
ಪುರುಷೋತ್ತಮ ಬಿಳಿಮಲೆ
ಜಿ ರಾಮಕೃಷ್ಣ ಅವರ ‘ಹಿಂದುತ್ವದ ಹಿಂದೆ ಮುಂದೆ’
ಇದೀಗ 84ರ ಹೊಸ್ತಿಲಲ್ಲಿರುವ ಡಾ. ಜಿ. ರಾಮಕೃಷ್ಣ ಅವರು ನನಗೆ ಮತ್ತು ನನ್ನ ತಲೆಮಾರಿನ ಅನೇಕರಿಗೆ ವೈಚಾರಿಕತೆಯನ್ನು ಕಲಿಸಿದ ಗುರುಗಳು. ಸಂಸ್ಕೃತ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಮೇಲೆ ಅಪಾರ ಹಿಡಿತ ಇರುವ ಅವರು ಮಾರ್ಕ್ಸ್ ವಾದಿ ಚಿಂತನಾ ಕ್ರಮವು ಎಷ್ಟೊಂದು ಚೇತೋಹಾರಿಯಾಗಿರುತ್ತದೆ ಎಂಬುದನ್ನು ತೋರಿಸಿದ ಪ್ರಖರ ವಿದ್ವಾಂಸ. ಪ್ರಾಚೀನ ಭಾರತೀಯ ಚಿಂತನಾ ಕ್ರಮವನ್ನು ಅ-ವಿಮರ್ಶಾತ್ಮಕವಾಗಿ ವಿವರಿಸುವವರ ನಡುವೆ ಜಿ ಆರ್ ತುಂಬ ಭಿನ್ನ ಮತ್ತು ಹೆಚ್ಚು ಪ್ರಸ್ತುತ. ಹೆಚ್ಚಿನವರು ವೇದ, ವೇದಾಂತಗಳನ್ನು ಮಾತ್ರ ಆಧರಿಸಿ ಭಾರತೀಯ ತತ್ವಶಾಸ್ತ್ರದ ಕುರಿತಾದ ತಮ್ಮ ವಿಚಾರಗಳನ್ನು ಮುಂದಿಟ್ಟರೆ, ಜಿ ಆರ್ ಅವರು ಈ ಮಿತಿಗಳನ್ನು ಒಡೆದು, ಪೂರ್ವದ ಭೌತವಾದೀ ಚಿಂತನ ಪರಂಪರೆಯ ಚಾರ್ವಾಕ, ಸಾಂಖ್ಯ, ಲೋಕಾಯತವೇ ಮೊದಲಾದ ನಿರೀಶ್ವರ ಪಂಥಗಳು, ಪಶ್ಚಿಮದ ಎನ್ಲೈಟನ್ಮೆಂಟ್ ವಿಚಾರಧಾರೆ, ಮತ್ತು ಭಾರತದ ಸ್ವಾತಂತ್ರ್ಯ ಚಳುವಳಿ ಕಾಲದ ಉದೀಯಮಾನ ಸುಧಾರಣಾವಾದಿಗಳ ಧೀಮಂತ ವಿಚಾರಗಳೇ ಮೊದಲಾದುವುಗಳನ್ನು ಒಟ್ಟು ಸೇರಿಸಿಕೊಂಡು ಬರೆಯುತ್ತಾರೆ. ಶಂಕರಾಚಾರ್ಯರಿಂದ ಹಿಡಿದು ಆಧುನಿಕ ಮಾರುಕಟ್ಟೆವರೆಗೆ ಖಚಿತವಾಗಿ ಬರೆಯಬಲ್ಲ ಜಿ ರಾಮಕೃಷ್ಣ ನಮ್ಮ ನಡುವಣ ಬಹುದೊಡ್ಡ ಚಿಂತಕ ಎಂಬುದಕ್ಕೆ ‘ಹಿಂದುತ್ವದ ಹಿಂದೆ ಮುಂದೆ’ ಹೆಸರಿನ ಪ್ರಸ್ತುತ ಪುಸ್ತಕವೇ ಸಾಕ್ಷಿ. ಈ ಪುಸ್ತಕದಲ್ಲಿ ಅವರು ವರ್ತಮಾನ ಕಾಲದ ಭಾರತದ ಗಂಭೀರ ಸಮಸ್ಯೆಗಳನ್ನು ಕರಾರುವಾಕ್ಕಾಗಿ ಹಿಡಿದಿಟ್ಟಿದ್ದಾರೆ.
ಪುಸ್ತಕ ಚಿಕ್ಕದಾಗಿದ್ದರೂ ಇದು ಒಳಗೊಳ್ಳುವ ವಿಷಯಗಳು ಹಲವು. ಜಗತ್ತು ವೇಗವಾಗಿ ಮುಂದಕ್ಕೆ ಚಲಿಸುತ್ತಿರುವಾಗ ತನ್ನದೇ ಪ್ರಜೆಗಳನ್ನು ಹಲವು ಶತಮಾನಗಳಷ್ಟು ಹಿಂದಕ್ಕೆ ಕೊಂಡೊಯ್ಯುವ ಬಿಜೆಪಿಯ ಕಾರ್ಯಸೂಚಿಗಳನ್ನು ಅವರು ಇಲ್ಲಿ ಗುರುತಿಸಿದ್ದಾರೆ. ‘ಹಿಂದುತ್ವ’ದ ರಾಜಕೀಯದ ಹುನ್ನಾರಗಳನ್ನು ಬಯಲುಮಾಡಿದ್ದಾರೆ. ಅಧಿಕಾರ ಹಿಡಿಯಲು ಅದು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ, ಆದರೆ ಪ್ರಜೆಗಳಿಗೆ ‘ಇವೆಲ್ಲವೂ ಪ್ರಾಚೀನ ಭಾರತದಲ್ಲಿ ಇತ್ತು’ ಎಂದು ಬೋಧಿಸುತ್ತದೆ. ಈ ಅರಿವಿನಲ್ಲಿ ವಸ್ತುಸ್ಥಿತಿ ಹೀಗಿರುವಾಗ ಭಾರತವು ವಿಶ್ವಗುರುವಾದರೂ ಆಗುವುದು ಹೇಗೆ? ಎಂಬ ಮೌಲಿಕ ಪ್ರಶ್ನೆಯನ್ನು ಜಿ ಆರ್ ಎತ್ತುತ್ತಾರೆ.

ಬಿಜೆಪಿ ಮತ್ತು ಆರ್ ಎಸ್ ಎಸ್ ನ ಕೆಲವು ನಂಬುಗೆಗಳು ಎಷ್ಟು ಹಾಸ್ಯಾಸ್ಪದವಾಗಿರುತ್ತವೆ ಎಂಬುದನ್ನು ಈ ಪುಸ್ತಕದುದ್ದಕ್ಕೂ ಓದುಗರು ಕಾಣಬಹುದು. ಲೇಖಕರು ಹೇಳುವಂತೆ, ‘ಶ್ರೇಣೀಕೃತ ಸಮಾಜದಲ್ಲಿ ಒಬ್ಬರು ಇನ್ನೊಬ್ಬರ ಸಂಕಷ್ಟಕ್ಕೆ ಸ್ಪಂದಿಸದೇ ಇದ್ದುದರಿಂದ, ನಮಗೆ ನಮ್ಮ ವಿರೋಧಿಗಳನ್ನು ಸಂಘಟಿತವಾಗಿ ಇದಿರಿಸಲಾಗಲೇ ಇಲ್ಲ’. ನಮ್ಮಲ್ಲಿನ ಎಲ್ಲ ಅನಾಹುತಗಳಿಗೆ ಮುಸ್ಲಿಮರೇ ಕಾರಣವೆಂದು ಹೇಳುವವರು ಜಿ ಆರ್ ಅವರ ಮೇಲಿನ ಮಾತುಗಳನ್ನು ಓದಬೇಕು. ವಿದೇಶೀಯರು ಮತ್ತೆ ಮತ್ತೆ ಆಕ್ರಮಣ ಮಾಡಲು ಬರುತ್ತಿದ್ದಾಗ ನಾವೇನು ಮಾಡುತ್ತಿದ್ದೆವು? ನಮ್ಮ ಅರಸರು ಯಾವ ಬಗೆಯ ಕುತಂತ್ರಗಳಲ್ಲಿ ಮುಳುಗಿದ್ದರು ? ಎಂಬುದನ್ನು ಜಿ ಆರ್ ಇಲ್ಲಿ ವಿಶ್ಲೇಷಿಸಿದ್ದಾರೆ. ಇಂಥ ಆತ್ಮವಂಚನೆಯ ಕೆಲಸಗಳು ಈಗಲೂ ನಡೆಯುತ್ತಿವೆ ಎಂಬುದನ್ನು ‘ವಿದೇಶಗಳಲ್ಲಿ ಬಹುತ್ವದ ವಾಂಛೆಯನ್ನು ನಿರೀಕ್ಷಿಸುವ ನಮ್ಮ ಘನಸರ್ಕಾರವು ಅದನ್ನು ದೇಶದೊಳಗೆ ಬಾಳಲು ಬಿಡುತ್ತಿಲ್ಲ’ ಎಂಬ ಮಾತುಗಳ ಮೂಲಕ ಸ್ಪಷ್ಟಪಡಿಸಿದ್ದಾರೆ. ‘ಗೋಲ್ವಾಲ್ಕರ್ ಅವರ ತತ್ತ್ವಗಳು ಭಾರತೀಯವೂ ಅಲ್ಲ, ಸಂಸ್ಕೃತಿಯಂತೂ ಮೊದಲೇ ಅಲ್ಲ’ ಎಂದು ಲೇಖಕರು ದಿಟ್ಟವಾಗಿ ಬರೆಯುತ್ತಾರೆ.
ಇದರಿಂದ ಹೊರಬಂದು ದೇಶವನ್ನು ಪ್ರಗತಿಗಾಮಿಯಾಗಿಸಲು ಜಿ ಆರ್ ಕೆಲವು ಹಾದಿಗಳನ್ನು ಪುಸ್ತಕದುದ್ದಕ್ಕೂ ಸೂಚಿಸುತ್ತಾರೆ. ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಹೋರಾಟಗಳಲ್ಲಿ ಆಸಕ್ತಿ ಇರುವವರೆಲ್ಲರೂ ಧ್ಯಾನಿಸಿ ಓದಬೇಕಾದ ಪುಸ್ತಕವಿದು.






0 Comments