ಶಿಷ್ಟ-ಪರಿಶಿಷ್ಟ

“ಕಕ್ಕಸ್ಸು” ಅಥವಾ “ಹೇಲು” ಎನ್ನುವ ಶಬ್ದವನ್ನು ಶಿಷ್ಟ ಬರಹಗಳಲ್ಲಿ ಬಳಸಬಾರದು. ಅದು ಅಪಚಾರವಾಗುತ್ತದೆ. “ಮಲ” ಎಂದು ಸಂಸ್ಕತದಲ್ಲಿ ಮಡಿಯಾಗಿಯೇ ಹೇಳಬೇಕು. ಆಗ ನಾಲಗೆಯ ಮೈಲಿಗೆ ಕಳೆಯುತ್ತದೆ. ಹರಿಜನ ಕೇರಿಯಿಂದ ನಮ್ಮ ಹೌಸಿಂಗ್ ಸೊಸೈಟಿಯ ಕಸ ಎತ್ತಲು ಬರುವ ಮಾದೇವಿ ಬಹಳ ಸಲೀಸಾಗಿ ನೀರು ಕುಡಿದಂತೆ ಶಿಷ್ಟರು ಬಳಸಬಾರದ ಶಬ್ದವನ್ನು ಬಳಸುತ್ತಾಳೆ. ಅವಳು ಬಳಸುತ್ತಾಳೆ ಎನ್ನುವ ಕಾರಣಕ್ಕೆ ನಾವು ಬಳಸಬಾರದೋ ಅಥವಾ ಆ ವಸ್ತುವೇ ಹೇಸಿಗೆಯೋ?
ಹಿಂದೆ ಬ್ರಾಹ್ಮಣರ ಮನೆಗಳಲ್ಲಿ ಮಡಿ ಹೆಂಗಸರು ಕಕ್ಕಸ್ಸಿಗೆ ಹೋಗಿ ಬಂದರೆ ಅದು ಮೈಲಿಗೆ ಎನ್ನುವ ಕಾರಣಕ್ಕೆ ಸ್ನಾನ ಮಾಡುತ್ತಿದ್ದರು. ಜೈನರೇ ಹೆಚ್ಚಾಗಿರುವ ನಮ್ಮ ಊರಾದ ಸಾಲಿಗ್ರಾಮದಲ್ಲಿ ಜೈನರ ಮಕ್ಕಳು ಅವಸರದಿಂದ ತಿಪ್ಪೆಯೆಡೆಗೆ ಬೆತ್ತಲೆ ಓಡುತ್ತಿದ್ದುದು ನಾನು ಬಾಲ್ಯದಲ್ಲಿ ಕಂಡ ಸಾಮಾನ್ಯ ದೃಶ್ಯ. ಅವರ ಪ್ರಕಾರ ಬಟ್ಟೆ ಧರಿಸಿ ಮಲವಿಸರ್ಜನೆ ಮಾಡುವುದು ಮೈಲಿಗೆ.
ಇಂತಹ ಸಂದರ್ಭದಲ್ಲಿಯೇ ಮತ್ತೂರಿನ ಸಂಪ್ರದಾಯಸ್ಥ ಬ್ರಾಹ್ಮಣರೊಬ್ಬರು ‘ನನ್ನ ಮಲ ಇನ್ನೊಂದು ಪ್ರಾಣಿಯ ಆಹಾರ ಹೀಗಾಗಿ ನನಗೆ ಅದರ ಬಗ್ಗೆ ಅಸಹ್ಯವಿಲ್ಲ’ ಎಂದು ಹೇಳಿ ನನಗೆ ಅಚ್ಚರಿ ಮೂಡಿಸಿದರು.
ಬಾಯಿಯಲ್ಲಿ ಹೇಳಬಾರದ ವಸ್ತುವನ್ನು ಈಗಲೂ ಕೈಗಳ ಮೂಲಕ ಬಾಚಿ, ತಲೆಯ ಮೇಲೆ ಹೊತ್ತು ತಿರುಗುವ ಜನಾಂಗವಿದೆ. “ಅದು ಇನ್ನೂ ಚಾಲ್ತಿಯಲ್ಲಿ ಹೀಗಿರುವಾಗ ಅಂಥ ಶಬ್ದವನ್ನು ಬಳಸಲು ನಾವೇಕೆ ಹಿಂಜರಿಯಬೇಕು? ಯಾಕೆ ಹೇಸಬೇಕು, ಅದರ ಬಗ್ಗೆ ಮಾತನಾಡಲು ಏಕೆ ಸಂಕೋಚ ಪಡಬೇಕು?” ಎಂದು ತಮಿಳು ಸಾಹಿತ್ಯದಲ್ಲಿ ಹೊಸ ಅಲೆ ಎಬ್ಬಿಸಿದ, ಅದು ಇಡೀ ದೇಶದಾದ್ಯಂತ ಹಬ್ಬಲು ಕಾರಣವಾದ ಕ್ರಾಂತಿಕಾರಿ ಸಾಹಿತಿ ಪೆರುಮಾಳ್ ಮುರುಗನ್ ಅವರನ್ನು, ಸಂಗೀತ ಕ್ಷೇತ್ರದಲ್ಲಿ ಅಂತಹುದೇ ಹೊಸ ಅಲೆ ಎಬ್ಬಿಸಿದ ಕ್ರಾಂತಿಕಾರಿ ವಿದ್ವಾಂಸ ಟಿ.ಎಮ್. ಕೃಷ್ಣ ಕೇಳುತ್ತಾರೆ. ಬೆಂಗಳೂರು ಕಾವ್ಯೋತ್ಸವದಲ್ಲಿ ಅಂತೆಯೇ ಹಾಡಿ ದಾಖಲೆಯನ್ನು ಸೃಷ್ಟಿಸುತ್ತಾರೆ.
ಸಂಗೀತ ಗಂಧರ್ವ ಲೋಕದ ಆಸ್ತಿ. ಭಕ್ತಿಯ ಲೇಪವಿಲ್ಲದ ಸಂಗೀತ ಸಂಗೀತವೇ ಅಲ್ಲ. ಸಂಗೀತ ಕಚೇರಿಯೆಂದರೆ ಆದಕ್ಕೆ ಒಂದು ಶಿಷ್ಟವಾದ ವೇದಿಕೆ, ಸಾಂಪ್ರದಾಯಕ ಜರಿ ಪೋಷಾಕು ಇವೆಲ್ಲ ಇರಲೇಬೇಕು. ಆದರೆ, ಟಿ.ಎಮ್. ಕೃಷ್ಣ ಕಾರ್ಪೋರೇಷನ್ ಬಸ್ಸುಗಳಲ್ಲಿ, ಮೀನುಗಾರರೊಡನೆ ಬೀಚುಗಳಲ್ಲಿ, ಚೌಡಿಕೆಯವರ ಜೊತೆ ಎಲ್ಲಂದರಲ್ಲಿ ಹಾಡಿ ಸಂಗೀತವನ್ನು ಮೈಲಿಗೆ ಮಾಡಿದ ಕ್ರಾಂತಿಕಾರ. ಇವರ ಸ್ನೇಹಿತ ಪೆರುಮಾಳ್ ಮುರುಗನ್. ಎರಡೂ ಬೆಂಕಿಯ ಚೆಂಡುಗಳು! ಜಡ್ಡುಗಟ್ಟಿದ ಸಾಂಪ್ರದಾಯಕತೆಯ ವಿರುದ್ಧ ತಮ್ಮ ತಮ್ಮ ಕ್ಷೇತ್ರದಲ್ಲಿ ಹೋರಾಡುತ್ತಿದ್ದಾರೆ. ಇತ್ತೀಚೆಗೆ ಮುಂಬೈಯಲ್ಲಿ ನಾರಾಯಣಗುರು ಸ್ಮರಣಾರ್ಥ ನಡೆದ ಒಂದು ಸಂಗೀತ ಕಚೇರಿಯಲ್ಲಿ ನಾರಾಯಣ ಗುರುಗಳ ಸಾಹಿತ್ಯವನ್ನು ಹಾಡುತ್ತಾ ಟಿ.ಎಮ್. ಕೃಷ್ಣ ಅವರು “ಶುದ್ಧ ಶಾಸ್ತ್ರೀಯ ಸಂಗೀತವೆಂಬುದು ಇದಲ್ಲ ಎಂದು ಸಂಪ್ರದಾಯವಾದಿಗಳು ವಾದಿಸುತ್ತಾರೆ, ಆದರೆ ನಿಜವಾದ ಶುದ್ಧ ಸಂಗೀತವೆಂದೆರೆ ಇದೇ” ಎಂದು ಹೇಳಿದ್ದಾರೆ (ಇಂಡಿಯನ್ ಎಕ್ಸ್ ಪ್ರೆಸ್ 6/11/19).

ಅಕ್ಷರ ಲೋಕಕ್ಕೆ ಸಂಪರ್ಕವೇ ಇಲ್ಲದಂತಹ ಜಾತಿಯಲ್ಲಿ ಹುಟ್ಟಿದವರು ಪೆರುಮಾಳ್ ಮುರುಗನ್. ಕುಟುಂಬದಲ್ಲೇ ಶಾಲೆಗೆ ಹೋದ ಮೊದಲ ಬಾಲಕ, ಇಡೀ ಹಳ್ಳಿಯಲ್ಲೇ ಕಾಲೇಜು ಮೆಟ್ಟಿಲು ಹತ್ತಿದ ಮೊದಲ ಯುವಕ. ಮನೆಗೆ ತರುತ್ತಿದ್ದ ಸಾಮಾನು ಪೊಟ್ಟಣಗಳ ಕಾಗದಗಳನ್ನು, ಮಳೆಗಾಲದಲ್ಲಿ ಒಲೆ ಉರಿಸಲೆಂದು ಅಮ್ಮ ಜತನವಾಗಿ ಇರಿಸುತ್ತಿದ್ದಳು. ‘ಆನಂದ ವಿಕಟನ್’, ‘ಕುಮುದಂ’ ಮುಂತಾದ ಖ್ಯಾತ ಪತ್ರಿಕೆಯ ತುಣುಕುಗಳು ಅಲ್ಲಿ ಇರುತ್ತಿದ್ದವು. ಅಂತಹ ರದ್ದಿಯ ಚೂರುಗಳನ್ನು ಓದುತ್ತಾ ದೊಡ್ಡವರಾದರು ಮುರುಗನ್. ಗದ್ದೆಯೊಳಗೆ ಒಂಟಿ ಮನೆಯಲ್ಲಿ ಏಕಾಂಗಿ. ಸಿಕ್ಕ ಸಿಕ್ಕ ಕಾಗದದ ಚೂರು, ನೋಟ್ ಬುಕ್ಕುಗಳಲ್ಲಿ ಗೀಚತೊಡಗಿದರು.
1988 ರಲ್ಲಿ ದೆಹಲಿ ಮೂಲದ “ಕಣೈಯಾಳಿ” ಪತ್ರಿಕೆಯಲ್ಲಿ ಮೊದಲ ಕಥೆ ಪ್ರಕಟವಾಯಿತು. ಕಾಲೇಜು ಮಾಸ್ತರ್ ಇವರ ಆಸಕ್ತಿಯನ್ನು ಕಂಡು ಪೋಷಿಸಿದರು. ಹಾಗೆ ಬಾಲ್ಯದಲ್ಲಿ ಪೋಷಿಸಿದವರಲ್ಲಿ ಇವರ ದೊಡ್ಡಮ್ಮನೂ ಒಬ್ಬರು. 1989ರಲ್ಲಿ ಪಿಎಚ್.ಡಿ ವ್ಯಾಸಂಗಕ್ಕೆಂದು ಚೆನ್ನೈಗೆ ಬಂದಾಗ ಅಲ್ಲಿ ಆ ಕಾಲದಲ್ಲಿ ತಮಿಳುನಾಡಿನಲ್ಲಿ ಪ್ರಸಿದ್ಧವಾಗಿದ್ದ ಮಾರ್ಕ್ಸಿಸ್ಟ್ -ಲೆನಿನಿಸ್ಟ್ ಗುಂಪುಗಳ ಪರಿಚಯವಾಯಿತು. 10-15 ಗುಂಪುಗಳಿದ್ದವು. ಪ್ರತಿಯೊಂದು ಗುಂಪೂ ಪತ್ರಿಕೆಗಳನ್ನು ನಡೆಸುತ್ತಿದ್ದುದು ಇವರಿಗೆ ಅನುಕೂಲವೇ ಆಯಿತು. “ಮನ ಓಸೈ” ಎನ್ನುವ ಪತ್ರಿಕೆಗೆ ಇವರನ್ನು ಪರಿಚಯಿಸಲಾಯಿತು. ಅವರ ಬರವಣಿಗೆಗೆ ದೊಡ್ಡ ವೇದಿಕೆ ದೊರೆಯಿತು. ‘ಕೊಂಗ ನಾಡು’ ಭಾಷೆಯ ಪ್ರಯೋಗ ಇವರ ಬರಹದ ಮುಖ್ಯ ಕಸುವಾಯಿತು. ಹಾಗೆ 1991ರಲ್ಲಿ ಬಂದ ಇವರ ಮೊದಲ ಕಾದಂಬರಿ, ಸಮಾಜದ ಅಂಚಿನಲ್ಲಿರುವವರ ಮನಸ್ಸಿನ ಸೂಕ್ಷ್ಮಗಳನ್ನು ಬಯಲಾಗಿಸಿದ “ಎರು ವೈಯಿಲ್” ಪ್ರಕಟವಾಯಿತು. “ಕರೆಂಟ್ ಶೋ” (1993), “ಸೀಸನ್ಸ್ ಆಫ್ ದಿ ಪಾಮ್” (2010), “ಮಧೋರುಭಾಗನ್” (2010) (ಅರ್ಧನಾರೀಶ್ವರ) ಮುಂತಾದವು ಪ್ರಕಟಗೊಂಡವು. ಆನಂತರ ಮಾರ್ಕ್ಸಿಸ್ಟ್ ಲೆನಿನಿಸ್ಟ್ ಚಿಂತನೆಗಳಿಂದ ವಿಮುಖರಾದರು. ಇದು ಅವರ ಸಾಹಿತ್ಯ ಜೀವನದಲ್ಲಿ ಹೊಸ ತಿರುವನ್ನು ಪಡೆದುಕೊಂಡಿತು. ಇದಕ್ಕೆ ಕಾರಣ ಮಾರ್ಕ್ಸಿಸ್ಟ್ ರು, ಗಾಂಧಿ ದೇಶ ವಿಭಜನೆಗೆ ಕಾರಣನಾದನೆಂದೂ, ಪೆರಿಯಾರ್ ಅವರು ಕೇವಲ ಒಬ್ಬ ಸುಧಾರಕನೆಂದೂ ಇಬ್ಬರನ್ನೂ ಒಪ್ಪುತ್ತಿರಲಿಲ್ಲ. ಅಲ್ಲದೇ ಜಾತಿ ಪದ್ಧತಿಯು ಸಂಪೂರ್ಣ ಕ್ರಾಂತಿಯೊಂದಿಗೆ ನಾಶವಾಗುವುದೆಂದು ಅವರು ನಂಬಿದ್ದರು. “ಜಾತಿ ಪದ್ಧತಿಯ ಭೂಮಿಕೆಯ ಬಗ್ಗೆ ಪೆರಿಯಾರ್ ಅವರಿಗಿದ್ದ ಸಾಮಾಜಿಕ ಗ್ರಹಿಕೆಯು ಬಹಳ ಸ್ಪಷ್ಟ ಹಾಗೂ ವಸ್ತು ನಿಷ್ಠವಾಗಿದ್ದಿತು. ಆದುದರಿಂದ ಪೆರಿಯಾರ್ ಅವರ ರಾಜಕೀಯ ಸಾಮಾಜಿಕ ಐಡಿಯಾಲಜಿಗಳಾಗಲೀ ಗಾಂಧಿಯವರ ಹೋರಾಟದ ಸತ್ಯಾಗ್ರಹದ ಪರಿಕಲ್ಪನೆಗಳಾಗಲೀ ಹೆಚ್ಚು ವಾಸ್ತವವೆಂದು ನನಗನ್ನಿಸಿತು. ಪೆರಿಯಾರ್ ಅವರ ಐಡಿಯಾಲಜಿ ಇಷ್ಟವಾಯಿತು. ಅವರು ಸಾಮಾನ್ಯ ಮನುಷ್ಯನನ್ನು ಸಂಬೋಧಿಸಿದರು.. ಜಾತಿಯ ಕುರಿತಾಗಿ ಅವರಿಗೆ ನೇರ ವಿರೋಧವಿತ್ತು. ಅವರು ಬಳಸುತ್ತಿದ್ದ ಕೊಂಗನಾಡು ಭಾಷೆ ಕೂಡ ನನ್ನ ಬರವಣಿಗೆಗೆ ಹತ್ತಿರವಾಗಿತ್ತು.” ಆದುದರಿಂದ ತಾನು ಮಾರ್ಕ್ಸಿಸ್ಟ್ ರಿಂದ ವಿಮುಖನಾದೆನೆಂದು ಹೇಳಿಕೊಂಡಿದ್ದಾರೆ. (ಇಂಡಿಯನ್ ಎಕ್ಸ್ಪ್ರೆಸ್ 27/10/19)
ಸಾಮಾಜಿಕ ಆಚರಣೆಗಳ ಬಗ್ಗೆ ಸಂಪ್ರದಾಯದ ಬಗ್ಗೆ ಅವಹೇಳನಕಾರಿಯಾದ ಅಂಶವನ್ನು ಒಳಗೊಂಡಿದೆಯೆಂಬ ಕಾರಣದಿಂದ “ಮಧೋರುಭಾಗನ್” ಕಾದಂಬರಿ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಯಿತು. ಮುರಗನ್ ಅವರ ಮೇಲೆ ಪ್ರಹಾರವೆಸಗಿದರು. ಕಾದಂಬರಿಯ ಪ್ರತಿಗಳನ್ನು ಸುಡಲಾಯಿತು. ಇದರಿಂದ ನೊಂದ ಮುರುಗನ್ “ಲೇಖಕ ಮುರುಗನ್ ಸತ್ತ” ಎಂದು ಘೋಷಿಸಿಕೊಂಡರು. ತಮ್ಮನ್ನು ತಾವು ‘ನಡೆದಾಡುವ ಹೆಣ’ ಎಂದು ಕರೆದುಕೊಂಡರು. ತಮಗೆ ತಾವೇ ಮರಣ ಶಾಸನವನ್ನು ಬರೆದುಕೊಂಡು, ಬಹಳ ದಿನಗಳ ಕಾಲ ಸತತವಾಗಿ ಮೌನ ವಹಿಸಿದ್ದು, ಸೃಜನಶೀಲ ಚಟುವಟಿಕೆಯಿಂದ ದೂರವಾಗಿದ್ದು. ಒಂದು ರೀತಿಯ ಗಾಂಧಿಯನ್ ಪ್ರತಿಭಟನೆಯೇ ಆಗಿದೆ. ಪ್ರಜಾಪ್ರಭುತ್ವದಲ್ಲಿ ಸಲ್ಲುವುದು ಗಾಂಧೀ ರೀತಿಯ ಪ್ರತಿಭಟನೆಗಳೇ ಎಂದು ಅವರು ಸ್ವತಃ ನಂಬುತ್ತಾರೆ. ಇದಕ್ಕೆ ಅವರು ಹೇಡಿ ಎನ್ನುವ ಪಟ್ಟವನ್ನು ಸ್ವೀಕರಿಸಬೇಕಾಯಿತು. “ನಾನು ಹೇಡಿಯೆ ಎಂದು ನನಗೆ ನಾನೇ ಕೇಳಿಕೊಂಡೆ. ‘ವೀರ’ ಮೌಲ್ಯಗಳು ರಾಜಶಾಹಿಯಾದವು. ಅವು ಇಂದಿಗೆ ಪ್ರಸ್ತುತವಲ್ಲ. ಅದನ್ನು ಎಲ್ಲರ ಮೇಲೂ ಹೇರುವುದು ತಪ್ಪು. ಎಲ್ಲರಿಗೂ ಈ ನಾಡಿನಲ್ಲಿ ಜಾಗವಿದೆ. ವೀರ ಮೌಲ್ಯಗಳಿಂದ ಜನರನ್ನು ಹೇಡಿಗಳು ಶೂರರು ಎಂದು ವರ್ಗೀಕರಿಸುವುದು ತಪ್ಪು” ಎನ್ನುವ ಅವರು ಅದಕ್ಕೆಂದೇ ಬಲಪಂಥೀಯರು ಅವರ ಬರಹದ ಹಕ್ಕನ್ನು ಕಿತ್ತುಕೊಂಡ ಸಂದರ್ಭದಲ್ಲಿ ಬಹಿಷ್ಕೃತರಾದ ಅವರು ಬರೆದ ಕವಿತೆಗಳಿಗೆ “coward poetry” ಎಂದೇ ಕರೆದುಕೊಳ್ಳುತ್ತಾರೆ. “Songs of A Coward”” ಇದು ಆ ಕವಿತಾ ಸಂಕಲನದ ಶೀರ್ಷಿಕೆ. “ನನ್ನೊಳಗೊಬ್ಬ ವಿಮರ್ಶಕ ಇದ್ದಾನೆ. ಬರಯಬೇಕೋ ಬೇಡವೋ ಎನ್ನುವುದನ್ನಾಗಲೀ, ಮನಸ್ಸಿಗೆ ಬಂದದ್ದನ್ನೆಲ್ಲಾ ಬರೆಯದೇ ಏನನ್ನು ಬರೆಯಬೇಕು ಎಷ್ಟು ಬರೆಯಬೇಕು ಎನ್ನುವ ವಿಮರ್ಶಕ. ಅವನು ಸದಾ ನನ್ನನ್ನು ಪರೀಕ್ಷಿಸುತ್ತಿರುತ್ತಾನೆ. ಕೆಲವೊಮ್ಮೆ ನನ್ನೊಳಗಿನ ವಿಮರ್ಶಕ ಮತ್ತು ಬರಹಗಾರ ಒಂದಾಗುವುದೂ ಉಂಟು, ಬರಹಗಾರ ವಿಮರ್ಶಕನನ್ನು ಮೀರುವುದೂ ಉಂಟು. ಈ ಎಲ್ಲಾ ಪ್ರಕ್ರಿಯೆಗಳಿಂದ ಎಂತಹ ಸಾಹಿತ್ಯ ಹೊರಬರುತ್ತದೆ ಎನ್ನುವುದೇ ಮುಖ್ಯ ಎಂದು ಬರ್ಖಾದತ್ ಅವರೊಂದಿಗಿನ ಎನ್.ಡಿ. ಟಿ.ವಿ. ಸಂದರ್ಶನದಲ್ಲಿ ಹೇಳಿದ್ದಾರೆ.
ಹೈಕೋರ್ಟು, ಮುರುಗನ್ ಅವರ ಪುಸ್ತಕವನ್ನು ಬಹಿಷ್ಕರಿಸಲು ನಿರಾಕರಿಸಿತಲ್ಲದೇ, ಮುರುಗನ್ ಅವರು ಮತ್ತೆ ಬರೆಯಬಹುದು ಎಂದು ಅವರಿಗೆ ಸಾಹಿತ್ಯಕ ಪುನರುಜ್ಜೀವನವನ್ನೂ ದಯಪಾಲಿಸಿತು. “ಬರಿ ಎಂದಾಗ ಬರೆಯಲಿಕ್ಕೆ, ಬೇಡವೆಂದಾಗ ನಿಲ್ಲಿಸುವುದಕ್ಕೆ ನಾನೇನು ಮೋಟಾರ್ ಪೊಂಪೇ?” ಎಂದು ಮುರುಗನ್ ಕೇಳುತ್ತಾರೆ. “ಹೈಕೋರ್ಟಿನ ತೀರ್ಪುಗಳಾಗಲೀ, ನೈತಿಕ ಪೋಲೀಸರಾಗಲೀ, ಜನಸಮೂಹವಾಗಲೀ, ಸಂಸ್ಕೃತಿಯ ವ್ಯಾಖ್ಯಾನಗಳಾಗಲೀ ಲೇಖಕರ ಭೂಮಿಕೆಯನ್ನು ನಿರ್ಧರಿಸುವುದು, ಈ ನಾಡಿನ ದುರಂತ. ಲೇಖಕರ ಭೂಮಿಕೆಯನ್ನು ನಿಜವಾಗಿ ನಿರ್ಧರಿಸಬೇಕಾದವರು ಓದುಗರು. ಇಂತಹ “ಪಾಳೇಗಾರಿಕೆ” (ಒತ್ತು ನನ್ನದು) ಸಂಸ್ಕೃತಿಯಲ್ಲಿ ಬರದೇನು ಪ್ರಯೋಜನ ಎಂದು ಅವರು ಮೌನಕ್ಕೆ ಶರಣಾಗಿರಬಹುದು” ಎಂದು ಗೀತಾ ಹರಿಹರನ್ ಹೇಳುತ್ತಾರೆ. ಆದರೆ ಕೋರ್ಟಿನ ತೀರ್ಪು ಸ್ವತಃ ಮುರುಗನ್ ಅವರಿಗೇ ಸಂತಸ ತಂದಿತು. ಅದೊಂದು ತೀರ್ಪು ಎನ್ನುವುದಕ್ಕಿಂತ “ನನಗೆ ಖಾಸಗಿಯಾಗಿ ಬರೆದ ಪತ್ರವೆಂದೆನಿಸಿತು” ಎಂದು ಬರ್ಖಾ ದತ್ತಳಿಗೆ ಹೇಳುವಾಗ ಮುರುಗನ್ ಅವರು ಎದುರಿಸಿದ ತುಮುಲಗಳಿಗೆ ಕೋರ್ಟಿನ ತೀರ್ಪು ಒಂದು ರಹದಾರಿಯನ್ನು ತೋರಿತು ಎನ್ನುವುದು ಸ್ಪಷ್ಟವಾಗುತ್ತದೆ.
ಒಂದು ವೀಡಿಯೋದಲ್ಲಿ ಕವಿತೆ ಓದುತ್ತಾ ಮುರುಗನ್ ಅವರು “ನನ್ನ ಸ್ವ್ವಾತಂತ್ರ್ಯವಲ್ಲ ಅದು ಅವರ ಸ್ವಾತಂತ್ರ್ಯ” ಎನ್ನುತ್ತಾರೆ.
ಈ ನಡುವೆ ಅವರಿಗೆ ಟಿ. ಎಮ್ ಕೃಷ್ಣ ಅವರ ಪರಿಚಯವಾಗುತ್ತದೆ. ‘ಸಂಗೀತವೆಂದರೆ ಅದು ಭಕ್ತಿ ಗೀತೆಯೇ ಆಗಿತ್ತು. ಮನುಷ್ಯರ ಅನುಭವಗಳ ಕುರಿತಾಗಿ ಅಲ್ಲಿ ಬಹಳ ಕಡಿಮೆ ಇದ್ದಿತು. ಅದರ ಕುರಿತಾಗಿ ಬರೆಯಬೇಕೆಂದೂ ಅವುಗಳನ್ನು ತಾನು ಹಾಡುವುದಾಗಿಯೂ ಕೃಷ್ಣ, ಮುರುಗನ್ ಅವರಿಗೆ ಹೇಳುತ್ತಾರೆ. ಮೊದಲು ಹಿಂಜರಿಕೆ ಇತ್ತಾದರೂ ಅನಂತರ “ಪಂಚ ಭೂತಂ ಕೀರ್ತನೈಗಳ್” ಎಂಬ ಕೀರ್ತನೆಗಳನ್ನು ರಚಿಸುತ್ತಾರೆ. ಇವುಗಳ ಮಾಲಿಕೆಯಲ್ಲಿ ಒಂದಾದ “ಕಾಟ್ರುಂ” ಎಂಬ ಗಾಳಿಯ ಕುರಿತಾದ ಹಾಡನ್ನು ನಳಿನಕಾಂತಿ ರಾಗದಲ್ಲಿ ಕೃಷ್ಣ ಅವರು ಹಾಡಿದ್ದಾರೆ. (ಯೂಟ್ಯೂಬ್ 10/8/2017) ಪಂಚಭೂತಗಳ ಕಲ್ಪನೆ ಸಂಗೀತದಲ್ಲಿ ಮೊದಲು ಇದ್ದಿತಾದರೂ ಅದು ಭಕ್ತಿಯ ಲೇಪದಿಂದ ಕೂಡಿತ್ತು’ ಎಂದು ಹೇಳುವ ಮುರುಗನ್ ‘ಅವುಗಳನ್ನು ವಸ್ತುನಿಷ್ಠವಾಗಿ ನೋಡಲು ಕಲಿತೆ’ ಎಂದು ಹೇಳುತ್ತಾರೆ. ಅವರ ರಚನೆಗಳನ್ನು ಕೃಷ್ಣ ಮೆಚ್ಚಿಕೊಳ್ಳುತ್ತಾರೆ. “ತಾಳೆ ಮರ”ದ (ಪಾಮ್ ಟ್ರೀ) ಕುರಿತಾಗಿ ಬರೆದ ಕವಿತೆಯನ್ನಂತೂ ‘ತಾಳೆಯ ಮರವನ್ನು ದೇವರನ್ನಾಗಿ ಮಾಡಿ ಬಿಟ್ಟಿರುವೆ’ ಎಂದು ಕೃಷ್ಣ ಕೊಂಡಾಡಿದರಂತೆ. ಮುರುಗನ್ ಅವರ ಪ್ರಸಿದ್ಧವಾದ “ನೀ ಮಟ್ಟುಮೇ ಎನ್ ನೆಂಜಿಲ್ ನಿರ್ಕಿರಾಯ್” (ಎನ್ನ ಹೃದಯದಲ್ಲಿ ನೀನು ಮಾತ್ರ ನೆಲಸಿರುವೆ) ಎನ್ನುವ ಕವಿತೆಯನ್ನು ಕೃಷ್ಣ ಕಾಪಿ ರಾಗದಲ್ಲಿ ಬಹಳ ಕಚೇರಿಗಳಲ್ಲಿ ಹಾಡಿದ್ದಾರೆ. ಸಂಗೀತ ವಿದ್ವಾನ್ ವಿಘ್ನೇಶ್ ಈಶ್ವರ್ ಅವರೂ ಕೂಡ ಅದೇ ರಾಗದಲ್ಲ್ಲಿ ಇದನ್ನು ಸೊಗಸಾಗಿ ಹಾಡಿದ್ದಾರೆ.
ಶಿಷ್ಟ ಸಂಸ್ಕೃತಿಯಲ್ಲಿ ನವಿಲುಗಳಿಗೆ, ಹಂಸಗಳಿಗೆ, ಕೋಗಿಲೆಗಳಿಗೆ ಮಾತ್ರ ಸ್ಥಾನ. ಕಾಗೆ, ಗೂಗೆಗಳಿಗಲ್ಲ. ಜಲಪ್ರಳಯವಾಗುವಾಗ ಪ್ರತಿಯೊಂದು ಜೀವದ ಜೋಡಿಯನ್ನೂ ಸುರಕ್ಷಿತ ಸ್ಥಳಕ್ಕೆ ಹೊತ್ತೊಯ್ಯಬೇಕಾದುದು ಮನುವಿನ ಜವಾಬ್ದಾರಿಯಾಗಿರುತ್ತದೆ. ಆಗ ಕಾಗೆಯನ್ನು ಯಾಕೆ ಕೊಂಡೊಯ್ಯಬೇಕು ಅದನ್ನು ಯಾಕೆ ರಕ್ಷಿಸಬೇಕು ಎನ್ನುವ ಚರ್ಚೆ ಏಳುತ್ತದೆ. ಆಗ ಈ ಜಗತ್ತಿನಲ್ಲಿ ಪ್ರತಿಯೊಂದು ಜೀವಿಗೂ ಅದರದೇ ಆದ ಮಹತ್ವವಿದೆ. ಎಲ್ಲವೂ ಸೃಷ್ಟಿಯ ಕೂಸುಗಳು ಎಲ್ಲವನ್ನೂ ರಕ್ಷಿಸಿ ಪೋಷಿಸಬೇಕಾದುದು ರಾಜನ ಧರ್ಮ ಎನ್ನುವ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ. (ವಿಷ್ಣು ಪುರಾಣ)
ಮುರುಗನ್ ಅವರು ಕಾಗೆ, ಗೂಬೆ, ಗುಬ್ಬಚ್ಚಿ, ಕೋಗಿಲೆಗಳ ಬಗ್ಗೆ ಕೂಡ ಕವಿತೆಗಳನ್ನು ಬರೆದಿದ್ದಾರೆ. ಇವುಗಳನ್ನು ಹಾಡುವ ಕೃಷ್ಣರನ್ನು ಒಮ್ಮೆ ಅರುಣಾ ರಾಯ್ ಹಾಗೂ ಮ್ಯಾಗ್ಸೇಸೆ ಪ್ರಶಸ್ತಿ ವಿಜೇತ ಬೆಜವಾಡ ವಿಲ್ಸನ್ ಅವರುಗಳು “ನೀವು ಮಲ ಹೊರುವವರ ಬಗ್ಗೆ ಯಾಕೆ ಹಾಡಬಾರದು?” ಎಂದು ಕೇಳಿದರಂತೆ. ಆಗ ಮುರುಗನ್ ಅವರಿಗೆ ಅವರ ಜನಾಂಗದ ಬಗ್ಗೆ ಬರೆಯಲು ಕೃಷ್ಣ ತಿಳಿಸಿದರಂತೆ. ಮೊದಲಿಗೆ ಗೊಂದಲ, ಭಯದಿಂದ ಆರು ತಿಂಗಳು ಸಂಘರ್ಷಕ್ಕೆ ಸಿಲುಕಿ ಆನಂತರ ‘ಕೈ’ಗಳಿಂದ ಪ್ರಾರಂಭಿಸಿದೆ ಎಂದು ಹೇಳಿಕೊಳ್ಳುತ್ತಾರೆ.

ಕೈಗಳೆಂದರೆ ಅದು ದೇವಿಯ “ವರದ ಹಸ್ತ, ಸರೋಜ ಹಸ್ತ, ಕಮಲ ಕರ”. ಅವುಗಳು ಇರುವುದು ಶ್ರೇಷ್ಠವಾದ ಕೆಲಸಗಳಿಗೆ ಅಂತಹ ಶ್ರೇಷ್ಠವಾದ ಕೈಗಳೇ ಮಲಹೊರುವ ಕೈಗಳಾಗುವುದರ ವಿಪರ್ಯಾಸವನ್ನು ತಮ್ಮ ಕವಿತೆಯಲ್ಲಿ ವಿಡಂಬಿಸಿದ್ದಾರೆ. ಆಗ ‘ಮಲ’ ಮತ್ತು ‘ಕಕ್ಕಸ್ಸು’ ಶಬ್ದಗಳ ಕುರಿತಾಗಿ ಮುರುಗನ್ ಮತ್ತು ಕೃಷ್ಣರ ಇವರಿಬ್ಬರ ನಡುವೆ ಚರ್ಚೆಯಾಗುತ್ತದೆ. ಯಾವುದಾದರೂ ಒಂದು ಕಚೇರಿಯಲ್ಲಿ ಗ್ರಾಮ್ಯ ಶಬ್ದವನ್ನು ಬಳಸಿ ಹಾಡಿ ಎಂದು ಮುರುಗನ್ ಕೃಷ್ಣ ಅವರಿಗೆ ಕೋರಿಕೊಂಡಾಗ ಅದನ್ನು ಬೆಂಗಳೂರಿನ ಕಾವ್ಯೋತ್ಸವದಲ್ಲಿ (20/7/2019) ಅವರು ಆ ಶಬ್ದವನ್ನು ಬಳಸಿ ಹಾಡುತ್ತಾರೆ. ಹಾಗೆ ಬಳಸುವ ಮುನ್ನ ಅವರು ಹೇಳಿದ ಮಾತೆಂದರೆ “Why are we so hesitant, afraid to think so many times and stutter over something as simple as the use of a word when there are still people who lift, carry, and clean away excrement by hand”
ಅದೇ ಸಂದರ್ಭದಲ್ಲಿ ಅವರು “ಕಂಡದುಂಡೋ ಕಂಡದುಂಡೋ ಕಾಕೆಯ ಪೋಲೈ ಒರು ಪರವೆಯೆ ಎಂಗುಂ” (ಗಿಳಿ ಎಲ್ಲಾದರೂ ಕಾಗೆಯ ಹಾಗೆ ಕಾಣಿಸುವುದುಂಟೇ?) ಎಂದು ಕಾಗೆಯ ಕುರಿತಾದ ಮುರಗನ್ ಅವರ ಇನ್ನೊಂದು ಕವಿತೆಯನ್ನೂ ಹಾಡಿದ್ದಾರೆ.
ಪೆರುಮಾಳ್ ಮುರಗನ್ ಅವರ ಬಗ್ಗೆ ಒಂದು ದೀರ್ಘವಾದ ಸಂದರ್ಶನವನ್ನು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಓದಿದ ತಕ್ಷಣ ಕಣ್ಣಮುಂದೆ ಸುಳಿದದ್ದು, ಕೃಷ್ಣ ದೇವಾಲಯದ ಬಾಗಿಲ ಹೊರಗೆ ನಿಂತು ದೇವರ ದರ್ಶನಕ್ಕಾಗಿ ಯಾಚಿಸುತ್ತಿರುವ ಕನಕದಾಸ, ಚಿದಂಬರ ದೇವಾಲಯದ ಹೊರಗೆ ನಿಂತು “ಎನ್ನ ಮೇಲೆ ಕರುಣೆ ಬಾರದೇಹೋದುದಕ್ಕೆ ಏನು ಕಾರಣವಿರಬಹುದು, ಎನ್ನ ಸ್ವಾಮಿಗೆ”? ಎಂದು ಹಾಡುವ ಗೋಪಾಲಕೃಷ್ಣ ಭಾರತಿಯವರ ನಂದನಾರ್, “ನಾನು ನಿನ್ನ ಹೊಲೆಯ, ನೀನು ನನ್ನ ಬಾಪ್ಪಾ ಎಂದು ವಿಟ್ಠಲನ ಮುಂದೆ ಕೂಗಿ ಕೂಗಿ ಹೇಳುವ ಮರಾಠಿಯ ಸಂತ ಚೋಖಾಮಿಳ. ಕನಕದಾಸ, ನಂದನಾರ್ ಅವರಿಗೆ ಕರ್ನಾಟಕ ಸಂಗೀತದ ನಂಟಿದ್ದರೆ, ಚೋಖಾಮಿಳನಿಗೆ ಮರಾಠಿಯ ಅಭಂಗದ ನಂಟು. ಈ ನಂಟು ಪೆರುಮಾಳ್ ಮುರುಗನ್ ಅವರ ಕವಿತೆ ಮತ್ತು ಟಿ.ಎಂ. ಕೃಷ್ಣ ಅವರ ಹಾಡುಗಾರಿಕೆಯಲ್ಲಿ ಮುಂದುವರೆಯುತ್ತಿದೆ. ಅಲ್ಲದೇ ಇದು 600- 700 ವರುಷಗಳಿಂದಲೂ ಸಾಮಾಜಿಕ ಗ್ರಹಿಕೆಯಲ್ಲಿ ಮೂಲಭೂತವಾಗಿ ಯಾವುದೇ ರೀತಿಯ ಬದಲಾವಣೆ ಆಗಿಲ್ಲವೆಂಬುದರ ಪ್ರತೀಕ ಕೂಡ ಆಗಿದೆ.
ನನ್ನ ಈ ಅಲೋಚನೆ ಒಂದು ಊಹೆಯಲ್ಲ ಎನ್ನುವುದಕ್ಕೆ ಒಂದು ನಿದರ್ಶನವೆಂದರೆ, ಟಿ.ಎಂ. ಕೃಷ್ಣ ಅವರು, ಮುರುಗನ್ ಅವರ “ಅಳದೇನ್” ಕೃತಿಯನ್ನು ವಿಸ್ತಾರವಾದ ಆಲಾಪನೆಯೊಂದಿಗೆ ಹಾಡುತ್ತಾ ಹಾಡುತ್ತಾ ಅದನ್ನು ಮುಗಿಸುವುದು ಗೋಪಾಲಕೃಷ್ಣ ಭಾರತಿಯವರ ನಂದನಾರ್ ಚರಿತವನ್ನು ಹೇಳುವ ಬೇಹಾಗ್ ರಾಗದ “ಇರಕ್ಕುಂ” ಕೃತಿಯೊಂದಿಗೆ. ಹದಿನಾಲ್ಕನೆಯ ಶತಮಾನದ ನಂದನಾರ್ ಹಾಗೂ ಇಂದಿನ ಮುರುಗನ್ ಇಬ್ಬರೂ, ಸಾಮಾಜಿಕ ಪೂರ್ವಗ್ರಹಗಳಿಗೆ ಒಳಗಾದ, ಬಹಿಷ್ಕಾರಕ್ಕೆ ತುತ್ತಾದ ಜಾತಿಯೊಂದರ ದುಃಖ, ನೋವು, ಸಂಕಟಗಳಿಗೆ ಒಂದು ಅದ್ಭುತ ಭಾವಸಾಹಚರ್ಯವನ್ನು ಈ ಎರಡೂ ಹಾಡುಗಳ ಪ್ರಸ್ತುತಿ ಕೊಡುತ್ತದೆ.
ಶುದ್ಧ ರಾಗ ತಾನ ಪಲ್ಲವಿಯ ತಮ್ಮ ಶಿಷ್ಟ ಕಚೇರಿಯ ಕೊನೆಗೆ ಟಿ.ಎಂ. ಕೃಷ್ಣ, ಮುರುಗನ್ ಅವರ ‘ಅಳದೇನ್’ ಕೃತಿಯನ್ನು ಪ್ರಾರಂಭಿಸಿದಾಗ ಇಡೀ ಸಭೆ ನಗೆಗಡಲಲ್ಲಿ ಮುಳುಗಿದುದರ ಕುರಿತಾಗಿ ಅದಕ್ಕೆ ಪ್ರತ್ಯಕ್ಷ ಸಾಕ್ಷಿಯಾದ ಒಬ್ಬರು ಕಾಮೆಂಟ್ ಹಾಕಿದ್ದಾರೆÉ. (I had the pleasure of attending this concert. I still recollect that this song was right after the Thaniyavardhanam. And when he started singing “Azhudhen” the entire stage and the audience burst out laughing ! That was a hilarious moment : chandramouli prabhakar -youtube 18/jun 2018)

“ಜನನೀ ನಿನ್ನುವಿನಾ ದಿಕ್ಕೆವರಮ್ಮಾ” ಎನ್ನುವ ಸುಬ್ಬರಾಯ ಶಾಸ್ತ್ರಿಗಳ ರೀತಿಗೌಳ ರಾಗದ ಒಂದು ಪ್ರಸಿದ್ಧ ರಚನೆ ಇದೆ. ಇದನ್ನು ಎಂ.ಎಸ್. ಸುಬ್ಬುಲಕ್ಷ್ಮಿಯವರಿಂದ ಹಿಡಿದು ಉದಯೋನ್ಮುಖರವರೆಗೆ ಎಲ್ಲಾ ಪ್ರಸಿದ್ಧ ಸಂಗೀತಗಾರರೂ ಹಾಡಿದ್ದಾರೆ. ಟಿ.ಎಂ. ಕೃಷ್ಣ ಕೂಡ ಹಾಡಿದ್ದಾರೆ. ಆಲಾಪನೆಯಲ್ಲಾಗಲೀ, ಸ್ವರ ಪ್ರಸ್ತಾರದಲ್ಲಾಗಲೀ ಕಿಂಚಿತ್ತೂ ವ್ಯತ್ಯಾಸ ಬಾರದ ಹಾಗೆ ಅದೇ ರಾಗದಲ್ಲಿ “ಇರುಟುಕ್ಕುಂ ಕುರುಲುಂಡು” ಎನ್ನುವ ಗೂಬೆಯ ಕುರಿತಾದ ಮುರುಗನ್ ಅವರ ಕವಿತೆಯನ್ನು ಕೂಡ ಕೃಷ್ಣ ಹಾಡಿದ್ದಾರೆ. ಎರಡರ ಭಾವ ಪರಿಣಾಮವೂ ಒಂದೇ “ಜನನಿ” ಕೊಡುವ ಅನುಭವವನ್ನೇ “ಇರುಟುಕ್ಕುಂ” ಕೂಡ ಕೊಡುತ್ತದೆ. ಕತ್ತಲೆಯ ಘನತೆಯನ್ನು ಮೆರೆಸುವ ಹಾಡು ಅದು. ಅದರ ಪರಿಣಾಮ ರಮಣೀಯತೆಗೆ ಕೃಷ್ಣ ಅವರ ರಾಗದ ಪ್ರಸ್ತುತಿಯೇ ಕಾರಣ.
ಪೆರಿಯಾರ್ ಅವರ ಮೂರ್ತಿಯನ್ನು ಕೆಡವಿದಾಗ ಅದನ್ನು ವಿರೋಧಿಸಿ ಬರೆದ ಮುರುಗನ್ ಅವರ “ಶಿಲೈಗಳೆಲ್ಲಾ ಕಲೈಯಿನ್ ವಡಿವಂ” (ಶಿಲೆಗಳೆಲ್ಲಾ ಕಲಾಕೃತಿಗಳು… ..ಕಾಲ ಕಾಯ್ದಿರಿಸಿದ ಕಲಾಕೃತಿಗಳು) ಎನ್ನುವ ಕವಿತೆಯನ್ನು ಶ್ರೀಕೃಷ್ಣ ಅವರು ಕಲ್ಯಾಣಿ ರಾಗದಲ್ಲಿ ಹಾಡಿದ್ದಾರೆ. ಅದಕ್ಕೆ ಮುನ್ನ ಮೂರ್ತಿಗಳ ವಿಧ್ವಂಸ ಕೃತ್ಯಗಳನ್ನು ಖಂಡಿಸುವ ತಮ್ಮದೇ ಆದ ಪ್ರಸ್ತಾವನೆಯನ್ನೂ ಸೇರಿಸಿದ್ದಾರೆ.
ಸಾಮಾಜಿಕ ಬಹಿಷ್ಕಾರಕ್ಕೆ ಪಕ್ಕಾಗಿ ಎಷ್ಟೆಲ್ಲ ನೋವನ್ನು ಅನುಭವಿಸಿದ್ದರೂ ಮುರುಗನ್ ಅವರು ಮನುಷ್ಯನ ಒಳ್ಳೆಯತನದ ಬಗ್ಗೆ ನಂಬಿಕೆ ಕಳೆದುಕೊಂಡಿಲ್ಲ. ಎಲ್ಲರೂ ಒಳ್ಳೆಯವರೇ ಆದರೆ ಕೆಲವು ಸಂದರ್ಭಗಳು ಅವರನ್ನು ಕೆಟ್ಟವರನ್ನಾಗಿ ಮಾಡುತ್ತವೆ ಎನ್ನುತ್ತಾರೆ. “ಜೀವನದ ಕೆಟ್ಟ ಗಳಿಗೆಗಳನ್ನು ನೆನೆಸಿಕೊಳ್ಳಲು ಇಷ್ಟಪಡುವುದಿಲ್ಲ. ಈಗ ನಾನು ಸುಖವಾಗಿದ್ದೇನೆ” ಎನ್ನುತ್ತಾರೆ.
ದೇವರನ್ನು ನಾನು ನಂಬುವುದಿಲ್ಲ. ದೇವರುಗಳೆಲ್ಲಾ ಮನುಷ್ಯರ ಸೃಷ್ಟಿಗಳೇ ಸಂಕಟ ಬಂದಾಗ ಬೇಕು ವೆಂಕಟರಮಣ. ನನಗೂ ನೋವಾದಾಗ ದುಃಖವಾದಾಗ ದೇವಸ್ಥಾನಗಳಿಗೆ ಹೋಗುತ್ತೇನೆ ಎನ್ನುವ ಮುರುಗನ್ ಅವರ ಮಾತಿನಲ್ಲಿ ಒಂದು ರೀತಿಯ ಮಾಗಿದ ಧ್ವನಿ ಗೋಚರವಾಗುತ್ತದೆ.
ಮುರುಗನ್ ಅಂತಹವರ ಸಾವಿರಾರು ಕವಿಗಳ ಹಾಡುಗಳು ಶಿಷ್ಟ ಸಂಗೀತದ ವೇದಿಕೆಯನ್ನು ಏರಬೇಕಾಗಿದೆ. ಟಿ.ಎಂ. ಕೃಷ್ಣ ಅವರಂತಹ ಕ್ರಾಂತಿಕಾರಿ ವಿದ್ವಾಂಸರು ಅವುಗಳನ್ನು ಪ್ರಸ್ತುತ ಪಡಿಸಿ ಸಾಂಪ್ರದಾಯಕವಾದ ಸಂಗೀತ ವೇದಿಕೆÀಯನ್ನು ಮುರಿದು ಕಟ್ಟಬೇಕಾಗಿದೆ. ಸಾಮಾಜಿಕ ದೃಷ್ಟಿಕೋನದ ಬದಲಾವಣೆಗೆ ಕಾರಣರಾಗಬೇಕಾಗಿದೆ.
(ಪ್ರೇರಣೆ : ಇಂಡಿಯನ್ ಎಕ್ಸಪ್ರೆಸ್ 27/10/19, ಯೂಟ್ಯೂಬ್, ಅಂತರ್ಜಾಲದ ಸಂದರ್ಶನ)
। ಇನ್ನೊಂದು ಭಾಗ : ಮುಂದಿನ ವಾರ ।






sogasada lekhana madam.
ತುಂಬಾ ಚೆನ್ನಾದ ಲೇಖನ