ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅದಕ್ಕೊಂದು ಸೆಲ್ಯೂಟು ಹೊಡೆದ..

ನೋಡಿ ನಮ್ಮ ಬಾವುಟ..

ಗೋಪೀನಾಥ ರಾವ್

ಆವತ್ತು ಅಗಸ್ಟ್ಹದಿನೈದು. ರವಿಶಂಕರ ಗೌಡರ ಕುಟುಂಬ ಇಡೀ ಫ್ಯಾಮಿಲಿಯಾಗಿ ಕಬಿನಿ ಜಲಾಶಯಕ್ಕೆ ಪಿಕ್ನಿಕ್ಹೊರಟಿತ್ತು. ಹನ್ನೆರಡು ಸೀಟಿನ ಲಕ್ಸುರಿ ವ್ಯಾನು ಕುಟುಂಬದ ಒಂಭತ್ತು ಸದಸ್ಯರನ್ನು ಅದಾಗಲೇ ಕುಳ್ಳಿರಿಸಿಕೊಂಡಿತ್ತು. ರವಿಶಂಕರ್, ಅವರಪತ್ನಿ ಸುಮತಿಯಮ್ಮ ಮತ್ತು ಕೊನೆಯ ಮಗ ಕಿಶೋರ್ಮನೆಗೆ ಬಂದ ವ್ಯಾನನ್ನು ಮೊದಲು ಹತ್ತಿದ್ದು. ದೊಡ್ದಮಗ ನಿತಿನ್,  ಅವನ ಪತ್ನಿ ಅನಿತಾ ಮತ್ತು ಮಗಳು ಬಿಂದು ಇವರನ್ನು ಅವರ ಫ್ಲ್ಯಾಟಿನಿಂದ ಮೊದಲು ಪಿಕ್ಮಾಡಿಕೊಂಡು ಆಮೇಲೆ ಮಗಳು ರಜನಿ, ಅವಳ ಗಂಡ ಪ್ರವೀಣ್ ಮತ್ತು ಅವರ ಮಗ ಕ್ಷಿತಿಜ್ ಇವರನ್ನು ಅವರ ಮನೆಯಿಂದ ಪಿಕ್ಮಾಡಿ ಇದೀಗ ಕೊನೆಯದಾಗಿ ಗೌಡರ ಎರಡನೇ ಮಗ ಕಿರಣ್ ಮತ್ತು ಪತ್ನಿ ರೂಪಾ ಅವರನ್ನೂ ಸೇರಿಸಿಕೊಳ್ಳುವುದಕ್ಕಾಗಿ ಚಂದ್ರಾ ನಗರದ ಕಡೆಗೆ ಹೊರಟಿದ್ದರು.

ಅಲ್ಲಿಂದ ನೇರವಾಗಿ ಕಬಿನಿ ಜಲಾಶಯಕ್ಕೆ ಹೋಗಿ ಸಂಜೆತನಕ ಅಲ್ಲಿ ಮೋಜುಮಸ್ತಿಮಾಡಿ ಕಾಲ ಕಳೆದು ರಜೆಯನ್ನು ಸಾರ್ಥಕ ಮಾಡಿಬರುವ ಕಾರ್ಯಕ್ರಮ ಹಾಕಿದ್ದರು. ವ್ಯಾನ್ಹತ್ತುವ ಮೊದಲೇ ಕಿರಿಚಿ ಕಿರಿಚಿ ಮುಖ ಉಬ್ಬಿಸಿಕೊಂಡಿದ್ದ ಕ್ಷಿತಿಜ್ ಅಜ್ಜನನ್ನು ಕಂಡಾಕ್ಷಣ ತನ್ನ ಅಳುವನ್ನು ಇನ್ನೂ ತಾರಕಕ್ಕೇರಿಸಿದ್ದ. “ಏನಂತೆ ಅವನಿಗೆ?” ಅಂದರು ಗೌಡರು. “ಅವನದ್ದೊಂದು ಸುಮ್ನೆ ಕಿಟಿಕಿಟಿ.. ರಸ್ತೆಯಲ್ಲಿ ಶಾಲಾ ಮಕ್ಕಳ ಕೈಯಲ್ಲಿ ಬಾವುಟ ನೋಡಿದ.. ಅದು ಅವನಿಗೂ ಬೇಕಂತೆ.. “ಅಪ್ಪನಿಗೆ ಉತ್ತರವಿತ್ತ ರಜನಿ ಮಗನನ್ನು ದುರುಗುಟ್ಟಿ ನೋಡಿ ಕೈ ಯೆತ್ತಿ ” ಸುಮ್ನಿರೋ, ಇಲ್ಲಾಂದ್ರೆ ಬಾರಿಸ್ತೇನೆ ಬೆನ್ನಿಗೆ” ಅಂದಳು. “ಬಾವುಟ ನನಗೂ ಬೇಕು” ಅಮ್ಮನ ಕಿವಿಯಬಳಿ ಪಿಸುಗುಟ್ಟಿದಳು ಬಿಂದು.“ಇವಳದ್ದೂ ಶುರುವಾಯಿತು, ಇವಳಿಗೂ ಬೇಕಂತೆ” ಅಂದಳು ಅವಳಮ್ಮ.“ನಿನಗೆ ಸ್ಕೂಲಲ್ಲಿ ಕೊಟ್ಟಿಲ್ವಾ?”  ಕೇಳಿದ ಕಿಶೋರ್.“ಅವಳನ್ನು ಇವತ್ತು ಸ್ಕೂಲಿಗೆ ಕಳಿಸಲೇ ಇಲ್ಲ ನಾವು. ಬರೇ ಫ್ಲ್ಯಾಗ್ಹಾಯಿಸ್ಟಿಂಗ್ಮತ್ತೆ ಚಾಕಲೇಟು ವಿತರಣೆ. ಸ್ಕೂಲಿಂದ ಬರುವಾಗ ಲೇಟಾದ್ರೆ ಪಿಕ್ನಿಕ್ಕಿಗೆ ಲೇಟಾಯಿತು ಅಂತ ಎಲ್ಲರೂ ನಿನ್ನನ್ನೇ ಬೈತಾರೆ ಅಂತ ಇವ್ರು ಬೇರೆ ಹೇಳಿದ್ರು” ಅಂದಳು ಅನಿತಾ.

“ನೀನು ಅಜ್ಜನತ್ರ ಹೇಳಿ ತೆಗೆಸಿಕೊಡ್ತೇನೆ ಅಂದಿದ್ಯಲ್ಲ..ಎಲ್ಲುಂಟೂ…?” ಕ್ಷಿತಿಜ್ಪುನಃ ಕಿರಿಚಿದ.“ಸುಮ್ನಿರೋ..ಕೊಡಿಸ್ತೇನೆ” ಅಂದರುಗೌಡರು. ರಸ್ತೆಯ ಇಕ್ಕೆಲಗಳಲ್ಲಿ ನಡೆದು ಬರುತ್ತಿದ್ದ ಮಕ್ಕಳ ಕೈಯಲ್ಲಿ ಬಾವುಟ ನೋಡಿದಾಕ್ಷಣ ಕ್ಷಿತಿಜ್ “ನೋಡು, ಅವರ ಕೈಯಲ್ಲೂ ಉಂಟು, ನಂಗೂಬೇಕೂ” ಅನ್ನುತ್ತಿದ್ದ. ವಯಸ್ಸಿನಲ್ಲಿ ಸ್ವಲ್ಪ ದೊಡ್ದವಳಾಗಿದ್ದ ಬಿಂದು, ಕ್ಷಿತಿಜ್ಪ್ರತಿ ಬಾರಿ ಕಿರಿಚಿದಾಗಲೂ ತನ್ನ ಅಮ್ಮನ ಕಿವಿಯಲ್ಲಿ ” ಅಮ್ಮಾ.. ನನಗೂ ಬೇಕು” ಎಂದು ಗುಟ್ಟಾಗಿ ನೆನಪಿಸುತ್ತಿದ್ದಳು. ವ್ಯಾನು ಕಿರಣನ ಫ್ಲ್ಯಾಟ್ಬಿಲ್ಡಿಂಗ್ಬಳಿ ಬಂದಾಗ ಕಿಶೋರ್ “ಅಣ್ಣ, ಇಲ್ಲಿ ಕೆಳಗೆ ಬಂದಿದ್ದೇವೆ..ಹೊರಟುಬನ್ನಿ” ಅಂತಫೋನ್ಮಾಡಿ ತಿಳಿಸಿದ. ಅಲ್ಲೇ ಒಂದೆರಡು ಫರ್ಲಾಂಗ್ದೂರದಲ್ಲಿದ್ದ ಸರ್ಕಾರಿ ಶಾಲೆಯಿಂದ ಸ್ವಾತಂತ್ರ್ಯ ದಿನಾಚರಣೆ ಮುಗಿಸಿ ಮಕ್ಕಳು ಕೇಕೆ ಹಾಕುತ್ತಾ, ಬಾವುಟ ಹಾರಿಸುತ್ತಾ, ಸಡಗರದಲ್ಲಿ ಮನೆಗೆ ಹೊರಟಿದ್ದರು.

ಬಣ್ಣ ಬಣ್ಣದ ಡ್ರೆಸ್ಸು, ಬಾಯಲ್ಲಿ ಪೆಪ್ಪರಮಿಂಟು, ಕೈಯಲ್ಲಿ ತ್ರಿವರ್ಣಬಾವುಟ.  ಕ್ಷಿತಿಜ್ “ಅಲ್ಲಿನೋಡು..ಎಲ್ಲರತ್ರ ಉಂಟು… ನನಗೆಬೇಕೂ” ಅಂತ ಪುನಃರಾಗ ಶುರುವಿಟ್ಟ. ಕೋಪಗೊಂಡ ಅವನಪ್ಪ ಪ್ರವೀಣ್ “ಸುಮ್ನಿರಲೇ” ಅಂತಗದರಿಸಿದ. ಅಪ್ಪನ ಗದರಿಕೆ ಕ್ಷಿತಿಜನ ಹಠವನ್ನು ಇನ್ನೂ ಹೆಚ್ಚಿಸಿತು. “ನನಗೆ ಬಾವುಟಬೇಕೂ” ಎರಡೂ ಕಾಲುಗಳನ್ನು ನೆಲಕ್ಕಪ್ಪಳಿಸುತ್ತಾ ಕಣ್ಣೀರಿಳಿಸುತ್ತಾ ಬೊಬ್ಬೆ ಹಾಕಿದ ಕ್ಷಿತಿಜ್. “ಕಿಶೋರ್, ಇಲ್ಲೆಲ್ಲಾದ್ರೂ ಅಂಗಡಿಯಲ್ಲಿ ಬಾವುಟ ಇದೆಯೇನೋ ನೋಡೋ… ಚಿಲ್ರೆ ಇದೆಯಾ?ಎರಡು ಮೂರು ರುಪಾಯಿ ಇರಬಹುದು” ಅಂದರು ಗೌಡರು. ಕಿಶೋರ್ಅಂಗಡಿ ಹುಡುಕುತ್ತ ಹೊರಟ. ಸುಮಾರು ಹತ್ತು ಹನ್ನೆರಡು ಕಟ್ಟಡಗಳಾದಮೇಲೆ ಒಂದು ಅಂಗಡಿ ಕಾಣಿಸಿತು.

ಹೋಗಿ “ಬಾವುಟ ಇದ್ಯಾಸಾರ್” ಕೇಳಿದ.”ಏನುಗುರು ಏನುಬೇಕು ಅಂತಹೇಳಿದೆ”ಅಂಗಡಿಯಾತನಿಗೆ ಕಿಶೋರ್ಕೇಳಿದ್ದು ಸ್ಪಷ್ಟವಾಗಿರಲಿಲ್ಲ. “ಬಾವುಟ.. ಫ್ಲ್ಯಾಗ್.. ನಮ್ಮರಾಷ್ಟ್ರೀಯ ಬಾವುಟ.. ಮಕ್ಕಳೆಲ್ಲ ಹಿಡ್ಕೊಂಡು ಹೋಗ್ತಿದ್ದಾರೆ ನೋಡಿ, ಅದಿದ್ಯಾ?” ಬಾವುಟ ಹಾರಾಡಿಸುವಂತೆ ಕೈ ಬೀಸಿ ಸ್ಪಷ್ಟಪಡಿಸಿದ ಕಿಶೋರ್. “ಇಲ್ಲಾಗುರು.. ನಮ್ಮಲ್ಲಿಲ್ಲ” ಅಂದ ಅಂಗಡಿಯಾತ. ಇನ್ನೇನು ಮಾಡುವುದು ಎಂದು ಯೋಚಿಸುತ್ತಾ ಇನ್ನೂ ಕೈ ಬೀಸುತ್ತಲೇ ಇದ್ದ ಕಿಶೋರ್. ನೋಡಿದ ಅಂಗಡಿಯಾತ “ಚಿಕ್ಕ ಮಕ್ಕಳ ಬಾವುಟ.. ಇಷ್ಟು ಬೆಳೆದಿದ್ದೀಯಾ.. ನಿಂಗೂಬೇಕಾ?” ನಗೆಯಾಡಿದ. “ಲೇ.. ನನಗಲ್ಲ.. ಮಕ್ಕಳಿಗೇನೆ..” ಅಂದ ಕಿಶೋರ್ಮುಂದುವರೆಸಿ “ಮತ್ತೆ ದೊಡ್ಡೋರು ಬಾವುಟ ಹಾರಿಸಬಾರದು ಅಂತೇನೂ ಇಲ್ಲ… ದೇಶದ್ಮೇಲೆ ಪ್ರೀತಿ ಇರೋರು ಯಾರೂ ಹಿಡ್ಕೋಂಡ್ಹಾರಿಸಬಹುದು.. ಏನ್ತಪ್ಪಿಲ್ಲ” ಅನ್ನುತ್ತ ಗಟ್ಟಿಯಾಗಿಯೇ ದಬಾಯಿಸಿ ಹೇಳಿ ಹಿಂದೆ ಹೊರಟ.

ಇವರ ಮಾತುಗಳನ್ನು ಕೇಳಿಸಿಕೊಂಡ ಒಬ್ಬರು “ಲೇ ತಮ್ಮಾ, ಇಲ್ಲಿಬಾ” ಅಂತ ಕಿಶೋರನನ್ನು ಕರೆದರು. “ನಾನು ಆ ಶಾಲೆಯ ಅಧ್ಯಾಪಕ. ಬಾವುಟ ಶಾಲೆಯಲ್ಲಿ ಬೇಕಾದಷ್ಟಿದೆ. ದೇಶದ ಮೇಲೆ ಪ್ರೀತಿ ಇರೋರು ಯಾರೂ ಹಾರಿಸಬಹುದೆಂದೆಯಲ್ಲ. ಮನಸ್ಸು ತುಂಬಿಬಂತು.. ಬಾವುಟ ಈಗ ತಂದು ಕೊಡ್ತೇನೆ. ಇಲ್ಲೇ ಇರು”  ಅಂದರು. “ನನಗಲ್ಲ.. ಅಕ್ಕ ನಮಗನಿಗೆ.. ಒಂದಲ್ಲ ಎರಡುಬೇಕು, ಅಣ್ಣನ ಮಗಳಿಗೂ ಬೇಕು” ಅಂದಕಿಶೋರ್. “ಸರಿ.. ಮೂರು ತರ್ತೇನೆ. ಮಕ್ಕಳಿಗೆ ಎರಡು,  ಮತ್ತೆ ನಿನಗೊಂದು.. ನಿನ್ನ ಸೂಪರ್ಡೈಲಾಗಿಗೆ..” ಎನ್ನುತ್ತ ಸೈಕಲೇರಿ ಹೊರಟರಾತ. ಐದೇ ನಿಮಿಷಗಳಲ್ಲಿ ಶಾಲೆಗೆ ಹೋಗಿ ಬಾವುಟಗಳೊಂದಿಗೆ ಬಂದವರು ಬಾವುಟಗಳನ್ನು ಕೊಟ್ಟು “ಅಗಸ್ಟ್ಹದಿನೈದಕ್ಕೆ ನಿನ್ನಂಥ ಒಬ್ಬ ದೇಶ ಪ್ರೀತಿಯ ಹುಡುಗ ನೋಡಲು ಸಿಕ್ಕಿದನಲ್ಲ.. ಸಂತೋಷವಾಯಿತು”  ಅನ್ನುತ್ತ ಬೆನ್ನು ತಟ್ಟಿದರು.

ಅವರೇನು ಹೇಳುತ್ತಿದ್ದಾರೆ ಅಂತ ತಲೆ ಕೆರೆದುಕೊಳ್ಳುತ್ತಲೇ ಕಿಶೋರ್ ” ಎಷ್ಟುಸಾ ರ್ಮೂರಕ್ಕೆ..?” ಎಂದ. ” ಶಾಲೆಗೆ ವಿತರಣೆಗೆ ಬಂದವು.. ರೊಕ್ಕ ಬೇಡ ತಮ್ಮಾ” ಅನ್ನುತ್ತ ಆತ ಸೈಕಲ್ಲು ಹತ್ತಿ ಹೊರಟು ಹೋದರು. ಬಾವುಟ ಹಿಡಿದು ವ್ಯಾನಿಗೆ ಹಿಂತಿರುಗಿದ ಕಿಶೋರ್. ಕಿರಣ್ಮತ್ತು ರೂಪಾ ಅದಾಗಲೇ ಬಂದು ವ್ಯಾನ್ಹತ್ತಿ ಕುಳಿತಿದ್ದರು. ಕಿಶೋರ್ಇಬ್ಬರುಮಕ್ಕಳ ಕೈಯಲ್ಲೂ ಒಂದೊಂದು ಬಾವುಟ ಕೊಟ್ಟು ಮತ್ತೊಂದನ್ನು ತಾನು ಕೈಯಲ್ಲಿ ಹಿಡಿದು ವ್ಯಾನ್ಹತ್ತಿ ಕುಳಿತ. ವ್ಯಾನು ಹೊರಟಾಗ ಮಕ್ಕಳಿಬ್ಬರೂ “ಹೇ.. ಹೇ..ಹೋ” ಅನ್ನುತ್ತಾ ಸಂತೋಷದಿಂದ ಆಚೀಚೆ ಬಾವುಟ ಹಾರಿಸಲಾರಂಭಿಸಿದರು. “ನೋಡು ಅಮ್ಮಾ… ನಿಮ್ಮ ಮಗೂಕೂಡ ಒಂದು ಬಾವುಟ ಹಿಡ್ಕೊಂಡು ಹಾರಿಸುತ್ತಿದೆ” ನಗುತ್ತ ಕಿಶೋರನನ್ನು ರೇಗಿಸಿದಳು ಅಕ್ಕ ರಜನಿ.

“ಅಂಗಡಿಯವನು ಮೂರಕ್ಕೆ ಐದು ರುಪಾಯಿ ಅಂದನೇನೋ?” ಮಗನ ಕೈಯಲ್ಲೂ ಬಾವುಟ ಕಂಡು ಗೌಡರು ಕೇಳಿದರು. “ಅಂಗಡಿಯಲ್ಲಿರಲಿಲ್ಲ.. ಆ ಶಾಲೆಯ ಮಾಸ್ತರರೊಬ್ಬರು ಶಾಲೆಯಿಂದ ತಂದುಕೊಟ್ಟಿದ್ದು. ಹಣತೆಗೆದುಕೊಳ್ಳಲಿಲ್ಲ” ಅಂದಕಿಶೋರ್.“ಧರ್ಮಕ್ಕೆ ಸಿಗುತ್ತೆ ಅಂತ ನನಗೂ ಒಂದಿರಲಿ ಅಂದಿಯೇನೋ?” ದೊಡ್ಡಣ್ಣ ನಗುತ್ತಾ ಛೇಡಿಸಿದ. “ಇಷ್ಟು ದೊಡ್ಡವ, ನಿನಗೂ ಬಾವುಟಾನ ಅಂತ ರೇಗಿಸಿದ ಅಂಗಡಿಯವ… ದೇಶ ಪ್ರೀತಿ ಇರೋರು ಯಾರೂ ಹಾರಿಸಬಹುದು ಅಂತ ನಾನೂ ಜವಾಬುಕೊಟ್ಟೆ… ಅದು ಮಾಸ್ತರರಿಗೆ ಬಹಳ ಖುಷಿಯಾಯಿತಂತೆ. ಅದಕ್ಕೇ ಅವರು ವಾಪಸ್ಸು ಶಾಲೆಗೆ ಹೋಗಿ ಮೂರು ಬಾವುಟ ತಂದು ಮಕ್ಕಳಿಗೂ ಕೊಡು, ನೀನೂ ಒಂದಿಟ್ಟುಕೋ.. ಅಂತ ನನಗೂ ಕೊಟ್ಟರು.” ಅನ್ನುತ್ತ ಬಾವುಟ ಹಾರಾಡಿಸಿದ ಕಿಶೋರ್.

ಅಪ್ಪ, ರಾಮೇಗೌಡರ ಮೊಮ್ಮಗನಿಗೆ ಏನ್ದೇಶ ಪ್ರೀತಿ ನೋಡಿ” ಅಂದ ಕಿರಣ್ಗಹಗಹಿಸಿ ನಗುತ್ತ. ಎಲ್ಲರೂ ಗೊಳ್ಳೆಂದು ನಕ್ಕರು. “ಯಾರು ರಾಮೇಗೌಡರು? ಏನುಜೋಕು?” ತಲೆಬುಡ ತಿಳಿಯದ ಹೊಸ ಸೊಸೆ ರೂಪ ಕಿರಣನ ಭುಜ ಅಲುಗಿಸಿ ಕೇಳಿದಳು. “ರಾಮೇಗೌಡರು ನಮ್ಮಜ್ಜ.. ಸ್ವಾತಂತ್ರ್ಯ ಹೋರಾಟಗಾರರು.. ಅಪ್ಪ, ಅಜ್ಜನ ಕತೆ ಹೇಳಿ… ರೂಪಾನೂ ತಿಳಿದುಕೊಳ್ಳಲಿ, ಒಳ್ಳೇ ಟೈಂಪಾಸೂ ಆಗುತ್ತೆ” ಅಂದಳು ಮಗಳು.“ಮಾವ, ತಾತಂದು ಏನ್ಕತೆ? ಹೇಳಿ, ಪ್ಲೀಸ್…” ರೂಪ ಒತ್ತಾಯಿಸಿದಳು. “ನಮ್ಮಪ್ಪಂದು ಕತೆ ಅಲ್ಲ ಕಣಮ್ಮಾ, ಕಾದಂಬರೀನೇ ಅದು. ಇಡೀ ದಿನ ಹೇಳ್ತಾ ಹೋಗಬಹುದು. ಅಷ್ಟಿದೆ” ನಗುತ್ತ ನುಡಿದರು ಗೌಡರು.

“ನಿಮ್ಮ ತೆವಲಿಗೆ ಸತ್ತು ಸ್ವರ್ಗ ಸೇರಿರೋ ಅವರನ್ನು ಯಾಕೆ ಎಳೆದು ತರ್ತಿದ್ದೀರಾ?” ಅಮ್ಮ ಆಕ್ಷೇಪ ಎತ್ತಿದರೂ ಅವರನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. “ಅಪ್ಪ, ಅವರನ್ನು ನೀವು ಬೆಂಗಳೂರಿಗೆ ಕರೆಸಿದ್ದ ಕತೆ ಹೇಳಿ, ಚೆನ್ನಾಗಿರುತ್ತೆ” ಅಂದಕಿರಣ್. “ಹೌದುಹೌದು.. ಅದನ್ನೇಹೇಳಿ, ಮಜಾಇರುತ್ತೆ” ದನಿಗೂಡಿಸಿದಳು ರಜನಿ. “ನೋಡಮ್ಮಾ.. ಆಗ ಕಿಶೋರ್ಇನ್ನೂ ಹುಟ್ಟಿರಲಿಲ್ಲ ಅಂದ್ರೆ ಸುಮಾರು ಇಪ್ಪತ್ತು ವರ್ಷಗಳ ಹಿಂದೆ. ಇವರೆಲ್ಲ ಚಿಕ್ಕ ಮಕ್ಕಳು. ನಮ್ಮಪ್ಪ, ಅಣ್ಣ ಭೋಜೇಗೌಡರು ಮತ್ತು ತಮ್ಮ ಸಿದ್ಲಿಂಗ ಮೂವರೂ ಊರಲ್ಲಿದ್ರು.  ಸಿದ್ಲಿಂಗನಿಗೆ ಎಂಪಿ ಪಾಟೀಲರ ಪರಿಚಯ ಇತ್ತು. ಅವರ ಮುಖಾಂತರ ಪ್ರತೀವರ್ಷ ಈ ಜನವರಿ ಇಪ್ಪತ್ತಾರರ ಗಣರಾಜ್ಯದ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ರಾಷ್ಟ್ರಪತಿಯವರು ಕರೆದು ಸನ್ಮಾನ ಮಾಡುವ ಪದ್ಧತಿ ಉಂಟಲ್ಲ, ಅದಕ್ಕೆ ಆವರ್ಷ ಅಪ್ಪನ ಹೆಸರನ್ನೂ ಸೇರಿಸಿದ.

ಅಪ್ಪನಿಗೆ ಆಗಲೇ ಎಪ್ಪತ್ತು ದಾಟಿತ್ತು. ಸ್ವಲ್ಪ ಅರುಳು ಮರುಳು ಬೇರೆ. ಹಾಗೆ ಅಪ್ಪನೊಂದಿಗೆ ಸಿದ್ಲಿಂಗನೂ ದೆಹಲಿಗೆ ಹೋಗಿ ತಾಮ್ರ ಪ್ರಶಸ್ತಿ ಪಡೆದುಕೊಂಡು ಬಂದಿದ್ರು. ನಾನಾಗ ರಾಮನಗರದಲ್ಲಿ ಸರ್ವೀಸಿನಲ್ಲಿದ್ದೆ. ಮನೆ ವಿಜಯನಗರದಲ್ಲಿ. ನಮ್ಮ ರಿಜಿಸ್ಟ್ರಾರ್ಒಮ್ಮೆ ನನ್ನಲ್ಲಿ ನಿಮ್ಮಪ್ಪಂಗೆ ತಾಮ್ರ ಪ್ರಶಸ್ತಿ ಸಿಕ್ಕಿತಲ್ಲ, ಅದರ ಬಲದಲ್ಲಿ ಹತ್ತು ಎಕ್ರೆ ಸರಕಾರಿ ಜಾಗಕ್ಕೆ ಅರ್ಜಿಹಾಕಿ, ಕನಿಷ್ಠ ಬೆಲೆಯಲ್ಲಿ ಮಂಜೂರಾಗುತ್ತೆ ಅಂತ ಮಾಹಿತಿಕೊಟ್ಟರು. ನಮ್ಮ ಊರಲ್ಲಿ ಹೆದ್ದಾರಿ ಪಕ್ಕದಲ್ಲಿ ಸರ್ಕಾರಿ ಜಾಗ ಕೂಡ ಇತ್ತು. ಅಣ್ಣನಿಗೆ ಈ ಮಾತು ಹೇಳಿದೆ. ಸರಿ, ಅಪ್ಪನನ್ನ ಕರ್ಕೊಂಡು ಹೋಗಿ ಅರ್ಜಿ ಹಾಕಿಸು, ಜಾಗ ಮಂಜೂರಾದ ಮೇಲೆ ಮತ್ತೆ ಊರಿಗೆ ಬರಲಿ ಅಂದ.

ಹಾಗೆ ಒಂದು ಭಾನುವಾರ ಊರಿಗೆ ಹೋಗಿ ಅಪ್ಪನನ್ನು ಬೆಂಗಳೂರಿಗೆ ಕರೆದುಕೊಂಡು ಬಂದೆ” ಇಷ್ಟು ಹೇಳಿ ನಿಲ್ಲಿಸಿ ಎರಡು ಗುಟುಕು ನೀರು ಕುಡಿದು ಪುನಃ ಆರಂಭಿಸಿದರು. “ಸರಿ, ಶುರುವಾಯಿತು ನಮ್ಮ ಅಲೆದಾಟ. ಸರ್ಕಾರಿ ಆಫೀಸುಗಳು ತಾನೆ.. ಸ್ವಲ್ಪ ಅರುಳು ಮರುಳು ಅಂದೆನಲ್ಲ, ಅದಲ್ಲದೆ ಮುಂಗೋಪಿಯೂ ಆಗಿದ್ದ ಅಪ್ಪನೆದುರು ಲಂಚದ ಮಾತೆತ್ತುವ ಹಾಗಿರಲಿಲ್ಲ.. ಒಂದು ತಿಂಗಳು ಸುತ್ತಿದ್ದೇ ಬಂತು. ಎಲ್ಲಿಯೂ ಕೆಲಸವಾಗಲಿಲ್ಲ. ಅಪ್ಪ ಒಂದಿನ “ನಾನು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಕ್ಕೆ ಸರ್ಕಾರ ಜಾಗಕೊಡುವುದು, ಇವರೇನು ಅವರಪ್ಪನ ಜಾಗ ದಾನ ಕೊಡುವುದಲ್ಲವಲ್ಲ.. ಲಂಚಕೊಟ್ಟು, ಅಕ್ರಮ ದಾರಿ ಹಿಡಿದು ಜಾಗ ಪಡೆದುಕೊಳ್ಳುವುದಾದರೆ ನನಗೆ ಅಂಥ ಜಾಗವೇ ಬೇಡ” ಅಂದುಬಿಟ್ಟರು.

ಇದು ಹೀಗೆ ನಡೆಯುವುದಿಲ್ಲ ಅಂತ ಗೊತ್ತಾಯ್ತು ನನಗೆ. ಆಮೇಲೆ ಹದಿನೈದು ದಿನ ಅಪ್ಪನನ್ನು ಮನೆಯಲ್ಲಿಯೇ ಬಿಟ್ಟು ನಾನು ಮಾತ್ರ ಓಡಾಡಿದೆ. ಆಗಿನ ಕಾಲದ ಒಂದು ಐನೂರು ಆರುನೂರು ರುಪಾಯಿ ಖರ್ಚುಮಾಡಿದೆ. ತೀರಾ ಅಗತ್ಯವಾಗಿದ್ದಲ್ಲಿಗೆ ಮಾತ್ರ ಅಪ್ಪನನ್ನೂ ಕರೆದುಕೊಂಡು ಹೋಗುತ್ತಿದ್ದೆ. ಅವರೆದುರು ಹಣದ ಮಾತು ಬರದಂತೆ ಜಾಗ್ರತೆವಹಿಸಿದೆ. ಅಂತೂ ಡಾಕ್ಯುಮೆಂಟುಗಳನ್ನೆಲ್ಲ ಸಿದ್ಧಪಡಿಸಿ ಹತ್ತು ಎಕ್ರೆ ಜಾಗಕ್ಕೆ ಅರ್ಜಿಹಾಕಿದೆವು. ಅಲ್ಲೂ ಒಂದೈನೂರು ಖರ್ಚಾಯಿತು. ಎರಡು ತಿಂಗಳು ತೆಗೆದುಕೊಳ್ಳುತ್ತೆ… ಮಂಜೂರಾತಿ ಪತ್ರ ಪಡೆದುಕೊಳ್ಳುವಾಗ ಎರಡು ಕಡೆ ಅವರು ಸಹಿ ಹಾಕಲು ಬರಬೇಕು. ಬೇಕಿದ್ರೆ ಊರಿಗೆ ಹೋಗಿ ಮತ್ತೆ ಬಂದರೂ ಸಾಕು ಅಂದರು ಸಂಬಂಧಪಟ್ಟ ಅಧಿಕಾರಿಗಳು.

ಅಪ್ಪನನ್ನು ಪುನಃ ಆಚೀಚೆ ಸುತ್ತಾಟ ಮಾಡಿಸುವುದುಬೇಡ, ಅಲ್ಲೇ ಇರಲಿ ಅಂದ ಅಣ್ಣ. ಹಾಗೆ ಅಪ್ಪ ಮೂರು ತಿಂಗಳು ನಮ್ಮ ಮನೆಯಲ್ಲೇ ಇದ್ದರು” ಅನ್ನುತ್ತ ನಿಲ್ಲಿಸಿದರು ಗೌಡರು. “ಇದೆಲ್ಲ ಪೀಠಿಕೆ ಅಷ್ಟೇ, ಅಸಲಿ ಕತೆ ಇನ್ನು ಶುರು… ಕಿಶೋರ್, ಅಪ್ಪನಿಗೆ ಕುಡಿಯಲಿಕ್ಕೆ ಸ್ವಲ್ಪ ನೀರು ಕೊಡೋ” ಅಂದಕಿರಣ್. “ಹೀಗೆ ಅಪ್ಪ ಜೂನ್, ಜುಲೈ ಮತ್ತು ಅಗಸ್ಟ್ತಿಂಗಳುಗಳಲ್ಲಿ ನಮ್ಮ ಮನೆಯಲ್ಲಿದ್ದರು. ನಡುವೆ ಅಗಸ್ಟ್ಹದಿನೈದು ಬರುತ್ತಲ್ಲಾ. ಆ ವರ್ಷ ಅಗಸ್ಟ್ಹದಿನೈದು ಸೋಮವಾರ. ಆಗ ಈಗಿನ ಹಾಗೆಲ್ಲ ಶನಿವಾರ ರಜೆ ಇಲ್ಲ. ಆದರೂ ಆದಿತ್ಯವಾರ ಮತ್ತೆ ಸೋಮವಾರ ಎರಡುದಿನ ಒಟ್ಟಿಗೆ ರಜೆ ಸಿಕ್ತಲ್ಲ, ಎಲ್ಲರೂ ಸೇರಿ ಪಿಕ್ನಿಕ್ಕಿಗೆ ಹೋಗುವುದು ಅಂತ ತೀರ್ಮಾನವಾಯಿತು.

ಅಣ್ಣಅತ್ತಿಗೆ, ಅಕ್ಕಮತ್ತುಭಾವ, ಸಿದ್ಲಿಂಗ, ಅವನ ಹೆಂಡತಿ ಮತ್ತು ಎಲ್ಲ ಮಕ್ಕಳು ಹೀಗೆ ಊರಿಂದ ಹದಿನಾಲ್ಕು ಮಂದಿ ನಮ್ಮಮ್ಮನನ್ನೂ ಸೇರಿಸ್ಕೊಂಡು ಇಪ್ಪತ್ತು ಸೀಟಿನ ವ್ಯಾನ್ಬುಕ್ಮಾಡಿ ಶನಿವಾರ ರಾತ್ರೆ ಹೊರಟು ಭಾನುವಾರ ನಸುಕಿನಲ್ಲೇ ಬೆಂಗಳೂರಿಗೆ ಬಂದಿದ್ರು. ಮತ್ತೆ ನಾವು ಐದು ಮಂದಿ- ನಾನು, ಇವಳು, ಮತ್ತೆ ಇವರು ಮೂವರು ಮಕ್ಕಳು, ಹಾಗೂ ಅಪ್ಪ ನಮ್ಮೊಂದಿಗೇ ಇದ್ರಲ್ಲ, ಎಲ್ಲರೂ ಸೇರಿ ಮೈಸೂರಿಗೆ ಹೋಗಿ ಚಾಮುಂಡೇಶ್ವರಿ, ಅರಮನೆ, ಬೃಂದಾವನ, ಮೃಗಾಲಯ ಎಲ್ಲಾ ಸುತ್ತಿ ಬರುವುದು ಅಂತ ತೀರ್ಮಾನ ಮಾಡಿದ್ದೆವು. ನಾವೆಲ್ಲ ಪಿಕ್ನಿಕ್ಕಿಗೆ ಹೋಗುವ ಸಂಭ್ರಮದಲ್ಲಿ ಹೊರಟು ನಿಂತರೂ ಅಪ್ಪ ಸುಮ್ನೆ ಕೂತಿದ್ದರು.

ನಾನು “ಏನಪ್ಪ, ಹುಶಾರಿಲ್ವಾ?” ಅಂತ ವಿಚಾರಿಸಿದೆ. “ಹಾಗೇನಿಲ್ಲ, ಮೈಸೂರು ನಾನೆಲ್ಲ ನೋಡಿದವನೇ, ಪುನಃ ಬರೋಲ್ಲ, ನೀವು ಹೋಗಿ ಬನ್ನಿ” ಅಂದರಾತ. “ಇನ್ನೂರೈವತ್ತು ಮೈಲಿ ಪ್ರಯಾಣ, ದಣಿವಾಗುತ್ತದೋ ಏನೋ, ಮನೆಯಲ್ಲೇ ಆರಾಮ ಮಾಡಲಿ” ಅಂದ ಅಣ್ಣ. “ವ್ಯಾನಲ್ಲಿ ಕುಳಿತು ನನಗೆ ಸ್ವಲ್ಪ ಕಾಲುನೋವು.. ಅವರೊಬ್ರನ್ನೇ ಇಲ್ಲಿ ಬಿಡುವುದ್ಯಾಕೆ? ನಾನೂ ಇಲ್ಲೇ ಇರ್ತೇನೆ” ಅಂದಳು ಅಮ್ಮ. ಹಾಗೆ ಅವರಿಬ್ಬರನ್ನು ಮನೆಯಲ್ಲಿ ಬಿಟ್ಟು ಭಾನುವಾರ ಬೆಳಿಗ್ಗೆ ಹತ್ತುಗಂಟೆಗೆ ನಾವು ಮೈಸೂರಿಗೆ ಗಾಡಿ ಬಿಟ್ಟೆವು. ಮನೆಮಂದಿ ಎಲ್ಲರೂ ಇದ್ರಲ್ಲ, ಪಿಕ್ನಿಕ್ಕು ವಿಹಾರ ಎಲ್ಲ ಸಖತ್ಮಜವಾಗಿತ್ತು. ಹದಿನೈದರ ಮಧ್ಯಾಹ್ನ ಊಟಮಾಡಿ ಮೈಸೂರಿಂದ ಹೊರಟು ಐದುಗಂಟೆ ಹೊತ್ತಿಗೆ ಬೆಂಗಳೂರು ತಲುಪಿದ್ದೆವು. ಮನೆಗೆ ಬರುವಾಗ ಅಮ್ಮ ಹೊರಗೆ ಗೇಟಿನ ಬಳಿಯೇ ನೆಲದಲ್ಲಿ ಕೂತುಕೊಂಡಿದ್ದಾಳೆ.

 

ಮುಖದಲ್ಲಿ ಆತಂಕದ ಕಣ್ಣೀರಿನ ಹನಿಗಳು. ನಾವು ಬಂದದ್ದೇ ತಡ, ಎದ್ದು ಕಣ್ಣೀರು ಒರೆಸಿಕೊಳ್ಳುತ್ತ “ಭೋಜಾ, ನಿಮ್ಮಪ್ಪ ಬೆಳಿಗ್ಗೆ ಹೋದವರು ಇನ್ನೂ ಬಂದಿಲ್ಲ ಕಣೋ” ಎಂದು ಹೇಳುತ್ತಾ ದುಃಖ ಕಟ್ಟೊಡೆದು ಗೋಳೋ ಅಂತ ಅತ್ತಳು. ನಮಗೆಲ್ಲ ದಿಗ್ಭ್ರಮೆ… ಇವರೆಲ್ಲಿ ಹೋದರು?ಇಲ್ಲೇ ಎಲ್ಲೋ ಹೋಗಿ ದಾರಿತಪ್ಪಿರಬೇಕು ಅಂತ ಹೇಳಿ ಹೇಗೋ ಅಮ್ಮನನ್ನು ಸಮಾಧಾನ ಪಡಿಸಿದೆವು.. ಹೆಂಗಸರು ಮಕ್ಕಳನ್ನೆಲ್ಲ ಮನೆಗೆ ಕಳುಹಿಸಿ ನಾವು ಹುಡುಕಾಟ ಆರಂಭಿಸಿದೆವು. ನನ್ನನ್ನು ಬಿಟ್ಟು ಇತರರೆಲ್ಲರಿಗೂ ಬೆಂಗಳೂರು ಹೊಸತು. ಈಗಿನ ಹಾಗೆ ಕೈಯಲ್ಲಿ ಮೊಬೈಲು ಇಲ್ಲ.. ಅರ್ಧಗಂಟೆಗೊಮ್ಮೆ ಮನೆಯ ಬಳಿಗೆ ವಾಪಸಾಗುತ್ತಿರಬೇಕು ಎಂದು ನಮ್ಮೊಳಗೇ ನಿರ್ಣಯಿಸಿಕೊಂಡು ನಾವೆಲ್ಲ ನಾಲ್ಕೂ ಕಡೆಯ ಬೀದಿಗಿಳಿದೆವು. ನಾನು ಸ್ಕೂಟರು ಹತ್ತಿಹೊರಟೆ.

ಅರ್ಧ ಗಂಟೆಗೊಮ್ಮೆ ನಾಲ್ಕು ಬಾರಿ ಹಿಂದೆ ಬಂದಿದ್ದೆವು. ಅಪ್ಪನದ್ದು ಎಲ್ಲಿಯೂ ಪತ್ತೆಯಿಲ್ಲ. ಪರಿಚಯ ಇಲ್ಲದ ಊರು.. ಎಪ್ಪತ್ತರ ಮೇಲಿನವಯಸ್ಸು. .ಬೆಳಗ್ಗೆ ಹೋದವರು ಅಂದರೆ ಪತ್ತೆಯಿಲ್ಲದೆ ಸುಮಾರು ಹತ್ತುಗಂಟೆ ಕಳೆದಿತ್ತು… ಎಲ್ಲರೂ ಗಾಬರಿಯಾಗಿದ್ದರು. ನಾವು ಪೋಲೀಸರಲ್ಲಿಗೆ ಹೋಗುವಾ ಎಂದ ನಮ್ಮಣ್ಣ. ನಾನೂ ಅವನೂ ವಿಜಯನಗರ ಪೋಲೀಸು ಠಾಣೆಗೆ ಹೋದೆವು. ಅಲ್ಲಿ ಎಸ್ ಐ “ವಯಸ್ಸಾದವರನ್ನು ಗುರುತು ಪರಿಚಯ ಇಲ್ಲದ ಇಂತಹ ಪಟ್ಟಣದಲ್ಲಿ ಬಿಟ್ಟು ನೀವು ಮಕ್ಕಳೆಲ್ಲ ವಿಹಾರಕ್ಕೆ ಹೋಗೋದು ಅಂದರೆ ನೀವೇನು ಅನ್ನ ತಿನ್ನೋಜಾತಿಯಾ ಹುಲ್ಲು ತಿನ್ನೋ ಜಾತಿಯಾ?ಅಂತ ನಮಗೆ ವಾಚಾಮಗೋಚರವಾಗಿ ಬೈದು, ಸಂಬಂಧಿಕರಲ್ಲಿ ವಿಚಾರಿಸಿದ್ರಾ? ಅವರ ದೋಸ್ತಿಗಳ್ಯಾರಾದ್ರೂ ಇದ್ದಾರ?ಅಂತೆಲ್ಲ ವಿಚಾರಿಸಿದ.

ಜೀವನದಲ್ಲಿ ಜಿಗುಪ್ಸೆ ಇತ್ತಾ ಅನ್ನುವ ಅನುಮಾನ… ನಿನ್ನೆ ಬೆಳಿಗ್ಗೆ ನಿಮ್ಮೊಂದಿಗೆ ಬರುವುದಿಲ್ಲ ಅನ್ನುವಾಗಲೇ ನೀವು ತಿಳಿದುಕೊಳ್ಳಬೇಕಾಗಿತ್ತು, ಇದು ನೀವು ಹೇಳಿದಷ್ಟು ಸುಲಭ ಕೇಸಲ್ಲ.. ಇಷ್ಟು ದಿನ ಮನೆಯಲ್ಲೇ ಇದ್ದ ಸ್ವಾತಂತ್ರ್ಯ ಸೇನಾನಿ ಹೆಂಡತಿಗೂ ಏನೂ ಹೇಳದೆ ಸ್ವಾತಂತ್ರ್ಯ ದಿನದಂದು ಮನೆಬಿಟ್ಟು ಹೋಗಿದ್ದಾರೆ ಎಂದರೆ ಏನೋ ಯೋಚಿಸಿಯೇ ಅವರು ಮನೆಬಿಟ್ಟು ಹೋದದ್ದು.. ಆದ್ರೂ ನಿಮ್ಮ ಸಮಾಧಾನಕ್ಕೆ ಬೇರೆ ಪೋಲೀಸ್ಸ್ಟೇಶನ್ನುಗಳಲ್ಲಿ ಸೂಚನೆ ಕೊಡುತ್ತೇನೆ” ಅಂತಲೂ ಆತ ಸೇರಿಸಿದಾಗ ನನಗೆ ರೇಗಿತು. “ನಾಲ್ಕು ಪೋಲೀಸರನ್ನು ಕಳುಹಿಸಿ ಹುಡುಕಿಸಿ ಅಥವಾ ನಾಲ್ಕು ಪೊಲೀಸ್ಸ್ಟೇಶನ್ನುಗಳನ್ನು ಸಂಪರ್ಕಿಸಿ ಸಾರ್” ಎಂದು ವಿನಂತಿಸಿ ನನ್ನ ವಿಳಾಸ ಕೊಟ್ಟು, ಮನೇಲಿ ಟೆಲಿಫೋನ್ ಇರಲಿಲ್ಲ.. ಪಕ್ಕದ ಮನೆಯ ಟೆಲಿಪೋನ್ನಂಬ್ರ ಕೊಟ್ಟು ಅಲ್ಲಿಂದ ಕಾಲ್ಕಿತ್ತೆವು” ಅನ್ನುತ್ತಾ ನಿಲ್ಲಿಸಿ ಹೆಂಡತಿ ಕೊಟ್ಟ ಜೂಸು ಕುಡಿದರು ಗೌಡರು.

ವ್ಯಾನಿನ ಕುಲುಕಾಟಕ್ಕೆ ಮಕ್ಕಳಿಬ್ಬರೂ ನಿದ್ದೆಗೆ ಜಾರಿದ್ದರು. ಆದರೂ ಬಾವುಟಗಳು ಕೈಯಲ್ಲಿ ಭದ್ರವಾಗಿದ್ದವು. ಕಿಶೋರ್ತನ್ನ ಬಾವುಟವನ್ನು ತನ್ನ ಕ್ಯಾಪಿನ ಸಂದಿಗೆ ಸಿಕ್ಕಿಸಿಕೊಂಡು ಮೊಬೈಲಿನಲ್ಲಿ ಮ್ಯೂಸಿಕ್ಹಾಕಿ ಕಿವಿಗೆ ಸ್ಪೀಕರ್ಸಿಕ್ಕಿಸಿಕೊಂಡು ಬಾಯಿ ಕೈ ಕಾಲುಗಳನ್ನೆಲ್ಲ ಲಯಕ್ಕೆ ಬಳಸುತ್ತಾ ಮ್ಯೂಸಿಕ್ಕಿನಲ್ಲೇ ತಲ್ಲೀನನಾಗಿ ಹೋಗಿದ್ದ. ಸುಮತಿಯಮ್ಮ ಒಬ್ಬರಾದ ಮೇಲೆ ಒಬ್ಬರಿಗೆ ಜೂಸು ವಿತರಿಸುತ್ತಿದ್ದರು. “ಆಮೇಲೆ?” ಅಂದಳು ರೂಪ.“ಆಮೇಲೆ ಅಣ್ಣನಿಗೆ ಏನೋ ಹೊಳೆಯಿತು. ಅಪ್ಪ ಯಾವಾಗಲೂ ಊರಲ್ಲಿ ಸ್ವಾತಂತ್ರ್ಯದಿನದಂದು ಧ್ವಜವಂದನೆ, ಸಾಂಸ್ಕೃತಿಕ ಸಭೆ ಸಮಾರಂಭಗಳಲ್ಲಿ ಮುಳುಗಿ ಹೋಗುವವರು. ಇವತ್ತೂ ಅದನ್ನೇ ಹುಡುಕಿ ಎಲ್ಲೋ ಹೋಗಿರಬೇಕು ಅಂದ. ಸರಿ, ಸಭೆ ಸಮಾರಂಭಗಳನ್ನು ಅರಸುತ್ತಾ ಸ್ಕೂಲುಗಳ ಬಳಿ, ಧ್ವಜವಂದನೆ ಸಭೆಗಳು ನಡೆದ ಸ್ಥಳಗಳ ಬಳಿಯೆಲ್ಲ ಹುಡುಕಾಡಿದೆವು. ಏನೂ ಉಪಯೋಗವಾಗಲಿಲ್ಲ.

“ರವಿ, ಅಪ್ಪ ಬೆಳಿಗ್ಗೆ ಹೋದದ್ದು. ನಾಶ್ತಾ ಮಾಡಿದ್ದರೋ ಇಲ್ಲವೋ, ಮಧ್ಯಾಹ್ನ ಊಟವೂ ಇಲ್ಲ… ಈಗ ಗಂಟೆ ಆರಾಗುತ್ತಾಬಂತು.. ಹಸಿವಿನಿಂದ ಕಂಗೆಟ್ಟು ಮತಿತಪ್ಪಿ ಬಿದ್ದಿದ್ದರೆ ನೋಡಿ ಯಾರಾದ್ರೂ ಆಸ್ಪತ್ರೆಗೆ ಸೇರಿಸಿದ್ದಾರೋ ಏನೋ” ಅಂದ ಅಣ್ಣ.. ತಲೆಯಲ್ಲಿ ಬಂದ ಯೋಚನೆಗಳನ್ನೆಲ್ಲ ಒಪ್ಪಿಕೊಳ್ಳುವ ಪರಿಸ್ಥಿತಿಯಲ್ಲಿದ್ದ ನಾವು ಸುತ್ತಲಿನ ನಾಲ್ಕಾರು ಆಸ್ಪತ್ರೆಗಳಲ್ಲಿ ಹೋಗಿ ವಿಚಾರಿಸಿದೆವು. ಎಲ್ಲೂ ಅಪ್ಪನ ಪತ್ತೆ ಇಲ್ಲ.. ರಾತ್ರಿ ಒಂಭತ್ತೂವರೆಯವರೆಗೆ ಹುಡುಕಿ ನಿರಾಶರಾಗಿ ಭಾರವಾದ ಹೆಜ್ಜೆಗಳೊಂದಿಗೆ ಮನೆಗೆ ಬಂದೆವು. ಎಲ್ಲರ ಮನದಲ್ಲೂ ದುಗುಡ. ಮಕ್ಕಳು ಬಿಟ್ಟು ಯಾರೂ ಊಟ ಸಹಿತ ಮಾಡಲಿಲ್ಲ. ಅಣ್ಣ ತಲೆಗೆ ಕೈಯಿಟ್ಟು ಫೋನಿನನಿ ರೀಕ್ಷೆಯಲ್ಲಿ ಬಾಗಿಲ ಬಳಿಯೇಕು ಳಿತಿದ್ದ. ಕೊನೆಗೂ ಸುಮಾರು ಹತ್ತು ಗಂಟೆಗೆ ವಿಜಯನಗರ ಪೋಲೀಸ್ಸ್ಟೇಶನ್ನಿನಿಂದ ನೆರೆಮನೆಗೆ ಪೋನ್ಬಂತು. ರವಿಶಂಕರರ ಅಪ್ಪ ಇಲ್ಲಿದ್ದಾರೆ ಅಂತ ಹೇಳಿ ಅಂದ್ರಂತೆ.

ನಾವೆಲ್ಲ ನೆಮ್ಮದಿಯ ನಿಟ್ಟುಸಿರು ಬಿಟ್ಟು ವ್ಯಾನಿನಲ್ಲಿ ಇಡೀ ಕುಟುಂಬ ಹೊಗಿ ಅವರನ್ನು ಕರೆದು ತಂದೆವು. ಅಪ್ಪನ ಮುಖ ನೋಡಬೇಕಿತ್ತು, ಕಂಗೆಟ್ಟು ಕಪ್ಪಿಟ್ಟು ಹೋಗಿತ್ತು” ಗೌಡರು ನಗುತ್ತಾ ಮಾತು ನಿಲ್ಲಿಸಿದರು. “ಅವರು ಹೋದದ್ದೆಲ್ಲಿಗೆ?” ರೂಪ ಪ್ರಶ್ನಿಸಿದಳು. “ಅಗಸ್ಟ್ಹದಿನೈದು ತಾನೆ… ಹಿಂದಿನ ದಿನವೇ ಸಂಜೆ ಬಟ್ಟೆಗೆ ಇಸ್ತ್ರಿ ಹಾಕಿಸಿಟ್ಟಿದ್ದರಂತೆ. ಬೆಳಗ್ಗೆದ್ದು ಈಗ ಬರುತ್ತೇನೆ ಎಂದಷ್ಟೇ ಹೇಳಿ ಇವರು ಧ್ವಜವಂದನೆಗೆ ಹೊರಟದ್ದು. ಎದುರಿಗೆ ಸಿಕ್ಕ ಆಟೋದವನೊಬ್ಬ ಸಬ್ಜೈಲಿನಲ್ಲಿ ದೊಡ್ಡ ಕಾರ್ಯಕ್ರಮ ಇದೆ ಸಾರ್ಅಂದಾಗ ಆಟೋ ಹತ್ತಿ ಇವರು ಸಬ್ಜೈಲಿಗೆ ಹೋದದ್ದು. ಅಲ್ಲಿ ಧ್ವಜವಂದನೆ, ಭಾಷಣ, ಪೋಲೀಸು ಮತ್ತು ಕೈದಿಗಳೊಡನೆ ಉಪಾಹಾರ ಅಂತೆಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಎಲ್ಲ ಮುಗಿದ ಮೇಲೆ ಜೈಲಿನ ಅಧಿಕಾರಿಯೊಬ್ಬರು ನಿಮ್ಮನ್ನೆಲ್ಲಿ ಬಿಡಬೇಕುಸಾರ್ಅಂತ ಕೇಳಿದ್ರಂತೆ.

ಇವರು ವಿಜಯನಗರ ಹೇಳಿದ್ದು ಅವರಿಗೆ ಜಯನಗರ ಅಂತ ಕೇಳಿಸಿತ್ತು. ಪೋಲೀಸ್ಜೀಪಿನ ಡ್ರೈವರ್ಇವರನ್ನು ಜಯನಗರದಲ್ಲಿ ಬಿಟ್ಟು ಹೋಗಿದ್ದ. ಮನೆ ಇಲ್ಲೇ ಹತ್ತಿರ ಇದೆ ಎಂದು ನಂಬಿದ್ದ ಅಪ್ಪ ಅಲ್ಲೇ ಸುತ್ತಾಡುತ್ತಿದ್ದರಂತೆ” ಗೌಡರು ನಕ್ಕು ನುಡಿದರು. “ಪಾಪ.. ಮತ್ತೆ?” ರೂಪ ಕೇಳಿದಳು. “ಕೊನೆಗೊಬ್ಬರು ನಿವೃತ್ತ ಮಿಲಿಟರಿ ಅಧಿಕಾರಿ ಸಿಕ್ಕಿದರು. ಅವರು ತಮ್ಮ ಕಾರಿನಲ್ಲಿ ಇವರನ್ನು ಕುಳ್ಳಿರಿಸಿ ಮಧ್ಯಾಹ್ನದವರೆಗೆ ಸುತ್ತಾಡಿಸಿದರು. ಏನೂ ಪ್ರಯೋಜನವಾಗದೇ ಇದ್ದಾಗ ಅಪ್ಪನನ್ನು ಊಟಕ್ಕೆ ತಮ್ಮ ಮನೆಗೆ ಕರೆದೊಯ್ದರು. ಸುಸ್ತಾಗಿದ್ದ ಅಪ್ಪ ಊಟ ಮಾಡಿದ ಮೇಲೆ ಅಲ್ಲೆ ಮಲಗಿದರು. ಐದುಗಂಟೆಗೆ ಎದ್ದು ಚಹಾ ಕುಡಿದು ಮತ್ತೂ ಎರಡು ಗಂಟೆ ಜಯನಗರ ಸುತ್ತಿ ಮನೆ ಹುಡುಕಿದರು.

ವಿಜಯನಗರದ ಮನೆ ಜಯನಗರದಲ್ಲಿ ಸಿಗುತ್ತದೆಯೇ? ಮಗನ ಹೆಸರು ರವಿಶಂಕರಗೌಡ, ರೆವೆನ್ಯೂ ಇಲಾಖೆ ಅಂತ ಅಪ್ಪ ಹೇಳಿದ್ದನ್ನು ಕೇಳಿ ಆಪುಣ್ಯಾತ್ಮ ಇವರನ್ನು ತಮ್ಮ ಪರಿಚಯದ ರೆವೆನ್ಯೂ ಇಲಾಖೆಯ ಅಧಿಕಾರಿಯೊಬ್ಬರ ಬಳಿಗೆ ಕರೆದೊಯ್ದರು. ಅಲ್ಲಿ ಪುಣ್ಯಕ್ಕೆ ಅಪ್ಪ  “ನನ್ನ ಮಗ ರವಿಶಂಕರಗೌಡ, ಅವನಿಗೆ ರಾಮನಗರದಲ್ಲಿ ಕೆಲಸ, ವಿಜಯನಗರದಲ್ಲಿ ಮನೆ” ಅಂತ ಸ್ಪಷ್ಟವಾಗಿ ಹೇಳಿದಾಗಲೇ ಇವರನ್ನು ಸುತ್ತಾಡಿಸಿದವರಿಗೆ ತಪ್ಪಿನ ಅರಿವಾದದ್ದು. ಕೊನೆಗೆ ಆಗಲೇ ಒಂಭತ್ತು ಗಂಟೆಯಾದ್ದರಿಂದ ನೇರವಾಗಿ ವಿಜಯನಗರ ಪೊಲೀಸು ಸ್ಟೇಶನ್ನಿಗೆ ತಲುಪಿಸಿದ್ದರಂತೆ” ವಿವರಿಸಿದರು ಗೌಡರು. “ಮನೆಗೆ ಬರುವಾಗ ನಾವೆಲ್ಲ ಅಪ್ಪನನ್ನು ಗೇಲಿ ಮಾಡಿದ್ದೇ ಮಾಡಿದ್ದು.

“ಮಿಲಿಟರಿ ಊಟ ಚೆನ್ನಾಗಿತ್ತಾ?” ಅಂತ ಸಿದ್ಲಿಂಗು, “ಬ್ರಿಟಿಷರ ಕಾಲಕ್ಕಿಂತ ಈಗ ಜೈಲಿನಲ್ಲಿ ವ್ಯವಸ್ಥೆ ಎಲ್ಲ ಚೆನ್ನಾಗಿದೆಯಾ?” ಅಂತ ಅಕ್ಕ, “ಜಯನಗರ ಒಳ್ಳೇ ಬಡಾವಣೆಯಂತೆ ಒಳ್ಳೊಳ್ಳೇ ಮನೆಗಳಂತೆ, ಹೌದಾ ಮಾವ?” ಅಂತಭಾವ.. ಸುತ್ತಾಡುವಾಗ ಧ್ವಜ ಕಂಡಲ್ಲೆಲ್ಲಾ ಸೆಲ್ಯೂಟ್ಹೊಡೆದ್ರಾ ಹೇಗೆ? ಅಂತ ನಾನು… ಎಲ್ಲರೂ ನಗೆಯಾಡಿದರೂ ಅಪ್ಪ ತುಟಿಬಿಚ್ಚಲಿಲ್ಲ. ಆಮೇಲೆ ಅಷ್ಟೂ ಹೊತ್ತು ಸುಮ್ಮನಿದ್ದ ಅಣ್ಣನೂ ಅಪ್ಪನನ್ನು ತರಾಟೆಗೆ ತೆಗೆದುಕೊಂಡ. “ಇಷ್ಟು ವಯಸ್ಸಾಯಿತು, ಗೊತ್ತಿಲ್ಲದ ಪಟ್ಟಣ. ನಾವು ಐದು ಗಂಟೆಯಿಂದ ಹುಡುಕುತ್ತಿದ್ದೇವೆ. ಅಮ್ಮ ಬೆಳಗ್ಗೆಯಿಂದ ಹೆದರಿಕೊಂಡಿದ್ದಾಳೆ. ಒಂದು ವರ್ಷ ಧ್ವಜ ವಂದನೆ ಮಾಡದಿದ್ದರೆ ನಿಮ್ಮ ಗಂಟೇನು ಬಿದ್ದು ಹೋಗುತ್ತಿತ್ತು?” ಅಂದ.

ಇಷ್ಟೂ ಹೊತ್ತು ಸುಮ್ಮನಿದ್ದ ಅಪ್ಪ ಅಣ್ಣನ ಈ ಮಾತು ಕೇಳುತ್ತಲೇ ಕೆರಳಿ ರೌದ್ರಾವತಾರ ತಾಳಿದರು. “ಧ್ವಜವಂದನೆಯ ಬಗೆಗೆ ನಿಮಗೇನು ಗೊತ್ತೋ?… ಮೊದಲು ಸ್ವಾತಂತ್ರ್ಯದ ಬಗೆಗೆ ನಿಮಗೆಲ್ಲ ಏನು ಗೊತ್ತು ಅದುಹೇಳು. ನಮ್ಮ ದೇಶ, ನಮಗೆ ನಮ್ಮ ಮಕ್ಕಳು ಮೊಮ್ಮಕ್ಕಳಿಗೆ ಬೇಕು ಅಂತ ಜೀವದ ಹಂಗು ತೊರೆದು ಹೋರಾಟ ಮಾಡಿದ್ದು ನಾವು. ಜೈಲಿಗೆ ಹೋದದ್ದು ನಾವು… ಗಳಿಸಿಕೊಳ್ಳಲು ನೀವೇನೂ ಮಾಡಲಿಲ್ಲ, ಉಳಿಸಿಕೊಳ್ಳಲು ಏನಾದ್ರೂ ಮಾಡಿದ್ದೀರಾ? ಅದೂ ಇಲ್ಲ. ಹತ್ತೆಕ್ರೆ ಜಾಗ ಸಿಗುತ್ತದೆ ಅಂದಾಗ ನೀವು ಹೇಗೆ ಚುರುಕಾದ್ರಿ? ಇವತ್ತಿನ ಪವಿತ್ರ ದಿನದಂದು ಎಲ್ಲಾದ್ರೂ ಹಾರುತ್ತಿದ್ದ ಬಾವುಟಕ್ಕೆ ಒಂದು ಸೆಲ್ಯೂಟ್ಹೊಡೆದ್ರಾ? ಇಲ್ಲ. ವಿಹಾರಕ್ಕೆ ಹೊರಟದ್ದು ನೀವು..

ಮಕ್ಕಳಿಗೆ ಹೀಗಾ ಮಾರ್ಗದರ್ಶನ ಮಾಡೋದು?ಪ್ರತೀವರ್ಷ ಈ ದಿನ ಭಾರತ ಮಾತೆಯ ಧ್ವಜದೆದುರು ನಿಂತು ದೇಶಕ್ಕಾಗಿ ನಮ್ಮನ್ನು ನಾವು ಅರ್ಪಿಸಿಕೊಳ್ಳಬೇಕು. ಇದನ್ನು ಮಕ್ಕಳು ತಿಳಿದುಕೊಳ್ಳುವುದು ಯಾವಾಗ?ಎರಡು ದಿವಸ ಒಟ್ಟಿಗೆ ರಜೆ ಸಿಕ್ಕಿತು ಅಂತ ತಿರುಗಾಟಕ್ಕೆ ಹೊರಟುಬಿಟ್ಟು ಈಗ ನನ್ನ ಮೇಲೆ ಎಗರಾಡುತ್ತಿದ್ದೀರಾ?” ಅಂದಾಗ ಅಪ್ಪನ ಕೋಪದ ರುಚಿ ಗೊತ್ತಿದ್ದ ನಾವೆಲ್ಲ ತೆಪ್ಪಗೆ ಬಾಯಿ ಮುಚ್ಚಿಕೊಂಡಿದ್ದೆವು” ಅನ್ನುತ್ತ ಗೌಡರು ಕತೆ ಮುಗಿಸಿದರು. “ಅಜ್ಜ ಯಾವಾಗಲೂ ತಾವೇನೋ ಮಹತ್ಕಾರ್ಯ ಮಾಡಿದ್ದೇವೆ ಅನ್ನುವ ಹಾಗೆಯೇ ಮಾತಾಡುತ್ತಿದ್ದರು” ಅಂದನಿತಿನ್. “ಆ ಇಡೀ ಜನರೇಶನ್ನೇ ಹಾಗೆ.

ಎಲ್ಲರೂ ಸ್ವಾತಂತ್ರ್ಯಅಂತ ಏನೋ ದೊಡ್ದ ಆಸ್ತಿ ಮಾಡಿಕೊಟ್ಟವರ ಹಾಗೆ ಮಾತಾಡುವುದನ್ನು ನಾನೂ ಕಂಡಿದ್ದೇನೆ” ಅಂದ ಪ್ರವೀಣ್. “ಆಮೇಲೆ.. ಆ ಹತ್ತೆಕ್ರೆ ಜಾಗ ಸಿಕ್ಕಿತಾ?” ರೂಪ ಪ್ರಶ್ನಿಸಿದಳು. “ಸಿಕ್ಕಿತು. ಆದರೆ ಅದು ಇನ್ನೊಂದು ಕತೆ” ಅಂದರುಗೌಡರು. “ಅದೇನು?” ಅಂದಳು ರೂಪ.“ಅದೇನುಅಂದ್ರೆ… ಅಜ್ಜನಿಗೆ ಹತ್ತೆಕ್ರೆ ಜಾಗ ಹತ್ತು ಸಾವಿರಕ್ಕೆ ಸಿಕ್ಕಿತ್ತು. ಅಪ್ಪ ಸಾಲ ಮಾಡಿ ಹಣಕಟ್ಟಿದ್ದು. ಆದರೆ ಹಣ ಹಾಕಿದ ಅಪ್ಪನಿಗಾಗಲೀ, ನಮಗಾಗಲೀ ಆ ಜಾಗದಕ್ಕಲಿಲ್ಲ ಅಷ್ಟೆ” ಅಂದ ಕಿರಣ್.“ಅದರ ಕತೆ ನಾನು ಹೇಳ್ತೇನೆ” ಅಂದ ನಿತಿನ್. “ಜಾಗ ಕೈಗೆ ಸಿಕ್ಕಿ ಒಂದೈದಾರು ವರ್ಷವಾಗಿತ್ತೋ ಏನೋ. ಸ್ವಲ್ಪ ಜಾಗದಲ್ಲಿ ಐದು ಕೊಠಡಿಗಳ ಕಟ್ಟಡ ಕಟ್ಟಿಕೊಟ್ರೆ ಊರಿಗೊಂದು ಪ್ರಾಥಮಿಕ ಶಾಲೆ ಮಂಜೂರು ಮಾಡಿಕೊಡುತ್ತೇನೆ ಅಂದ್ರಂತೆ ಎಮ್ಮೆಲ್ಲೆ.

ಊರವರೆಲ್ಲ ಬಂದು ಅಜ್ಜನಿಗೆ ಗಾಳಿಹಾಕಿ ಉಬ್ಬಿಸಿದರು. ಅಜ್ಜ “ನನಗೆ ಸರಕಾರ ಕೊಟ್ಟ ಜಾಗ ಇದೆಯಲ್ಲ, ಅಲ್ಲಿಕಟ್ಟಿಕೊಳ್ಳಿ” ಅಂದುಬಿಟ್ಟರು. ಅಜ್ಜನ ಅಧ್ಯಕ್ಷತೆಯಲ್ಲಿ ಶಾಲೆಗೊಂದು ಸಮಿತಿ ರೂಪಿತವಾಯಿತು. ದೊಡ್ಡಪ್ಪ ಅಪ್ಪನಿಗೆ ಸುದ್ದಿ ಮುಟ್ಟಿಸಿದರು. ಅಪ್ಪ ಊರಿಗೆ ಹೋಗಿ ಅಜ್ಜನನ್ನು ತರಾಟೆಗೆ ತೆಗೆದುಕೊಂಡರು. ಅಜ್ಜ ಆಗಲೇ ದಾನಪತ್ರ ಮಾಡಿಸಿಟ್ಟಿದ್ದರಂತೆ. ಅಪ್ಪ ಅದನ್ನು ಹರಿದು ಹಾಕಿದಾಗ ಅಜ್ಜ ಮನೆಯಲ್ಲೇ ಉಪವಾಸ ಸತ್ಯಾಗ್ರಹ ಕೂತರು. ಕೊನೆಗೆ ದೊಡ್ಡಪ್ಪ ಮಧ್ಯಸ್ತಿಕೆ ಮಾಡಿ ಸಮಿತಿಯವರನ್ನೂ ಒಪ್ಪಿಸಿ ಜಾಗಕ್ಕೆ ವರ್ಷಕ್ಕೆ ಒಂದು ಸಾವಿರ ರುಪಾಯಿ ಖಾಯಂ ಬಾಡಿಗೆ ಅಂತ ಬಾಡಿಗೆ ಪತ್ರ ಮಾಡಿಸಿ ಕೊಟ್ಟರು. ಆಗಲೇ ಅಲ್ಲಿ ಎಕ್ರೆಗೆ ಎರಡು ಲಕ್ಷ ರೇಟಿತ್ತು.

ಈಗ ಎಕ್ರೆಗೆ ಒಂದು ಕೋಟಿ. ಇವತ್ತಿಗೂ ಅಪ್ಪನಿಗೆ ಅದೇ ಸಾವಿರ ರುಪಾಯಿ ಬಾಡಿಗೆ ಬರುತ್ತಿದೆ. ಹೋದ ವರ್ಷನೂ ದೊಡ್ದಪ್ಪ ಕೊಟ್ಟಿದ್ರು ಅಲ್ವಾ ಅಪ್ಪ?” ಅಂದ ನಿತಿನ್. ಗೌಡರು ಸುಮ್ಮನಿದ್ದರು. “ಹತ್ತುಕೋಟಿಯ ಆಸ್ತಿಗೆ ಅಪ್ಪನಿಗೆ ವರ್ಷಕ್ಕೆ ಒಂದು ಸಾವಿರ ಬಾಡಿಗೆ ಬರುತ್ತೆ. ನಾನು ಒಂದು ಕೋಟಿಯ ನನ್ನ ಫ್ಲ್ಯಾಟಿಗೆ ತಿಂಗಳಿಗೆ ಮೂವತ್ತು ಸಾವಿರ ಬಾಡಿಗೆ ಕಟ್ಟುತ್ತಿದ್ದೇನೆ” ಮೂದಲಿಸಿದ ಕಿರಣ್. ಗೌಡರು ಮತ್ತೂ ಸುಮ್ಮನಿದ್ದರು. “ಮಾವ, ಇದಕ್ಕೆ ಎನೂ ಪರಿಹಾರ ಯೋಚಿಸಲಿಲ್ಲವಾ?” ಕೇಳಿದ ಪ್ರವೀಣ್. “ಅಜ್ಜ ಇರುವಾಗ ನಾವೇನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಅವರು ತೀರಿಹೋದ ಬಳಿಕ ಶಾಲೆಯ ಸಮಿತಿಗೆ ದೊಡ್ಡಪ್ಪ ಅಧ್ಯಕ್ಷರಾಗಿದ್ದಾರೆ.

ದೊಡ್ಡಪ್ಪನಲ್ಲಿ ಹಲವಾರುಬಾರಿ ಹೇಳಿದೆವು. ಊರಲ್ಲೆಲ್ಲ ರಾಮೇಗೌಡರ ಶಾಲೆ ಅಂತಲೇ ಹೆಸರಿದೆ, ಬಡವರ ಮಕ್ಕಳು ಕಲಿಯುತ್ತಿದ್ದಾರೆ, ಹೀಗಿರುವಾಗ ನಾವಾಗಿ ಬಾಡಿಗೆ ಜಾಸ್ತಿ ಮಾಡುವ ಹಾಗಿಲ್ಲ, ಬಾಡಿಗೆ ಎಬ್ಬಿಸಲೂ ಆಗುವುದಿಲ್ಲ.  ಈಗೆಲ್ಲ ಇಲ್ಲಿಯೂ ಇಂಗ್ಲಿಷ್ಮೀಡಿಯಂಸ್ಕೂಲುಗಳು ಬಂದಿವೆ. ಅನುಕೂಲವಂತರೆಲ್ಲ ಮಕ್ಕಳನ್ನು ಇಂಗ್ಲಿಷ್ಸ್ಕೂಲಿಗೇ ಕಳುಹಿಸುತ್ತಿದ್ದಾರೆ. ಆದ್ದರಿಂದ ನಮ್ಮಲ್ಲಿ ಮಕ್ಕಳ ಸಂಖ್ಯೆ ಮುನ್ನೂರರಿಂದ ನೂರಕ್ಕಿಳಿದಿದೆ. ಮುಂದೆ ಮಕ್ಕಳಿಲ್ಲದೆ ಶಾಲೆ ಮುಚ್ಚಿ ಹೋದರೆ ನಮ್ಮ ಜಾಗ ಹಿಂದೆ ಸಿಗಬಹುದು ಅನ್ನುತ್ತಿದ್ದಾರೆ ದೊಡ್ಡಪ್ಪ” ಅಂದ ನಿತಿನ್. “ಮಾವ, ಆಗದಿಂದ ಆಲೋಚಿಸುತ್ತಿದ್ದೇನೆ… ಈಗ ಒಳ್ಳೇ ಅವಕಾಶ ಇದೆ. ಮಕ್ಕಳಿಲ್ಲದ ಕನ್ನಡ ಮೀಡಿಯಂ ಶಾಲೆಗಳನ್ನು ಸರಕಾರ ಮುಚ್ಚುತ್ತಿದೆ. ಈಗಿರುವ ನೂರುಮಕ್ಕಳನ್ನು ಶಾಲೆ ಬಿಡಿಸಿದರೆ ಮಕ್ಕಳಿಲ್ಲ ಅಂತ ಶಾಲೆ ಮುಚ್ಚಿಸಲು ಬರುತ್ತೆ. ಜಾಗ ಕೈಗೆ ಸಿಗುತ್ತೆ” ಅಂದ ಪ್ರವೀಣ್.

‘ಅದೆಲ್ಲ ಸುಲಭ ಇಲ್ಲಕಣೋ, ಪ್ರಜಾಪ್ರಭುತ್ವ ನಮ್ಮದು. ಬಡವರ ಶಾಲೆ ಮುಚ್ಚಬಾರದು ಅಂತ ಯಾರಾದ್ರೂ ಎದ್ದು ಬರ್ತಾರೆ. ಚಳುವಳಿ ಮಾಡ್ತಾರೆ. ರಾಜಕೀಯ ಮಾಡ್ತಾರೆ.. ದುಡ್ದುಕೀಳ್ತಾರೆ.. ಜಾಗ ಕೈಗೆ ಸಿಗುತ್ತೆ ಅನ್ನುವ ಭರವಸೆ ಇಲ್ಲ, ವೃಥಾ ಹಣ ಖರ್ಚು.. ಹೆಸರೂ ಹಾಳಾಗುತ್ತೆ” ಅಂದರು ಗೌಡರು. “ನನ್ನ ಪ್ರಕಾರ ಇದು ಸಾಧ್ಯ. ಟ್ರೈ ಮಾಡೋಣ.. ನಾನು ರಜೆ ಹಾಕ್ತೀನಿ ಬೇಕಿದ್ರೆ” ಅಂದ ಕಿರಣ್. “ಸರಿ ಹಾಗಾದ್ರೆ.. ಮಾಡಿ. ನಾನು ಬೇಡ ಅಂತೀನೇನೋ?ಸಿಕ್ಕಿದ್ರೆ ನಾಳೆ ನಿಮಗೇ ತಾನೇ..!” ಅಂದರು ಗೌಡರು.“ಒಳ್ಳೇ ಐಡಿಯಾ ಇದೆ. ಬರುವ ವರ್ಷ ಶಾಲೆ ಆರಂಭವಾಗುವ ಮುನ್ನ ಗುಟ್ಟಾಗಿ ಒಂದೊಂದು ಮಗುವಿನ ಹೆತ್ತವರಿಗೂ ಹತ್ತು ಸಾವಿರ ಕೊಟ್ಟು ಎಲ್ಲರನ್ನೂ ಇಂಗ್ಲಿಷ್ಮೀಡಿಯಮ್ಸ್ಕೂಲುಗಳಿಗೆ ಕಳಿಸುವಾ.. ಹತ್ತು ಲಕ್ಷ ಖರ್ಚಾಗುತ್ತೆ. ಹೋಗಲಿ” ಅಂದ ಕಿರಣ್.

“ಮೂವರು ಅಧ್ಯಾಪಕರಿಗೂ ಎರಡೆರಡು ಲಕ್ಷಕೊಟ್ಟರೆ ಅವರೂ ವೊಲಂಟರಿ ರಿಟೈರ್ಮೆಂಟೋ, ಟ್ರಾನ್ಸ್ಫರೋ ತೆಗೆದುಕೊಂಡಾರು. ಆಗ ಮಕ್ಕಳೂ ಇಲ್ಲ, ಅಧ್ಯಾಪಕರೂ ಇಲ್ಲ ಎಂದಾಗುತ್ತದೆ. ಆಮೇಲೆ ದೊಡ್ಡಪ್ಪ ಶಾಲೆಯ ಸಮಿತಿಯಲ್ಲಿ ಶಾಲೆ ಮುಚ್ಚುವ ನಿರ್ಣಯ ಮಾಡಿದರಾಯಿತು. ಶಿಕ್ಷಣ ಇಲಾಖೆಯಲ್ಲಿ ಅಲ್ಲಲ್ಲಿ ತಿನ್ನಿಸಬೇಕಾದೀತು. ನಮ್ಮ ಎಮ್ಮೆಲ್ಲೆ ಮತ್ತು ಮಂತ್ರಿಗಳನ್ನೂ ನೋಡಿಕೊಳ್ಳಬೇಕಾದೀತು… ಒಟ್ಟಿಗೆ ನಲುವತ್ತು ಐವತ್ತು ಲಕ್ಷದ ಬಜೆಟ್ಹಾಕಿ ಜಾಗರೂಕತೆಯಿಂದ ಮುಂದುವರೆಯುತ್ತ ಹೋದರೆ ಹತ್ತು ಎಕ್ರೆ ಜಾಗ ನಮಗೆ ಹಿಂದೆ ಸಿಗುತ್ತೆ”  ಅಂದ ಪ್ರವೀಣ್. “ಪ್ರಜಾಪ್ರಭುತ್ವ ಅಂದರೆ ಇದೇ ಅಪ್ಪ.. ಯಾವುದನ್ನೂ ಮಾಡಿಸಿಕೊಳ್ಳಬಹುದು. ಹಣಬೇಕು, ಜಾಣತನಬೇಕು ಅಷ್ಟೇ..” ಅಂದ ಕಿರಣ್.

“ಸರಿ.. ನೀವು ಮೂವರಿದ್ದೀರಲ್ಲಾ.. ಮಾಡಿ ತೋರಿಸಿ..” ಅಂದರು ಗೌಡರು. ಹಾಗೆ ಅಗಸ್ಟ್ಹದಿನೈದರ ದಿನದಂದು ರವಿಶಂಕರಗೌಡರ ಕುಟುಂಬ ರಾಮೇಗೌಡರು ತಮಗೆ ಸಿಕ್ಕಿದ ಜಮೀನಿನಲ್ಲಿ ಬಡ ಮಕ್ಕಳಿಗಾಗಿ ಕಟ್ಟಿಸಿದ್ದ ಕನ್ನಡ ಶಾಲೆಯನ್ನು ಮುಚ್ಚಿಸಿ ಜಮೀನನ್ನು ಮರುಸ್ವಾಧೀನ ಮಾಡಿಕೊಳ್ಳುವ ಒಮ್ಮತದ ನಿರ್ಧಾರಕ್ಕೆ ಬರುವಷ್ಟರಲ್ಲಿ ವ್ಯಾನು ಕಬಿನಿ ಜಲಾಶಯದ ಗೇಟಿಗೆ ಬಂದು ನಿಂತಿತ್ತು. ತಮ್ಮ ಯೋಜನೆಗೆ ಬೇಕಾದ ಬೃಹತ್ಬಜೆಟಿನ ಬಗ್ಗೆಯೇ ಆಲೋಚಿಸುತ್ತಾ ಗೌಡರು ವ್ಯಾನಿನಿಂದ ಇಳಿದು, ನಿದ್ದೆಗೆ ಜಾರಿದ್ದರೂ ಬಾವುಟವನ್ನು ಕೈಯಲ್ಲಿ ಭದ್ರವಾಗಿ ಹಿಡಿದುಕೊಂಡಿದ್ದ ಮೊಮ್ಮಗನನ್ನು ಎತ್ತಿಕೊಂಡು, ಪಿಕ್ನಿಕ್ಕಿಗಾಗಿ ಸೂಕ್ತತಾಣದ ಪರಿಶೀಲನೆಗೆ ಇಳಿದಿದ್ದರು.

ಆಗಷ್ಟೇ ನಿದ್ದೆಬಿಟ್ಟು ಎದ್ದಿದ್ದ ಮೊಮ್ಮಗಳು ಬಿಂದು ಬಾವುಟ ಹಾರಿಸುತ್ತಾ ಹಸುರು ಹುಲ್ಲಿನ ಸೊಬಗನ್ನು ಸವಿಯುತ್ತಾ ಅಜ್ಜನ ಹಿಂದೆಯೇ ನಿಶ್ಚಿಂತೆಯಿಂದ ಹೋಗುತ್ತಿದ್ದಳು. ಮಗ ಕಿಶೋರ್ಜಲಾಶಯದ ಆಫೀಸಿನ ಎದುರಿಗಿದ್ದ ಧ್ವಜಕಟ್ಟೆಯಲ್ಲಿ ಮಂದ ಗಾಳಿಗೆ ಹಿತವಾಗಿ ಹಾರಾಡುತ್ತಿದ್ದ ಬಾವುಟವನ್ನು ಕಂಡು ನೇರವಾಗಿ ಅಲ್ಲಿಗೆ ನಡೆದು ಕಿವಿಗೆ ಸಿಕ್ಕಿಸಿದ್ದ ಸ್ಪೀಕರುಗಳಿಂದ ಮೂಡಿಬರುತ್ತಿದ್ದ ಸಂಗೀತದ ಲಯಕ್ಕೆ ಹೊಂದಿಸಿ ಅದಕ್ಕೊಂದು ಸೆಲ್ಯೂಟು ಹೊಡೆದ.

 

‍ಲೇಖಕರು avadhi

10 April, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading