ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರತಿಯೊಬ್ಬ ಮನುಷ್ಯನು ಒಂದು ಶಸ್ತ್ರಸಜ್ಜಿತವಾದ ರಣರಂಗ..

ಮನುಷ್ಯ ಸಂಬಂಧಗಳು ದ್ವೀಪವಾಗದೇ ಸಾಗರವಾಗಲಿ -ಡಾ.ಎಸ್.ಬಿ.ಜೋಗುರ ‘I feel a solidarity with the common man. Tomorrow the world may burst in to fragments. In that threat hanging over our heads there is a lesson of truth. As we face such a future, hierarchies, titles, honors are reduced to what they are in reality: a passing puff of smoke.’ -Albert Camus ಮನುಷ್ಯ, ಸಂಬಂಧಗಳನ್ನು ಸ್ಥಾಪಿಸಿರುವದು, ಅವುಗಳಲ್ಲಿ ಸಿಲುಕಿರುವದು, ಕಾಪಾಡಿಕೊಂಡಿರುವದು ಎಲ್ಲವೂ ಅವನೊಬ್ಬ ಸುಸಂಸ್ಕೃತ ಜೀವಿ ಎಂದು ಸಾಬೀತುಪಡಿಸುವಲ್ಲಿ ಇದ್ದಿರಬಹುದಾದ ಸಾಕ್ಷಿಗಳು. ಕೀಳು ಪ್ರಾಣಿಗಳು ಕೇವಲ ಸಹಜ ಪ್ರವೃತ್ತಿಯನ್ನಷ್ಟೇ ಅವಲಂಬಸಿ ಬದುಕುವದರಿಂದ, ಮನ:ಪ್ರವೃತ್ತಿಯ ಸಹವಾಸವಿಲ್ಲದ ಅವುಗಳಿಗೆ ಇಷ್ಟಾನಿಷ್ಟಗಳ ಆಯ್ಕೆ ಮತ್ತು ತಿರಸ್ಕಾರಗಳು ಸಾಧ್ಯವಾಗದ ಕಾರಣ, ಮನುಷ್ಯನ ಒಡನಾಟದಲ್ಲಿದ್ದೂ ಅವು ಸಂಸ್ಕೃತಿಯ ಗಂಧಗಾಳಿ ಇಲ್ಲದವುಗಳಾಗಿ ಜೀವನ ಸಾಗಿಸುತ್ತಿವೆ. ಮಾನವ ಸಮಾಜ, ಸಾಮಾಜಿಕ ಸಂಬಂಧಗಳ ಬಲೆ ಎನ್ನುವ ಸಾರ್ವತ್ರಿಕವಾದ ಹೇಳಿಕೆಯ ನಡುವೆಯೂ ಮನುಷ್ಯನ ಸಂಬಂಧಗಳು ಜಿಗಿ ಸತ್ತಿರುವ ನೂಲಿನ ಬಲೆಯ೦ತಾಗಿರುವ ಸತ್ಯವನ್ನೂ ನಾವು ಅಲ್ಲಗಳೆಯಲಾಗದು. ಅಲ್ಜೀರಿಯ ಮೂಲದ ಲೇಖಕ ಆಲ್ಬರ್ಟ್ ಕಾಮು ಒಂದೆಡೆ ಮುಂಬರುವ ದಿನಮಾನಗಳಲ್ಲಿ ಮನುಷ್ಯ ಒಂದು ದ್ವೀಪವಾಗಿ ಬದುಕುತ್ತಾನೆ ಎಂದು ನುಡಿದಿರುವ ಭವಿಷ್ಯ ಹುಸಿ ಹೋಗಲಿಲ್ಲ. ಅಪಾರ ಜನಜಂಗುಳಿಯು ನಡುವೆಯೂ ಏಕಾಂತತೆಯನ್ನು ಅನುಭವಿಸುವ, ಕೌಟುಂಬಿಕ ಸಂಬಂಧಗಳ ನಡುವಿದ್ದರೂ ತಾನು ಮನೆಯಲ್ಲಿರುವ ಇತರ ಪರಿಕರಗಳಿಗಿಂತಲೂ ಯಾವದೇ ರೀತಿಯಿಂದ ಭಿನ್ನವಾಗಿಲ್ಲವೆನ್ನುವ ಭಾವನೆ ಬಾರಿಬಾರಿ ಕಾಡುವದಕ್ಕೂ ಸಾಯುತ್ತಿರುವ ಸಂಬಂಧಗಳೇ ಕಾರಣ. ಇಂದು ಒಂದು ಮನೆ ಎನ್ನುವದು ತಿಂದುಂಡು ಮಲಗುವ ತಾಣವಾಗಿದೆ. ಅದು ಲಾಜಿಂಗ್ ವಾಸಕ್ಕಿಂತಲೂ ತೀರಾ ವಿಭಿನ್ನವೆಂದೆನಿಸುತ್ತಿಲ್ಲ. ಕಿರಿಯರು ಮನೆಯಲ್ಲಿರುವ ಎಲ್ಲ ಹಿರಿಯರನ್ನು ಅವರು ತಮಗೆ ಮೌಲ್ಯಗಳನ್ನು ಧಾರೆಯೆರೆದಿರುವ, ಸರಿ-ತಪ್ಪುಗಳನ್ನು ತಿಳಿಸಿ ಮಾರ್ಗರ್ದರ್ಶನ ಮಾಡುವ ಸಾಮಾಜೀಕರಣದ ಸಾಧನಗಳಾಗಿರುವ ಬದಲು ಸಾಕಷ್ಟು ಬ್ಯಾಲೆನ್ಸ್ ಇರುವ ಎ.ಟಿ.ಎಮ್ ಕಾರ್ಡ್ ಆಗಿದ್ದರೆ ಚೆನ್ನ ಎನ್ನುವ ಭಾವನೆಯು ಬಲವಾಗಿರುತ್ತದೆ. ಗಂಡ-ಹೆಂಡತಿ, ಮಕ್ಕಳು ಎನ್ನುವ ಸಂಬಂಧಗಳು ಕೂಡಿ ಬದುಕಬೇಕಾದ ಅನಿವಾರ್ಯ  ನಂಟಾಗಿವೆಯೇ ಹೊರತು ತೀರಾ ಹಿತಕರವಾದ ಸಂಬಂಧಗಳಾಗಿ ಉಳಿದಿಲ್ಲ. ಹೀಗಿರಲು ವರ್ಷಕ್ಕೊಮ್ಮೆ ಬಂದುಹೋಗುವ ವೆಡಿಂಗ್ ಎನಿವರ್ಸರಿ, ಹುಟ್ಟುಹಬ್ಬ, ವೆಲೆಂಟೈನ್ ಡೇ, ಪ್ರೆಂಡ್ಸ್ ಡೆ, ಫ಼ಾದರ್ ಡೆ, ಮದರ್ ಡೇ ಎನ್ನುವ ಕ್ಯಾಲೆಂಡರಲ್ಲಿಯ ದಿನಾಂಕಗಳ ಮೂಲಕ ನಮ್ಮ ಸಂಬಂಧಗಳನ್ನು ಪುನ:ಶ್ಚೇತನಗೊಳಿಸಿಕೊಳ್ಳುವದಿದೆಯಲ್ಲ.. ಅದಕ್ಕಿಂತ ವಿಡಂಭನಕಾರಿಯಾದುದು ಇನ್ನೊಂದಿಲ್ಲ. ಮನುಷ್ಯ ಸಂಬಂಧಗಳು ರಕ್ತ, ಮೂಳೆ, ಮಾಂಸವಿರುವ ಮನುಷ್ಯರ ನಡುವೆ ಕುದುರಬೇಕೇ ಹೊರತು ಯಾವದೋ ಒಂದು ಬಾಹ್ಯವಾದ ಸಾಧನ, ಸಾಮಗ್ರಿಯ ಮೂಲಕವಲ್ಲ. ಅಷ್ಟಕ್ಕೂ ಸಂಬಂಧ ಎನ್ನುವದು ಅತರ್ಜನ್ಯವಾದುದು ಅದನ್ನು ಪ್ರದರ್ಶನಕ್ಕೆ ಒಡ್ಡಲಾಗದು. ಸಂಬಂಧಗಳ ಅಂತರ್ಯುದ ಸುಖವರಿಯದವರು ಮಾತ್ರ ಪ್ರದರ್ಶನದ ಬೆನ್ನಿಗೆ ಬೀಳಬಹುದು ಅಷ್ಟೆ. ಕುತ್ತಿಗೆಗೆ ಬಿಗಿಯುವ ಕಲರ್ ನೂಲು, ಕೈಗೆ ಕಟ್ಟುವ ಬೆಲ್ಟು ಮತ್ತೊಂದು ಮಗದೊಂದು ಸಂಬಂಧಗಳನ್ನು ಸ್ಥಾಪಿಸುತ್ತದೆ ಎನ್ನುವ ನಂಬುಗೆಯ ಅತ್ಯಂತ ಶಿಥಿಲವಾದುದು. ಸಂಬಂಧಗಳು ಈ ಮೊದಲೇ ಹೇಳಿದಂತೆ ಅದು ಯಾವದೋ ಒಂದು ಬಣ್ಣದ ದಾರದಿಂದ ಇಲ್ಲವೇ ಒಂದು ಪರಿಕರ, ಸಾಮಗ್ರಿಯಿಂದ ಹುಟ್ಟುವಂತಿದ್ದರೆ ಕತೆ ಬೇರೆಯೇ ಇರುತ್ತಿತ್ತು. ಹಾಗಿಲ್ಲ. ಮನುಷ್ಯ ಸಂಬಂಧಗಳು ಮಾನವ ಅಂತರಕ್ರಿಯೆಯ ಫಲ. ಈ ಅಂತರಕ್ರಿಯೆಯ ಒಂದು ಮಾನಸಿಕ ಸಂಬಂಧವೇ ಹೊರತು ಬಾಹ್ಯ ಸಾಮಗ್ರಿಯಲ್ಲ. ಇಂದು ಮನುಷ್ಯ ಅನೇಕ ಬಗೆಯ ಸಂಕೀರ್ಣತೆಗಳ ಮಧ್ಯೆ ಇದ್ದಾನೆ ಮಿಕ್ಕವರ ಜೊತೆಗೆ ಬಿಡಿ, ತನ್ನ ಜೊತೆಗೆಯೂ ಆತನ ಸಂಬಂಧ ನೆಟ್ಟಗಿಲ್ಲ ಅದರ ಪರಿಣಾಮವೇ ಆತ್ಮಹತ್ಯೆ ಎನ್ನುವ ಖಾಯಿಲೆ. ನಮ್ಮ ಜೊತೆಗೆ ತೀರಾ ಆಪ್ತನಂತೆ ನಗುತ್ತಾ ಮಾತನಾಡುವವನನ್ನು ನಂಬುವದು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಅಳುತ್ತಾ ತನ್ನ ಗೋಳಿನ ಕಥೆಯನ್ನು ಹೇಳುವವನನ್ನು ನಂಬುವದು ಕೂಡಾ ಅಷ್ಟೇ ಕಷ್ಟ. ನಮ್ಮ ನೋವು, ನಲಿವುಗಳನ್ನು ಎದೆಗೆ ಹಚ್ಚಿಕೊಂಡು ಕೇಳುವ ಕಿವಿಗಳು ಕೂಡಾ ಈಗ ತೀರಾ ಅಪರೂಪ. ನನ್ನ ಎಲ್ಲ ಬಗೆಯ ತಾಪತ್ರಯಗಳು ಇತರರದಾಗಲಿ ಎನ್ನುವಂಥಾ ಮನ:ಸ್ಥಿತಿಗಳು, ತನ್ನ ಎಲ್ಲ ಬಗೆಯ ಸುಖಗಳು ಇತರರದಾಗಲಿ ಎಂದು ಯೋಚಿಸುವದರಲ್ಲಿರುವದಿಲ್ಲ. ಹೀಗಾಗಿಯೇ ಮನುಷ್ಯ ಒಂದೇ ಪರಿಚಯದಲ್ಲಿ ಪರಿಚಯವಾದವನ ಬಗ್ಗೆ ಮತ್ಸರ ಕಕ್ಕಲು ಆರಂಭಿಸುತ್ತಾನೆ. ಆ ಬಗೆಯ ಮತ್ಸರಕ್ಕೆ ಆತನೊಂದಿಗಿನ ದೀರ್ಘ ಕಾಲಿನ ನಂಟು, ತಿಳುವಳಿಕೆ ಬೇಕಿಲ್ಲ, ಕೇವಲ ಆತನ ಡ್ರೆಸ್ಸು, ಆತನ ಭಾಷೆ, ಆತನ ಉದ್ಯೋಗ, ಆತನ ವಾಹನ, ಆತನ ಗಳಿಕೆ, ಆತನ ಉಳಿಕೆ ಇಂಥಾ ಭೌತಿಕ ಸಂಗತಿಗಳಷ್ಟೇ ಸಾಕು. ಒಬ್ಬ ಮನುಷ್ಯನಲ್ಲಿಯ ಬಹುತೇಕ ಒಳ್ಳೆಯ ಗುಣಗಳನ್ನು ಮೀರಿಯೂ ಆತನನ್ನು ದ್ವೇಷಿಸಲು ಬೇಕಾದ ಒಂದೋ..ಎರಡೊ ಸಂಗತಿಗಳನ್ನಷ್ಟೇ ಆಧರಿಸಿ ಮತ್ಸರದ ಹುತ್ತವನ್ನೇ ಕಟ್ಟುವ ಮನುಷ್ಯಸರ್ಪಗಳ ದೋಷ ನಿವಾರಣೆಯಾದರೂ ಹೇಗೆ ಸಾಧ್ಯ..? ಇಂದು ಪ್ರತಿಯೊಬ್ಬ ಮನುಷ್ಯನು ಒಂದು ಶಸ್ತ್ರಸಜ್ಜಿತವಾದ ರಣರಂಗದ ಹಾಗೆ ತೋರುತ್ತಾನೆ. ಮಾತನಾಡಲು ಸುರು ಮಾಡಿದರೆ ಸಾಕು ತಿವಿಯುತ್ತಾನೆ.. ಚುಚ್ಚುತ್ತಾನೆ.. ಇರಿಯುತ್ತಾನೆ.. ಕೊಲ್ಲುತ್ತಾನೆ. ಆ ಗಳಿಗೆಯಲ್ಲಿ ಹೆಳವನ ಮಾಡದಿದ್ದರೂ ಕುರುಡನ ಮಾಡಯ್ಯಾ.. ಕಿವುಡನ ಮಾಡಯ್ಯಾ ಎಂದು ಕೇಳಬೆಕೆನಿಸುತ್ತದೆ. ಮನುಷ್ಯ ಸಂವೇದನಾಶೀಲ ಜೀವಿ ಎನ್ನುವದೇ ಬಹುತೇಕರ ಪಾಲಿಗೆ ಶಾಪವಾದರೆ ಕೆಲವೇ ಕೆಲವರ ಪಾಲಿನ ವರವಾಗಿ ಪರಿಣಮಿಸಿದೆ.ಭಾವನೆಗಳ ಜೊತೆಗೆ ಗುದುಮುರಗಿ ಆಡುವವರನ್ನು ಬೇಕೆಂತಲೇ ಆಟ ಆಡಿಸುವ ಖಳರು ಈಗ ಅಪಾರ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಭಾವಜೀವಿಗಳು ತೀರಾ ನಾಜೂಕಾಗಿ ಕತ್ತಿಯ೦ಚಿನ ದಾರಿಯಲ್ಲಿ ನಡೆಯಬೇಕಿದೆ. ನಾವೆಲ್ಲರೂ ಏನು ಓದಿದರೇನು..ಏನು ಬರೆದರೇನು..ಯಾವ ಪದವಿ ಪಡೆದರೇನು..? ಕೊನೆಗೂ ಒಳ್ಳೆಯ ಮನುಷ್ಯರಾಗಲಾಗುತ್ತಿಲ್ಲವಲ್ಲ..? ಎನ್ನುವ ಕೊರಗು ನನ್ನಲ್ಲಿಯೂ ಇದ್ದೇ ಇದೆ. ನಾವೆಲರೂ ಕೈಗೆ ಕಟ್ಟುವ ಇಲೆಸ್ಟಿಕ್ ಬೆಲ್ಟು, ಕುತ್ತಿಗೆಗೆ ಬಿಗಿಯುವ ದಾರ, ಪೊಟ್ಟಣದಲ್ಲಿ ಗ್ಲಾಮರಸ್ ಆಗಿ ಪ್ಯಾಕ್ ಮಾಡಿ ಕೊಡುವ ಗಿಫ಼್ಟ್ ಗಳನ್ನು ಮೀರಿ ಸಂಬಂಧಗಳನ್ನು ಸ್ಥಾಪಿಸಿಕೊಳ್ಳಬೇಕಿದೆ. ಹಾಗೆಯೇ ಜಾತಿಯ ವಾಸನೆ, ಧರ್ಮದ ಅಮಲು, ವರ್ಗದ ಡೌಲು ಇವೆಲ್ಲವುಗಳನ್ನು ಮೀರಿಯೂ ಸಂಬಂಧಗಳನ್ನು ಸ್ಥಾಪಿಸಿಕೊಳ್ಳಬೇಕಿದೆ. ಜೊತೆಗೆ ಗುಣಕ್ಕೆ ಮತ್ಸರಪಡದ ಮಂದಿಯ ಅವಶ್ಯಕತೆಯೂ ಈಗ ತುಂಬಾ ಇದೆ. ಇದೇ ಹೊತ್ತೊಗೊದಗಿದ ಮಾತು ಎನ್ನುವದು ನನ್ನ ನಂಬುಗೆ. ನನ್ನ ಪಾಲಿಗೆ ಮಾತ್ರ ಇದು ಸಂಜೀವಿನಿಯಾಗದೇ ಸತ್ತಂತಿರುವ ಎಲ್ಲರ ಪಾಲಿಗೂ ಇದು ಹಾಗಾಗಲಿ ಎನ್ನುವದು ನನ್ನೆದೆಯ ಆಸೆ.  ]]>

‍ಲೇಖಕರು G

6 August, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading