ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುರುಷೋತ್ತಮ ಬಿಳಿಮಲೆ ಕಂಡಂತೆ ‘ಮಣಿಬಾಲೆ’

ಡಾ. ಪುರುಷೋತ್ತಮ ಬಿಳಿಮಲೆ 

ಹೆಚ್. ಆರ್. ಸುಜಾತಾ ಅವರು ತಮ್ಮ ಹಿಂದಿನ ಪುಸ್ತಕ ‘ನೀಲಿ ಮೂಗಿನ ನತ್ತು'( ೨೦೧೭)ವಿನಲ್ಲಿ ಬರೆದುಕೊಂಡಿರುವುದು ಹೀಗೆ- ‘ ಮಣ್ಣನ್ನೇ ನಂಬಿ ಬದುಕು ಮಾಡುತ್ತಿದ್ದ ರೈತ ಸಂಕುಲದ ಮಗಳು ಎನ್ನುವ ಹೆಮ್ಮೆ ಹಾಗೂ ವಿನಯ ಎರಡೂ ನನ್ನದು. ಆ ಸಂಕುಲದಲ್ಲಿ ಹುಟ್ಟಿ ಅದರಿಂದ ಇನಿತು ದೂರವಾದರೂ ಮತ್ತೆ ಮತ್ತೆ ನಮ್ಮ ಕರುಳಿನ ಸೆಳೆತಗಳಿಗೆ ಒಳಗಾಗುವ ನಮ್ಮಂಥವರ ಊರು ಅನ್ನುವುದು ಹೇಗಿತ್ತು? ಎಂಬುದನ್ನು ನನ್ನ ಕಣ್ಣಳತೆಯಲ್ಲಿ ದಾಖಲಿಸುವ ಪ್ರಯತ್ನ ಈ ಬರವಣಿಗೆ. ನನ್ನೂರು ಹಾಸನ ಜಿಲ್ಲೆಯ ಅರೆ ಮಲೆನಾಡಿಗೆ ಸೇರಿದ ಆಲೂರು ತಾಲೂಕಿನಿಂದ ಎರಡು ಮೈಲಿ ದೂರವಿರುವ ಮರಸು ಹೊಸಹಳ್ಳಿ (ಪುಟ: ೯) ಈ ಊರಿನ ಚೆಲುವಾದರೋ ಅಸದ್ರಶ್ಯ. ‘ಈ ಜಾಗ ಅಂಬೋದು ದೇವೇಂದ್ರನ ಇಂದ್ರವನಕ್ಕಿಂತಲೂ ವೈನಾಗೀತೆ ‘ ಎಂಬುದು ಅಲ್ಲಿಯ ಅಜ್ಜಿ ಹೇಳುವ ಕಥೆಯೊಂದರಲ್ಲಿ ಬರುವ ಸಾಲು.

ಸುಜಾತಾ ಅವರು ತಮ್ಮ ಸುಂದರವಾದ ನಿರೂಪಣೆಯಲ್ಲಿ ಊರಿಂದ ಸಿಡಿದು ದೂರ ನಿಲ್ಲದೆ, ಕತೆಯ ಪಾತ್ರವಾಗುತ್ತಾರೆ. ಮರಸು ಹೊಸಹಳ್ಳಿಯ ಚೆಲುವಿನೊಡನೆ ಬೆರೆತು ಹೋಗುತ್ತಾರೆ. ಅದಕ್ಕೆ ತಮ್ಮದೇ ಕೆಲವು ಹೊಸ ಎಳೆಗಳನ್ನೊಸೆದು ಹಾಡುತ್ತಾರೆ. ಅವರ ‘ಜೇನುಮಲೆಯ ಹೆಣ್ಣು’ ತುಂಬೆಲ್ಲಾ ಅಂಥ ಹಾಡುಗಳದೇ ದರ್ಬಾರು.

ಪ್ರಸ್ತುತ ಕ್ರುತಿ ‘ಮಣಿಬಾಲೆ’ಯೂ ಸುಜಾತಾರವರ ಮೊದಲೆರಡು ಕ್ರುತಿಗಳ ಸತ್ವಯುತ ಮುಂದುವರಿಕೆಯಾಗಿದೆ. ಊರನ್ನು ನೋಡುವ ಮತ್ತು ವಿವರಿಸುವ ಅವರ ಮೊದಲಿನ ಧೋರಣೆಯಲ್ಲಿ ಸ್ವಲ್ಪವೂ ಬದಲಾವಣೆಯಾಗಿಲ್ಲ. ಕತೆಯನ್ನು ಹೇಳಲು ತನ್ನದೇ ಪ್ರತಿರೂಪದಂತಿರುವ ಮಣಿ ಎಂಬ ಒಂಬತ್ತು ವರ್ಷದ ಬಾಲೆಯ ಪಾತ್ರವೊದನ್ನು ಇಲ್ಲಿ ಸ್ರುಷ್ಟಿಸಿಕೊಂಡಿದ್ದಾರೆ. ಮಣಿಬಾಲೆಯು ಹಾಸನದ ಸೇಂಟ್ ಫಿಲೋಮಿನಾ ಶಾಲೆಯ ಶಿಸ್ತುಬದ್ಧ ವಾತಾವರಣದಲ್ಲಿ ಓದುತ್ತಿರುವ ಬಾಲಕಿ. ಪರೀಕ್ಷೆ ಮುಗಿಸಿ ತನ್ನೂರಿಗೆ ಬಂದಾಗ ಆಕೆಯು ತನ್ನ ವಯೋಸಹಜವಾದ ಕುತೂಹಲದಿಂದ ಊರಿನ ಅನೇಕ ಘಟನೆಗಳನ್ನು ಮುಗ್ಧವಾಗಿ ನೋಡುತ್ತಾಳೆ. ಕೆಲವು ಬಾರಿ ಅವುಗಳಲ್ಲಿ ಭಾಗವಹಿಸುತ್ತಾಳೆ.

ಅವಳ ನೋಟದ ಕೇಂದ್ರವು ಹೊಸಹಳ್ಳಿಯಾದರೂ, ಆ ಕಡೆಯ ಮಂಡ್ಯ ಮತ್ತು ಈ ಕಡೆಯ ಬಿಸಿಲೆ ಹಾಗೂ ಘಟ್ಟದ ಕೆಳಗಣ ಜನಗಳನ್ನೂ ಅವಳು ಗಮನಿಸುತ್ತಾಳೆ. ಅವಳ ನೋಟಕ್ಕೆ ಕೊನೆಯೆಂಬುದಿಲ್ಲ. ತನ್ನ ಊರನ್ನೋ ಪಕ್ಕದ ಊರನ್ನೋ ನೋಡಿ ಆಕೆಗೆ ದಣಿವಾಗುವುದೂ ಇಲ್ಲ. ಅವಕಾಶ ಸಿಕ್ಕಾಗ ತಾನು ಓದುತ್ತಿರುವ ಹಾಸನವೆಂಬ ನಗರದೊಡನೆ ಅನುಭವಗಳನ್ನು ಹೋಲಿಸಿಕೊಳ್ಳುತ್ತಾ ಅವಳು ಮುಂದುವರೆಯುತ್ತಾಳೆ. ಅವಳ ಅನುಭವಗಳೆಂದರೆ ಪೋಣಿಸಿದಷ್ಟೂ ಮುಗಿಯದ ಸರಮಾಲೆ. ಆದ್ದರಿಂದಲೇ ಕ್ರುತಿಗೆ ‘ಮಣಿಬಾಲೆ’ ಯೆಂಬ ಸಾರ್ಥಕ ಹೆಸರು.

ಸುಜಾತಾ ಅವರಿಗೆ ಅದ್ಭುತವಾದ ಗ್ರಹಣಶಕ್ತಿಯಿದೆ. ಕಂಡದ್ದನ್ನು ಬಹಳ ತಾಳ್ಮೆಯಿಂದ ಭಾಶೆಯಲ್ಲಿ ವಿವರಿಸುವ

ಕಲೆಗಾರಿಕೆಯಿದೆ. ಉದಾಹರಣೆಗೆ ಕಾದಂಬರಿ ಆರಂಭವಾಗುತ್ತಲೇ ಅವರು ವಿವರಿಸುವ ಊರು ಹೇಗಿದೆ ಗಮನಿಸಿ-

‘ಕೆಳಗಿರೋ ಗಾಳಿ ಗದ್ದೆ ಹಳ್ಳ ಹಾದು ಗದ್ದೆ ಬದಿನ ಮೇಲಾಸಿ ಒಂದರ ಮೇಲೊಂದಿರೋ ಹತ್ತಾರು ಗದ್ದೆ ಹರಿಯ ಹತ್ಕಂಡು ಬಂದು ನಡುಮಧ್ಯಕ್ಕೆ ನಿಂತ್ಕಂಡ್ರೆ… ಬಲಗಡೆ ಹಳೆಮರಸಿನ ಕೆರೆ, ಎಡಗಡಿಕೆ ದೊಡ್ಡ ಕೆರೆ ಸಿಕ್ಕವು. ಹಳೇ ಮರಸಿನ ಕೆರೇಲಿ ಬಿಳಿ ಅಮಲದ ಹೂವು. ಏರಿ ಮ್ಯಾಲೆ ಗೀಜಗನ ಗೂಡು ಮಸ್ತಾನಾಗಿ ನೇತು ಹಾಕ್ಕಂಡಿದ್ರೆ, ಮುತ್ತುಗದ ಮರ, ಹುಣಸೆ, ಕಾಡು ಸೀಗೆ ಸೊಪ್ಪಿನ ಬಳ್ಳಿನೂ ಹೊದ್ಕಂಡಿದ್ವು. ಅದೇ ದೊಡ್ಡಕೆರೆ ಏರಿ ಮೇಲೆ ಹ್ವಾದ್ರೆ ಕ್ಯಾದಿಗೆ, ತಾಳೆ ಹಿಂಡ್ಲು, ಏರಿ ಮೇಲೆ ದೊಡ್ಡ ದೊಡ್ಡ ಮರ, ಅದರ ತುಂಬ ಜೇನು ಒಟ್ಲು, ಇವೆರಡರ ನಡುಮಕೆ ಇನ್ನೊಸಿ ಮೇಲೆ ಹತ್ತಕೊಂಡೋದ್ರೆ ಬಲಕ್ಕೆ ಕ್ವಾಣನಕಟ್ಟೆ, ಮಕ್ಕಳಕಟ್ಟೆ, ಗರಿಕೆ ಕಟ್ಟೆ, ಮತ್ಲಾಕನ ಕಟ್ಟೆ ಇದ್ವು. ಈ ನಾಕೂ ಕಟ್ಟೆಗಳು, ಎರಡು ಕೆರೆಗಳು, ಊರು ಸುತ್ತಕ್ಕೂ ಇದ್ದು ಚೌಕಮನೆ ಬರದು ಅದಕ್ಕೆ ನಾಕೂ ಕಡಿಕೆ ಹಣ್ಣಿನ ಮನೆಯ ಕೊರದಂಗೆ ಕಾಣ್ತಿದ್ವು. ಅದರ ಸುತ್ತಕು ಕಾಯಿ ನಡಸೋ ಮನೆಗಳಂಗೆ ಊರಗದ್ದೆ, ಬಯಲು, ಕೆರೆ ದಾಟಿ ಮೇಗಡಿಕೆ ಹೋದಂಗೆ, ಹೋದಂಗೆ ದನ ಮೇಯೋ ಕಾವಲು, ಮಠದ ತೋಪು, ಬಾರೆ ಕಾಣ್ಸಕಳವು. ದನ ಮೇಯೋ ಕಾವ್ಲನೂ ಅಲಲ್ಲೇ ಕೆತ್ತಿ ಕೊರದು ಉತ್ತು ಹೊಲಗಾಡು ಮಾಡ್ಕಂಡವ್ರೂ ಇದ್ರು.

ಕೆರೆಕಟ್ಟೆ ಬಿಟ್ಟು, ಇನ್ನೊಸಿ ಹತ್ಕಂಡು ಬಂದ್ರೆ ಚೌಕಾಬಾರದಲ್ಲಿ ಹಣ್ಣುಮಾಡೋ ಮನೆಯಂಗೆ ಊರು ಮೈಚಾಚಿತ್ತು. ಹತ್ರದಲ್ಲೇ ಸೇದೋ ಕೈಬಾವಿ. ಹಳೆಮರಸಿನ ಕೆರೆ ಕಡಿಂದ ಬಂದ್ರೆ ಹಳೆಮರಸಿನ ಕೇರಿ. ನಡುಮಧ್ಯಕ್ಕೆ ಅವರ ಭೂತಪ್ಪನ ದೇವಸ್ಥಾನ. ದೊಡ್ಡ ಕೆರೆ ಕಡಿಂದ ಬಂದ್ರೆ ಏರಿ ದಾಟಿ ಅಲ್ಲಿರೊ ಸಂಪಿಗೆ ಘಮಲ ಮೂಗಿಗೇರ್ಸಿ, ಕೆಳ್ಳಕೇರಿ ಹಿತ್ಲು ದಾಟ್ಕಂಡು ಬಂದ್ರೆ ಅಲ್ಲೊಂದು ಬಾವಿ. ಅದೇ ಹೊಸಳ್ಳಿ ಕೇರಿ. ಬಾವಿ ತೆಗ್ಗಲ್ಲಿ ದ್ಯಾವಯ್ಯನ ಮನೆ. ಇನ್ನೂ ತೆಗ್ಗಲ್ಲಿ ಅವ್ರ ಉಡುಸ್ಲಮ್ಮನ ಗುಡಿ. ಆ ಬಾವಿ ಸುತ್ತ ಹೊಸಳ್ಳಿ ಕೇರಿಯ ಆರು ಮನೆ.’

ಸಾಕಷ್ಟು ಉದ್ಧವಾಗಿರುವ ಮೇಲಿನ ಉದ್ಧರಣೆಯು ಆ ಪ್ರದೇಶದ ಭೌಗೋಳಿಕತೆಯನ್ನು ಮತ್ತು ಪ್ರಾದೇಶಿಕತೆಯನ್ನು ಸೊಗಸಾಗಿ ವಿವರಿಸುವುದಲ್ಲದೆ, ಅಂತ ಊರಿನಲ್ಲಿ ಬದುಕುವ ಬಗೆಬಗೆಯ ಜೀವಗಳಿಗೆ ಒಂದು ಸೊಗಸಾದ ವಾತಾವರಣವನ್ನೂ ನಿರ್ಮಿಸಿಕೊಡುತ್ತದೆ. ಈ ಊರಿನಲ್ಲಿ ಮಣಿಬಾಲೆಯೂ ಕತೆ ಹೇಳುತ್ತ ಬೆಳೆಯತೊಡಗುತ್ತಾಳೆ. ಕತೆಯೆಂದರೆ ಬಗೆಬಗೆಯ ಕಲ್ಪನೆಗಳು, ಪಾತ್ರಗಳು, ಭ್ರಾಮಕಗಳು ಅವು ಮನಸ್ಸನ್ನು ಅರಳಿಸುವ ಪರಿಯೇ ಸೊಗಸು. ಇಲ್ಲಿ ಕತೆ ಬೆಳೆಯುತ್ತದೆ ಅಂದರೆ ಅಲ್ಲೊಂದು ಸುದೀರ್ಘ ಕತೆಯಿದೆ ಎಂದೇನೂ ಭಾವಿಸಬೇಕಾಗಿಲ್ಲ. ಊರಿನ ಸಣ್ಣಪುಟ್ಟ ಪಾತ್ರಗಳೆ ಬೆಳೆದು ಊರಿನ ಕಥೆಯಾಗುವ ಹೆಣಿಕೆಯಲ್ಲಿ ವ್ಯಕ್ತಿಗಳಿಗಿಂತ ಊರು ಮುಖ್ಯವಾಗುವ ಬಗೆಯೇ ಇಲ್ಲಿ ವಿಶೇಷವಾದುದು.

ನಾಯಕರು ಹಾಗೂ ಸಿಡಿದೇಳುವವರಿಲ್ಲದ ಈ ಊರಿನಲ್ಲಿ ಸಣ್ಣಸಣ್ಣ ಭಿನ್ನಾಭಿಪ್ರಾಯಗಳಿದ್ದಾಗ್ಯೂ ಅಂತಿಮವಾಗಿ ಒಬ್ಬರೊಳಗೆ ಇನ್ನೊಬ್ಬರು ಬೆರೆತು ಊರನ್ನು ಸಂಭಾಳಿಸಿಕೊಂಡು ಹೋಗುತ್ತಾರೆ. ಈ ಊರು ಕಟ್ಟುವ ಪ್ರಕ್ರಿಯೆಯಲ್ಲಿ ಮುದುಕಮುದುಕಿಯರು, ಯುವಕಯುವತಿಯರು, ಮಕ್ಕಳು, ಆಳುಮಕ್ಕಳು, ಪಟೇಲರು, ಮುಸ್ಲಿಮರು, ಗೊಂಬೆರಾಮರು, ಚಿನ್ನದ ಆಚಾರಿಗಳು ಹೀಗೆ ಎಲ್ಲರೂ ಬರುತ್ತಾರೆ. ಎಲ್ಲರೂ ಎಲ್ಲರನ್ನೂ ಗುರುತಿಸುತ್ತ ಊರನ್ನು ಒಳಗೊಳ್ಳುತ್ತಾ ಹೋಗುತ್ತಾರೆ.

ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಬಂದಂತೆ ‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರೂ ಅಲ್ಲ’ ಎಂಬಂತೆ ಊರಿನ ಸಣ್ಣ ಪುಟ್ಟ ವಿವರಗಳೇ ಬ್ರುಹತ್ತಾಗಿ ಇಲ್ಲಿ ಬೆಳೆದು ನಿಲ್ಲುತ್ತವೆ.

ಹೊಸಹಳ್ಳಿಯೇ ಇಲ್ಲಿ ಕೇಂದ್ರಬಿಂದು. ಇಲ್ಲಿ ಗಮನಿಸಲೇಬೇಕಾದ ವಿಷಯವೆಂದರೆ ಈ ಊರಿನ ಧಾರಣಾಶಕ್ತಿ ಹಾಗೂ ಚಲನಶೀಲತೆ. ನಗರವಾಸಿ ಜನರಿಗೆ ಜಡವಾಗಿ ಕಾಣಬಹುದಾದ ಹಳ್ಳಿಯೊಂದು ತನ್ನೊಡಲಲ್ಲಿ ಎಷ್ಟೊಂದು ಘಟನೆಗಳನ್ನು ಇರಿಸಿಕೊಂಡು ಕ್ರಿಯಾಶೀಲವಾಗಿರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಕ್ರುತಿಯನ್ನು ಓದಬೇಕು. ‘ಸುಳಿಬಾಳೆ ಒಂದು ಗಾಳೀಲಿ ತೂಗಾಡದಂಗೆ ಆಗಿ ಹಸಿರು ಸೀರೆ ಉಟ್ಟಿದ್ದ ಆಲೂರು ದ್ಯಾವನ ಕಿರೀ ಮಗಳು ‘ ಸಂಪಿಗೆ ‘ ಯಿಂದ ಊರಿನ ಕ್ರಿಯಾಶೀಲತೆ ಆರಂಭವಾದರೆ ‘ನೀಟಾಗಿ, ನೀಳವಾಗಿದ್ದ, ಎಣ್ಣೆಗೆಂಪಿನ ಐಸ್ಕ್ಯಾಂಡಿ ಮಾರುವವನ ‘ ವರೆಗೆ ಅದರ ವ್ಯಾಪ್ತಿ ಇದೆ. ಅದರಲ್ಲಿ ಕೆಲವನ್ನು ಗಮನಿಸಿದರೆ ಊರಿನ ಹಿರಿತನ ಸ್ಪಷ್ಟವಾದೀತು.

ಮುಖ್ಯವಾಗಿ ಊರಿಗೆ ರಂಗು ತುಂಬಲು ಯಾರ್ಯಾರೋ ಊರ ಹೊರಗಿನಿಂದ ಬರುತ್ತಾರೆ. ಊರ ಭವಿಷ್ಯ ಹೇಳಿ ಛೂ…ಪಟ್… ಎಂದು ಕಣ್ಕಟ್ಟಿನಾಟ ತೋರುವ ಕರೀಕೋಟಿನ ಹಾಲಕ್ಕಿಯವನು, ಬಳೆ ತೊಡಿಸುವ ಬಳೆಗಾರ, ಮಠದ ಅಯ್ಯನವರು, ಹೆಂಡತಿ ಮಕ್ಕಳ ಜೊತೆ ಬರುವ ಪುಂಗಿದಾಸ, ಕುದುರೆ. ಹಕ್ಕಿಪಂಜರ, ಕೌದಿ, ಪಾತ್ರೆ, ಸಮಸ್ತವನ್ನೂ ಹೊತ್ತು, ದಂಡು ಬಂದಂತೆ ಊರೊಳಕ್ಕೆ ಬರುವ ಗೊಂಬೆರಾಮಯ್ಯ, ಊರೊಳಗೆ ಬಂದು ವಾಲೆ, ಕಡಕು, ಸೊಂಟಪಟ್ಟಿ, ಕಾಲಂದುಗೆ, ಕಪ್ಪ, ಕಡಗ, ಬೇಸರಿ, ಹಾಲುಮಣಿ, ಕಟ್ಟಿನ ಕರಿಮಣಿ, ಕೈಕಡಕು, ಮೂಗುನತ್ತು, ಸಣ್ಣಗುಂಡು, ದೊಡ್ಗುಂಡು, ಹರಳೋಲೆ, ಪಿಲ್ಲಿ, ಕಾಲ್ಗೆಜ್ಜೆ, ಬುಲಾಕು, ಜಡೆಬಿಲ್ಲೆ, ನಾಗರ, ರಾಗಟೆ, ವಂಕಿಯುಂಗರ ಮಾಡಿಕೊಟ್ಟು ಲಾಭ ಮಾಡಿಕೊಳ್ಳುವ ಆಚಾರ್ರು, ಇವರೆಲ್ಲರೂ ತಮ್ಮ ಆಗಮನದ ಮೂಲಕ ಊರಿನ ಚೈತನ್ಯವನ್ನು ಹೆಚ್ಚು ಮಾಡುತ್ತಾರೆ.

ಊರೊಳಗಾದರೂ ಅಷ್ಟೇ…. ಅನೇಕ ಬಗೆಯ ಚಟುವಟಿಕೆಗಳು ವರುಷದುದ್ದಕ್ಕೂ ನಡೆಯುತ್ತಲೇ ಇರುತ್ತವೆ. ಉಗಾದಿ ಹೊತ್ತಿಗೆ ಬಾವಿ ಸೋಸುವವರು, ತಿಂಗಳ ಮಾವನಿಗೆ ಮದುವೆ ಮಾಡುವವರು, ದೀಪಾವಳಿ ಹಬ್ಬದಲ್ಲಿ ತಿಂಡಿ ಮಾಡುವವರು, ಶ್ರಾವಣದ ಆಚರಣೆ ಮಾಡುವವರು, ಬಾಣೇದೇವರ ಗುಡಿಯ ಶುದ್ಧ ಮಾಡುವವರು, ಹೊಸೂರಮ್ಮನ ಸಂತೆ ಪುರಿ, ಊರಿಗೆ ಶಾಲೆ ತರುವವರು, ಗಾಂಧೀ ಪ್ರೇರಣೆಯಿಂದ ಸೊಸೈಟಿ ನಡೆಸುವವರು, ಮದುವೆಗೆ ಸಿಂಗರಿಸಿದ ಗಾಡಿ ಹೂಡುವವರು, ಗಾಡಿಗಳ ನಿಟ್ಟಿಸಿ ನಿಂತು ನೋಡುವವರು, ಗಂಗೆ ಗೌರಿ ಪೂಜೆ ಮಾಡುವವರು, ದನದ ಜಾತ್ರೆಗೆ ಹೋಗಿ ಬಂದವರು, ಮಳೆ ಬಿದ್ದಾಗ ಎಚ್ಚೆತ್ತುಕೊಳ್ಳುವವರು, ಮೀನು ಹೀಡಿಯುವ ಗರದವರು, ಊರಿನ ಘನತೆಗೆ ಧಕ್ಕೆ ಬರದಂತೆ

ನ್ಯಾಯ ತೀರ್ಮಾನಿಸುವವರು, ಕಣದಲ್ಲಿ ಹಳೆ ದಿರಿಸಿನ ಅಜ್ಜಮ್ಮರು, ಅವರ ಕೈಕೆಲಸಗಳು, ಮಾರಿಹಬ್ಬ, ನಾಗರ ಮಾಡುವವರು, ಸಿಡುಬಿಗೆ ಬಲಿಯಾದವರು _ ಹೀಗೆ ಹೊಸಹಳ್ಳಿಯೆಂದರೆ ಪುಟ್ಟ ವಿಶ್ವವೇ ಸರಿ. ಇದನ್ನೆಲ್ಲ ನೋಡುವುದೆಂದರೆ ಮಣಿಗಂತೂ ಅತೀವ ಕುತೂಹಲ. ಅಲ್ಲಿ ಜಾತಿಧರ್ಮಗಳು ಮನುಶ್ಯರಿಗೆ ಯಾವುದೇ ತಡೆಗೋಡೆಯನ್ನು ಒಡ್ಡುವುದಿಲ್ಲ. ಭಾರತ ಬದುಕಿದ್ದೇ ಹೀಗೆ.

ಸುಜಾತಾ ಅವರಿಗೆ ಊರೆಂದರೆ ಅಮೂರ್ತವಾದ ವಿಷಯವೇನೂ ಅಲ್ಲ. ಊರೆಂದರೆ ಒಟ್ಟಿಗೆ ಬಾಳುವ ಮನುಷ್ಯರು. ಹಾಗಾಗಿಯೇ ಮಾನವ ಕೇಂದ್ರಿತ ಆಚರಣೆಗಳನ್ನು ಆಸ್ಥೆಯಿಂದ ವಿವರಿಸುತ್ತಾರೆ. ಅವುಗಳಲ್ಲಿ ಮದುವೆ ನಂಟಸ್ತಿಕೆ, ಅಲ್ಲಿ ಏರ್ಪಡುವ ಸೂಕ್ಷ್ಮಗಳು, ದಿಬ್ಬಣದ ಸಂಭ್ರಮ, ಮದುವೆ ದಿನದ ನುಚ್ಚಕ್ಕಿ ಹಸೆ, ಅರಶಿನದೆಣ್ಣೆ ಶಾಸ್ತ್ರ, ಮದುವೆ ಮೆರವಣಿಗೆಯಲ್ಲಿ ಬಿಚ್ಚಿಕೊಳ್ಳುವ ಹಗೇವಿನಲ್ಲಿ ಕೆಡವಿ ಕೆಂಪು ಮೂತಿಯವನನ್ನು ಸುಟ್ಟ ಕಥೆ, ಹೆಣ್ಣೊಪ್ಪಿಸಿ ಕೊಡುವ ಭಾವುಕ ಕ್ಷಣಗಳು, ಮದುಮಗಳು ಊರೊಳಗೆ ಬರುವಾಗಣ ಕುತೂಹಲ, ಬಾಗಿಲು ತಡೆವ ತಂಗ್ಯಮ್ಮ, ಹೆಣ್ಣಿನ ಮುಟ್ಟು, ನಿಷೇಧಗಳು, ಇತ್ಯಾದಿಗಳೆಲ್ಲಾ ಬಂದು ಹೋಗುತ್ತವೆ.

‘ವಾಲೆ ಬದ್ಲು ವಾಲೆಗರಿಯ ಸಣ್ಣಕ್ಕೆ ಸಿಗುಳಿ, ಕೆಂಪು ಬಣ್ಣದಲ್ಲಿ ಅದ್ದಿ ಅದನ್ನ ಸುರುಳಿ ಸುತ್ತಿ ಕಿವಿ ವಾಲೆ ಹಂಗೆ ಇಟ್ಟುಕೊಂಡ ಮುದುಕಿಯರು’ ಕಥೆಯುದ್ದಕ್ಕೂ ಕಾಣ ಸಿಗುತ್ತಾರೆ. ದನ ಹೊಡೆಯುವವರು, ಹುಣಸೆ ಬೀಜ ಹೆಕ್ಕುವವರು, ಜೂಜಾಡುವವರು, ಹಲಸಿನ ಹಣ್ಣು ತಿನ್ನುವವರು, ಕದ್ದು ಕೋಳಿ ತಿನ್ನುವವರು, ಶೀಲ ಅಶ್ಲೀಲ ಬೇಧವಿಲ್ಲದೆ ಬೈದಾಡುವವರು, ಪ್ರೀತಿ ಮಾಡುವ ಸಾಬರು, ಹೊಟ್ಟಿನ ಗುಡ್ಡೆಯಲ್ಲಿ ಕಾಮದಾಟ ನಡೆಸುವವರು, ನಾಯಿದಾಸನನ್ನು ಪ್ರೀತಿಸುವವರು, ಮೊದಲಾದ ಜನಗಳ ಜೊತೆಗೆ, ರಾಮಭಕ್ತನ ಎರಡನೇ ಮದುವೆ, ಓಬವ್ವನ ಪತಿಭಕ್ತಿ, ಬಾವಿಕಟ್ಟೆಯ ಮಾತು, ಶಾಲೆಯ ಗಂಟೆ ಹೊಡೆದ ಹಾಗೆ ಮಾತಾಡುವ ಶೇಖನ ಸಾಹಸಗಳು, ಅಲ್ಲಿ ಇಲ್ಲಿ ಹುಟ್ಟುವ ಪ್ರೇಮ ಮೊದಲಾದವುಗಳೆಲ್ಲ ಸೇರಿಕೊಂಡು ಅದ್ಭುತವಾದ ಲೋಕವೊಂದು ಸ್ರುಷ್ಟಿಯಾಗುತ್ತದೆ.

ಈ ಲೋಕದೊಳಗೆ ದೇವೇಂದ್ರನೇ ಕಳುಹಿದ ಜೋಡಿಹಕ್ಕಿಗಳು, ಅವರೆ ಹುಳದ ರಾಜಕುಮಾರಿ, ಕೊಳ್ಳಿದೆವ್ವದ ಕತೆಗಳೆಲ್ಲಾ ಸೇರಿಕೊಂಡಾಗ ಊರು ವಾಸ್ತವ ಮತ್ತು ಅವಾಸ್ತವಗಳ ಗಡಿ ರೇಖೆಗಳನ್ನು ಮೀರಿ ಉಜ್ವಲವಾಗುತ್ತದೆ.

ಕೊನೆಯದಾಗಿ ಒಂದು ವಿಷಯವನ್ನು ತಮ್ಮ ಗಮನಕ್ಕೆ ತಂದು ಈ ಮುನ್ನುಡಿಯನ್ನು ಮುಗಿಸುತ್ತಿದ್ದೇನೆ. ಹೊಸಳ್ಳಿಯಂಥ ಕ್ರಿಯಾಶೀಲ ಮತ್ತು ಸಮ್ರುದ್ಧ ಊರುಗಳು ನಮ್ಮಲ್ಲಿ ಆ ಕಾಲದಿಂದಲೂ ಇದ್ದವು. ವಸಾಹತುಶಾಹಿ ಶಕ್ತಿಗಳು ಬರುವವರೆಗೂ ಅವುಗಳ ಬಗ್ಗೆ ಯಾರೂ ಬರೆಯುತ್ತಿರಲಿಲ್ಲ. ಇಲ್ಲಿ ಇದ್ದಂತೆಯೇ ಪ್ರತಿ ಊರುಗಳಲ್ಲಿಯೂ ಸಣ್ಣಸಣ್ಣ ಸಮುದಾಯಗಳಿದ್ದವು. ಊರಿನಲ್ಲಿರುವ ಎಲ್ಲರಿಗೂ ಅರ್ಥವಾಗುವ ಭಾಶೆಯೊಂದು ಇದ್ದಂತೇ… ಪ್ರತಿ ಸಮುದಾಯವೂ ತನ್ನದೇ ಆದ ಭಾಷಾ ಪ್ರಭೇಧವೊಂದನ್ನೂ ಹೊಂದಿತ್ತು. ಇಂಥ ಸಾಂಸ್ಕ್ರುತಿಕ ವೈವಿಧ್ಯಗಳೇ ವಸಾಹತು ಶಕ್ತಿಗಳಿಗೆ ಒಂದು ಸಮಸ್ಯೆಯಾಗಿತ್ತು.

ಈ ಕೊನೆಯಿಲ್ಲದ ವೈವಿಧ್ಯಗಳನ್ನು ಒಂದು ಚೌಕಟ್ಟಿನೊಳಗೆ ತಾರದ ಹೊರತು ಸ್ಥಿರವಾದ ಆಳ್ವಿಕೆ ಕೊಡುವುದು ಅಸಾಧ್ಯ ಎಂದು ಬ್ರಿಟೀಶರು ಮನಗಂಡರು. ಆನಂತರ ಭಾರತದ ಹಳ್ಳಿಗಳನ್ನು ನಿರ್ದಿಷ್ಟ ಪರಿಭಾಷೆಯಲ್ಲಿ ವಿವರಿಸಲು ಹೆಣಗಿದರು. ಸಾಮ್ರಾಜ್ಯಶಾಹೀ ಶಕ್ತಿಗಳಿಗೆ ತಮ್ಮ ಆಳ್ವಿಕೆಯನ್ನು ವಿಸ್ತರಿಸಲು ಹಾಗೂ ಗಟ್ಟಿಗೊಳಿಸಲು ತಾವೇ ಬರೆದುಕೊಂಡ ಒಂದು ವ್ಯಾಕರಣ ಬೇಕಾಗುತ್ತದೆ, ಈ ವ್ಯಾಕರಣ ಬರೆಯಲು ವಸಾಹತು ಕಾಲದ ವಿದ್ವಾಂಸರಿಗೆ ಸಹಾಯಕರಾಗಿದ್ದವರು ಬಹುಮಟ್ಟಿಗೆ ಬ್ರಾಹ್ಮಣರಾಗಿದ್ದು ಚಾರಿತ್ರಿಕವಾಗಿ ಅನಿವಾರ್ಯವಾಗಿತ್ತು. ಉದಾಹರಣೆಗೆ ಕ್ರಿಸ್ತ ಶಕ ೧೭೮೩ ರಿಂದ ೧೮೨೦ ರವರೆಗಣ ಅವಧಿಯಲ್ಲಿ ಕರ್ನಾಟಕದ ಕೆಲವು ಭಾಗದ ಸಾಂಸ್ಕ್ರತಿಕ ಮಾಹಿತಿಗಳನ್ನು ಸಂಗ್ರಹಿಸಿದ ಕರ್ನಲ್ ಮೆಕೆಂಜಿಯ ಸಹಾಯಕರಾಗಿದ್ದವರು ಪುಲಿಗಡ್ಡ ಮಲ್ಲಯ್ಯ, ವೆಂಕಟ ರಾವ್, ನಾರಾಯಣ ರಾವ್, ಆನಂದ ರಾವ್, ಕಾವಲಿ ವೆಂಕಟಬೋರಯ್ಯ, ವೆಂಕಟಲಕ್ಷ್ಮಯ್ಯ, ವೆಂಕಟರಾಮಸ್ವಾಮಿ ಎನ್ನುವ ಬ್ರಾಹ್ಮಣರು. ಈ ವಿದೇಶಿ ಮತ್ತು ಬ್ರಾಹ್ಮಣ ಸಂಯೋಜನೆಯು ಕಟ್ಟಿದ ಸಾಂಸ್ಕ್ರತಿಕ ಪಠ್ಯಗಳನ್ನು ಇವತ್ತು ನಾವು ನಮ್ಮ ಇತಿಹಾಸವಾಗಿ ಗ್ರಹಿಸಿದ್ದೇವೆ. ಇದನ್ನು ಎಚ್ಚರದಿಂದ ಗಮನಿಸುತ್ತಿದ್ದ ಆನಂದ ಕುಮಾರ ಸ್ವಾಮಿಯವರು ಭಾರತವನ್ನು ಜನರ ಸಾಂಸ್ಕ್ರತಿಕ ಅನುಭವದಲ್ಲಿ ಗುರುತಿಸಬೇಕು ಎಂದು ಹೇಳಿದ್ದರು. ಆದರೆ ನಾವವರ ಮಾತುಗಳಿಗೆ ಕಿವಿಗೊಡದೆ ಹೋದೆವು.

ಈಗ ಇತಿಹಾಸದ ಗಾಲಿಗಳನ್ನು ಸ್ವಲ್ಪ ಹಿಂದೆ ತಿರುಗಿಸಿ ನೋಡಬೇಕು. ಊರುಗಳ ಮತ್ತು ಸಮುದಾಯಗಳ ಕುರಿತಾದ ನಮ್ಮ ಅಧ್ಯಯನಗಳೂ ಕೂಡಾ ವಸಾಹತು ಕಾಲದ ಮಾನವ ಶಾಸ್ತ್ರಗಳ ವಿಧಾನಗಳನ್ನೇ ಅನುಸರಿಸಿಕೊಂಡು ಬೆಳೆದವು.

ಇದಕ್ಕೆ ಸುಮಾರು ೨೦೦ ವರ್ಷಗಳಿಗಿಂತ ಹೆಚ್ಚಿನ ಇತಿಹಾಸವಿಲ್ಲ. ೧೭೭೪ರಲ್ಲಿ ಕೊಲ್ಕತ್ತಾದಲ್ಲಿ ಆರಂಭವಾದ ‘ಏಶಿಯಾಟಿಕ್ ಸೊಸಾಯಿಟಿ ಆಫ್ ಬೆಂಗಾಲ್’ ಎಂಬ ಸಂಸ್ಥೆಯು ಭಾರತದ ಸಣ್ಣ ಸಮುದಾಯಗಳ ಅಧ್ಯಯನಕ್ಕೆ ನಾಂದಿ ಹಾಡಿತು. ೧೯೦೧ ರಲ್ಲಿ ಆರಂಭವಾದ ‘ಎತ್ನೋಗ್ರಾಫಿಕ್ ಸರ್ವೇ ಆಫ್ ಇಂಡಿಯಾ’ವು ಮುಂದೆ ಭಾರತದ ಜಾತಿ ಮತ್ತು ಬುಡಕಟ್ಟುಗಳ ಅಧ್ಯನಕ್ಕೆ ಬಹುವಾದ ಪ್ರೇರಣೆ ನೀಡಿತು. ಈ ಸಂಪುಟಗಳಲ್ಲಿ ಪ್ರಕಟವಾದ ಗೆಜೆಟಿಯರ್ ಆಫ್ ಇಂಡಿಯಾದಲ್ಲಿ ಮೊದಲ ಬಾರಿಗೆ ಅನೇಕ ಸಣ್ಣ ಸಮುದಾಯಗಳು ದಾಖಲಾದವು. ಮುಂದೆ ರಿಸ್ಲೆ, ಎಂಥೋವನ್, ಥರ್ಸ್ಟನ್ ಮೊದಲಾದ ಇಂಗ್ಲೀಷ್ ಅಧಿಕಾರಿಗಳು ಈ ಕೆಲಸವನ್ನು ಮುಂದುವರಿಸಿದರು. ಸ್ಥಳೀಯ ಬ್ರಾಹ್ಮಣ ಪಂಡಿತರೇ ಇವರಿಗೆಲ್ಲ ನೆರವಾದವರು.

ಆಡಳಿತಗಾರರು ಮತ್ತು ಭಾರತದ ಜಾತಿ ಸಮಾಜದ ಮೇಲ್ತುದಿಯಲ್ಲಿರುವ ಜನರು ಕಟ್ಟಿದ ಸಣ್ಣ ಸಮುದಾಯಗಳ ಚರಿತ್ರೆಯೇ ನಮ್ಮ ಮುಂದಿರುವುದು. ಇದನ್ನು ಅನುಸರಿಸಿದ ಅನೇಕ ಹಿಂದುಳಿದ ವರ್ಗದ ಸಮುದಾಯಗಳು ಅನ್ಯರು ಕಟ್ಟಿದ ನಿರೂಪಣೆಗಳನ್ನು ತಮ್ಮದೆಂದು ಭಾವಿಸಿಕೊಂಡು ಸಾಂಸ್ಕ್ರುತಿಕ ಕೀಳರಿಮೆಯಿಂದ ನರಳಿದ್ದೂ ಇದೆ. ಹೊಸಬಗೆಯ ಅಧ್ಯಯನ ಕ್ರಮಗಳಿಂದ ಸಣ್ಣ ಸಮುದಾಯಗಳನ್ನು ಈ ಕೀಳರಿಮೆಗಳಿಂದ ಹೊರತರಬೇಕಾದ್ದು ಇಂದಿನ ಶೈಕ್ಷಣಿಕ ಅಗತ್ಯಗಳಲ್ಲಿ ಪ್ರಮುಖವಾದುದು. ಇದು ನಮ್ಮ ಊರುಗಳನ್ನು ಸಬಲೀಕರಣಗೊಳಿಸುವ ಕೆಲಸವೂ ಹೌದು. ಸಮುದಾಯಗಳ ಆತ್ಮ ಗೌರವವನ್ನು ಹೆಚ್ಚಿಸುವ ವಿಧಾನವೂ ಹೌದು.

ಹೆಚ್. ಆರ್. ಸುಜಾತಾ ಅವರ ಮಣಿಬಾಲೆಯು ಈ ನಿಟ್ಟಿನಿಂದ ಅತ್ಯಂತ ಮಹತ್ವದ ಕ್ರುತಿಯೆಂದು ನಾನು ಭಾವಿಸುತ್ತೇನೆ. ಇದು ಅಂಕಿ ಅಂಶಗಳ ಮೂಲಕ ಕಟ್ಟಿದ ಯಾಂತ್ರಿಕ ಇತಿಹಾಸವೋ ಗೆಝೆಟಿಯರೋ ಅಲ್ಲ. ಅನ್ಯರು ಹೊರಗಿನಿಂದ ನೋಡಿ ಬಣ್ಣಿಸಿದ ರಮ್ಯ ಕಥನವೂ ಅಲ್ಲ. ಅಧ್ಯಯನಕ್ಕೋಸ್ಕರ ಜಾನಪದ ತಗ್ನರೋ, ಮಾನವಶಾಸ್ತ್ರಗ್ನರೋ ಅಥವಾ ಸಮಾಜ ಶಾಸ್ತ್ರಗ್ನರೋ ಮಾಡಿಕೊಂಡ ಟಿಪ್ಪಣಿಗಳೂ ಅಲ್ಲ. ಬದಲು ಊರನ್ನೇ ಬದುಕಿದ ಜೀವವೊಂದು ಹೆಣೆದ ಮಣಿಮಾಲೆ.

ಈ ಸಾಹಸ ಮಾಡಿದ ಹೆಚ್. ಆರ್. ಸುಜಾತಾ ಅವರಿಗೆ ಅಭಿನಂದನೆಗಳು.

‍ಲೇಖಕರು Admin

13 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading