ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಸಾದ್ ರಕ್ಷಿದಿ ಹೀಗಂದರು: ತೇಜಸ್ವಿ ಕಥನಕ್ಕೂ ಮುನ್ನ..

ಮಾಯಾಲೋಕದೊಳಗೆ ….

ಪೂರ್ಣಚಂದ್ರ ತೇಜಸ್ವಿಯವರ ಮಾಯಾಲೋಕದ ಅನಾವರಣ ಅವರ ಮೊದಲ ಬರಹಗಳೊಂದಿಗೆ ಪ್ರಾರಂಭವಾಗುತ್ತವೆ. ಮಲೆನಾಡಿನಜನರಿಗೆ ವಿಶಿಷ್ಟವಾದ ಹಾಸ್ಯಪ್ರಜ್ಞೆಯೊಂದಿಗೆ ಇಲ್ಲಿನ ಪಾತ್ರಗಳೆಲ್ಲ ತಮ್ಮೆಲ್ಲ ನೋವು ನಲಿವು, ಸುಖ-ದುಃಖ, ಕೋಪ-ತಾಪಗಳನ್ನು ಹಂಚಿಕೊಳ್ಳುತ್ತವೆ. ತೇಜಸ್ವಿಯವರ ಒಟ್ಟೂ ಕಥಾಲೋಕವನ್ನು, ಅವರ ವ್ಯಕ್ತಿತ್ವದ ಭಾಗವಾಗಿಯೇ ನೋಡುವ ಮಲೆನಾಡಿಗನಾಗಿ ಅವರನ್ನಿಲ್ಲಿ ನೋಡಿದ್ದೇನೆ.

ಅವರ ಕಥೆ ಕಾದಂಬರಿಗಳಲ್ಲೆಲ್ಲ ಬರುವ ಪಾತ್ರಗಳೆಲ್ಲ ನಮ್ಮ ನಡುವೆ ಓಡಾಡುತ್ತಿರುವವರೇ. ಇಲ್ಲಿ ಬರುವ, ಕರಿಯಪ್ಪ, ಬೋಬಣ್ಣ, ಶಾಂತಕುಮಾರ್, ಖಾಸಿಂಸಾಬಿ, ಬಿ.ಎಸ್.ಪಿ. ಹುಡುಗರುಗಳಾಗಲೀ, ಗಾರೆಯವ, ಹಾವುಗೊಲ್ಲರ ಎಂಕ್ಟ, ಚೀಂಕ್ರಮೇಸ್ತ್ರಿಗಳಾಗಲೀ ಇವರೆಲ್ಲರನ್ನೂ ಅವರು ಯಥಾವತ್ತಾಗಿ ನಿಜವ್ಯಕ್ತಿಗಳಾಗಿ ಚಿತ್ರಿಸಿದ್ದಾರೆಂದು ಅರ್ಥವಲ್ಲ. ಅಲ್ಲಿ ಬರುವ ಪಾತ್ರಗಳೆಲ್ಲವೂ ಈ ಜೀವಂತ ವ್ಯಕ್ತಿಗಳನ್ನು ಹೋಲುತ್ತವಷ್ಟೆ. ತೇಜಸ್ವಿಯವರ ಕಥಾಲೋಕದಲ್ಲಿ ಅವರೆಲ್ಲ ಇನ್ನೊಂದು ಆಯಾಮವನ್ನು ಪಡೆದುಕೊಂಡಿದ್ದಾರೆ.

ತೇಜಸ್ವಿಯವರ ಬರಹಗಳು ಅರೆನಗರ ಜೀವನ (ಮೊಫುಸಿಲ್) ಸಂವೇದನೆಗಳನ್ನು ಹೊಂದಿರುವಂತದ್ದಾಗಿದೆಯೆಂದು, ಯು.ಆರ್. ಅನಂತಮೂರ್ತಿಯವರು ಹೇಳಿದ್ದಾರೆ. ಆದರೆ ಅವರ ಎಲ್ಲ ಬರಹಗಳೂ ಈಗ ಜಾಗತೀಕರಣದ ಪರಿಣಾಮವಾಗಿ ಗ್ರಾಮಾಂತರದ ಎಲ್ಲ ಪ್ರದೇಶಗಳೂ ಕೂಡಾ ಅರೆನಗರ ಪ್ರದೇಶಗಳಾಗಿ ಪರಿವರ್ತಿತವಾಗುತ್ತಿರುವ ಸಂದರ್ಭದ ಕಥಾನಕವೂ ಆಗಿವೆ. ಇಷ್ಟೆಲ್ಲ ಯಾಂತ್ರೀಕರಣ ನಡುವೆಯೂ ಮೊಬೈಲ್ ಫೋನ್ ಹಿಡಿದು ತಿರುಗುವ, ಬಸವನ ಕುಣಿಸುವವರು, ರಸ್ತೆಬದಿಯ ಬುಟ್ಟಿಹೆಣೆಯುವವರು ಮುಂತಾದವರಂತೆ, ಇದ್ದಕ್ಕಿದ್ದಂತೆ ರಾತ್ರಿಹೊತ್ತು ಊರಿಗೆಬಂದು ಶಕುನ ನುಡಿಯವ ಸುಡುಗಾಡು ಸಿದ್ಧರಂತೆ. ಅಪರೂಪಕ್ಕೊಮ್ಮೆ ಕಾಣಸಿಗುವ ಗುಬ್ಬಚ್ಚಿ- ನೀರುನಾಯಿಗಳಂತೆ ‘ಮಾಯವಾಗದೆ ಉಳಿದುಕೊಂಡಿರುವ ಮಾಯಾಲೋಕದ’ ಕಥಾನಕವೂ ಹೌದು.

ತೇಜಸ್ವಿಯವರ ಸಾಹಿತ್ಯದ ಬಗ್ಗೆ ಇತರರು ಹೇಳಿದಂತೆ ಅಥವಾ ಅವರೇ ಅವರ ಬರಹಗಳಲ್ಲಿ ಉಲ್ಲೇಖಿಸಿರುವ ಹಾಗೆ ಅವರದೊಂದು ವಿಸ್ಮಯದ ಲೋಕ. ನಾವು ಈ ‘ವಿಸ್ಮಯ’ ಎಂಬ ಪದವನ್ನು ಭಾರತೀಯ ಸಾಹಿತ್ಯದಲ್ಲಿ ಮುಖ್ಯವಾಗಿ ಬಳಸುವುದು ಮಹಾಭಾರತದ ಬಗ್ಗೆ, ಮಹಾಭಾರತದ ಕಥಾಲೋಕವೂ ವಿಸ್ಮಯದ್ದೇ. ಆ ಬೆರಗಿನ ಲೋಕದೊಳಗೆ ಸೇರಿಕೊಂಡಿರುವ ಉಪಕಥೆಗಳನ್ನಂತೂ ಯಾರು, ಯಾವಾಗ, ಎಲ್ಲಿ, ಮತ್ತು ಹೇಗೆ ಸೇರಿಸಿದರು-ಪ್ರಕ್ಷೇಪಿಸಿದರು ಎನ್ನುವುದೇ ಅಮುಖ್ಯವಾಗುವಹಾಗೆ, ಬೆರೆತು. ಮರೆತುಹೋಗುವ ಹಾಗೆ ಸೇರಿಕೊಂಡಿವೆ.

ತೇಜಸ್ವಿಯವರ ಕಥಾಲೋಕಕ್ಕೆ ಎಷ್ಟು ಪಾತ್ರಗಳನ್ನಾದರೂ ಸೇರಿಸಬಹುದು-ಅವರ ವ್ಯಕ್ತಿತ್ವದ ಸುತ್ತ ಆವರಿಸಿಕೊಂಡಿರುವ ಕಥಾಲೋಕಕ್ಕೆ (ಅವರು ಜಲ್ಲಿಗುಡ್ಡೆ ಹತ್ತಿನಿಂತದ್ದು, ಸ್ಕೂಟರಿನ ಹಿಂಬದಿ ಸೀಟನ್ನು ಕಳಚಿಟ್ಟದ್ದು, ಅವರು ಫೋಟೋ ತೆಗೆಯಲೆಂದು ಅಡಗಿ ಕುಳಿತಿದ್ದಲ್ಲಿಗೇ ಬಂದು ಕರೆದವನನ್ನು, ಕೋಲು ಹಿಡಿದು ಅಟ್ಟಾಡಿಸಿದ್ದು ಹೀಗೇ) ಎಷ್ಟು ಉಪಕಥೆಗಳನ್ನಾದರೂ ಸೇರಿಸಬಹುದು, ಯಾವುದನ್ನಾದರೂ ಪ್ರಕ್ಷೇಪಿಸಬಹುದು. ಇದಾವುದರಿಂದಲೂ ಅವರ ಮಾಯಾಲೋಕ ಬದಲಾಗದು.

‘ಮುಖ್ಯ’ರ ಮಹಾಭಾರತ ತೆರೆದಿಡುವ ವಿಸ್ಮಯದ ಲೋಕವೊಂದಾದರೆ. ತೇಜಸ್ವಿಯವರು ತೆರೆದಿಟ್ಟಿರುವ ಅಮುಖ್ಯರಾಗಿಯೂ- ಅಮುಖ್ಯರಲ್ಲದವರ ಈ ಆಧುನಿಕ ಭಾರತ ಕಥಾಲೋಕದ ಕೆಲವು ಪಾತ್ರಗಳ ಮೂಲಕವೇ ಅವರನ್ನು ನೋಡಲು ಇಲ್ಲಿ ಪ್ರಯತ್ನಿಸಿದ್ದೇನೆ.

ಕೆ.ವಿ.ಸುಬ್ಬಣ್ಣನವರು ಕುವೆಂಪುರವರ ಬಗ್ಗೆ ಹೇಳುತ್ತಾ ‘ಅವರ ಸಾಹಿತ್ಯಕ್ಕಿಂತ ಹೆಚ್ಚಾಗಿ ನಾವರಿಯದ ಒಂದು ಅಗೋಚರ ಸ್ಥರದಲ್ಲಿ ಅವರು, ಇಡೀ ಕರ್ನಾಟಕದ ಸಮಸ್ತ ಜನರರೊಂದಿಗೆ ಸಂವಾದಿಸುತ್ತಾ ಸಾಹಿತ್ಯವನ್ನೇ ಓದದವರ ಮೇಲೂ ಅತ್ಯಂತ ಸೂಕ್ಷವಾದ ಪ್ರಭಾವ ಬೀರಿ ಅವರನ್ನು ರೂಪಿಸುತ್ತಿದ್ದರು’ಎಂದಿದ್ದಾರೆ.

ತೇಜಸ್ವಿಯವರು ಕಥೆಗಾರರಾಗಿ ನೀಡಿದ ಮಾಯಾಲೋಕಕ್ಕಿಂತಲೂ, ವ್ಯಕ್ತಿಯಾಗಿ ನಿರ್ಮಿಸಿದ ಯಾರೂ ಅಮುಖ್ಯರಲ್ಲದ ಮಾಯಾಲೋಕ ಹಿರಿದಾದದ್ದು ಎಂದು ನನ್ನ ಅನಿಸಿಕೆ.

ತೇಜಸ್ವಿಯವರಿಂದು ನಮ್ಮೊಡನಿಲ್ಲ. ತೇಜಸ್ವಿ, ಕೆ.ವಿ.ಸುಬ್ಬಣ್ಣ, ಲಂಕೇಶ್ ಅಂಥವರಿದ್ದಾಗ ನಮ್ಮ ಸುತ್ತಲಿನ ಆಗುಹೋಗುಗಳಿಗೆ ಅವರು ಪ್ರತಿಕ್ರಿಯಿಸುತ್ತಿದ್ದ ರೀತಿಯೇ ಅರೋಗ್ಯಪೂರ್ಣ ಮನಸ್ಸುಗಳು ಯೋಚಿಸಬೇಕಾದ ದಿಕ್ಕನ್ನು ಸೂಚಿಸುವಂತಿರುತ್ತಿತ್ತು. ಈಗ ಆ ಜವಾಬ್ದಾರಿಯನ್ನು ನಮಗೆ ನಾವೇ ವಹಿಸಿಕೊಳ್ಳಬೇಕಾಗಿದೆ.

ಪ್ರಸಾದ್ ರಕ್ಷಿದಿ

 

‍ಲೇಖಕರು G

16 May, 2011

2 Comments

  1. Kishore

    ಕೊನೆಯ ಸಾಲುಗಳು ಎಷ್ಟೊಂದು ನಿಜವಲ್ಲವೆ…..?

  2. chalam

    thejasvi nammolagina athmasakshi!avrannu vivarisuvudu klishe

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading