ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಶಸ್ತಿಯನ್ನು ವಾಪಸ್ಸು ಮಾಡಿದ ಸಾಹಿತಿಗಳು ಮತ್ತು ಮಾಡದ ಸಾಹಿತಿಗಳು ಪರಸ್ಪರರ ಮೇಲೆ ಕೆಸರೆರೆಚಿಕೊಂಡು ಗಲೀಜು ಮಾಡಿಕೊಳ್ಳುತ್ತಿದ್ದಾರೆ..

ಕರ್ನಾಟಕ ಸಾಹಿತ್ಯ ಅಕಾಡೆಮಿ ಇತ್ತೀಚಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿತ್ತು.
ಪ್ರತಿಭಾ ನಂದಕುಮಾರ್ ತಮ್ಮ ‘ಮುದುಕಿಯರಿಗಿದು ಕಾಲವಲ್ಲ’ ಕವಿತಾ ಸಂಕಲನಕ್ಕೆ ಬಹುಮಾನ ಸ್ವೀಕರಿಸಿದರು.
 
ಈ ಸಂದರ್ಭದಲ್ಲಿ ಎಲ್ಲಾ ಪ್ರಶಸ್ತಿ ವಿಜೇತರ ಪರವಾಗಿ ಅವರು ಮಾಡಿದ ಭಾಷಣದ ಪೂರ್ಣ ಪಾಠ ಇಲ್ಲಿದೆ.
ಚರ್ಚೆಗೆ ಸ್ವಾಗತ
 

ಪ್ರಸ್ತುತ ಪ್ರಶಸ್ತಿ ವಾಪಸಿಯ ಕಾಲದಲ್ಲಿ ಮತ್ತು ಅಕಾಡೆಮಿಯ ಪ್ರಶಸ್ತಿ ಆಯ್ಕೆಯ ಬಗ್ಗೆಯೇ ಚರ್ಚೆ ಉಂಟಾಗಿರುವಂತಹ ಸಂದರ್ಭದಲ್ಲಿ ಪ್ರಶಸ್ತಿಯನ್ನು ಸ್ವೀಕಾರ ಮಾಡುವುದು ಮಾತ್ರವಲ್ಲದೇ, ಎಲ್ಲಾ ಸ್ವೀಕೃತರ ಪರವಾಗಿ ಮಾತನಾಡುವುದು ಮತ್ತು ಸ್ವೀಕೃತಿಯನ್ನು ಸಮರ್ಥಿಸಿಕೊಂಡು ಮಾತನಾಡುವುದು ಅನಿವಾರ್ಯವಾಗಿಬಿಟ್ಟಿದೆ ಮತ್ತು ವಿಚಿತ್ರ ಅನ್ನಿಸುತ್ತಿದೆ. ಎಲ್ಲರ ಪರವಾಗಿ ಅಂತ ನಾನು ಹೇಳಿದರೂ ನನ್ನ ಮಾತುಗಳಿಗೆ ಎಲ್ಲರ ಸಹಮತವಿದೆ ಎಂದು ಧೈರ್ಯವಾಗಿ ಹೇಳಲಾಗುವುದಿಲ್ಲ. ಏಕೆಂದರೆ ಇದು ನನ್ನ ಮಾತು, ಅದನ್ನು ಪ್ರಶಸ್ತಿ ವಿಜೇತರೆಲ್ಲರೂ ಒಪ್ಪದಿರಬಹುದಾದ ಸಾಧ್ಯತೆ ಇದೆ.

p mahamud award cartoonಇಂದು ಪತ್ರಿಕೆಯೊಂದರಲ್ಲಿ ಡಾ ಶಿವಮೂರ್ತಿ ಮುರುಘಾ ಶರಣರು ಒಂದು ಮಾತು ಬರೆದಿದ್ದಾರೆ – ಪ್ರಶಸ್ತಿಗಾಗಿ ಬರವಣಿಗೆ ಅಲ್ಲ, ಉತ್ತಮ ಬರವಣಿಗೆಗಾಗಿ ಪ್ರಶಸ್ತಿ ಅಂತ.  ಇದು ಸೃಜನಶೀಲ ಜಗತ್ತಿನ ಸಾರ್ವಕಾಲಿಕ ಸತ್ಯವನ್ನು ಮತ್ತೆ ನೆನಪಿಸುವಂತಹ ಮಾತು. ಏಕೆಂದರೆ ಇಂದು ಬರವಣಿಗೆ ಮತ್ತು ಪ್ರಶಸ್ತಿ ಎರಡೂ ಪೊಲಿಟಿಕಲ್ ಸ್ಟೇಟ್ ಮೆಂಟ್ ಗಳಾಗಿಬಿಟ್ಟಿವೆ.

ಪ್ರಸ್ತುತ ನಮ್ಮ ನಾಡು ನುಡಿಯ ಸಂದರ್ಭದಲ್ಲಿ ಪ್ರತಿಯೊಂದೂ ವಿಪರೀತದ ಅಪಾಯದಿಂದ ನರಳುತ್ತಿದೆ. ಎಲ್ಲದರ ಬಗ್ಗೆಯೂ ನಾವು ಅತಿಯಾದ ರೀತಿಯಲ್ಲಿ – ಉತ್ಪ್ರೇಕ್ಷಿತವಾಗಿ – ಪ್ರತಿಕ್ರಿಯಿಸುತ್ತಿದ್ದೇವೆ. ಅದನ್ನು ಸರಿ ಎಂದು ನಿರೂಪಿಸಲು ಹಾಗೂ ಅದೇ ಸರಿ ಪ್ರಮಾಣೀಕರಿಸಲು ತೋಚಿದ ಎಲ್ಲಾ ಮಾರ್ಗಗಳನ್ನೂ ಬಳಸುತ್ತಿದ್ದೇವೆ. ಹಾಗಾಗಿ ಯಾವುದರ ಬಗ್ಗೆಯೂ ಅದರ ಔಚಿತ್ಯವನ್ನು ಕುರಿತು ಚಿಂತಿಸುವ ಗೊಡವೆಗೇ ಹೋಗುತ್ತಿಲ್ಲ. ಇದರಿಂದ ಅವಸರದ ಪ್ರತಿಕ್ರಿಯೆಗಳನ್ನು ಒಪ್ಪುವ ಅಥವಾ ಪ್ರತಿಭಟಿಸುವ ಭರಾಟೆಯಲ್ಲಿ ಪರ ಮತ್ತು ವಿರೋಧ ಎನ್ನುವ ಗುಂಪುಗಾರಿಕೆ ಬಹಳ ವೇಗವಾಗಿ ರೂಪುಗೊಳ್ಳುತ್ತಿವೆ. ಇದು ರಾಜಕೀಯ ವಲಯ ಮಾತ್ರವಲ್ಲದೇ ನಮ್ಮ ಸಾಂಸ್ಕೃತಿಕ ಜಗತ್ತನ್ನೂ ಆವರಿಸಿಕೊಂಡುಬಿಟ್ಟಿದೆ.

ಇಂದು ನಾವು ಕೇವಲ ಕಲೆಯ ಬಗ್ಗೆಯಾಗಲೀ ಸಾಹಿತ್ಯದ ಬಗ್ಗೆಯಾಗಲೀ ಮಾತನಾಡುವ ಸಾಧ್ಯತೆಗಳು ಇಲ್ಲವಾಗಿ, ಎಲ್ಲವನ್ನೂ ಪರಿಸ್ಥಿತಿಯ ನೆಲೆಯಲ್ಲಿಯೇ – ಕಾಂಟೆಕ್ಸ್ಟ್ ನಲ್ಲಿ –  ಮಾತನಾಡಬೇಕಾದ ಅನಿವಾರ್ಯತೆ ಒದಗಿದೆ. ಇದರಿಂದಾಗಿ ನೀವು ನಮ್ಮ ಪರ ಅಲ್ಲದಿದ್ದರೆ ನಮ್ಮ ವಿರುದ್ಧ ಅನ್ನುವ ಅನಿವಾರ್ಯವನ್ನು ಹೇರುವ ಅಸಹಾಯಕತೆಯತ್ತ ಸೃಜನಶೀಲ ಮನಸ್ಸುಗಳನ್ನು ಒತ್ತೆಯಿಟ್ಟುಕೊಳ್ಳಲಾಗುತ್ತಿದೆ. ಪರಿಣಾಮವಾಗಿ ದೇವನೂರ ಮಹಾದೇವರು ಹೇಳುವ ಹಾಗೆ “ನಾವೀಗ ಸಾಂಸ್ಕೃತಿಕ ಗರೀಬರಾಗಿದ್ದೇವೆ!? ಇಂದು, ನಮ್ಮ ಭೂಮಿಯನ್ನು ನಮ್ಮ ಕೈಯಾರ ನಾವೇ ಕಳೆದುಕೊಂಡು ಅಲ್ಲೆ ನಾವು ಕೂಲಿಯಾಳುಗಳಾಗುತ್ತಿರುವಂತೆ ಸಾಂಸ್ಕೃತಿಕ ನೆಲದಲ್ಲೂ ನೆಲೆ ಕಳೆದುಕೊಳ್ಳುತ್ತಿದ್ದೇವೆ. ಇಂದು, ಉದ್ರೇಕ ಉನ್ಮಾದಗಳ ಮುಂದೆ ವಿಚಾರ ವಿವೇಕಗಳು ತತ್ತರಿಸುತ್ತವೆ.”

ಚರಿತ್ರೆಯನ್ನು ನೋಡಿದರೆ ಸಾಹಿತಿಗಳು ಮತ್ತು ಚಿಂತಕರು ತಮ್ಮ ಕೃತಿಗಳ ಮೂಲಕವೇ ಪ್ರತಿಭಟಿಸುತ್ತಿದ್ದರು. ಕಲೆ ಜನಸಮುದಾಯದ ಮನವೊಲಿಸಿ, ಕಾಂತಾಸಮ್ಮಿತವಾಗಿ ಹೇಳುವ ಪರಿಪಾಠ ಮಾಯವಾಗಿದೆ. ಘೋಷಣೆ ಮತ್ತು ಗದ್ದಲಗಳೇ ತಮ್ಮ ಚಿಂತನೆ ಮತ್ತು ನಿಲುವನ್ನು ವ್ಯಕ್ತಗೊಳಿಸುವ ಮಾರ್ಗ ಎಂದು ಭ್ರಮಿಸುವತ್ತ ಸಾಹಿತಿಗಳು ಸಾಗಬೇಕಾದ ಅನಿವಾರ್ಯತೆ ಉಂಟಾಗುತ್ತಿದೆ. ಇದರಿಂದಾಗಿ ಎಲ್ಲದಕ್ಕೂ ಪರ ಮತ್ತು ವಿರೋಧ ಎನ್ನುವ ಎರಡು ಧ್ರುವಗಳು ಉಂಟಾಗಿ – ಪೋಲರೈಸೇಶನ್ – ಪ್ರಶಸ್ತಿಯನ್ನು ವಾಪಸ್ಸು ಮಾಡಿದ ಸಾಹಿತಿಗಳು ಮತ್ತು ಮಾಡದ ಸಾಹಿತಿಗಳು ಪರಸ್ಪರರ ಮೇಲೆ ಕೆಸರೆರೆಚಿಕೊಂಡು ಗಲೀಜು ಮಾಡಿಕೊಳ್ಳುತ್ತಿದ್ದಾರೆ.

ಒಂದು ಕಡೆ ಚಿಂತಕರು ಎನ್ನಿಸಿಕೊಳ್ಳಬೇಕಾದರೆ ಮಾತಾಡಲೇ ಬೇಕು, ಮೌನ ಸಲ್ಲದು ಅನ್ನುವ ಒತ್ತಡವನ್ನು ಹೇರುತ್ತಾ, ಇನ್ನೊಂದು ಕಡೆ ಉಚ್ಚರಿಸಿದ ಪ್ರತಿಯೊಂದನ್ನೂ ತಮತಮಗೆ ಬೇಕಾದಂತೆ ಅರ್ಥೈಸಿಕೊಳ್ಳುತ್ತಾ, ತಿರುಚುತ್ತಾ, ಅದನ್ನು ಔಟ್ ಆಫ಼್ ಕಾಂಟೆಕ್ಸ್ಟ್ ನಲ್ಲಿ ಬಳಸಿಕೊಳ್ಳುತ್ತಾ , ಅದನ್ನು ಪ್ರಚಾರತಂತ್ರವಾಗಿಸಿಕೊಳ್ಳುತ್ತಿರುವ ಧಾವಂತ ಕಾಣುತ್ತಿದೆ. ಕೆಲವು ಸಮರ್ಥ ಧ್ವನಿಗಳು ಸಂದರ್ಭವನ್ನು ಸರಿಯಾಗಿ ಗ್ರಹಿಸಿ ವಿವೇಚನೆಯಿಂದ ಮಾತಾಡುತ್ತಿದ್ದರೂ ಈ ಗದ್ದಲದಲ್ಲಿ ಅವೂ ಕಳೆದುಹೋಗುತ್ತಿವೆ.  ಹೇಳುತ್ತಿರುವ ಮಾತಿನಲ್ಲಿ ಇರುವ ಸತ್ಯಕ್ಕಿಂತ ಯಾರು ಯಾಕೆ ಹೇಳುತ್ತಿದ್ದಾರೆ ಅನ್ನುವುದರ ಕಡೆಗೇ ಹೆಚ್ಚು ಒತ್ತು ನೀಡಲಾಗುತ್ತಿದೆ. ಹಾಗಾಗಿ ಪ್ರತೀ ಚಿಂತನೆಗೂ ಸಂದರ್ಭೋಚಿತವಾಗಿ ಬಣ್ಣ ಬಳಿಯುವ ಚಾಳಿ ಜಾರಿಯಲ್ಲಿದೆ.

ಇಂತಹ ಪರಿಸ್ಥಿತಿಯಲ್ಲಿ, ಅಕಾಡೆಮಿ ಕೊಡಮಾಡಿರುವ ಉತ್ತಮ ಪುಸ್ತಕ ಬಹುಮಾನವನ್ನು ಸ್ವೀಕರಿಸುವ ಸಂತೋಷವನ್ನೂ ಆತಂಕವನ್ನೂ ಒಟ್ಟಿಗೇ ಅನುಭವಿಸುವಂತಹ ಹಾಗೂ  ಪ್ರಶ್ನೆಗೂ ಮೊದಲೇ ಸಮಂಜಸ ಉತ್ತರವನ್ನು ಸಿದ್ಧಪಡಿಸಿಕೊಂಡು ಬರಬೇಕಾದ ಅಸಹಾಯ ಸ್ಥಿತಿಯ ಅಪಾಯ ನಮ್ಮ ಮುಂದಿದೆ. ಆದರೆ  ಯಾವುದೇ ಮುಜುಗರಕ್ಕೆ ಕಾರಣವಿಲ್ಲ ಏಕೆಂದರೆ ಪ್ರತಿ  ಸೃಜನಾತ್ಮಕ ವ್ಯಕ್ತಿ ಸಮುದಾಯದ ಒಳ್ಳೆಯ ಮತ್ತು ಕೆಟ್ಟ ಸಂಗತಿಗಳಿಗೆ ತನ್ನದೇ ರೀತಿಯಲ್ಲಿ ಸ್ಪಂದಿಸುತ್ತಿರುತ್ತಾನೆ/ಳೆ.  ಅದು ಏಕಮುಖವೂ ಆಗಿರಬೇಕಾಗಿಲ್ಲ.

satish acharya return awardsಇಂದು ನಾವು ಸಕ್ರಿಯಾತ್ಮಕವಾಗಿರಬೇಕೇ ಹೊರತು ಪ್ರತಿಕ್ರಿಯಾತ್ಮಕವಾಗಿರುವುದೊಂದೇ ದಾರಿ ಎಂದು ಗಣಿಸಬೇಕಾಗಿಲ್ಲ. ಪ್ರೋ ಆಕ್ಟೀವ್ ಆಗಿರುವುದು ಸಧ್ಯದ ತುರ್ತಾಗಿದೆ. ಅಂದರೆ ನಮ್ಮ ವರ್ತಮಾನದ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಪ್ರತಿಭಟನೆಯೊಂದೇ ಪರಿಹಾರವಲ್ಲ. ಅದಕ್ಕೆ ಪರ್ಯಾಯವಾಗಿ ನ್ಯಾಯದ ಗಟ್ಟಿ ದನಿಯಾಗುವತ್ತ ಹೆಚ್ಚು ಗಮನ ಕೊಡಬೇಕಾಗಿದೆ. ನಾವು ಸದಾ ಭೂತದಲ್ಲೇ ಬದುಕುವ ಟೆನ್ಡೆನ್ಸಿ ಯನ್ನು ಬಿಟ್ಟು ವರ್ತಮಾನದತ್ತ ಮತ್ತು ಭವಿಷ್ಯದತ್ತ ಮುಖ ಮಾಡಬೇಕಾಗಿದೆ. ಹಿಂದಿನ ಸಂಕೋಲೆಗಳನ್ನು ಕಳಚಿಕೊಳ್ಳದಿದ್ದರೆ ಮುಂದಕ್ಕೆ ಅಡಿ ಇಡಲು ಆಗುವುದಿಲ್ಲ ಎನ್ನುವ ಎಚ್ಚರಿಕೆಯನ್ನು ಇಟ್ಟುಕೊಂಡೇ, ಯಾವುದು ಕಟು ವಾಸ್ತವ, ಯಾವುದು ಭ್ರಾಮಿಕ ಎನ್ನುವುದನ್ನೂ ತಿಳಿಯಬೇಕಾಗಿದೆ.

ಜಾಗತಿಕ ಜಗತ್ತಿನ ವಾಸ್ತವಗಳು ನಮ್ಮ ಮನೆ ಅಂಗಳಕ್ಕೇ ಬಂದಿದೆ ಅನ್ನುವುದು ಗೊತ್ತಿದ್ದರೂ ಅದಕ್ಕೆ ಪ್ರತಿಯಾಗಿ ಸಂಸ್ಕೃತಿ ಪರಂಪರೆ ಎನ್ನುವ ಹೆಸರಿನಲ್ಲಿ ಬೇಕಾಬಿಟ್ಟಿ ಅಕ್ರಮಗಳನ್ನು ಸಮರ್ಥಿಸುವ ವಿಷಕಾರೀ ಮನಸ್ಸುಗಳೂ ಸದಾ ಕಾರ್ಯನಿರತವಾಗಿವೆ.  ಇದಕ್ಕೇ ಮೊನ್ನೆ ದೇವನೂರ ಮಹಾದೇವರು ” ಸಮುದಾಯದ ಮನಸ್ಸಿನೊಂದಿಗೆ ನಾವು ಕೊಂಡಿಯಾಗಿ ಮಥಿಸಿ ಮರುಹುಟ್ಟು ಪಡೆಯದಿದ್ದರೆ ನಾವು ಸಮುದಾಯದಿಂದಲೇ ಡ್ರಾಪ್‍ ಔಟ್ ಆಗಿಬಿಡುವ ಸಾಧ್ಯತೆ ಇದೆ” ಎಂದು ಎಚ್ಚರಿಸಿದರು.

ಇಲ್ಲಿ ಸಮುದಾಯ ಮತ್ತು ನಾವು ಎನ್ನುವ ಎರಡು ನೆಲೆಗಳನ್ನು ಗುರುತಿಸಿದರೆ, ಒಂದರ್ಥದಲ್ಲಿ ನಮ್ಮ ಮನಸ್ಸನ್ನು ವಶೀಕರಣಕ್ಕೆ ಒಳಪಡಿಸಿಕೊಳ್ಳಲು ಶತಾಯಗತಾಯ ಯತ್ನಿಸುತ್ತಿರುವ ದುಷ್ಟಶಕ್ತಿಗಳು ಈ ನೆಲೆಗಳು ಪರಸ್ಪರ ಪೂರಕವಾಗಿರಲು ಬಿಡದೇ ವಿರುದ್ಧವಾಗಿಡುವಲ್ಲೇ ಹೆಚ್ಚು ಕ್ರಿಯಾಶೀಲವಾಗಿವೆ ಎನ್ನುವುದು ಗೊತ್ತಾಗುತ್ತದೆ. ಅಂತಹ ವಶೀಕರಣಕ್ಕೆ ಒಳಗಾಗದೇ ಇರುವ ಸ್ಥೈರ್ಯವನ್ನು ತೋರಿಸಬೇಕಾದಲ್ಲಿ ನಾವು ದೊಡ್ಡ ಗಂಟಲಿನಲ್ಲಿ ಚೀರಾಡುವುದೊಂದೇ ಮಾರ್ಗ ಎಂದುಕೊಳ್ಳಬೇಕಾಗಿಲ್ಲ, ನಮ್ಮ ಕೃತಿಗಳಲ್ಲಿ ಅಂತಹ ಶಕ್ತಿ ಇದೆ ಎನ್ನುವುದನ್ನು ಮತ್ತೆ ನೆನಪಿಸಬೇಕಾಗಿದೆ.

_86376257_682afed8-1174-4547-b8f3-91af535dba63

ಪ್ರಸ್ತುತ ಕಾಲ ಅತ್ಯಂತ ಸಂಕಟಗಳ ಕಾಲ. ಘರ್ಷಣೆ, ತಾಕಲಾಟಗಳ ಕಾಲ. ಉತ್ಪ್ರೇಕ್ಷೆಗಳ ಕಾಲ. ತೀವ್ರ ಸಂವೇದನೆಗಳ ಕಾಲ. ಹಾಗೆಯೇ ವಿಪರೀತಗಳ ಕಾಲ. ಆದರೆ ಎಲ್ಲಾ ಸಂಕಟಗಳ ನಡುವೆಯೂ ಮನುಷ್ಯನ ಜೀವನಪ್ರೀತಿಯನ್ನು ಹೊಸಕಿಹಾಕದೇ ಕಾಪಾಡಿಕೊಂಡು ಬರುವ, ಎಲ್ಲಾ ನೋವುಗಳ ನೆರಳಲ್ಲೇ ಸಣ್ಣ ನಗುವನ್ನೂ ಕೊಡುವ ಹಾಗೂ ಎಲ್ಲಾ ವೈಫಲ್ಯಗಳ ನಡುವೆಯೂ ಭವಿಷ್ಯದಲ್ಲಿ ಸಫಲತೆಯನ್ನು ಕಾಣುವ ಭರವಸೆಯನ್ನು ನೀಡುವ ಸಂಗತಿಗಳೂ ಇದ್ದೇ ಇರುತ್ತವೆ. ಸಮಾಜದ ಓರೆಕೋರೆಗಳನ್ನು ದಾಖಲಿಸಿ ತಿದ್ದುವ ಕೆಲಸ ಎಲ್ಲಾ ಸೂಕ್ಷ್ಮ ಸಂವೇದಿಗಳದೂ ಹೌದು.

ದೇವನೂರರು ಹೇಳಿದ ಹಾಗೆ ನಾವು ಸದಾ ಕಾಲ ಪೂರೆ ಕಳಚಿ ಹೊಸಹುಟ್ಟು ಪಡೆಯುತ್ತಲೇ ಇರಬೇಕಾಗುತ್ತದೆ, ಸಾಂಸ್ಕೃತಿಕ ಕಣ್ಣಿಗಾಗಿ ತಪಸ್ಸು ಮಾಡಲೇಬೇಕಾಗುತ್ತದೆ. ಇದು ಪ್ರೀತಿ ದಯೆ ಚೈತನ್ಯಗಳಿಂದ ಸಾಧ್ಯವೇ ಹೊರತು ದ್ವೇಷ, ಹಠ, ಬಲಪ್ರಯೋಗಗಳಿಂದ ಅಲ್ಲ.

ವ್ಯಂಗ್ಯ ಚಿತ್ರಗಳು: ಸತೀಶ್ ಆಚಾರ್ಯ

‍ಲೇಖಕರು Admin

11 January, 2016

2 Comments

  1. M A Sriranga

    ಪ್ರತಿಭಾ ನಂದಕುಮಾರ್ ಅವರ ಲೇಖನ ಸಮಯೋಚಿತವಾಗಿದೆ. ಇದು ವೇಗದ ಕಾಲ. ಆ ವೇಗದಿಂದ ಮತ್ತು “ಆವೇಗ”ದಿಂದ ಪ್ರಕ್ಷುಬ್ದತೆ ಉಂಟಾಗಿದೆ. ಆದರೆ ಈ ಲೇಖನಕ್ಕೆ ಪೂರಕವಾಗಿ ಪ್ರಕಟವಾಗಿರುವ ವ್ಯಂಗ್ಯ ಚಿತ್ರಗಳು ಪ್ರತಿಭಾ ಅವರ ಲೇಖನದ ಆಶಯಕ್ಕೆ ವಿರೋಧವಾಗಿರುವುದು “ವ್ಯಂಗ್ಯ”. ಇದು ಸರಿಯೇ?

  2. ಬಿ.ಹರಿಶ್ಚಂದ್ರ ಭಟ್.

    ಸಾಹಿತ್ಯ ಎಂಬುದೊಂದು ತಪಸ್ಸಾಗಬೇಕು. ಇತರ ಎಲ್ಲ ವಿಚಾರಗಳು ಗೌಣ. ಜೀವನದ ಆಘಾತಗಳು, ಅಪಘಾತಗಳನ್ನೂ ದಾಟಿಕೊಂಡು ಸಹಿಸಿಕೊಂಡು ಮುಂದುವರಿದು ಸಾಹಿತ್ಯದಲ್ಲಿಯೇ ಸಂದೇಶವನ್ನು ಸಾರುವ ಮೂಲಕ ಸಮಾಜದ ಒಳಿತು ಕೆಡಕುಗಳಿಗೆ ಸ್ಪಂದಿಸಬಹುದಾಗಿದೆ. ಪ್ರತಿಭಾ ಪ್ರತಿಕ್ರಿಯೆ ಸಮಂಜಸವಾಗಿದೆ .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading