ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರತಿಭಾ ನಂದಕುಮಾರ್ ಅಂಕಣ- ಹೈದರನ ಕುದುರೆ ವ್ಯಾಪಾರ

ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ.

ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ ದಶಕಗಳ ಕಾಲದ ಉಸಿರಾಟದ ಗುರುತು. ‘ಇನ್ನು ಹತ್ತು ವರ್ಷದ ನಂತರ ಮತ್ತಿನ್ನೊಂದು ಸಮಗ್ರ ಸಂಗ್ರಹದೊಂದಿಗೆ ಬರುತ್ತೇನೆ’ ಎಂದು ಖಚಿತವಾಗಿ ಹೇಳುವ ಉತ್ಸಾಹಿ. ‘ನಾವು ಹುಡುಗಿಯರೇ ಹೀಗೆ’ಯಿಂದ ಆರಂಭಿಸಿ ‘ಕೌಬಾಯ್ಸ್ ಮತ್ತು ಕಾಮಪುರಾಣ’ವರೆಗೆ ಕನ್ನಡ ಸಾಹಿತ್ಯವನ್ನು ಆವರಿಸಿ ನಿಂತಿರುವ ಪ್ರತಿಭಾ ಪರಿ ಮಾದರಿ.

ಸಂಶೋಧನೆ ಇವರ ಇನ್ನೊಂದು ಮೋಹ. ಸಂಶೋಧನೆಯನ್ನು ಕೈಗೆತ್ತಿಕೊಂಡರೆ ಅದರ ಆಳಕ್ಕೆ ಡೈವ್ ಹೊಡೆಯುವ ಉತ್ಸಾಹ.

ಅಂತಹ ಒಂದು ಅಧ್ಯಯನವನ್ನು ‘ಅವಧಿ’ ನಿಮ್ಮ ಮುಂದಿಡುತ್ತಿದೆ. ಈ ಅಧ್ಯಯನ ಬರಹಗಳ ಈ ಅಂಕಣದಲ್ಲಿ ಬರುವ ಎಲ್ಲಾ ಅಭಿಪ್ರಾಯಕ್ಕೂ ಲೇಖಕರೇ ಜವಾಬುದಾರರು ಎಂದು ಕಾಣಿಸುತ್ತಾ ಈ ಅಂಕಣದ ಎಲ್ಲಾ ಬರಹಕ್ಕೂ ನಿಮ್ಮ ಪ್ರತಿಕ್ರಿಯೆಯನ್ನು ಸ್ವಾಗತಿಸುತ್ತೇವೆ.

ಹೈದರನ ಕುದುರೆ ವ್ಯಾಪಾರದ ಬಗ್ಗೆ ವಿಪರೀತ ಹೊಗಳಿಕೆ ದಾಖಲಾಗಿದೆ. ಹೈದರನನ್ನು ಹತ್ತಿರದಿಂದ ಬಲ್ಲ ಕಿರ್ಮಾನಿ ಪರ್ಷಿಯನ್ ಭಾಷೆಯಲ್ಲಿ ಬರೆದ ಹೈದರನ ಚರಿತ್ರೆಯಲ್ಲಿ ಹೇಳಿದಂತೆ – ಬೇರೆ ಯಾರಿಗೆ ಮೋಸ ಮಾಡಿದರೂ ಹೈದರ್ ಕಂದಾಯ ಅಧಿಕಾರಿಗಳು, ವ್ಯಾಪಾರಿಗಳು, ಅದರಲ್ಲೂ ಕುದುರೆ ವ್ಯಾಪಾರಿಗಳಿಗೆ ಮೋಸ ಮಾಡುತ್ತಿರಲಿಲ್ಲ. ಕುದುರೆ ವ್ಯಾಪಾರಿಗಳಿಗೆ ತಾನು ಎಷ್ಟು ಪ್ರಾಮಾಣಿಕನಾಗಿದ್ದೇನೋ ಅವರೂ ಅಷ್ಟೇ ನಿಷ್ಠೆಯಿಂದಿರಬೇಕು ಎಂದು ಅವನು ಬಯಸುತ್ತಿದ್ದ.

ಹೊರಗಿನಿಂದ ಬರುತ್ತಿದ್ದ ಕುದುರೆಗಳನ್ನು ಮೊಟ್ಟ ಮೊದಲು ಹೈದರ್ ಗೇ ತೋರಿಸಬೇಕಾಗಿತ್ತು. ಅವನಿಗೆ ತೋರಿಸದೇ ಬೇರೆಯವರಿಗೆ ಮಾರುವಂತಿರಲಿಲ್ಲ. ತನ್ನ ರಾಜ್ಯದ ಗಡಿ ಪ್ರವೇಶಿಸಿದ ಅನಂತರ ಕುದುರೆ ಅಕಸ್ಮಾತ್ ಸತ್ತರೆ ಅದರ ಬಾಲ ತೋರಿಸಿದರೆ ಅದಕ್ಕೆ ಅರ್ಧ ಬೆಲೆ ಕೊಡುತ್ತಿದ್ದ. ಹೈದರ್ ತಾನೇ ಸ್ವತಃ ಕುದುರೆಯನ್ನು ನೋಡಿ ಪರೀಕ್ಷಿಸಿ ಅದರ ಬೆಲೆ ತಾನೇ ನಿಗದಿಸುತ್ತಿದ್ದ. (ಸೈನ್ಯಕ್ಕೆ ಸೇರುವ ಪ್ರತಿಯೊಬ್ಬರನ್ನೂ ಹೈದರ್ ಸ್ವತಃ ಪರೀಕ್ಷಿಸುತ್ತಿದ್ದ) ಒಳ್ಳೆಯ ಕುದುರೆಗಳಿಗೆ ಉತ್ತಮ ಬೆಲೆ ಕೊಡುತ್ತಿದ್ದ.

ಕುದುರೆಯನ್ನು ಮೂರು ದಿನ ತನ್ನ ಲಾಯದಲ್ಲಿ ಇಟ್ಟುಕೊಂಡು ಪರೀಕ್ಷಿಸುತ್ತಿದ್ದ. ನಾಲ್ಕನೇ ದಿನ ವರ್ತಕನಿಗೆ ಹೇಳಿ ಕಳಿಸುತ್ತಿದ್ದ. ತಾನು ಒಪ್ಪಿಕೊಂಡ ಕುದುರೆಗಳ ಮೊತ್ತವನ್ನು ಲೆಕ್ಕಹಾಕಿ ಕೊಡುತ್ತಿದ್ದ. ಜೊತೆಗೆ ರಹದಾರಿ ಪತ್ರವನ್ನು ನೀಡುತ್ತಿದ್ದ. (ಹೈದರನ ರಾಜ್ಯಕ್ಕೆ ಯಾರೇ ಪ್ರವೇಶ ಮಾಡಿದರೂ ಅದರ ನಂತರ ತಮ್ಮಿಚ್ಛೆಯಂತೆ ಹಿಂದಿರುಗುವುದು ಸಾಧ್ಯವಿರಲಿಲ್ಲ. ರಾಜ್ಯದಿಂದ ಹೊರಗೆ ಹೋಗಲು ಅವರಿಗೆ ಹೈದರನ ರಹದಾರಿ ಪತ್ರ ಅಗತ್ಯವಾಗಿತ್ತು. ಅಕಸ್ಮಾತ್ ಯಾರಾದರೂ ಹಾಗೇ ಹೊರಗೆ ಹೋಗಲು ಯತ್ನಿಸಿ ಸಿಕ್ಕಿಕೊಂಡರೆ ಯಾವುದೇ ವಿಚಾರಣೆ ಇಲ್ಲದೆ ಅವರ ಕಿವಿ ಮೂಗು ಕತ್ತ ರಿಸಲಾಗುತ್ತಿತ್ತು).

ಮಾರನೆಯ ದಿನ ತನ್ನ ಅತಿಥಿಯಾಗಿ ತಂಗಬೇಕೆಂದು ಆಹ್ವಾನಿಸಿ, ಆತಿಥ್ಯವನ್ನು ಸ್ವೀಕರಿಸಿದ ನಂತರವೇ ರಾಜ್ಯದಿಂದ ಹೊರಡಬೇಕೆಂದು ತಿಳಿಸುತ್ತಿದ್ದ. ಮಾರನೆಯ ಬೆಳಿಗ್ಗೆ ಅವರಿಗೆ ಅಕ್ಕಿ, ಕುರಿ, ಬೆಣ್ಣೆ ಮತ್ತಿತರ ಸಾಮಗ್ರಿಗಳನ್ನು ಕಳಿಸಿ ಹಬ್ಬದಡಿಗೆಗೆ ಏರ್ಪಾಟು ಮಾಡುತ್ತಿದ್ದ. ಅವನು ಕುದುರೆ ವ್ಯಾಪಾರಿಗಳನ್ನು ನಡೆಸಿಕೊಳ್ಳುತ್ತಿದ್ದ ರೀತಿ ಜನಜನಿತವಾಗಿ ಎಲ್ಲಾ ಕಡೆಯಿಂದಲೂ ಉತ್ತಮ ಕುದುರೆಗಳನ್ನು ಹೈದರನಿಗೆ ಮಾರಲು ತರುತ್ತಿದ್ದರು. ಅಕಸ್ಮಾತ್ ಯಾರಾದರೂ ಕುದುರೆ ವ್ಯಾಪಾರಿ ಹೈದರ್ ನೋಡುವುದಕ್ಕೆ ಮೊದಲೇ ಬೇರೆಯವರಿಗೆ ಕುದುರೆ ಮಾರಿದ್ದಾನೆ ಎನ್ನುವುದನ್ನು ಹರಿಕಾರರ ಮೂಲಕ ಹೈದರನಿಗೆ ತಿಳಿದುಬಂದರೆ ಮುಗಿಯಿತು ಕಥೆ.

ತಾನೂ ಅವನಿಂದ ಒಂದೂ ಕುದುರೆಯನ್ನು ಕೊಳ್ಳುತ್ತಿರಲಿಲ್ಲ, ಬೇರೆ ಯಾರೂ ಸಹ ಖರೀದಿಸದಂತೆ ಫರ್ಮಾನು ಹೊರಡಿಸುತ್ತಿದ್ದ. ಈ ಕಾರಣದಿಂದಲೇ ಎಲ್ಲಾ ಉತ್ತಮ ಕುದುರೆಗಳು ಹೈದರನ ಪಾಲಾಗುತ್ತಿದ್ದವು. ಅವನು ಕೊಳ್ಳದೇ ಬಿಟ್ಟ ಕುದುರೆಗಳು ಕಳಪೆಯಾಗಿರುತ್ತಿದ್ದವು. ಅದಕ್ಕೇ ಬ್ರಿಟಿಷ್, ಫ್ರೆಂಚ್, ಪೋರ್ಚುಗೀಸ್, ಮರಾಠ, ಪರ್ಷಿಯನ್ ಮತ್ತು ಡಚ್ ದಾಖಲೆಗಳಲ್ಲಿ ಹೈದರಾಲಿಯ ಕುದುರೆ ದಳದ ಬಗ್ಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. Hyder Ali’s riders are well mounted ಎನ್ನುವ ಮಾತು ಅನೇಕ ಕಡೆ ಬರುತ್ತದೆ.

ಹೊರ ಊರುಗಳಿಂದ ಬಂದು ಹೈದರನಲ್ಲಿ ಕೆಲಸಕ್ಕಿದ್ದ ಸೇವಕರಿಗೆ ಮತ್ತೆ ಅವರ ಊರಿಗೆ ಹೋಗಲು ಹೈದರ್ ಅನುಮತಿ ಕೊಡುತ್ತಿರಲಿಲ್ಲ. ಹಾಗಾಗಿ ಊರಿಗೆ ಹೋಗುವ ತುಡಿತ ವಿಪರೀತವಾದಾಗ ಕೆಲವು ಸೇವಕರು ಫಕೀರರ ವೇಷ ಧರಿಸಿ ಈ ಕುದುರೆ ಮಾರಾಟಗಾರರ ಗುಂಪಿನಲ್ಲಿ ಗೋಪ್ಯವಾಗಿ ಸೇರಿಕೊಂಡು ಹೋಗಿಬಿಡುತ್ತಿದ್ದರು. ಆದರೆ ಸಿಕ್ಕಿಹಾಕಿಕೊಂಡರೆ ಮಾತ್ರ ಅವರಿಗೆ ಸಾವೇ ಗತಿ.

ಹೈದರ್ ಸ್ವಭಾವದಲ್ಲಿ ತದ್ವಿರುದ್ಧವಾಗಿದ್ದ. ಅಂದರೆ ಕೆಲವು ಸಂದರ್ಭಗಳಲ್ಲಿ ಧಾರಾಳವಾಗಿ ಉಡುಗೊರೆ ಭಕ್ಷೀಸು ನೀಡುತ್ತಿದ್ದ ಹೈದರ್ ಇನ್ನು ಕೆಲವು ಸಂದರ್ಭಗಳಲ್ಲಿ ಅತೀ ಜಿಪುಣತನ ತೋರುತ್ತಿದ್ದ.  1810 ರ ಸುಮಾರಿನಲ್ಲಿ ಪರ್ಷಿಯನ್ ಭಾಷೆಯಲ್ಲಿ ‘ಆಹ್ವಾಲಿ ಹೈದುರ್ ನಾಯಕ್’ ಎನ್ನುವ ಗ್ರಂಥವನ್ನು ರಚಿಸಿದ ಮಿರ್ಜಾ ಇಕ್ಬಾಲ್ ಎನ್ನುವ ವ್ಯಕ್ತಿ ದಾಖಲಿಸುತ್ತಾನೆ ‘ಕೆಲವು ಸಂದರ್ಭಗಳಲ್ಲಿ ಹೈದುರ್ ನಾಯಕ್ ಎಷ್ಟು ಜಿಪುಣತನ ತೋರಿಸುತ್ತಿದ್ದ ಎಂದರೆ ಅವನ ನೀಚತನ ಬರೆಯಲು ಈ ಲೇಖನಿಗೇ ನಾಚಿಕೆಯಾಗುತ್ತದೆ’! ಅವನಿಗೆ ತೀರಾ ಆಪ್ತರಾಗಿದ್ದ ಅನೇಕರು ಅವನ ಜೊತೆ ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿ ಸತ್ತರು. ಅವರ ಮಕ್ಕಳು ಮನೆಯವರಿಗೆ ಹೈದರ್ ಬಿಡಿಗಾಸೂ ಕೊಡಲಿಲ್ಲ ಎನ್ನುತ್ತಾನೆ! ಪ್ರತಿದಿನ ತನ್ನ ಮುಂದೆ ನೃತ್ಯ ಮಾಡುತ್ತಿದ್ದ ನಾಚ್ ವಾಲಿಗಳಿಗೆ ಅವರ ಸಂಬಳ ಮತ್ತು ಅತೀ ಅಪರೂಪದ ವಿಶೇಷ ಸಂದರ್ಭಗಳಲ್ಲಿ ಸಣ್ಣ ಒಡವೆ ಬಿಟ್ಟರೆ ಬೇರೆ ಏನೂ ಕೊಡುತ್ತಿರಲಿಲ್ಲ.  ದಸರೆಯಲ್ಲಿ ಸ್ವಲ್ಪ ಮಟ್ಟಿಗೆ ಕೈ ಬಿಚ್ಚಿ ಜಟ್ಟಿಗಳಿಗೆ ಮತ್ತು ತನ್ನ ಗೆಳೆಯರಿಗೆ ಉಡುಗೊರೆಗಳನ್ನು ನೀಡುತ್ತಿದ್ದ ಆದರೆ ‘ಅದು ಅಂತಹ ಹೇಳಿಕೊಳ್ಳುವಷ್ಟೇನೂ ಅಲ್ಲ’ ಎನ್ನುತ್ತಾನೆ. ಆದರೆ ಹಿಂದೂ ದೇವಸ್ಥಾನಗಳ ವಾರ್ಷಿಕ ದತ್ತಿಯಲ್ಲಿ ಒಂದು ಬಿಡಿಗಾಸನ್ನೂ ಕಡಿಮೆ ಮಾಡಲಿಲ್ಲವಂತೆ!  

ಯಾವ ವಸ್ತುವೂ ವ್ಯರ್ಥವಾಗಲು ಹೈದರ್ ಬಿಡುತ್ತಿರಲಿಲ್ಲ. ಮತ್ತು ಅಸಾಧಾರಣ ನೆನಪಿನ ಶಕ್ತಿ ಇದ್ದುದರಿಂದ ಅವನನ್ನು ಮೋಸಮಾಡಲು ಯಾರಿಗೂ ಸಾಧ್ಯವಿರುತ್ತಿರಲಿಲ್ಲ. ಸಣ್ಣ ಸಂಗತಿಗಳನ್ನೂ ಸಹ ವರ್ಷಾನುಗಟ್ಟಲೆ ನೆನಪಿಟ್ಟುಕೊಂಡಿರುತ್ತಿದ್ದ. ಮಿರ್ಜಾ ಒಂದು ಉದಾಹರಣೆ ಕೊಡುತ್ತಾನೆ ‘ಯಾರನ್ನಾದರೂ ಉತ್ತಮ ದಿರುಸಿನಲ್ಲಿ ನೋಡಿದ್ದರೆ ಇಪ್ಪತ್ತು ವರ್ಷದ ಮೇಲೆ ಆ ವ್ಯಕ್ತಿ ಚಿಂದಿ ಉಟ್ಟು ಕೊಂಡು ಭಿಕ್ಷುಕನಂತೆ ಎದುರಿಗೆ ಬಂದರೂ ಅವನನ್ನು ತಕ್ಷಣ ಗುರುತಿಸುತ್ತಿದ್ದ!

ಒಂದು ಸಲ ಹೀಗಾಯಿತು, ಹೈದರ್ ತನ್ನ ಲಾಯದ ದರೋಗಾನಿಗೆ ಲಾಯದಲ್ಲಿ ಬಹಳ ಹಿಂದೆ ಇತ್ತು ಮರೆತಿದ್ದ ಒಂದು ಕುದುರೆ ಜೀನನ್ನು ತರಲು ಹೇಳಿದ. ಅದನ್ನು ತಂದಾಗ ಹೈದರ್ ಅದನ್ನು ಪರೀಕ್ಷಿಸಿ ‘ಇದಲ್ಲ, ಇನ್ನೊಂದು ಎಲ್ಲೋ ಕಾಣೆಯಾಗಿದೆ, ಮರಾಠರ ಶೈಲಿಯ ಜೀನು, ಅದನ್ನು ಹಳೆಯ ಸವೆದುಹೋದ ಹಳದಿ ಬಣ್ಣದ ಜರತಾರಿ ಬಟ್ಟೆಯಲ್ಲಿ ಕಟ್ಟಿತ್ತು, ಅದನ್ನು ಒಂದು ಬಟ್ಟೆಯಲ್ಲಿ ಸುತ್ತಿಡಿ ಅಂತ ನಾನು ಹೇಳಿದ್ದೆ’ ಎಂದ. ಹುಡುಕಿದಾಗ ಅದೇ ಜೀನು ಸಿಕ್ಕಿತು. ಆ ಘಟನೆ ನಡೆದದ್ದು ಹನ್ನೊಂದು ವರ್ಷಗಳ ಹಿಂದೆ!’

ಪ್ರತಿದಿನ ಹರಿಕಾರರು ಬಂದು ವರದಿ ಒಪ್ಪಿಸುತ್ತಿದ್ದಾಗ ಹಳೆಯ ಸುದ್ದಿಯನ್ನೇ ಮರಳಿ ಅವರು ವರದಿ ಮಾಡಿದರೆ ಅಥವಾ ಆ ಬಗ್ಗೆ ಏನೂ ಕ್ರಮ ಗೈಗೊಳ್ಳುವ ಅಗತ್ಯ ಇಲ್ಲದಿದ್ದರೆ ಹೈದರ್ ಮೌನವಾಗಿ ಕೇಳಿಸಿಕೊಳ್ಳುತ್ತಿದ್ದ. ಅವರು ಹೇಳಿದ ಸುದ್ದಿ ಮುಖ್ಯವಾಗಿದ್ದು ಅದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾಗಿದ್ದರೆ ತಕ್ಷಣ ಹೈದರ್ ಮುಂದಿನ ಮಾತು ನಿಲ್ಲಿಸಿ ಮತ್ತೆ ಆ ವಿಷಯವನ್ನು ಪುನರುಚ್ಚಿಸಲು ಹೇಳಿ ಅದರ ಬಗ್ಗೆಯೇ ಗಂಭೀರ ತನಿಖೆ ಪ್ರಾರಂಭಿಸುತ್ತಿದ್ದ. ಹಾಗಾಗಿ ಹರಿಕಾರರು ಬಹಳ ಎಚ್ಚರಿಕೆಯಿಂದ  ಇರುತ್ತಿದ್ದರು.

ಹೈದರ್ ಯಾವುದಾದರೂ ಜಿಲ್ಲೆ /ಪ್ರಾಂತ್ಯಕ್ಕೆ ಯಾರನ್ನಾದರೂ ಕಂದಾಯ ವಸೂಲಿಗೆ ನೇಮಿಸಿದ ಎಂದರೆ ನಿಗದಿತ ಮೊಬಲಗಿಗಿಂತ ಒಂದೇ ಒಂದು ಬಿಡಿಗಾಸನ್ನೂ ಹೆಚ್ಚಿಗೆ ತೆಗೆದುಕೊಳ್ಳುವಂತಿರಲಿಲ್ಲ. ಅಕಸ್ಮಾತ್ ಹೆಚ್ಚಿಗೆ ವಸೂಲಿ ಮಾಡಿದ ಸಂಗತಿ ಗೊತ್ತಾದರೆ ತಕ್ಷಣ ಅದನ್ನು ಸರ್ಕಾರಕ್ಕೆ ಒಪ್ಪಿಸಿಬಿಡಬೇಕಾಗಿತ್ತು. ಇಲ್ಲದಿದ್ದರೆ ಅವನ್ನು ಹಿಡಿದು ಕುದುರೆಯಂತೆ ಹಿಂದೆ ಮತ್ತು ಮುಂದೆ ಹಗ್ಗದಿಂದ ಕಟ್ಟಿ ಬಟ್ಟೆ ಬಿಚ್ಚಿ ಚಾಟಿ ಏಟು ಕೊಡಲಾಗುತ್ತಿತ್ತು. (ಇದನ್ನೇ ಹೈದರನ ಶಿಕ್ಷೆ ಅಂತ ಬ್ರಿಟಿಷ್ ಚಿತ್ರಕಾರನೊಬ್ಬ ಚಿತ್ರ ಬಿಡಿಸಿದ್ದಾನೆ) ನಂತರ ಗಾಯದ ಮೇಲೆ ಉಪ್ಪು ಸುರಿಯಲಾಗುತ್ತಿತ್ತು. ಅವನು ಗೋಳಾಡಿದರೆ ಬಾಯಿಯ ಮೇಲೆ ಚಪ್ಪಲಿಯಿಂದ ಹೊಡೆಯಲಾಗುತ್ತಿತ್ತು. ಅತ್ತರೆ ಕಣ್ಣುಗಳಿಗೆ ಕೆಂಪು ಮೆಣಸಿನ ಪುಡಿ ಸುರಿಯಲಾಗುತ್ತಿತ್ತು. 

ಕಬ್ಬಿಣದ ಕೋಲು ಕಾಯಿಸಿ ಬರೆ ಹಾಕಲಾಗುತ್ತಿತ್ತು. ದುಡ್ಡು ಕೊಡುವವರೆಗೂ (ಒಪ್ಪುವವರೆಗೂ) ಹೀಗೇ ಚಿತ್ರಹಿಂಸೆ ಕೊಡಲಾಗುತ್ತಿತ್ತು. ವ್ಯಕ್ತಿ ಹಣ ಕೊಡಲು ಒಪ್ಪಿದ ತಕ್ಷಣ ಆತನನ್ನು ಬಿಟ್ಟು, ಹಣ ಒಪ್ಪಿಸಿದ ಮೇಲೆ ಹೈದರನ ಹತ್ತಿರಕ್ಕೆ ಕರೆದುಕೊಂಡು ಹೋಗಲಾಗುತ್ತಿತ್ತು. ಆಗ ಹೈದರ್ ಮೃದುವಾಗಿ ಆತನ ಯೋಗಕ್ಷೇಮ ವಿಚಾರಿಸಿ ಶಾಲು ಮತ್ತು ಚಿನ್ನದ ಸರ ಉಡುಗೊರೆ ಕೊಟ್ಟು ಮತ್ತೆ ಅವನ ಕೆಲಸವನ್ನು ಅವನಿಗೇ ಕೊಡುತ್ತಿದ್ದ!  ಹೀಗೆ ಸತ್ತು ಬದುಕಿದ ವ್ಯಕ್ತಿ ತನಗೆ ಕೆಲಸ ಬೇಡಾ ಬಿಟ್ಟುಬಿಡಿ ಎಂದೇನಾದರೂ ಹೇಳಿದನೋ ಮುಗಿಯಿತು ಅವನ ಕಥೆ! ಮುಸಲ್ಮಾನರಿಗೆ ಹೀಗೆ ಶಿಕ್ಷೆ ಕೊಡುತ್ತಿದ್ದ ಹೈದರ್ ಹಿಂದೂ ಅಧಿಕಾರಿಗೆ ಇನ್ನಷ್ಟು ಚಿತ್ರಹಿಂಸೆ ಕೊಡುತ್ತಿದ್ದ! ಇದೆಲ್ಲಕ್ಕೂ ಮಿರ್ಜಾ ಸಾಕ್ಷಿಯಾಗಿದ್ದ! 

ಲೌನ್ಡಿಕೆ / ಲೌಡಿಕೆ (ಲೌಡಿ ಮಗ) ಎನ್ನುವ ಕೆಟ್ಟ ಮಾತು ಸಾಮಾನ್ಯವಾಗಿ ದಖನಿ ಮುಸಲ್ಮಾನರಲ್ಲಿ ಬಳಕೆಯಲ್ಲಿರುವ ಪದ. ಇದನ್ನು ಹೈದರ್ ಸದಾ ಬಳಸುತ್ತಿದ್ದ. ಕೋಪದಲ್ಲಿದ್ದಾಗ ಬೈಗುಳದಂತೆ ಬಳಸಿದರೆ ಸ್ನೇಹಪರವಾಗಿದ್ದಾಗ ಅಥವಾ ಗೇಲಿ ಮಾಡುವಾಗ ಇದನ್ನು ಮುದ್ದಿನಿಂದ ಬಳಸುತ್ತಿದ್ದ. 

ಒಂದು ದಿನ ಅವನ ಗೆಳೆಯ – ಅಧಿಕಾರಿ ಅಲಿ ಝುಮನ್ ಖಾನ್ ನೆರವಾಗಲ್ಲದೇ, ಸೂಚಕವಾಗಿ ಆ ಪದ ಸುಸಂಸ್ಕೃತರು, ಉನ್ನತ ಪದವಿಯಲ್ಲಿರುವವರು ಬಳಸಬಾರದು ಎಂದು ಹೇಳಿದ. ಅದಕ್ಕೆ ಹೈದರ್ ಮುಗುಳ್ನಕ್ಕು ‘ಗೆಳೆಯಾ, ನೀನು ಮತ್ತು ನಾನು ಅಂತಹ ಸಾಮಾನ್ಯ ಹೆಂಗಸರ ಮಕ್ಕಳೇ, ಇಬ್ಬರು ಹುಸೈನಿಗಳ ಮೇಲೆ ಮಾತ್ರ ಬೀಬೀಗಳ (ಸುಸಂಸ್ಕೃತ ಮಹಿಳೆಯರ /ಫಾತಿಮಾ ) ಹಾರೈಕೆಗಳು ಮತ್ತು ಸ್ವರ್ಗ ಕರುಣೆಯಾಗುತ್ತದೆ’ ಎಂದ.  ಈ ಉತ್ತರದಿಂದ ಸುತ್ತಲಿದ್ದವರಿಗೆ ಬಹಳ ಸಂತೋಷವಾಯಿತು ಎಂದು ಕಿರ್ಮಾನಿ ಬರೆದಿದ್ದಾನೆ. 

ನವರಾತ್ರಿಯಲ್ಲಿ ಮೈಸೂರು ಒಡೆಯರ ಪದ್ಧತಿಗೆ ಅನುಸಾರವಾಗಿ ಹೈದರ್ ಸಾಂಸ್ಕೃತಿಕ ಆಚರಣೆಗಳನ್ನು ಏರ್ಪಡಿಸಿ ತಾನೂ ಅದರಲ್ಲಿ ಭಾಗಿಯಾಗುತ್ತಿದ್ದ.  ಮೈಸೂರು ಒಡೆಯರನ್ನು ನಿಜವಾಗಿ ಅರಮನೆಯಲ್ಲೇ ಇರುವಂತೆ ನಿರ್ಬಂಧಿಸಿ ಮತ್ತು ನವರಾತ್ರಿಯ ದರ್ಬಾರಿನಲ್ಲಿ ಮಾತ್ರ ಜನರಿಗೆ ಅರಸರನ್ನು ತೋರಿಸುವ ಪದ್ಧತಿಯನ್ನು ನಂಜರಾಜನೇ ಜಾರಿಗೆ ತಂದಿದ್ದ. ಅದನ್ನು ಹೈದರನೂ ಮುಂದುವರಿಸಿದ್ದ. ಜಟ್ಟಿ ಕಾಳಗದಲ್ಲಿ ದೊಡ್ಡದೊಂದು ಪಂಜರದಲ್ಲಿ ಹುಲಿಯನ್ನು ಇರಿಸಿ  ಜಟ್ಟಿಯನ್ನು ಒಳಗೆ ಬಿಡುತ್ತಿದ್ದ. ನಡುವೆ ಒಂದು ಬಾಳೆ ಗಿಡ ನೆಟ್ಟಿರುತ್ತಿತ್ತು. ಹುಲಿಯಿಂದ ತಪ್ಪಿಸಿಕೊಳ್ಳಲು ಜಟ್ಟಿಗೆ ಬಾಳೆಗಿಡ ಮಾತ್ರ ಅಡ್ಡಿ ಇತ್ತು. 

ಹೈದರನ ಅತ್ಯಂತ ಶೂರರು ತಾವಾಗಿ ಈ ಪಂದ್ಯದಲ್ಲಿ ಭಾಗವಹಿಸಲು ಬೇಡಿಕೊಳ್ಳುತ್ತಿದ್ದರು.  ಜಟ್ಟಿ ಹುಲಿಯನ್ನು ಕೊಂದರೆ ಅವನಿಗೆ ಚಿನ್ನ, ವಸ್ತ್ರ, ಸಂಬಳ ಭಡ್ತಿ ಕೊಟ್ಟು ಎಲ್ಲ ನಿರ್ಬಂಧಗಳಿಂದ ಮುಕ್ತಗೊಳಿಸಲಾಗುತ್ತಿತ್ತು. ಆದರೆ ಹುಲಿಯೇ ಮೇಲುಗೈ ಆಗಿ ಜಟ್ಟಿಯನ್ನು ನೆಲಕ್ಕುರುಳಿಸಿ ಇನ್ನೇನು ಅವನ ಕುತ್ತಿಗೆಗೆ ಬಾಯಿ ಹಾಕಬೇಕು ಆಗ ಅಪ್ರತಿಮ ಗುರಿಕಾರನಾಗಿದ್ದ ಹೈದರ್ ಎದ್ದು ನಿಂತು ತನ್ನ ಬಂದೂಕಿನಿಂದ ಗುರಿ ಇಟ್ಟು ಒಂದೇ ಗುಂಡಿನಿಂದ ಹುಲಿಯ ಹಣೆಯ ನಟ್ಟ ನಡುವೆ ಹೊಡೆದು ಕೆಡವುತ್ತಿದ್ದ.

ಈ ಪ್ರಸಂಗವನ್ನು ಕಿರ್ಮಾನಿ ತನ್ನ ನೆಚ್ಚಿನ ನಾಯಕನ ಶೌರ್ಯದ ವರ್ಣನೆಗಾಗಿ ವರದಿ ಮಾಡಿದರೆ ಮಿರ್ಜಾ ‘ಹೈದರ್ ಎಂತಹ ಅದ್ಭುತ ಗುರಿಕಾರ ಎಂದರೆ ಅವನು ಯಾವತ್ತೂ ಜಟ್ಟಿ ಹುಲಿಯನ್ನು ಸಾಯಿಸಲು ಬಿಡುತ್ತಲೇ ಇರಲಿಲ್ಲ. ಹಾಗಾಗಿ ಜಟ್ಟಿಗೆ ಚಿನ್ನದ ಸರ ಕೊಡುವ ಪ್ರಮೇಯವೇ ಬರುತ್ತಿರಲಿಲ್ಲ. ಅಕಸ್ಮಾತ್ ಹುಲಿ ಜಟ್ಟಿಯನ್ನು ಸಾಯಿಸಿದರೆ ಹೈದರ್ ಚಪ್ಪಾಳೆ ತಟ್ಟಿ ಎದ್ದುಬಿಡುತ್ತಿದ್ದ’ ಎಂದಿದ್ದಾನೆ! ಮಿರ್ಜಾ ಕೊನೆಯದಾಗಿ ಒಂದು ಮಾತು ಹೇಳುತ್ತಾನೆ.

‘ಹೈದರ್ ತೀರಿಕೊಂಡ ಆರು ವಾರಗಳವರೆಗೆ ಯಾರಿಗೂ ಸುದ್ದಿ ತಿಳಿಯಲಿಲ್ಲ. ಟಿಪ್ಪು ಸುಲ್ತಾನ್ ಬರುವವರೆಗೂ ಸುದ್ದಿ ಗೋಪ್ಯವಾಗಿತ್ತು. ಹೈದರ್ ಗೆ ಹುಷಾರಿಲ್ಲ, ವೈದ್ಯರು ಔಷಧಿ ನೀಡುತ್ತಿದ್ದಾರೆ ಎಂದು ಮಾತ್ರ  ತಿಳಿದಿತ್ತು. ಹಾಗಾಗಿ ಯಾವುದೇ ಇಲಾಖೆಯ ಕೆಲಸವೂ ಯಾವುದೇ ರೀತಿಯಲ್ಲಿ ವ್ಯತ್ಯಾಸವಾಗದಂತೆ ನಡೆದುಕೊಂಡು ಹೋಗುತ್ತಿತ್ತು.’ ಅಷ್ಟರಮಟ್ಟಿಗೆ ಹೈದರನ ಭಯ ಕೆಲಸ ಮಾಡುತ್ತಿತ್ತು!

‍ಲೇಖಕರು Admin

29 June, 2021

2 Comments

  1. ವಾಸುದೇವ ಶರ್ಮಾ

    ನಮಗೆ ತಿಳಿಯದ ಹೈದರ್ ನ ಹೊಸ ರೂಪದ ಅನಾವರಣ. ಆಸಕ್ತಿದಾಯಕವಾಗಿದೆ.

  2. Dr.Pushpavati Shalavadimath

    ಹೈದರಲಿಯ ತೀಕ್ಷಣಮತಿ, ನಿಷ್ಠುರ ಅಧಿಕಾರದ ಜೊತೆಗೆ,ಪ್ರಭುತ್ವದ ವಿಚಿತ್ರ ಮನಸ್ಥಿತಿಗಳ ವಿಚಾರ ಅಚ್ಚರಿ ಮೂಡಿಸಿತು,ಹೈದರಾಲಿ ಹೊಸದಾಗಿ ಅರ್ಥವಾದ,ಧನ್ಯವಾದಗಳು ಮೇಡಮ್.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading