ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರವರ ಕೊಟ್ಟೂರು ಕಥೆ: ಕೆಂಪು ಹೂವು ಮತ್ತು ಘಮಲು

ಕಣ್ಣುಗಳು ಒದ್ದೆಯಾಗಿದ್ದವು, ಜೋರು ಅಳುವಷ್ಟು ಧೈರ್ಯ ಇರಲಿಲ್ಲ. ಹನಿಗಳು ರೆಪ್ಪೆಗಳ ದಾಟುವಷ್ಟರಲ್ಲೇ ಇಂಗಿಬಿಟ್ಟವು. ಕೋಣೆಯ ನಡುವೆ ಕುಳಿತ ತಾನು, ಅನುಭವಿಸುತ್ತಿರುವ ಯಾತನೆಗಳಿಗೆ ಇಂಥದ್ದೇ ರೂಪವಿರಲಿಲ್ಲ, ನಿರಾಕಾರ ಬದುಕು ಅನ್ನಿಸಿಬಿಟ್ಟಿತ್ತು, ಲೋಟದೊಳಕ್ಕೆ ತುಂಬಿಕೊಳ್ಳುತ್ತಲೆ ಲೋಟವಾಗಿ, ಪಾತ್ರೆ ತುಂಬಿಕೊಳ್ಳುತ್ತಲೇ ಪಾತ್ರೆಯಾಗಿ, ಬಿಸಿ ಹೆಚ್ಚುತ್ತಲೇ ಆವಿಯಾಗಿ, ಮೋಡವಾಗಿ, ಮಳೆಯಾಗುವ ತನ್ನ ಇಡಿ ಬದುಕಿನ ಮೇಲೆ, ದಿನ ದಿನಕ್ಕೂ ಆಕೆಯ ದ್ವೇಷ ಏರುತ್ತಲೇ ಹೋಗುತ್ತಿತ್ತು.

ಕನ್ನಡಿಯ ಮುಂದೆ ನಿಂತಾಗಲೆ ಮಾತನಾಡಲಿಕ್ಕೆ ಯಾರೊ ಸಿಕ್ಕಂತೆ, ತಾನು ಮಾತನಾಡದೇ ಕನ್ನಡಿಯೊಳಗಿನ ನಿಚ್ಚಳ ಪ್ರತಿಬಿಂಬಕ್ಕೆ ಅರ್ಥವಾದಂತೆ, ತಲೆ ನೇವರಿಸಿ ಸಾಂತ್ವನ ಹೇಳಿದಂತೆ, ಬಾಚಿ ತಬ್ಬಿ ಎದೆಯ ನಿರಮ್ಮಳವಾಗಿಸಿದಂತೆ. ಕಣ್ಣ ಸುತ್ತಲೂ ಹರಡಿಕೊಳ್ಳುತ್ತಿರುವ ಕಣ್ಗಪ್ಪಿಗೆ ಅಳುವುದು ಅಷ್ಟೇನು ಆಗಿಬರುವುದಿಲ್ಲ ಅನ್ನಿಸುತ್ತದೆ. ಬಾಗಿಲ ಚಿಲಕ ಹಾಕಿಯಾಗಿದೆ, ಕಿಡಕಿಯನ್ನು ಮುಚ್ಚಿಯಾಗಿದೆ ಆದರೂ ಸಂದುಗೊಂದುಗಳಿಂದ ಕತ್ತಲನ್ನು ಸೀಳಿ ಬರುವ ಬೆಳಕನ್ನು ಹೇಗೆ ತಡೆಯಲಾದೀತು.

ಮಧ್ಯಾನ್ಹ ಸುಮಾರು ಎರಡರ ಸಮಯ, ಬೀದಿಯ ಇಕ್ಕೆಲಗಳ ಮೈಯಿಂದ ಆಟೋಗಳ ವಿಚಿತ್ರ ಸದ್ದು, ಹೂ ಮಾರುವವಳ ಕೂಗು, ಬೀಡ ಅಂಗಡಿಯ ಸ್ಟಿಲು ಡಬ್ಬಿಗಳ ಇಡುತ್ತಿರುವ ಸದ್ದು, ಯಾರೋ ಹೃದಯ ಕಿತ್ತು ಬರುವಂತೆ ಕ್ಯಾಕರಿಸುತ್ತಿರುವ ಸದ್ದು, ಬಟ್ಟೆ ಕುಕ್ಕುತ್ತಿರುವ ಸದ್ದು, ವಯಸ್ಸಾದ ಫ್ಯಾನು… ಮೆಲ್ಲಗೆ ಕಣ್ಣು ಮುಚ್ಚಿಕೊಂಡು ನಿದ್ದೆ ಹೋದಳು.

ಥಟ್ಟನೆ ಎಚ್ಚರಾಯ್ತು, ಅರ್ರೆ ಇಷ್ಟೊತ್ತು ಯಮ ನಿದ್ರೆಗೆ ಜಾರಿಬಿಟ್ಟೆ. ಗೋಡೆ ಮೇಲೆ ನೇತು ಹಾಕಿದ್ದ ಗಡಿಯಾರ ನೋಡಿದಳು ಮೊಬ್ಬುಗತ್ತಲಲ್ಲಿ ಕಾಣಿಸದ್ದಕ್ಕೆ ನಿದ್ದೆ ಮಂಪರಿನಲ್ಲೇ ಗೋಡೆಯನ್ನು ತದಕಾಡಿ ಬಲ್ಬು ಹೊತ್ತಿಸಿದಳು. ಆಗಲೇ ಆರು ಗಂಟೆಯಾಗಿತ್ತು. ಹೆಚ್ಚು ಹೊತ್ತು ಮಲಗಿದ್ದಕ್ಕೆ ತನ್ನನ್ನು ತಾನು ಶಪಿಸಿಕೊಂಡು. ಸ್ನಾನ ಮಾಡಲು ಒಳಕ್ಕೆ ನಡೆದಳು. ಮಧ್ಯಾನ್ಹದ ಉರಿಬಿಸಿಲ ಝಳ ಇನ್ನೂಹಾಗೇ ಇತ್ತು, ಬಿಸಿ ನೀರು ಕಾಯಿಸುವ ಗೋಜಿಗೆ ಹೋಗದೆ ತಣ್ಣೀರನ್ನೇ ತಂಬಿಗೆಯಲ್ಲಿ ತುಂಬಿಕೊಂಡು ತುರುಬು ಬಿಚ್ಚಿ ಮುಖವನ್ನು ತುಸು ಮೇಲಕ್ಕೆ ಮಾಡಿ ಹೊಯ್ದುಕೊಂಡಳು.

ಕನ್ನಡಿಯ ಮುಂದಿನ ಪೌಡರ್ರು, ಲಿಪ್ ಸ್ಟಿಕ್, ಬಾಡಿ ಲೋಷನ್ನು ಅವುಗಳ ಅಲಕಂರಿಸಬೇಕಾದೆಲ್ಲ ಅಂಗಾಗಗಳನ್ನು ಚೆಂದವಾಗಿಸಿದವು. ಅದೇ ಚಿನ್ನವನ್ನು ಚಿನ್ನವಾಗಿಸಿದಂತೆ….

ಬಾಗಿಲನ್ನಾರೋ ಎರಡು ಮೂರು ಬಾರಿ ತಟ್ಟಿದ ಹಾಗೆ ಭಾಸವಾಯಿತು. ಯಾರೂ ಇರಲಿಕ್ಕಿಲ್ಲ ನನ್ನ ಭ್ರಮೆ ಅಂದುಕೊಳ್ಳುತ್ತಾ ಕೂದಲು ಬಾಚುವಾಗ, ಮತ್ತೆ ಬಾಗಿಲು ಬಡಿದ ಹಾಗಾಯಿತು. ಇಷ್ಟು ಮೆಲ್ಲಗೆ ಯಾರೂ ಬಡಿಯಲಿಕ್ಕಿಲ್ಲ, ಯಾರಿರಬಹುದು! ಬಾಚಣಿಕೆಯನ್ನು ಕೂದಲಿಗೆ ಸಿಕ್ಕಿಸಿ ಚಿಲಕ ಸರಿಸಿ ಆಸೆಗಣ್ಣುಗಳಿಂದ ನೋಡಿದಳು.

“ಒಳಕ್ಕೆ ಬರ್ಲಾ” ಮುಖದಲ್ಲಿ ತುಸು ಗಾಬರಿ ತುಂಬಿಕೊಂಡು ಕೇಳಿದ.

“ಹೂಂ… ಬಾ” ಸಹಜ ದನಿಯಲ್ಲಿಯೇ ಹೇಳಿ, ಆ ಹುಡುಗನಿಗೆ ಒಳಕ್ಕೆ ಹೋಗಲು ದಾರಿ ಮಾಡಿಕೊಡಲು ಪಕ್ಕಕ್ಕೆ ಸರಿದುಕೊಂಡಳು, ಅವಸರದಲ್ಲೇ ನಡೆದ, ಬಾಗಿಲಿನಿಂದ ಆಚೆ ಕತ್ತು ಜಾರಿಸಿ ಆಚೀಚೆ ನೋಡಿ ಬಾಗಿಲು ಹಾಕಿಕೊಂಡಳು. ಬಾಗಿಲು ಹಾಕಿದ ಸದ್ದಿಗೆ ಬೆಚ್ಚಿದ ಬೆಕ್ಕು, ಮ್ಯಾಂ ಎನ್ನುತ್ತಾ ಕಿಡಕಿಯಿಂದ ಜಿಗಿದುಬಿಟ್ಟಿತು.

ಲ್ಯಾಪ್ ಟ್ಯಾಪ್ ಬ್ಯಾಗು ಬೆನ್ನಿಗೇರಿಸಿದ್ದ ಆ ಹುಡುಗನ ವಯಸ್ಸು ಇಪ್ಪತ್ತರ ಆಚೀಚೆ ಇರಬಹುದುದೆಂದು ತನ್ನ ಇಷ್ಟು ವರ್ಷಗಳ ಅನುಭವದ ಮೇಲೆ ಊಹಿಸಿದಳು. ಅಲ್ಲೆ ಇದ್ದ ಮಂಚದ ಮೇಲೆ ಕುಳಿತುಕೊಳ್ಳಲು ಹೇಳಿದಳು.

ಬಾಯೊಣಗಿದಂತೆ ಕಾಣುತ್ತಿದ ಆ ಹುಡುಗನನ್ನು ಕುಡಿಯಲಿಕ್ಕೆ ನೀರು ಕೊಡಬೇಕೆ ಅಂತ ಕೇಳಿದಾಗ, ಹೌದೊ ಅಲ್ಲವೋ ಎಂಬತೆ ತಲೆಯಾಡಿಸಿ ಕೊಡಲು ಕೇಳಿದ.

ಗಡಿಗೆಯಲ್ಲಿದ್ದ ನೀರನ್ನು ಕೊಟ್ಟ ಕೂಡಲೆ, ಎರಡೂ ಕೈಯಿಂದ ಲೋಟವನ್ನು ಹಿಡಿದು ಗಟ ಗಟನೆ ಕುಡಿದುಬಿಟ್ಟ. ಇನ್ನೊಂದು ಲೋಟ ಕೊಡಿ ಎಂದು ಮೆಲು ದನಿಯಲ್ಲಿ ಕೇಳಿದ್ದನ್ನು ನೋಡಿದರೆ ತುಂಬಾ ಭಯಭೀತನಾದಂತೆ ಮೇಲ್ನೋಟಕ್ಕೆ ಕಾಣಿಸುತ್ತಿತ್ತು. ಆ ಹುಡುಗನ ಮುಖದಲ್ಲಿ ಹೊಯ್ದಾಡುತ್ತಿರುವ ದುಗುಡ ಯಾವ ರೀತಿಯದ್ದಿರಬಹುದೆಂದು ಆಕೆ ಊಹಿಸಿದಳು.

ಹೆಣ್ಣಿನ ಸಂಗ ಬಯಸಿ ಮೊದಲ ಸಲ ಈ ಬೀದಿಯತ್ತ ಬಂದಿರಬಹುದು, ಮೆಡಿಕಲ್ ಸ್ಟೋರುಗಳಲ್ಲಿ ಕಾಂಡೋಮುಗಳ ಕೇಳಲು ಇರುಸು ಮುರುಸು ಅನ್ನಿಸಿ ಸುಮ್ಮನಾಗಿರಬಹುದೆಂದು, ಪ್ರೇಯಸಿಯೊಂದಿಗೆ ಜಗಳವಾಡಿದ ಬೇಸರದಲ್ಲಿ ಇತ್ತ ಬಂದಿರಬಹುದು ಎಂದೆಲ್ಲಾ ಒಂದೇ ಗುಕ್ಕಿಗೆ ಎಲ್ಲವನ್ನೂ ಮನಸ್ಸಿನಲ್ಲೇ ಅಂದುಕೊಂಡಳು.

ಕೋಣೆಯಲ್ಲಿ ಸಣ್ಣಗೆ ಹರಿದಾಡುತ್ತಿರುವ ಸುವಾಸನೆಯನ್ನು ಮತ್ತೊಮ್ಮೆ ಮಗದೊಮ್ಮೆ ಎಳೆದುಕೊಳ್ಳಲು ಮೂಗನ್ನು ಬೆರಳುಗಳಿಂದ ತಿಕ್ಕಿಕೊಳ್ಳುತ್ತಾ, ಮೆತ್ತನೆ ಹಾಸಿಗೆ ಹಾಸಿದ ಮಂಚದ ಮೇಲೆ ಕುಳಿತ ಹುಡುಗ ಏನೋ ಕೇಳ ಬಯಸಿದ

ಅಲ್ಲಿಯವರೆಗೂ ಸರಿಯಾಗಿ ಆಕೆಯ ಮುಖ ನೋಡಿರದ ಅವನಿಗೆ ಬಲ್ಬಿನ ತುಸು ಹಳದಿ ಬೆಳಕಿನಡಿ ಆಕೆಯ ತಿದ್ದಿ ತೀಡಿದ ಅಂದವನ್ನು ನೋಡಿ…

ತೆಳ್ಳಗೆ ಒತ್ತಾಗಿ ಮಸೆದ ಕತ್ತಿಯಂಥಾ ಹುಬ್ಬುಗಳೋ, ಅಂಚಿಗೆ ಕಾಡಿಗೆಯ ಹಚ್ಚಿ ಎದೆಯ ಬಗೆಯಬಲ್ಲ ಕಡುಗಪ್ಪು ಬೊಗಸೆ ಕಣ್ಣುಗಳೋ, ಚೂಪು ಮೂಗೊ, ಬರ್ಫ್ ಮೆತ್ತಿ ಮಾಡಿದಂಥಾ ಕೆನ್ನೆಯೋ, ಕೆಂಡದಂಥಾ ತುಟಿಗಳೋ, ಜೀವಾತ್ಮಗಳ ಉನ್ಮತ್ತಗೊಳಿಸಬಲ್ಲ ಉಬ್ಬಿದೆದೆಯೋ, ಸಪೂರ ಸೊಂಟವೋ, ನಟ್ಟ ನಡುವೆ ಬಾವಿಯಂಥಾ ಹೊಕ್ಕಳವೋ ಕಣ್ಣುಗಳಿಗೆ ಸುಸ್ತು ಏರುವ ತನಕ, ನಾಲಿಗೆ ಒಣಗುವ ತನಕ, ಆಸೆ ತೀರುವ ತನಕ ನೋಡಿದ್ದೇ ನೋಡಿದ್ದು. ಏನೋ ಕೇಳಬೇಕಿತ್ತು! ಛೇ ಮರೆತು ಹೋಯ್ತು. ಅಲ್ಲಾಲ್ಲ ಮರೆಸಿಬಿಟ್ಟಳು…

ಈ ಹುಡುಗ ಯಾಕೋ ತಿನ್ನುವಂತೆ ನೋಡುತ್ತಿದ್ದಾನಲ್ಲ,ಯಾವ ಕಡೆಯಿಂದ ತಿನ್ನುತ್ತಾನೊ.

“ಹೋಯ್… ಹುಡುಗ ಯಾಕ್ ಹಂಗ್ ನೋಡ್ತಿದ್ದಿ? ತಿನ್ನೋ ಹಂಗೆ, ಏನ್ ನಿನ್ ಹೆಸ್ರು? ”

“ಮನೋಜ್”

“ಹುಂ.. ಇದೇ ಊರ?”

“ಇದೇ ಊರು”

“ಎಲ್ಲೂ ನೋಡಿಲ್ವಲ್ಲಾ ನಿನ್ನ?”

“ನೋಡಿರ್ಲಿಕ್ಕಿಲ್ಲ ಬಿಡು, ಹಂಗೆ ತುಂಬಾ ಪರಿಚಯ ಇರೋದಕ್ಕೆ ಈ ಊರೇನು ಚಿಕ್ಕದೇ! ”

“ಮನೆ ಎಲ್ಲಿ ಬರುತ್ತೆ!”

“ಅದ್ಯಲ್ಲಾ ಯಾಕೆ? ಬೇಡ ಬಿಟ್ಟಾಕು… ಎಷ್ಟು ಕೊಡ್ಬೇಕು ಒಂದ್ ಸಲಕ್ಕೆ?”

“ನೋಡೊಕಿನ್ನು ಓದ್ತಾ ಇರೊ ಹಂಗ್ ಕಾಣಿಸ್ತೀಯ? ನಿನ್ ಹತ್ರ ಎಷ್ಟಿದ್ದೀತು, ಎಷ್ಟಿದೆ ಹೇಳು”

“ಅದೆಲ್ಲಾ ನಿಂಗ್ಯಾಕೆ ಎಷ್ಟ್ ಕೊಡ್ಬೇಕಾಗುತ್ತೆ ಹೇಳು ಅಷ್ಟೆ” ಸಹನೆ ಕಳೆದುಕೊಂಡವನಂತೆ ಮುಖ ಗಂಟಿಕ್ಕಿಕೊಂಡು ಕೇಳಿದ

“ಉಫ್, ಆಯ್ತು ಐನೂರು ಕೊಡು ಸಾಕು… ಸಣ್ ವಯಸ್ಸು”

“ಇವಾಗ್ಲೆ ಕೊಡೋದಾ ಅಥವಾ ಹೋಗೊವಾಗ ಕೊಟ್ರೆ ಆಯ್ತ”

“ಹೋಗ್ವಾಗ್ಲೆ ಕೊಡು ಅಷ್ಟು ಜರೂರು ಏನಿಲ್ಲ…. ಅದ್ ಸರಿ ಕಾಂಡೋಮ್ ತಂದಿದಿಯಾ?”

“ಇಲ್ಲಾ”

“ರೂಲ್ಸು ಅಂದ್ರೆ ರೂಲ್ಸು, ಕಾಂಡೋಮ್ ಇಲ್ದೆ ಇಲ್ಲೆಲ್ಲಾ ಬರ್ಬಾರ್ದು…”

“ಎಲ್ಲಾ ಪರಿಚಯದ ಇರೋ ಅಂಗಡಿಗಳೇ ಕೇಳೊಕೆ ಭಯ ಆಯ್ತು, ನಾಚ್ಕೆ ಕೂಡ. ಯಾರನ ನೋಡಿದ್ರೆ ಕಷ್ಟ ಅಂತ ಅವಸರದಲ್ಲಿ ಹಂಗೆ ಬಂದೆ”

“ಎಲ್ಲಾ ಮಾಡ್ಬೇಕು ಅನ್ಸುತ್ತೆ ಆದ್ರೆ ಬೇಕಿರೋದನ್ನ ತರ್ಬೇಕು ಅಂದ್ರೆ ನಾಚ್ಕೆ… ನೀನ್ ಕೊಡೊ ಐನೂರಲ್ಲಿ ಐವತ್ರುಪಾಯಿ ಇದ್ಕೆ ಹೋಗುತ್ತೆ”

“ಐವತ್ನು ಸೇರ್ಸಿ ಕೊಡ್ತಿನಿ ಬಿಡು”

ಮಾತುಗಳನ್ನ ಕೇಳಿಸಿಕೊಂಡವಳೇ ತುಟಿಗೆ ಹಿಡಿ ನಗುವನ್ನು ತಂದುಕೊಂಡಳು. “ಊಟ ಮಾಡಿದ್ಯಾ?”

ಸದ್ಯ ಹಸಿವಿಲ್ಲವೆನ್ನುವಂತೆ ತಲೆಯಲ್ಲಾಡಿಸಿದ ಅಥವಾ ಊಟ ಮಾಡುವ ಮನಸ್ಸೇ ಇರಲಿಲ್ಲವೇನೋ

**

ನಿದ್ದೆಯಿಂದ ಎಚ್ಚರಾದ ಈಕೆಗೆ ರಾತ್ರಿ ಇಷ್ಟು ಬೇಗ ಮುಗಿದು ಹೋಯಿತ ಎಂಬಂಥಾ ಮನಸ್ಸು, ದೇಹ ತುಸು ದಣಿದಿತ್ತು, ಪಕ್ಕದಲ್ಲಿ ಮಲಗಿದ್ದ ಹುಡುಗ ನಸುಕಿನಲ್ಲೇ ಹೊರಟು ಹೋಗಿದ್ದಾನೆ, ಹಾಸಿಗೆ ಸುಕ್ಕು ಉಳಿದುಕೊಂಡಿದೆ. ಕೊಡಬೇಕಿದ್ದ ಹಣವನ್ನು ಅಲ್ಲೇ ಮೇಜಿನ ಮೇಲೆ ಲೋಟದ ಕೆಳಗೆ ಗಾಳಿಗೆ ಹಾರದಂತೆ ಇಟ್ಟಿದ್ದಾನೆ.

ಇಡೀ ಊರು ಊರಿಗೆ ಬೆಳಗಾಗಿರುವಾಗ ತಾನಿನ್ನು ಹಾಸಿಯಲ್ಲಿ ಬಿದ್ದುಕೊಂಡಿದ್ದರೆ ಅಸಹ್ಯ, ಇವತ್ತು ಗುರುವಾರ ಬೇರೆ ಸಾಯಿಬಾಬ ದೇವಸ್ಥಾನಕ್ಕೆ ಹೋಗಬೇಕು.

ಎಂದಿಗಿಂತಲೂ ಹೆಚ್ಚು ಲವ-ಲವಿಕೆಯಿಂದ ನಿತ್ಯ ಕರ್ಮಗಳನ್ನು ಮುಗಿಸಿ, ಚಿತ್ರಾನ್ನಕ್ಕಾಗಿ ಈರುಳ್ಳಿ ಹೆಚ್ಚಲಿಕ್ಕೆಂದು ಹುಡುಕಿದಾಗಲೇ ತರಕಾರಿಗಳು ಖಾಲಿಯಾಗಿವೆ ಮಾರ್ಕೆಟ್ಟಿಗೆ ಹೋಗಿ ತರಬೇಕೆಂಬ ಅರಿವಾಗಿದ್ದು. ಸುಡುತ್ತಿರುವ ಹೊಟ್ಟೆಯಲ್ಲೇ ಅಷ್ಟು ದೂರ ನಡೆಯುವುದು ಹೇಗೆ? ಒಂದು ಗ್ಲಾಸು ನೀರು ಕುಡಿದು ಬಾಗಿಲು ತೆರೆದು ಹೊರಕ್ಕೆ ಹೆಜ್ಜೆ ಇಟ್ಟಳು,

ಹೆಚ್ಚು ಕಡಿಮೆ ಮೂರ್ನಾಲ್ಕು ದಿನಗಳಿಂದ ಬಿಸಿಲನ್ನೇ ನೋಡದಿದ್ದ ಆಕೆಯ ಕಣ್ಣುಗಳನ್ನು ಆ ತೀಷ್ಣ ಬಿಸಿಲು ಕೋಲುಗಳು ಮುಚ್ಚುವಂತೆ ಮಾಡಿದವು. ತಲೆಯ ಮೇಲೆ ಸೆರಗು ಹಾಕಿ ನಡೆಯುತ್ತಾ ಹೊರಟ ಆಕೆಯತ್ತ ನೂರಾರು ಕಣ್ಣುಗಳು. ಮಟನ್ ಶಾಪಿನ ಕಟುಗರ ಬಾಲಾಜಿ ಕಿಮಟಿಕ್ಕಿದ ಅಂಗಿಗೆ ತನ್ನ ರಕ್ತಸಿಕ್ತ ಕೈಗಳನ್ನು ಒರೆಸಿಕೊಳ್ಳುತ್ತಾ, ಪಾನ್ ಶಾಪಿನ ರಮೇಶ ಎಲೆಗಳನ್ನು ನೀರಿನಲ್ಲಿ ಎದ್ದಿಕೊಳ್ಳುತ್ತಾ, ಪಂಚರ್ ಶಾಪಿನ ಸುಬಾನಿ ಟ್ಯೂಬನ್ನು ತಿಕ್ಕುತ್ತಾ, ಜೀಪಿನೊಳಗೆ ಗತ್ತಿನಿಂತ ಕುಳಿತ ಎಸ್.ಐ ಸಾಹೇಬ್ ಅವಿನಾಶ್ ಆಕೆಯನ್ನು ಆಕೆಯ ಹಂಸ ನಡಿಗೆಯನ್ನು ಕಣ್ಣು ಬಾಯಿಬಿಟ್ಟುಕೊಂಡು ನೋಡುತ್ತಿದ್ದರೂ ತನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲವೆನ್ನುವಂತೆ ಸಾಗಿದಳು.

ಪ್ರತಿ ಗುರುವಾರ ಇಡೀ ಅರ್ಧ ಊರು ಸಂತೆಯಲ್ಲಿ ಕೊಳ್ಳುವುದರಲ್ಲಿ ಮಗ್ನವಾಗುತ್ತದೆ. ಸಂತೆಯೆಂದರೆ ಅದೇನು ಸಣ್ಣ ಪುಟ್ಟದ್ದೆ, ಸುತ್ತ ಇಪ್ಪತ್ತು ಮೂವತ್ತು ಹಳ್ಳಿಗಳ ಜನರ ಆಟೋಗಳಲ್ಲಿ, ಬಂಡಿಗಳಲ್ಲಿ, ಸೈಕಲ್ಲುಗಳಲ್ಲಿ ಬಂದು ತಾವು ಬೆಳೆದಿರುವ ಸರಕನ್ನು ಮಾರಿ, ಮಾರಿದ್ದರಿಂದ ಬಂದ ಹಣದಲ್ಲಿ ಮತ್ತೇನನ್ನೊ ಖರೀದಿಸಿ, ಸಂಜೆ ಮಹದೇವ ಬಸ್ಸಿನಲ್ಲಿ ಒಂದು ಕ್ವಾಟ್ರು ಕುಡಿಯುವಲ್ಲಿ ಎರಡು ಕ್ವಾಟ್ರು ಕುಡಿದು, ಒಂದು ಮಾತಾಡುವಲ್ಲಿ ಹತ್ತು ಮಾತಾಡಿಕೊಂಡು ವಾಪಾಸ್ಸು ಊರು ಸೇರುತ್ತಿದ್ದರು. ಅಷ್ಟು ದೊಡ್ಡ ಸಂತೆಯಾದರೂ ಅಲ್ಯಾರೂ ತರಕಾರಿಗಳನ್ನು ಕದಿಯುತ್ತಿರಲಿಲ್ಲ, ಮತ್ತೊಬ್ಬರ ಚೀಲದಲ್ಲಿ ಕೈ ಹಾಕುತ್ತಿರಲಿಲ್ಲ ಬದಲಾಗಿ ದುಡ್ಡು ಇರದಿದ್ದಲ್ಲಿ ನಾಳೇ ಕೊಡುತ್ತೀನೆಂದು ಇದ್ದಷ್ಟನ್ನೇ ಕೊಟ್ಟು ಸಂತೆ ಮಾಡುತಿದ್ದರು. ಇಡೀ ಸಂತೆಯಲ್ಲಿ ದುರುಗಮ್ಮ, ಸುಂಕಲಮ್ಮ, ಗೋಣ್ಯಮ್ಮ, ಕೊಟ್ರಮ್ಮ, ಪಾರಕ್ಕ, ಅಂಜಿನಮ್ಮ, ಮುಂತಾದ ಆದಿಶಕ್ತಿ ಸ್ವರೂಪದ ಹೆಂಗಸರೇ ಡಾನ್ ಗಳಾಗಿದ್ದರು, ಗಿಜಿಗಿಡುವ ಸಂತೆಯಲ್ಲೂ ಸುಮಾರು ಐನೂರು ಆರುನೂರು ಮೀಟರ್ ದೂರಕ್ಕೆ ಕೇಳಿಸುವಂತೆ ಜೋರಾಗಿ ಕೂಗಬಲ್ಲವರಾಗಿದ್ದರು. ತಾವು ಮಾರುತ್ತಿದ್ದ ಇಪ್ಪತ್ತು ನಮೂನೆಯ ತರಕಾರಿಗಳ ಹೆಸರುಗಳನ್ನು ಲೀಲಾಜಾಲವಾಗಿ ಹೇಳಬಲ್ಲವರಾಗಿದ್ದರು. ಕುಡಿದು ಸಂತೆಯಲ್ಲಿ ಹೆಣ್ಣುಮಕ್ಕಳ ಮೈ ಮೇಲೆ ಅಕಸ್ಮಾತು ಬೀಳುತ್ತಿದ್ದ ಪಾಪದ ಕುಡುಕರನ್ನು ಬಡಿದು ಹಣ್ಣುಗಾಯಿ ನೀರುಗಾಯಿ ಮಾಡಿಬಿಡುತ್ತಿದ್ದರು. ಅಷ್ಟೇ ಅಲ್ಲದೇ ಜಗಳಕ್ಕೆ ನಿಂತರೆ ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದ ಬೈಗಳುಗಳನ್ನು ಪುಂಖಾನುಪುಂಖವಾಗಿ ಎದುರಾಳಿಗಳ ಮೇಲೆ ಪ್ರಯೋಗಿಸಿ ನೋಡುಗರನ್ನು ದಿಗ್ಬ್ರಾಂತರನ್ನಾಗಿಸುವ ತಾಕತ್ತು ಜನ್ಮದತ್ತವಾಗಿತ್ತು. ಸಂತೆಗೆ ಬ್ಯಾಗು ಹಿಡಿದು ಬರುವ ತುಂಬು ಬಸುರಿಯರ ಕಂಡರೆ ಅವರ ಬ್ಯಾಗುಗಳಿಗೆ ಅರ್ಧ ಕೇಜಿ ಹಾಕುವಲ್ಲಿ ಮುಕ್ಕಾಲು ಕೇಜಿ ಹಾಕಿ ಅವರುಗಳ ಆಟೊವರೆಗೆ ಬಿಟ್ಟು ಬರಲಿಕ್ಕೆ ತಮ್ಮ ಹುಡುಗರಿಗೆ ಹೇಳಿ ಕಳಿಸುತ್ತಿದ್ದಂಥಾ ಕರುಣಾಮಯಿಗಳು ಕೂಡ.

ಸಂತೆಯೊಳಗೆ ಅಲ್ಲಲ್ಲಿ ಹೆಂಡತಿಗೆ ಬಳೆಗಳನ್ನು ಕೊಡಿಸುತ್ತಿರುವ ಗಂಡ, ತಮ್ಮ ಪ್ರಿಯತಮೆಗೆ ಮಹಾಲಕ್ಷ್ಮಿ ಐಸ್ ಕ್ರೀಮು ಕೊಡಿಸುತ್ತಿರುವ ಹುಡುಗರು, ಗೊಣ್ಣೆ ಇಳಿಸಿಕೊಂಡು ಅಳುತ್ತಿರುವ ಕೂಸುಗಳನ್ನು ಸಂತೈಸುತ್ತಿರುವ ತಾಯಂದಿರು…

ಹುಟ್ಟಿದ ಒಂದಷ್ಟು ದಿನಗಳಲ್ಲೇ ಹೆತ್ತವರನ್ನು ಕಳೆದುಕೊಂಡ ಅವಳನ್ನು ಊರಿನವರು ಹುಟ್ಟಿ ತಂದೆ ತಾಯಿನ ತಿಂದ್ಕೊಂಡ ಕೂಸೆಂದು ಹೆಸರು ಕಟ್ಟಿಬಿಟ್ಟರು. ಇದ್ದ ಅಜ್ಜಿಗೆ ಕೂಸನ್ನು ಸಾಕುವ ಶಕ್ತಿ ಇಲ್ಲವಾಗಿತ್ತು. ಊರ ಹಿರಿಯರ ಒತ್ತಾಯದ ಮೇರೆಗೆ ಅನಾಥ ಕೂಸಾದ ತನ್ನನ್ನು ಸಾಕಿದ್ದು ಚಿಕ್ಕಪ್ಪ, ಚಿಕ್ಕಮ್ಮ.ಮನೆಯ ಅಷ್ಟೂ ಕೆಲಸಗಳನ್ನು ನೋಡು ನೋಡುತ್ತಿದ್ದಂತೆ ಮುಗಿಸಿಬಿಡುತ್ತಿದ್ದ ಆಕೆಯನ್ನು ಕಂಡರೆ ಚಿಕ್ಕಮ್ಮನಿಗೆ ಅಷ್ಟಕ್ಕಷ್ಟೆ. ಆಕೆಗೆ ಸಿಕ್ಕಬಾರದೆಂದು ಮೊಸರು ಹಾಲು ಬಚ್ಚಿಡುತ್ತಿದ್ದಳು, ತನ್ನ ಗಂಡ ಆಕೆಯನ್ನು ಬೈಯಲೆಂದು ಸಾಂಬಾರಿಗೆ ಹಿಡಿ ಉಪ್ಪು ಸುರುವಿಬಿಡುತ್ತಿದ್ದಳು, ಗಂಡ ಮನೆಯಲ್ಲಿರದಿದ್ದಾಗ ಆಕೆಯನ್ನು ತನ್ನ ಸೂಜಿಯಂಥಾ ನಾಲಿಗೆಯಿಂದ ಚುಚ್ಚಿ ವಿಚಿತ್ರ ನೋವು ನೀಡುತ್ತಿದ್ದಳು, ಎಷ್ಟೇ ಆದರೂ ತನ್ನನ್ನು ಅನ್ನ ಆಶ್ರಯ ಕೊಟ್ಟು ಸಲುಹಿದವರೆಂಬ ಕಾರಣಕ್ಕೆ, ನೋವು ನುಂಗಿಕೊಂಡು ಒಬ್ಬಳೇ ಇರುವಾಗ ಹಾಡುಗಳ ಗುನುಗಿಕೊಂಡು, ಕನಸುಗಳನ್ನು ಕಾಣುತ್ತಾ ಇದ್ದ ಅವಳನ್ನು.

ಇದ್ದಕ್ಕಿದ್ದಂತೆ ತನಗಿಂತ ಸುಮಾರು ಇಪ್ಪತ್ತು ವರ್ಷ ದೊಡ್ಡ ವಯಸ್ಸಿನ ಗಂಡಸಿಗೆ ಮದುವೆ ಮಾಡಿಕೊಟ್ಟು ಮನೆಯಿಂದ ಸಾಗುಹಾಕಿದರು. ತನ್ನ ಅಳುವನ್ನು ಇಲ್ಲಿ ಕೇಳುವವರಾರು ಇಲ್ಲವೆಂಬ ಅರಿವು ಆಕೆಗಿತ್ತು, ಒಂದೇ ಒಂದು ಮರು ಮಾತಾಡದೆ ದೂರದ ಊರಿಗೆ ಮದುವೆ ಮಾಡಿ ಕಳಿಸಿಬಿಟ್ಟರು. ತಾನು ಎರಡನೇ ಹೆಂಡತಿ ಎನ್ನುವುದು ಈಕೆಗೆ ಮದುವೆಯಾದ ಎಷ್ಟೋ ದಿನಗಳ ನಂತರ ಅರ್ಥವಾಯಿತು.

ಮದುವೆಯಾದ ಹೊಸತರಲ್ಲಿ ಕೂರಲು ಬಿಡದ ನಿಲ್ಲಲು ಬಿಡದೆ ಪ್ರೀತಿಸುತ್ತಿದ್ದ ಗಂಡ, ಇದ್ದಕ್ಕಿದ್ದಂತೆ ಕಾಣೆಯಾಗಿಬಿಟ್ಟ. ಊರಿನವರೆಲ್ಲಾ ಸೇರಿ ಹುಡುಕಿದರೂ ಸಿಕ್ಕಲಿಲ್ಲ, ಕೊನೆಗೆ ಪೊಲೀಸರಿಗೆ ದೂರು ಕೊಟ್ಟರೆ ನೋಡೋಣವೆಂದು ಹೇಳಿ ಕಳುಹಿಸಿದರು, ಒಂದಷ್ಟು ದಿನಗಳ ತರುವಾಯ ಅವನು ಯಾವಳೋ ಹಿಂದೆ ಹೋದನೆಂದು, ಕಾಡು ದಾರಿಯಲ್ಲಿ ಸಂಚರಿಸುತ್ತಿರುವಾಗ ಮನುಷ್ಯರನ್ನು ತಿನ್ನುವ ಚಿರತೆ ಹೊತ್ತುಕೊಂಡು ಹೋಯಿತೆಂದು, ಇದ್ದಕ್ಕಿಂದ್ದಂತೆ ಹುಚ್ಚು ಹಿಡಿದು ಎತ್ತಲೋ ಹೋದನೆಂದು ಆಳಿಗೊಂದರಂತೆ ಬಾಯಿಗೊಂದರಂತೆ ಮಾತನಾಡಿಕೊಂಡರು. ಸೌಂದರ್ಯಕ್ಕೆ ಉದಾಹರಣೆಯಂತಿದ್ದ ಆಕೆಯದ್ದಿನ್ನು ಸಣ್ಣ ವಯಸ್ಸು ಸುಮಾರು ಹದಿನೆಂಟಿರಬಹುದು. ಹೊಲ-ಗದ್ದೆಗಳಿಗೆ ಕೂಲಿ ಕೆಲಸಕ್ಕೆಂದು ಹೋದಾಗ, ತಾನು ಹೇಳಿದಂತೆ ಕೇಳಿದಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಮೆರೆಸುವುದಾಗಿ ಹೇಳಿ ಗೌಡರು ಕೈ ಹಿಡಿದು ಎಳೆದಾಡಿದ್ದರು, ಯಾರೊ ಬರುತ್ತಿರುವುದನ್ನು ಕಂಡಾಗಲೇ ಸುಮ್ಮನಾಗಿದ್ದು. ಅಸಹ್ಯವೆನ್ನಿಸಿ ತಾನು ಅಲ್ಲಿಂದ ಮನೆ ಸೇರಿದ್ದು. ಗಂಡನಿಲ್ಲದ ಹೆಂಗಸನ್ನು ಒಂದು ಕೈ ನೋಡಬೇಕೆಂದು, ತಿನ್ನಲಿಕ್ಕೆ ಬಲು ಸುಲಭವೆಂದು ಭಾವಿಸಿ ದಾರಿಯಲ್ಲಿ ಓಡಾಡುವಾಗ ಇನ್ನಿಲ್ಲದ ಉಪಟಳ ಕೊಡಲು ಶುರುವಿಟ್ಟರು.

ರಾತ್ರೋ ರಾತ್ರಿ ರೋಡಿನಲ್ಲಿ ನಿಂತು ಚಲಿಸುತ್ತಿದ್ದ ವಾಹನಗಳಿಗೆ ಕೈ ಅಡ್ಡ ಮಾಡಿ ನಿಲ್ಲಿಸುವಂತೆ ಬೇಡಿಕೊಂಡಾಗ, ಯಾವುದೋ ಗೂಡ್ಸ್ ಲಾರಿ ಹತ್ತಿಸಿಕೊಂಡು ಆಕೆಯನ್ನು ದೂರದ ರಾಜಧಾನಿಯ ಜನನಿಬಿಢ ಪ್ರದೇಶದಲ್ಲಿ ಇಳಿಸಿ ಹೋಗಿದ್ದರು. ಹಸಿದುಕೊಂಡು ಬಸ್ಟಾಪಿನಲ್ಲಿ ಕುಳಿತಿದ್ದಾಗ ಅಲ್ಲೇ ಕಸ ಹೊಡೆಯುತ್ತಿದ್ದ ಒಬ್ಬ ಧಡೂತಿ ಹೆಂಗಸೊಬ್ಬಳು ಅವಳಿಗೆ ಕೆಲಸ ಕೊಡಿಸುವುದಾಗಿ ಕರೆದುಕೊಂಡು ಒಂದು ಮನೆಯಲ್ಲಿ ಬಿಟ್ಟಿದ್ದಳು ಇರಲಿಕ್ಕೆ ಜಾಗ ಮತ್ತು ಮೂರು ಹೊತ್ತು ಊಟವನ್ನೂ ಕೊಡುತ್ತಾರೆ ಹೇಳಿದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕಷ್ಟೆ ಅಂತೆಲ್ಲಾ ಹೇಳಿ ಹೋಗಿದ್ದಳು. ಯಾರೂ ಗೊತ್ತಿರದ ಊರಿನಲ್ಲಿ ತನಗೆ ಒಂದು ಸೂರು ಕೊಟ್ಟು ಅನ್ನವನ್ನೂ ಕೊಟ್ಟ ಆ ಹೆಂಗಸು ಹೋದ ಜನ್ಮದಲ್ಲಿ ತನ್ನ ಒಡಹುಟ್ಟಿದ ಅಕ್ಕಳೇ ಇರಬಹುದೆಂದು ಮನಸ್ಸಿನಲ್ಲೇ ಅಂದುಕೊಂಡಳು. ತನ್ನಂತೆ ಅಲ್ಲೊಂದಷ್ಟು ಚೆಂದದ ಹೆಂಗಸರಿದ್ದರು.

ಪೊಲೀಸರು, ಅಧಿಕಾರಿಗಳು, ವ್ಯಾಪಾರಿಗಳು, ಮಾಲಿಕರು ಎಲ್ಲಾ ವಯೋಮಾನದ ಎಲ್ಲಾ ವರ್ಗದ ಗಂಡಸರು ಅಲ್ಲಿಗೆ ಒಂದು ಹೋಗುತ್ತಿದ್ದರಲ್ಲದೇ ಒಮ್ಮೊಮ್ಮೆ ಅವರಿದ್ದೆಡೆಗೆ ಇವರನ್ನು ಕರೆದುಕೊಂಡು ಹೋಗುತ್ತಿದ್ದರು. ಅಲ್ಲೊಂದು ಬೇರೆಯದೇ ಲೋಕವಿತ್ತು ಅದೇನೆಂದು ಅರ್ಥವಾಗುವ ಹೊತ್ತಿಗೆ ತಾನು ಅರಿವಿಲ್ಲದೆ ಆ ಬದುಕಿಗೆ ಒಗ್ಗಿಬಿಟ್ಟಿದ್ದಳು. ಕೆಲವರು ಪ್ರೀತಿ ಹುಡುಕಿ ಬಂದರೆ, ಇನ್ನೂ ಕೆಲವರು ಕಾಮವನ್ನು, ಮತ್ತಷ್ಟು ಜನ ವಿಕೃತಿ ಕಟ್ಟೆ ಒಡೆದು ಇತ್ತ ಬರುತ್ತಾರೆ. ಕೊಡುವ ದುಡ್ಡಿಗೆ ಹೇಗೆ ಬೇಕಾದರೂ ನಡೆಸಿಕೊಳ್ಳಬಹುದೆಂಬ ಹುಂಬತನದವರು, ಪ್ರೀತಿಯೇ ಸಿಕ್ಕದೆ ತಬ್ಬಿಕೊಂಡು ಅತ್ತವರು, ಮತ್ತೆ ಮತ್ತೆ ನೋಡಲಿಕ್ಕೆಂದು ಬಂದವರು, ವಿಕೃತ ಕಾಮದ ಹುಚ್ಚು ಹಿಡಿಸಿಕೊಂಡವರು, ಏನೂ ಮಾಡಲಾಗದ ಏನಾದರೂ ಅದ್ಬುತ ಘಟಿಸೀತೆಂಬ ಆಸೆಯವರು ಎಲ್ಲರೂ ಅಲ್ಲಿ ಬರುತ್ತಿದ್ದರು. ತರಹೇವಾರಿ ಜನ. ಇಡೀ ಪ್ರಪಂಚದ ಒಂದು ನಕಲೇ ಅಲ್ಲಿತ್ತು ಅನ್ನಿಸುತ್ತದೆ.

ಒಮ್ಮೊಮ್ಮೆ ಪ್ಯಾಂಟು ನಿಲ್ಲದ ಪೊಲೀಸರು ಕುಡಿದ ಮತ್ತಿನಲ್ಲಿ ದುಡ್ಡು ಕೊಡದೆ ಮೃಗಗಳಂತೆ ವರ್ತಿಸಿದ್ದೂ ಉಂಟು. ಕೊಟ್ಟ ಹಣದಲ್ಲಿ ಇನ್ನೂರು ತಾನಿಟ್ಟುಕೊಂಟು ಮಿಕ್ಕದ್ದು ಆ ಜಾಗದ ಯಜಮಾನ್ತಿಗೆ ಸೇರುತ್ತಿತ್ತು.

**

“ಅಕ್ಕಾ, ಕೊತ್ತಂಬ್ರಿ ಕೊಡ್ಲ್ಯಾ…!”

“ಹೆಂಗೆ ಸಿವ್ಡು?”

“ಒಂದುವರಿ ರೊಪಾಯಿ”

“ಎರಡು ಸಿವುಡು ಕೊಡು” ಎಂದು ದುಡ್ಡು ಕೊಟ್ಟು ಮುಂದಕ್ಕೆ ಸಾಗಿದಳು

ಮೂರ್ನಾಲ್ಕು ದಿನಕ್ಕೆಷ್ಟು ಬೇಕೊ ಅಷ್ಟು ತರಕಾರಿಗಳನ್ನು ಖರೀದಿಸಿದ ಆಕೆಯನ್ನು ತುಂಬಾ ಆಕರ್ಷಿಸಿದ್ದು ಪಂಪಜ್ಜ ಮಾರುತ್ತಿದ್ದ ಓಲೆಗಳು. ಸೂರ್ಯನ ಬೆಳಕಲ್ಲಿ ಅವು ಚಿನ್ನವನ್ನೇ ನಾಚಿಸುವಂತೆ ಫಳಗುಡುತ್ತಿದ್ದವು. ಇವುಗಳನ್ನು ಕಿವಿಗೆ ಹಾಕಿಕೊಂಡಲ್ಲಿ ತನ್ನ ಘನ ಶಂಕುವಿನಾಕೃತಿಯ ಕಿವಿಗಳಿಗೆ ಇನ್ನಷ್ಟು ಸೌಂದರ್ಯ ಬಂದೀತು. ಯಾರಾದರೂ ನೋಡಿ ಚೆಂದ ಕಾಣಿಸುತ್ತಿದೆ ಎಂದು ಒಂದು ಮಾತು ಹೊಗಳಿಯಾರು, ಎಂದೆಲ್ಲಾ ಖುಷಿಪಟ್ಟು ಎರಡು ಮೂರು ಜೊತೆ ಓಲೆಗಳನ್ನು ಖುಷಿಯಿಂದ ಕೈಚೀಲಕ್ಕಿಳಿಸಿದಳು.

ಸಾಯಿಬಾಬ ಮಂದಿರ ತುಂಬಿ ತುಳುಕುತ್ತಿತ್ತು. ಜನ ಭಕ್ತಿಪರವಶರಾಗಿ ಬೇಡಿಕೊಳ್ಳುತ್ತಿದ್ದಾರೆ, ಕೆನ್ನೆ ಕೆನ್ನೆ ಬಡಿದುಕೊಂಡು ತಾವು ಮಾಡಿರಬಹುದಾದ ತಪ್ಪುಗಳನ್ನು ಕ್ಷಮಿಸುವಂತೆ ಅಂಗಲಾಚುತ್ತಿದ್ದಾರೆ, ಒಂದಷ್ಟು ಹೆಂಗಸರಂತು ತಮ್ಮ ಹೊಸ ಸೀರೆಗಳನ್ನು ಹೊಸ ಆಭರಣಗಳ ಪ್ರದರ್ಶನಕ್ಕೆ ಇದು ಸೂಕ್ತ ಸ್ಥಳವೆಂದೇ ಭಾವಿಸಿದ್ದರು. ತಾನು ಈ ಊರಿಗೆ ಹೊಸಬಳಾದ್ದರಿಂದ ತಾನಾರೆಂಬುದು ಇತರರಿಗಾಗಲಿ, ಇತರರ ಪರಿಚಯ ತನಗಾಗಲಿ ಇರಲಿಲ್ಲ. ಗರಿಷ್ಠ ಅಪರಿಚಿತೆ… ಭಜನೆಯ ಹಾಡುಗಳ ಹಿನ್ನಲೆಯಲ್ಲಿ ಗಂಟೆಯ ಸದ್ದು ಇಡೀ ದೇವಸ್ಥಾನದ ಆವರಣವನ್ನು ಆವರಿಸಿಕೊಂಡಿತ್ತು.

ಮನುಷ್ಯನ ನಂಬಿಕೆಗಳೇ ಹಾಗೆ, ಅವನು ಸೋಲನ್ನು ದೇವರ ಮೇಲೆ ಹಾಕಲು, ಗೆಲುವನ್ನು ತನ್ನದೇ ಪರಿಶ್ರಮದ್ದೆಂದು ಸಾಬೀತುಪಡಿಸಲು ಪ್ರಯತ್ನಿಸುತ್ತಿರುತ್ತಾನೆ. ಪರಿಮಿತ ಚೌಕಟ್ಟುಗಳಾಚೆ ಬದುಕಲೆತ್ನಿಸುತ್ತಾನೆ, ದಾಟಲಿಕ್ಕಾದೇ ಹೋದಾಗ ದೇವರು ಕ್ರೂರಿಯಾಗುತ್ತಾನೆ ಕುರುಡನಾಗುತ್ತಾನೆ ಕಟುಕನಾಗುತ್ತಾನೆ. ತನಗೆ ಬೇಕಾದ್ದು ಸಿಕ್ಕ ಕೂಡಲೇ ಅವನು ಮಹಾ ಕರುಣಾಮಯಿ, ಲೋಕಪಾಲಕ ಏನೆಲ್ಲಾ ಆಗಿಬಿಡುತ್ತಾನೆ. ಮನುಷ್ಯ ಸ್ವಾರ್ಥಿಯಷ್ಟೆ….ಎಲ್ಲವೂ ಅವನಿಗೆ ದಕ್ಕಿಯೇತೀರಬೇಕು ಅದು ವಸ್ತುವಾಗಿರಲಿ, ಇನ್ನೊಬ್ಬ ಮನುಷ್ಯನಾಗಿರಲಿ ಅಥವಾ ದೇವರೇ ಆಗಿರಲಿ.

ತಾನೂ ಕೂಡ ಯಕಶ್ಚಿತ್ ಮನುಷ್ಯಳು, ಆಸೆಗಳಾಚೆ ಬದುಕಲಾಗದ ಅಥವಾ ಬದುಕು ಕಟ್ಟಿಕೊಳ್ಳಲಾಗದ ಹೆಣ್ಣು ಜೀವ. ದೇವರಿದ್ದಾನೆ ಅನ್ನುವ ದೊಡ್ಡ ನಂಬಿಕೆಯಲ್ಲೇ ಬದುಕಿನ ಆಯಸ್ಸು ತೀರುತ್ತಾ ಹೋಗುತ್ತದೆ.

ಮನೆ ಖಾಲಿ ಇದೆ, ಕತ್ತಲೇ ತುಂಬಿಕೊಂಡಿದೆ, ಅಪರೂಪಕ್ಕೆ ಎಂಬಂತೆ ಬಾಗಿಲು ದಾಟಿ ಬರುವ ಬೆಳಕಿನ ಆಯಸ್ಸು ಕಮ್ಮಿಯೇ. ತಾನು ಹಸಿದಿದ್ದೀನೊ ಇಲ್ಲವೋ ಅಂತ ಕೇಳೋರು ಯಾರೊಬ್ಬರೂ ಇಲ್ಲ. ಈಗಿಂದೀಗಲೇ ಸತ್ತರೆ ಹೆಣ ಹೊರಲು ಹೆಗಲುಗಳಿಲ್ಲ. ಬೀದಿ ನಾಯಿಗಳಂಥಾ ಒಂದು ಅನಾಥ ಶವವಾಗಿಬಿಡುತ್ತೇನೆ. ದುಃಖ ಒತ್ತರಿಸಿ ಬರುವಾಗ ತಬ್ಬಿಕೊಂಡು ಅಳಲಿಕ್ಕೆಂದಾಗಲಿ, ಅಚಾನಕ್ಕು ನಿದ್ರೆ ಹೋದಾಗ ಒಂದು ರಗ್ಗು ಹೊದಿಸಲೆಂದಾಗಲಿ, ಖುಷಿಯನ್ನು ಹೇಳಿಕೊಳ್ಳಲಿಕ್ಕಾಗಲಿ ಯಾರೂ ಇಲ್ಲದಂಥಾ ಖಾಲಿ ಮನೆ, ಯಾರೂ ಇಲ್ಲದಂಥಾ ಖಾಲಿ ಬದುಕು. ಕೆಲಸದಿಂದ ಬರುವಾಗ ಪ್ರೀತಿಯಿಂದ ಒಂದು ಮೊಳ ಮಲ್ಲಿಗೆ ಹೂವು ತಂದು ಮುಡಿಸುವಂಥವನಿದ್ದಿದ್ದರೆ, ತಲೆ ನೋವೆಂದು ನರಳುವಾಗ ಹಣೆಯ ಒತ್ತುತ್ತಾ ತೊಡೆ ಮೇಲೆ ಮಲಗಿಸಿಕೊಳ್ಳುವಂಥವನಿದ್ದಿದ್ದರೆ, ಕನಿಷ್ಟ ಯಾವಾಗ ಬಂದೆ? ಹೇಗಿದ್ದಿ? ಎಂದು ಕೇಳುವವನಾದರೂ ಇರಬೇಕಿತ್ತು.

ಥಟ್ಟನೆ ತನ್ನ ಮನಸ್ಸು ಓಡಿದ್ದು…. ಇಡೀ ಸಂತೆಯ ತುಂಬಾ ಕಾಡಿದ್ದು…. ಅದೇ ಹುಡುಗ.

ಆ ಹುಡುಗ ಮಧ್ಯರಾತ್ರಿಯವರೆಗೂ ತನ್ನೊಟ್ಟಿಗೆ ಎಷ್ಟೆಲ್ಲಾ ಮಾತನಾಡಿದ. ನಾವು ಹಂಚಿಕೊಂಡಿದ್ದು ಬರಿ ಮಾತುಗಳನ್ನಲ್ಲ ಬದುಕಿನ ಲೋಪಗಳನ್ನು, ಯಾರೂ ತುಂಬಲಾರದ ಒಲವಿನ ಪತ್ರಗಳನ್ನ. ವಯಸ್ಸಿನಲ್ಲಿ ಅಷ್ಟೇನು ವ್ಯತ್ಯಾಸ ಅನ್ನಿಸಲಿಲ್ಲ. ಆ ಹುಡುಗನಿಂತ ತಾನು ಸುಮಾರು ಏಳೆಂಟು ವರ್ಷ ದೊಡ್ಡವಳಿರಬಹುದಾ… ಛೇ ನನ್ನ ವಯಸ್ಸು ಅಷ್ಟೇನು ಕಾಣಲಿಕ್ಕಿಲ್ಲ, ಅಂದಹಾಗೆ ಕಾಮಕ್ಕಿರದ ವಯಸ್ಸು, ಪ್ರೀತಿಗೆ ಮಾತ್ರ ಅನ್ವಯವಾಗುವುದು ಹೇಗೆ! ಆತ್ಮ ಸಂಗಾತ್ಯವಲ್ಲವೇ ನಮ್ಮ ನಡುವಿನದ್ದು, ಅದೆಷ್ಟು ಜನ ನನ್ನೊಟ್ಟಿಗೆ ಮಲಗಿದ್ದಾರೆ, ಅದೆಷ್ಟು ಜನ ತನ್ನೊಟ್ಟಿಗೆ ಮಾತಿಗಿಳಿದಿದ್ದಾರೆ, ತಬ್ಬಿ ಮುದ್ದಾಡುವಾಗಲು ತನ್ನ ಹೆಸರು ಅವರಿಗೆ ಗೊತ್ತಿರಲಿಲ್ಲ ಕನಿಷ್ಠ ಕೇಳುವ ಸೌಜನ್ಯ ಈ ಗಂಡಸರಿಗಿರಲಿಲ್ಲ….. ಸ್ಟೌವ್ ಮೇಲಿಟ್ಟಿದ್ದ ಪಾತ್ರೆಯೊಳಗಿನ ನೀರು ಕುದಿಯುವ ಸದ್ದು ಇಡೀ ಕೋಣೆಯ ಮೌನವನ್ನು ಇಂಚಿಂಚಾಗಿ ತಿನ್ನುತ್ತಾ ಹೋಗಿತು. ಹಬೆಯ ಬಿಸಿಗೆ ಬೆವೆತ ಕೋಣೆ ತಾನು ಈಕೆಗಿಂಥ ಭಿನ್ನವಾಗಿಲ್ಲ ಎಂದು ಹೇಳಲೆತ್ನಿಸಿತಾದರೂ….

ಇವತ್ತು ಆ ಹುಡುಗ ಬರಬಹುದು, ಅವನ ಸುತ್ತಲು ನೋಡುವ ಹುಡುಗಿಯರಿಗಿಂತ ತಾನು ಅಂದವಾಗಿ ಕಾಣಿಸಬೇಕು, ತನ್ನ ಸೌಂದರ್ಯವನ್ನು ಮನಸೋ ಇಚ್ಚೆ ಕೊಂಡಾಡಬೇಕು. ಅವನ ಮನಸ್ಸಿನಲ್ಲಿ ತಾನು ಮಾತ್ರ ಚಿತ್ರಿತವಾಗಬೇಕು, ತನ್ನ ರೂಪಿನ ಕನಸುಗಳನ್ನೇ ಕಾಣಬೇಕು.

ಆ ರಾತ್ರಿ ಕಾದಳೆಂದರೆ…..

ಕೇಳಿಕೊಂಡು ಬಂದ ಬೇರೆಲ್ಲಾ ಗಂಡಸರನ್ನು ಸುತಾರಾಂ ಒಳಕ್ಕೆ ಬಿಟ್ಟುಕೊಳ್ಳಲಿಲ್ಲ, ಬೇರಾರು ಬೇಡವೆನ್ನಿಸಿತು. ತನ್ನ ದೇಹ ಮಲಿನವಾಗಿರಬಹುದು ಮನಸ್ಸು ಎಲ್ಲಾ ಹೆಣ್ಣುಗಳಂತೆ ಶುದ್ಧವಾಗಿದೆ. ಕಲ್ಮಶವಿದ್ದರೂ ಹೇಗೆ ತೆಗೆದೇನು. ಆತ್ಮ ವಿಮರ್ಶೆಗೊಳಪಡಿಸಿಕೊಂಡಳು. ಅವನೊಟ್ಟಿಗೆ ಏನೆಲ್ಲಾ ಮಾತನಾಡಬೇಕು, ಏನನ್ನು ಹೇಳಿ ನಗಿಸಬಹುದೆಂಬ ಮನಸ್ಸಿನಲ್ಲಿಯೇ ಅಂದುಕೊಂಡಳು.

ಎಷ್ಟೊಂದು ದಿವಸಗಳಾದರೂ ಬರದೇ ಇದ್ದ ಅವನನ್ನು ಕಳ್ಳಗಣ್ಣುಗಳಲ್ಲಿ ಕಂಡಾನೆಂದು ನೋಡಿದ್ದಿದೆ. ಜಾತ್ರೆಯ ನಡುವೆ ಕಳೆದುಕೊಂಡ ಮಗುವಿನಂತೆ ಅವುಡುಗಚ್ಚಿ ಹುಡುಕಾಡಿದ್ದಿದೆ. ಒಮ್ಮೆ ಕಂಡಾನೇನು, ಒಮ್ಮೆ ಮಾತಿಗೆ ಸಿಕ್ಕಾನೇನು, ಮನೆಗೆ ಬಂದಾನೇನು, ಆಸೆಯಿಂದ ಅಪ್ಪಿಕೊಂಡಾನೇನು. ಖಾಲಿ ಬೊಗಸೆಯಲ್ಲಿ ಮನೆಗೆ ಹಿಂದಿರುಗುತಿದ್ದವಳೇ, ಅಭ್ಯಂಗ ಸ್ನಾನ ಮಾಡಿದವಳೇ ಗಂಟೆಗಟ್ಟಲೇ ಸಿಂಗರಿಸಿಕೊಂಡು ಹಾಸಿಗೆ ಕೊಡವಿ ಕೋಣೆಯನ್ನು ಒಪ್ಪ ಓರಣ ಮಾಡಿ…

ಬಾಗಿಲು ಬಡಿದ ಸದ್ದು, ಅದು ಮೆಲ್ಲಗೆ… ಪ್ರೇಮಿಗಳು ಪಿಸುನುಡಿದಷ್ಟೇ ಮೃದುವಾಗಿ. ಇರಲಿಕ್ಕಿಲ್ಲ ಯಾರು ಬಂದಿರಲಿಕ್ಕಿಲ್ಲ, ಮತ್ತೆ ಭ್ರಮೆಯಲ್ಲೇ ತೇಲಾಡುತ್ತಿದ್ದೇನೆ. ಅವನು ಖಂಡಿತ ಬಂದಿರಲಿಕ್ಕಿಲ್ಲ. ಬಾಗಿಲು ಗಾಳಿಗೆ ಬಡಿದುಕೊಂಡಿರಬಹುದು. ಟಕ್…ಟಕ್… ಬಾಗಿಲು ಹಿಂದಿಗಿಂತಲು ತುಸು ಹೆಚ್ಚೇ ಸದ್ದು ಪಡೆದುಕೊಂಡಿದೆ, ಎದೆಗೂಡಿನ ಹೃದಯದಂತೆ, ಸದ್ದೂ ಕೂಡ ಹಾಗೆಯೇ ಕೇಳಿಸುತ್ತಿದೆ.

ಟರ್ರ್~~ ಬಾಗಿಲು ತೆರೆದ ಸದ್ದು ಮತ್ತದೇ ಕೋಣೆಯ ಮೌನವನ್ನು ಕದಡುತ್ತಾ ಹೋಯಿತು.

“ಒಳಗೆ ಬರ್ಲಾ…!”

………..

……….

“ಹೂಂ….. ಬಾ” ಮಾತುಗಳಿಗೆ ತುಸು ವಿರಾಮ ಕೊಟ್ಟು ಒಳಕ್ಕೆ ಕರೆದಳು. ಅಷ್ಟೇನು ಗೆಲುವಿಲ್ಲದ ಮುಖದಲ್ಲಿ, ಅಷ್ಟೇನು ಮನಸ್ಸಿಲ್ಲದ ಮನಸ್ಸಿನಲ್ಲಿ.

ಬಾಗಿಲು ಮುಚ್ಚಿಕೊಂಡಿತು….

‍ಲೇಖಕರು admin

18 January, 2017

4 Comments

  1. Gubbachchi Sathish

    NICE

  2. ಅನಿಲ್ ಗುನ್ನಾಪುರ

    Chennagide

  3. Venkatesha G

    ಪ್ರವರನ ಪ್ರತಿಭೆಗೆ ಅವನು ಇನ್ನೂ ಹೊಸತನದ ಕಥಾವಸ್ತು ಕೊಡಬಹುದಿತ್ತು ಎನ್ನುವುದು ನನ್ನ ಅನಿಸಿಕೆ.

  4. hema

    kathe odisikondu hogutide. ishtavaagide.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading