-ರಾಜೇಶ್ವರಿ ಹುಲ್ಲೇನಹಳ್ಳಿ
“ಅಕ್ಕಾ ಅಕ್ಕಾ, “
“ಯಾರೂ”
“ನಾನು ಗಂಗಿ”
“ಬಂದೆ….”
ಎಂದು ಬಾಗಿಲು ತೆಗೆದ ಶುಭ
“ಹೋ ಗಂಗಿ ನೀನಾ? ಈಗ ಬೆಳಗಾಯ್ತಾ ನಿನಗೆ ?.”
“ಅಯ್ಯೋ ನಿಮಿಗಾದಾಗ್ಲೇ ನಂಗೂ ಬೆಳಕಾತು ನನ್ಗೆನ್ ಬ್ಯಾರೆ ಸೂರಪ್ಪ ಇದಾನಾ?. ಯಾಕಿಂಗೆಳ್ತೀರಾ ಅಕ್ಕೋರೆ.,”
“ಅಲ್ಲಾ ಬೆಳಗ್ಗೆ ಏಳೂವರೆಗೆ ಬರ್ಬೇಕಾದವಳು ಈಗ ಹನ್ನೊಂದು ಗಂಟೆಗೆ ಬರ್ತಿದೀಯಲ್ಲಾ ಅದಕ್ಕೆ ಈಗ ನಿನಗೆ ಏಳುವರೆ ಆಗಿರ್ಬೇಕು ಅಂತ ಅನ್ಕೊಂಡೆ.!”
“ಅಯ್ಯೋ ಇವತ್ತೇನಾಯ್ತು ಗೊತ್ತಾ…?”
“ಏನಾಯ್ತು ಅಂತ ನೀ ಹೇಳಿದ್ರೆ ಗೊತ್ತಾಗುತ್ತೆ” ಎಂದೆ ಅವಳಿಗೆ ಮುಖ ಕೊಡದೆ.
“ಅಯ್ಯೋ ಕ್ವಾಪ ಮಾಡ್ಕಬ್ಯಾಡಿ ವಸಿ ಕೇಳಿ.
ಇಸ್ಯಾ ಗೊತ್ತಾದ್ರೆ ನೀವೂ ಬೇಕಾರೆ ಬತ್ತೀರ”
“ನೀನು, ಲೇಟಾಗಿ ಬಂದ ದಿನವೆಲ್ಲಾ ಏನಾದ್ರೂ ಒಂದು ಕಾರಣ ಸಲೀಸಾಗಿ
ಹೇಳ್ತಿಯ ಬಿಡು ಇದೇನ್ ಹೊಸದಾ?” ಎಂದು ರೇಗಿದಾಗ
“ಇಲ್ಲಾ ಕಣಕ್ಕ ಈಗ ಇಸ್ಯಾ ಕೇಳಿಬುಟ್ರೆ ನೀವು ಈಗ್ಲೇ ಒಂಟು ಬುಡ್ತಿರಾ ಗೊತ್ತಾ?”
“ಅದೆಲ್ಲಾ ಇರ್ಲಿ ಮೊದ್ಲು ಬಟ್ಟೆ ನೆನೆಸಿ ಬಾ. ಕಸ ಗುಡಿಸಿ ನೆಲ ಒರೆಸೋ ಟೈ ಮಲ್ಲಿ ನಿನ್ನ ಹೊಸ ಕೆಥೆ ಹೇಳುವಿಯಂತೆ “
“ಸರಿ ಬುಡಿ ನಿಮಗೋ ಬಾರಿ ಕ್ವಾಪ ಬಂದಗದೆ ಆಮೇಲೇ ಏಳ್ತೀನಿ. “
ಎಂದು ದಢ ದಢನೇ ವಾಷಿಂಗ್ ಏರಿಯಾಗೆ ಹೋದ ಗಂಗಿ ಒಂದೇ ಉಸಿರಿಗೆ ಬಟ್ಟೆ ನೆನೆಸಿ ಬಂದು ಪೊರಕೆ ಕೆಯ್ಗೆತ್ತಿ ಕೊಂಡವಳೇ “ಅಕ್ಕಾ ಈಗ ಕೇಳಿ “
ಎಂದಾಗ ನನ್ನ ಕೋಪವೂ ತುಸು ತಣಿದಿತ್ತು “ಸರಿ ಹೇಳು” ಎಂದೆ.
“ಅಕ್ಕಾ ಇವತ್ತು ನಾನೂ ನಮ್ ಪಕ್ಕದ್ ಮನೆ ಮಂಜಿನೂವೇ ಕರೆಂಟ್ ತಗಳಕ್ಕೆ ಹೋಗಿದ್ದು,”
“ಕರೆಂಟ್ ತಗಳದಾ! ಅದೆಂಥದೇ?
“ಅಯ್ಯೋ ಅಕ್ಕಾ ಮತ್ತೆ ಅಲ್ಲೊಂದು ಸಮಾಜದಲಿ ಇವತ್ತಿನಿಂದವ 15 ದಿನ ಹೋದೋರಿಗೆಲ್ಲವ ಪುಕ್ಸಟ್ಟೆ ಕರೆಂಟ್ ಕೊಡ್ತರೆ”
“ಅಲ್ವೇ ಸರ್ಕಾರದಿಂದ ಸಿದ್ದರಾಮಯ್ಯ ಕೊಡ್ತಾ ಇರೋ ಫ್ರೀ ಕರೆಂಟ್ ಸಾಲದ? ಇನ್ ಬೇರೆ ಯಾರು ಫ್ರೀ ಕರೆಂಟ್ ಕೊಡ್ತಾರೆ,?
” ಅಯ್ಯೋ ಅಕ್ಕಾ ಅದು ಸಿದ್ರಾಮಯ್ಯನ ಗ್ಯಾರೆಂಟಿ ಕರೆಂಟಲ್ಲಾ, ಅದು ಕರೆಂಟು
ತಗಳದು ಅಂದ್ರೆ ಕರೆಂಟ್ ಕೊಡಿಸ್ಕಳದು.”
” ಯಾಕೆ? ಕರೆಂಟ್ ಕೊಡಿಸ್ಕಳೊಂತದು ಏನಾಯ್ತೆ?”
“ಅಯ್ಯೋ ಏನೂ ಆಗಿಲ್ಲ ಅಕ್ಕಾ ಏನೂ ಆಗ್ಬಾರ್ದು ಅಂತ!.”
“ಏನೂ ಆಗ್ಬಾರ್ದು ಅಂದ್ರೆ?”
” ಏನೂ ಕಾಯ್ಲೆ ಕಸಾಲೇ ಬರದಂಗೆ ಕರೆಂಟ್ ಕೊಡಿಸ್ಕಳದು.”
” ಅಂದ್ರೆ? “
“ಅದೇನು ಅಂದ್ರೆ ಅಲ್ಲಿ ಹೋದವರಿಗೆಲ್ಲವಾ ಒಂದೊಂದು ಮಷೀನ್ಮೇಲೆ ಕೂರ್ಸಿ, ಕರೆಂಟ್ ಕೊಡ್ತಾರೆ.”
“ಹೌದಾ?”
” ಆ ಮಿಷಿನೂ ಅದೇ ದೇವಸ್ಥಾನದ ಮುಂದೆ ದೇವರ ಪಾದ ಇಟ್ಟಿರ್ತರಲ್ಲ ಹಂಗೆ ಕಾಣುತ್ತೆ, ಆದ್ರೆ ಪ್ಲಾಸ್ಟಿಕ್ದು ಅಷ್ಟೇಯ!.ನಮ್ಮುನ್ನ ಕುರ್ಚಿ ಮ್ಯಾಲೆ ಕೂರ್ಸಿ ಆದ್ರ ಮ್ಯಾಲೆ ಎರ್ಡೂ ಪಾದವ ಇಟ್ಟುಸ್ತಾರೆ. ಆಮೇಲೆ ಕರೆಂಟಿನ ವೈರ ಹಾಕಿ ಕರೆಂಟ್ ಕಲಕ್ಸನ್ ಕೊಟ್ಟು ಸುಚ್ ಆಕ್ತರೆ. ಆಗ ಅದರೊಳಗಿಂದ ಕರೆಂಟು ಬಂದು ಕಾಲ್ ಕಡೆಯಿಂದ ಜುಂ ಜುಂ ಅನ್ನಕ್ಕೆ ಶುರುವಾಗುತ್ತೆ ನೋಡಿ ಅದೆಯ ಜುಂ ಜುಂ ತೆರ್ಪಿ”
” ಓಹ್ ಅದಾ,?.
“ನಿಮಗೂ ಗೊತ್ತಾ ಅದೂ!?”
“ಹೂಂ ಗೊತ್ತು ಹೇಳು ಅದು ಜುಮ್ ಜುಮ್ ತೆರ್ಪಿ ಅಲ್ಲಾ ಫುಟ್ ಪಲ್ಸ್ ಥೆರಪಿ ಅಂತ.”
“ಅಯ್ಯೋ ಇದ್ದುದಿದ್ದಂಗ್ ಹೇಳಿದ್ರೆ ಹಿಂಗೆಯ ಜುಮ್ ಜುಮ್ ಅಂದಲೆಯ ಇನ್ನೇನನ್ನನಾ? ಕಾಲಿಟ್ಟಿದ ತಕ್ಸಣ ಅಂಗಾಲಿಂದ ಕಾಲು ಜುಮ್ ಜುಮ್ ಅಂತವೆ ಅದ್ಕೇ ಅಂಗಂದೆ ತಗಳಿ ನೀವೇಳಿದಂಗೆ ನಾನೂವೇ ಪುಟ್ಬಾಲ್ ತೆರ್ಪಿ.
ಅಂತಾಲೆ ಅಂತೀನಿ ನೀವ್ ಏಳ್ದಂಗೆ ಅಲ್ಲೆಲ್ಲಾರೂ ಅಂಗೆ ಅಂತಿದ್ರು.
“ಸರಿ ಬಿಡು ತಾಯಿ ಏನಾದ್ರು ಅನ್ನು”
” ಇದು ನಿಮಿಗ್ ಗೊತ್ತಿಲ್ವೇನೋ ನಿಮಿಗೂ ಏಳಿ ಕರ್ಕಂಡೋಗನ ಅಂತಿದ್ದೆ ಅದ್ ನಿಮಿಗ್ ಗೊತ್ತು ಬುಡಿ ಅಂಗಾರೆ.,!!”
“ಹೂ ಮೈಸೂರಲ್ಲಿ ನಮ್ಮ ಅಕ್ಕನ ಮನೆಗೆ ಹೋದಾಗ ಅವಳ ಜೊತೆ ನಾನೂ ಒಂದೆರಡು ದಿನ ಹೋಗಿದ್ದೆ “
“ಓ ಅಂಗಾರೇ ನೀವೂ ಈ ಜುಮ್ ಜುಮ್ ಕರೆಂಟ್ ತಂಗಂಡಿದೀರಾ ಅನ್ನಿ……
” ಏನ್ ಗೊತ್ತಾ?ಫುಟ್ ಪಲ್ಸ್ ಥೆರಪಿ. ಅಂದ್ರೆ ಪಾದದ ಮೂಲಕ ಇಡೀ ದೇಹಕ್ಕೆ ರಕ್ತ ಸಂಚಲನೆ ಮಾಡೋ ಚಿಕಿತ್ಸೆ.
“ಹೋ ಗೊತ್ತಾತು ಬಿಡಿ ಈಗ ಅಂಗನ್ನಕಿಲ್ಲ.
” ಸರಿ ಬಿಡು ನಾಳೆ ಕೆಲ್ಸಕ್ಕೆ ಎಷ್ಟೊತ್ತಿಗೆ ಬರ್ತೀಯಾ ಹೇಳು?”
“ಇಷ್ಟೊತ್ತಿಗೆಯಾ ಇವತ್ತು ಬಂದ್ನಲ ಅಂಗೇಯ”
“ಹಾಂ? ಹನ್ನೊಂದ್ ಗಂಟೆಗಾ? ಮನೆ ಕೆಲ್ಸದ ಕೆಥೆ?
“ಅಯ್ಯೋ ಒಂದಸ್ಟ್ ದಿನ ವಸಿ ಆಜ್ಜಸ್ಟ್ ಮಾಡ್ಕಳಿ. ಇದು ನಿಮಿಗಾಗೇಯ ಗೊತ್ತಾ?.”
“ಏನಂದೆ? ನನಗಾಗ! “
“ಮತ್ತೆ? ನಾನ್ ವೈನಾಗಿದ್ರೆ ತಾನೇ ಇನ್ನೂ ಎಷ್ಟೋ ವರ್ಸ ನಿಮ್ಮನೆ ಕೆಲ್ಸ ಮಾಡಬೋದು ಅದು ನಿಮಿಗೇ ಒಳ್ಳೇದಲ್ವಾ ? ಅದ್ಕೇಯ ನಾನೂ ವಸಿ ಆರೋಗ್ಯ ನೋಡ್ಕಬ್ಯಾಡ್ವಾ,?.”
“ಇದೊಳ್ಳೆ ಸರಿಯಾಯ್ತು ನಿನ್ನ ಕಥೆ”
” ಅಯ್ಯ್ಯೋ ಬೇಜಾರ್ ಮಾಡ್ಕಬ್ಯಾಡಿ ಬೇಕಾರೆ ಅದಿನೈದ್ ದಿನ ರಜಾ ಕೊಡಿ ಸಂಬಳನು ಕೊಡ್ಬೇಡಿ ನಾವ್ ಚನಾಗಿದ್ರೆ ಎಂಗಾರ ದುಡ್ಕಂಡ್ ತಿನ್ಬೋದು “
ಎಂದು ಕಡಾಖಂಡಿತವಾಗಿ ಹೇಳಿದ ಗಂಗಿಯ ಮೊಗದ ಭಾವನೆ ಪಾರ್ಟಿಲಿ ಸೀಟ್ ಕೊಡದಿದ್ರೆ ಇಂಡಿಪೆಂಡೆಂಟಾಗಿ ನಿಲ್ತೀನಿ ಅಂತ ರೆಬೆಲ್ ಆಗಿ ಚಾಲೆಂಜ್ ಮಾಡೋ ಕ್ಯಾಂಡಿಡೇಟ್ ಸ್ಟೇಟ್ಮೆಂಟ್ ತರ ಗೋಚರಿಸುತ್ತಿತ್ತು. ಇಲ್ಲಿ ಸೋಲಬೇಕಾದ್ದು ನಾನೇ! ಏಕೆಂದರೆ ಬಹು ಆಸೆಯಿಂದ ದೊಡ್ಡದಾದ ಡೂಪ್ಲೆಕ್ಸ್ ಮನೆ ಕಟ್ಟಿಸಿಕೊಂಡು ಅದರ ಕ್ಲೀನಿಂಗಿಗೆ ಕೆಲಸದವರನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಇತ್ತು. ಆಸೆಪಟ್ಟು ದೊಡ್ಡ ಮನೆ ಕಟ್ಟಿಕೊಂಡು ಈಗ ಅನುಭವಿಸುತ್ತಿರುವುದನ್ನು ನೋಡಿದರೆ ನಮ್ಮಜ್ಜಿ ಹೇಳ್ತಿದ್ದ ಗಾದೆ ಮಾತು ನೆನಪಾಗುತ್ತೆ. “ಚಂದಕ್ಕೆ ಬಳೆ ತೊಟ್ಕೊಂಡು ಕೈ ಕೊಡವಿಕೊಂಡರಂತೆ ” ಎಂದು.
ನನ್ನ ಮೊಗದ ಸೋಲಿನ ಚಹರೆ ಕಾಣದಂತೆ, “ಸರಿ ಬಿಡು ರಜ ಹಾಕೋದೇನು ಬೇಡ ಒಂದ್ ಕೆಲಸ ಮಾಡು , ಬೆಳಗ್ಗೆ ಬೇಗನೆ ಬಂದು ಕೆಲಸ ಮುಗಿಸಿ ಇಲ್ಲೇ ತಿಂಡಿ ತಿಂದು ಸೀದಾ ಅಲ್ಲಿ ಹೋಗು ಆಗುತ್ತಾ,?
“ಇಲ್ಲ ತಿಂಡಿ ಇಟ್ಟಿರಿ ಅಲ್ಲಿ ಹೋಗಿ ಬಂದ್ಮೇಲೆ ತಿಂತಿನಿ, “ಎಂದಳು ಕಟ್ಟುನಿಟ್ಟಾಗಿ
” ಸರಿ ನೀನು ಅಲ್ಲಿಂದ ಸೀದಾ ನಮ್ಮನೆಗೇ ಮೊದಲು ಬರಬೇಕು ಆಯ್ತಾ?.”
ಎಂದೊಡನೆ ಬಲು ಖುಷಿಯಿಂದ “ನಂಗೊತ್ತಿತ್ತು ಅಕ್ಕಾ ನಿಮ್ದು ಒಳ್ಳೇ ಮನ್ಸು ಅಂತ”. ಎಂದು ನನ್ನನ್ನು ಉಬ್ಬಿಸಿ ಹೊರಟಳು. ಇನ್ನೇನು ಮಾಡೋದು “ನಮಗೆ ಗತಿಯಿಲ್ಲ ಅವಳಿಗೆ ಮತಿ ಇಲ್ಲಾ” ಎನ್ನುವಂತೆ ಸುಮ್ಮನಾದೆ.
ಹೌದು ಗಂಗಿ ಹೋಗ್ತಿರೋ ಥೆರಪಿಗೆ ಮೈಸೂರಲ್ಲಿ ಅಕ್ಕಾ ಕೂಡ ಹೋಗ್ತಿದ್ಳು ಅವಳೊಂದಿಗೆ ನಾನೂ ಒದೆರಡು ದಿನ ಹೋಗಿದ್ದೆ. “ಕಂಪಾನಿಯೋ” ಎಂಬ ಕಂಪೆನಿಯವರು ರಾಜ್ಯದಾದ್ಯಂತ
“ಫುಟ್ ಪಲ್ಸ್ ಥೆರಪಿ” ಎಂಬ ಚಿಕಿತ್ಸಾ ವಿಧಾನ ಕುರಿತು ಏರ್ಪಡಿಸಲಾಗಿದ್ದ “ಆರೋಗ್ಯ ಅರಿವು ” ಕಾರ್ಯಕ್ರಮದಲ್ಲಿ ಥೆರಪಿಯ ಕುರಿತು ವಿವರ ನೀಡುವುದರೊಂದಿಗೆ, “ಆರೋಗ್ಯವೇ ಭಾಗ್ಯ” ಸರಿಯಾದ ರಕ್ತ ಪರಿಚನೆಯಿಂದ ದೇಹದ ಹಲವಾರು ರೋಗಗಳನ್ನು ಗುಣ ಪಡಿಸಿಕೊಳ್ಳಬಹುದು ರಕ್ತ ಪರಿಚಲನೆಯನ್ನು ಸರಿಪಡಿಸಲು ಈ ಥೆರಪಿಯು ಪರ್ಯಾಯ ವ್ಯವಸ್ಥೆಯಾಗಿದೆ ಎಂದು ಹೇಳುತ್ತಾ ಆರೋಗ್ಯ ಕಾಪಾಡಿಕೊಳ್ಳಲು ಕೆಲವೊಂದು ಮನೆ ಮದ್ದುಗಳನ್ನು ತಿಳಿಸಿಕೊಟ್ಟರು. ಈ ಚಿಕಿತ್ಸೆಯಿಂದ ಸಫಲತೆಯನ್ನು ಪಡೆದವರ ಅನುಭವಗಳನ್ನು ಕೂಡ ಹಂಚಿಕೊಂಡಿದ್ದರು.
ಇನ್ನೂ ಹದಿನಾಲ್ಕು ದಿನ ಅವಳ ಸಮಯಕ್ಕೆ ನಾನು, ನಮ್ಮ ಮನೆ ಕೆಲಸವನ್ನ ಆಡ್ಜಸ್ಟ್ ಮಾಡ್ಕೋಬೇಕಾದ ಪರಿಸ್ಥಿತಿ, ಅಲ್ಲಲ್ಲಾ ದುಸ್ಥಿತಿ! ನನ್ನದಾಯ್ತು”. ಸಧ್ಯ ಈ ಸಮಯದಲ್ಲಿ ಯಾವ ನೆಂಟರಿಷ್ಟರೂ ಬಾರದಿರಲಿ ದೇವರೇ ಎಂದು ಪ್ರಾರ್ಥಿಸಿದೆ.
ಮರು ದಿನ ಗಂಗಿ ಬಂದವಳೇ ಬಲು ಉತ್ಸಾಹದಿಂದ ಇದ್ದಳು. ಅಕ್ಕಾ ಎಂದು ಶುರು ಮಾಡಲು ಹೋದಳು “ಮೊದಲು ಗುಡಿಸಿ ನೆಲ ಒರೆಸು ನಾನು ಪೂಜೆ ಮಾಡಬೇಕು”ಎಂದೆ. ದಡ ದಡನೆ ಗುಡಿಸಿ ಒರೆಸಿದಳು ನಾನು ಪೂಜೆ ಮಾಡಿ ತಿಂಡಿ ತಿನ್ನುವಷ್ಟರಲ್ಲಿ ಪಾತ್ರೆ ತೊಳೆದು ಬಂದವಳು
“ಅಕ್ಕಾ ಬಟ್ಟೆ ದಿನ ಬಿಟ್ಟು ದಿನ ಒಗಿತೀನಿ” ಎಂದಳು ಸುಮ್ಮನಾದೆ ಯಥಾ ಪ್ರಕಾರ ತಿಂಡಿ ಕೊಟ್ಟೆ ತಿಂಡಿ ತಿಂದು ಹೋಗಿದ್ದೆ ಎಂದು ಡಬ್ಬಿಗೆ ತುಂಬಿಕೊಂಡಳು.
“ಅಕ್ಕಾ ಏನ್ ಗೊತ್ತಾ ಅಲ್ಲಿಗೆ ವಸಿ ಜನ ಬತ್ತಾ ಇಲ್ಲಾ, ಎಲ್ಲ ದೊಡ್ಡ ದೊಡ್ಡರೆಯ. ನಮ್ಮಂಥ ಬಡುವ್ರು ವಸಿ ಕಮ್ಮಿನೆಯ. ಎಲ್ಲಾ ದುಡ್ದುಳ್ಳೋ ಸಾವ್ಕಾರೆಯಾ….
ಪುಕ್ಸಟ್ಟೆ ಅಂದ್ರೆ ಬಡವರಿಗಿಂತ ದೊಡ್ಡರೇ ಬಿರ್ನೆ ಬತ್ತರೆ ಬುಡಿ!. ನೀವಂಗಲ್ಲ ನೋಡಿ” ಎಂದವಳೇ ಡಬ್ಬಿ ಹಿಡಿದುಕೊಂಡು ಹೊರಟಳು. ನನಗೋ ಇನ್ನು ಪ್ರತೀ ದಿನ ಇವ್ಳ ಹರಿಕಥೆ ಕೇಳೋದು ಹೇಗಪ್ಪಾ ಎನಿಸಿತು.
ಇವತ್ತು ಗಂಗಿ ಬಂದವಳೆ ಕಸದ ಪೊರಕೆ ಹಿಡಿದು ಅಕ್ಕಾ ಒಂದ್ಗಳ್ಗೆ ಬಲ್ಲಿ ಇಲ್ಲಿ ಎಂದಳು ಏನಪ್ಪಾ ಇದು ಎಂದು “ಏನು” ಎಂದೆ. “ಇವತ್ತು ನಾನೋಗೋದ್ರಲ್ಲಿ ಸ್ಯಾನೇ ಜನ ಕೀವ್ ನಿಂತಿದ್ರು.”
” ಹೌದಾ ಅಷ್ಟೊಂದ್ ಜನಾನಾ?”
“ಏನ್ ಗೊತ್ತಾ ನೆನ್ನೆದಿನ ಬಂದಿದ್ದ ಎಂಗುಸ್ರೆಲ್ಲವಾ ಅವ್ರ ಗಂಡದಿರ್ನು ಕರ್ಕಂಬಂದ್ಭುಟವ್ರೆ!!.”
” ಓಹೋ ಹಾಗಾ?” ಎಂದೆ.
“ಹೂ ಕಣಕ್ಕ ನಮ್ಮ ಜನ ಪುಗ್ಸಟ್ಟೆ ಅಂದ್ರೆ ನಂಗೂ ಇರ್ಲಿ ನಮ್ಮಪ್ಪಗೂ ಇರ್ಲಿ ಅಂತಾರೆ ಬುಡಿ.” ಎಂದಳು.
ನಾಲ್ಕನೇ ದಿನ ಬಂದವಳೇ ಅಕ್ಕಾ
ಅಲ್ಲಿ ಬರರ್ದು ಒಬ್ಬೊಬ್ರದು ಒಂದೊಂದು ಕಥೆ. ಆ ಮೇಡಂ ಕುರ್ಚಿ ಮೇಲೆ ಕೂರಿಸಿ ಪಾದ ಇಟ್ಟುಸ್ತಾರ, ಆಮೇಲೆ ಕರೆಂಟ್ ನಂಬರ್ ಒತ್ತುತಾರಾ, ಏನಾದ್ರು ಅನ್ನಿಸ್ತಾ ಇದೆಯಾ ಅಂತ ಕೇಳ್ತಾರೆ ಒಬ್ಬೊಬ್ರಿಗೆ ಎಷ್ಟು ನಂಬರ್ ಒತ್ತಿದ್ರು ಏನೂ ಅನ್ನುಸ್ತಾ ಇಲ್ಲಾ ಜಾಸ್ತಿ ಮಾಡಿ ಜಾಸ್ತಿ ಮಾಡಿ ಅಂತಾರೆ ಕಡಿಮೆ ಆದ್ರೆ ಮೇಡಂ ಜುಮ್ ಅಂತಾನೆ ಇಲ್ಲ ಅಂತಾರೆ. ಮೇಡಂ ನಗತಿರ್ತರೆ. ಒಬ್ಬೊಬ್ರಿಗೆ ಎಷ್ಟು ನಂಬರ್ ಒತ್ತಿದ್ರು ಜುಮ್ ಅನ್ನಾಕುಲ ಬುಡಿ. ಕಾಲ್ಕಡೆ ನರ ಜಡ್ ಬಂದಿರ್ತಾವೇನೋ ಕಾಣೆ.
ನನ್ ಗಂಡ್ಗೆ ಎಷ್ಟು ಹೆಂಡ ಕುಡುದ್ರೂ ತಲಿ ಗೇರಾಕುಲ್ವಲ್ಲ ಅಂಗೇ!.
“ಅಕ್ಕಾ ಇನ್ನೊಂದ್ ಇಸ್ಯಾ ಗೊತ್ತಾ ನಿಮ್ಮನಿಗೆ ಮಾತ್ರ ದಿನಾ ಬತ್ತಾ ಇದಿನಾ, ಬ್ಯಾರೆರ ಮನಿಗೆ ಒಂದೊಂದ್ ದಿನ ಒಬ್ಬೊಬ್ರ ಮನಿಗೆ ಏನೇನೂ ನೆವ ಯೇಳಿ ರಜ ಮಾಡ್ತಿದ್ನ, ಎಂಗೊ ಅವ್ರಿಗೆ ನಿಮ್ಮನಿಗೆ ದಿನಾ ಬರದು ಗೊತ್ತಾಗಿ ಅವ್ರೆಲ್ಲಾ ಗರಂ ಆಗ್ಯವ್ರೇ. ಇನ್ಮೇಲೆ ನಿಮ್ಮನೆ ಮುಗಿಸ್ಕಂಡು ಬಿರ್ಬಿರ್ನೆ ಎಲ್ಲಾರ ಮನಿಗೂ ಹೋಗ್ಬೇಕು ಅಲ್ಲಿ ನೆಡಿಯದೆಲ್ಲನೂ ನಿಮಗೆ ದಿನಾ ಏಳಕಾಗಕುಲ್ಲಾ. ಎಲ್ಲಾನು ಮುಗಿಸಕಂಡ್ ಬಂದು ಒಂದಿನ ಆರಾಮಾಗಿ ಕುತಗಂಡು ನಿಮಕುಟ್ ಎಲ್ಲಾನೂ ಏಳ್ತೀನಿ”. ಎಂದವಳೇ ತಿಂಡಿಯನ್ನೂ ತಿನ್ನದೆ ಓಡಿದಳು. ಸಧ್ಯ ಒಂದಷ್ಟು ದಿನ ಇವಳ ಸ್ಟೋರಿ ಟೆಲ್ಲಿಂಗ್ ನಿಂದ ತಪ್ಪಿಸಿಕೊಳ್ಳುವ ಪುಣ್ಯವನ್ನು ಕರುಣಿಸಿದ್ದಕ್ಕೆ ಭಗವಂತನಿಗೆ ಮನದಲ್ಲೇ ಥ್ಯಾಂಕ್ಸ್ ಹೇಳಿದೆ.
ಹತ್ತು ದಿನಗಳ ನಂತರ ಬಂದ ಗಂಗಿ ಅಕ್ಕ, ಇವತ್ತು ಎಲ್ಲರ ಮನಿಗೂ ರಜ ಏಳಿ ನಿಮ್ಮನಿಗೆ ಮಾತ್ರ ಬಂದಿದೀನಿ.ಬಿಡುವು ಮಾಡ್ಕೊಂಡು ವಸಿ ನನ್ ಮಾತು ಕೇಳಿ ಎಂದಳು.
” ಓಹೋ ಸರಿ ಸರಿ, ನಾನ್ ಕೇಳ್ದಿದ್ರೆ ನೀನ್ ಬಿಡಬೇಕಲ್ಲ ಹೇಳು” ಅಂದೆ.
” ಅಯ್ಯೋ ಕುತ್ಕೊಳಿ ನಾನು ಹೇಳೋದು
ಕೇಳ್ಬುಟ್ರೆ ವಸೀ ನಗಾಕಿಲ್ಲ ನೀವು”
“ಅಂತದೇನಪ್ಪ ನಗುವಂತದ್ದು?”
“ನಗದಾ? ಬರಿ ನಗದಲ್ಲ ನಕ್ಕು ನಕ್ಕು ಒಟ್ಟೆ ಉಣ್ಣಾಯ್ತದೆ”
“ಸರಿ ಹೇಳು”
“ಮತ್ತೆ ಒಂದಿನ ಪಕ್ಕದ ಮನೆಯ ಲಚ್ಚಿ ನಾನೂ ಓದ್ವಾ, ಆಗ ಅಲ್ಲಿ ಯಾರೋ ಆಟೊದಲ್ಲಿ ಬಂದವ್ರು ಆಟೋ ನಿಲ್ಸಿ
ಇಲ್ಲಿ ಜುಂ ಜುಂ ಕಲಾಸ್
ಮಾಡ್ತಾರಂತಲ್ಲ ಅದೆಲ್ಲಿ” ಅಂತವ ನಮ್ಮ ಕೇಳಿದರು ನಾನು ಅದಕ್ಕೆ “ಜುಮ್ ಜುಮ್ ಅಲ್ಲ ಕಣಯ್ಯ ಅದು “ಪುಟ್ಬಾಲ್ ತೆರ್ಪಿ”” ಅಂತ ಏಳ್ದೆ ನೀವೆಳ್ಕೊಟ್ಟಂಗೆ “
ಆಮೇಲೆ ಇನ್ನೊಂದ್ ದಿನ ಓಯ್ತೀನಿ ಬರಿ ಕಾಲು ಕೈಗಲ್ಲ, ಸೊಂಟಕ್ಕುವೆ ಕರೆಂಟ್ ಕೊಡಿಸ್ಕುತಿದ್ರು! ಎಂಗುಸ್ರು!!
ವನಿಯ ಕುಕ್ಕೆ ಅಂಗೇ, ಗುಡಾಣದಂಗೆ, ಇರೋ ಒಟ್ಟೆಯ ಅಲ್ಲಾಲ್ಲಾ ಸೊಂಟವ ಕರುಗುಸ್ಕಳಕೆ ಕರೆಂಟಿನ ಬೆಲ್ಟ್ ಹಾಕುಸ್ಕ್ಳಕೆ ವಸಿ ಜನ ಒಳ್ಗಿದ್ದ ರೂಮಿಗೋಗರು.
ಇನ್ನೊಂದಿನಿದ್ ಕೆಥೆ ಕೇಳ್ಬುಟ್ರೆ ನೀವು ನಕ್ಕು ನಕ್ಕೂ ಸತ್ತು ಓಗಿಬುಡ್ತಿರಾ ಅಷ್ಟೇಯಾ ಎಂದಳು. ಮತ್ತೆ ಅವತ್ತು ಒಂದಜ್ಜ ಬಂತು ಒಂದು 80 ವರ್ಷ ಆಗಿರ್ಬಹುದು ಬಂದು ಕರೆಂಟ್ ತಗೊಂಡಾದ್ಮೇಲೆ ನಮ್ ಮೇಷ್ಟ್ರು ತವ ಓಗಿ ಸಾರ್ ನಮ್ಮ ಹೆಂಗಸರಿಗೆ ಸೊಂಟಕ್ಕೆ ಸ್ವಲ್ಪ ಕರೆಂಟ್ ಬೆಲ್ಟ ಹಾಕಿ ಅಂದ್ರು ಆ ಮೇಡಮ್ಮೂ, ಆ ಸಾರು, ಹೆಂಡ್ತಿ ಹೊಟ್ಟೆ ನೋಡಿ ಸುಸ್ತಾಗ್ಬಿಟ್ರು ಅದೇನು ಹೊಟ್ಟೆನಾ ಕನ್ನಂಬಾಡಿ ಕಟ್ಟೆನಾ ಅನ್ನಂಗಿತ್ತು .
“ಅಲ್ಲಾ ತಾತ ಇವರಿಗ್ಯಾಕೆ ಸೊಂಟದ ಬೆಲ್ಟ್” ಎಂದರು.
” ಒಂಚೂರು ಸೊಂಟ ಸಣ್ಣಗಾಗಲಿ ಅಂತ”
“ಈ ವಯಸ್ಸಲ್ಲಿ ಯಾಕೆ ತಾತ?”
“ಅಯ್ಯೋ ನೀನ್ ಚೆನ್ನಾಗೆಳ್ತಿಯ
ವಯಸ್ಸಾದರೇನು ಸೊಂಟ ಸಣ್ಣಗಾಗಿ ನನ್ ಹೆಂಡ್ತಿನೂ ಚನ್ನಾಗಿ ಕಾಣಲಿ ಬಿಡವ್ವಾ “
“ಅಯ್ಯೋ ತಾತ ಅಜ್ಜಿ ಸೊಂಟಕ್ಕಾಗುವ ದೊಡ್ಡ ಬೆಲ್ಟ್ ಇಲ್ಲ ತಾತ”
“ಅಯ್ಯೋ ಇಲ್ದಿದ್ರೆ ದೊಡ್ಡದ್ ತರ್ಸಿ”
“ಇದೇ ಲಾಸ್ಟ್ ಸೈಜು ತಾತ ಇದಕ್ಕಿಂತ ದೊಡ್ಡದು ಸಿಗಲ್ಲ” ಅಂತ ಆ ಮೇಡಂ ಅಲ್ಲಿದ್ದ ಬೆಲ್ಟ್ ತೋರಿಸಿದರು.
ತಾತ ಕೋಪದಿಂದ “ಎಲ್ಲಾ ಸೈಜು ತರಿಸಬೇಕಪ್ಪ ಒಬ್ಬೊಬ್ಬರು ದಪ್ಪಗಿರುತ್ತಾರೆ” ಅಂತ ಹೇಳಿ ರೊಯ್ಯನೆ ಹೋಗ್ಬಿಟ್ರು ಕಣಕ್ಕ ಅಲ್ಲಿದ್ದೋರೆಲ್ಲಾ ತಾತನ ಮಾತು ಕೇಳಿ ಗೊಳ್ಳುನ್ ನಕ್ ಬುಟ್ರು!!
ಒಬ್ರಂತೂ ಅಲ್ಲ “ಈ ತಾತಂಗೆ ಈ ವಯಸ್ಸಲ್ಲಿ ಅಜ್ಜಿ ಸೊಂಟನ ಸಣ್ಣ ಮಾಡಬೇಕು ಅಂತ ಆಸೆ ಆಗೋಯ್ತಲ್ಲಪ್ಪಾ” ಅಂದ್ರೆ “ಪಾಪ ಇನ್ನು ವಯಸ್ಸಿದ್ದಾಗ ಹೆಂಗೋ” ಅಂದ್ರು ಇನ್ನೊಬ್ರು.
ಆಮೇಲೆ ಇನ್ನೊಂದು ಇಸ್ಯಾ ಏನು ಗೊತ್ತಾ ನಮ್ ಜನಕ್ಕೆ ಬಲ್ ದುರಾಸೆ ಕಣಿ.
ಅರ್ಧ ಗಂಟೆ ಕರೆಂಟ್ ತಗಳಿ ಅಂತ ಹೇಳಿದ್ರೆ ಇನ್ನು ಅರ್ಧ ಗಂಟೆ, ಇನ್ನು ಅರ್ಧ ಗಂಟೆ, ತಗತೀನಿ ಅಂತಾರೆ, ಕಾಲಿಗೆ ತಗಂಡ್ ಮ್ಯಾಲೆ ಕೈಗೂ ಹಾಕಿ, ಕುತಿಗಿಗೆ ಹಾಕಿ, ಅಂತ ಮಿಷಿನ್ ಬುಟ್ಟು ಏಳ್ತೀರ್ಲಿಲ್ಲ. ಬೇಡ ಸಾಕು ಅಷ್ಟ್ ಅಷ್ಟೇ ಟೈಮು ಎಲ್ಲರಿಗೂ ಹಾಕ್ಬೇಕು ಅಂದ್ರೂ ಕೇಳಕುಲ್ಲಾ ಬುಡಿ.
ಆಮೇಲೆ ಅವತ್ತೊಂದಿನ ಒಬ್ರು 85 ವರ್ಷದ್ ಅವ್ರಮ್ಮನ್ನ ಮೈಸೂರಿಂದ ಕರುಸ್ಕಂಡವ್ರೆ!! ಯವ್ವೆ ಯವ್ವೆ ಎಂತೆತ ಜನ ಇರ್ತರೆ. ಇನ್ನೊಂದ್ ಇಸ್ಯಾ ಅಂದ್ರೆ ಅವ್ರೆಲ್ಲಾ ಸಾವ್ಕಾರೆಯ!. ಯಾರೂ ನಮ್ಮಂತ
ಬಡುವ್ರಲ್ಲ ಬುಡಿ!!.
ಆಮ್ಯಾಲೆ ಆ ಮಿಷಿನ್ ತಗಂಡು ಮನೇಲೆಯ ಕರೆಂಟ್ ಕೋಡ್ಕಬೋದು ಅಂದ್ರು ಅದ್ಕೆ ಅದ್ನೇಳು ಸಾವ್ರ. ನಮ್
ಕೈಲೆಲ್ಲಾಗುತ್ತೆ ನಾವು ಬಡುವ್ರು. ಸುಮಾರು ಜನ ತಗಂಡ್ರು. ಎಷ್ಟೋ ದುಡ್ಡಿರೋರೆಲ್ಲವ ದುಡ್ ಕೊಡ್ಬೇಕಲ್ಲ ಅಂತವ “ಅಯ್ಯೋ ಇದು ಯಾವಾಗ್ಲೂ ತಗಬಾರ್ದು ಒಳ್ಳೇದಲ್ಲ” ಅಂತವ ಮಿಷಿನ್ ತಗಳ್ಳಿಲ್ಲಾ ಆದ್ರೆ ದಿನಾ ಬಂದು ಕರೆಂಟ್ ತಗಳರು. ಅದು ಪುಗ್ಸಟ್ಟೆ ಅಲ್ವಾ ಅದ್ಕೆ!!
“ಅಲ್ಲಿದ್ದರ್ಗೆ ಕಡ್ಲಿಲ್ಲ, ಕಡ್ಲಿದ್ದರ್ಗೆ ಅಲ್ಲಿಲ್ಲ ಬುಡಿ!!!






0 Comments