
ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ.
ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ ದಶಕಗಳ ಕಾಲದ ಉಸಿರಾಟದ ಗುರುತು. ‘ಇನ್ನು ಹತ್ತು ವರ್ಷದ ನಂತರ ಮತ್ತಿನ್ನೊಂದು ಸಮಗ್ರ ಸಂಗ್ರಹದೊಂದಿಗೆ ಬರುತ್ತೇನೆ’ ಎಂದು ಖಚಿತವಾಗಿ ಹೇಳುವ ಉತ್ಸಾಹಿ. ‘ನಾವು ಹುಡುಗಿಯರೇ ಹೀಗೆ’ಯಿಂದ ಆರಂಭಿಸಿ ‘ಕೌಬಾಯ್ಸ್ ಮತ್ತು ಕಾಮಪುರಾಣ’ವರೆಗೆ ಕನ್ನಡ ಸಾಹಿತ್ಯವನ್ನು ಆವರಿಸಿ ನಿಂತಿರುವ ಪ್ರತಿಭಾ ಪರಿ ಮಾದರಿ.
ಸಂಶೋಧನೆ ಇವರ ಇನ್ನೊಂದು ಮೋಹ. ಸಂಶೋಧನೆಯನ್ನು ಕೈಗೆತ್ತಿಕೊಂಡರೆ ಅದರ ಆಳಕ್ಕೆ ಡೈವ್ ಹೊಡೆಯುವ ಉತ್ಸಾಹ.
ಅಂತಹ ಒಂದು ಅಧ್ಯಯನವನ್ನು ‘ಅವಧಿ’ ನಿಮ್ಮ ಮುಂದಿಡುತ್ತಿದೆ. ಈ ಅಧ್ಯಯನ ಬರಹಗಳ ಈ ಅಂಕಣದಲ್ಲಿ ಬರುವ ಎಲ್ಲಾ ಅಭಿಪ್ರಾಯಕ್ಕೂ ಲೇಖಕರೇ ಜವಾಬುದಾರರು ಎಂದು ಕಾಣಿಸುತ್ತಾ ಈ ಅಂಕಣದ ಎಲ್ಲಾ ಬರಹಕ್ಕೂ ನಿಮ್ಮ ಪ್ರತಿಕ್ರಿಯೆಯನ್ನು ಸ್ವಾಗತಿಸುತ್ತೇವೆ.

ಐರಿಷ್ ಸಿಪಾಯಿ ಟರ್ನರ್ ಕಥೆಯ ಅಂತ್ಯ ಕುರಿತು ವಿಜಯಮ್ಮ ಒಂದು ಪ್ರಶ್ನೆ ಕೇಳಿದ್ದಾರೆ. ತನ್ನನ್ನು ನೇಣು ಹಾಕದೇ ಗುಂಡಿಕ್ಕಿ ಕೊಲ್ಲಬೇಕೆನ್ನುವ ಅವನ ಕೋರಿಕೆಯನ್ನು ಹೈದರ್ ಒಪ್ಪಿಕೊಂಡ ಮೇಲೆ ಮತ್ತೆ ಯಾಕೆ ಅವನ ಹೆಣ ಹೆದ್ದಾರಿಯ ಮರದಲ್ಲಿ ನೇತಾಡಿತು ಅಂತ.
ದಾಖಲೆಯಲ್ಲಿ ಇರುವುದು ‘After his death he was suspended on a tree near the road-side comformably to the latter part of his sentence.’ ಅಂದರೆ ಅವನು ಸತ್ತ ಮೇಲೆ ಶಿಕ್ಷೆಯ ಉಳಿದ ಭಾಗವಾಗಿ (latter part of his sentence ) ಅವನ ದೇಹವನ್ನು ಮರದಲ್ಲಿ ತೂಗು ಹಾಕಲಾಯಿತು. ಜನರಲ್ಲಿ ಭಯ ಮತ್ತು ಜಿಗುಪ್ಸೆ ಹುಟ್ಟಿಸುವಂತೆ ಮಾಡಲು ವೈರಿಯ ಹೆಣವನ್ನು ಸಾರ್ವಜನಿಕವಾಗಿ ನೇತು ಹಾಕುವುದು ಆ ಕಾಲದಲ್ಲಿ ಎಲ್ಲಾ ಸಮಾಜಗಳಲ್ಲೂ (ಬ್ರಿಟಿಷರೂ ಸೇರಿದಂತೆ) ಅನುಸರಿಸುತ್ತಿದ್ದ ಪದ್ಧತಿ.
ಸಾರ್ವಜನಿಕ ಗಲ್ಲು ಶಿಕ್ಷೆಯನ್ನು ನೋಡಲು ಜನರು ಗುಂಪುಗುಂಪಾಗಿ ಬಂದು ಸೇರುತ್ತಿದ್ದರು. ಇವತ್ತಿನ ತಾಲಿಬಾನ್ ಶಿಕ್ಷೆಯ ರೀತಿ ಹೊಸತೇನೂ ಅಲ್ಲ. ಬ್ರಿಟಿಷರು ಅದಕ್ಕೆ ಖಂಡಿತಾ ಹೊರತಾಗಿರಲಿಲ್ಲ. ಅದಕ್ಕೆ ಹೈದರ್ ಕೂಡಾ ಹೊರತಲ್ಲ. ಶತ್ರುವಾಗಿ ಪರಿಣಮಿಸಿದ ತನ್ನ ಜೀವದ ಗೆಳೆಯ ಖಂಡೆ ರಾವ್ ನನ್ನು ಪಂಜರದಲ್ಲಿ ಬಂಧಿಸಿ ಮಾರುಕಟ್ಟೆಯ ನಾಲ್ಕು ರಸ್ತೆಗಳು ಸೇರುವ ಕಡೆ ಅದನ್ನಿರಿಸಿ, ರಸ್ತೆಯಲ್ಲಿ ಹೋಗಿಬರುವವರೆಲ್ಲ ಅವನನ್ನು ಬೈದು ಉಗಿಯಬೇಕೆಂದು ಅಪ್ಪಣೆ ಮಾಡಿದ್ದ ಹೈದರ್. ಆತ ಸತ್ತ ಮೇಲೂ ಒಂದು ವರ್ಷದವರೆಗೆ ಅವನ ಅಸ್ತಿಪಂಜರ ಅದರಲ್ಲೇ ನೇತಾಡುತ್ತಿತ್ತು. ಇರಲಿ.

ಹೈದರ್ ಮತ್ತು ಖಂಡೆ ರಾವ್ ಬಗ್ಗೆ ಮತ್ತೆ ಬರೆಯುತ್ತೇನೆ. ಅಪರಾಧಿಗಳಿಗೆ ಹೈದರ್ ವಿಧಿಸುತ್ತಿದ್ದ ಶಿಕ್ಷೆ ಅಂದಿನ ಕಾಲದಲ್ಲಿ ಎಲ್ಲಾ ರಾಜರೂ ಪಾಲಿಸುತ್ತಿದ್ದುದೇ ಆಗಿತ್ತು. ನಾವು ಯಾರನ್ನು ಸತ್ಯ ಹರಿಶ್ಚಂದ್ರನಂತೆ ರಾಜ್ಯವಾಳುತ್ತಿದ್ದ ಎಂದು ಹೇಳುತ್ತೇವೆಯೋ ಆತನೂ ಸಹ ಅಪರಾಧಿಗಳಿಗೆ ವಿಧಿಸುತ್ತಿದ್ದ ಶಿಕ್ಷೆ ಸಾಧಾರಣವೇನೂ ಆಗಿರುತ್ತಿರಲಿಲ್ಲ.
1763ರಲ್ಲಿ ನಗರ ಅಥವಾ ಬೇಡನೂರಿನಲ್ಲಿ ಹೈದರ್ ಮಳೆಗಾಲವನ್ನು ಕಳೆಯುತ್ತಿದ್ದಾಗ ದಳವಾಯಿ ಮತ್ತು ಇತರರು ಸೇರಿ ಪಿತೂರಿ ನಡೆಸುತ್ತಿದ್ದ ಸಂಗತಿ ತಿಳಿದು ಅವರೆಲ್ಲರನ್ನೂ ಬಂಧಿಸಿ ವಿಚಾರಣೆ ನಡೆಸಿದ. ಅಪರಾಧ ಸಾಬೀತಾಗಿ ಮುನ್ನೂರು ಜನರನ್ನು ನಗರದ ಹೆದ್ದಾರಿಯ ಬದಿಯ ಮರಕ್ಕೆ ನೇಣು ಹಾಕಿಸಿದ.
1775ರಲ್ಲಿ ನವಾಬ್ ನಿಜಾಮ್ ಅಲಿ ಖಾನ್ ಹೈದರನ ಮೇಲೆ ಧಾಳಿ ಮಾಡಲು ಒಂದು ಪಡೆ ಕಳಿಸಿದ್ದ. ಅದು ನಿಜಾಮ್ ಧೋಮಸಾ ನೇತೃತ್ವದಲ್ಲಿ ಹರಿಹರದಲ್ಲಿ ಬೀಡು ಬಿಟ್ಟಿತು. ಹಿಂದೆ ಕಡಪಾ ಮತ್ತು ಸಿದ್ಧವಟ್ಟದ ರಾಜ ಹಲೀಮ್ ಖಾನ್ ಮೇಲೆ ಹೈದರಾಲಿ ದಂಡೆತ್ತಿ ಹೋಗಿದ್ದಾಗ ಆತ ತನ್ನ ಮಂತ್ರಿ ಉತ್ತಮ ಚಂದು ಲಾಲನನ್ನು ಕಳಿಸಿ ಕಪ್ಪಾ ಕೊಟ್ಟು ಧಾಳಿ ತಪ್ಪಿಸಿಕೊಂಡಿದ್ದ. ಆದರೆ ನಂತರ ಚಾಡಿಕೋರರ ಮಾತು ಕೇಳಿ ಅದೇ ಚಂದುಲಾಲನನ್ನು ಆನೆಯ ಕಾಲಿನಿಂದ ತುಳಿಸಿ ಸಾಯಿಸಿದ್ದ.
ಧೋಮಸಾನ ಪಡೆ ಹರಿಹರಕ್ಕೆ ಬಂದ ಸುದ್ದಿ ತಿಳಿದು ಹಲೀಮ್ ಖಾನ್ ಬಂದು ಅವನನ್ನು ಭೇಟಿಯಾಗಿ ಇಬ್ಬರೂ ಸೇರಿ ಹೈದರನನ್ನು ಕೊಲ್ಲೋಣಾ ಎಂದು ತಂತ್ರ ಹೂಡಿದ. ಇಬ್ಬರೂ ಪ್ರತ್ಯೇಕ ದಾರಿ ಹಿಡಿದು ಸಾಗುವ ಯೋಜನೆ ಮಾಡಿದರು. ಹಲೀಮ್ ಖಾನ್ ಸಿದ್ಧವಟ್ಟಮ್ ತಲುಪಿ ಹೈದರ್ ಎಲ್ಲಿ ಬೀಡು ಬಿಟ್ಟಿದ್ದಾನೆಂದು ತಿಳಿದು ಬರಲು ಬೇಹುಗಾರರನ್ನು ಕಳಿಸಿದ.
ಹೈದರನ ಅದ್ಭುತ ಬೇಹುಗಾರರಿಂದ ಈ ಸುದ್ದಿ ಹೈದರನ ಕಿವಿ ತಲುಪಿತು. ಇಲ್ಲಿಂದ ಮುಂದೆ ಹೈದರ್ ಮಾಡಿದ ಯುದ್ಧ ತಂತ್ರ ಎಷ್ಟು ರೋಮಾಂಚಕಾರಿಯಾಗಿದೆ ಅಂದರೆ ಅದನ್ನೊಂದು ಅದ್ಭುತ ಥ್ರಿಲ್ಲರ್ ಚಿತ್ರ ಮಾಡಬಹುದು.

ಬೇಹುಗಾರರು ಬಂದು ಹಲೀಮ್ ಖಾನ್ ಗೆ ಹೈದರ್ ಸತ್ತಿದ್ದಾನೆಂದು ಸುದ್ದಿ ಹೇಳಿದರು. ಅದರಿಂದ ವಿಪರೀತ ಸಂತೋಷಪಟ್ಟ ಖಾನ್ ಸುದ್ದಿ ತಂದವನಿಗೆ ಉಡುಗೊರೆಗಳನ್ನು ಕೊಟ್ಟ. ವೈರಿ ಸತ್ತನೆಂದು ನಿರಾಳನಾದ. ಅದೇ ಸಮಯದಲ್ಲಿ ಅತ್ತ ಹೈದರ್ ತನ್ನ ಬಾಮೈದ ಮೀರ್ ಸಾಹೇಬನನ್ನು ಕಡಪಾಗೆ ಕಳಿಸಿದ. ಅವನು ಕುಮ್ಮಡಿ ಕೋಟೆಯನ್ನು ವಶಪಡಿಸಿಕೊಂಡ. ಇನ್ನೊಂದು ಕಡೆ ಹೈದರ್ ಸೈನ್ಯ ಸಮೇತ ಬಂದು ದಾರಿಯ ಊರುಗಳನ್ನೆಲ್ಲ ತನ್ನ ವಶಕ್ಕೆ ತೆಗೆದುಕೊಳ್ಳುತ್ತಾ ಕೊನೆಗೆ ಕಡಪಾ ಸಿದ್ಧವಟ್ಟಂ ಅನ್ನೂ ತೆಗೆದುಕೊಂಡು ಕೊನೆಯಲ್ಲಿ ಹಲೀಮ್ ಖಾನ್ ನನ್ನು ಆತನ ಹೆಂಡತಿ ಮಕ್ಕಳ ಸಹಿತ ಬಂಧಿಸಿ ಅವರನ್ನು ಶ್ರೀರಂಗಪಟ್ಟಣಕ್ಕೆ ಕಳಿಸಿದ. ಕಡಪಾ ಸಿದ್ಧವಟ್ಟಂನ ಸಕಲ ಸಂಪತ್ತನ್ನು ಶ್ರೀರಂಗಪಟ್ಟಣಕ್ಕೆ ಸಾಗಿಸಲಾಯಿತು.
ಹಲೀಮ್ ಖಾನ್ ಸಿದ್ಧವಟ್ಟಂನ ದೇವಸ್ಥಾನಗಳನ್ನು ಹಾಳುಗೆಡವಿದ್ದ. ಹೈದರ್ ಮಾಲಿನೇನಿ ಪಟ್ನಂ ಜೋಗಣ್ಣ ಎನ್ನುವ ಬ್ರಾಹ್ಮಣನೊಬ್ಬನ ವಶಕ್ಕೆ ಅಲ್ಲಿಯ ದೇವಸ್ಥಾನಗಳನ್ನು ಕೊಟ್ಟು ಜೀರ್ಣೋದ್ಧಾರ ಮಾಡಲು ಹೇಳಿದ. ಹೈದರನ ನಂತರ ಟೀಪು ಕಾಲದಲ್ಲಿ 1795 ರಲ್ಲಿ ಈ ಜೋಗಣ್ಣ ಹಣಕಾಸು ವಿಷಯದಲ್ಲಿ ತಕರಾರು ಮಾಡಿಕೊಂಡು ವಿಪರೀತ ಸಾಲ ಮಾಡಿದ್ದ. ಅವನ ಮೇಲೆ ಟೀಪುಗೆ ದೂರು ಹೋಯಿತು. ಟೀಪು ಅವನನ್ನು ಶ್ರೀರಂಗಪಟ್ಟಣಕ್ಕೆ ಕರೆಸಿಕೊಂಡು, ಕೊಂದು, ಚಾಪೆಯಲ್ಲಿ ಸುತ್ತಿ ಟಿಪ್ಪು ಡ್ರಾಪ್ ನಲ್ಲಿ ಎಸೆಸಿದ. ಇವತ್ತಿಗೂ ಕಡಪಾದ ಮಾಲಿನೇನಿ ಊರಿನಲ್ಲಿ ಜೋಗಣ್ಣ ಪೇಟ್ ಎನ್ನುವ ಸ್ಥಳವಿದೆ.
ಟರ್ನರ್ ಪ್ರಸಂಗದ ಬಗ್ಗೆ ಬರೆದವನು ಹೈದರನ ಫ್ರೆಂಚ್ ಅಧಿಕಾರಿ ದೆ ಲ ತೂರ್. ಈ ಪುಸ್ತಕದ ಮುನ್ನುಡಿಯಲ್ಲಿ ಒಂದು ಮಾತು ಸ್ಪಷ್ಟಪಡಿಸುತ್ತಾನೆ. ‘ಸಾಮಾನ್ಯವಾಗಿ ಜೀವಂತ ಇರುವ ರಾಜರ ಆತ್ಮಚರಿತ್ರೆಯನ್ನು ಬರೆಯುವ ವಾಡಿಕೆ ಇಲ್ಲದಿದ್ದರೂ, ಈ ಸಂದರ್ಭದಲ್ಲಿ ಇರುವ ದೂರ ಈ ಚರಿತ್ರೆಕಾರನಿಗೆ ಮುಕ್ತವಾಗಿ ಮಾತನಾಡುವ ಸ್ವಾತಂತ್ರ್ಯವನ್ನು ನೀಡಿದೆ ಮತ್ತು ಯಾವುದೇ ಪೂರ್ವಾಗ್ರಹಗಳಿಲ್ಲದೆ ಓದುವ ಓದುಗರ ಕಣ್ಣಲ್ಲಿ ಇಂತಹ ನ್ಯಾಯಯುತ ನಿಯಮವನ್ನು (ಅಂದರೆ ಬದುಕಿರುವಾಗಲೇ ಚರಿತ್ರೆ ಬರೆಯಬಾರದೆನ್ನುವ ನಿಯಮ) ಮುರಿಯಲು ನೆಪ ನೀಡಿದೆ. ಥಾಮಸ್ ಕೌಲಿ ಖಾನ್ ನಂತರ ಭಾರತ ಕಂಡ ಅತ್ಯುತ್ತಮ ಪ್ರಸಿದ್ಧ ರಾಜನ ಚರಿತ್ರೆಯನ್ನು ನಿರೂಪಿಸುವಲ್ಲಿ ಬರಹಗಾರನು ಅತ್ಯಂತ ಕಟ್ಟುನಿಟ್ಟಾಗಿ ನಿಷ್ಪಕ್ಷಪಾತತೆಯನ್ನು ಅನುಸರಿಸಿದ್ದಾನೆ. ಚಾಣಾಕ್ಷತನದಲ್ಲಿ ಹಾಗೂ ಋಜುತ್ವದಲ್ಲಿ ಕೌಲಿ ಖಾನ್ ಗಿಂತಲೂ ಉತ್ತಮನಾಗಿದ್ದು ಭಾರತದ ಇತರ ಯಾವುದೇ ರಾಜರುಗಳಿಗಿಂತ ಸಿಕ್ಕಾಪಟ್ಟೆ ಮುಂದಿದ್ದಾನೆ’ ಎಂದು ಹೇಳುತ್ತಾನೆ.
‘ದೂರ’ ಎಂದರೆ ಈ ಪುಸ್ತಕ ಬರೆಯುವಾಗ ಅವನು ತನ್ನ ದೇಶಕ್ಕೆ ಮರಳಿ ಹೋಗಿದ್ದ. ಹೈದರ್ ಬದುಕಿರುವಾಗಲೇ ಬರೆಯಲು ತೊಡಗಿ 1783ರಲ್ಲಿ ಪ್ಯಾರಿಸ್ಸಿನಲ್ಲಿ ಪ್ರಕಟಿಸಿದ. ಅದರ ಫೋಟೋ ಕೊಟ್ಟಿದೆ. ಆಗಿನ್ನೂ ಆಂಗ್ಲೋ-ಫ್ರೆಂಚ್ ಯುದ್ಧ ನಡೆಯುತ್ತಿತ್ತು. ಸಹಜವಾಗಿ ಬ್ರಿಟಿಷರ ಬಗ್ಗೆ ಅವನಿಗೆ ತಿರಸ್ಕಾರವಿತ್ತು. ತಾನು ದಾಖಲಿಸಿರುವುದರಲ್ಲಿ ಸುಳ್ಳಿದೆ ಎಂದು ಹೇಳಲು ಬ್ರಿಟಿಷರಿಗೆ ಯಾವ ಹಕ್ಕೂ ಇಲ್ಲ ಎಂದು ಹೇಳಿದ್ದಾನೆ. ನಾಲ್ಕು ಪುಟಗಳ ಗ್ರಂಥಕರ್ತನ ಮುನ್ನುಡಿಯಲ್ಲಿ ದೆ ಲ ತೂರ್ ತಾನು ಹೈದರ್ ಬಗ್ಗೆ ಆಗಲಿ ಬ್ರಿಟಿಷರ ಬಗ್ಗೆ ಆಗಲಿ ಪಕ್ಷಪಾತ ತಳೆದಿಲ್ಲ ಎಂದು ಕೂಡಾ ಸ್ಪಷ್ಟಪಡಿಸಿ, ಅದಕ್ಕೆ ಕಾರಣಗಳನ್ನು ವಿವರಿಸುತ್ತಾನೆ. ಹೈದರ್ ಬಗ್ಗೆ ಅವನಿಗಿದ್ದ ಗೌರವ ಮತ್ತು ಆದರಗಳನ್ನೂ, ಅಷ್ಟೇ ನೇರವಾಗಿ ಹೈದರನ ಕೆಟ್ಟ ಗುಣಗಳನ್ನೂ ತಾನು ಸತ್ಯನಿಷ್ಠವಾಗಿ ದಾಖಲಿಸಿದ್ದೇನೆ ಎಂದು ಸ್ಪಷ್ಟಪಡಿಸುತ್ತಾನೆ.

ಅವನು ಪ್ರಸ್ತಾಪಿಸಿದ ಥಾಮಸ್ ಕೌಲಿ ಖಾನ್ ಅಂದರೆ ಪರ್ಷಿಯಾದ ಅತ್ಯಂತ ಜನಪ್ರಿಯ ಚಕ್ರವರ್ತಿ ನಾದಿರ್ ಷಾ. ಅವನು ಹೈದರನನ್ನು ನಾದಿರ್ ಷಾ ಗೆ ಹೋಲಿಸುತ್ತಾನೆ ಎಂದರೆ ಅದಕ್ಕೆ ಕಾರಣವಿಲ್ಲದೇ ಇಲ್ಲ. ಅವನು ಎರಡು ಸಂಪುಟಗಳಲ್ಲಿ ಬರೆದ ಮೊದಲ ಆವೃತ್ತಿಯ ಶೀರ್ಷಿಕೆ The history of Ayder Ali Khan, Nabob-Bahader: or, New memoirs concerning the East Indies: With historical notes. (1783) ಅಷ್ಟೇ ಅಲ್ಲ, ಫ್ರೆಂಚಿನಲ್ಲಿ ಪ್ರಕಟವಾದ ಇನ್ನೂ ಎರಡು ಹೈದರನ ಚರಿತ್ರೆಯನ್ನು Essais sur La Vie ಮತ್ತು Abreges de l ‘Histoire d’Hyder Ali ಗಳನ್ನು ಅವರು ಹೈದರನನ್ನು ನೋಡದೆಯೇ ಕೆಲವು ಪತ್ರಿಕೆಯ ವರದಿಗಳನ್ನು ನೋಡಿ ಬರೆದ ತಪ್ಪು ಚರಿತ್ರೆ. ಅದರಿಂದ ಕನಲಿ ತಾನು ಕಂಡ ಹೈದರಾಲಿಯ ಬಗ್ಗೆ ಬರೆಯುತ್ತೇನೆ ಎಂದು ವಿವರಿಸಿಕೊಂಡಿದ್ದಾನೆ. ಅವನು ಸತ್ತ ಮೇಲೆ ಟಿಪ್ಪು ಸುಲ್ತಾನ್ ಮಗ ಗುಲಾಮ್ ಮೊಹಮ್ಮದ್ ಈ ಪುಸ್ತಕವನ್ನು ಪರಿಷ್ಕರಿಸಿ 1855 ರಲ್ಲಿ The History of Hyder Shah: Alias Hyder Ali Khan Bahadur and of his son Tippu Sultan ಎನ್ನುವ ಶೀರ್ಷಿಕೆ ಕೊಟ್ಟು ಪ್ರಕಟಿಸಿದ.
ಹೈದರ್ ಮತ್ತು ಟೀಪು ಕುಟುಂಬವನ್ನು ವೆಲ್ಲೂರು ದಂಗೆಯ ನಂತರ ಕಲ್ಕತ್ತೆಗೆ ಸಾಗಿಸಿದರು. ಅಲ್ಲಿಂದ ಗುಲಾಂ ಮೊಹಮ್ಮದ್ ಇಂಗ್ಲೆಂಡಿಗೆ ಹೋಗಿ ಅಲ್ಲೇ ಇದ್ದ. ಅವನು ಅಲ್ಲಿಯ ಶ್ರೀಮಂತರ ಜೊತೆ ಪಳಗಿದ್ದ ಮತ್ತು ಬ್ರಿಟಿಷ್ ರಾಣಿಯನ್ನು ಅನೇಕ ಸಲ ಭೇಟಿಯಾಗಿದ್ದ. ಹೈದರನ ಚರಿತ್ರೆಯನ್ನು ಅವನು ಬ್ರಿಟಿಷ್ ರಾಣಿಗೆ ಉಡುಗೊರೆಯಾಗಿ ಕೊಟ್ಟ. ಆ ಮೂಲ ಪತ್ರದ ಫೋಟೋವನ್ನು ಹಿಂದೆಯೇ ಪ್ರಕಟಿಸಲಾಗಿದೆ.

1767ರಲ್ಲಿ ನಡೆದ ತಿರುವಣ್ಣಾಮಲೈ ಕದನದಲ್ಲಿ ಆರ್ಕಾಟ್ ನ ನಿಜಾಮುದ್ದೌಲಾ ಬ್ರಿಟಿಷ್ ಸೈನ್ಯದ ನೆರವಿನಿಂದ ಮೇಲುಗೈ ಆದ. ಹೈದರ್ ಕಪ್ಪಾ ಕೊಟ್ಟು ಯುದ್ಧ ನಿಲ್ಲಿಸಲು ನಿರ್ಧರಿಸಿದ. ನಿಜಾಮನಿಗೂ ಅಷ್ಟಕ್ಕೇ ಎಲ್ಲ ಮುಗಿದಿಲ್ಲ ಎನ್ನುವ ಆತಂಕವಿತ್ತು. ಇಬ್ಬರೂ ಬಹಳ ಎಚ್ಚರಿಕೆಯಿಂದ ಮುಂದುವರೆಯುವ ಅಗತ್ಯವಿತ್ತು. ನಿಜಾಮುದ್ದೌಲಾ ಹೈದರ್, ಟೀಪು ಅವರನ್ನು ತನ್ನಲ್ಲಿಗೆ ಔತಣಕ್ಕೆ ಆಹ್ವಾನಿಸಿದ. ಇಬ್ಬರನ್ನೂ ತುಂಬಾ ವೈಭವೋಪೇತವಾಗಿ ಸ್ವಾಗತಿಸಿ ಅವರನ್ನು ಜರತಾರಿಯ ಹೊದಿಕೆಯ ದಿಂಬುಗಳ ಚಿನ್ನದ ಆಸನಗಳಲ್ಲಿ ಕೂರಿಸಿ ಅದ್ಭುತ ಔತಣ ಉಣಬಡಿಸಿದ.
ನಂತರ ಆ ಆಸನಗಳು ಮತ್ತು ಹೊದಿಕೆಗಳನ್ನು ಅವರಿಗೆ ಉಡುಗೊರೆಯಾಗಿ ಕೊಟ್ಟ. ಕೆಲದಿನಗಳ ನಂತರ ಹೈದರ್ ನಿಜಾಮನನ್ನು ತನ್ನಲ್ಲಿಗೆ ಔತಣಕ್ಕೆ ಆಹ್ವಾನಿಸಿದ. ಅವನು ಕೂರಲು ಚಿನ್ನದ ವರಹಗಳ ಚೀಲಗಳ ಮೇಲೆ ರತ್ನಗಂಬಳಿ ಹಾಸಿ ಮಖಮಲ್ಲಿನ ದಿಂಬುಗಳನ್ನು ಇರಿಸಿ ಆಸನ ಮಾಡಿ ಅದ್ಭುತ ಸತ್ಕಾರಗಳನ್ನು ಮಾಡಿ ಅವೆಲ್ಲವನ್ನೂ ನಿಜಾಮನಿಗೆ ಉಡುಗೊರೆಯಾಗಿ ಕೊಟ್ಟ. ಒಂದೇ ವ್ಯತ್ಯಾಸ – ಹೈದರ್ ತನ್ನ ಅದ್ಭುತ ಮಾತುಗಳ ಚಮತ್ಕಾರದಿಂದ ನಿಜಾಮನ ಮನವೊಲಿಸಿ ತಾನು ವಾಣಿಯಂಬಾಡಿ ಮತ್ತು ಅಂಬೂರನ್ನು ವಶಪಡಿಸಿಕೊಳ್ಳುವವರೆಗೂ ನಿಜಾಮನು ಬ್ರಿಟಿಷರನ್ನು ಮಚಲಿಪಟ್ಟಣದಲ್ಲಿ ತಡೆಗಟ್ಟಬೇಕೆಂದು ಕೋರಿದ. ನಿಜಾಮ ಒಪ್ಪಿಕೊಂಡ!









ಅಸಕ್ತಿಕರವಾಗಿ ಓದಿಸಿಕೊಂಡು ಹೋಗುತ್ತದೆ. ಮಾಧ್ಯಮಿಕ ಮತ್ತು ಪ್ರೌಢಶಾಲೆಯಲ್ಲಿ ಇತಿಹಾಸದಲ್ಲಿ ಓದದ ಅನೇಕ ವಿವರಗಳಿವೆ.
Thank you