ಪ್ರಸಾದ್ ನಾಯ್ಕ್
ಢಣ ಢಣ ಢಣ…
ಬೆಳ್ಳಂಬೆಳಗ್ಗೆ ಆ ರಾಕ್ಷಸ ಸದ್ದಿಗೆ ಬೆಚ್ಚಿಬಿದ್ದು ನನ್ನ ನಿದ್ದೆಯೆಲ್ಲಾ ಹಾರಿಹೋಯಿತು. ಎದ್ದು ನೋಡಿದರೆ ಅಪ್ಪ ಪೂಜೆ ಮಾಡುತ್ತಿದ್ದ. ಮೈಗೆಲ್ಲಾ ನಾಮಬಳಿದು ದೊಡ್ಡದಾಗಿ ಆರತಿ ಎತ್ತುತ್ತಿದ್ದ. ಕಂಠಪಾಠ ಮಾಡಿಕೊಂಡು ಬಂದ ಮಗ್ಗಿಯನ್ನು ಮಗುವೊಂದು ತನ್ನ ಅಧ್ಯಾಪಕನಿಗೆ ಯಥಾವತ್ತಾಗಿ ಒಪ್ಪಿಸುವಂತೆ ತನಗೆ ಗೊತ್ತಿದ್ದ ನಾಲ್ಕೈದು ಶ್ಲೋಕಗಳನ್ನೇ ಅಪ್ಪ ಗಟ್ಟಿದನಿಯಲ್ಲಿ ಉರುಹೊಡೆಯುತ್ತಿದ್ದ. ಜಾಗಟೆಯನ್ನು ವಠಾರದ ನಾಲ್ಕು ಮನೆಗೆ ಕೇಳಲೆಂದೇ ಜೋರಾಗಿ ಬಾರಿಸುತ್ತಿದ್ದ. ನೂರಾಮೂವತ್ತು ಕೋಟಿ ದೇವತೆಗಳಲ್ಲಿ ಇಂತಿಷ್ಟು ಪ್ರತಿಶತ ದೇವರುಗಳು ತನಗೇ ಎಂಬಂತೆ ಎಲ್ಲರ ನಾಮವನ್ನೂ ಉಚ್ಚರಿಸುತ್ತಿದ್ದ. ಎಲ್ಲರಿಗೂ ಹಿತ್ತಲ ತೋಟದಲ್ಲಿ ಬೆಳೆದ ಹೂ ಸಿಕ್ಕಿದೆಯಲ್ಲವೇ ಎಂಬುದನ್ನು ನೂರು ಬಾರಿ ಪರೀಕ್ಷಿಸುತ್ತಿದ್ದ. ಕೂದಲುದುರಿ ದಿನಗಳೆದಂತೆ ದೊಡ್ಡದಾಗುತ್ತಿದ್ದ ತನ್ನ ಹಣೆಯನ್ನು ಮನೆಯಲ್ಲಿದ್ದ ಅಷ್ಟೂ ದೇವರುಗಳ ಪಟಗಳಲ್ಲಿರುವ ಪುಟ್ಟ ಪಾದಗಳಿಗೆ ಒತ್ತಿಸುತ್ತಿದ್ದ. ಮುಂಜಾನೆಯ ಮತ್ತು ಸಂಧ್ಯಾಕಾಲದ ಪೂಜೆಯೆಂದರೆ ಅಪ್ಪನಿಗೊಂದು ದೊಡ್ಡ ಪ್ರೊಜೆಕ್ಟೇ ಸರಿ.
ಪೂಜೆಯೇನೋ ಹೌದು. ಆದರೆ ಇದರಲ್ಲಿ ಡಂಗುರ ಸಾರುವಂಥದ್ದೇನಿದೆ ಎಂಬುದು ಮಾತ್ರ ನನಗೆ ತಿಳಿದಿರಲಿಲ್ಲ. ಹಿಂದೊಮ್ಮೆ ಈ ಬಗ್ಗೆ ಕೇಳಿದ್ದಾಗ ಹೀಗೆ ವ್ಯವಸ್ಥಿತವಾಗಿ ಆರಾಧನೆಯನ್ನು ಮಾಡಿದರೆ ಮನಃಶ್ಶಾಂತಿ ಸಿಗುತ್ತದೆ ಎಂದಿದ್ದ ಅಪ್ಪ. ಆದರೆ ಅಪ್ಪನಲ್ಲಿ ಅಂಥಾ ಯಾವುದೇ ಶಾಂತಿಯೂ ಅವನಿಗೆ ಕಂಡಿರಲಿಲ್ಲ. ಅಪ್ಪ ಬಾಯಿ ತೆರೆದರೆ ವಿಷವುಗುಳುವ ಸರ್ಪದಂತಿದ್ದ. ಬೆಂಕಿಯುಗುಳುವ ಡ್ರ್ಯಾಗನ್ನಿನಂತಿದ್ದ. ಅನುದಿನವೂ ಅಂಡುಸುಟ್ಟ ಬೆಕ್ಕಿನಂತೆ ವಿನಾಕಾರಣ ಒದ್ದಾಡುತ್ತಾ ಅದಕ್ಕೆ ತ್ಯಾಗದ ಲೇಪವನ್ನು ಹಚ್ಚಿ ಮೆರೆಯುತ್ತಿದ್ದ. ಹೀಗೆ ಅಪ್ಪನೆಂಬ ಜೀವಿಯು ಒಟ್ಟಾರೆಯಾಗಿ ನನಗೆ ಪ್ರಾಯಶಃ ಈ ಜಗತ್ತಿನ ಬಹುದೊಡ್ಡ ಸಿಡುಕನಂತೆ, ಮೂರ್ಖನಂತೆ, ಆಷಾಢಭೂತಿಯಂತೆ ಕಾಣುತ್ತಿತ್ತು. ಈ ಕಾರಣಕ್ಕೋ ಏನೋ… ಅಪ್ಪನಲ್ಲೂ, ಅಪ್ಪನ ಆ ದೇವಗಣರಲ್ಲೂ ಬಹಳ ಹಿಂದೆಯೇ ನನ್ನ ನಂಬಿಕೆಗಳು ಸತ್ತುಹೋಗಿದ್ದವು.
ಅಂದೂ ಹಾಗೇ ಆಯಿತು. ಪೂಜೆ ಮುಗಿಸಿ ಬಂದ ಅಪ್ಪನಿಗೆ ಅಮ್ಮ ತಿಂಡಿ ಮಾಡಿಕೊಟ್ಟಳು. ಟೀ ಜೊತೆ ಇಡ್ಲಿ ಸಾಂಬಾರು. ಸಾಂಬಾರಿನಲ್ಲಿ ಉಪ್ಪು ಕೊಂಚ ಕಮ್ಮಿಯೆಂದು ಅಪ್ಪನಿಗೆ ರೋಸಿಹೋಯಿತು. ಈ ಬಗ್ಗೆ ಎರಡು ಯೋಚಿಸದೆ ತಟ್ಟೆಯನ್ನು ರಪ್ಪನೆ ಅಮ್ಮನ ಮುಖಕ್ಕೆರಚಿಬಿಟ್ಟ. ಅಮ್ಮನ ಮುಖ, ಕತ್ತು, ನೈಟಿ ಎಲ್ಲವೂ ಬಿಸಿ ಸಾಂಬಾರಿನಿಂದ ತೊಯ್ದುಹೋದವು. ನಂತರ ಇದೆಲ್ಲಾ ಒಂದು ಸಂಗತಿಯೇ ಅಲ್ಲವೆಂಬಂತೆ ಅಪ್ಪ ಸಿಡುಕುತ್ತಾ, ಗೊಣಗುತ್ತಾ ಎದ್ದ. ಇಷ್ಟು ವರ್ಷವಾದರೂ ಒಂದು ಮನೆಹಾಳು ಸಾಂಬಾರು ಮಾಡಕ್ಕೆ ಬರೋಲ್ವೇನೇ ನಿಂಗೆ ಅಂತ ನನ್ನೆದುರಿಗೇ ಅವಳಿಗೆ ಉಗಿದ. ಬೆನ್ನಿಗೇ ” ಅಮ್ಮ, ಮಗ ತಿಂದು ಸಾಯ್ರಿ…”, ಎಂದು ಒದರಿಕೊಂಡ. ಮಗರಾಯ ಎಷ್ಟಿದ್ದರೂ ಅಮ್ಮನ ಪಾರ್ಟಿಯೇ ಎಂಬ ಗುಮಾನಿ ಅವನಿಗೆ. ಅಮ್ಮ ಪೆಚ್ಚಾಗಿ ಅಡುಗೆಮನೆ ಸೇರಿದಳು. ಅಮ್ಮನಿಗೆ ಜಗಳ ಮಾಡುವುದು ಗೊತ್ತಿಲ್ಲವೆಂದಲ್ಲ. ಆದರೆ ಮಾತಿಗೆ ಮಾತು ಬೆಳೆದರೆ ಸಾಂಬಾರೇನು, ಆತ ಇಡ್ಲಿಯ ದೊಡ್ಡ ಪಾತ್ರೆಯನ್ನೇ ತಲೆಯ ಮೇಲೆ ಕುಕ್ಕಿಬಿಡುವಷ್ಟರ ಮಟ್ಟಿನ ಭೂಪ. ಮೇಲಾಗಿ ಮೂರ್ಖರೊಂದಿಗೆ ವಾಗ್ವಾದಕ್ಕಿಳಿಯುವುದು ಶತಮೂರ್ಖತನ.
ಅಪ್ಪನನ್ನು ನೋಡುತ್ತಲಿದ್ದೆ. ಸುಮ್ಮನೆ ಹೋಗಿ ಎರಡು ಬಾಳೆಹಣ್ಣು, ಬನ್ನು ತಿಂದು ಹೊರಡಲು ತಯಾರಾದ. ಟೀ ಕುಡಿಯದೇ ಹೋದರೆ ಹೊರಗಡೆ ಐದು ರೂಪಾಯಿ ಖರ್ಚಾಗುವ ಭಯದಿಂದ ಟೀ ಬಗ್ಗೆ ಚಕಾರವೆತ್ತದೆ ಕುಡಿದುಬಿಟ್ಟ. ತಾನು ಈ ಮನೆಗೆ ದುಡಿದು ಹಾಕುವವನೆಂಬ ಒಣಹಮ್ಮು ಅವನಲ್ಲಿ ನನಗೆ ಕೊಂಚ ಹೆಚ್ಚೇ ಕಾಣುತ್ತಿತ್ತು. ಚಿಕ್ಕ ಆಫೀಸೊಂದರಲ್ಲಿ ಜುಜುಬಿ ಗುಮಾಸ್ತನಾಗಿರುವ ಅಪ್ಪ ದೊಡ್ಡ ಕಲೆಕ್ಟರ್ ಸಾಹೇಬನಂತೆ ಕೋಟನ್ನೇರಿಸಿಕೊಂಡು ಹೊರಡಲು ನಿಂತ. ಕೊನೆಯದಾಗಿ ಹೊರಡುವ ಮುನ್ನ ಮತ್ತೆ ದೇವರ ಕೋಣೆಯತ್ತ ನಡೆದ. ಭಾರೀ ಏಕಾಗ್ರತೆಯಲ್ಲಿ ಹತ್ತು ನಿಮಿಷ ಗುಣುಗುಣು ಪೂಜೆ ಮಾಡಿಕೊಂಡ. ದೇವರು, ದೈವ, ಭೂತ… ಇತ್ಯಾದಿಗಳ ಗಂಧ, ಪ್ರಸಾದ, ಮಂತ್ರಾಕ್ಷತೆಗಳನ್ನೆಲ್ಲಾ ಶಿಸ್ತಿನಿಂದ ಹಚ್ಚಬೇಕಾದಲ್ಲಿ ಹಚ್ಚಿ, ಇರಿಸಬೇಕಾದಲ್ಲಿ ಇರಿಸಿಕೊಂಡು ಮನೆಯಿಂದ ನಡೆದುಬಿಟ್ಟ. ಶ್ರೀಮನ್ನಾರಾಯಣ… ಶ್ರೀಮನ್ನಾರಾಯಣ… ಅಪ್ಪನ ಗುಣುಗುಣು ಮಂತ್ರ ನನಗೆ ಆತ ಹೊರಗಿನಿಂದ ಬಾಗಿಲೆಳೆದು ಹೋಗುವವರೆಗೂ ಕೇಳಿಸುತ್ತಿತ್ತು.
ಅಪ್ಪ ನಿಜಕ್ಕೂ ನನಗಂದು ಓರ್ವ ಜೋಕರಿನಂತೆ, ಕೈಲಾಗದವನಂತೆ ಕಂಡ. ಈತನಿಗೆ ದೈವಭಕ್ತಿ ಬೇರೆ ಕೇಡು ಅನ್ನಿಸಿತು. ‘ಇವನ ಸೋಕಾಲ್ಡ್ ಮನಶ್ಶಾಂತಿಗೆ ಬೆಂಕಿ ಬೀಳ…’, ಎಂದು ನನ್ನಲ್ಲೇ ಗೊಣಗಿದೆ. ಛೇ… ಈತನ ಅಷ್ಟೂ ದೇವರುಗಳು ಇವನಂತೆಯೇ ದಂಡಪಿಂಡಗಳು ಅಂತೆಲ್ಲಾ ಅನ್ನಿಸಿ ಅಪ್ಪನ ಬಗ್ಗೆಯೂ, ಆತನ ದೇವಗಣಗಳ ಬಗ್ಗೆಯೂ ನನಗೆ ಅನುಕಂಪ ಮೂಡಿತು.
*********
ಇತ್ತ ಅಪ್ಪ ಹೋದ ನಂತರ ಮನೆಯಲ್ಲೊಂದು ವಿಚಿತ್ರ ಶಾಂತಿಯು ನೆಲೆಯಾಯಿತು. ”ಇನ್ಯಾರಾದರೂ ಆಗಿದ್ದಲ್ಲಿ ಈ ಸಿಡುಕು ಮೂತಿಗೆ ಡೈವೋರ್ಸ್ ಪೇಪರ್ ಗಳನ್ನು ಎಸೆದು ಹೋಗಿರೋರು…”, ಎಂದು ನನಗೆ ನಾನೇ ಹೇಳುವಂತೆಯೂ, ಅಮ್ಮನಿಗೆ ಕೇಳುವಂತೆಯೂ ಗೊಣಗಿಕೊಂಡೆ. ಅಮ್ಮ ಗೊಂದಲಮಯವಾಗಿ ನಕ್ಕಳು. ಅದು ಅವಳ ಅಭಿಪ್ರಾಯವೂ ಹೌದೆಂದು ನನಗೆ ತಿಳಿದಿತ್ತು. ತವರಿನಿಂದಲೂ ಒಂದೊಳ್ಳೆಯ ಬೆಂಬಲ ನೀಡುವವರಿದ್ದರೆ ಅಮ್ಮ ಯಾವತ್ತೋ ಈ ವಿವಾಹವನ್ನು ಧಿಕ್ಕರಿಸಿ ಹೋಗುತ್ತಿದ್ದಳೇನೋ. ಒಟ್ಟಿನಲ್ಲಿ ಅಪ್ಪನ ಭಾಗ್ಯ ಚೆನ್ನಾಗಿತ್ತು. ತಕ್ಕಮಟ್ಟಿನ ರೆಬೆಲ್ ಆಗಿರುವ ಹೊರತಾಗಿಯೂ ಅಮ್ಮ ಈ ಗಂಡಸನ್ನು ಬಿಟ್ಟು ಹೋಗುವ ಧೈರ್ಯ ಮಾಡಿರಲಿಲ್ಲ.
ಎಂದಿನಂತೆ ಅಂದೂ ನಾನು ಅಮ್ಮನ ಕಂಗಳಲ್ಲಿ ಕಣ್ಣೀರನ್ನು ನೋಡಿದೆ. ನಾನು ನೋಡಿದೆನೆಂಬ ಸಂಗತಿಯು ಅವಳಿಗೆ ಬೇಗನೇ ಗೊತ್ತೂ ಆಯಿತು. ಸಾಂಬಾರಿನ ಮಸಾಲೆಯು ಕಣ್ಣಿನೊಳಗೆ ಹೋಗಿ ಖಾರವಾದಂತಾಯಿತು ಎಂದೇನೋ ಹೇಳಿದಳು. ಸಹಜವಾಗಿಯೇ ಕನಸುಗಳು ಸತ್ತುಹೋಗಿದ್ದ ಅವಳ ನಿಸ್ತೇಜ ಕಣ್ಣುಗಳು ಕೆಂಪಗಾಗಿದ್ದವು. ತ್ವಚೆಯು ವಯಸ್ಸನ್ನು ಮೀರಿ ಮುದಿಯಾಗಿತ್ತು. ಈಚೆಗೆ ನಮ್ಮ ಮನೆಯಲ್ಲಿ ಸತ್ಯಕ್ಕೂ, ಸುಳ್ಳಿಗೂ ಇರುವ ವ್ಯತ್ಯಾಸಗಳು ಮತ್ತದರ ಪ್ರಾಮುಖ್ಯತೆಗಳು ಗೌಣವಾದಂತೆ ನನಗಂದೇಕೋ ಭಾಸವಾಯಿತು. ಎಲ್ಲರೂ ಪರಸ್ಪರರ ಬಳಿ ಸುಳ್ಳಾಡುತ್ತಿರುವಂತೆಯೂ, ಪರಸ್ಪರರ ಸುಳ್ಳನ್ನು ನಂಬುವಂತೆ ಇತರರು ನಟಿಸುವವರಂತೆಯೂ ಅನಿಸಿ ಇದ್ಯಾವ ಹುಚ್ಚರ ಸಂತೆಯಪ್ಪಾ ಎಂದೆನಿಸಿತು ನನಗೆ.
ಸುಮಾರು ಒಂದು ತಾಸು ಅದೂ-ಇದೂ ಕೆಲಸ ಮಾಡಿದ ನಂತರ ಅಮ್ಮ ಸ್ನಾನದ ಮನೆಗೆ ಹೋಗಿ ಫ್ರೆಷ್ ಆಗಿ ಹೊರಬಂದಳು. ನಾನು ಕುಳಿತು ಲ್ಯಾಪ್ಟಾಪಿನಲ್ಲಿ ಏನೋ ಕಥೆ ಕುಟ್ಟುತ್ತಿದ್ದೆ. ಅಮ್ಮ ಬಂದವಳೇ ತನ್ನ ಬಿಳಿ ಬೈರಾಸಿನಿಂದ ಸೂಡಿಯನ್ನು ಬಿಗಿಯಾಗಿ ಕಟ್ಟಿ ದೇವರ ಕೋಣೆಯೊಳಗೆ ಹೋಗಿ ಕುಳಿತುಕೊಂಡಳು. ಸುಮಾರು ಹತ್ತು ನಿಮಿಷ ಅಲ್ಲೇ ಕುಳಿತುಕೊಂಡಳು. ಆಕೆ ಕೈಮುಗಿಯುತ್ತಾ ತನ್ನ ಚಿಕ್ಕ ತುಟಿಗಳನ್ನಾಡಿಸುವುದು ಮಂದವಾಗಿ ಕಾಣುತ್ತಿತ್ತೇ ಹೊರತು ಅದೇನು ಪ್ರಾರ್ಥನೆಯೋ, ಮಂತ್ರಗಳೋ, ಅಹವಾಲೋ, ಪ್ರಾರ್ಥನೆಯೋ ನನಗೆ ತಿಳಿಯಲಿಲ್ಲ. ಈ ದೃಶ್ಯವು ಇಂದು ನಿನ್ನೆಯದ್ದೇನೂ ಅಲ್ಲ. ಆದರೆ ಇಂದಿಗೂ ಅಮ್ಮ ಆ ದೇವರಲ್ಲಿ ಏನು ಕೇಳಿಕೊಳ್ಳುತ್ತಾಳೆ ಎಂಬುದು ನಿಗೂಢ.
ಈ ಒಂದು ವಿಚಾರದಲ್ಲಿ ಮಾತ್ರ ಅಮ್ಮ ತನ್ನತನವನ್ನು ಉಳಿಸಿಕೊಂಡಿರುವುದು ನನಗೆ ಖುಷಿಯಾಯಿತು. ಅಪ್ಪನಂತೆ ಅವಳಿಗೆ ಆಡಂಬರದ, ತೋರಿಕೆಯ ಪೂಜೆಗಳು ಬೇಕಾಗಿರಲಿಲ್ಲ. ಸುಖಾಸುಮ್ಮನೆ ಆಕೆ ದೇವರುಗಳ ಹೆಸರನ್ನಿಟ್ಟುಕೊಂಡು ತನ್ನ ಬೇಳೆ ಬೇಯಿಸುತ್ತಲಿರಲಿಲ್ಲ. ದಿನಕ್ಕೆರಡು ಬಾರಿ ದೇವರಕೋಣೆಯಲ್ಲಿ ಕೈಮುಗಿದರೂ ಆಕೆ ಮಹಾ ಧಾರ್ಮಿಕಳೂ, ಸಂಪ್ರದಾಯವಾದಿಯೂ ಆಗಿರಲಿಲ್ಲ. ಇನ್ನು ನಿಸ್ಸಂದೇಹವಾಗಿಯೂ ಅಪ್ಪನಿಗಿಂತ ಹತ್ತುಪಟ್ಟು ತಾಳ್ಮೆ, ಮನಶ್ಶಾಂತಿಗಳು ಅಮ್ಮನಲ್ಲಿ ನೆಲೆಯಾಗಿರುವುದು ನನ್ನನ್ನೂ ಸೇರಿದಂತೆ ಎಲ್ಲರಿಗೂ ತಿಳಿದ ಸಂಗತಿಯೇ ಆಗಿತ್ತು. ಹೀಗಾಗಿ ತನಗೇನು ಬೇಕು ಮತ್ತು ತಾನೇನು ಮಾಡುತ್ತಿದ್ದೇನೆ ಎಂಬ ಅರಿವಿಲ್ಲದ ಕೀಲಿಗೊಂಬೆಯಂತೆ ಅಪ್ಪ ಸಾವಿರದೊಂದನೇ ಬಾರಿ ಅಂದೂ ಕೂಡ ನನಗೆ ಕಂಡ.
ಅಮ್ಮ ದೇವರ ಬಳಿ ಏನು ಕೇಳಿರಬಹುದು? ಒಮ್ಮೆ ಕೇಳಿ ನೋಡೋಣ ಅನ್ನಿಸಿತು. ಆದರೆ ಅದು ಅಮ್ಮ ಮತ್ತು ದೇವರ ನಡುವಿನ ಖಾಸಗಿ ವಿಷಯವಿರಬಹುದು ಎಂದು ಲೆಕ್ಕಹಾಕಿ ನಾನು ಈ ಬಗ್ಗೆ ಮುಂದುವರಿಯಲಿಲ್ಲ. ಆದರೂ ‘ಇಬ್ಬರೂ ಬಂದು ಬೇಡಿದರಲ್ಲಾ… ದೇವರು ಯಾರ ಪರ ಇರಬಹುದು?’, ಎಂದು ಒಳಗೊಳಗೇ ತಲೆಕೆರೆದುಕೊಂಡೆ.
*********
ಅಂದು ನಾನೇ ಒಮ್ಮೆ ದೇವರ ಕೋಣೆಯೊಳಕ್ಕೆ ನಡೆದುಹೋದೆ. ನಮ್ಮ ಮನೆಯ ದೇವರಕೋಣೆಯ ವಿಚಾರಕ್ಕೆ ಬಂದರೆ ನಾನೊಬ್ಬ ಪ್ರವಾಸಿಯಿದ್ದ ಹಾಗೆ. ನೆನಪಾದಾಗ ಮತ್ತು ಮನಸ್ಸಾದಾಗಲಷ್ಟೇ ಆ ಕಡೆ ಹೋಗಿಬರೋ ಆಸಾಮಿ ನಾನು. ನನ್ನ ಈ ಗುಣದ ಬಗ್ಗೆ ಅಪ್ಪನಿಗೆ ಸಾಕಷ್ಟು ದೂರುಗಳಿವೆ.
ಅಂದು ದೇವರ ಕೋಣೆಯ ಒಳಹೊಕ್ಕಿ ಎಲ್ಲಾ ದೇವರುಗಳನ್ನೂ ಸುಮ್ಮನೆ ನೋಡಿದೆ. ಬಹುತೇಕ ದೇವರುಗಳು ನಿರುಮ್ಮಳವಾಗಿ ಮಂದಸ್ಮಿತರಾಗಿದ್ದರು. ಅಪ್ಪ ಇಟ್ಟ ಹೂಗಳು ಈ ದೇವರುಗಳಿಗೆ ಹೆಚ್ಚುವರಿ ಆಹ್ಲಾದವನ್ನು ನೀಡುತ್ತಿರುವಂತೆ, ಅಗರಬತ್ತಿಯ ಸಪೂರ ಧೂಪವು ಮೆಲ್ಲಗೆ ಹರಡುತ್ತಾ ಒಂದು ವಿಲಕ್ಷಣ ಅರೆದೈವಿಕ ವಾತಾವರಣವನ್ನು ಸೃಷ್ಟಿಸುತ್ತಿರುವಂತೆ ಅನುಭವವಾಯಿತು. ದೇವರುಗಳೂ ಕೂಡ ಮನುಷ್ಯರಂತೆಯೇ ತಮ್ಮ ಮೂಡ್ ಗಳಿಗನುಸಾರವಾಗಿ ವ್ಯವಹರಿಸಿದರೆ ಅದೆಷ್ಟು ಚೆನ್ನಾಗಿರುತ್ತಿತ್ತು ಎಂಬ ಯೋಚನೆಯು ಮನದಲ್ಲಿ ಸುಳಿದುಹೋಯಿತು. ಒಂದು ಪಕ್ಷ ಹಾಗೇನಾದರೂ ಇದ್ದಲ್ಲಿ ದೇವರು ಸಿಡುಕಿದ ಬೆನ್ನಿಗೆ ಭಕ್ತನ ಜಂಘಾಬಲವೇ ಉಡುಗಿಹೋಗುತ್ತಿತ್ತು. ಹಾಗಿದ್ದಲ್ಲಿ ಅಮ್ಮನ ಮುಖಕ್ಕೆ ಬಿಸಿಸಾಂಬಾರು ಎರಚಿದ ನಂತರ ಅಪ್ಪ ಯಾವ ಮುಖ ತಾನೇ ಇಟ್ಟುಕೊಂಡು ಮತ್ತೆ ದೇವರ ಕೋಣೆಗೆ ಕಾಲಿಡುತ್ತಿದ್ದ ಹೇಳಿ?
ಅಪ್ಪನ ಕರ್ಕಶ ಮಂತ್ರಗಳನ್ನು, ಅಮ್ಮನ ಮೌನದ ಪ್ರಾರ್ಥನೆಗಳೆರಡನ್ನೂ ಈ ದೇವರುಗಳು ಹೇಗೆ ಸ್ವೀಕರಿಸುತ್ತಿರಬಹುದು ಎಂಬ ಬಗ್ಗೆ ನನಗೆ ಅಚ್ಚರಿಯಾಯಿತು. ಹೊಗಳಿಕೆಯಿಂದಲೇ ದೇವತೆಗಳು ಪ್ರಸನ್ನರಾಗುತ್ತಿದ್ದರೆ ಅಪ್ಪ ನಿಸ್ಸಂದೇಹವಾಗಿಯೂ ಮುಂದೆ ಸ್ವರ್ಗದ ಲೋಲುಪತೆಯನ್ನು ಅನುಭವಿಸಲಿದ್ದ. ಆದರೆ ಅಪ್ಪ ಸ್ವರ್ಗಕ್ಕೆ ಹೋಗಬೇಕಿದ್ದರೆ ಆತ ಮೊದಲು ಸಾಯಬೇಕಾಗಿತ್ತು. ಅಪ್ಪ ಸತ್ತಿದ್ದೇ ಆದರೆ ಈ ಮನೆಯೇ ಸ್ವರ್ಗವಾಗುವುದು ಖಡಾಖಂಡಿತವಾಗಿತ್ತು. ಆದರೆ ಇಂಥಾ ರಹಸ್ಯ ಆಸೆಗಳು ಅಷ್ಟು ಬೇಗ ನೆರವೇರುವುದಿಲ್ಲವಲ್ಲಾ! ನನ್ನ ಈ ಯೋಚನಾಲಹರಿಯ ವೇಗಕ್ಕೆ ನಾನೇ ನಕ್ಕುಬಿಟ್ಟೆ. ಈ ಬಗ್ಗೆ ಅಮ್ಮನಿಗೇನೂ ಹೇಳಲಿಲ್ಲ. ಹೇಳಿದರೆ ಹಲ್ಲುದುರಿಸಿಬಿಟ್ಟಾಳು ಮತ್ತೆ! ಅವಳಿಗೆ ಅಪ್ಪನ ಬಗ್ಗೆ ಕೋಪವಿರಬಹುದು. ಆದರೆ ತೀರಾ ಕೊಲೆ ಮಾಡುವಷ್ಟೇನಲ್ಲ.
ಮತ್ತೊಮ್ಮೆ ದೇವರಕೋಣೆಯಲ್ಲಿದ್ದ ದೇವರುಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದೆ. ಅವರೆಲ್ಲರೂ ನಿರುಮ್ಮಳರಾಗಿದ್ದರು. ಅಪ್ಪ ಮತ್ತು ಅಮ್ಮ ಕೂಡ ಹೊರಜಗತ್ತಿಗೆ ನಿರುಮ್ಮಳರಾಗಿ ಕಾಣುವಂತೆ. ಏನೇನೂ ಸಮಸ್ಯೆಗಳಿಲ್ಲದ ಆದರ್ಶ ದಂಪತಿಗಳಂತೆ. ಅಪ್ಪ ಮತ್ತು ಅಮ್ಮ ಜೊತೆಯಾಗಿ ಸೃಷ್ಟಿಸಿಕೊಂಡ ಈ ಸುಳ್ಳಿನ ಜಾಲದಲ್ಲಿ ಅಂದು ದೇವರೂ ಕೂಡ ಭಾಗೀದಾರನೆಂಬಂತೆ ನನಗನ್ನಿಸಿತು. ಯಾವುದು ಸತ್ಯ, ಯಾವುದು ಸುಳ್ಳೆಂಬುದು ಮನದಟ್ಟಾಗದೆ ಮತ್ತೆ ನಾನು ಗೊಂದಲದಲ್ಲಿ ಮುಳುಗಿಹೋದೆ. ಅಂದು ನಾನೂ, ನನ್ನ ಬದುಕೂ ಒಂದು ದೊಡ್ಡ ಸುಳ್ಳೆಂಬಂತೆ ಅನಿಸಿ ನಿಜಕ್ಕೂ ಬಹಳ ಮುಜುಗರಪಟ್ಟೆ.
*********
”ಅಮ್ಮಾ… ನೀನು ದೇವರನ್ನು ನಂಬ್ತೀಯಾ?”, ಮರುದಿನ ಸುಮ್ಮನೆ ಮಾತುಮಾತಲ್ಲೇ ಅಮ್ಮನಿಗೆ ಕೇಳಿದೆ.
”ಹೂಂನಪ್ಪಾ…”, ಅಂದರು ಅಮ್ಮ.
”ಅಪ್ಪನನ್ನು ನಂಬ್ತೀಯಾ?”, ಎಂದೆ.
ಅಮ್ಮ ನಕ್ಕುಬಿಟ್ಟಳು. ಉತ್ತರವು ಅವಳಿಗೂ ತಿಳಿದಂತಿರಲಿಲ್ಲ.
”ನೀನು ದೇವರನ್ನು ನಂಬ್ತೀಯಾ ಪುಟ್ಟ?”, ಈ ಬಾರಿ ಅಮ್ಮ ನನ್ನನ್ನು ಕೇಳಿದಳು.
”ನಿಮ್ಮಿಬ್ಬರನ್ನು ನೋಡುತ್ತಾ ಮನುಷ್ಯರಲ್ಲೂ, ದೇವರಲ್ಲೂ ನನಗಿದ್ದ ಚೂರುಪಾರು ನಂಬಿಕೆಗಳೂ ಹೊರಟುಹೋಗಿವೆ”, ಎಂದೆ. ನನ್ನ ಸಿನಿಕತನದ ಮಾತನ್ನು ಕಂಡ ಅಮ್ಮ ಮತ್ತೆ ನಕ್ಕಳು.
”ಏನಾದರೂ ಹೇಳುವುದಿದ್ದರೆ ಹೇಳಮ್ಮಾ…”, ಅಂದೆ.
”ದೇವ್ರು ದೇವ್ರು ಅಂತ ಸಾಯ್ಬೇಡ… ನೀನು ದೇವ್ರಾಗೋದೇನೂ ಬೇಡ… ಮನುಷ್ಯನಾದ್ರೆ ಸಾಕು”, ಅಂದಳು ಅಮ್ಮ. ಹಿಂದಿನ ದಿನ ನಾನು ದೇವರಕೋಣೆಗೆ ಏಕಾಏಕಿ ಹೋಗಿದ್ದನ್ನು ಅಮ್ಮ ನೋಡಿದ್ದಳೋ ಏನೋ! ಆದರೆ ನಾನು ಅಪ್ಪನ ಜೆರಾಕ್ಸ್ ಕಾಪಿಯಲ್ಲವೆಂಬ ಬಗ್ಗೆ ಅವಳಿಗೆ ಹೆಮ್ಮೆಯಿತ್ತು. ಬಹುಷಃ ನನಸಾಗಿದ್ದ ಅವಳ ಬೆರಳೆಣಿಕೆಯ ಕನಸುಗಳಲ್ಲಿ ಇದೂ ಒಂದು.
ಅಮ್ಮನ ಆ ಮಾತನ್ನು ಕೇಳುತ್ತಾ ಮನುಷ್ಯನಾದ ನಾನು ದೇವರಿಗಿಂತಲೂ ಶಕ್ತಿಶಾಲಿ ಎಂದು ಮೊದಲ ಬಾರಿಗೆ ನನಗನ್ನಿಸಿತು. ಜೊತೆಗೇ ದೇವರಾಗುವುದಕ್ಕಿಂತ ಮನುಷ್ಯನಾಗುವುದು ವಾಸಿಯೆಂದೂ ಅನ್ನಿಸಿತು. ಹೀಗಾಗಿ ದೇವರಕೋಣೆಗೆ ಹೋಗಬೇಕಿದ್ದ ನನ್ನ ಆ ಕ್ಷಣದ ಯೋಜನೆಯನ್ನು ತಾತ್ಕಾಲಿಕವಾಗಿ ಮುಂದೂಡಿದೆ.
ಒಳಗಿದ್ದ ದೇವರುಗಳು ಎಂದಿನಂತೆ ಅಂದೂ ಸುಮ್ಮನೆ ನಕ್ಕಿದ್ದರೆ ಅಚ್ಚರಿಯೇನಿಲ್ಲ!
*********






ತುಂಬಾ ಚಂದದ ಕತೆ ಪ್ರಸಾದ್. ಇದು ಹಳ್ಳಿಯ ಅನೇಕ ಮನೆಯ ಕತೆಯೂ ಹೌದು
ತುಂಬಾ ಥ್ಯಾಂಕ್ಯೂ ಸುಧಾ ಅವರೇ…
ಒಂದು ಮಧುರವಾದ ಅಂತರಾವಲೋಕನವನ್ನು ಕೂಡ ಕತೆಯ ರೂಪಕ್ಕೆ ಇಳಿಸಿರುವ ಹೆಚ್ಚುಗಾರಿಕೆ
ಕತೆಗಾರ ಪ್ರಸಾದ್ ನಾಯಕ್ ಅವರದು,
ದೇವರ ಕೋಣೆಯಿಂದ ಹೊರಬಾಗಿಲ ಹೊಸ್ತಿಲ ನಡುವಿನ ಸಂಗತಿಗಳು ಕೂಡ ಹೀಗೆ ಕತೆಯಾಗಿ ಹುರಿಗಟ್ಟುವದು “ದ್ಯಾವ್ರೇ………”ಯಲ್ಲಿ ಯಶಸ್ವಿಯಾಗಿ ಜರುಗಿದೆ.
*ಡಿ.ಎಮ್. ನದಾಫ್
ಅಫಜಲಪುರ
ಥ್ಯಾಂಕ್ಸ್ ನದೀಫ್ ಸರ್ ನಿಮ್ಮ ಪ್ರತಿಕ್ರಿಯೆಗೆ… 🙂
ಒಳ್ಳೆಯ ಕತೆ. ಒಳ್ಳೆಯ ನಿರೂಪಣೆ
ಧನ್ಯವಾದಗಳು ಶ್ರವಣಕುಮಾರಿಯವರೇ…
D.M Nadaf avara abhiprayavannu nanu anumodisuttene. Kathe sogasagi moodi bandide Prasad