ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರತಿಭೆಗೆ ನಾವೇ ಮಾಡಿಕೊಳ್ಳುವ ವಂಚನೆ

MeTwoನಾಮಧೇಯ ‘ಉಮೇಶ ಬಾಳಿಕಾಯಿ’; ಎಲ್ರೂ ಪ್ರೀತಿಯಿಂದ ‘ಉಮೀ’ ಅಂತ ಕರೀತಾರೆ :). ಬಯಲುಸೀಮೆ ಧಾರವಾಡ ಜಿಲ್ಲೆಯಲ್ಲಿನ ‘ಕುಂದಗೋಳ’ ಎಂಬ ಊರು ನನ್ನೂರು. ಹುಟ್ಟಿದ್ದು ಕೃಷಿಯಾಧಾರಿತ, ಮಧ್ಯಮವರ್ಗದ, ಸಾಧಾರಣ ಕುಟುಂಬವೊಂದರಲ್ಲಿ. ಇಂಜಿನಿಯರಿಂಗ್ ಓದಲೆಂದು ಸುಮಾರು ಹತ್ತು ವರುಷಗಳ ಹಿಂದೆ ಬೆಂಗಳೂರಿಗೆ ಬಂದವನು ಓದು ಮುಗಿಸಿ ಬೆಂಗಳೂರನ್ನೇ ನನ್ನ ಕರ್ಮಭೂಮಿಯಾಗಿ ಆರಿಸಿಕೊಂಡಿದ್ದೇನೆ.

ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್; ಪ್ರವೃತ್ತಿಯಲ್ಲಿ ಬರಹಗಾರ, ಮಾತುಗಾರ, ಛಾಯಾಚಿತ್ರಕಾರ, ಕನಸುಗಾರ, ಹೀಗೆ ಇನ್ನೂ ಏನೇನೋ. ಸದ್ಯಕ್ಕೆ ಏಕಾಂಗಿ.

‘ನಿನ್ನೊಲುಮೆಯಿಂದಲೇ’ ಬ್ಲಾಗ್ ನಡೆಸುವ ಉಮೇಶ್ ಅವರ ಬ್ಲಾಗಿನಲ್ಲಿ ‘ಬರೆಯುವುದನ್ನೇ ಬಿಟ್ಟು ಬಿಡಬೇಕೆನಿಸುತ್ತಿದೆಯಾ?’ ಲೇಖನ ಇಲ್ಲಿದೆ. ಉಮೇಶ್ ಅವರಿಗೆ ಥ್ಯಾಂಕ್ಸ್

ಕೆಲವು ಸಲ ಹಾಗನ್ನಿಸುವುದು ಸಹಜ.

ಮತ್ತೊಬ್ಬರು ನಮ್ಮ ಸಹನೆ ಪರೀಕ್ಷಿಸುವ ಮಟ್ಟಿಗೆ ನಮ್ಮ ಮೇಲೆ ಕೆಸರೆರಚಾಟ ಮಾಡುವದು, ನಮ್ಮ ಚಾರಿತ್ರ್ಯವಧೆಗೆ ಕೈ ಹಾಕುವುದು, ತೀರಾ ಅಪರಿಚಿತರೂ ಸಹ ಒಂದು ನಿರ್ದಿಷ್ಟ ಉದ್ದೇಶವಿಲ್ಲದೇ ನಮ್ಮ ಅವನಿಂದನೆ ಮಾಡುವುದು,… ಆಗೆಲ್ಲ, “ಛೇ! ಇಂಥವರೆಲ್ಲ ಇರುವ ಪರಿಸರದ ಸಹವಾಸವೇ ಬೇಡಪ್ಪಾ” ಅಂತಾ ಮೇಲೆದ್ದುಬಿಡಲು ಸಿದ್ಧರಾಗುತ್ತೇವೆ. ಆದರೆ, ಎಲ್ಲಿ ಹೋದರೂ ಅಂಥ ಜನರಿಂದ ತಪ್ಪಿಸಿಕೊಳ್ಳೋಕಾಗಲ್ಲ. ಜೀವನದಲ್ಲಿ ಸುಖ-ದುಖಃ, ಸಿಹಿ-ಕಹಿ, ಬೆಳಕು-ಕತ್ತಲು ಮುಂತಾದವುಗಳೆಲ್ಲ ಎಷ್ಟರಮಟ್ಟಿಗಿನ ಸಾರ್ವಕಾಲಿಕ ಸತ್ಯಗಳೋ, ಜಗತ್ತಿನಲ್ಲಿ ಒಳ್ಳೆಯವರು-ಕೆಟ್ಟವರು ಎರಡೂ ಥರದ ಜನ ಇರ್ತಾರೆ ಅನ್ನೋದೂ ಸಹ ಅಷ್ಟೇ ಸಾರ್ವಕಾಲಿಕ ಸತ್ಯ. ಇಲ್ಲಿರುವ ಕೆಟ್ಟ ಜನರಿಂದ ತಪ್ಪಿಸಿಕೊಂಡು ಬೇರೆ ಕಡೆ ಹೋದರೆ ಅಲ್ಲಿ ಇನ್ನೊಂದು ಥರದ ಕೆಟ್ಟ ಜನ ಸಿಗ್ತಾರೆ. ಕೆಟ್ಟದು ಇದ್ದಲ್ಲಿಯೇ ಒಳ್ಳೆಯತನದ ಅನುಭೂತಿ ಆಗಲು ಸಾಧ್ಯ, ಅಲ್ಲವೇ? ಎಲ್ಲ ಕಡೆ ಕೆಟ್ಟ ಜನ ಇದ್ದಾರೆ ಅಂತ ಜಗತ್ತನ್ನೇ ತೊರೆದು ಹೋಗುವುದು ಸಾಧ್ಯವೇ?

ಇಷ್ಟೆಲ್ಲಾ ಹೇಳಬೇಕೆಂದು ಅನಿಸಿದ್ದು, ತೀರ ಇತ್ತೀಚೆಗೆ ಬ್ಲಾಗುಲೋಕದಲ್ಲಿ ಆಗುತ್ತಿರುವ ಕೆಲವು ಕೆಟ್ಟ ಬೆಳವಣಿಗೆಗಳಿಂದ ಬೇಸತ್ತು ಕೆಲವು ಜನ ಬ್ಲಾಗುಲೋಕದ ಮಹನೀಯರು ಮತ್ತು ಪ್ರತಿಭಾವಂತ ಸಹೃದಯೀ ಬ್ಲಾಗುಮಿತ್ರರು ಬ್ಲಾಗಿಂಗ್ ಮಾಡುವುದನ್ನೇ ನಿಲ್ಲಿಸುತ್ತಿರುವದನ್ನು ಕಂಡಾಗ. ಎಲ್ಲ ಕ್ಷೇತ್ರಗಳಲ್ಲಿ ಇರುವಂತೆ ಬ್ಲಾಗುಲೋಕದಲ್ಲೂ ಸಹ ವೈಯಕ್ತಿಕ ದ್ವೇಷ ಸಾಧಿಸುವವರು, ಮತ್ತೊಬ್ಬರಿಗೆ ವಿನಾಃಕಾರಣ ತೊಂದರೆ ಕೊಟ್ಟು ಸಂತಸಪಡುವ ಸ್ಯಾಡಿಸ್ಟ್ ಗಳು, ಮತ್ತೊಬ್ಬರ ಏಳ್ಗೆ ಸಹಿಸಲಾಗದೆ ಕಾಲೆಳೆಯುವ ಮತ್ಸರವಾದಿಗಳು ಸಾಕಷ್ಟು ಜನ ಇದ್ದಾರೆ. ಅದರಲ್ಲೂ ಅಂತರ್ಜಾಲದಲ್ಲಿ ಇರುವ ಕೆಲವು ನ್ಯೂನತೆಗಳಿಂದಾಗಿ ಅಂಥವರನ್ನು ದೂರವಿರಿಸುವುದು ತುಂಬಾ ಕಷ್ಟದ ಕೆಲಸ. ಅಂಥವರನ್ನು ಗುರುತಿಸಿ, ಶಿಕ್ಷಿಸುವುದು ಇನ್ನೂ ಕಷ್ಟದ ಕೆಲಸ.

NeverStopWriting

ಹೇಳಿ-ಕೇಳಿ ಅಂತರ್ಜಾಲ ಎಂಬುದು ಎಲ್ಲರಿಗೂ, ಹೆಚ್ಚು ಕಡಿಮೆ ಎಲ್ಲ ರೀತಿಯಿಂದಲೂ ಮುಕ್ತವಾಗಿರುವ ಸ್ಥಾನ. ಅಲ್ಲಿ ನಿರ್ಬಂಧನೆಗಳನ್ನು ಹಾಕುವುದು ಮತ್ತು ಅವುಗಳ ಪಾಲನೆಯಾಗುತ್ತಿದೆಯೇ ಎಂದು ಹದ್ದಿನಕಣ್ಣು ಇಟ್ಟು ಕಾಯುವುದು ತುಂಬಾ ಕಷ್ಟದ ಕೆಲಸ. ಹೀಗಾಗಿ ಉಳಿದೆಲ್ಲ ಕಡೆಗಿಂತ ಇಲ್ಲಿ ವಿಶೇಷವಾಗಿ ಸಾಕ್ಷರ-ದುರ್ಜನರ ಕಾಟ ಸ್ವಲ್ಪ ಜಾಸ್ತೀನೇ ಅನ್ನಬಹುದು. ಹಾಗಂತ ಬ್ಲಾಗಿನಲ್ಲಿ ಬರೆಯುವುದನ್ನೇ ನಿಲ್ಲಿಸಿದರೆ ಹೇಗೆ? “ರೋಡ್ ರೇಜ್ ಜಾಸ್ತಿ, ಅದ್ಕೋಸ್ಕರ ಇನ್ಮುಂದೆ ನಾನು ರಸ್ತೆಯಲ್ಲಿ ಗಾಡಿ ಓಡಿಸಲ್ಲ” ಅನ್ನೋಕಾಗುತ್ತಾ? ಮನೆ ಸುತ್ತ ನಾಯಿಗಳ ಕಾಟ ಜಾಸ್ತಿ ಅಂತ ಮನೆಗೆ ಹೋಗದೇ ಇರೋಕಾಗುತ್ತಾ? ಯಾವುದೋ ಒಂದು ನಾಯಿ ಬೊಗಳಿತು ಅಂತ ದೇವಲೋಕ ಹಾಳಾಗೊಲ್ಲ, ಅಲ್ವಾ? ಹೀಗೆ, ಕೆಟ್ಟ ಜನ ಬ್ಲಾಗುಲೋಕದಲ್ಲಿ ಜಾಸ್ತಿ ಅಂತ ಬ್ಲಾಗಿನಲ್ಲಿ ಬರೆಯುವುದನ್ನೇ ಬಿಟ್ಟು ಪಲಾಯನವಾದಿಗಳಾಗುವುದು ಎಷ್ಟರಮಟ್ಟಿಗೆ ಸರಿ ಎಂದು ನನಗಂತೂ ಗೊತ್ತಾಗುತ್ತಿಲ್ಲ.

ಬ್ಲಾಗಲ್ಲಿ ಬರೆಯೋದು ಬಿಟ್ಟು, ಪುಸ್ತಕದಲ್ಲಿ ಬರೀತೀರಾ? ಪತ್ರಿಕೆಯಲ್ಲಿ ಬರೀತೀರಾ? ಅಲ್ಲಿ ಕಾಲೆಳೆಯುವವರು, ಅವಹೇಳನ ಮಾಡುವವರು, ಅನಾವಶ್ಯಕ ತೊಂದರೆ ಕೊಡುವವರು ಇಲ್ಲವೇ? ಹೀಗೆ ಬರೆಯುವುದನ್ನೇ ನಿಲ್ಲಿಸುವ ಬದಲು, ಸಾಧ್ಯವಾದಷ್ಟು ಗಟ್ಟಿಯಾಗಿ ನಮ್ಮ ಸುತ್ತ ನಾವೇ ಒಂದು ರಕ್ಷಣಾ ಗೋಡೆ ನಿರ್ಮಿಸಿಕೊಂಡು ಬರೆಯುವುದು ಒಳಿತಲ್ಲವೇ? ನಾನು ಬ್ಲಾಗು ಲೋಕಕ್ಕೆ ಕಾಲಿಟ್ಟಿದ್ದು ಸಹ ಕೆಲವು ಬ್ಲಾಗುಗಳ ಬರಹಗಳಿಂದ ಮತ್ತು ಅವುಗಳಲ್ಲಿನ ವಿಚಾರಗಳಿಂದ ಪ್ರಭಾವಿತನಾಗಿಯೇ. ನಾವು ಬರೆಯುವುದು ಕೇವಲ ನಮ್ಮ ಆತ್ಮಸಂತೋಷಕ್ಕಾಗಿ ಮಾತ್ರ ಎಂದು ನಮ್ಮಷ್ಟಕ್ಕೆ ನಾವು ಹೇಳಿಕೊಂಡರೂ, ನಮ್ಮ ಬರಹ ಅದನ್ನು ಓದುವ ಎಷ್ಟೋ ಜನರ ಮೇಲೆ ಗಾಢ ಪರಿಣಾಮ ಬೀರಿ ಅವರಲ್ಲೂ ಬರೆಯುವ ಉತ್ಸಾಹವನ್ನು ತಂದು, ಅವರ ಜೀವನದಲ್ಲೂ ಒಂದು ಚಿಕ್ಕ ಬದಲಾವಣೆಯನ್ನು ಉಂಟು ಮಾಡಬಲ್ಲುದು ಅನ್ನೋದನ್ನ ನಾವು ಮರೆಯಬಾರದು, ಅಲ್ಲವೇ?

ದಿನದಿಂದ ದಿನಕ್ಕೆ ಬ್ಲಾಗ್ ಸ್ಪಾಟ್, ವರ್ಡ್ ಪ್ರೆಸ್ ನಂತಹ ಬ್ಲಾಗ್ ಹೋಸ್ಟ್ ಗಳು ಬ್ಲಾಗಿನಲ್ಲಿ ಹೆಚ್ಚು ಹೆಚ್ಚು ಪ್ರೈವಸೀ ಅಳವಡಿಸುವ ಕೆಲಸ ಮಾಡುತ್ತಿವೆ. ಅವುಗಳನ್ನು ಉಪಯೋಗಿಸಿಕೊಳ್ಳೋಣ. ಉದಾಹರಣೆಗೆ, ಅನಾಮಧೇಯ (ಅನಾನಿಮಸ್) ಕಮೆಂಟುಗಳನ್ನು ಬರೆಯುವುದನ್ನು ನಿರ್ಬಂಧಿಸುವುದು. ಈ ಸೌಲಭ್ಯವಂತೂ ತುಂಬಾ ಹಿಂದಿನಿಂದ ಇದೆ. ಸದ್ಯಕ್ಕೆ ಬ್ಲಾಗುಲೋಕದ ಬಗ್ಗೆ ಇರುವ ಅತಿದೊಡ್ಡ ದೂರು ಅಂದ್ರೆ ಈ ಅನಾಮಧೇಯ ಕಮೆಂಟುಗಳದ್ದು. ನಾನು ನೋಡಿರುವಂತೆ, ಬೇಜವಾಬ್ದಾರಿಯ ಕಮೆಂಟುಗಳನ್ನು ಬರೆಯುವವರು ತುಂಬಾ ಸೋಂಬೇರಿಗಳಾಗಿರುತ್ತಾರೆ. ಅವರಿಗೆ ಒಂದು ಬ್ಲಾಗರ್ ಅಕೌಂಟ್ ಓಪನ್ ಮಾಡಿ ಅದರಿಂದ ಕಮೆಂಟ್ ಮಾಡುವುದೂ ಸಹ ಕಷ್ಟದ ಕೆಲಸ. ಅದಕ್ಕೇ ಅವರು ಅನಾಮಧೇಯ ಕಮೆಂಟುಗಳನ್ನು ಬರೆಯುವುದು. ಅನಾಮಧೇಯ ಕಮೆಂಟುಗಳನ್ನು ನಿರ್ಬಂಧಿಸುವುದರಿಂದ ಅಂಥವರನ್ನು ಸ್ವಲ್ಪಮಟ್ಟಿಗೆ ದೂರ ಇಡಬಹುದು. ಒಂದು ವೇಳೆ ಅವರೊಂದು ಅಕೌಂಟ್ ಓಪನ್ ಮಾಡಿ ಅದರಿಂದ ನಿಂದನಾತ್ಮಕ ಕಮೆಂಟುಗಳನ್ನು ಹಾಕಿದರೆ ಅಂಥವರ ಅಕೌಂಟನ್ನು ಕಪ್ಪುಪಟ್ಟಿಗೆ ಸೇರಿಸಲು ಆಗ್ರಹಿಸಬಹುದು. ಕಮೆಂಟುಗಳನ್ನು ಮಾಡರೇಟ್ ಮಾಡಿದ ಮೇಲೆ ಬ್ಲಾಗಿನಲ್ಲಿ ಗೋಚರಿಸಲು (ಪಬ್ಲಿಶ್ ಮಾಡಲು) ಬಿಡುವುದು ಇನ್ನೂ ಒಳ್ಳೆಯದು. ಹೀಗೆ ಮಾಡುವುದರಿಂದ ನಿಂದನಾತ್ಮಕ ಕಮೆಂಟುಗಳನ್ನು ಕನಿಷ್ಟ ಪಕ್ಷ ಮೊದಲ ಹಂತದಲ್ಲೇ ಚಿವುಟಿ ಹಾಕಿದಂತಾಗುತ್ತದೆ.

ಅದೃಷ್ಟವಶಾತ್ ನನ್ನ ಬ್ಲಾಗಿನಲ್ಲಿ ಇದುವರೆಗೂ ಯಾರೂ ಕೆಟ್ಟದಾಗಿ ಕಮೆಂಟ್ ಮಾಡಿಲ್ಲ. ಅದ್ಕೋಸ್ಕರ ನಾನು ನನ್ನ ಬ್ಲಾಗಿನಲ್ಲಿ ಬರುವ ಕಮೆಂಟುಗಳನ್ನು ಮಾಡರೇಟ್ ಮಾಡುವ ಗೋಜಿಗೆ ಹೋಗಿಲ್ಲ. ನಿಮ್ಮ ಬ್ಲಾಗಿನಲ್ಲೇನಾದರೂ ನಿಂದನಾತ್ಮಕ ಕಮೆಂಟುಗಳ ಹಾವಳಿಯಿದ್ದರೆ ಈ ಮೊದಲು ಹೇಳಿದ ಎರಡೂ ವಿಧಾನಗಳನ್ನು ಅನುಸರಿಸಿ ನೋಡಿ. ಕೀಳು ಅಭಿರುಚಿಯ ಕಮೆಂಟುಗಳ ಹಾವಳಿಯನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗದಿದ್ದರೂ ಸ್ವಲ್ಪಮಟ್ಟಿಗೆ ನಿಯಂತ್ರಿಸುವುದಂತೂ ಖಂಡಿತಾ ಸಾಧ್ಯ. ಅನವಶ್ಯಕ, ನಿಂದನಾತ್ಮಕ ಕಮೆಂಟುಗಳು ಹುಟ್ಟದಂತೆ ನೋಡಿಕೊಳ್ಳುವುದು ಸ್ವಲ್ಪಮಟ್ಟಿಗೆ ಬ್ಲಾಗಿಗರ ಕೈಯಲ್ಲೇ ಇದೆ. ಯಾವುದೇ ವಿಷಯದ ಬಗ್ಗೆ ಬ್ಲಾಗಿನಲ್ಲಿ ಬರೆಯುವ ಮುಂಚೆ, ನಮ್ಮ ಬರಹ ಯಾರ ಮನಸ್ಸಿಗಾದರೂ ನೋವು ಉಂಟು ಮಾಡಬಲ್ಲುದೇ ಎಂದು ಒಂದ್ಸಲ ಆಲೋಚಿಸುವುದೊಳಿತು. ಮತ್ತೊಬ್ಬರ ಭಾವನೆಗಳನ್ನು ಕೆರಳಿಸುವ, ಮತ್ತೊಬ್ಬರನ್ನು ಅವಹೇಳನ ಮಾಡಿ ನಗಿಸುವ ಬರಹಗಳನ್ನು ಬರೆಯುವುದೂ ತಪ್ಪಲ್ಲವೇ? ಬ್ಲಾಗಿನಲ್ಲಿ ವೈಯಕ್ತಿಕ ವಿಚಾರಗಳನ್ನು ಸಾಧ್ಯವಾದಷ್ಟು ಕಡಿಮೆ ಹಂಚಿಕೊಳ್ಳಿ. ಇದರಿಂದ ಮತ್ತೊಬ್ಬರು ಅನಾವಶ್ಯಕವಾಗಿ ನಿಮ್ಮ ವೈಯಕ್ತಿಕ ಬದುಕಿನ ಮೇಲೆ ಕಮೆಂಟ್ ಮಾಡುವುದನ್ನು ತಡೆಯಬಹುದು. ಹೀಗೆ ಕೆಲವು ನಮ್ಮದೇ ಆದ ಮತ್ತು ಕೆಲವು ಬ್ಲಾಗಿಂಗ್ ಸೈಟುಗಳು ನೀಡುವ ಅಸ್ತ್ರಗಳನ್ನು ಬಳಸಿಕೊಂಡು ಸಾಧ್ಯವಾದ ಮಟ್ಟಿಗೆ ಬ್ಲಾಗುಲೋಕದಲ್ಲಿನ ದುಷ್ಟರ ನಿಯಂತ್ರಣ ಮಾಡಬಹುದು ಅಂತ ನನ್ನ ಅನಿಸಿಕೆ.

ಅದೆಲ್ಲ ಬಿಟ್ಟು, “ನನ್ನ ಬರಹದ ಬಗ್ಗೆ ಯಾರೋ ಅನಾಮಧೇಯರು ನಿಂದನಾತ್ಮಕವಾಗಿ ಕಮೆಂಟು ಬರೆದಿದ್ದಾರೆ” ಅಂತ ಬರೆಯುವುದನ್ನೇ ನಿಲ್ಲಿಸುವುದು ನಮ್ಮ ಸ್ವಂತಿಕೆಗೆ ಮತ್ತು ಪ್ರತಿಭೆಗೆ ನಾವೇ ಮಾಡಿಕೊಳ್ಳುವ ವಂಚನೆ, ಅಲ್ಲವೇ?

ಸದಭಿರುಚಿಯ, ಸೃಜನಾತ್ಮಕ, ಚಿಂತನಾರ್ಹ ಕಮೆಂಟುಗಳಿಗೆ ಸ್ವಾಗತ

‍ಲೇಖಕರು avadhi

27 August, 2009

5 Comments

  1. shama

    chennaagide umesh baraha. neevandiddu 100%
    sathya. naanu comment moderation hage madiddene.
    nanna paadige naanu bareve embanthe blog nalli geechuthene…

  2. Nitin Muttige

    ದಾಖಲೆಗಳನ್ನು ಕೊಟ್ಟ ರೇಶನ್ ಕಾರ್ಡ್ ಗಳೇ ನಕಲಿಯಾಗುತ್ತಿರುವಾಗ…

    ಇಷ್ಟು ದಿನ ಮುಚ್ಚಿದ ಕೆಂಡದಂತಿದ್ದ ಅನಾಮಧೆಯರ ಕಾಮೆಂಟ್ ಈಗ ಎಲ್ಲೇಲ್ಲೂ ಹಾಟ್ ಟಾಪಿಕ್. ಅನಾಮಧೆಯರ “ಕಿರುಕುಳ” ತಾಳದೇ ಕೆಲವು ನಾಮಧೆಯರು ಬ್ಲಾಗ್ ಬಿಡುವ ಮನಸ್ಸು ಮಾಡುತ್ತಿದ್ದರೆ ಕೆಲವರು ಬಿಟ್ಟಾಗಿದೆ.ಇನ್ನೂ ಕೆಲವರು ಸಕ್ರೀಯರಿದ್ದವರು ನಿಧಾನವಾಗಿ ಬಿಡುತ್ತಿದ್ದಾರೆ.

    ಅಷ್ಟಕ್ಕೂ ಅನಾಮಧೇಯ ಕಾಮೆಂಟ್ ಎಲ್ಲಿ ಹುಟ್ಟುತ್ತಿದೆ ಎಂದು ಯೋಚಿಸಬೇಕು. ಸಾರ್ವಜನಿಕವಾಗಿ ಗುರುತಿಸಿಕೊಂಡಲ್ಲಿ,ಸಮಾಜದೊಳಗಿನ ಬರಹಕ್ಕೆ ಹೆಚ್ಚಿಗೆ ಕಾಮೇಂಟ್ ಬರುತ್ತಿದೆ.ಅದರಲ್ಲೂ ಸ್ವಲ್ಪ ಹಾಟ್ ಟಾಪಿಕ್ ಆಗಿದ್ದರೆ ಕೆಟ್ಟ ಕಾಮೇಂಟ್ ಗ್ಯಾರಂಟಿ.ಪತ್ರಿಕೆಯಲ್ಲಾದರೆ ಪ್ರಕಟಿಸುವ ಮುನ್ನ ಪರಿಶೀಲಿಸಲಾಗುತ್ತದೆ.ಬ್ಲಾಗ್ ವೈಯಕ್ತಿಕವಾಗಿದ್ದರಿಂದ ಎಲ್ಲ ಬಗೆಯೂ ಅಭಿಪ್ರಾಯ ಸಾಧ್ಯ.ಒಂದು ವೇಳೆ ಅದಕ್ಕೆ ವಿರುದ್ಧವಾದ ಅಭಿಪ್ರಾಯ ಬಂದರೆ ಕಾಮೇಂಟ್ ಪಬ್ಲೀಷ್ ಮಾಡದಿದ್ದರೆ ಹೊಸ ಬ್ಲಾಗ್ ಹುಟ್ಟುಹಾಕಿ ಅಲ್ಲಿ ತಮ್ಮ ಅಭಿಪ್ರಾಯ ತಿಳಿಸಿ ನಿನ್ನ ಬ್ಲಾಗ್ ಅಲ್ಲದಿದ್ದರೆ ನಂದೊಂದು ಎನ್ನುವಂತೆ ಆಗುತ್ತಿದೆ.
    ನಮ್ಮಲ್ಲಿನ ಮುಕ್ತ ಅಭಿಪ್ರಾಯ ಮನೋಭಾವ ಒಳ್ಳೆಯದಕ್ಕೆ(ಬೈಯುವದಿದ್ದರೂ ಒಳ್ಳೆ ಭಾಷೆಯನ್ನಾದರೂ ಬಳಸಿ! ) ಬಳಕೆಯಾಗದ ಹೊರತು ಇಂಥದ್ದೆಲ್ಲಾ ಇದ್ದದ್ದೆ.ರೇಶನ್ ಕಾರ್ಡಿಂದ ಹಿಡಿದು ಎಲೇಕ್ಷನ್ ಕಾರ್ಡ ಗಳೆಲ್ಲಾ ದಾಖಲೆ ಕೊಟ್ಟರೂ ಕೊಟ್ಟಿಯಾಗುತ್ತಿರುವಾಗ ಇನ್ನು ಪುಟಗೊಸಿ ದಾಖಲೆ ಇಲ್ಲದೇ ಬ್ಲಾಗ್ ತೆಗೆಯುವಾಗ ಇಂಥದ್ದನ್ನೇಲ್ಲಾ ನಿಲ್ಲಿಸಲು ಸಾಧ್ಯವೆ? ಕಜ್ಜಿಯಾದಾಗ ಅದನ್ನು ಕೆರೆದುಕೊಂಡರೆ ಮತ್ತಷ್ಟು ಹೆಚ್ಚುತ್ತದೆಯೆ ಹೊರತು ಗುಣವಾಗದು.ಅದೇ ರೀತಿ ಅನಾಮಿಕರು ಹೇಳಿದ್ದನ್ನು/ಬರೆದಿದ್ದನ್ನು ನೋಡಿ ಸುಮ್ಮನಿದ್ದರೆ ಆಯ್ತು.ಎಲ್ಲೋ ಪ್ರವಾಸಕ್ಕೋ ಮತ್ತೇಲ್ಲಿಗೋ ಹೊದಾಗ ಅಲ್ಲಿ ತೆಗೆದ ಸ್ಥಳೀಯರ ಚಿತ್ರವನ್ನು ಒಂದು ಬ್ಲಾಗ್ ತೆಗೆದು ಅಲ್ಲಿ ಯಾರದ್ದೋ ಹೆಸರು ಹಾಕಿ ಆ ಫೋಟೊ ಹಾಕಿದರೆ ಅದು ಅನಾಮಧೇಯದ ಇನ್ನೋಂದು ಮುಖವಲ್ಲವೆ?
    ಅನಾಮಧೇಯರು ವೈಯಕ್ತಿಕವಾಗಿ ಅಟ್ಯಾಕ್ ಮಾಡುವುದನ್ನು ಬಿಡಬೇಕು.ವಿಚಾರದಲ್ಲಿ ಬೇಕಾದರೆ ಮುಖವಾಡ ಧರಿಸಿ ಮಾತನಾಡಲಿ.

  3. Berlinder

    ಪ್ರೀತಿಯಿಂದ ಕರೆದ ಜನಭಳಗದ ’ಉಮೀ’
    ನೀತಿಯ ಭೋದನಪ್ರಬಂಧ ಪದ ಪ್ರೇಮಿ!
    ಹೆಮ್ಮೆಯಿಂದ ಗಳಿಗೆಯೊಂದು ಸನಿಹ ಸೇರಿ
    ಹೊಮ್ಮಿದ ಭಾವನೆಯೊಂದ ತಿಳಿಸುವ ಪರಿ.
    *
    ಮೊಟ್ಟಮೊದಲೇ ಮಾಡುತ ಬಹಿರಂಗ ಪ್ರಚಾರ
    ದಿಟವಾಗಿ ಆಡುತ ಹುಟ್ಟಿದ್ಹೆಸರ ವಿಚಾರ
    ದಾಖಲೆಗೆ ’ಮಹೇಂಂದ್ರ’ ಕರೆಗೆ ’ವಿಜಯ’
    ’ವಿಜಯಶೀಲ’ ಕಾವ್ಯನಾಮ ಧರಿಸಿದ ಪ್ರಮೇಯ.
    *
    ನಾಮಾಡಲೊಲ್ಲೆ ಇಲ್ಲಾವ ’ಕಮೆಂಟು’ ಅನಾಮಧೇಯ,
    ಧೈರ್ಯ ಕುಂದಿದೆ ಆರೋಗ್ಯದ ’ಕಾಮೆಂಟ್’ಗೂ ಭಯ!
    ಒಂದಿಬ್ಬರ ಮುಟ್ಟಿದರೆಮುನಿಯ ಅತಿ ಸೂಕ್ಷ್ಮ ನ್ಯಾಯ,
    ಅಬ್ಬರ ಆಗ್ರಹದ ಕೂಗು ಅನುಸರಿಸಿ ನೆರವೇರಿಸುವ ಧ್ಯೆಯ.
    *
    ಅವಿನಯ ’ಕಾಮೆಂಟ್’ ನಿಮಗೊಂದೂ ತಲುಪಲಿಲ್ಲ,
    ಭುವಿಯಲಿ ಸಾಕ್ಷಾತ್ ಅಸಂಕ್ಯಾತ ವಿವಿಧ ಶ್ಲೀಲ.
    ಒರೋರ್ವರ ನುಡಿವೈಕರಿ ಒರಟು ಮನಕೆ ಘಾಟು
    ಸಾವಿರ‍ರು ಪಡಿ ಸಮಾಜದ ಸತತ ಗುಣನಿಘಂಟು.
    *
    ’ಕಮೆಂಟ್’ ಆಗದು ಎಂದಿಗೂ ’ಕರ್ರೆಂಟು’,
    ಅದರಲಿ ’ಆ’ ಸ್ವರಾಕ್ಷರ ಕಳಚಿ ಕುಂಟು!
    ಕೆಲರ ’ಕಾಮೆಂಟ್’ನಲ್ಲಿ ಬೇವುಸೊಪ್ಪಿನ ದಂಟು!
    ಮನ್ನಿಸೆನ್ನ ದಾರ್ಢ್ಯತೆ ಇರಲಿ ವಿನೋದದ ಗುಟ್ಟು!
    *
    – ವಿಜಯಶೀಲ
    mavipra@gmx.de
    *

  4. prakash hegde

    ಉಮೇಶ್…..

    ಜೋಗಿಯವರಿಗೆ ಈ ಲೇಖನ ದಯವಿಟ್ಟು ಕಳಿಸಿಕೊಡಿ…..

  5. arun

    nimma abiprayakke nanna bembalavu ide…..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading