂದ ಹೊರಬರುವಂತೆ ಮಾಡಿದ್ದಾರೆ. ಜೊತೆಗೆ ಬದುಕಿನ ಬಗ್ಗೆ ಹೊಸ ಹೊಳಹುಗಳನ್ನು ನೀಡಿ ಅನೇಕರ ಶ್ಲಾಘನೆಗೆ ಲೇಖಕಿ ಪಾತ್ರರಾಗಿದ್ದಾರೆ.

ಈ ಮಹತ್ವದ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ ಇಲ್ಲಿನ ಮನಸ್ಸುಗಳನ್ನು ಅಡಿಚೆಯವರತ್ತ ಹೊರಳಿಸಿರುವ ಡಾ. ಕಾವ್ಯಶ್ರೀ ಅವರೂ ಸಹ ಅಭಿನಂದನಾರ್ಹರು. ಕೃತಿಯಲ್ಲಿ ಚಿಮಮಾಂದ ಗೋಝಿ ಅಡಿಚೆಯವರ ಹೆಸರನ್ನು ‘ಚಿಮಮಾಂಡ ಎನ್ಗೋಜಿ ಅಡಿಚಿಯೆ’ ಎಂದೇ ಬಳಸಲಾಗಿದೆ. ‘ಐಜಾವಿಲೆ’ ಎಂಬಲ್ಲಿ ‘ಇಜಾವಿಲೆ’ ಎಂದಿರಬೇಕಿತ್ತು. ಆಯಾ ಭಾಷೆ ಹಾಗೂ ಪ್ರಾಂತ್ಯಗಳಲ್ಲಿ ಅವರದೇ ಉಚ್ಚಾರಣೆ ಇರುವ ಕಾರಣ ಇಂತಹ ಗೊಂದಲಗಳಾಗುವುದು ಸಹಜ. ಈ ಹೆಸರುಗಳ ಉಚ್ಚಾರಣೆ ತಿಳಿಯಲು ಯೂಟೂಬ್‌ನಲ್ಲಿ ವಿಡಿಯೋಗಳಿವೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಸ್ತ್ರೀವಾದದ ಪ್ರಸ್ತುತತೆಯನ್ನು ಕುರಿತ ಪುಸ್ತಕ ಇದಾಗಿದೆ ಎಂದು ಮಾತ್ರ ಹೇಳಿ, ೧೫ ಸಲಹೆಗಳನ್ನು ಚರ್ಚಿಸದೇ ಹೋದರೆ ಈ ಬರಹ ಅಪೂರ್ಣವೆನಿಸುವ ಕಾರಣ, ಸ್ವಲ್ಪ ದೀರ್ಘವಾದರೂ ಅವುಗಳ ಸಾರವನ್ನು ಹಂಚಿಕೊಳ್ಳುವುದು ಸೂಕ್ತವೆನಿಸುತ್ತದೆ.






ಆಸಕ್ತಿದಾಯಕವಾಗಿದೆ