ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪೂಜಾಳದೇ ಕಣ್ಣು, ಬಾಯಿ, ತುಟಿ, ಮೂಗು. ತಲೆಕೂದಲು..

ಕಾಣದ ಕಡಲಿಗೆ ಹಂಬಲಿಸಿದೆ ಮನ…

ಹೆಜ್ಜೆ 10

ಅಚ್ಚರಿಗಳ ಸರಮಾಲೆ

avadhi-column-rahul bw-edited2

ಈಶ್ವರ್ ಬೆಳಿಗ್ಗೆ ಬೇಗನೆ ಎದ್ದು ಸಂಘದ ಶಾಖೆಗೆ ಹೋದ. ಇಷ್ಟು ಸುತ್ತಾಡಿದರೂ, ಇಷ್ಟು ಬಳಲಿದರೂ, ನನ್ನೊಳಗೆ ಹತ್ತಿ ಉರಿಯುತ್ತಿರುವ ಬೆಂಕಿ ಆರುವ ಸೂಚನೆಯೇ ಕಾಣುತ್ತಿರಲಿಲ್ಲ. ಆ ಬೆಂಕಿ ನನ್ನನ್ನು ಆವರಿಸುವ ಜೊತೆಗೆ ನನ್ನ ಸುತ್ತ ನಿರ್ಮಿಸಿಕೊಂಡಿರುವ ಸಾಮ್ರಾಜ್ಯವನ್ನೂ ಅದು ತನ್ನ ಒಡಲಿಗೆ ಸೆಳೆದುಕೊಳ್ಳುವುದೆಂಬ ಆತಂಕ ಕಾಡುತ್ತಿತ್ತು. ಹೊರಗೆ ರಸ್ತೆಯಲ್ಲಿ ಯಾರೋ ಮಹಾಮನೆಯ ಬಗ್ಗೆ ವಿಚಾರಿಸುತ್ತಿದ್ದರು. ನಿದ್ರೆ ಹಾರಿ ಹೋಗಿ ಹಲವು ನಿಮಿಷಗಳೇ ಆಗಿತ್ತು. ಸರಿ ಯಾರು ನೋಡೋಣ ಎಂದು ಕುತೂಹಲದಿಂದ ಹೊರಗೆ ಹೋಗಿ ನೋಡಿದೆ. ಸುಮಾರು ಅರವತ್ತರ ಆಸುಪಾಸಿನ ವ್ಯಕ್ತಿಯೊಬ್ಬರು ಎದುರುಗಡೆ ದಿನಸಿ ಅಂಗಡಿಯಲ್ಲಿ ಮನಗುಂಡಿ ಮಹಾಮನೆಯ ಬಗ್ಗೆ ವಿಚಾರಿಸುತ್ತಿದ್ದರು. ಅವರ ಜೊತೆ ರಿಕ್ಷಾ ಚಾಲಕ ನಿಂತಿದ್ದ. ನಾನು ಹತ್ತಿರ ಹೋಗಿ

avadhi- column- rahul- low res- edited“ಸರ್, ಮಾಹಾಮನೆಗೆ ಹೋಗಬೇಕೆ?” ಎಂದು ಕೇಳಿದೆ.

“ಹೌದು ಸರ್, ನನ್ನ ಪರಿಚಯದವರಾದ ಹೆಗ್ಡೆಯವರು, ಹುಬ್ಬಳ್ಳಿಯಲ್ಲಿ ಇಳಿದು ಕಲಘಟಗಿ ರಸ್ತೆಯಲ್ಲಿ ಹೋಗಿ ಮಹಾಮನೆ ತಲುಪುವಂತೆ ವಿಳಾಸದಲ್ಲಿ ಬರೆದಿದ್ದಾರೆ. ಕಲಘಟಗಿ ರಸ್ತೆಯಲ್ಲಿ ಬಂದು ಕೇಳಿದರೆ ಯಾರು ಸರಿಯಾಗಿ ಹೇಳುತ್ತಿಲ್ಲ” ಎಂದರು.

“ಹೆಗ್ಡೆಯವರೆಂದರೆ ಲಕ್ಷ್ಮಿನಾರಾಯಣ ಹೆಗ್ಡೆಯವರೇ?” ಎಂದು ಕುತೂಹಲದಿಂದ ಕೇಳಿದೆ.

“ಹೌದು ಹೌದು. ಹೆಗ್ಡೆಯವರೆಂದರೆ ಲಕ್ಷ್ಮಿನಾರಾಯಣ ಹೆಗ್ಡೆಯವರೊಬ್ಬರೇ. ನೀವು ರಾಹುಲ್ ಆ?” ಎಂದು ದಿಢೀರನೆ ಕೇಳಿದರು. ನನಗೆ ದಿಗ್ಬ್ರಮೆಯಾಯಿತು.

“ಹೂಂ ರಾಹುಲ್ ನಾನೇ. ನೀವು ಯಾರು ಗೊತ್ತಾಗಲಿಲ್ಲ. ನೀವು ಮಹಾಮನೆಗೆ ಹೋಗಬೇಕಾ?” ಎಂದು ಕೇಳಿದೆ. ಇದೇನಪ್ಪಾ ಬೆಳಿಗ್ಗೆಯೇ ಇಂತಹ ಆಶ್ಚರ್ಯದ ಸಂಗತಿ ನಡೆದುಹೋಯಿತು ಎಂಬ ಯೋಚನೆಗಳು ನನ್ನ ತಲೆಯೊಳಗೆ ಸುತ್ತುತ್ತಿದ್ದವು.

ಮಹಾಮನೆಗೆ ಹೋಗಿ ನನ್ನನ್ನು ಭೇಟಿಯಾಗುವಂತೆ ಹೆಗ್ಗಡೆಯವರು ಹೇಳಿ ಕಳುಹಿಸಿದರೆಂದೂ, ಅವರು ಹುಬ್ಬಳ್ಳಿಯಲ್ಲಿ ಇಳಿದು, ರಿಕ್ಷಾ ಹಿಡಿದು ಮಹಾಮನೆಗೆ ಹೋಗುವ ದಾರಿ ತಪ್ಪಿ ನಾನು ಉಳಿದುಕೊಂಡಿದ್ದ ಅಂಚಿಟಗೇರಿಯ ಈಶ್ವರ್‍ನ ಅಂಗಡಿಯ ಮುಂದೆಯೇ ಬಂದು ನಿಲ್ಲಬೇಕೆಂದರೆ ತಾರ್ಕಣೆಯಲ್ಲದೆ ಮತ್ತೇನು? ನನ್ನನ್ನು ಭೇಟಿಯಾಗಲು ಮಹಾಮನೆಗೆ ಹೋಗಬೇಕೆಂದವರಿಗೆ ಇಲ್ಲಿ ನಾನೇ ಸಿಗಬೇಕೆಂದರೆ ಏನು ಅರ್ಥ? ಇದು ಬರೀ ಕಾಕತಾಳೀಯವೇ? ಮನುಷ್ಯನ ಮನಸ್ಸಿಗೆ ಅಷ್ಟೊಂದು ಶಕ್ತಿ ಇದೆಯೇ? ಅದಲ್ಲದೇ ಏನಾದರೂ ಜೀವರಾಶಿಗಳ ಮಧೆ ದೂರಸ್ಥಚಲನೆ ಅಂದರೆ ಟೆಲಿಪತಿ ಮೂಡಬಹುದೇ? ಈ ಘಟನೆಯಿಂದ ನನ್ನಲ್ಲಿ ಇಂತಹ ನೂರೆಂಟು ಪ್ರಶ್ನೆಗಳು ಹುಟ್ಟಿಕೊಂಡವು. ಅವರಿಗೆ ಮಹಾಮನೆಗೆ ಯೆರಿಕೊಪ್ಪ-ನಾ||ಹುಲಿಕಟ್ಟಿ ಮುಖಾಂತರ ತಲುಪುವಂತೆ ಸೂಚಿಸಿ ಬೀಳ್ಕೊಟ್ಟೆ.

ಈಶ್ವರ್‍ನ ಸುಮಾರು ಎಪ್ಪತ್ತು ವರ್ಷದ ಅಜ್ಜಿ, ಅಂಗಡಿ ಮಳಿಗೆಯ ಎದುರಿಗೆ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಅಡಿಕೆ, ಪಾನ್‍ಮಸಾಲ ಮತ್ತು ಗುಟ್ಕಾ ಖಾಲಿ ಪ್ಯಾಕಟ್‍ಗಳನ್ನು ಗುಡಿಸಿ ತಮ್ಮ ಸ್ವಚ್ಛತಾ ಕಾಳಜಿಯನ್ನು ಮೆರೆಯುತ್ತಿದ್ದರು. ನಾನು ಒತ್ತಾಯಿಸಿ, ಅವರ ಕಸಪೊರಕೆ ಕಸಿದುಕೊಂಡು ಗುಡಿಸಿ ಗುಡ್ಡೆ ಹಾಕಿದೆ. ಆನಂತರ ಅವರು ರಸ್ತೆಯಿಂದ ಧೂಳೆಬ್ಬದಂತೆ ನೀರು ಚೆಲ್ಲಿದರು. ಈಶ್ವರ್‍ನ ತಮ್ಮ ನನ್ನನ್ನು ಕರೆದುಕೊಂಡು ಹೋಗಿ ಅವರ ಮನೆಯ ಹಿತ್ತಲಿನಲ್ಲಿ ಇದ್ದ ಶೌಚಾಲಯವನ್ನು ಮತ್ತು ಸ್ನಾನ ಮಾಡುವ ಜಾಗವನ್ನು ತೋರಿಸಿದ. ಅಜ್ಜಿ ನನ್ನ ಋಣವನ್ನು ತೀರಿಸುವಂತೆ ನನ್ನ ಬಟ್ಟೆಗಳನ್ನು ಒಗೆಯಲು ಮುಂದಾದರು. ನಾನು ಬೇಡವೆಂದು ವಿನಂತಿಸಿದ ಮೇಲೆ ಸುಮ್ಮನಾದರು. ಬಟ್ಟೆ ಒಗೆದು ಮುಗಿಸುವಷ್ಟರಲ್ಲಿ ನನ್ನ ಬೆನ್ನು ನೋವು ತಾರಕಕ್ಕೆ ಏರಿತ್ತು. ನಡಿಗೆಯಲ್ಲೂ ಬೆನ್ನು ನೋವು ಕಾಣಿಸಿಕೊಂಡು ನನ್ನನ್ನು ಹಿಂಸಿಸಿತ್ತು. ಬಟ್ಟೆ ಒಗೆದು ಒಣಗಿಸಲು ಇಟ್ಟು ನನ್ನ ಸ್ನಾನವನ್ನು ಮುಗಿಸಿದೆ.

ಬೆಳಗಿನ ಉಪಹಾರಕ್ಕೆ ಉಪ್ಪಿಟ್ಟು ಪ್ರಾಪ್ತಿಯಾಯಿತು. ತಿಂಡಿ ತಿಂದು ಒಂದು ಲೋಟ ಹಾಲು ಕುಡಿದು ಶಾಲೆಯ ಕಡೆಗೆ ಹೊರಟೆ. ವಿದ್ಯಾರ್ಥಿಗಳೆಲ್ಲಾ ಶಾಲೆಯ ಆವರಣದಲ್ಲಿ ಬಂದು ಸೇರುತ್ತಿದ್ದರು. ಶಾಲೆಯ ಹಿರಿಯ ಶಿಕ್ಷಕರಾದ ಕಣ್ಣೂರ್‍ರವರನ್ನು ಭೇಟಿಯಾಗಿ ನನ್ನ ವಿಚಾರವನ್ನು ತಿಳಿಸಿ ಹಿಂದಿನ ಶಾಲೆಯಲ್ಲಿ ಪಡೆದಿದ್ದ ಪ್ರಮಾಣ ಪತ್ರಗಳನ್ನು ತೋರಿಸಿದೆ. ಅವರು ಬಹಳ ಖುಷಿಪಟ್ಟು ಉಳಿದ ಶಿಕ್ಷಕರಿಗೆ ವಿಷಯ ತಿಳಿಸಿ ಬೆಳಗಿನ ಪ್ರಾರ್ಥನೆಯಾದ ತಕ್ಷಣ ನನಗೆ ಅನುವು ಮಾಡಿಕೊಟ್ಟರು. ವಂದೇ ಮಾತರಂ, ನಾಡಗೀತೆಯಾದ ಜೈಭಾರತ ಜನನಿಯ ತನುಜಾತೆ ಮತ್ತು ರಾಷ್ಟ್ರಗೀತೆಯು ಶಾಲೆಯ ಆವರಣದಲ್ಲಿ ಮೊಳಗಿತು.

ಈಶ್ವರ್‍ನ ಕೊನೆಯ ತಮ್ಮನೇ ಇವೆಲ್ಲನ್ನು ಬಹಳ ಶಿಸ್ತಿನಿಂದ ನಡೆಸಿಕೊಡುತ್ತಿದ್ದ. ನಂತರ ದಿನಪತ್ರಿಕೆಯ ಮುಖ್ಯಾಂಶಗಳ ಪಠಣ. ಶಿಕ್ಷಕರಾದ ಕಣ್ಣೂರ್‍ರವರು ನನ್ನ ಪರಿಚಯ ಮಾಡಿಕೊಟ್ಟರು. ಅವತ್ತೇ ಶಾಲೆಯವರು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದರು. ನಾನೂ ಆ ದಿನವೇ ಹೋಗಿ ಪ್ರಕೃತಿ ಉಳಿವಿನ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಅವರಿಗೆ ಸಂತಸ ತಂದಿತ್ತು. ಸ್ವಲ್ಪ ಮೋಡ ಕವಿದ ವಾತಾವರಣವಿದ್ದರಿಂದ ವಿದ್ಯಾರ್ಥಿಗಳೆಲ್ಲರೂ ಶಾಲೆಯ ಆವರಣದಲ್ಲೇ ಕುಳಿತು ಕೇಳಲು ಒಪ್ಪಿದರು. ನಾನು ಎಂದಿನಂತೆ ನನ್ನ ಮಾತು ಶುರುಮಾಡಿದೆ. ಸ್ವಲ್ಪಹೊತ್ತಿನ ನಂತರ ಬಿಸಿಲು ಬರತೊಡಗಿತು. ಆಗ ನಾನು

“ಅಯ್ಯೋ ಬಿಸಿಲು ಬರುತ್ತಿದೆ. ನೀವು ಆವರಣದಲ್ಲೇ ಕುಳಿತು ಕೇಳುತ್ತೀರೋ? ಅಥವಾ ಹಜಾರದಲ್ಲಿ ಕುಳಿತು ಕೇಳೋಣವೆ?” ಎಂದು ಕೇಳಿದೆ.

“ಇಲ್ಲೇ ಕುಳಿತು ಕೇಳುತ್ತೇವೆ ಸಾರ್” ಎಂದರು.

“ಸರಿ ಹಾಗಾದರೆ, ನಾವು ಪ್ರಕೃತಿ ಮಾತೆಯನ್ನು ಪ್ರಾರ್ಥಿಸೋಣ. ಎಲ್ಲರು ನನ್ನಂತೆ ಹೇಳಿ. ಪರಿಸರ ಮಾತೆ, ನಾವು ಪರಿಸರವನ್ನು ಉಳಿಸಿ ಬೆಳೆಸುವುದಾಗಿ ಪಣತೊಡುತ್ತೇವೆ. ಈಗ ಬಿಸಿಲನ್ನು ತೆಗೆದು ಮೋಡ ಕವಿಯುವಂತೆ ಮಾಡು ತಾಯಿ” ಎಂದು ಹೇಳಿದೆ.

ನನ್ನನ್ನು ಅನುಕರಿಸಿ ಮುಗಿಲು ಮುಟ್ಟುವಂತೆ ಕೂಗಿದರು. ಕೆಲ ಕ್ಷಣಗಳಲ್ಲೇ ಬಿಸಿಲು ಹೋಗಿ ಮೋಡ ಕವಿಯಿತು. ಎಲ್ಲರೂ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಚಪ್ಪಾಳೆ ತಟ್ಟುವುದರಲ್ಲೂ ಶಿಸ್ತಿತ್ತು. ಮೂರು ಚಪ್ಪಾಳೆಗಳೊಂದಿಗೆ, “ಟಟಟಾ ಟಟಟಾ ಟಾಟಾಟಾ” ಎಂಬ ಸದ್ದು. ಅಂಚಿಟಗೇರಿ ಶಾಲೆಯಲ್ಲಿ ಸ್ವಲ್ಪ ಶಿಸ್ತಿನ ಪರಿವಾಠವಿತ್ತು. ಉಪನ್ಯಾಸ ಕೊಡುವಾಗ ಆಂಧ್ರ ಪ್ರದೇಶದ ವ್ಯಕ್ತಿ ಸಾವಿರಾರು ಸಸಿಗಳನ್ನು ನೆಟ್ಟು ಮರವಾಗಿ ಬೆಳೆಸಿ ಒಂದು ಕಾಡನ್ನೇ ನಿರ್ಮಿಸಿದ್ದಾನೆ ಎಂಬ she forestಕಥೆಕೇಳಿದ್ದೆ. ಅವನ ಕಥೆ ಕೇಳಿ ಅಚ್ಚರಿಗೊಂಡರು. ಭೂಮಿ ತಾಯಿಯ ಮೇಲೆ ಪ್ರತಿಜ್ಞೆ ಪಡೆದು, ಸ್ವಚ್ಛತೆ ಮತ್ತು ಏಕತೆ ಬಗ್ಗೆ ಮಾತನಾಡಿ ನನ್ನ ಮಾತುಗಳನ್ನು ಮುಗಿಸಿದೆ. ಹಲವು ವಿದ್ಯಾರ್ಥಿಗಳು ಬಂದು ಶುಭಕೋರಿದರು. ಕಣ್ಣೂರ್‍ರವರು ನನ್ನನ್ನು ಕಚೇರಿಗೆ ಕರೆದುಕೊಂಡು ಹೋಗಿ, ಬಾಳೆಹಣ್ಣು, ನಿಂಬೆ ಪಾನಕ ಕೊಟ್ಟು ಸತ್ಕರಿಸಿದ ನಂತರ ತಮ್ಮ ಶಿಕ್ಷಕರೆಲ್ಲಾ ಸೇರಿ ನಾನು ಬೇಡವೆಂದರೂ, ಅತ್ಯಾವಶ್ಯಕತೆಗೆ ಇರಲಿ ಎಂದು ಐನೂರು ರೂಪಾಯಿಗಳನ್ನು ನೀಡಿದರು.

ಶಾಲೆಯಿಂದ ಪತ್ರವನ್ನು ಪಡೆದು ಮನೆಗೆ ಹೋಗಿ ನನ್ನ ಬಟ್ಟೆಗಳನ್ನು ತೆಗೆದುಕೊಂಡು ಹೊರಟೆ. ನೇಕಾರನಗರಕ್ಕೆ ಹೋಗಲು ಎರಡು ದಾರಿಗಳಿದ್ದವು. ಒಂದು ರಾಜ್ಯ ಹೆದ್ದಾರಿ ಹಿಡಿದು ರಾಷ್ಟ್ರೀಯ ಹೆದ್ದಾರಿಗೆ ಸೇರಿ ತಲುಪುವುದು. ಎರಡನೆಯದು ಗುಡ್ಡಗಳನ್ನು ದಾಟಿ ನೇಕಾರ ನಗರದ ಪ್ರೌಢಶಾಲೆಗೆ ನೇರವಾಗಿ ತಲುಪುವ ದಾರಿ ಹಿಡಿಯುವುದು. ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಮತ್ತು ವಿಷಯುಕ್ತ ಹೊಗೆಯಿಂದ ಉಸಿರುಗಟ್ಟುವಂತೆ ಮಾಡಿತ್ತು. ಹಾಗಾಗಿ ಗುಡ್ಡಗಳನ್ನು ದಾಟಿ ಪರಿಸರವನ್ನು ನೋಡಿಕೊಂಡು ಹೋಗುವುದೇ ಲೇಸು ಎನಿಸಿತು. ಈಶ್ವರ್ ಕೂಡ ಒಪ್ಪಿದ. ಆದರೆ ಶಾಲೆಯ ಶಿಕ್ಷಕರು ನಿರ್ಜನ ಪ್ರದೇಶವಾದ ಗುಡ್ಡಗಳ ದಾರಿ ಒಬ್ಬರೇ ಹೋಗುವುದಕ್ಕೆ ಕ್ಷೇಮವಲ್ಲ ಎಂದು ಎಚ್ಚರಿಸಿದ್ದರಿಂದ ಸ್ವಲ್ಪ ಭಯದಿಂದಲೇ ಮುನ್ನಡೆದೆ.

ಗುಡ್ಡಗಳನ್ನು ದಾಟಿ ಇಳಿಯುವುದು ತ್ರಾಸವೇ ಆಯ್ತು. ಬೆನ್ನು ನೋವಿನ ಬೇನೆ ಬೇರೆ. ಅಷ್ಟಾಗಿ ಬಿಸಿಲಿಲ್ಲದಿದ್ದರಿಂದ ವೇಗವಾಗಿ ನಡೆಯಲು ಶುರುಮಾಡಿದೆ. ಆಗಾಗ ಸಣ್ಣ ಪುಟ್ಟ ನೀರಿನ ಹೊಂಡ ಸಿಗುತ್ತಿದ್ದವು. ಸುತ್ತಲ ವಾತಾವರಣ ಲಕ್ಷಾಂತರ ಸಸಿಗಳನ್ನು ನೆಟ್ಟಿ ಕಾಡನ್ನು ಬೆಳೆಸುವ ಪಣತೊಟ್ಟಂತೆ ಇತ್ತು. ನೇಕಾರನಗರದ ಮುಂಚೆ ಒಂದು ಹಳ್ಳಿ ದಾಟಬೇಕಿತ್ತು. ಮುಸಲ್ಮಾನ ಬಂಧುಗಳ ದೊಡ್ಡ ಸಂಖ್ಯೆ ಇದ್ದಂತಿತ್ತು. ರಸ್ತೆಯ ಪಕ್ಕವೇ ಇದ್ದ ಒಂದು ಪುಟ್ಟ ಮನೆಯ ಹೊರಗೆ ಒಂದು ಹುಡುಗಿ ಪಾತ್ರೆಗಳನ್ನು ತೊಳೆಯತ್ತಿದ್ದಳು. ಒಂದು ಕಡೆಯಿಂದ ನೋಡಿದರೆ ಥೇಟ್ ಪೂಜಾಳ ತರಹವೇ. ಏನಪ್ಪಾ ಬೆಳಿಗ್ಗೆಯಿಂದ ಬರೀ ಆಶ್ಚರ್ಯ ಪಡುವ ಸಂಗತಿಗಳೇ ನಡೆಯುತ್ತಿವೆಯಲ್ಲ ಎಂದು ಸ್ವಲ್ಪ ಹತ್ತಿರವೇ ಹೋಗಿ ನೋಡಿದೆ. ಹೌದು ಬಲಗಡೆಯಿಂದ ನೋಡಿದರೆ ಪೂಜಾಳದೇ ಕಣ್ಣು, ಬಾಯಿ, ತುಟಿ, ಮೂಗು. ತಲೆಕೂದಲು ಸಹ ಅವಳ ತರಹವೇ. ರಸ್ತೆಯಲ್ಲಿ ಹೋಗುತ್ತಿದ್ದ ಜನರನ್ನು ಜೋರಾಗಿ ಮಾತನಾಡಿಸಿದನ್ನೂ ಸೇರಿದಂತೆ ಏನೆಲ್ಲಾ ಸರ್ಕಸ್ ಮಾಡಿದರೂ ಅವಳು ನನ್ನತ್ತ ತಿರುಗಿ ನೋಡಲೇ ಇಲ್ಲ. ನನ್ನ ಭ್ರಮೆಯಿರಬೇಕು ಎಂದು ತಿಳಿದು ನಾನು ಅಲ್ಲಿಂದ ಹೊರಟೆ.

ಪೂಜಾಳ ನೆನಪಿನಲ್ಲೆ ಊರು ದಾಟಿ ಹೊರಬಂದರೆ, ಮತ್ತೊಂದು ಗುಡ್ಡ. ಸ್ವಲ್ಪ ದಟ್ಟವಾದ ಕಾಡು. ಗುಡ್ಡ ಹತ್ತುತ್ತಿರುವಾಗ ಸುಮಾರು ಐವತ್ತು ಮೀಟರ್ ದೂರದಲ್ಲಿ ಒಂದು ಪ್ರಾಣಿ ಕಾಣಿಸಿತು. ಇತ್ತ ನಾಯಿಯೂ ಅಲ್ಲ, ಅತ್ತ ನರಿಯೂ ಅಲ್ಲ. ದೂರ ನಿಂತು ಗುರ್ ಗುರ್ ಎನ್ನುತ್ತಿತ್ತು. ಕಿರುಬವಿರಬಹುದೇ ಎಂಬ ಭಯ. ಕಿರುಬನ ಕತೆಗಳನ್ನು ತಾತ ಮತ್ತು ಅಪ್ಪನಿಂದ ಕೇಳಿದ್ದೆ. ಆದರೂ ಖುದ್ದಾಗಿ ನೋಡಿರಲಿಲ್ಲ. ಅದರ ಲಕ್ಷಣಗಳೂ ನನಗೆ ತಿಳಿಯದು. ಇದು ಕಿರುಬನೇ ಆದರೆ ಏನು ಗತಿಯಪ್ಪಾ ಎಂದು ಹಿಂದೆ ತಿರುಗಿ ನೋಡಿದೆ. ಯಾರೊಬ್ಬರ ಸುಳಿವಿಲ್ಲ. ಗುಡ್ಡ ಹತ್ತುತ್ತಿರುವುದರಿಂದ, ಆಚೆಕಡೆ ಇಳಿಜಾರಿನಲ್ಲಿ ಯಾರು ಬರುತ್ತಿದ್ದಾರೆಂಬುದೂ ಕಾಣುತ್ತಿರಲಿಲ್ಲ. ಸರಿ ಇದನ್ನು ನಾನೇ ಒಂದು ಕೈ ನೋಡಿಕೊಳ್ಳಬೇಕು ಎಂದು ನಿರ್ಧಾರಿಸಿ, ಕೈಯಲ್ಲಿದ್ದ ಕೊಡೆಯನ್ನು ಎತ್ತಿ ಅದರತ್ತ ಜೋರಾಗಿ ಬೀಸಿದೆ. ಅದು ಸ್ವಲ್ಪ ಬೆದರಿತು.

ಅದೂ ಕೂಡ ನನ್ನನ್ನು ನೋಡಿ ಇದ್ಯಾವ ಪ್ರಾಣಿಯಪ್ಪಾ ಎಂದು ಹೆದರಿದೆಯೇ? ಸ್ವಲ್ಪ ಧೈರ್ಯ ಬಂದಂತಾಗಿ ಒಂದೆರಡು ಹೆಜ್ಜೆ ಅದರತ್ತ ಮುಂದೆ ಹೋದೆ. ಅದೂ ಒಂದೆರಡು ಹೆಜ್ಜೆ ನನ್ನತ್ತ ಬಂತು. ಅಪಾಯದ ಸೂಚನೆಯನ್ನು ತಿಳಿದು ಇನ್ನು ತಡಮಾಡಿದರೆ ಸರಿಹೋಗುವುದಿಲ್ಲ ಎಂದು ನನ್ನ ಕೊಡೆಯನ್ನು ಇನ್ನೊಂದು ಸಲ ಜೋರಾಗಿ ಅದರತ್ತ ಬೀಸಿದೆ. ನಾನು ಬೀಸಿದ ರಭಸಕ್ಕೆ ಕೊಡೆ ತೆರೆದುಕೊಂಡಿತು. ಅದು ಬೆಚ್ಚಿ ಒಂದೈದು ಹೆಜ್ಜೆ ಹಿಂದೆ ಓಡಿ ಹೋಗಿ ನಿಂತಿತು. ಇದೇ ಸರಿಯಾದ ಸಮಯವೆಂದು ತಿಳಿದು ತೆರೆದ ಕೊಡೆಯನ್ನು, ನಾನು ಅದಕ್ಕೆ ಕಾಣದಂತೆ ಮುಚ್ಚಿಕೊಂಡು ಅದರತ್ತ “ಬ್ಯಾಬ್ಯಾಬ್ಯಾಬ್ಯಾಯ್‍ಯ್” ಎಂದು ಜೋರಾಗಿ ಕಿರುಚಿಕೊಂಡು ಓಡಿದೆ. ಅತ್ತ ಏನಾಗುತ್ತಿದೆ ಎಂದು ನನಗೆ ಕಾಣಲಿಲ್ಲ. ಒಂದಿಪ್ಪತ್ತು ಹೆಜ್ಜೆ ಓಡಿದ ನಂತರ ಕೊಡೆಯನ್ನು ಇಳಿಸಿ ನೋಡಿದರೆ ಅದು ಮಾಯವಾಗಿತ್ತು. ಎತ್ತ ಓಡಿತೋ ನನಗೆ ತಿಳಿಯದು.

ಗುಂಪಿನೊಂದಿಗೆ ವಾಪಸ್ಸು ಬಂದರೆ ನನಗೆ ತೊಂದರೆಯಾಗುವುದು ಖಚಿತವೆಂದು ತಿಳಿದು, ಬದುಕಿದೆಯಾ ಬಡಪಾಯಿ ಎಂದು ವೇಗವಾಗಿ ಓಡಿಕೊಂಡು ಬೆಟ್ಟ ಇಳಿದು ಒಂದು ಕೊಳದ ಹತ್ತಿರವಿದ್ದ ಒಂದು ಹುಣಸೆಯ ಮರದ ಕೆಳೆಗೆ ಬ್ಯಾಗನ್ನು ಬಿಸಾಡಿ, ನನ್ನ ಬೆವರನ್ನು ಕೊಳದ ನೀರಿನಲ್ಲಿ ತೊಳೆದು, ನಂತರ ಹುಣಸೆ ಮರದ ನೆರಳಿನಲ್ಲಿ ಕುಳಿತು ಸ್ವಲ್ಪ ವಿರಮಿಸಿದೆ. ಮುಂದುವರಿದು ಒಂದೆರಡು ಮೈಲು ನಡೆದು ನೇಕಾರನಗರ ತಲುಪಿದೆ. ಊರ ಹೊರಗೆ ಒಂದಿಪ್ಪತ್ತು ಟೆಂಪೋಗಳೊಂದಿಗೆ ಬಂದು ಹತ್ತಾರು ದೊಡ್ಡ ಟೆಂಟುಗಳನ್ನು ಹಾಕಿಕೊಂಡು ವಾಸವಾಗಿದ್ದ ಕೆಲವು ಕುಟುಂಬಗಳನ್ನು ನೋಡಿ ಆಶ್ಚರ್ಯವಾಯಿತು.

ಮನೆಯ ಪಾತ್ರೆ ಮತ್ತು ಸಾಮಾನುಗಳೆಲ್ಲವೂ ಆ ಟೆಂಟಿನಲ್ಲಿ ಇತ್ತು. ಹತ್ತಿರ ಹೋಗಿ ವಿಚಾರಿಸಬೇಕು ಎಂದು ಎನಿಸಿದರೂ ಕೇಳುವ ಉತ್ಸಾಹ ನನ್ನಲ್ಲಿರಲಿಲ್ಲ. ಸ್ವಲ್ಪ ದೂರ ನಡೆದು ನೇಕಾರನಗರದ ಸರ್ಕಾರಿ ಪ್ರೌಢಶಾಲೆಯನ್ನು ತಲುಪಿದೆ. ವಿದ್ಯಾರ್ಥಿಗಳೆಲ್ಲರೂ ಹೊರಗೆ ಓಡಾಡುತ್ತಿದ್ದರು. ಊಟದ ಸಮಯವಿರಬಹುದು ಎಂದು ತಿಳಿದು, ಶಾಲೆಯ ಕಾರ್ಯಾಲಯಕ್ಕೆ ಹೋಗಿ ನೋಡಿದರೆ, ಶಿಕ್ಷಕರು ಇನ್ನೇನು ಊಟ ಮಾಡಲು ಶುರುಮಾಡುತ್ತಿದ್ದಂತೆ ಕಾಣಿಸಿತು. ಬಹುತೇಕ ಮಹಿಳಾ ಶಿಕ್ಷಕರ ಜೊತೆ ಓರ್ವ ಹಿರಿಯ ಶಿಕ್ಷಕ. ಆ ಹಿರಿಯ ಶಿಕ್ಷಕನನ್ನು ಮಾತನಾಡಿಸಿ, ನನ್ನ ವಿಚಾರವನ್ನು ತಿಳಿಸಿದೆ. ತುಂಬಾ ಅಧಿಕಪ್ರಸಂಗತನದ ವ್ಯಕ್ತಿ. ಏನೇನೋ ತರಲೆ ಪ್ರಶ್ನೆಗಳನ್ನು ಕೇಳಲು ಶುರುಮಾಡಿದ.

“ಓ ನೀವು ಬರಿ ನಡಿಗೆಯೆಲ್ಲೆ ಹೋಗುತ್ತಿದ್ದೀರ? ಬಸ್ಸಲ್ಲೇಕೆ ಹೋಗಬಾರದು?” ಎಂದು ಕೇಳಿದ. ನಾನು ಅದನ್ನು ಹೇಳಿದರೆ ಅವನು ಅರ್ಥ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಹಾಗಾಗಿ ಅವನ ಪ್ರಶ್ನೆಗೆ ಮರು ಪ್ರಶ್ನೆ ಕೇಳಬೇಕೆಂದೆನಿಸಿತು.

“ಕಾಲ್ನಡಿಗೆಯಲ್ಲೇಕೆ ಹೋಗಬಾರದು?” ಎಂದು ಕೇಳಿದೆ. ಅದಕ್ಕೆ ಅವರಲ್ಲಿ ಉತ್ತರವಿರಲಿಲ್ಲ.

rahul dayalu map“ಇವತ್ತು ರಾತ್ರಿ ಹಾವೇರಿ ತಲುಪುತ್ತೀರ?” ಎಂದು ಕೇಳಿದರು.

“ಒಂದು ದಿನದಲ್ಲಿ ಅರವತ್ತೈದು ಮೈಲುಗಳು ನಡೆಯುವುದಕ್ಕೆ ಸಾಧ್ಯವೇ ಸ್ವಾಮಿ?” ಎಂದು ಸ್ವಲ್ಪ ಜೋರು ಮಾಡಿದೆ. ಅವರು ಸಾಮಾನ್ಯ ಜ್ಞಾನವೂ ಇಲ್ಲದವನಂತೆ ಮಾತನಾಡುತ್ತಿದ್ದರು. ಮೊದಲೇ ದೂರದ ಊರಿನಿಂದ ಕಾಡು-ಮೇಡು ದಾಟಿ ಬರುವಷ್ಟರಲ್ಲಿ ಸುಸ್ತಾಗಿತ್ತು. ಇವನ ಪ್ರಶ್ನೆಗಳನ್ನು ಕೇಳಿ ನನ್ನ ಮೈಯೆಲ್ಲಾ ಉರಿದುಹೋಗುತ್ತಿತ್ತು.

“ಈ ಕೆಲಸದಿಂದ ನಿಮಗೇನು ದೊರೆಯುತ್ತದೆ” ಎಂದು ಕೇಳಿದ.

“ಏನು ಸಿಗಬೇಕು ಎಂದು ನಾನು ನಿರೀಕ್ಷಿಸಬಹುದು ಎಂದು ನೀವೇ ಹೇಳಿಕೊಡಿ” ಎಂದು ಹೇಳಿದೆ. ಅವನಿಗೆ ನಾ ಹೇಳಿದ್ದು ಅರ್ಥವೇ ಆಗಲಿಲ್ಲವೇನೋ. “ಸರಿ, ಮುಖ್ಯೋಪಾಧ್ಯಾಯರು ಹೊರಗೆ ಹೋಗಿದ್ದಾರೆ. ಬರಲು ಇನ್ನು ಅರ್ಧ ಗಂಟೆಯಾಗುತ್ತದೆ” ಎಂದು ಹೇಳಿದರು.

“ಸರಿ, ನಾನು ಒಂದು ನಲವತ್ತೈದು ನಿಮಿಷಗಳು ಬಿಟ್ಟು ಬರುತ್ತೇನೆ” ಎಂದು ಹೇಳಿ ಹೊರಡಲು ಸಿದ್ಧನಾದೆ. ಅಷ್ಟರಲ್ಲಿ ಉಳಿದ ಶಿಕ್ಷಕಿಯರು ಕುತೂಹಲದಿಂದ ನನ್ನನ್ನು ಮಾತನಾಡಿಸಿ, ನನ್ನ ಬಗ್ಗೆ ಕೇಳಿ ತಿಳಿದುಕೊಂಡರು. ಆಶ್ಚರ್ಯದಿಂದ “ನಿಮ್ಮನ್ನು ನೋಡಿ ಯಾಕೆ ಇಷ್ಟೊಂದು ಬೆವರಿದ್ದಾರೆ ಎಂದುಕೊಂಡೆವು. ಈಗ ನೀವು ಅಂಚಿಟಗೇರಿಯಿಂದ ನಡೆದುಕೊಂಡು ಬಂದಿರಾ?” ಎಂದು ಕೇಳಿದರು.

“ಹೂಂ ಮೇಡಮ್” ಎಂದೆ.

“ಮೈಸೂರು ತನಕನೂ ನಡೆದುಕೊಂಡೇ ಹೋಗುತ್ತೀರ?” ಎಂದು ಮತ್ತೊಬ್ಬರು ಕೇಳಿದರು. ಹೌದು ಎಂಬುವಂತೆ ತಲೆಯಳ್ಳಾಡಿಸಿದೆ.

“ಗ್ರೇಟ್ ಸರ್ ನೀವು. ನಾವು ಬರೀ ದಿನಪತ್ರಿಕೆಗಳಲ್ಲಿ ಓದುತ್ತಿದ್ದೆವು. ಅಥವಾ ಟಿ.ವಿ.ಯಲ್ಲಿ ನೋಡುತ್ತಿದ್ದೆವು. ಆದರೆ ಈ ತರಹ ಕೆಲಸ ಮಾಡುವುವರ ಭೇಟಿಯಾಗಿದ್ದು ಇದೇ ಮೊದಲು” ಎಂದರು. ನಾನು ನಕ್ಕು ಸುಮ್ಮನಾದೆ.

“ಸರ್, ಸ್ವಲ್ಪ ನೀರು ಕುಡೀರಿ” ಎಂದು ಕುಡಿಯುವುದಕ್ಕೆ ನೀರು ಕೊಟ್ಟು ಸತ್ಕರಿಸಿದರು. ನಾನು ಶಿಕ್ಷಕಿಯರ ವಿಶ್ವಾಸಗಳಿಸಿದ್ದನ್ನು ನೋಡಿ ಆ ಅಧಿಕಪ್ರಸಂಗಿ ಶಿಕ್ಷಕನಿಗೆ ಹೊಟ್ಟೆ ಉರಿ ತರಿಸಿತ್ತೇನೋ.

“ಮೇಡಮ್. ಇವರು ಪ್ರತೀ ತರಗತಿಗೂ ಉಪನ್ಯಾಸ ಕೊಡಲಿ. ಎಲ್ಲರನ್ನು ಆವರಣದಲ್ಲಿ ಕೂರಿಸಿದರೆ ಮಕ್ಕಳನ್ನ್ನು ಹಿಡಿದಿಡುವುದು ಕಷ್ಟ” ಎಂದರು.

“ಸರ್, ಆ ತರಹ ಪ್ರತೀ ತರಗತಿಗೆ ಉಪನ್ಯಾಸ ಕೊಡಲಾಗುವುದಿಲ್ಲ. ಒಂದು ಉಪನ್ಯಾಸಕ್ಕೆ ಕನಿಷ್ಟ ನಲವತ್ತು ನಿಮಿಷಗಳು ಬೇಕು. ಈ ದಿನವೆಲ್ಲಾ ಇಲ್ಲೇ ಕಳೆಯಲು ಸಾಧ್ಯವಿಲ್ಲ. ನಾನು ಮುಂದಿನ ಸರ್ಕಾರಿ ಶಾಲೆಗೆ ಹೋಗಬೇಕು” ಎಂದು ಕಡ್ಡಿ ತುಂಡಾದಂತೆ ಹೇಳಿದೆ.

ಅವರವರಲ್ಲೇ ಚರ್ಚಿಸಿ ಬೆಳಗ್ಗೆ ಪ್ರಾರ್ಥನೆಗೆ ನಿಲ್ಲಿಸುವಂತೆ ಎಲ್ಲರನ್ನೂ ಒಟ್ಟಾಗಿ ನಿಲ್ಲಿಸುವುದೆಂದು ನಿರ್ಧರಿಸಿದರು. ರಾಜಶ್ರೀ ಪಾಟೀಲ ಎಂಬ ಶಿಕ್ಷಕಿ ನನಗೆ ಮಧ್ಯಾಹ್ನದ ಊಟ ಮಾಡುವಂತೆ ಒತ್ತಾಯಿಸಿ, ಖುದ್ದು ಬಿಸಿ ಊಟವನ್ನು ಬಡಿಸಿ ವಿನಯದಿಂದ ಸತ್ಕರಿಸಿದರು. ಬೇಳೆ ಹುಗ್ಗಿ, ಚಪಾತಿ, ಪಲ್ಯ, ಅನ್ನ ಸಾಂಬಾರ್. ಊಟ ಮಾಡಿ ಶಾಲೆಯ ಆವರಣದಲ್ಲಿ ಸ್ವಲ್ಪ ಹೊತ್ತು ಅಡ್ಡಾಡಿ ಬಂದೆ. ಶಿಕ್ಷಕರೆಲ್ಲರೂ ಊಟ ಮುಗಿಸಿ, ಶಾಲೆಯ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಒಟ್ಟುಗೂಡಿಸಿದರು. ಧ್ವನಿವರ್ಧಕವೂ ಸಿದ್ಧವಾಯಿತು. ಹಿರಿಯ ಶಿಕ್ಷಕನೇ ವಿದ್ಯಾರ್ಥಿಗಳಿಗೆ ನನ್ನ ಪರಿಚಯ ಮಾಡಿಸಿ, ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟರು.

ಎಂದಿನಂತೆ ನಾನು ಮಾತು ಆರಂಭಿಸಿ ಅದೇ ವೇಗದಲ್ಲಿ ಉಪನ್ಯಾಸವನ್ನು ಕೊಟ್ಟು ಮುಗಿಸಿದೆ. ನೇಕಾರನಗರ ಹುಬ್ಬಳ್ಳಿಗೇ ಸೇರಿದ್ದರಿಂದ ನನ್ನ ಉಪನ್ಯಾಸದ ಮೇಲೆ ಅಲ್ಲಿನ ಮಕ್ಕಳು ಸ್ವಲ್ಪ ದಿಟ್ಟತನದಿಂದಲೇ ಕೆಲವು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. ಸಾಂಧರ್ಭಿಕವಾಗಿ ಬೇಕಾದಷ್ಟು ತಮಾಷೆ ಮಾಡಿದ್ದೆ. ಹಾಗಾಗಿ ವಿದ್ಯಾರ್ಥಿಗಳು ನನಗೆ ಹತ್ತಿರವಾಗಿದ್ದರು. ಉಪನ್ಯಾಸವನ್ನು ಬರೀ ವಿದ್ಯಾರ್ಥಿಗಳಲ್ಲದೇ, ಪ್ರೌಢಶಾಲೆಯ ಮತ್ತು ಪ್ರಾಥಮಿಕ ಶಾಲೆಯ ಶಿಕ್ಷಕರೂ ಕೂಡ ಬಹಳ ಏಕಾಗ್ರತೆಯಿಂದ ಕೇಳಿ, ವಿದ್ಯಾರ್ಥಿಗಳ ಜೊತೆಯೇ ಅವರೂ ನಕ್ಕು ನಲಿದು, ಪ್ರತಿಜ್ಞೆ  ಸ್ವೀಕರಿಸಿದರು. ಉಪನ್ಯಾಸದ ನಂತರ ನನಗೆ ಒಂದು ಶಾಲು ಹೊದಿಸಿ, ಗುಲಾಬಿ ಹೂವಿನ ಗುಚ್ಚವನ್ನು ನೀಡಿ ಸನ್ಮಾನಿಸಿದರು. ಅವರ ಈ ಗೌರವ ಮತ್ತು ವಿಶ್ವಾಸ ನನ್ನನ್ನು ಬೆರಗಾಗುವಂತೆ ಮಾಡಿತು.

ಈ ಅನಿರೀಕ್ಷಿತ ಬೆಳವಣಿಗೆಯಿಂದ ಚೇತರಿಸಿಕೊಂಡು ನನಗೆ ಹೊದಿಸಿದ ಶಾಲನ್ನು ತೆಗೆದು “ಇದು ಅನಿರೀಕ್ಷಿತ. ನಿಮ್ಮ ಈ ವಿಶ್ವಾಸಕ್ಕೆ ನಾನು ಚಿರಋಣಿ. ಆದರೆ ಕಾಲ್ನಡಿಗೆಯ ಪ್ರಯಾಣದ ಕಾರಣ, ನಾನು ನೀವು ಕೊಟ್ಟ ವಸ್ತುಗಳನ್ನು ನನ್ನ ಜೊತೆ ಓಯ್ಯಲು ನನಗೆ ಆಗುವುದಿಲ್ಲ. ಎಲ್ಲೆಲ್ಲೂ ಹೆಣ್ಣಿನ ಶೋಷಣೆಯ ಬಗ್ಗೆ ದಿನ ಬೆಳಗಾದರೆ ಪತ್ರಿಕೆಗಳಲ್ಲಿ ಓದಿ ಬಹಳ ಬೇಜಾರಾಗಿದೆ. ಈ ದಿನ ಹೆಣ್ಣು ಅಬಲೆಯಲ್ಲ ಸಬಲೆಯೆಂದು ತಿಳಿಸಬೇಕಿದೆ. ನಾವೆಲ್ಲರೂ ಹೆಣ್ಣನ್ನು ಅತ್ಯಂತ ಗೌರವ, ಪ್ರೀತಿ, ವಿಶ್ವಾಸದಿಂದ ನೋಡಬೇಕಿದೆ. ಆದ್ದರಿಂದ ನಾನು ಈ ಶಾಲನ್ನು ನಿಮ್ಮ ಶಾಲೆಯ ಒಬ್ಬಳು ವಿದ್ಯಾರ್ಥಿನಿಗೆ ಹೊದಿಸಿ ಗೌರವಿಸುತ್ತೇನೆ” ಎಂದು ಹೇಳಿ ನನ್ನ ಉಪನ್ಯಾಸವನ್ನು ಏಕಾಗ್ರತೆಯಿಂದ ಕೇಳಿದ್ದ ಮತ್ತು ಪ್ರತಿಜ್ಞೆ ಸ್ವೀಕರಿಸಿದ್ದ ಹುಡುಗಿಯರಲ್ಲಿ ಒಬ್ಬಳನ್ನು ಕರೆದು ಶಾಲು ಹೊದಿಸಿ ಅವಳ ಶಿಕ್ಷಣ ಮತ್ತು ಮುಂದಿನ ಜೀವನಕ್ಕೆ ಶುಭಹಾರೈಸಿದೆ. ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿ ಸ್ವಾಗತಿಸಿದರು.

ನಂತರ ಒಂದಷ್ಟು ಹುಡುಗಿಯರು ತಮ್ಮ ಪುಸ್ತಕಗಳನ್ನು ತಂದು ಸ್ವಹಸ್ತಾಕ್ಷರ ಕೊಡುವಂತೆ ಪೀಡಿಸಿದಾಗ “ನಾನೇನು ಹೀರೋನೇ? ಅಥವಾ ದೊಡ್ಡ ಕ್ರೀಡಾಪಟುವೇ? ನನ್ನ ಆಟೋಗ್ರಾಫ್ ತೆಗೆದುಕೊಂಡು ಏನು ಮಾಡುವಿರಿ?” ಎಂದು ಕೇಳಿದೆ.

“ನೀವು ನಮಗೆ ಸ್ಪೂರ್ತಿ ಸರ್. ನಿಮ್ಮ ಆಟೋಗ್ರಾಫ್ ಜೊತೆಗೆ ನಿಮ್ಮ ದೂರವಾಣಿ ಸಂಖ್ಯೆಯನ್ನೂ ಕೊಡಿ. ಅವಾಗವಾಗ ದೂರವಾಣಿ ಮಾಡಿ ಮಾರ್ಗದರ್ಶನ ಪಡೆಯುತ್ತೇವೆ” ಎಂದು ಹೇಳಿದಳು. ಯಾರು ಇಷ್ಟು ಆತ್ಮವಿಶ್ವಾಸದಿಂದ ಮಾತನಾಡುತ್ತಿರುವ ಬೆಡಗಿ ಎಂದು ನಾನು ಕತ್ತನ್ನು ಎತ್ತಿ ನೋಡಿದೆ. ಕೆನೆಹಾಲು ಬಣ್ಣ, ಸ್ಪಷ್ಟವಾದ ಮತ್ತು ಸಲಿಗೆ ಮಿಶ್ರಣದ ಮಾತು, ಮುತ್ತುಗಳನ್ನು ಉದುರಿಸುವ ಅವಳ ಕಿಲ ಕಿಲ ನಗೆ ಸೂಜಿಗಲ್ಲಂತೆ  ಸೆಳೆಯುತ್ತಿತ್ತು.

“ಸರಿ ಎಲ್ಲರಿಗೂ ಆಟೋಗ್ರಾಫ್ ನೀಡುತ್ತೇನೆ. ಯಾರೂ ಕೂಡ ಗಲಾಟೆ ಮಾಡಬಾರದು” ಎಂದು ಹೇಳಿದೆ. ಆ ಚಂದದ ಹುಡುಗಿಗಿ ಕೈಯಲ್ಲಿದ್ದ ಗುಲಾಬಿ ಹೂಗುಚ್ಚವನ್ನು ನೀಡಿ “ನೀನು ನೋಡಲು ಸೂಪರ್ ಆಗಿ ಇದಿಯಾ. ನೀನು ಹೀರೋಯಿನ್ ಆದ ಮೇಲೆ ನನಗೂ ಇದೇ ತರಹ ಆಟೋಗ್ರಾಫ್ ಕೊಡಬೇಕು” ಎಂದು ಅವಳ ಕಾಲೆಳೆದೆ. ಅಲ್ಲಿದ್ದ ಹುಡುಗ ಹುಡುಗಿಯರೆಲ್ಲಾ ಓಹೋ ಎಂದು ಕೂಗಿದರು. ಅವಳು ನಾಚಿ ನೀರಾಗಿ “ಥ್ಯಾಂಕ್ಯು ಸರ್” ಎಂದಳು. ಅವಳಿಗೆ ಸೇರಿದಂತೆ ಹಲವು ವಿದ್ಯಾರ್ಥಿಗಳಿಗೆ ಕೆಲವು ಹಿತವಚನ, ದೂರವಾಣಿ ಸಂಖ್ಯೆಯೊಂದಿಗೆ ನನ್ನ ಹಸ್ತಾಕ್ಷರವನ್ನು ನೀಡಿದೆ. ನಂತರ ಶಿಕ್ಷಕರೆಲ್ಲರೂ ನನಗೆ ಹಣ್ಣಿನ ಪಾನಕವನ್ನು ನೀಡಿ ಸತ್ಕರಿಸಿ ನನ್ನ ಮುಂದಿನ ಪಯಣಕ್ಕೆ ಶುಭಕೋರಿದರು.

footprints (1)ಅಲ್ಲಿಂದ ಹೊರಟು ರಾಷ್ಟ್ರೀಯ ಹೆದ್ದಾರಿ ಹಿಡಿದು ಅದುರ್‍ಗುಂಚಿ ಗ್ರಾಮದ ಕಡೆಗೆ ನಡೆದೆ. ಬೈಪಾಸ್ ರಸ್ತೆಯಲ್ಲಿ ಎಡಕ್ಕೆ ತಿರುಗಿ ಒಳಕ್ಕೆ ಒಂದೆರಡು ಮೈಲು ನಡೆದರೆ ಗ್ರಾಮ ಸಿಕ್ಕಿತು. ಸ್ವಲ್ಪ ದೊಡ್ಡದಾದ ಗ್ರಾಮವೇ. ರಸ್ತೆಬದಿಯಲ್ಲಿ ಕೆಲವು ಮಠ ಮತ್ತು ಗುಡಿಗಳು ಕಂಡವು. ಗ್ರಾ.ಪಂ ಕಾರ್ಯಾಲಯವನ್ನು ವಿಚಾರಿಸಿಕೊಂಡು ಹೋದೆ. ನನ್ನನ್ನು ಸುಮಾರು ಒಂದು ಗಂಟೆ ಕಾಯಿಸಿದ ನಂತರ ಗ್ರಾ.ಪಂಯಿಂದ ಯಾವುದೇ ಸಹಾಯ ಸಿಗುವುದಿಲ್ಲವೆಂದು ಗ್ರಾ.ಪಂ ಪಿಡಿಓ ಹೇಳಿದ. ನನಗೆ ಅದು ಬೇಜಾರಿಲ್ಲ, ಆದರೆ ನಾನು ಯಾರೆಂಬುದನ್ನು ತಿಳಿದುಕೊಳ್ಳಲೂ ಸಹ ಅವನು ಪ್ರಯತ್ನಿಸಲಿಲ್ಲ. ಪಿಡಿಓಗಳ ಅಹಂಕಾರ ವಿರುದ್ಧ ಜನಪ್ರತಿನಿಧಿಗಳು ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಗ್ರಾ.ಪಂನಲ್ಲಿ ಪಿಡಿಓನ ಅವಶ್ಯಕತೆಯೇ ಇಲ್ಲವೆಂದು ಮತ್ತು ಪಿಡಿಓ ಹುದ್ದೆಯನ್ನೇ ರದ್ದುಗೊಳಿಸುವಂತೆ ಕೋರಿದ್ದುದು ನೆನಪಾಯಿತು.

ಇವತ್ತು ನಾನೇ ಖುದ್ದಾಗಿ ಅವನ ಅಹಂಕಾರ ಕಂಡಿದ್ದು ನನಗೆ ತುಂಬಾ ರೇಗಿತ್ತು. ಕೊನೆಗೆ ನೀರು ಬಿಡುವವ ಓಡಿ ಬಂದು ತನ್ನ ಕೋಣೆಯಲ್ಲಿಯೇ ಉಳಿದುಕೊಳ್ಳಬಹುದೆಂದು ಹೇಳಿ ತನ್ನ ಮಾನವೀಯತೆ ಮೆರೆದ. ಆದರೂ ನಾನು ಬೇಡವೆಂದು ಪ್ರೌಢಶಾಲೆಯ ಕಡೆಗೆ ನಡೆದೆ. ನನ್ನ ಅದೃಷ್ಟ, ಶಿಕ್ಷಕರು ಆಗ ತಾನೇ ಹೊರಡುವರಿದ್ದರು. ಅವರನ್ನು ಭೇಟಿಯಾಗಿ ನನ್ನ ಪರಿಸ್ಥಿತಿಯನ್ನು ವಿವರಿಸಿದೆ. ಅವರು ತಕ್ಷಣ ಸ್ಪಂದಿಸಿ, ಅದೇ ಗ್ರಾಮದಲ್ಲಿರುವ ಎಸ್.ಕೆ.ಪಾಟೀಲರ ಶಾಲೆಗೆ ಕರೆದುಕೊಂಡು ಹೋಗಿ ನನಗೆ ವಾಸ್ತವ್ಯ ಮತ್ತು ಊಟದ ವ್ಯವಸ್ಥೆ ಎರಡನ್ನೂ ಮಾಡಿದರು.

ವಸತಿ ಶಾಲೆಯಾದ್ದರಿಂದ ಪುಟ್ಟ ಮಕ್ಕಳು ನಾನು ಶಾಲೆಗೆ ಹೊಸ ಶಿಕ್ಷಕನಿರಬಹುದು ಎಂದು ಗ್ರಹಿಸಿ ನನ್ನ ಬಗ್ಗೆ ವಿಚಾರಿಸಿಕೊಂಡು, ನನ್ನ ಜೊತೆ ಕಾಲ ಕಳೆದು ಖುಷಿಪಟ್ಟರು. ಮಕ್ಕಳಲ್ಲಿ ನನ್ನ ಗಮನ ಸೆಳೆದ ಹುಡುಗ ಉಮರ್ ಫಾರೂಕ್. ತನ್ನ ತಂದೆ ಕೆಲವು ತಿಂಗಳ ಹಿಂದೆ ಒಂದು ಅಪಘಾತದಲ್ಲಿ ತೀರಿಹೋದರೆಂದು ತಿಳಿಸುವಾಗ ಅವನ ಕಣ್ಣುಗಳು ತೇವವಾಗಿದ್ದವು. ಅವನ ತಾಯಿ ಬೆಂಗಳೂರಿನಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾರೆಂದು ತಿಳಿಸಿದ. ಬಹಳ ಸಾತ್ವಿಕ ಹುಡುಗ. ಅವನ ಪಾಡಿಗೆ ಅವನು ಇರುತ್ತಿದ್ದ. ಇನ್ನು ವಿನಾಯಕ್ ಎಂಬ ಹುಡುಗ ನನ್ನ ಜಾತಿಯನ್ನು ತಿಳಿದುಕೊಳ್ಳಲು ಹಂಬಲಿಸುತ್ತಿದ್ದ. “ನೀವು ವೀರಶೈವರೇನ್ರಿ? ನೀವು ವೀರಶೈವರೇನ್ರಿ?” ಎಂದು ನನ್ನ ಹಿಂದೆಯೇ ಓಡಾಡುತ್ತಿದ್ದ. ಯಾಕೆ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಜಾತಿಯ ಭ್ರಮೆ ಅಂಟಿಕೊಂಡಿತ್ತೋ ನಾ ಕಾಣೆ.

ಶಾಲೆಯ ಶಿಕ್ಷಕರಾದ ರಾಘವೇಂದ್ರ ಮತ್ತು ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಕೆ ಪಾಟೀಲ್‍ರವರು ನನ್ನನ್ನು ಆದರತೆಯಿಂದ ಸತ್ಕರಿಸಿದರು. ಅವರ ಸರಳತೆಯಿಂದ ಅವರು ಬಹುಬೇಗ ನನ್ನ ಮನಸ್ಸನ್ನು ಗೆದ್ದುಬಿಟ್ಟರು. ಅವರಂತಹ ಒಬ್ಬ ಸರಳ ವ್ಯಕ್ತಿತ್ವದ ಮುಖ್ಯೋಪಾಧ್ಯಾಯರನ್ನು ನಾನು ಈವರೆಗೆ ನೋಡಿಯೇ ಇಲ್ಲ ಎಂದರೆ ಅತಿರೇಖವಾಗಲಾರದು. ಅಷ್ಟು ಕಾಳಜಿ ತಮ್ಮ ಸಂಸ್ಥೆಯ ಮಕ್ಕಳ ಮೇಲೆ. ಸುಮಾರು ಇಪ್ಪತ್ತೈದು ವರ್ಷಗಳಿಂದ ತಮ್ಮ ಪ್ರೌಢಶಾಲೆಯಲ್ಲಿ ಹುಡುಗಿಯರಿಗೆ ಉಚಿತವಾಗಿ ಶಿಕ್ಷಣಕೊಡುತ್ತಿರುವುದಾಗಿ ಬಹಳ ಹೆಮ್ಮೆಯಿಂದ ತಿಳಿಸಿದರು. ಸಂಸ್ಥೆಯ ಸ್ಥಾಪಕರಾದಂತಹ ಶಂಕರೇಗೌಡ ಪಾಟೀಲರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕರ್ನಾಟಕ ಏಕೀಕರಣಕ್ಕಾಗಿ ಹಲವು ದಿವಸಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿ ಹೋರಾಡಿದಂತಹವರು. ಇವರ ಕುಟುಂಬಕ್ಕೆ ಆ ಪ್ರಾಂತ್ಯದಲ್ಲಿ ಬಹಳ ಒಳ್ಳೆಯ ಹೆಸರಿದೆಯೆಂಬುದು ತಿಳಿಯಿತು. ರಾತ್ರಿಯ ಸೊಳ್ಳೆ ಕಾಟ ಬಿಟ್ಟರೆ ಬೇರೆ ಯಾವ ತೊಂದರೆಯೂ ಆಗಲಿಲ್ಲ.

[ಇಲ್ಲಿಯತನಕ ನಡಿಗೆಯಲ್ಲಿ ಕ್ರಮಿಸಿದ ಅಂದಾಜು ದೂರ = 55 ಮೈಲುಗಳು]

‍ಲೇಖಕರು Admin

24 June, 2016

6 Comments

  1. Vihi wadawadagi

    Tumba chennagi moodi bartide oduva hambala hecchuttide bhavanatmaka

    • ರಾದ

      ಧನ್ಯವಾದಗಳು ವಿಹಿ. ಈ ಹಂಬಲ ಕೊನೆಯವರೆಗೂ ಉಳಿಯಲಿ ಎಂಬುದು ನನ್ನ ಆಶಯ.

  2. Pradeep K S

    Nimage kaadu rastheyalli yedurige bandu huliyaa posu kotta nariyathe aa jambada PDO bhasavagutthane. 100 olle dhaksha adhikaarigala madye entha onderadu jana samanaya. Avana dharpada theevrathe avana javabdariyutha kelasadallu eddare, it’s alright and acceptable 🙂

    • ರಾದ

      ನರಿಯೋ, ಹುಲಿಯೋ, ಕುರಿಯೋ, ಕೋಳಿಯೋ.. ಅವರವರ ಜವಬ್ದಾರಿಯನ್ನರಿತು ಕೆಲಸ ಮಾಡಬೇಕೆಂಬುದು ನಾಗರೀಕರಾದ ನಮ್ಮ ಆಶಯ. ತಮ್ಮ ಅನಿಸಿಕೆಗೆ ಧನ್ಯವಾದಗಳು.

  3. Karthi

    Nivu Rahul ah andrala aurge niv heg gothithu antha gothaglila

    • ರಾದ

      “ಹೆಗ್ಡೆಯವರೆಂದರೆ ಲಕ್ಷ್ಮಿನಾರಾಯಣ ಹೆಗ್ಡೆಯವರೇ?” ಎಂದು ನಾನು ಕೇಳಿದಾಗ ಅವರಿಗೆ ಅನುಮಾನ ಬಂದು ‘ನೀವು ರಾಹುಲ್ ಆ?’ ಎಂದು ಆಶ್ವರ್ಯದಿಂದ ಕೇಳಿದರಷ್ಟೆ.
      ಆ ನಂತರ ತಿಳಿದು ಬಂದಿದ್ದು, ಹೆಗ್ಡೆಯವರು ನನ್ನ ಮತ್ತು ನನ್ನ ಪ್ರಯಾಣದ ಬಗ್ಗೆ ಇವರಿಗೆ ಸಾಕಷ್ಟು ಮಾಹಿತಿ ಕೊಟ್ಟಿದ್ದರು. ಎಂದು ನಾನು ಕೇಳಿದಾಗ ಅವರಿಗೆ ಅನುಮಾನ ಬಂದು ‘ನೀವು ರಾಹುಲ್ ಆ?’ ಎಂದು ಆಶ್ವರ್ಯದಿಂದ ಕೇಳಿದರಷ್ಟೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading