ಅತ್ರಿ ಬುಕ್ ಸೆಂಟರ್ ಗೆ ಹೋಗಿದ್ದೆ. ಬೆಂಗಳೂರಿಂದ ಮಂಗಳೂರಿಗೆ ಹೋಗುವ ಕೆಲವರಿಗೆ ಅಲ್ಲಿಯ ಮಂಗಳಾದೇವಿ ಇಷ್ಟವಾಗುತ್ತದೆ, ಇನ್ನು ಕೆಲವರಿಗೆ ಮೀನು. ಇವೆರಡೂ ಅಲ್ಲದವರಿಗೆ ಅಲ್ಲಿನ ಸುಖ ಜೀವನ. ಆದರೆ ಪುಸ್ತಕ ಪ್ರಿಯರಿಗೆ ಮಾತ್ರ ಒಂದೇ ಸ್ಟಾಪ್. ಅದು ಅತ್ರಿ ಬುಕ್ ಸೆಂಟರ್. ಅತ್ರಿ ಪುಸ್ತಕಪ್ರಿಯರ ಯಾತ್ರಾ ಸ್ಥಳ. ಅಶೋಕವರ್ಧನ್ ಅಂತೂ ಚಂಪಾ ಭಾಷೆಯನ್ನೂ ಸಹಾಯಕ್ಕೆ ತೆಗೆದುಕೊಳ್ಳುವುದಾದರೆ ಪ್ರೇಕ್ಷಣೀಯ ವ್ಯಕ್ತಿಯೇ.
ಅಶೋಕರೂ ಅಷ್ಟೆ, ಅವರಪ್ಪ ನಾರಾಯಣ ರಾಯರೂ ಅಷ್ಟೆ. ಖಡಕ್ ಜೊತೆಗೆ ಒಂದಿಷ್ಟು ಸಿಡಕ್. ಈ ಎಲ್ಲವೂ ಯಾರಿಗೂ ಕಷ್ಟವಾಗುವುದಿಲ್ಲ. ಏಕೆಂದರೆ ಈ ಎಲ್ಲವೂ ಇಲ್ಲದಿದ್ದರೆ ಅದು ಕ್ಲೀಷೆಯಾಗಿ ಹೇಳುವುದಾದರೆ ಪುಸ್ತಕ ಕಾಶಿ ಆಗುತ್ತಲೇ ಇರಲಿಲ್ಲ.
ಯಾವ ಪುಸ್ತಕ ಬೇಕು ಅದು ಇಲ್ಲಿ ಇದ್ದೇ ಇರುತ್ತದೆ ಎಂಬ ನಂಬಿಕೆ ನನ್ನಂತಹ ಸಾವಿರಾರು ಬುಕ್ ವರ್ಮ್ ಗಳಿಗೆ ಬಂದದ್ದಾದರೂ ಹೇಗೆ? ಅಶೋಕರ ಖಡಕ್ ತನ ಇಲ್ಲದೆ ಹೋಗಿದ್ದರೆ ಅವರೂ ಸಿಕ್ಕವರಿಗೆಲ್ಲ ಪುಸ್ತಕ ಉದರಿ ಕೊಟ್ಟು ಬಾಗಿಲು ಎಳೆದು ಬಿಡುತ್ತಿದ್ದರೆನೋ? ಆದರೆ ಬ್ರಹ್ಮ ಬಂದರೂ ಕ್ಯಾಶ್ ಇಟ್ಟು ಪುಸ್ತಕ ತೆಗೆದುಕೊಂಡು ಹೋಗು ಎನ್ನುವ ನಿಲುವು, ೮ ಗಂಟೆ ನಂತರ ನೀನಾದರೂ ಅಷ್ಟೆ ಸಾವಿರ ರುಪಾಯಿ ವ್ಯಾಪಾರ ಮಾಡುವವರಾದರೂ ಅಷ್ಟೆ ಎಂದು ಅಂಗಡಿ ಕ್ಲೋಸ್ ಮಾಡುವ ದಿಟ್ಟತನ, ಇವೆಲ್ಲವೂ ಅತ್ರಿಯ ಗೆಲುವಿನ ಸೂತ್ರಗಳೇ.
ಜಗತ್ತಿನ ಬೆಸ್ಟ್ ಅನ್ನು ಪರಿಚಯಿಸುವ ಪ್ಲಾನೆಟ್ ವರ್ಲ್ಡ್ ಹಾಗಾದರೆ ಮಂಗಳೂರಿಗೆ ಬಂದಾಗ ಅತ್ರಿಯನ್ನೇ ಹುಡುಕಿ ಬಂದದ್ದಾದರೂ ಏಕೆ? ತನ್ನ ಸೌತ್ ಇಂಡಿಯಾ ಪುಸ್ತಕದಲ್ಲಿ ಈ ಅಂಗಡಿ ಬಗ್ಗೆ ಬರೆದದ್ದಾದರೂ ಏಕೆ? ಯಾವುದೇ ಪುಸ್ತಕವಾಗಲೀ ಇಲ್ಲಿ ಇರುತ್ತದೆ. ಇಲ್ಲಿಲ್ಲ ಎಂದಾದರೆ ನೀವು ಹೆಸರು ನೀಡಿದಲ್ಲಿ ಇನ್ನೆರಡು ದಿನಕ್ಕೆ ಜಗತ್ತಿನ ಎಲ್ಲಿಂದಲಾದರೂ ಹಾರಿ ಬರುತ್ತದೆ.
ಪುಸ್ತಕದ ಅಂಗಡಿಯಲ್ಲಿ ಕುಳಿತೇ ಸರ್ಕಾರದ ಸೊಂಟ ಚಿವುಟಿದವರು ಈ ಅಶೋಕ್. ಪುಸ್ತಕ ಎಂಬುದು ಸರ್ಕಾರಕ್ಕೆ ಪ್ರೀತಿಯ ಕೆಲಸವಾಗದೆ, ಪ್ರೀತಿಯಿಂದ ಕೆಲಸ ಮಾಡುತ್ತಿರುವವರ ವ್ಯಾಪಾರವನ್ನೂ ಹಾಳು ಮಾಡುತ್ತಾ ಸಾಗುತ್ತಿರುವಾಗ ಎಲ್ಲರಿಗೂ ನೆನಪಾಗುವುದು ಅತ್ರೀ ಅವರೇ. ಅವರಿಗೆ ದೊಡ್ಡ ಗಿರಿಜಾ ಮೀಸೆ ಇದೆ ಅಷ್ಟೇ ದೊಡ್ಡ ಗಂಟಲೂ ಇದೆ ಎಂದಲ್ಲ. ಅವರಿಗೆ ಪುಸ್ತಕ ಉದ್ಯಮದ ಒಳ ಹೊರಗುಗಳು ಸರಿಯಾಗಿ ಗೊತ್ತಿದೆ.
ಅತ್ರಿಗೆ ಅತ್ರಿ ಎಂಬ ಹೆಸರು ಬಂದದ್ದೂ ಒಂದು ಕಥೆ. ಆ ಕಥೆ ಮುಂದೆ ಯಾವಾಗಲಾದರೂ ಬಿಚ್ಚಿಡೋಣ. ಮುಗಿಸುವ ಮುನ್ನ ಅಶೋಕರ ಸಂಗಾತಿ ದೇವಕಿಯವರೂ ಪುಸ್ತಕದ ಪರಿಮಳ ಹೆಚ್ಚಿಸಿದ್ದಾರೆ ಎಂಬುದನ್ನೂ ಹೇಳಿ ಮಂಗಳೂರು ಪ್ರವಾಸ ಮುಗಿಸೋಣ







0 Comments