ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

“ಪ್ರಶ್ನೆಗಳಿರುವುದು ಷೇಕ್ಸ್ ಪಿಯರನಿಗೆ”

ಜಿ ಎನ್ ಮೋಹನ್ ಅವರು ತಮ್ಮ ಮೊದಲ ಕಾವ್ಯ ಸಂಕಲನ “ಸೋನೆ ಮಳೆಯ ಸಂಜೆ” ಪ್ರಕಟವಾದ ಹದಿನೈದು ವರ್ಷಗಳ ಬಳಿಕ ಎರಡನೇ ಸಂಕಲನ “ಪ್ರಶ್ನೆಗಳಿರುವುದು ಷೇಕ್ಸ್ ಪಿಯರನಿಗೆ” ಹೊರತರುತ್ತಿದ್ದಾರೆ. ಬೆಂಗಳೂರಿನ ಅಭಿನವ ಬಳಗ ಈ ಕೃತಿ ಪ್ರಕಟಿಸಿದೆ. ಪುಸ್ತಕದ ಹಿನ್ನುಡಿಯನ್ನು ಇಲ್ಲಿ ಕೊಡಲಾಗಿದೆ:

gnmcover.jpg

ಅಬೀಡ್ಸ್ ರಸ್ತೆಯ ಮೆರವಣಿಗೆ…

ಮಾಧ್ಯಮದಲ್ಲಿ ಕಮರ್ಷಿಯಲ್ ಆದ ಒತ್ತಾಯಗಳನ್ನು ಉಲ್ಲಂಘಿಸಿ, ಭಾವದ ಜಗುಲಿಯ ತೋರಣ ನಳನಳಿಸುವಂತೆ ನೋಡಿಕೊಳ್ಳುತ್ತಿರುವ ಪುಟ್ಟದಾದರೂ ಶಕ್ತಿಶಾಲಿಯಾದ ವರ್ಗವೊಂದಿದೆ. ಜಿ ಎನ್ ಮೋಹನ್ ಆ ವರ್ಗದವರು. ಮಾಧ್ಯಮದ ಕಡಲಲ್ಲಿ ಅವರದು ಸಂಸ್ಕೃತಿ ಪ್ರೀತಿಯ ಹಾಯಿದೋಣಿ. ಎಕ್ಕುಂಡಿಯವರ ಮಾತಿನಲ್ಲಿ ಹೇಳುವುದಾದರೆ, ಅದು “ಭಾವಗಂಧಿ ಕಾಳಜಿ”.

ಮೋಹನ್ ಅವರ ರೂಪಕಲೋಕದ ಕಾಯಕ ಮೊದಲಾದದ್ದು “ಸೋನೆ ಮಳೆಯ ಸಂಜೆ”ಗಳಲ್ಲಿ. ಅದು ತನ್ನೊಳಗನ್ನು ಹುಡುಕುತ್ತಾ ಸಾಗಿದ ದೂರಕ್ಕೆ ಗುರುತೆಂಬಂತೆ ಈ ಹೊಸ ಕವಿತೆಗಳಿವೆ. ಇಲ್ಲೂ ಸೋನೆ ಮಳೆ ಬಗೆಗಿನ ಕಾತರದ ಕುರುಹುಗಳಿವೆ. “ಎದೆಯ ಮೂಲೆಯಿಂದ ಸವಾರಿ ಹೊರಟ ಹಾಡ”ನ್ನು ನೆಚ್ಚುವ ಬಗೆಯಂಥ ಇಲ್ಲಿನ ನೂರು ಸ್ವರಗಳು ಬಿರುಮಳೆಯನ್ನು ಬಯಸದ ಮನಃಸ್ಥಿತಿಯಿಂದಲೇ ಬಂದದ್ದಿರಬಹುದು.

ನೇಪಥ್ಯದಲ್ಲಿ ಮಾತ್ರ ನಿಲುಕುವ ನೇರವಂತಿಕೆಯಿಂದ ದಕ್ಕಿದ ವಿಸ್ತಾರ ಇಲ್ಲಿ ಗೋಚರಿಸುತ್ತದೆ. ಹಾಗಾಗಿಯೇ ಈ ಕವಿತೆಗಳು ಊರ್ಮಿಳೆ, ಕರ್ಣ, ಸಂಗ್ಯಾ, ಮ್ಯಾಕ್ ಬೆತ್, ಜಕ್ಕಿಣಿಯರ ಜಗತ್ತಿನಲ್ಲಿ ಸಂಚರಿಸುತ್ತಾ ರಂಗದ ಬೆಳಕು ಕತ್ತಲೆಯ ಅಂತರಂಗದಿಂದಲೇ ಆವಿರ್ಭವಿಸಿದಂತಿವೆ; ಎಲ್ಲ ಕಾಲಗಳ ಪ್ರಶ್ನೆಗಳನ್ನೂ ಹೊತ್ತು “ಅಬೀಡ್ಸ್ ರಸ್ತೆಯಲ್ಲೇ” ಮೆರವಣಿಗೆ ಹೊರಟ ಕಥನಗಳೊಂದಿಗೆ ಕೂಡಿಕೊಂಡಂತಿವೆ.

ಇಂಥ ಈ ಕವಿತೆಗಳಿಗೆ ನಮಸ್ಕಾರ.

ವೆಂಕಟ್ರಮಣ ಗೌಡ 

‍ಲೇಖಕರು avadhi

9 October, 2007

1 Comment

  1. Anandateertha pyati

    ಕವನಸಂಕಲನದ ಕವರ್ಪೇಜ್ ಫೈನ್ ಫೈನ್

    – ಪ್ಯಾಟಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading