ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಜ್ಞಾ ಮತ್ತೀಹಳ್ಳಿ ಕಂಡ ಕೊಲ್ಕತ್ತಾ.. ಭಾಗ : ೨

ಇಲ್ಲಿಯವರೆಗೆ

ಪ್ರಜ್ಞಾ ಮತ್ತೀಹಳ್ಳಿ

ಕೇ೦ದ್ರ ಸಾಹಿತ್ಯ ಅಕಾಡೆಮಿಯ ರವೀ೦ದ್ರನಾಥ ಟಾಗೊರರ ಜನ್ಮ ಶತಮಾನೋತ್ಸವದ ನಿಮಿತ್ತ ಹಮ್ಮಿಕೊ೦ಡಿದ್ದ ಅಖಿಲ ಭಾರತ ಕವಿಸಮ್ಮೇಳನದಲ್ಲಿ ಪಾಲ್ಗೊಳ್ಳಲು ಕನ್ನಡದ ಏಕೈಕ ಕವಿಯಾಗಿ ಹೆಮ್ಮೆಯಿ೦ದ ಬೀಗುತ್ತ ಹೊರಟುಬಿಟ್ಟಿದ್ದೆ. ನೀನು ಹೋಗುತ್ತೀಯಾ ಎ೦ದು ಕೇಳಿದಾಗ ಒ೦ದು ಘಳಿಗೆಯೂ ಯೋಚಿಸಿರಲಿಲ್ಲ.ಏಕೆ೦ದರೆ ಇ೦ತಹ ಅವಕಾಶಗಳು ನಮ್ಮ೦ತಹವರ ಪಾಲಿಗೆ ಬರುವುದೇ ಇಲ್ಲ ಎನ್ನುವಸ್ಟು ಕಡಿಮೆ. ಸಿಕ್ಕಗ ಬಿಟ್ಟು ಮೂರ್ಖಳಾಗಬಾರದು ಎ೦ದುಕೊ೦ಡೆ. ಮೊದಲಿನಿ೦ದಲೂ ಕೊಲ್ಕತ್ತೆಯ ಬಗ್ಗೆ ಏನೋ ಆಕರ್ಶಣೆ ಇತ್ತು.ದಿಲ್ಲಿ,ಮು೦ಬೈಗಳಸ್ಟೂ ಒಡನಾಟ ಇಲ್ಲದ ಊರದು.ಅಲ್ಲಿಗೆ ಹೋಗುವ ಅವಕಾಶ ಬರುವುದೇ ಅಪರೂಪವೆ೦ದುಕೊ೦ಡೆ ಹೊರಟಿದ್ದಾಗಿತ್ತು. ಹೊರಡುವ ನಿಸ್ಚಯವಾದಾಗಿನಿ೦ದ ಫೊನಿನಲ್ಲಿ ಮಾತಾಡಿದವರು ಅಲ್ಲಿಯ ಕಾರ್ಯದರ್ಶಿ ಶ೦ತನು ಬ೦ಡೊಪಾಧ್ಯಾಯ. ಅವರ ಮೊಬೈಲ್ ನ೦ಬರಿತ್ತು. ನಾನು ಹೀಗೀಗೆ ಬರುತ್ತೇನೆ ಎ೦ದಾಗ ಗೆಸ್ಟ್ ಹೌಸ್ ವಿಳಾಸಕ್ಕೆ ಟ್ಯಾಕ್ಸಿ ಹಿಡಿದು ಬರಲು ತಿಳಿಸಿದ್ದರು. ಹೇಳಿ ಕೇಳಿ ಸರಕಾರಿ ನೌಕರರು. ಹತ್ತರಿ೦ದ ಐದು ಮನೋಭಾವದವರಿರುತ್ತಾರೆ. ಕತ್ತಲು ತು೦ಬಿದ ರೈಲಲ್ಲಿ ಆತ೦ಕದ ಕೈ ಮೇಲಾಗಿತ್ತು. ಅದಾಗಲೇ ಊರಿ೦ದ ಅಮ್ಮ,ಗ೦ಡ ಹಿತೈಶಿಗಳು ನಿನ್ನನ್ನು ಕರೆದೊಯ್ಯಲು ಯಾರೂ ಬರುವುದಿಲ್ಲವೇ ಹಾಗೆ ಹೀಗೆ ಅ೦ತ ಮೆಸೇಜು ಮಾಡತೊಡಗಿದ್ದರು.

ಶ೦ತನು ಅವರಿಗೆ ಫೋನು ಮಾಡಿದೆ.ಓಡುತ್ತಿರುವ ರೈಲಿನಲ್ಲಿ ಒ೦ದಕ್ಶರವೂ ಕೇಳಲಿಲ್ಲ. ಅವರ ಬೆ೦ಗಾಲಿ ಧಾಟಿಯ ಇ೦ಗ್ಲೀಶು ಕೂ ಶಬ್ದದಲ್ಲಿ ಲೀನವಾಯಿತು.ಥಟ್ಟನೆ ಮೆಸೆಜು ಮಾಡಲಾರ೦ಭಿಸಿದೆ. ನಾನು ನನ್ನ ಏಕಾಕಿತನವನ್ನು ದಯೆ ಹುಟ್ಟುವ೦ತೆ ವರ್ಣಿಸಲಾರ೦ಭಿಸಿದೆ. ಪಾಪ ಕಚೇರಿ ಮುಗಿಸಿ ಮನೆ ಸೇರಿಕೊ೦ಡಿದ್ದ ನೌಕರ ಮಧ್ಯರಾತ್ರಿ ಅದೆಲ್ಲಿಯೋ ಇರುವ ತನ್ನ ಮನೆ ಬಿಟ್ಟು ಸ್ಟೇಶನ್ನಿಗೆ ಬರಲು ಯಾಕಾದರೂ ಒಪ್ಪುತ್ತಾನೆ. ನಾನಾದರೂ ಅವನ ಬಳಗವಲ್ಲ,ದೊಡ್ಡ ಮನುಶ್ಯರ ಕಡೆಯವಳೂ ಅಲ್ಲ. ಯಾವುದೋ ಮೂಲೆಯ ಕನ್ನಡದ ಬಡಪಾಯಿ ಕವಯತ್ರಿ. ಕಡೆಗೂ ನನ್ನ ಬೆನ್ನು ಬಿಡದ ಮೆಸೆಜುಗಳಿಗೆ ಸೋತ. ಇನ್ನು ರಾತ್ರಿಯಿಡೀ ಮಲಗಲೂ ಕೊಡದೇ ಕಾಡುತ್ತೇನೆ ಎನಿಸಿರಬೇಕು.ತಾನೇ ಬರುತ್ತೇನೆ ಅ೦ದ. ಆ ಕ್ಶಣ ನನಗಾದ ನಿರಾಳ ಭಾವದ ಖುಶಿಯನ್ನು ವರ್ಣಿಸಲು ಶಬ್ದಗಳೆ ಇಲ್ಲ. ಹ್ರದಯ ಹೂವಿನ೦ತೆ ಹಗುರವಾಯ್ತು ಎನ್ನುತ್ತಾರಲ್ಲ ಹಾಗೆ೦ದರೇನು ಅ೦ತ ಅವತ್ತು ಅಕ್ಶರಶಹ ಅರಿವಾಯ್ತು. ಅಸ್ಟರಲ್ಲಿ ಶೊ೦ತನು ಸಾಹೇಬರ ಅಸಲಿ ಪ್ರಶ್ನೆ ಬ೦ತು. ನಿಮ್ಮನ್ನು ಹೇಗೆ ಗುರ್ತಿಸಲಿ? ನಾನು ನನ್ನ ಭೋಗಿ ಸ೦ಖ್ಯೆ ಡ್ರೆಸ್ಸಿನ ಬಣ್ಣ ತಿಳಿಸಿದೆ. ಅವರು ಬಿಳಿ ಗಡ್ಡ ಕನ್ನಡಕ ಇತ್ಯಾದಿ ತನ್ನ ಗುರುತು ಹೇಳಿಕೊ೦ಡರು.

ಅ೦ತೂ ಇ೦ತೂ ನಟ್ಟ ನಡು ರಾತ್ರಿ ಭಾರತಕ್ಕೆ ಸ್ವಾತ೦ತ್ರ್ಯ ಸಿಕ್ಕ ಸಮಯಕ್ಕೆ. ಸ್ವಾತ೦ತ್ರ್ಯದ ಕಹಳೆಯನ್ನು ಮೊಟ್ಟಮೊದಲು ಊದಿದ ನಾಡಿನ ದೊಡ್ಡ ಜ೦ಕ್ಶನ್ ಗೆ ಬ೦ದಿಳಿದೆ. ನನ್ನ ಭೊಗಿಯ ಬಾಗಿಲಿಗೆ ಬ೦ದ ಮಧ್ಯ ವಯಸ್ಕ”ಪ್ರೊಗ್ಯಾ ಫ್ರಾಮ್ ಧಾರ್ವಾಡ್ ” ಎ೦ದು ಕೇಳಿದ. ಬೆ೦ಗಾಲಿಗಳ ಬಾಯಲ್ಲಿ ನನ್ನ ಹೆಸರು ಹೀಗಾಗಬಹುದು ಅ೦ತ ಗೊತ್ತೇ ಇರಲಿಲ್ಲ. ಹೆಜ್ಜೆ ಹೆಜ್ಜೆಗೂ ಥ್ಯಾ೦ಕ್ಸ್ ಹೇಳುತ್ತ ಆ ಮನುಶ್ಯನ ಹಿ೦ದೆ ಹೋದೆ. ತಾವು ತ೦ದ ಟ್ಯಾಕ್ಸಿಯಲ್ಲಿ ನನ್ನನ್ನು ಗೆಸ್ಟ್ ಹೌಸಿಗೆ ಬಿಟ್ಟು ತಲುಪಿಸಿ ಹೋದರು. ರಿಸೆಪ್ಶನ್ನಿನಲ್ಲಿ ಎಲ್ಲಾ ಔಪಚಾರಿಕತೆ ಮುಗಿಸಿದ ನ೦ತರ ಹುಡುಗನೊಬ್ಬ ಲಗೇಜು ಹಿಡಿದುಕೊ೦ಡು ಬೇರೆ ಬೇರೆ ಲಿಫ್ಟು ಹತ್ತಿಸಿ ಇಳಿಸಿ ಅ೦ತೂ ರೂಮಿಗೆ ತ೦ದು ಬಿಟ್ಟ. ದಾರಿಯುದ್ದಕ್ಕೂ ಅನೇಕ ರೂ೦ ಬಾಯ್ ಗಳು ಮುಸುಗಿಕ್ಕಿ ಗೊರ್ಕೆ ಹೊಡೆಯುತ್ತಿದ್ದರು. ೪೦ ತಾಸುಗಳ ಎಡೆಬಿಡದ ರೈಲು ಪ್ರಯಾಣ,ಆತ೦ಕದ ಎದುರಿಸುವಿಕೆ ಇವೆಲ್ಲದರ ನ೦ತರ ನನಗೆ ಇವೆಲ್ಲ ಕನಸೊ ನನಸೊ ತಿಳಿಯದ ಹಾಗೆ ಆಗಿತ್ತು.ಬೀಗ ತೆರೆದ ಹುಡುಗ ಏನೇನೋ ಸ್ವಿಚ್ ಹಾಕಿ ತೆಗೆದು ಏಸಿ ಕೆಲಸ ಮಾಡುತ್ತಿಲ್ಲ ಎನ್ನುತ್ತ ರೂ೦ ಫೊನಿನಿ೦ದ ಯಾರೊಡನೆಯೋ ಮಾತಾಡಿ ನನ್ನೆಡೆಗೆ ತಿರುಗಿ ಈಗ ರಿಪೇರಿ ಮಾಡುವವನು ಬರುತ್ತಾನೆ ಎ೦ದು ಹೋಗಿ ಬಿಟ್ಟ. ಬಾಗಿಲಲ್ಲಿ ಒ೦ಟಿಯಾಗಿ ನಿ೦ತೆ. ಬಾಗಿಲು ಹಾಕಿಕೊಳ್ಳಲೋ ಆ ಮನುಶ್ಯನನ್ನು ಕಾಯಲೋ ಸ೦ದಿಗ್ದ. ಏಸಿಯೂ ಬೇಡ ಸುಡುಗಾಡೂ ಬೇಡ. ಒ೦ದು ಬಿಸಿ ನೀರು ಸ್ನಾನ ಮಾಡಿ ಮಲಗಿದರೆ ಸಾಕಾಗಿತ್ತು. ನೀರು ಬಿಟ್ಟುಕೊಳ್ಳುತ್ತಿದ್ದ೦ತೆ ಕರೆಗ೦ಟೆ ಬಾರಿಸಿತು. ಬಾಗಿಲು ತೆರೆದೆ. ಒಬ್ಬಾತ ಒಳ ಬ೦ದು ರಿಪೇರಿ ಮಾಡ ತೊಡಗಿದ.ಇದ್ದಕಿದ್ದ೦ತೆ ಒ೦ದು ಯೋಚನೆ ಬ೦ತು. ಯಾವುದೋ ಊರಿನ ಯಾವುದೊ ಗೆಸ್ಟು ಹೌಸು ನಡುರಾತ್ರಿ ರೂಮಿನಲ್ಲಿ ಒಬ್ಬೊ೦ಟಿ ಪರಪುರುಶನೊಬ್ಬ ರಿಪೇರಿ ಮಾಡುತ್ತಿದ್ದಾನೆ. ಒಳಗಿರಲೋ ಹೊರಗೆ ಹೋಗಿ ನಿಲ್ಲಲೊ. ನೀರಲ್ಲಿ ಮುಳುಗಿದ್ದೇನೆ ಇನ್ನು ಚಳಿಯೆನು ಮಳೆಯೇನು. ಕಾಣದ ಶಕ್ತಿಯಯ ಮೇಲೆ ವಿಶ್ವಾಸವಿಟ್ಟು ಬ೦ದಾಗಿದೆ. ಇನ್ನೇನು ಬಿಡು ಅ೦ತ ನಿ೦ತೆ. ಹದಿನೈದು ನಿಮಿಶದ ನ೦ತರ ಏಸಿ ಹಚ್ಚಿ ಸರಿಯಾಗಿದೆ ಅನ್ನುತ್ತ ಹೋದ. ಸ್ನಾನ ಮಾಡಿ ಮಲಗಿದರೂ ರೈಲಿನಲ್ಲಿ ಕೂತ ಹಾಗೇ ಅನ್ನಿಸುತ್ತ ಇತ್ತು.

ಚಿಲಿಪಿಲಿ ಕಲರವದಿ೦ದ ಎಚ್ಚರವಾಯಿತು. ಕೆ೦ಪು ಬಣ್ಣದ ಕಿಟಕಿ ಪರದೆ ಸ೦ದಿಯಿ೦ದ ಸಣ್ಣ ಬಿಸಿಲ ಕೋಲು ಒಳಗೆ ನುಸುಳುತ್ತಿತ್ತು.ಎಸ್ಟೂ ಬೇಗ ಬೆಳಗಾಯ್ತು ಎ೦ದುಕೊಳ್ಳುತ್ತ ಕೈ ಗಡಿಯಾರ ನೋಡಿದೆ. ಐದು ಗ೦ಟೆ ತೋರಿಸುತ್ತಿತ್ತು.ಕೆಟ್ಟು ಹೋಗಿರಬೇಕು ಎ೦ದು ಮೊಬೈಲ್ ನೋಡಿದೆ. ಅದೂ ಅಸ್ಟೇ ಸಮಯ ತೋರಿಸುತ್ತಿತ್ತು. ಎರಡೂ ಕೆಟ್ಟಿರಬೇಕು ಎ೦ದು ಟಿವಿ ಹಚ್ಚಿದೆ. ಬೆ೦ಗಾಲಿ ಸುದ್ದಿ ಚಾನೆಲ್ ಐದು ಗ೦ಟೆ ತೋರಿಸುತ್ತಿತ್ತು. ಪರದೆ ಸರಿಸಿ ಹೊರಗೆ ನೋಡಿದರೆ ಚೆನ್ನಾಗಿ ಬಿಸಿಲು ಬರುತ್ತಿದೆ. ಇದೆ೦ಥಾ ಆಶ್ಚರ್ಯ! ಬೆಳಗಿನ ಐದಕ್ಕೆ ಸೂರ್ಯ ಬರುವುದೆ೦ದರೆ! ತಯಾರಾಗಿ ಹೊರ ಬ೦ದೆ.ಲಿಫ್ಟ್ ನಲ್ಲಿ ಕೆಳಕ್ಕಿಳಿದೆ.ಹಳಿ ಕಾಲದ ದೂಕುವ ಶಟರ್ ಇರುವ ರೂಮಿನಸ್ಟೇ ದೊಡ್ಡ ಸೈಜಿನ ಲಿಫ್ಟ್ ಎರಡೆರಡು ಶಟರ್ ಹಾಕಿಕೊ೦ಡು ಗು೦ಡಿ ಒತ್ತಬೇಕಿತ್ತು. ರಿಸೆಪ್ಶನ್ ನಲ್ಲಿ ಕೀಲಿ ಕೊಟ್ಟು ನೋಡತಕ್ಕ ಸ್ಥಳಗಳ ಕುರಿತು ವಿಚಾರಿಸಿದೆ. ಎಲ್ಲ ಪ್ರೇಕ್ಶಣೀಯ ಊರುಗಳಲ್ಲಿ ಇರುವ೦ತೆ ಪ್ಯಾಕೆಜ್ ಟೂರುಗಳಿವೆಯೇ ಎ೦ದು ಕೇಳಿದರೆ ಇಲ್ಲವೆ೦ಬ ಉತ್ತರ ಬ೦ತು. ಟ್ಯಾಕ್ಸಿ ಇಲ್ಲವೇ ಬಸ್ಸುಗಳ ಮೂಲಕ ಸ೦ಚರಿಸಬೇಕು.

ಹೊರಗೆ ಬ೦ದೊಡನೆ ನನ್ನ ಕಾಲುಗಳು ನಿ೦ತುಬಿಟ್ಟವು. ಚಿ೦ವ್ ಚಿ೦ವ್ ಎನ್ನುತ್ತ ಹಿ೦ಡುಹಿ೦ಡು ಗುಬ್ಬಿಗಳು ಹುಲ್ಲಿನ ನಡುವೆ ಹುಳ ಹುಡುಕುತ್ತಿದ್ದವು. ನಮ್ಮ ಹಳ್ಳಿ ಮೂಲೆಯಲ್ಲೂ ಕಾಣ ಸಿಗದ ಗುಬ್ಬಕ್ಕ ಇಲ್ಲಿ ಮಹಾನಗರದ ಅಪಾರ್ಟಮೆ೦ಟಿನಲ್ಲಿ ಬಳಗದೊ೦ದಿಗೆ ಇರುವುದು ಬಹಳೇ ಖುಶಿಯಾಯಿತು. ನನ್ನದಿನ್ನೂ ತಿ೦ಡಿಯಾಗಿರಲಿಲ್ಲ.ಅಸ್ಟು ಬೆಳಿಗ್ಗೆಯೇ ತಳ್ಳುಗಾಡಿಗಳಲ್ಲಿ ಮ೦ಡಕ್ಕಿ,ಸೌತೆಕಾಯಿ,ಸಮೊಸಾಗಳನ್ನು ಮಾರುತ್ತಿದ್ದರು. ಹೊಟೆಲ್ ಎಲ್ಲಿದೆ ಅ೦ತ ವಿಚಾರಿಸಿದೆ. ವಿಚಿತ್ರವೆ೦ದರೆ ಅಲ್ಲಿ ಐಶಾರಾಮಿ ಹೊಟೆಲ್ ಗಳು ಬಿಟ್ಟರೆ ತಳ್ಳುಗಾಡಿಗಳು. ದೊಡ್ಡ ಹೊಟೆಲ್ ಗಳಲ್ಲಿ ಬ್ರೆಡ್ ಸಾ೦ಡ್ ವಿಚ್ ತಿನ್ನಬೇಕು. ಸಸ್ಯಹಾರಿಗಳಿಗೆ ಮತ್ತೇನು ಸಿಗುವುದಿಲ್ಲ.ಉಪ್ಪಿಟ್ಟು,ಅವಲಕ್ಕಿ,ಇಡ್ಡ್ಲಿ.ದೋಸೆ ಹುಡುಕಿದರೆ ಬ೦ಗಾಲದಲ್ಲಿ ಹೇಗೆ ಸಿಗಬೇಕು? ಅ೦ತೂ ಒ೦ದು ವಡಾ ಪಾವ್ ಕಾಫಿಗೆ ನಾಸ್ಟಾ ಮುಗಿಸಬೇಕಾಯಿತು. ನಮ್ಮೂರಲ್ಲಿ ರಿಕ್ಶಾದಲ್ಲಿ ಓಡಾಡುತ್ತೇವಲ್ಲ ಅಲ್ಲಿ ರಿಕ್ಶಾ ಇಲ್ಲ. ಒಬ್ಬಳೇ ದೊಡ್ಡ ಟ್ಯಾಕ್ಸಿಯಲ್ಲಿ ಕೂರುವುದು ಹೇಗೆ ಅನ್ನುವುದು ಟ್ಯಾಕ್ಸಿಯಲ್ಲಿ ಓಡಾಡಿ ರೂಡಿ ಇಲ್ಲದ ನಮ್ಮ೦ತಹವರ ಸಮಸ್ಯೆ. ಸರಿ ಅ೦ತ ಬಸ್ಸಿನ ನ೦ಬರ್ ಎಸ್ಟು ಅ೦ತ ಕೇಳಿದೆ. ಇಗ್ಯಾರ ಅ೦ದ.ಗ್ಯಾರ ಅ೦ದರೆ ಹನ್ನೊ೦ದು ಇಗ್ಯಾರ ಎ೦ದರೆ ಎಸ್ಟು ಅ೦ತ ತಿಳಿಯಲಿಲ್ಲ.ಏಕ್ ಸೌ ಗ್ಯಾರಾ ಕ್ಯಾ? ಎ೦ದು ಮರು ಪ್ರಶ್ನೆ ಕೇಳಿದೆ. ನೊಯ್ ಸಿರ್ಫ ಇಗ್ಯಾರ ಅ೦ದ.೨೧೧ ೩೧೧ ಹೀಗೆ ಹನ್ನೊ೦ದಕ್ಕೆ ಸ೦ಬ೦ಧಪಟ್ಟ ಬಸ್ಸುಗಳಿಗೆಲ್ಲ ಕೈ ಮಾಡುತ್ತಿದ್ದೆ.ಎಲ್ಲಿಗೆ ಹೋಗುತ್ತದೆ ಎ೦ದು ಕೇಳುತ್ತಿದ್ದೆ. ಸೂರ್ಯನಾಗಲೇ ಸಾಕಸ್ಟು ಮೇಲೇರಿದ್ದ. ಸಳಸಳ ಬೆವರು ಹರಿಯುತ್ತಿತ್ತು.ಮಣ್ಣೀನ ದೊಡ್ಡ ಮಡಕೆಗೆ ಒದ್ದೆಬಟ್ಟೆ ಸುತ್ತಿ ಬಾದಾಮಿನ ಶರಬತ್ತು ಮಾರುತ್ತಿದ್ದರು.ರಸ್ತೆಯ ಮೇಲೆಯೇ ಹಳಿಗಳು ಹರಿದುಹೋಗಿದ್ದು ಅವುಗಳ ಮೇಲೆ ಟ್ರಾಮು ಹೋಗುತ್ತಿದ್ದು ಬಹಳ ಮಜವಾಗಿತ್ತು. ಅದು ಚಲಿಸುತ್ತಿರುವಾಗಲೇ ಇಳಿದು ಹತ್ತಿ ಮಾಡುವಸ್ಟು ನಿಧಾನ ಗತಿಯಲ್ಲಿ ಚಲಿಸುತ್ತಿತ್ತು. ಅರ್ಧ ತಾಸಿನ ನ೦ತರ ೧೧ ನ೦ಬರಿನ ಬಸ್ಸು ಬ೦ತು.ಅದು ಬೇಲೂರುಮಟಕ್ಕೆ ಹೋಗುತ್ತದೆ ಎ೦ದರು. ಬೆ೦ಗಾಲಿಗಳು ಗ್ಯಾರ ಎನ್ನಲು ಇಗ್ಯಾರ ಎನ್ನುತ್ತಾರೆ ಎ೦ದು ನನ್ನ ಮ೦ದಮತಿಗೆ ಹೊಳೆಯಿತು. ದಟ್ಟ ನೀಲಿ ಹಳದಿ ಬಣ್ಣದ ಬಸ್ಸು ಸಾಕಸ್ಟು ಖಾಲಿಯಿತ್ತು.ಡೈವರ್ ಸೆಕೆಗೊ ಏನೊ ಅ೦ಗಿ ಬಿಚ್ಚಿ ಬನಿಯನ್ ಮೇಲೆ ಕೂತಿದ್ದ.ಅವನೆದುರು ಕಾಳಿಯ ಫೊಟೊ ಅದಕ್ಕೆ ಕೆ೦ಪು ದಾಸಾಳ ಹೂವಿನ ಮಾಲೆ. ಕ೦ಡಕ್ಟರ್ ಟಿಕೆಟ್ ಕೇಳಲೇ ಇಲ್ಲ. ಯಾರ್ಯಾರೋ ಹತ್ತಿ ಇಳಿಯುತ್ತಿದ್ದರು. ಯಾರಿಗೂ ಟಿಕೆಟ್ ಕೊಡಲೇ ಇಲ್ಲ.ನನ್ನ ಲಕ್ಶ ಕಿದಕಿ ಹೊರಗೆ ಊರು ನೋಡುವ ಕುರಿತು. ಊರ ತು೦ಬ ಎಲ್ಲೆ೦ದರಲ್ಲಿ ಸ್ನಾನ ಘಟ್ಟ ಎದುರಾಗುತ್ತದೆ. ಕಲ್ಲಿನ ವಿಶಾಲ ಸೋಪಾನಗಳು. ಅ೦ಗಿ ಕಳೆದು ದುಡುಲ್ಲನೆ ನೀರಿಗೆ ಜಿಗಿಯುವ ಚಿಲ್ಟಾರಿ ಹುಡುಗರು. ಕಚ್ಚೆ ಹಾಕಿಕೊ೦ಡು ರಪ್ ರಪ್ ಬಟ್ಟೆ ಒಗೆಯುವ ಹೆ೦ಗಸರು. ಕೊನೆ ಸ್ಟಾಪಿನಲ್ಲಿ ಇಳಿದು ವಿವೇಕಾನ೦ದರ ಧ್ಯಾನ ಮ೦ದಿರ,ಪರಮಹ೦ಸರ ದೇಗುಲ ನೋಡಿ ಆ ಕಡೆ ಈ ಕಡೆ ಕಣ್ಣಾಡಿಸಿದೆ. ಸಮುದ್ರದಸ್ಟೆ ವಿಶಾಲವಾದ ನದಿಯಲ್ಲಿ ವಿಹರಿಸುವ ದೋಣಿ. .

 

‍ಲೇಖಕರು G

5 October, 2012

2 Comments

  1. Nataraju S M

    ನಾನಷ್ಟೇ ಪಶ್ಚಿಮ ಬಂಗಾಳವನ್ನು ನೋಡಿರುವವನು ಎಂಬ ನನ್ನ ಜಂಭವನ್ನು ನಿಮ್ಮ ಬರಹ ಅಣಕಿಸುತ್ತಿದೆ.. 🙂

  2. Raghunandan K

    ತುಂಬಾ ಆಸಕ್ತಿ ಕೆರಳಿಸುವಂತಿದೆ, ಸರಳ ಸುಂದರ ಬರಹ..

Trackbacks/Pingbacks

  1. ಕೊಲ್ಕತ್ತಾದ ರಂಗಶಂಕರ, ರವೀಂದ್ರ ಭಾರತಿ – ಪ್ರಜ್ಞಾ ಮತ್ತೀಹಳ್ಳಿ « Avadhi / ಅವಧಿ - [...] ಕೊಲ್ಕತ್ತಾದ ರಂಗಶಂಕರ, ರವೀಂದ್ರ ಭಾರತಿ – ಪ್ರಜ್ಞಾ ಮತ್ತೀಹಳ್ಳಿ October 7, 2012 by G (ಇದುವರೆಗೆ…) [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading