
ಕೆ ನಲ್ಲತಂಬಿ
ನಿನ್ನೆ ಮಧ್ಯಾಹ್ನ ಊಟ ಮಾಡುತ್ತಿದ್ದಾಗ ಮೇಲಿನ ಪುಸ್ತಕ ಕೊರಿಯರ್ ಮೂಲಕ ಬಂದು ಸೇರಿತು. ಊಟ ಮುಗಿಸಿ ಸುಮಾರು 2 ಗಂಟೆಗೆ ಓದಲು ಕುಳಿತವನು, ಒಂದೇ ಗುಟುಗಿಗೆ ಓದಿ ಮುಗಿಸಿದಾಗ ರಾತ್ರಿ ಸಮಯ ಹತ್ತು. ಸುಮಾರು, 260 ಪುಟಗಳು ಓದುಗನನ್ನು ಹಿಡಿದಿಟ್ಟುಕೊಳ್ಳುತ್ತದೆ.
ಮೊದಲ ಸುಮಾರು 90 ಪುಟಗಳು ನಗಿನಗಿಸುತ್ತಾ ಸಾಗುವ (ಭಾರತಿ style ಅದು) ಪುಸ್ತಕ ನಮ್ಮ ಅರಿವಿಲ್ಲದೆಯೇ ಎಲ್ಲೋ ಒಂದು hair pin ತಿರುವನ್ನು ಪಡೆದುಕೊಳ್ಳುತ್ತದೆ. ಆ ತಿರುವಿನಲ್ಲಿ ಗಾಡಿಯನ್ನು ಸ್ಲೋ ಮಾಡದೆ ಹೋಗುವಾಗ ಉಸಿರು ಬಿಗಿಹಿಡಿಸಿ, ಮುಷ್ಟಿ ಮುಚ್ಚಿಸಿ, ಮುಂದೇನು ಎಂಬ ಆತಂಕ ಭಯದೊಂದಿಗೆ ಅಲುಗಾಡದೆ ಸೆಟೆದು ಕೂರಿಸಿಬಿಡುತ್ತದೆ.
ಇದರ ಅನೇಕ ಕಥೆಗಳು ನನಗೆ ಹೊಸದೇನು ಅಲ್ಲದಿದ್ದರೂ – ಮೊದಲ ಸಲ ತಿಳಿದುಕೊಳ್ಳುವ ಅದೇ ಕುತೂಹಲವನ್ನು ಉಳಿಸಿಕೊಂಡು ಹೋಗುವುದೇ ಈ ಪುಸ್ತಕದ ಬಲ. ನನಗೆ ಹೊಸದಲ್ಲ ಎಂದು ಯಾಕೆ ಹೇಳಿದೆ ಎಂದರೆ, ಚಿಕ್ಕಂದಿನಿಂದಲೂ ಯಾಕೋ ಈ World War II ಬಗ್ಗೆ ನನಗೆ ಎಲ್ಲಿಲ್ಲದ ಕುತೂಹಲ, ಆಸಕ್ತಿ. ಒಬ್ಬ ಮನುಷ್ಯನಿಂದ ಹೀಗೆ ಇಡೀ ಜಗತ್ತನ್ನು ಬೆದರಿಸಲು ಸಾಧ್ಯವೇ? ಎಂಬುದೇ ಅದಕ್ಕೆ ಕಾರಣ. ಆದರೆ ಅದು ನಡೆದಿರುವುದೇ ವಿಪರ್ಯಾಸ! ಯುದ್ಧಗಳು ನಡೆದರೂ – ಅವನ ವಿರುದ್ಧ ಆಗ ಒಂದು ಸಶಕ್ತ ದನಿ ಏಳಲಿಲ್ಲ ಎಂಬುದೇ ಸತ್ಯ.
ಈ ನನ್ನ ಕುತೂಹಲ ಆಸಕ್ತಿಯಿಂದ ಎರಡನೆಯ ಮಹಾಯುದ್ಧದ ಬಗ್ಗೆ ಬಂದ ಅನೇಕ ಸಿನಿಮಾಗಳನ್ನು ನೋಡಲು ತೊಡಗಿದೆ. ಅದು 1963 ರಲ್ಲಿ ಬಂದ The Great Escape ನಿಂದ ತೊಡಗಿದ್ದು. ನಂತರ ಆ ಪಟ್ಟಿ Come & See, The Imitation Game, Black Book, Piano, Patton, Dirty Dozen, Down Fall, The Thin red line , The Longest Day, Life is Beautiful, The Bridge on the River Kwai, Schindler’s List, Escape from Saibibor ಹೀಗೆ ಬೆಳೆಯಿತು. (ಇನ್ನೂ ಅನೇಕ ಸಿನಿಮಾ ಮರೆತು ಹೋಗಿವೆ)

ಇದರಲ್ಲಿ ನಾನು ಕೊನೆಯದಾಗಿ ಇತ್ತೀಚೆಗೆ ನೋಡಿದ್ದು Operation Finale – ಎರಡನೇ ಮಹಾ ಯುದ್ಧ ಮುಗಿದು 15 ವರ್ಷಗಳ ನಂತರ ಇಸ್ರೇಲಿನ ಸೀಕ್ರೆಟ್ ಏಜೆಂಟ್ ನ ಒಂದು ಟೀಮ್ ಅರ್ಜಂಟೈನಾಗೆ ಪ್ರಯಾಣ ಮಾಡಿ Adolf Eichmann – ಇವನೇ ಲಕ್ಷಗಟ್ಟಲೇ ಜ್ಯೂಗಳನ್ನು concentration camp ಗಳಿಗೆ ಸಾಗಾಣಿಕೆ ಮಾಡುವ ಹೊಣೆಯನ್ನು ಹೊತ್ತವನು. ಅವನನ್ನು ಹುಡಿಕಿಕೊಂಡು ಹೋಗಿ, kidnap ಮಾಡಿಕೊಂಡು ಇಸ್ರೇಲಿಗೆ ಕರೆ ತಂದು ವಿಚಾರಣೆ ಮಾಡಿ ಮರಣ ಶಿಕ್ಷೆ ನೀಡುವ ಕಥೆ.
ಗಾಂಧಿ ಪಾತ್ರದಲ್ಲಿ ನಟಿಸಿದ್ದ Ben Kinsley ಇದರಲ್ಲಿ Eichmann ಪಾತ್ರದಲ್ಲಿ ನಟಿಸಿದ್ದಾರೆ. ಗಾಂಧಿ ಸಿನಿಮಾಗಾಗಿ ಮಾಂಸ ಆಹಾರ ಬಿಟ್ಟು ಒಂದು ವ್ರತದಂತೆ ಮಾಡಿದ ಸಿನಿಮಾ ಅದು. ಅವರು ಹೇಗೆ Eichmann ಆಗಿ ನಟಿಸಿದರು? ಇದು ನನ್ನ ಮುಗ್ಧ ಪ್ರಶ್ನೆ ಅಷ್ಟೆ.
Charlie Chaplin ನ The Great Dictator ಎಷ್ಟು ಸಲ ನೋಡಿದ್ದೇನೋ ತಿಳಿಯದು. ಆಲ್ ಟೈಮ್ ಫೇವರೈಟ್. ಆ ಕುತೂಹಲ ಈ ಮಹಾಯುದ್ಧದ ಬಗ್ಗೆಯ ಸಿನಿಮಾ ನೋಡುವುದಕ್ಕೆ, ಓದುವುದಕ್ಕೆ ಅಷ್ಟೇ ನಿಲ್ಲಲಿಲ್ಲ. ಅಮೆರಿಕಕ್ಕೆ ಹೋದಾಗ Washington Holocaust Memorial Museum ಗೆ ಒಬ್ಬನೇ ಹೋಗಿ ನೋಡಿಕೊಂಡು ಬಂದದ್ದು, South Africa ಹೋಗಿದ್ದಾಗ Cape of Good Hope ನ ಮೇಲೆ 1943 ಕಟ್ಟಿದ Radar Station ಇದೆ ಎಂದು ತಿಳಿದು ಅಲ್ಲಿಗೆ ಹೋಗಿ ನೋಡಿದ್ದು.
ಇವೆಲ್ಲವೂ “ಯಾದ್ ವಶೇಮ್” ಅನ್ನು ತಮಿಳಿಗೆ ಅನುವಾದಮಾಡುವಂತೆ ಮಾಡಿತು. ಅನುವಾದ ಮಾಡುವಾಗ ಅದನ್ನು ಮಧ್ಯೆ ಸ್ವಲ್ಪ ತಿಂಗಳು ನಿಲ್ಲಿಸಿಬಿಟ್ಟಿದ್ದೆ. ಅದು ನನ್ನನ್ನು ಅಷ್ಟು ಕಾಡಿತ್ತು. ಯಾದ್ ವಶೇಮ್ ತಮಿಳು ಹೋದ ತಿಂಗಳೇ ಬಿಡುಗಡೆಯಾಗಿದೆ. ತಮಿಳು ಓದುಗರಿಗೆ ಅದು ಹೊಸದು.

ನಾನು ಕೆಲಸ ಮಾಡುತ್ತಿದಾಗ ನಮ್ಮ ಕಂಪನಿಯ ಒಬ್ಬ ಡೈರೆಕ್ಟರ್ ಹಿಟ್ಲರನ್ನು ಸಮರ್ಥಿಸಿ ಮಾತನಾಡಿದಾಗ ಅವರ ಜತೆ ಜಗಳ ಕಾದಿದ್ದೆ. ನನ್ನ ಜತೆ ಕೆಲಸ ಮಾಡುತ್ತಿದ್ದವರು ನಿನ್ನ ಕೆಲಸ ‘ಗೋವಿಂದ’ ಎಂದು ಹೇಳಿದ್ದರು. ಆದರೆ ಹಾಗೇನೂ ನಡೆಯಲಿಲ್ಲ. ಹೀಗೆ ಅವನನ್ನು ಸಮರ್ಥಿಸಿಕೊಳ್ಳುವವರು ಇನ್ನೂ ಇದ್ದಾರೆ ಎಂಬುದೇ ವ್ಯಥೆ.
‘ನಕ್ಷತ್ರಗಳ ಸುಟ್ಟ ನಾಡಿನಲ್ಲಿ’ – ಓದಿ ಮುಗಿಸಿ ಮಲಗಲು ಹೋಗಲಾಗದೆ ಬಹಳ ಸಮಯ ಲೈಟ್ ಎಲ್ಲವನ್ನೂ ಆಫ್ ಮಾಡಿ ಕತ್ತಲಲ್ಲಿ ಮೌನವಾಗಿ ಒಂಟಿಯಾಗಿಯೇ ಕುಳಿತಿದ್ದೆ.
“ಚರಿತ್ರೆ ಓದುವುದೆಂದರೆ ಅದರಲ್ಲಿ ದಿನಾಂಕಗಳನ್ನು ಉರು ಹಚ್ಚುವುದಲ್ಲ. ಅಲ್ಲಿ ನಡೆದ ಘೋರಗಳು ಮತ್ತೆ ಘಟಿಸದಿರುವಂತೆ ನೋಡಿಕೊಳ್ಳುವುದೇ ಚರಿತ್ರೆ ಕಲಿಸುವ ಮುಖ್ಯ ಉದ್ದೇಶ ಎಂಬ ಸರಳ ಪಾಠ ಯಾರಾದರೂ ಹೇಳಿಕೊಡಬೇಕು ಓದುವ ಮಕ್ಕಳಿಗೆ”
ಪುಸ್ತಕದ ಈ ಸಾಲು ಬಹಳ ಕಾಡಿತು. ನಿಜ, ಅಷ್ಟು ಮಾಡಿದರೆ ಸಾಕಲ್ಲವೇ ಜಗತ್ತು ಬದುಕಲು ಒಂದು ಸುಂದರ ಬೆಚ್ಚನೆಯ ತಾಣವಾಗಲು.
ತಪ್ಪುಗಳನ್ನು ಮನ್ನಿಸೋಣ, ಆದರೇ, ಅದರಿಂದ ಕಲಿತ ಪಾಠಗಳನ್ನು ಮಾತ್ರ ಎಂದಿಗೂ ಮರೆಯಬಾರದು ಮತ್ತೆ ಮರುಕಳಿಸುವಂತೆ ಆಗಬಾರದು.
₹ 300/- ಪುಸ್ತಕಕ್ಕೆ – bahuroopi.in https://bahuroopi.in/product/nakshatragala-sutta-nadinalli/






0 Comments