ಪುಟ್ಟಾರಾಧ್ಯ ಹೊಸ ಕಥೆ- ಕಲ್ಸ್ವಾಮಿ ಮಹಾತ್ಮೆ!?

ಪುಟ್ಟಾರಾಧ್ಯ
ಪೋಸ್ಟ್… ಪೋಸ್ಟ್ಮ್ಯಾನ್ ಶಿವಣ್ಣ ಕೂಗಿದರು. ಬೆಳಗ್ಗೆ ಸಮಯ ಹತ್ತಾಗಿತ್ತು. ಇನ್ನೂ ಮಲಗಿದ್ದ ಆನಂದನಿಗೆ ಎಚ್ಚರವಾಗಿ ಶಿವಣ್ಣನಿಂದ ಪತ್ರ ತೆಗೆದುಕೊಂಡವನೇ ಎರ್ಡ್ನಿಷ ಕಣಣ್ಣ , ಚಹಾ ಕುಡಿಯೋಣ ಎಂದೇಳಿ ಶರ್ಟೊಂದನ್ನು ಸಿಗಿಸಿಕೊಂಡು ಚಹಾದಂಗಡಿಗೆ ಹೊರಟ.
ತನ್ನೆಲ್ಲ ಸಿನಿಮಾ ತಯಾರಿಗಳನ್ನು, ಸಿನಿಮಾ ಕಥೆಗಳನ್ನು ಪೋಸ್ಟ್ಮ್ಯಾನ್ ಶಿವಣ್ಣನ ಜೊತೆ ಚರ್ಚಿಸಿದರೆ ಆನಂದನಿಗೆ ಬಲು ನೆಮ್ಮದಿ. ಇದೀಗ ಬಂದ ಪತ್ರ ಕಳಿಸಿರುವುದು ಮೈಸೂರಿನಲ್ಲಿರುವ ತನ್ನ ತಮ್ಮ ಸಂದೇಶ. ಕಿರುಚಿತ್ರಕ್ಕೆ ತಿರುನೆಲ್ಲಿ ಬೆಟ್ಟದ ಮೇಲೆ ಎಲ್ಲ ವ್ಯವಸ್ಥೆ ಆಗಿದೆಯೆಂದು, ಅಲ್ಲಿ ನಾಲ್ಕೈದು ದಿವಸ ಉಳಿದು ಚಿತ್ರೀಕರಣ ಮುಗಿಸಿಕೊಂಡು ಬರಬಹುದೆಂದು ಸಂದೇಶ ಪತ್ರದಲ್ಲಿ ಬರೆದಿದ್ದ.
ಕಾಲೇಜಿನಿಂದಲೂ ನಾಟಕಗಳಲ್ಲಿ ನಟಿಸಿ ನಿರ್ದೇಶಿಸುತ್ತಿದ್ದ ಆನಂದನಿಗೆ ಸಿನಿಮಾ ನಿರ್ದೇಶನದ ಮೇಲೆ ವಿಶಿಷ್ಟ ಒಲವು ಬೆಳೆದಿತ್ತು. ತನ್ನೊಲವಿಗೆ ನೀರೆರೆಯಲು ಇಂಜಿನಿಯರಿಂಗ್ ಮುಗಿಸಿದವನೇ ಡೈರೆಕ್ಟರ್ಸ್ ಕೋರ್ಸ್ ಒಂದನ್ನು ಮುಗಿಸಿ ಕನ್ನಡದ ಮೇರು ನಿರ್ದೇಶಕರೊಬ್ಬರ ಬಳಿ ಸಹಾಯಕ ನಿರ್ದೇಶಕನಾಗಿ ದುಡಿಯುತ್ತಿದ್ದ. ಇದರ ಮಧ್ಯೆ ತನ್ನದೇ ಪ್ರಯತ್ನದಲ್ಲಿ ನಿರ್ಮಾಪಕರೊಬ್ಬರ ಸಹಾಯದಿಂದ ಕಿರುಚಿತ್ರವೊಂದನ್ನು ನಿರ್ದೇಶಿಸಲು ಅವಕಾಶ ಒದಗಿ ಬಂದಿತ್ತು .

ಮರುದಿನ ಬಸ್ಸನ್ನತ್ತಿದವನೇ ಬೆಂಗಳೂರಿನಿಂದ ಮೈಸೂರಿಗೆ ತಲುಪಿ ರಾತ್ರಿ ತಮ್ಮನ ಮನೆಯಲ್ಲಿ ಉಳಿದು ಬೆಳಗ್ಗೆ ಐದಕ್ಕೆ ತಮ್ಮನ ಜೊತೆಗೂಡಿ ಅವನದೆ ಯೆಜ್ಡಿ ಬೈಕಿನಲ್ಲಿ ತಿರುನೆಲ್ಲಿ ಕಡೆಗೆ ಪ್ರಯಾಣ ಬೆಳೆಸಿದ. ಒಂದು ಘಂಟೆಯ ನಂತರ, ಅಂತರಸಂತೆ ಕಾಡಿನ ಚೆಕ್ ಪೋಸ್ಟ್ ತಲುಪಿ, ಚೆಕ್ ಪೋಸ್ಟಿನಲ್ಲಿ ಚೀಟಿ ಪಡೆದು ನಾಗರಹೊಳೆ ಅಭಯಾರಣ್ಯದೊಳಗಿನ ಕಾಡು ರಸ್ತೆಯೊಳಗಿಂದ ಕೇರಳ ಕಡೆಗೆ ಮುನ್ನಡೆದರು.
ಅಭಯಾರಣ್ಯದೊಳಗೆ ನಿಧಾನವಾಗಿ ಚಲಿಸಬೇಕು ಕಾರಣ ಹತ್ತಾರು ಪ್ರಾಣಿಗಳು ರಸ್ತೆ ದಾಟುವುದು ಸರ್ವೇ ಸಾಮಾನ್ಯ. ಹಾಗೆ ಮುಂದೆ ಹೋದರೆ ಕೇರಳ ಕರ್ನಾಟಕ ಬಾರ್ಡರ್ ಸಿಗುತ್ತದೆ. ನಂತರ ಬಾವಲಿಯಲ್ಲಿ ಚೀಟಿ ವಾಪಸ್ ಮಾಡಿ ಕೇರಳ ಪ್ರವೇಶಿಸಬೇಕು. ತಿರುನೆಲ್ಲಿಯ ಬೆಟ್ಟದ ಬುಡಗಳಲ್ಲಿರುವುದು ಮಹಾ ವಿಷ್ಣು ದೇವಸ್ಥಾನ. ದೇವಸ್ಥಾನದ ಹಿಂದಿನ ಬೆಟ್ಟಗಳು ಹಸಿರಿನಿಂದ ಕಂಗೊಳಿಸುತ್ತಾ ಮನಸೂರೆಗೊಳ್ಳುವಂತಿವೆ.
ವಿಷ್ಣು ದೇವಸ್ಥಾನದಿಂದ ಹಿಡಿದು ಮೂರ್ನಾಲ್ಕು ಬೆಟ್ಟ ಹತ್ತಿ ಇಳಿದರೆ ಸಿಗುವ ಬುಡಕಟ್ಟು ಸಮುದಾಯದೊಂದು ಹಾಡಿ ಬಿಟ್ಟರೆ ಸುತ್ತಮುತ್ತಲ ಮೂವತ್ತು ಕಿಲೋಮೀಟರ್ನಲ್ಲಿ ಯಾವುದೇ ಜನರಿರುವ ಪ್ರದೇಶಗಳಿರಲಿಲ್ಲ. ಅಲ್ಲಿ ಹೋದವರು ಉಳಿಯುವುದಾದರೆ ಆ ಹಾಡಿಯಲ್ಲೇ ಉಳಿಯಬೇಕು. ಆ ಹಾಡಿಯಲ್ಲಿ ಮನೆಗಳು ಸುಮಾರು ಹತ್ತರಿಂದ ಹನ್ನೆರಡಷ್ಟೇ, ಪರಿಚಯದವರು ಇಲ್ಲದೆ ಹೋದರೆ ಉಳಿಯಲು ಸಾಧ್ಯವಿಲ್ಲ. ದೇವಸ್ಥಾನದ ಬಳಿಯಿದ್ದ ಒಂದೇ ಒಂದು ಮನೆಯೆಂದರೆ ಅಲ್ಲಿನ ಪೂಜಾರಿಯವರದು.
ತನ್ನ ಬೈಕನ್ನು ಪೂಜಾರಿಯವರ ಮನೆ ಬಳಿ ನಿಲ್ಲಿಸಿ ಆನಂದ ಮತ್ತು ಅವನ ತಮ್ಮ ಕ್ಯಾಮರಾ ಸಲಕರಣೆಗಳನ್ನು ಹೊತ್ತು ಮೂರ್ನಾಲ್ಕು ಬೆಟ್ಟ ಹತ್ತಿಳಿದು ಹಾಡಿಯನ್ನು ತಲುಪಿದ್ದರು. ಬೆಟ್ಟದ ತಪ್ಪಲಿನಲ್ಲಿಯೇ ಇದ್ದ ದೇವಸ್ಥಾನ ಆನಂದನಿಗೆ ವಿಶೇಷ ನೆಮ್ಮದಿ ನೀಡಿತ್ತು. ಮೊದಲ ದಿನ, ಐದು ಘಂಟೆಗೇ ಎದ್ದು ಹಾಡಿಯಲ್ಲಿ ಉಳಿದಿದ್ದ ಭೋಗಯ್ಯನ ಮನೆಯಿಂದ ಹೊರಟವನು ಬೆಟ್ಟ ಹತ್ತಿ ಇಳಿದು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಪೂಜಾರಿಯವರ ಬಳಿ ಘಂಟೆಗಟ್ಟಲೆ ಮಾತನಾಡಿ ನಂತರ ಕಿರು ಚಿತ್ರ ಶುರು ಮಾಡಿದ್ದ.
ಕಿರು ಚಿತ್ರ ಪೂರ್ಣ ಮುಗಿಸಿ ಬೆಂಗಳೂರಿಗೆ ವಾಪಸಾಗಿ ವಿಡಿಯೋ ತುಣುಕುಗಳನ್ನು ನೋಡಿ ಬಹಳ ಖುಷಿ ಪಡುತ್ತಾ ಈ ಚಿತ್ರದಿಂದ ತಾನು ಸ್ವತಂತ್ರ ನಿರ್ದೇಶಕನಾಗುವ ಕನಸು ಕಾಣುತ್ತ ಪುಳಕಿತಗೊಂಡಿದ್ದ. ಈ ಚಿತ್ರವನ್ನು ಬಿಡುಗಡೆಗೊಳಿಸಲು ಬಹಳಷ್ಟು ಕೆಲಸ ಬಾಕಿ ಉಳಿದಿತ್ತು. ಸಂಗೀತ ನಿರ್ದೇಶಕನನ್ನು ಹುಡುಕಿ, ಎಡಿಟರ್ನನನ್ನು ಆಯ್ಕೆ ಮಾಡಿ ನಿರ್ಮಾಪಕರ ಮನೆಯ ಬಳಿ ಹೋದಾಗ ಆನಂದನಿಗೆ ಆಘಾತ ಕಾದಿತ್ತು.
ಕಿರುಚಿತ್ರ ನಿರ್ಮಾಣ ಮಾಡಲು ಒಪ್ಪಿದ್ದ ನಿರ್ಮಾಪಕರು ಹಠಾತ್ತನೆ ಹೃದಯಾಘಾತದಿಂದ ಮರಣ ಹೊಂದಿದ್ದರು. ಅಲ್ಲಿಗೆ ಆನಂದನ ಕನಸು ಚೂರಾಗುವುದರ ಜೊತೆ ಅತ್ಯಂತ ಪ್ರೀತಿಪಾತ್ರರಾದ ನಿರ್ಮಾಪಕರ ಸಾವು ಬೇಸರ ತಂದಿತ್ತು. ಆದರೆ ಆನಂದ ಸಹಾಯಕ ನಿರ್ದೇಶಕನಾಗಿ ತನ್ನ ಕೆಲಸಗಳನ್ನ ಮುಂದುವರೆಸಿದ್ದ.
ಅದೊಂದಿನ ಆನಂದ ಬೆಳಗಿನಿಂದ ಚಿತ್ರೀಕರಣ ಮುಗಿಸಿ ಮನೆಗೆ ಹೊರಡಲು ಕೆಂಪೇಗೌಡ ಬಸ್ ನಿಲ್ದಾಣದ ಹದಿನೈದನೇ ಪ್ಲಾಟ್ ಫಾರಂನಲ್ಲಿ ಕುಳಿತಿದ್ದ.
ಈ ನಿಲ್ದಾಣವೊಂದು ಸಣ್ಣ ಪ್ರಪಂಚವಿದ್ದಂತೆ. ರಾಜ್ಯದ ಮೂಲೆ ಮೂಲೆಗಳಿಂದ ಬರುವ ಜನ ಕೆಂಪೇಗೌಡರ ಹೆಸರನ್ನು ಜಪಿಸುತ್ತ ಈ ನಿಲ್ದಾಣದಲ್ಲಿ ಬಸ್ಸನ್ನತ್ತಿ ಇಳಿದು ನೂರಾರು ಜಾಗಗಳಿಗೆ ಹರಿದು ಹೋಗುತ್ತಿರುತ್ತಾರೆ. ಈ ನಡುವಿನಲ್ಲಿ ಸಾವಿರಾರು ಘಟನೆಗಳು ಸಂತೋಷ, ದುಃಖ, ಕರುಣಾಜನಕ, ಪ್ರಾಮಾಣಿಕ, ಅಪರಾಧ ಹೀಗೆ ತರಾವರಿ ಭಾವನೆಗಳನ್ನು ಸುತ್ತಿಕೊಂಡು ಪ್ರದರ್ಶಿಸಲ್ಪಡುತ್ತಿರುತ್ತವೆ. ಅಲ್ಲಿಗೆ ಬಂದ ಕೆಲವರು ಆ ಭಾವನೆಗಳನ್ನು ಸೃಷ್ಟಿಸುವಲ್ಲಿ ನಿರತರಾದಾರೆ ಮತ್ತೆ ಕೆಲವರು ಅವುಗಳನ್ನು ಅನುಭವಿಸುತ್ತ ಸಮಯ ಕಳೆಯುತ್ತಿರುತ್ತಾರೆ.
ಇನ್ನ ಕೆಲವರಂತೂ ತಮಗೆ ಸಂಬಂಧವೇ ಇರದಂತೆ ಒಂದು ಬಸ್ ಇಳಿದು ಮತ್ತೊಂದನ್ನು ಹತ್ತಿ ಅಕ್ಕ ಪಕ್ಕದಲ್ಲಿರುವವರನ್ನು ಮರೆತವರಂತೆ ಓಡುತ್ತಿರುತ್ತಾರೆ. ಆಗಲೇ ಸಮಯ ರಾತ್ರಿ ಹತ್ತಾಗಿತ್ತು. ಎಲ್ಲಿಂದಲೋ ಬಂದ ಬಿಎಂಟಿಸಿ ಬಸ್ಸೊಂದು ಹದಿನಾಲ್ಕನೇ ಪ್ಲಾಟ್ ಫಾರಂನಲ್ಲಿ ನಿಂತಿತು. ಕುಳಿತಿದ್ದವನೇ ಓಡಿ ಬೋರ್ಡನ್ನು ವೀಕ್ಷಿಸಿದವನಿಗೆ ಅದು ಅಲ್ಲಿಯೇ ತಂಗಲಿದೆ ಎಂದು ತಿಳಿದು ಮುಂದಿನ ಬಸ್ಸಿಗೆ ಕಾದು ಕುಳಿತ.
ಬಸ್ಸಿನಲ್ಲಿದ್ದವರೆಲ್ಲ ಇಳಿದು ಹೋದ ಮೇಲೆ ದಂಪತಿಯೊಂದು ಡ್ರೈವರ್ ಬಳಿ ಮಾತನಾಡುತ್ತಿರುವುದು ಆನಂದನಿಗೆ ಕಾಣಿಸುತ್ತಿತ್ತು. ಹತ್ತು ನಿಮಿಷವಾದ ಮೇಲೆ ಆ ದಂಪತಿಗಳು ಬಸ್ಸನಿಳಿದು ಇವನ ಬಳಿ ನಡೆಯಲು ಶುರು ಮಾಡಿದರು. ಬಸ್ ನಿಲ್ದಾಣದಲ್ಲಿ ಇನ್ನು ಜನ ಜಂಗುಳಿಯಿದ್ದರೂ ಬೆಳಗಿನಷ್ಟು ಜನರ ಓಡಾಟ ಗಲಾಟೆಯಿರಲಿಲ್ಲ. ಆನಂದ ಸುತ್ತಲೂ ನೋಡಿದ ಅವನ ಪ್ಲಾಟ್ ಫಾರಂ ನಲ್ಲಿ ಇವನನ್ನ ಬಿಟ್ಟರೆ ಮತ್ತ್ಯಾರು ಕಾಣಿಸಲಿಲ್ಲ.
ಗಂಡ -ಹೆಂಡತಿ ದೂರದಲ್ಲಿಯೇ ನಿಂತು ಏನೋ ಗುಸುಗುಡುತ್ತಾ ಮೂರ್ರ್ನಾಲ್ಕು ನಿಮಿಷವಾದ ಮೇಲೆ ಹೆಂಡತಿಯನ್ನು ಅಲ್ಲಿಯೇ ನಿಲ್ಲಿಸಿ ಗಂಡ- ಇವನ ಬಳಿ ಬಂದು ಹೇಳಿದ, ನಮಸ್ಕಾರ ಸರ್, ಯಾವ ಭಾಷೆ ಮಾತಾಡ್ತೀರಾ? ತೆಲುಗು, ತಮಿಳು , ಇಲ್ಲ ಕನ್ನಡ . ಕನ್ನಡನೆ ಹೇಳಪ್ಪ , ಏನ್ ಬೇಕು? ಆನಂದ ಕೇಳಿದ.
ನಾವು ಮಡಕಶಿರಾ ಕಡೆಯಿಂದ ಬಂದೀದೀವಿ, ಬಸ್ಸಿನೊಳಗೆ ಯಾರೋ ಒಬ್ಬ ನನ್ ಹೆಂಡ್ತಿ ಬ್ಯಾಗು ಕಿತ್ಕೊಂಡು ಹೋಗ್ಬಿಟ್ಟ, ನಮ್ಮ ದುಡ್ಡೆಲ್ಲ ಅದ್ರಲ್ಲೇ ಇತ್ತು ಸಾರ್. ಡ್ರೈವರ್ ಏನೋ ಕರುಣೆ ತೋರಿ ಹತ್ತು ರೂಪಾಯಿ ಕೊಟ್ಟು ಕಳ್ಸಿದ್ರು ಸರ್. ಜೊತೇಲಿ ಹೆಣ್ ಹೆಂಗ್ಸು ಬೇರೆ ಇದಾಳೆ. ವಾಪಸ್ ಊರಿಗೆ ಹೋಗೋ ಮನ್ಸಿಲ್ಲ, ದುಡ್ಡೂ ಇಲ್ಲ. ಇಲ್ಲಿಂದ ಕೇರಳದ ತಿರುನೆಲ್ಲಿ ಹೋಗ್ಬೇಕು, ನೀವು ದೊಡ್ ಮನ್ಸು ಮಾಡಿ ಸಹಾಯ ಮಾಡಿ ಸರ್. ನಮ್ಗೆ ಹುಟ್ಟೋ ಕೂಸಿಗೆ ನಿಮ್ಮೆಸ್ರೇ ಇಟ್ಬಿಡ್ತೀವಿ.
ಆನಂದ ಪ್ರಶ್ನಿಸಿದ ಅಲ್ಲಪ್ಪಾ, ದುಡ್ಡಿಲ್ಲ ಅಂತೀಯಾ, ನಾ ದುಡ್ಡು ಕೊಟ್ರೆ ಊರಿಗೆ ವಾಪಸಾಗೋದು ಬಿಟ್ಟು, ತಿರುನೆಲ್ಲಿಗೆ ಯಾಕೆ ಹೋಗ್ಬೇಕು. ಗಂಡ ಹೇಳಿದ ಸಾರ್ , ನಾವು ಮದ್ವೆ ಆಗಿ ಐದ್ವರ್ಷ ಆಯ್ತು, ಒಂದು ಕೂಸು ಹುಟ್ಟಿಲ್ಲ. ಊರಲ್ಲಿ ಇವಳನ್ನ ಬಂಜೆ ಅಂತ ಜನ ಅಡ್ಕೊಳ್ತಾರೆ ಸಾರ್, ಅಮ್ಮಂಗೆ ಇದೇ ಕೊರಗು. ನಾನು ಕೂಲಿ ನಾಲಿ ಮಾಡಿ ಜೀವ್ನ ಸಾಗ್ಸೊವ್ನು , ಮಕ್ಳಿದ್ರು ಇಲ್ದೇ ಇದ್ರೂ ನಂಗೆ ಚಿಂತೆಯಿಲ್ಲ. ಆದ್ರೆ ಅಮ್ಮನ ಗೋಳು ನೋಡೋಕಾಗ್ದೆ ಹೊರಟು ಬಂದೀದಿನಿ . ಅಮ್ಮ ಕೈನಲ್ಲಿದ್ದ ಹಣ ಎಲ್ಲ ಕೂಡ್ಸಿ ಕೊಟ್ಟಿರೋದನ್ನ ಯಾರೋ ಕಿತ್ಕೊಂಡ್ ಹೋಗ್ಬಿಟ್ಟ. ಇವಾಗ ಅದ್ಯಾವ್ ಮುಖ ಇಟ್ಕೊಂಡು ಊರಿಗೋಗ್ಲಿ ಸಾರ್.
ಆನಂದ ಮರು ಪ್ರಶ್ನಿಸಿದ ಸರಿ, ಈವಾಗ ತಿರುನೆಲ್ಲಿಗೆ ಯಾವ್ದಾದ್ರು ಆಸ್ಪತ್ರೆಗೆ ಹೋಗ್ತಿದಿಯೇನು? ಅವನು ಮತ್ತೆ ಹೇಳಿದ ಏನ್ ಆಸ್ಪತ್ರೆನೂ ಏನೋ, ಎಲ್ಲ ಕಡೆ ತಿರುಗಿದ್ರೂ ಏನೂ ಆಗ್ತಿಲ್ಲ. ನಮ್ಮ ಪಕ್ಕದ್ಮನೆ ಲಕ್ಷ್ಮಕ್ಕ ಕೇರಳದ ಕಲ್ಸಾಮಿ ಹತ್ರ ಹೋದ್ರೆ ಮಗು ಖಂಡಿತ ಅಂತ ಹೇಳೋವ್ರೆ ಸಾರ್. ಅಲ್ಲಿ ಕಲ್ಸ್ವಾಮಿಯವರ ಆಶ್ರಮದಲ್ಲೇ ಇಡೀ ರಾತ್ರಿ ತಂಗಿದ್ದು, ಬೆಳಗಿನಲ್ಲಿ ನಾಲ್ಕು ಕಲ್ಲಿಟ್ಟು ಬಂದ್ರೆ ಇವಳಿಗೆ ಮಕ್ಕಳಾಗ್ತವಂತೆ ಸಾರ್.
ಆನಂದನಿಗೆ ಇದೆಲ್ಲ ಕೇಳಿ ತಿಕ್ಕಲೆನಿಸಿತು. ಅದರಲ್ಲೂ ಮೆಜೆಸ್ಟಿಕ್ನಲ್ಲಿ ಒಮ್ಮೆ ನಿಂತರೆ ಇಂತಹ ಬಹಳಷ್ಟು ಜನ ಸಿಗುತ್ತಾರೆ. ಯಾವ ಭಾಷೆ ಬರುತ್ತೆ ಅಂತ ಕೇಳೊವ್ರು, ಕೇಳಿ ಹಣ ತೆಗೆದುಕೊಂಡು ಮೋಸ ಮಾಡಿರುವವರು ಬಹಳಷ್ಟು. ಇದಕ್ಕೆ ಆನಂದನು ಒಮ್ಮೆ ಬಲಿಯಾಗಿದ್ದ ಆದ್ದರಿಂದ ಈ ಬಾರಿಯೂ ಬಲಿಯಾಗಿಬಿಡಬಹುದೆಂದು ಅಂದಾಜಿಸಿ ಅವರಿಬ್ಬರಿಗೂ ಹಣ ನಿರಾಕರಿಸಿ ಕೈಲಿದ್ದ ನೋಕಿಯಾ ಮೊಬೈಲು ರಿಂಗಣಿಸಿದಾಗ ಕರೆಯನ್ನು ಸ್ವೀಕರಿಸಿ ತನ್ನದೇ ಲೋಕದಲ್ಲಿ ಕಳೆದುಹೋದ.
ಸಮಯ ಹೆಚ್ಚಾದಂತೆ ಬಸ್ಸುಗಳು ಸಿಗುವುದು ಕಡಿಮೆಯೇ. ಅಷ್ಟರಲ್ಲಾಗಲೇ ಅಲ್ಲಿದ್ದ ದಂಪತಿಗಳು ಜಾಗ ಖಾಲಿ ಮಾಡಿದ್ದರು. ಕೊನೆಗೂ ಬಸ್ಸು ಬಂದದ್ದು ನೋಡಿ ಬಸ್ಸನ್ನು ಹಿಡಿಯಲು ಓಡಿ ಬಸ್ ಹತ್ತಿದವನೇ ಜೇಬನ್ನು ತಡಕಿದ. ಜೇಬಿನಲ್ಲಿದ್ದ ತನ್ನ ಪರ್ಸು ಕಾಣೆಯಾಗಿದೆ. ಕಂಡಕ್ಟರ್ ಮುಖ ನೋಡಿ ಯಾವುದೇ ದಾರಿಯಿರದೆ ಬಸ್ಸನ್ನಿಳಿದು ತಾನು ನಿಂತಿದ್ದ ಜಾಗಕ್ಕೆ ಓಡಿದ. ಅಲ್ಲೆಲ್ಲೂ ಇವನ ಪರ್ಸ್ ಬಿದ್ದಿರುವುದು ಕಾಣಲಿಲ್ಲ, ಜೇಬಲ್ಲಿ ಕಾಸಿಲ್ಲದೆ ಬಸ್ಸನ್ನು ಹತ್ತುವಂತಿಲ್ಲ ಅಂದರೆ ಈಗ ಮನೆಗೆ ಅವನು ನಡೆಯುವುದೊಂದೇ ಬಾಕಿ.
ಬಿಎಂಟಿಸಿ ಬಸ್ ನಿಲ್ದಾಣದಿಂದ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದ ಕಡೆ ನಡೆದು ಅಲ್ಲಿ ಯಾರಾದರೂ ಪರಿಚಯದವರು ಸಿಕ್ಕರೆ ಎಂದೆಣಿಸಿ ಇಲ್ಲವೆಂದರೆ ಮನೆಗೆ ನಡೆದೇ ಹೋಗುವುದೆಂದು ತೀರ್ಮಾನಿಸಿ ನಡೆಯಲು ಶುರು ಮಾಡಿದ. ಬಸ್ ನಿಲ್ದಾಣದ ಒಳಗಿನಿಂದ ಕೆಂಪು ಬಸ್ಸೊಂದು ಬರಲು ಕಾಣುತ್ತಿತ್ತು. ನಿಲ್ದಾಣವಾದ್ದರಿಂದ ಡ್ರೈವರ್ ಬಸ್ಸನ್ನು ನಿಧಾನವಾಗಿ ನಡೆಸುತ್ತಿದ್ದ. ಹತ್ತಿರವಾದಂತೆ ಬಸ್ಸಿನೊಳಗೆ ಇಣುಕಿದಾಗ ಅವನಿಗೆ ಹಣ ಕೇಳಿದ್ದ ದಂಪತಿ ಕಾಣಿಸಿದರು.
ಆನಂದನಿಗೆ ಬಂದಿದ್ದ ಅನುಮಾನ ನಿಜವೆನಿಸಿ ಒಮ್ಮೆ ಕೂಗಿದ . ಇಬ್ಬರೂ ತಿರುಗಿ ನೋಡಿದೊಡನೆ ಆನಂದ ಬಸ್ಸಿನ ಜೊತೆ ಓಡಲು ಶುರು ಮಾಡಿದ. ಆಗ ತಕ್ಷಣಕ್ಕೆ ಗಂಡ ಆನಂದನ ಜೇಬಿನಿಂದ ಎತ್ತಿಕೊಂಡಿದ್ದ ಪರ್ಸನ್ನು ಅವನ ಮುಂದೆ ಬಿಸಾಡಿದಾಗ ಆನಂದ ನಿಧಾನಿಸಿದ. ಆ ದಂಪತಿ ಕೈ ಮುಗಿಯುತ್ತಾ ಒಟ್ಟಿಗೆ ಕೂಗಿದರು ಸಾರ್ , ಆ ಕಲ್ಸ್ವಾಮಿ ನಿಮ್ಗೆ ಒಳ್ಳೇದ್ ಮಾಡೇ ಮಾಡ್ತಾನೆ. ಇವನ ಭಾವನೆಗಳ ಜೊತೆ ಆಟವಾಡಿ ಇವನ ಜೇಬಿನಿಂದಲೇ ಹಣವನ್ನು ಕದ್ದು ಮಕ್ಕಳಾಗದಿದ್ದರೆ ಆಸ್ಪತ್ರೆಗೆ ಹೋಗಿ ತೋರಿಸಿಕೊಳ್ಳದೆ ಯಾವುದೋ ದೇವಸ್ಥಾನಕ್ಕೆ ಹೋಗುತ್ತಿರುವುದನ್ನು ನೆನೆದು ಆನಂದನಿಗೆ ಸಿಟ್ಟು ನೆತ್ತಿಗೇರಿತ್ತು.
ನಿಲ್ದಾಣನದಲ್ಲಿ ನೀರು ಕುಡಿದು ಸುಧಾರಿಸಿಕೊಂಡ ಮೇಲೆ ಎಲ್ಲ ಹಣವನ್ನು ತೆಗೆದುಕೊಳ್ಳದೆ ಬೇಕಾದಷ್ಟು ತೆಗೆದುಕೊಂಡು ಮಿಕ್ಕ ಹಣವನ್ನು ವಾಪಸ್ ಎಸೆದು, ಪುಕ್ಸಟ್ಟೆ ಆಶೀರ್ವಾದ ಮಾಡಿ ಹೋದ ದಂಪತಿಯ ಮೇಲೆ ಮರುಕ ಹುಟ್ಟಿತು. ಆನಂತರ ಆಟೋವೊಂದನ್ನು ಹಿಡಿದು ವಿಜಯನಗರದ ಮನೆ ಕಡೆ ಹೊರಟ. ಇದಾದ ನಂತರ ತಾನು ಚಿತ್ರಕಥೆ ಬರೆದು ನಿರ್ದೇಶಕರಿಗೆ ಪೂರ್ಣ ಪ್ರಮಾಣದಲ್ಲಿ ಸಹಾಯ ಮಾಡಿದ ಚಿತ್ರ ಬಿಡುಗಡೆಗೊಂಡು ನಿರೀಕ್ಷೆಗಿಂತ ಹೆಚ್ಚಿನ ಯಶಸ್ಸು ಸಿಕ್ಕಿ ಇವನಿಗೆ ಪರಿಪೂರ್ಣ ನಿರ್ದೇಶಕನಾಗಲು ಅವಕಾಶಗಳು ಹುಡುಕಿ ಬಂದಿದ್ದವು.
ನಾಲ್ಕಾರು ವರ್ಷದ ಶ್ರಮ, ನೂರಾರು ಬೈಗುಳ, ಸಾವಿರಾರು ಪಾಠಗಳನ್ನು ಸೆಟ್ಟಲ್ಲಿ ಕಲಿತು ಕೆಲಸ ಮಾಡಿರುವ ಪರಿಣಾಮವೋ ಇಲ್ಲ ಆ ದಂಪತಿಗಳು ಹರಸಿದಂತೆ ಕಲ್ಸ್ವಾಮಿ ಪ್ರಭಾವವೋ ತಿಳಿಯದೆ ಆನಂದ ಉಭಯಸಂಕಟಕ್ಕೆ ಸಿಲುಕಿ ನರಳಿದ್ದ. ಆದರೆ ಇದನ್ನೆಲ್ಲಾ ಮರೆತು ಬಹಳಷ್ಟು ದಿನಗಳಿಂದ ತನ್ನಲ್ಲಿದ್ದ ಕಥೆಯನ್ನ ತನ್ನ ಮೊದಲ ನಿರ್ದೇಶನಕ್ಕೆ ಆರಿಸಿಕೊಂಡಿದ್ದರಿಂದ ಲೊಕೇಶನ್ ಹುಡುಕಲು ಹುಬ್ಬಳ್ಳಿಗೆ ಹೋಗಬೇಕಾಗಿತ್ತು.
ಆನಂದ ಹುಬ್ಬಳ್ಳಿಯಲ್ಲಿ ಮೂರ್ನಾಲ್ಕು ದಿನ ಉಳಿದು ಹುಬ್ಬಳ್ಳಿ ಬೆಂಗಳೂರು ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಗಳೂರಿಗೆ ವಾಪಸಾಗುತ್ತಿದ್ದ. ಈ ಎಕ್ಸ್ ಪ್ರೆಸ್ ರೈಲು ಟ್ರಾಕಿಗೆ ಬಡಿದು ದಡ ಬಡ ಸದ್ದು ಮಾಡುತ್ತಾ, ತಿರುವುಗಳಲ್ಲೊಮೊಮ್ಮೆ ಜೋರಾಗಿ ಶಿಳ್ಳೆ ಹಾಕುತ್ತಾ, ತನ್ನ ಶಕ್ತಿಯನ್ನೆಲ್ಲಾ ಮೀರಿ ಓಡುತ್ತಾ ಬೆಂಗಳೂರಿನ ಕಡೆ ಚಲಿಸುತ್ತಿತ್ತು. ಜೋರಾಗಿ ಓಡುತ್ತಿದ್ದ ರೈಲಿನ ವೇಗ ಕಡಿಮೆಯಾಯಾಗುತ್ತ ಬಂದಂತೆ ಕಟ್ಟಡಗಳು, ರಸ್ತೆಗಳು, ವಾಹನಗಳು ಕಾಣಿಸಿಕೊಳ್ಳತೊಡಗಿದವು.
ಬೆಂಗಳೂರಿಗೆ ತಲುಪಲು ಐದು ತಾಸಾದರೂ ಉಳಿದಿದೆ. ಆದ್ದರಿಂದ ಯಾವುದಾದರೊಂದು ದಿನ ಪತ್ರಿಕೆ ಜೊತೆಗೆರಡು ಬಿಸ್ಕತ್ ಪೊಟ್ಟಣ ಕೊಂಡು ತರಲು ಅಲ್ಲಿಯೇ ಎಸೆದಿದ್ದ ಹಳೆಯ ಜಾಕೆಟೊಂದನ್ನು ಮೈಮೇಲೇರಿಸಿ ತಯಾರಾದ. ರೈಲು ದಾವಣಗೆರೆ ಸ್ಟೇಷನಿನಲ್ಲಿ ನಿಂತೊಡನೆಯೇ ಇಳಿದು ಪತ್ರಿಕೆ ಕೊಂಡವನೇ ಬಾಟಲಿಗೆ ನೀರು ತುಂಬಿಸಿಕೊಂಡು, ಎರಡು ಬಿಸ್ಕತ್ ಪೊಟ್ಟಣ ಖರೀದಿಸಿ ವಾಪಸಾದವನಿಗೆ ತನ್ನೆದುರಿನ ಸೀಟಿನಲ್ಲಿ ಕಂಡದ್ದು ಅಪ್ಪ-ಮಗಳ ಜೋಡಿ.
ಅಪ್ಪನಿಗೆ ಸುಮಾರು ಅರವತ್ತರ ಆಸುಪಾಸು, ಮಗಳಿನ್ನು ಇಪ್ಪತ್ತರ ಹರೆಯ. ಅಪ್ಪನ ಮುಖದ ಮೇಲೆ ದುಃಖದ ಛಾಯೆ ಆವರಿಸಿದೆ ಆದರೆ ಮಗಳಿಗೆ ಇದ್ಯಾವುದರ ಅರಿವಿಲ್ಲದೆ ಖುಷಿಯಿಂದ ಬೀಗುತ್ತಿದ್ದಾಳೆ. ಅಪ್ಪ ಏನನ್ನೋ ದೀರ್ಘವಾಗಿ ಯೋಚಿಸುತ್ತಿದ್ದಾನೆ. ಹೆಗಲ ಮೇಲಿರುವ ವಸ್ತ್ರವನ್ನು ಒಗೆದು ಅದೆಷ್ಟು ದಿನಗಳಾಗಿವೆಯೋ ತಿಳಿಯದು , ಕೆಳಗೊಂದು ಹಳೆಯ ಪಂಚೆ , ಮೈಮೇಲೊಂದಳೆಯ ಬಿಳಿ ಶರ್ಟು, ಜೇಬಿನಲ್ಲಿ ನಾಲ್ಕೈದು ಚೀಟಿಗಳ ಜೊತೆ ಗಾಂಧೀ ಚಿತ್ರವಿರುವ ಹತ್ತು ರೂಪಾಯಿ ನೋಟಿವೆ.

ಒಂದದಿನೈದು ನಿಮಿಷಗಳಾಗಿರಬೇಕು , ರೈಲು ಮತ್ತೊಮ್ಮೆ ಶಿಳ್ಳೆ ಹಾಕುತ್ತಾ ಚಲಿಸತೊಡಗಿತು.
ಅಷ್ಟರಲ್ಲಿ ಚಹಾ ಮಾರುವನೊಬ್ಬ ಇಳಿಯುವ ತರಾತುರಿಯಲ್ಲಿ ಬಾಗಿಲಿನ ಕಡೆ ನಡೆಯುತ್ತಿದ್ದವನನ್ನು ನೋಡಿ ಆನಂದ ಚಹಾ ಕೇಳಿದ , ಚಹಾ ಮಾರುವವ ನಿಂತವನೇ ಒಂದು ಕಪ್ಪಿಗೆ ಚಹಾ ಬಗ್ಗಿಸಿ ಆನಂದನ ಕೈಗಿಟ್ಟು ಹಣ ಪಡೆದು ಓಡುತ್ತ ಇಳಿದುಹೋದ. ಅವನು ಸರಿಯಾಗಿ ಇಳಿದಿದ್ದನ್ನು ಖಾತ್ರಿ ಮಾಡಿಕೊಂಡು ಬಿಸ್ಕತ್ತನ್ನು ಚಹಾಗೆ ಅದ್ದಿ ಒಮ್ಮೆ ಬಾಯಲ್ಲಿಟ್ಟ .
ಅಲ್ಲಿಯವರೆಗೂ ಕಿಟಕಿಯಿಂದ ಹೊರನೋಡುತ್ತ ಅಪರಿಚಿತನೊಬ್ಬನಿಗೆ ಹಲ್ಲು ಗಿಂಜುತ್ತಿದ್ದ ಆ ಹುಡುಗಿ ಆನಂದನನ್ನ ನೋಡಿ ಒಮ್ಮೆ ಮುದ್ದಾಗಿ ನಕ್ಕಾಗ ಆನಂದನ ಎದೆ ಬೆಚ್ಚಾಗಾಗಿ ಮುಖದಲ್ಲಿ ನಗು ಮೂಡಿತು .
ಮತ್ತೈದು ನಿಮಿಷಗಳಾಗಿರಬೇಕು ಆನಂದ ತಲೆ ಎತ್ತಿ ಅವಳನ್ನು ನೋಡಿದ. ಆ ಹುಡುಗಿ ಇವನನ್ನೇ ದಿಟ್ಟಿಸಿ ನೋಡುತ್ತಿದ್ದಾಳೆ!, ಇವನು ನೋಡಿದೊಡನೆ ಮತ್ತದೇ ನಗು , ಕಣ್ಣು ಮಿಟುಕಿಸುತ್ತಾ ತಲೆಯಲ್ಲಾಡಿಸುತ್ತ ನಗುತ್ತಲೇ ಇದ್ದಾಳೆ, ಈ ಬಾರಿ ಆನಂದನಿಗೆ ಸ್ವಲ್ಪ ಗಾಬರಿಯಾದರೂ ಮತ್ತೊಮ್ಮೆ ನಕ್ಕು ಚಹಾ ಕುಡಿದು ಮುಗಿಸಿದವನೇ ಪತ್ರಿಕೆಯನ್ನು ಹಿಡಿದು ಓದಲೆತ್ನಿಸಿದ. ಹೀಗೆ ಅವಳ ಚೇಷ್ಟೆಗಳು ವಿರಾಮವಿಲ್ಲದೆ ಮುಂದುವರೆದಿದ್ದವು.
ಆನಂದ ಓದುತ್ತಿರುವಾಗ ಪುಟವೊಂದು ಪತ್ರಿಕೆಯೊಳಗಿಂದ ಜಾರಿ ಬಿತ್ತು. ಅವನು ಪುಟವೆತ್ತಿಕೊಳ್ಳಲು ಬಗ್ಗಿದಾಗ ಜೊತೆಗೆ ಅವಳೂ ಬಗ್ಗಿದಳು, ಮುಜುಗರವಾದರೂ ಆನಂದ ತನ್ನ ಮುಖದಲ್ಲಿ ವ್ಯಕ್ತಪಡಿಸಲಿಲ್ಲ. ಅವಳು ಪುಟ ಎತ್ತಿಕೊಳ್ಳಲು ಬಗ್ಗಿದ್ದಾಗ ಅವಳ ಮೈಮೇಲಿದ್ದ ಸೆರಗು ಜಾರಿತ್ತು , ಅವಳು ಎದ್ದು ಕುಳಿತ ನಂತರವೂ ಸೆರಗನ್ನು ಸರಿ ಮಾಡಿಕೊಳ್ಳಲಿಲ್ಲ.
ಆನಂದ ಈ ಸಲ ಮಾತನಾಡಿದ ಯಜಮಾನ್ರೆ , ಎಲ್ಲಿಗ್ ಹೋಗ್ತಿದ್ದೀರಾ? ಅಲ್ಲಿಯವರೆಗೂ ತನ್ನದೇ ಲೋಕದಲ್ಲಿ ಕಳೆದು ಹೋಗಿದ್ದ ಆ ವ್ಯಕ್ತಿ ಎಚ್ಚರಗೊಂಡವನೇ ಹೇಳಿದ ಅಯ್ಯೋ !! ನನ್ ಕಥಿ ಏನ್ ಕೇಳ್ತೀರ್ರೀ ಸರsss. ಕೇರಳ ದೇಸದಲ್ಲಿ ಇರೊ ತಿರುನೆಲ್ಲಿಗೆ ಹೋಗಾಕತ್ತಿನ್ರಿ, ಅಲ್ಲಿರೋ ಪಾಪನಾಶಿನಿ ಹೊಳೆನಾಗೆ ಜಳಕ ಮಾಡಿ, ಗುಡ್ಡದ್ ಮ್ಯಾಲೆ ಇರೋ ಆಶ್ರಮಕ್ಕೆ ಹೋಗ್ಬೇಕು ನೋಡ್ರಿ ಸರ.
ಆನಂದ ಕೇಳಿದ ನಿಮ್ಮ್ಹೆಸ್ರೇನಣ್ಣ, ಅಲ್ಲಿಗೆ ಯಾಕೆ ಹೋಗ್ತಿದೀರಾ?. ಆತ ಉತ್ತರಿಸಿದ ನನ್ನ್ಹೆಸ್ರು ಶಂಕ್ರಣ್ಣ ರೀ, ಅಲ್ಲೊಬ್ರು ಕಲ್ಸ್ವಾಮಿ ಅದಾರಂತ್ರಿ , ಇವ್ಳಿಗೆ ಅದೇನೋ ಮೆಟ್ಕೊಂಡೈತಿ, ಅಲ್ಲಿಗೆ ಹೋದ್ರೆ ಮಾತ್ರ ವಾಸಿ ಆಗೋದಂತಾರಿ . ಅದಕ್ಕೆ ಈಕೆನ ಕರ್ಕೊಂಡು ಹೊಂಟಿನ್ರಿ ಎಂದು ಅವಳನ್ನು ನೋಡಿದವನೇ ಸೆರಗನ್ನು ಸರಿ ಮಾಡಿ ಮತ್ತೆ ಮಾತು ಮುಂದುವರೆಸಿದ.
ಈಕಿ ನನ್ ಮಗ್ಳುರೀ . ಲಗ್ನ ಆಗಿ ವರ್ಸ ಆಗೈತ್ ನೋಡ್ರಿ, ಇಕಿ ಹೆಂಗೆಂಗೋ ಆಡಾಕತಾಳ್ರಿ, ಮಂದೀನ ನೋಡುದ್ರೆ ಮಂಗ್ಯಾನ್ ತರ ಆಡ್ತಾಳ್ರಿ , ಹುಡುಗ್ರು ನೋಡಿ ಸುಮ್ನ ಹಲ್ಲು ಕಿಸಿತಾಳ್ರಿ ,ಒಳ್ಳೆ ಖಬರಗೇಡಿ ಆಡಿದಾಂಗೆ ಆಡ್ತಳ್ರಿ . ಆನಂದ ಗಂಟಲು ಸರಿ ಪಡಿಸಿ ಹಾಗಾದ್ರೆ ಅಲ್ಲಿಗೆ ಹೋದ್ರೆ ಸರಿ ಹೋಗುತ್ತೆ ಅಂತ ಹೇಳಿದೋರ್ ಯಾರಣ್ಣ? ನಿಮ್ಮಗಳಿಗೆ ಒಮ್ಮೆ ನಿಮ್ಹಾನ್ಸ್ ನಲ್ಲಿ ತೋರಿಸಿದ್ದೀರಾ ಎಂದು ಕೇಳಿದ್ದಕ್ಕೆ “ಶಂಕ್ರಣ್ಣ ಮುಂದುವರೆಸಿದ, ಇಕಿನ ಭಾಳ ಕಡೆ ತೋರ್ಸಿನ್ರಿ ಸರ, ಆದ್ರು ಏನು ಚಲೋ ಆಗಿಲ್ನೊಡ್ರಿ ಎಂಟು ತಿಂಗಳಿಂದ ಗುಳಿಗಿ ತಗೊಂಡಾಳ್ರಿ ಆದ್ರೂ ಏನು ಉಪಯೋಗ ಆಗಿಲ್ರಿ ಸರ.
ಲಗ್ನಕ್ಕೂ ಮೊದ್ಲು ಬ್ಯಾರೆ ಜಾತಿ ಹುಡುಗನ್ನ ಮೆಚ್ಚಿಕೊಂಡು, ಆ ಸೂಳಿಮಗ ಇವಳ ಹಿಂದೇನೆ ಸುತ್ತುತ್ತಿದ್ದ. ಆದ್ರೆ ನಾವು ಇವಳನ್ನ ಇವ್ರ ಸ್ವಾದರಮಾವಂಗೆ ಕೊಟ್ಟು ಲಗ್ನ ಮಾಡೀವ್ರಿ. ನಮ್ ಮನಿ ಹತ್ರ ಇರೊರೊಬ್ರು ಕಲ್ಸ್ವಾಮಿ ಆಶ್ರಮಕ್ಕೆ ಹೋಗಿ ಬಾ ಅಂತ ಹೇಳ್ಯಾರಿ. ಆನಂದನಿಗೆ ತಿರುನೆಲ್ಲಿ ಬೆಟ್ಟ ಸ್ವಲ್ಪ ಚೆನ್ನಾಗಿಯೇ ಪರಿಚಯವಿತ್ತು ಕಾರಣ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ತಮ್ಮನ ಸಹಾಯದಿಂದ ಕೇರಳದ ತಿರುನೆಲ್ಲಿ ಬೆಟ್ಟದಲ್ಲಿ ತನ್ನ ಕಿರು ಚಿತ್ರಕ್ಕೆಂದು ಹೋಗಿ ಅಲ್ಲೆಲ್ಲಾ ಬೆಟ್ಟಗಳನ್ನು ಹತ್ತಿಳಿದು, ನಾಲ್ಕಾರು ದಿನ ಅಲ್ಲಿಯೇ ಹಾಡಿಯೊಂದರಲ್ಲಿ ತಂಗಿದ್ದು ಕೆಲಸ ಮುಗಿದ ಮೇಲೆ ವಾಪಸಾಗಿದ್ದ.
ಆದರೆ, ಅವನಿಗೆ ಶಂಕ್ರಣ್ಣ ಹೇಳಿದ ಕಲ್ಸ್ವಾಮಿ ಯಾರೆಂದು ತಿಳಿದಿರಲಿಲ್ಲ. ಅಲ್ಲಿಯವರೆಗೂ ಗಾಬರಿಯಾಗಿದ್ದ ಆನಂದನಿಗೆ ಅವಳ ಮೇಲೆ ಅನುಕಂಪ ಮೂಡಿತ್ತು . ಹೀಗೆ ಮೂರ್ರ್ನಾಲ್ಕು ಘಂಟೆಗಳು ಕಳೆದಿರಬೇಕು ಅರಸೀಕೆರೆ ಸ್ಟೇಷನ್ ಹತ್ತಿರವಾಗತೊಡಗಿತು. ಶಂಕ್ರಣ್ಣ ಇಳಿದು ಮೈಸೂರಿಗೆ ಮತ್ತೊಂದು ರೈಲನ್ನು ಹಿಡಿಯುವ ತಯಾರಿಯಲ್ಲಿದ್ದರು.
ಆಗ ಆನಂದನು ಧೈರ್ಯ ಮಾಡಿ ಮಾತನಾಡಿದ ಶಂಕ್ರಣ್ಣ ಈ ಹಣ ಇಟ್ಕೊಳ್ಳಿ ಎಂದು ನೂರರ ಎರಡು ನೋಟನ್ನು ಶಂಕ್ರಣ್ಣನ ಜೇಬಿಗಿಳಿಸಿ ಮಾತು ಮುಂದುವರೆಸಿದ ನೀವ್ಯಾಕೆ ಒಮ್ಮೆ ನಿಮ್ಮಗಳನ್ನ ಅವಳು ಇಷ್ಟಪಟ್ಟಿದ್ದ ಹುಡುಗನ್ ಜೊತೆ ಬಿಡಬಾರ್ದು !? ಶಂಕ್ರಣ್ಣನಿಗೆ ಎಲ್ಲಿಲ್ಲದ ಕೋಪ ಬಂದು ಹೇಳಿದ ಅದೇನಂತ ಹೇಳ್ತಿರಿ ಸರ ಆ ಸೂಳಿಮಗ್ನಿಂದ ಈಕಿಗೆ ಹಿಂಗೆ ಆಗಿರೋದು. ನಂಬಿರೋ ದ್ಯಾವ್ರು ಯಾವತ್ತೂ ಕೈ ಬಿಡಲ್ಲ ಕಂಡ್ರಿ ಸರ. ನೋಡ್ತಿರಿ ನಾನು ಕಲ್ಸ್ವಾಮೇರ್ನ ಬೆಟ್ಟಿ ಮಾಡಿ ಈ ರೋಗಕ್ಕೆ ಮದ್ದು ಮಾಡ್ಸಿಕೊಂಡು ಬರ್ತಿನ್ರಿ . ನೀವ್ ಕೊಟ್ಟಿರೋ ರೊಕ್ಕ ಉಳ್ದ್ರೆ ಕಲ್ಸ್ವಾಮಿಗೆ ಕಾಣಿಕೆ ಹಾಕ್ತೀನ್ರಿ ಸರ , ಸ್ವಾಮಿ ನಿಮ್ಗೂ ಛಲೋ ಮಾಡ್ತಾನ ಎಂದೇಳಿದವನೇ ಇವನ ಮುಖವೂ ನೋಡದೆ ಮಗಳನ್ನು ದರ ದರ ಎಳೆದುಕೊಂಡು ಇಳಿದು ಹೋಗಿಯೇ ಬಿಟ್ಟ .
ಈ ಘಟನೆ ಬಹಳ ದಿನಗಳವರೆಗೆ ಆನಂದನನ್ನು ಘಾಸಿಗೊಳಿಸಿತ್ತು. ಆದರೆ ಇದಾದ ನಂತರ ಆನಂದ ತನ್ನ ಮುಂದಿನ ಚಿತ್ರದ ಕೆಲಸದಲ್ಲಿ ಸಂಪೂರ್ಣ ಮಗ್ನನಾಗಿ ಹೋಗಿದ್ದ. ಚಿತ್ರೀಕರಣ ಮುಗಿಸಿ ಚಿತ್ರ ತೆರೆಗೆ ಬರಲು ವರ್ಷವಾಗಿತ್ತು. ತೆರೆಗೆ ಬಂದ ಮೊದಲ ಸಿನಿಮಾ ಕನ್ನಡ ಚಿತ್ರರಂಗದಲ್ಲೇ ಮೈಲುಗಲ್ಲಾಗಿ ನಿಂತು ಆನಂದನ ನಿರ್ದೇಶನಕ್ಕೆ ನಿರ್ಮಾಪಕರು ಸಾಲಿನಲ್ಲಿ ನಿಂತಿದ್ದರು. ಈ ಚಿತ್ರದಿಂದ ಬಂದ ಯಶಸ್ಸಿನ ಬೆನ್ನಲ್ಲೇ ಮತ್ತೆರಡು ಚಿತ್ರವನ್ನು ನಿರ್ದೇಶಿಸಿ ಗೆಲುವಿನ ಬೆನ್ನೇರಿ ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕನೆಂಬ ಪಟ್ಟ ಸಿಕ್ಕಿತ್ತು.
ಆನಂದನಿಗೆ ಬಹಳ ದಿನಗಳಿಂದ ಮಕ್ಕಳ ಚಿತ್ರವೊಂದನ್ನು ನಿರ್ದೇಶಿಸುವ ಆಸೆಯಿದ್ದುದರಿಂದ ಮಕ್ಕಳ ಕಥೆಯೊಂದನ್ನು ಬರೆಯಲು ಶುರು ಮಾಡಿದ್ದ. ಕಥೆ ತಾನು ಸಣ್ಣವನಿದ್ದಾಗ ಅವನ ಶಾಲೆಯಲ್ಲೇ ನಡೆದ ಘಟನೆಯೊಂದನ್ನು ಆಧರಿಸಿತ್ತು.
೧೯೮೦ ರ ಆಸುಪಾಸಿರಬೇಕು , ಹಳೆಯ ಬಸ್ಸೊಂದು ಮಿತಿಗೂ ಮೀರಿ ಮಕ್ಕಳನ್ನು ತುಂಬಿಕೊಂಡು ಧರ್ಮಸ್ಥಳದಿಂದ ಮಂಗಳೂರಿನ ಕಡೆ ಶಾಲಾ ಪ್ರವಾಸ ಹೊರಟಿತ್ತು. ರಾತ್ರಿ ಸಮಯ ಹನ್ನೊಂದಾಗಿರಬಹುದು , ಬಸ್ಸಿನಲ್ಲಿ ನಾಲ್ಕು ಶಿಕ್ಷಕರು ಮತ್ತು ಎಪ್ಪತೆಂಟು ಮಕ್ಕಳಿದ್ದರು. ಒಬ್ಬರ ಮೇಲೊಬ್ಬರು ಬಿದ್ದು ಎಲ್ಲಾ ಮಕ್ಕಳು ನಿದ್ದೆಗೆ ಜಾರಿದ್ದಾರೆ.
ಬಸ್ಸಿನಲ್ಲಿದ್ದ ರಂಗಪ್ಪ ಮೇಷ್ಟ್ರು ಮಲಗುವ ಮುನ್ನ ಎಲ್ಲರೂ ಇದ್ದಾರೆಂಬುದನ್ನು ಖಾತ್ರಿ ಮಾಡಿಕೊಳ್ಳಲು ಎಣಿಸಲು ಶುರು ಮಾಡಿದರು. ಒಂದು ಎರಡು ಮೂರು .. ಎರಡು ನಿಮಷದ ನಂತರ.. ಎಂಬತ್ತೆರಡು, ಎಂಬತ್ಮೂರು, ಎಂಬತ್ನಾಲ್ಕು .!?. ಎಪ್ಪತೆಂಟು ಮಕ್ಕಳು, ನಾಲ್ಕು ಶಿಕ್ಷಕರು, ಒಬ್ಬ ಡ್ರೈವರ್ ಮತ್ತೊಬ್ಬ ಕ್ಲೀನರ್ , ಅಂದರೆ ಲೆಕ್ಕ ಸರಿ ಇದೆ. ಸ್ವಲ್ಪ ಸಮಯದ ನಂತರ ಬೆಳಗಿನಿಂದ ಮಕ್ಕಳನ್ನು ಹಿಡಿದು ಬಡಿದು ಕೂಗಿ ಸಂಭಾಳಿಸಿ ಸಾಕಾಗಿದ್ದ ಶಿಕ್ಷಕರು ನಿದ್ದೆಗೆ ಜಾರಿದ್ದರು.
ಧರ್ಮಸ್ಥಳದಿಂದ ಅರ್ಧ ದಾರಿ ಸಾಗಿರಬೇಕು , ಹಿಂದಿನಿಂದ ಸಿದ್ದ ಕೂಗಿದ ಸಾ, ಯೆಂಕ್ಟ ಬಿದ್ದೋದ ಸಿದ್ದ ಕೂಗಿದ್ದು ಮುಂದೆ ಕುಳಿತಿದ್ದ ಶಿಕ್ಷಕರಿಗೆ ಕೇಳಿಸುವುದಿರಲಿ ಅರ್ಧದಲ್ಲಿ ಕುಳಿತಿದ್ದವರಿಗೂ ಕೇಳಿಸಲಿಲ್ಲ ಕಾರಣ ಗಾಳಿ ದುಃಯ್ಯೆಂದು ಒಳಗೆ ನುಗ್ಗುತ್ತಿದೆ , ಡೀಸೆಲ್ಲಿಗೆ ಸೀಮೆಎಣ್ಣೆ ಮಿಶ್ರ ಮಾಡಿ ಹಾಕಿರುವುದರಿಂದ ಇಂಜಿನ್ ಕೋಪ ಮುಗಿಲಿಗೇರಿಸಿ ಗಲಾಟೆ ಮಾಡುತ್ತಿದೆ.
ಮತ್ತೊಮ್ಮೆ ಸಿದ್ದ ಕೂಗಿದ, ಯಾರೂ ಮಾತನಾಡಲಿಲ್ಲ , ಸಿದ್ಧನಿನ್ನು ಮೂರನೆಯ ಕ್ಲಾಸು ಆದ್ದರಿಂದ ಸೀಟಿನಿಂದ ಎದ್ದು ಹೋಗಿ ಶಿಕ್ಷಕರಿಗೆ ತಿಳಿಸುವಷ್ಟು ಧೈರ್ಯವಿಲ್ಲ, . ಕಾಲುಗಳು ಒಬ್ಬಿಂದೊಬ್ಬರಿಗೆ ಸಿಕ್ಕಿ ಹಾಕಿಕೊಂಡಿವೆ, ಅವನಿಗೆ ನಿದ್ದೆ ಮಂಪರು ಬೇರೆ, ಹೀಗೆ ಯೋಚಿಸುತ್ತಾ ಏನೂ ಮಾಡಲು ತಿಳಿಯದೆ ಮತ್ತೆ ನಿದ್ದೆಗೆ ಜಾರಿದ. ಹಿಂದಿನ ಬಾಗಿಲಿನ ಚಿಲಕ ಸಡಿಲಗೊಂಡು ತೆರೆದುಕೊಂಡಿದ್ದರಿಂದ, ಗಾಳಿಗೆ ಬಸ್ಸಿಗೆ ಜೋರಾಗಿ ಬಡಿದರೂ ಕ್ಲೀನರ್ ಗಮನಕ್ಕಾಗಲಿ, ಡ್ರೈವರ್ ಗಮನಕ್ಕಾಗಲಿ ಬಂದಿರಲಿಲ್ಲ.
ಡ್ರೈವರ್ ಮಂಗಳೂರಿಗೆ ಇನ್ನ ನಾಲ್ಕು ಕಿಲೋಮೀಟರ ದೂರವಿರುವಾಗಲೇ ದಾರಿಯಲ್ಲಿ ಸಿಕ್ಕ ಸಮುದಾಯ ಭವನವೊಂದರ ಮುಂದೆ ನಿಲ್ಲಿಸಿ ಮಲಗಿದ. ಸುಮಾರು ಘಂಟೆ ಐದಾಗಿರಬೇಕು, ಒಬ್ಬೊಬ್ಬರೇ ಏಳಲು ಶುರು ಮಾಡಿದರು. ರಂಗಪ್ಪ ಮೇಷ್ಟ್ರು ಎದ್ದವರೇ , ಯಾರಿಗೂ ಬಸ್ಸಿನಿಂದ ಕೆಳಗಿಳಿಯದಂತೆ ಆಜ್ಞೆ ಮಾಡಿ ಮತ್ತೊಮ್ಮೆ ಎಣಿಸಲು ಶುರು ಮಾಡಿದರು. ಒಂದು ಎರಡು ಮೂರು .. ಎರಡು ನಿಮಷದ ನಂತರ ಎಂಬತ್ತೊಂದು ,ಎಂಬತ್ತೆರಡು, ಎಂಬತ್ಮೂರು .!?.
ಪಕ್ಕದಲ್ಲಿಯೇ ಕುಳಿತಿದ್ದ ವೆಂಕಟೇಶ್ ಅವರಿಗೆ ಹೇಳಿದರು ಸಾರ್ ಒಂದು ತಲೆ ಕಡಿಮೆ ಇದೆ ಆಗ ವೆಂಕಟೇಶ್ ಉತ್ತರಿಸಿದರು.. ರೀ , ನಿದ್ದೇಲಿದೀರಾ ಇನ್ನು ಅನ್ಸುತ್ತೆ . ಮತ್ತೊಮ್ಮೆ ಎಣಿಸಿ . ಈ ಬಾರಿ ನಿದ್ದೆಯಿಂದ ಪೂರ್ಣ ಎಚ್ಚರವಾದ ಮೇಷ್ಟ್ರು ಕೊನೆಯಿಂದ ಮತ್ತೊಮ್ಮೆ ಎಣಿಸಲು ಶುರು ಮಾಡಿದರು . ಒಂದು ಎರಡು ಮೂರು .. ಎರಡು ನಿಮಷದ ನಂತರ ಎಂಬತ್ತೊಂದು ,ಎಂಬತ್ತೆರಡು, ಎಂಬತ್ಮೂರು .!? .
ರಂಗಪ್ಪ ಮೇಷ್ಟ್ರು ಗಾಬರಿಯಿಂದಲೇ ಹೇಳಿದರು ಸಾರ್, ನಿಜವಾಗ್ಲೂ ಒಂದು ಕಡಿಮೆ ಬರ್ತಿದೆ. ಈ ಬಾರಿ ವೆಂಕಟೇಶ್ ಕಾರ್ಯ ಪ್ರವತ್ತರಾದರು . ಎಲ್ಲ ಮಕ್ಕಳನ್ನುಇಳಿಯಲು ಹೇಳಿ, ಸಾಲಿನಲ್ಲಿ ನಿಲ್ಲಲು ಹೇಳಿ ಮತ್ತೊಮ್ಮೆ ಎಣಿಕೆ ಶುರು ಒಂದು ಎರಡು ಮೂರು .. ಎರಡು ನಿಮಷದ ನಂತರ ಎಂಬತ್ತೊಂದು , ಎಂಬತ್ತೆರಡು, ಎಂಬತ್ಮೂರು .! . ಆಗಲೇ ಪೀಕಲಾಟ ಶುರು ಆಗಿದ್ದು ಶಿಕ್ಷಕರಿಗೆ ಮತ್ತೆ ಡ್ರೈವರ್ ಸಾಹೇಬನಿಗೆ.
ತಾವು ತಂದಿದ್ದ ಹಾಜರಾತಿ ಚೀಟಿಯನ್ನು ಜೇಬಿನಿಂದ ತೆಗೆದ ವೆಂಕಟೇಶ್ ಹಾಜರಾತಿ ಹಾಕಲು ಶುರು ಮಾಡಿದರು ಅಮೃತ ,ಬಂದಿದೀನಿ ಸರ್ .. ಅಂಕಿತಾ , ಬಂದಿದೀನಿ ಸರ್.. ಭದ್ರಪ್ಪ, ಬಂದಿದೀನಿ ಸರ್.. ಚಿಕ್ಕೆಲ್ಲ, ಬಂದಿದೀನಿ ಸರ್.. ಹಾಗೆ ಕೂಗುತ್ತಾ ವಿದ್ಯಾ, ಬಂದಿದೀನಿ ಸರ್, ವೆಂಕಟೇಶ್ ನಿಶ್ಯಬ್ದ ಮೂಡಿತು , ಯಾರು ಉತ್ತರಿಸಲಿಲ್ಲ.
ವೆಂಕ್ಟ , ಎಲ್ಲಿದಿಯೋ ಈ ಬಾರಿಯೂ ಉತ್ತರ ಬರಲಿಲ್ಲ . ಸಿದ್ದ ಅಳಲು ಶುರು ಮಾಡಿದ , ವೆಂಕಟೇಶ್ ಓಡಿದವರೇ ಸಮಾಧಾನದಿಂದ ಕೇಳಿದರು ನಿಜ ಹೇಳೋ ಸಿದ್ದ , ಎಲ್ಲೋದ ವೆಂಕ್ಟ ? ನಾನೇನು ಮಾಡೋಲ್ಲ ಹೇಳಪ್ಪ ಸಿದ್ದ ಅಳುತ್ತಲೇ ಬಿಕ್ಕಿದ ಸಾರ್ ಒಂದೊತ್ನಲ್ಲಿ ಜಾರ್ಕೊಂಡು ಉದ್ರೋದ ಸಾರ್.. ಮೇಷ್ಟ್ರಿಗೆ ಸಿಡಿಲು ಬಡಿದಂತಾಯ್ತು .
ಸ್ಕೂಲಿನ ಹೆಡ್ ಮಾಸ್ಟರ್ ಬೇರೆ, ನಾಳೆ ಊರಿಗೆ ಹೋದ್ರೆ ಜನಕ್ಕೆ ಏನು ಉತ್ತರಿಸೋದು ಅದೆಲ್ಲ ಇರಲಿ ವೆಂಕ್ಟ ಏನಾದ ? ಬದ್ಕಿದಾನೆಯೇ ಇಲ್ಲ , ಚಕ್ರಕ್ಕೆನಾದರೂ ..! ವೆಂಕಟೇಶ್ ಅವರು ಗಾಬರಿಯಿಂದ ಬಸ್ಸಿನ ಕಡೆ ಓಡಿದರು. ಚಕ್ರಕ್ಕೆ ಯಾವುದೇ ರಕ್ತದ ಕಲೆಗಳು ಅಂಟಿಲ್ಲ ಅಂದ್ರೆ ಎಲ್ಲೋದ . ವೆಂಕಟೇಶ್ ಬಸ್ಸಿನ ಬಾಗಿಲನ್ನು ಪರೀಕ್ಷಿಸಿದಾಗ ಅರ್ಥವಾದದ್ದು ಚಿಲಕ ಹಾಳಾಗಿದೆ, ಮಧ್ಯರಾತ್ರಿಯಲ್ಲಿ ಬಾಗಿಲು ಗಾಳಿಗೆ ತೆರೆದುಕೊಂಡಿದ್ದರೆ ವೆಂಕಟ ನಿದ್ದೆ ಮಾಡುವ ಅಮಲಿನಲ್ಲಿ ಜಾರಿ ಹೋಗಿದ್ದಾನೆ .
ಬಂದ ದಾರಿಯಲ್ಲಿ ವಾಪಾಸಾದರೂ ಇವನು ಸಿಗುವನೇ ಎಂಬ ಖಾತರಿಯಿಲ್ಲ ಆದರೂ ತಡಮಾಡದೆ ಮಕ್ಕಳಿಗೆ ಅಲ್ಲಿಯೇ ಸಮುದಾಯ ಭವನದಲ್ಲಿ ತಿಂಡಿ ಕೊಡಿಸಿ ತರಾತುರಿಯಲ್ಲಿ ಬಂದ ದಾರಿಯಲ್ಲೇ ಬಸ್ಸನ್ನು ತಿರುಗಿಸಿದರು. ಮಂಗಳೂರಿನಿಂದ ಧರ್ಮಸ್ಥಳದವರೆಗೂ ವೆಂಕಟನ ಯಾವುದೇ ಸುಳಿವು ಸಿಗಲಿಲ್ಲ. ಪ್ರವಾಸವನ್ನ ಅಲ್ಲಿಗೆ ಮುಗಿಸಿ ವಾಪಸಾದ ಮೇಲೆ ವಿಷಯ ತಿಳಿದ ವೆಂಕ್ಟನ ಪೋಷಕರು ಮನ ಬಂದಂತೆ ಬೈಗುಳ ನೀಡಿದ್ದು ಬಿಟ್ಟರೆ ಇನ್ನ ಬೇರೆಯ ಯಾವುದೇ ಉದ್ವೇಗದ ಘಟನೆ ನಡೆಯಲಿಲ್ಲ.
ಆದರೆ ವೆಂಕಟನ ತಾಯಿಯ ದುಃಖಕ್ಕೆ ಮಾತ್ರ ಯಾವುದೇ ಮಿತಿಯಿರಲಿಲ್ಲ. ಕಂಡು ಕೇಳದ ದೇವರಿಗೆಲ್ಲಾ ಹರಕೆ ಹೊತ್ತು ತೀರಿಸಿದರೂ ಮಗ ವಾಪಸಾಗಿರಲಿಲ್ಲ. ಆದರೆ ವೆಂಕಟ ಒಂದಿನ ಹಠಾತ್ತನೆ ಊರಿನಲ್ಲಿ ಕಾಣಿಸಿಕೊಂಡಿದ್ದು ಇಡೀ ಊರಿಗೆ ಖುಷಿ ನೀಡಿತ್ತು . ವೆಂಕಟ ಊರಿಗೆ ಬಂದಾಗ ಆನಂದ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ. ಆದ ಕಾರಣ ವೆಂಕಟನ ಹದಿನೈದು ವರ್ಷಗಳ ಬದುಕಿನ ಬಗ್ಗೆ ಕೊಂಚವೂ ತಿಳಿದಿರಲಿಲ್ಲ.
ಆದ ಕಾರಣ ಊರಿಗೆ ಹೋಗಿ ವೆಂಕಟನ ಬಳಿಯೂ ಅವರಮ್ಮನ ಬಳಿಯೂ ಮಾತನಾಡಿ ಬರುವುದು ಎಂದು ಯೋಚಿಸಿದ ಆನಂದ ತನ್ನಮ್ಮನಿಗೆ ಫೋನಾಯಿಸಿ ವಿಚಾರಿಸಿದಾಗ ತಿಳಿದದ್ದು ವೆಂಕಟ ಮತ್ತೊಮ್ಮೆ ಯಾರಿಗೂ ಹೇಳದೆ ಮನೆ ಬಿಟ್ಟು ಹೋಗಿದ್ದಾನೆಂದು ಜೊತೆಗೆ ಅವಳ ಅಮ್ಮನಿಗೆ ಯಾವುದೇ ದಾರಿ ತೋರದೆ ಕೇರಳದ ಕಲ್ಸ್ವಾಮಿ ಆಶ್ರಮಕ್ಕೆ ಹೋಗಿರುವಳೆಂದು ತಿಳಿದು ಬಂತು.
ಅಷ್ಟರಲ್ಲಾಗಲೇ ಕೇರಳದ ಕಲ್ಸ್ವಾಮಿ ಮಹಾತ್ಮೆಯ ಕಥೆಗಳು ನಿಧಾನಕ್ಕೆ ಹಬ್ಬುತ್ತಿದ್ದವು. ಆನಂದನಿಗೆ ಕಲ್ಸ್ವಾಮಿಯ ಬಗ್ಗೆ ಮೊದಲಿನಿಂದಲೂ ತಾಶ್ಚಾರವೇ ಜೊತೆಗೆ ಈಗ ವೆಂಕಟನ ತಾಯಿ ಮತ್ತೆ ಅಲ್ಲಿಗೆ ಹೋದದ್ದು ಕೇಳಿ, ಇವನ ಕಥೆ ಬರೆಯುವ ಕೆಲಸಕ್ಕೆ ಅಡ್ಡಿ ಬಂದಂತಾಗಿ ಕಲ್ಸಾಮಿಗೆ ಮನಸೋ ಇಚ್ಛೆ ಬೈಗುಳ ನೀಡಿ ಫೋನಿಟ್ಟಾಗ ಆನಂದನ ತಾಯಿಗೆ ಗಾಬರಿಯಾಗಿತ್ತು.
ಮಕ್ಕಳ ಚಿತ್ರ ಮುಂದೂಡಿದ ಮೇಲೆ ಕಳೆದ ಮೂರು ಚಿತ್ರದ ಸತತ ಯಶಸ್ಸಿನ ನಂತರ ಆನಂದನಿಗೆ ಬಿಗ್ ಬಜೆಟ್ ಚಿತ್ರಕ್ಕೆ ನಿರ್ದೇಶನದ ಜವಾಬ್ದಾರಿ ಅರಸಿ ಬಂದಿತ್ತು. ಆನಂದ ಎಲ್ಲವನ್ನೂ ಮರೆತು ಚಿತ್ರೀಕರಣದಲ್ಲಿ ಮುಳುಗಿ ಹೋಗಿದ್ದ. ಸುಮಾರು ಎಂಟು ತಿಂಗಳ ಚಿತ್ರೀಕರಣದ ನಂತರ ಚಿತ್ರ ಬಿಡುಗಡೆಗೊಂಡಿತ್ತು . ಸೋಲು ಅಥವಾ ಗೆಲುವು ಯಾವಾಗಲಾದರೂ ಯಾವ ಪ್ರಮಾಣದಲ್ಲಾದರೂ ಒಮ್ಮೆಯೇ ಬಂದು ಅಪ್ಪಳಿಸಿಬಿಡಬಹುದು, ಮನುಷ್ಯ ಇದಕ್ಕೆ ಯಾವಾಗಲೂ ತಯಾರಿರಬೇಕು ಇಲ್ಲವಾದಲ್ಲಿ ಗೆಲುವು ಕೊಟ್ಟ ಖುಷಿಯನ್ನ ಅಪ್ಪಿಕೊಂಡವರಿಗೆ ಸೋಲು ಕೊಡುವ ನೋವನ್ನು ತಡೆಯಲು ಸಾಧ್ಯವಾಗುವುದಿಲ್ಲ.
ಪ್ರತಿ ಸಲದಂತೆ ಈ ಬಾರಿ ಯಶಸ್ಸು ಸಿಗದೆ ಚಿತ್ರಕ್ಕೆ ಕೆಟ್ಟ ವಿಮರ್ಶೆಗಳು ಕೇಳಿ ಬಂದು ಚಿತ್ರ ನೆಲ ಕಚ್ಚಿ ಹೋಗಿತ್ತು. ಆನಂದನಿಗೆ ಮೂರು ಚಿತ್ರಗಳ ಸತತ ಗೆಲುವಿನ ನಂತರ ಮೊದಲ ಭಾರೀ ಸೋಲು. ಆನಂದ ಈ ಸೋಲಿನ ನಂತರ ಬಹಳ ನೋವನುಭವಿಸಿದ್ದ. ಕಲ್ಸ್ವಾಮಿಗೆ ಬೈಗುಳ ನೀಡಿದ್ದೆನಾದರೂ ತನಗೆ ಮುಳ್ಳಾಯಿತೇ ಎಂದೊಮ್ಮೆ ಯೋಚಿಸಿ ನಂತರ ಮರೆತು ಮತ್ತೆರಡು ಚಿತ್ರಗಳು ಆಗಲೇ ಕೈನಲ್ಲಿದ್ದುದರಿಂದ ಈ ಬಾರಿ ಗೆಲ್ಲಲೇ ಬೇಕೆಂದು ಹಠ ಮಾಡಿ ಕೆಲಸ ಮಾಡಿದ್ದ.
ಆದರೆ ಮುಂದೆ ಬಿಡುಗಡೆ ಗೊಂಡ ಆ ಎರಡೂ ಚಿತ್ರಗಳು ಮಕಾಡೆ ಮಲಗಿದ್ದವು. ನಿರ್ಮಾಪಕರು ಆನಂದನ ಬಳಿ ಸುಳಿಯಲು ಹಿಂದೇಟಾಕುವಂತಾಗಿದ್ದರು. ಇದಾದ ನಂತರ ಕೈನಲ್ಲಿ ಕೆಲಸವಿಲ್ಲದೆ, ಆನಂದ ಹಿಂಸೆ ಅನುಭವಿಸಿದ್ದ. ಹೀಗೆ ಕೆಲಸ ಕಡಿಮೆಯಾದ್ದರಿಂದ ಮನೆಯಲ್ಲೇ ಅಭ್ಯಾಸ , ಓದಿನಲ್ಲಿ ಮಗ್ನನಾಗಿದ್ದ ಆನಂದನಿಗೆ ಒಂದಿನ ತನ್ನ ಮನೆಯ ಬಾಗಿಲ ಬಳಿ ಕಂಡದ್ದು ಅವನ ಮೊದಲ ಚಿತ್ರದ ನಿರ್ಮಾಪಕ, ಅಂಗಡಿ ಶಾಂತಪ್ಪನವರು.
ಬಂದವರೇ ಕೇರಳದ ಕಲ್ಸ್ವಾಮಿ ಮಹಾತ್ಮೆಯ ಚಿತ್ರವನ್ನು ಪ್ರಸ್ತಾಪಿಸಿದ್ದರು. ಅಂಗಡಿ ಶಾಂತಪ್ಪ , ಮಹಾನ್ ದೈವ ಭಕ್ತ ಅದರಲ್ಲೂ ಮೂರ್ನಾಲ್ಕು ವರ್ಷಗಳಿಂದ ಕಲ್ಸ್ವಾಮಿ ಆಶ್ರಮದ ಮಹಾ ಭಕ್ತನಾಗಿ ಬೆಳೆದಿದ್ದರು. ಕೋಟಿ ಕೋಟಿ ಹಣವನ್ನು ಆಶ್ರಮದ ಕೆಲಸಗಳಿಗೆ ಶಾಂತಪ್ಪನವರು ದಾನವಾಗಿ ನೀಡಿದ್ದರು. ಚಿತ್ರದ ಕಥೆಯನ್ನ ಆಗಲೇ ಆಶ್ರಮದ ಟ್ರಸ್ಟ್ ವತಿಯಿಂದ ನೀಡಲಾಗಿತ್ತು, ಇನ್ನೇನಿದ್ದರೂ ಆನಂದ ಚಿತ್ರ ನಿರ್ದೇಶಿಸಿ ಕೊಡುವುದಷ್ಟೇ ಬಾಕಿ .
ಆನಂದ ಶಾಂತಪ್ಪನವರ ಬಳಿ ಸಮಯ ಕೇಳಿ ಮುಂದಿನ ವಾರದೊಳಗಾಗಿ ತಿಳಿಸುತ್ತೇನೆಂದು ಅವರಿಗೆ ಊಟ ಉಪಚಾರದ ಸತ್ಕಾರ್ಯಗಳನ್ನು ಮಾಡಿ ಬೀಳ್ಕೊಟ್ಟಿದ್ದ . ಈ ಆರೇಳು ತಿಂಗಳು ಕೆಲಸವಿರದೆ, ಓಡಾಟವಿರದೆ ಆನಂದನ ಮನಸ್ಸು ಜಡಗಟ್ಟಿ ಹೋಗಿತ್ತು. ಆದ್ದರಿಂದ ತಿರುನೆಲ್ಲಿಯ ಬೆಟ್ಟಕ್ಕೆ ಭೇಟಿ ಕೊಟ್ಟರೆ ನೆಮ್ಮದಿಯೂ ಸಿಕ್ಕಂತಾಗುವುದು ಜೊತೆಗೆ ಚಿತ್ರದ ಸಿದ್ದತೆಯನ್ನು ನಡೆಸಬಹುದು ಎಂದು ಕಾರು ಈಚೆ ತೆಗೆದ.
ತಿರುನೆಲ್ಲಿಗೆ ಭೇಟಿ ನೀಡಿ ಸುಮಾರು ವರ್ಷಗಳೇ ಆಗಿ ಹೋಗಿವೆ, ರಸ್ತೆಯನ್ನು ಮರೆತು ಹೋಗಿದ್ದಾನೆ, ಜೊತೆಗೆ ಆಗ ಬುಡದಲ್ಲಿದ್ದ ದೇವಸ್ಥಾನ ಬಿಟ್ಟರೆ ಅಲ್ಲಿ ಯಾವುದೇ ಆಶ್ರಮಗಳಿರಲಿಲ್ಲ. ಶಾಂತಪ್ಪನವರು ಕೊಟ್ಟಿದ್ದ ಆ ಟ್ರಸ್ಟಿನ ಕಥೆಯ ಪ್ರಕಾರ ಹೇಳುವುದಾದರೆ ಅವನು ಕಿರುಚಿತ್ರ ಮುಗಿಸಿ ಬಂದು ಎರಡು ವರ್ಷವಾದ ಮೇಲೆ ಆಶ್ರಮ ಶುರುವಾಗಿದೆ. ಈಗಾಗಲೇ , ಕಲ್ಸ್ವಾಮಿಯ ಕೀರ್ತಿ ಎಲ್ಲೆಡೆ ಹಬ್ಬಿ ಆ ಆಶ್ರಮದ ಬಗ್ಗೆ ಪತ್ರಿಕೆಗಳಲ್ಲೂ , ಟಿ. ವಿ ಮಾಧ್ಯಮದಲ್ಲೂ ಬಹಳ ನೋಡಿದ್ದ.
ಇದೆಲ್ಲ ಯೋಚಿಸುತ್ತಾ ಇನ್ನೊಂದು ಘಂಟೆಗೆ ತಲುಪಿದ್ದು ಮಹಾವಿಷ್ಣು ದೇವಸ್ಥಾನ. ದೂರದಲ್ಲಿ ಪಾಪನಾಶಿನಿ ಹರಿಯುವುದು ಕೇಳಿಸುತ್ತಿದೆ. ಕಾರನ್ನು ಇಳಿದವನೆ ನೇರ ಹೋಗಿದ್ದು ಪೂಜಾರಿಯವರನ್ನು ಕಾಣಲು; ಪೂಜೆ ನಡೆದಿರುವುದು ಗೊತ್ತಾಯಿತು. ದೇವಸ್ಥಾನದಲ್ಲಿ ಅವನು ಅಂದು ಕಂಡಿದ್ದ ಪ್ರಶಾಂತತೆ ಹಾಗೆಯೇ ಇದೆ , ಹತ್ತು ನಿಮಿಷ ಕುಳಿತು ಧ್ಯಾನಿಸಿ ನಂತರ ಎದ್ದು ನಾಲ್ಕು ಸುತ್ತು ಹೊಡೆದವನಿಗೆ ಸ್ವಲ್ಪ ದೂರದಲ್ಲಿ ಕಂಡದ್ದು ವಯಸ್ಸಾದ ಅಜ್ಜಿಯೊಬ್ಬಳು ಪೊರಕೆ ಹಿಡಿದು ಮರದ ಎಲೆ ಗುಡಿಸುತ್ತಿರುವುದು. ಅವರ ಬಳಿ ಕೇಳಿದ್ದಕ್ಕೆ ಅಜ್ಜಿ ಮಾರು ದೂರದಲ್ಲಿದ್ದ ಮನೆಗೆ ಬೆಟ್ಟು ಮಾಡಿದಳು.
ಬರಬರನೆ ನಡೆದು ಹೋದವನಿಗೆ ಕಂಡದ್ದು ಮೂಲೆಯಲ್ಲಿ ಕುಳಿತಿದ್ದ ಪೂಜಾರಿ. ಮಾತನಾಡಿಸಿದ ಸ್ವಾಮೀ, ನಮಸ್ಕಾರ. ನನ್ನ ನೆನಪಿದೆಯೇ ? ಪೂಜಾರಿ ಮಾತನಾಡಲಿಲ್ಲ ಬರೀ ತಲೆಯಾಡಿಸಿದರು . ಮತ್ತದೇ ಪ್ರಶ್ನೆಯನ್ನು ಕೇಳಿದ, ಪೂಜಾರಿ ತಲೆಯಾಡಿಸಿದ್ದು ಬಿಟ್ಟರೆ ಮಾತಿಲ್ಲ. ಮುಂದುವರೆಯುತ್ತ ಮತ್ತಷ್ಟು ಪ್ರಶ್ನೆಗಳಿಗೆ ಸಿಕ್ಕ ಉತ್ತರ ಮೌನವಷ್ಟೇ. ಆನಂದನಿಗೆ ದಾರಿಯಿರದೆ ಮೇಲಿರುವ ಆಶ್ರಮವನ್ನು ನೋಡೋಣವೆಂದು ಹೊರಟ. ಬೆಟ್ಟದ ಮೇಲಿನವರೆಗೆ ಪೂರ್ಣ ಡಾಂಬರು ರಸ್ತೆ ಇದ್ದು ಒಂದು ಘಂಟೆಯ ತಿರುವು ರಸ್ತೆಗಳನ್ನು ಸುತ್ತುತ್ತಾ ಮೇಲೆ ತಲುಪಿದ್ದ.
ಆನಂದನಿಗೆ ಈ ಜಾಗವೇ ಮರೆತು ಹೋದಂತಿದೆ, ಕಾರನ್ನು ಅಲ್ಲಿಯೇ ನಿಲ್ಲಿಸಿ ನಡೆದು ಆಶ್ರಮದ ಗೇಟನ್ನು ತೆಗೆದವನಿಗೆ ಕಂಡದ್ದು ಬಲು ವಿಸ್ತಾರ ಜಾಗ , ಅಲ್ಲಲ್ಲೇ ಬೆಳೆದು ನಿಂತಿದ್ದ ಬೃಹತ್ ಮರಗಳು. ಚಿತ್ರೀಕರಣ ಮಾಡಿದ್ದ ಬೆಟ್ಟ ಅವನು ನಿಂತಿರುವುದೇ ಎಂದು ಆನಂದನಿಗೆ ಭಾಸವಾದಂತೆ ಸುತ್ತಲೂ ಹುಡುಕಾಡತೊಡಗಿದ. ನೂರಾರು ಕೋಟಿಗಳಷ್ಟು ಹಣ ಹೂಡಿ ಆಶ್ರಮ ಕಟ್ಟಿರುವುದು ಕಾಣುತ್ತಿದೆ, ಸಮುದಾಯ ಭವನಗಳು, ಎತ್ತರದ ದೇವಸ್ಥಾನ ಬೆಳೆದು ನಿಂತಿದೆ, ಆದರೆ ಇವನು ಚಿತ್ರೀಕರಣ ಮಾಡಿದ್ದ ಜಾಗ ಮಾತ್ರ ಕಂಡು ಹಿಡಿಯಲಾಗುತ್ತಿಲ್ಲ.
ಹಾಗೆಯೇ ಹುಡುಕುತ್ತಾ ಮುನ್ನಡೆದ , ಸ್ವಲ್ಪ ದೂರದಲ್ಲೇ ಟಿಕೇಟ್ ಕೊಳ್ಳಲು ನೂರಾರು ಜನ ಸಾಲಿನಲ್ಲಿ ನಿಂತು ಕಾಯ್ತುತ್ತಿದ್ದಾರೆ. ಶಾಂತಪ್ಪನವರಿಗೆ ಆನಂದ ಆಶ್ರಮದಲ್ಲಿರುವದು ಗೊತ್ತಾದೊಡನೆ ದೇವಸ್ಥಾನದ ಟ್ರಸ್ಟಿನ ಸದಸ್ಯರಿಗೆ ಫೋನಾಯಿಸಿ ಆನಂದನಿಗೆ ಎಲ್ಲ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದ . ಸಾಮಾನ್ಯ ಜನ ಸಾಲಿನಲ್ಲಿ ನಿಂತರೆ ಆನಂದನಿಗೆ ಇಬ್ಬರು ಸೆಕ್ಯೂರಿಟಿ ಗಾರ್ಡ್ ಗಳು ದಾರಿ ತೋರುತ್ತ ಮುನ್ನಡೆಸುತ್ತಿದ್ದರು. ಆನಂದನಿಗೆ ಇದರಿಂದ ಕಸಿವಿಸಿಯಾದಂತಾಯಿತು ಕಾರಣ ಸಾಲಿನಲ್ಲಿ ನಿಂತಿದ್ದ ಸಾಮಾನ್ಯರನ್ನು ಎದುರಿಸಲಾಗಲಿಲ್ಲ.
ಹಾಗೆ ನಡೆಯುತ್ತಾ ಓರೆಗಣ್ಣಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ಜನರ ಮುಖ ಒಮ್ಮೆ ನೋಡಿದ , ರೈಲಿನಲ್ಲಿ ಸಿಕ್ಕಿದ್ದ ಶಂಕ್ರಣ್ಣ ಮತ್ತು ಅವನ ಮಗಳು, ಮೆಜೆಸ್ಟಿಕ್ ನಲ್ಲಿ ಸಿಕ್ಕಿದ್ದ ದಂಪತಿಗಳು , ವೆಂಕಟನ ತಾಯಿ ಸಾಲಿನಿಂದ ಎದ್ದು ಬಂದು ಇವನಿಗೆ ಗುದ್ದಿದಂತಾಯ್ತು . ಸ್ವಲ್ಪ ಮುಂದೆ ಹೋಗಿ ಅಲ್ಲಿಂದ ಎಡಕ್ಕೆ ತಿರುಗಿದವನಿಗೆ ಕಂಡದ್ದು ಕಲ್ಲುಗಳ ರಾಶಿ , ಅಲ್ಲಲ್ಲಿ ಜನ ಕುಳಿತು ಕಲ್ಲುಗಳನ್ನು ಜೋಡಿಸುತ್ತಿದ್ದಾರೆ. ಕೆಲವರಾಗಲೇ ಅವರು ಜೋಡಿಸಿದ ಕಲ್ಲುಗಳ ಗುಡ್ಡೆಯ ಮುಂದೆ ಎದ್ದು ಕಾಣುವಂತೆ ಹೆಸರುಗಳನ್ನೂ ಹಾಕಿಸಿದ್ದಾರೆ.

ಅಲ್ಲೊಂದು ಹೊಳೆಯುತ್ತಿರುವ ನಾಲ್ಕು ಕಲ್ಲುಗಳ ಗುಡ್ಡ ಕಂಡಿತು. ಅಲ್ಲಿ ಬಳಸಿದ್ದ ಕಲ್ಲುಗಳು ಬಹಳ ವಿಶಿಷ್ಟವಾಗಿವೆ ಬೋರ್ಡಿನ ಮೇಲೆ ಕನ್ನಡದಲ್ಲಿಯೂ ದೊಡ್ಡದಾಗಿ ಬರೆದಿತ್ತು ಶ್ರೀ ಕಂಠೇಶ್ವರ, ಉಪ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ .
ಮುಂದೆ ಹೋದಂತೆ ಕೆಲವರು ಕಲ್ಲುಗಳನ್ನು ತಲೆ ಮೇಲೆ ಹೊತ್ತು ಅಲ್ಲಿದ್ದ ಅರಳೀಮರವನ್ನು ಸುತ್ತುತ್ತಿದ್ದಾರೆ .ಅರಳೀಮರ ನೋಡಿದೊಡನೆ ಅವನಿಗೆ ಎಲ್ಲವೂ ನೆನಪಾಯ್ತು . ಅರಳೀಮರದ ಸುತ್ತ ಗೋಲಾಕಾರದಲ್ಲಿ ವಿಶಿಷ್ಟ ಹಗ್ಗಗಳನ್ನು ಬಳಸಿ ಯಾರಿಗೂ ಹೋಗದಂತೆ ನಿರ್ಬಂಧಿಸಲಾಗಿದೆ .
ಮರದ ಸುತ್ತ ಕಲ್ಲುಗಳನ್ನು ಜೋಡಿಸಿದ್ದಾರೆ ಆದರೆ ಕಲ್ಲುಗಳು ಅಂತಹ ವಿಶಿಷ್ಟವೇನಿಲ್ಲ , ಅವುಗಳನ್ನು ಜೋಡಿಸಿ ಬಹಳಷ್ಟು ವರ್ಷಗಳಾಗಿರುವಂತಿದೆ. ಆನಂದ ಅಲ್ಲಿಂದ ವಾಪಸ್ ತಿರುಗಿ ಕಾರಿನ ಬಳಿ ಓಡಿದ.
ಆನಂದ ಓಡಿದವನೇ ಕಾರಿನಲ್ಲಿದ್ದ ಲ್ಯಾಪ್ ಟಾಪ್ ಹೊತ್ತಿಸಿ ಹಳೆಯ ವಿಡಿಯೋ ತುಣುಕುಗಳಿಗೆ ತಡಕಾಡಿದ . ಸ್ವಲ್ಪ ಸಮಯ ಹುಡುಕಿದ ನಂತರ ಆ ತುಣುಕುಗಳು ಕಂಡವು. ಅಂದರೆ ಹತ್ತು ವರ್ಷಗಳಿಂದೆ ಈ ಜಾಗ ಸೃಷ್ಠಿಸಿದ್ದುದು ಇವನೇ . ತನ್ನ ಕಿರುಚಿತ್ರಕ್ಕೆಂದು ಅಲೆದು , ಬೆಟ್ಟ ಹತ್ತಿ ಅರಳೀಮರವೊಂದನ್ನು ಗಮನಿಸಿ ಅಲ್ಲಿಯೇ ಮರದ ಕೆಳಗೆ ಒಂದೈವತ್ತು ಕಡೆ ನಾಲ್ಕು ಕಲ್ಲುಗಳನ್ನು ಜೋಡಿಸಿ ಒಂದು ಶಾಟ್ ಚಿತ್ರಿಸಿಕೊಡಿದ್ದ.
ಈ ಕಲ್ಲಿನ ಉಪಾಯ ಅವನಿಗೆ ಯಾವುದೋ ಇಂಗ್ಲೀಷ್ ಅಂಕಣದಲ್ಲಿ ರಾಕ್ ಬ್ಯಾಲೆನ್ಸಿಂಗ್ ಆರ್ಟ್(ಕಲ್ಲು ಜೋಡಿಸುವ ಕಲೆ) ಬಗ್ಗೆ ಓದುವಾಗ ಬಹಳ ಚೆಂದವೆನಿಸಿ ಚಿತ್ರೀಕರಣಕ್ಕೆಂದು ಅದನ್ನು ಅಲ್ಲಿ ಸೃಷ್ಟಿಸಿಕೊಂಡಿದ್ದ. ಆ ದಿನದ ಚಿತ್ರೀಕರಣ ಮುಗಿದಾಗ ಸಂಜೆ ಆಗಲೇ ಘಂಟೆ ಆರಾಗಿತ್ತು . ಅಂದಿನ ಚಿತ್ರೀಕರಣದಲ್ಲಿ ಹಾಡಿಯ ಭೋಗಯ್ಯನ ಮಕ್ಕಳು ಕೂಡ ಸಹಕರಿಸಿದ್ದರು , ಮುಗಿದ ತಕ್ಷಣ ಅಲ್ಲಿ ಜೋಡಿಸಿದ್ದ ಕಲ್ಲುಗಳನ್ನು ಹಾಗೆಯೇ ಬಿಟ್ಟು ಓಡಿ ಬಂದಿದ್ದರು .
ಅರಳೀಮರದ ಕೆಳಗೆ ಒಂದು ನಾಗರ ಕಲ್ಲು ಇದ್ದಿದ್ದನ್ನು ಆನಂದ ಅಂದೂ ಗಮನಿಸಿದ್ದ , ಈಗಲೂ ಅದು ಅಲ್ಲಿಯೇ ಉಳಿದಿದೆ. ಆದರೆ ಅದಕ್ಕೆ ಸಿಂಗಾರ ಬಹಳ ಜೋರಾಗಿ ಮಾಡಿದ್ದಾರೆ . ಆನಂದನಿಗೆ ಏನೂ ಅರ್ಥವಾಗದೇ ಯಾರನ್ನೂ ಕೇಳಲಾಗದೇ ಹಾಡಿಯ ಕಡೆ ಓಡಿದ . ಬೆಟ್ಟದ ತಪ್ಪಲಿಗೆ ಇಳಿದು ನೋಡಿದಾಗ ಹಾಡಿಯ ಕುರುಹುಗಳು ಯಾವುವೂ ಉಳಿದಿಲ್ಲ ಅಂದರೆ ಹಾಡಿಯೂ ಖಾಲಿಯಾಗಿದೆ . ಆನಂದನ ತಮ್ಮನ ಪರಿಚಯದವರಿಂದ ವಿಚಾರಿಸಿದಾಗ ಅಲ್ಲಿದ್ದ ಹಾಡಿಯ ಅಷ್ಟೂ ಜನರನ್ನು ಬೇರೆ ಜಿಲ್ಲೆಗೆ ವರ್ಗಾಯಿಸಲಾಗಿತ್ತು . ಆನಂದ ತಡ ಮಾಡಲಿಲ್ಲ , ಕಾರನ್ನು ತಿರುಗಿಸಿದವನೇ ಹಾಡಿ ಜನರನ್ನು ಹುಡುಕಿ ಹೊರಟ .
ನಾಲ್ಕು ಘಂಟೆ ಒಂದೇ ಸಮನೆ ಡ್ರೈವ್ ಮಾಡುತ್ತಾ , ಕಲ್ಪೆಟ್ಟ ಜಿಲ್ಲೆಯನ್ನು ಪಾರಿಕೊಂಡು ಹೋದಮೇಲೆ ಹಾಡಿಯ ಜನರಿಗೆ ನೀಡಿದ್ದ ಕಾಲೋನಿಯನ್ನು ಮುಟ್ಟಿದ . ಇವನನ್ನು ನೋಡಿ ಯಾರೂ ಕಂಡು ಹಿಡಿಯಲಿಲ್ಲ. ಕಂಡು ಹಿಡಿದವರು ಯಾರೂ ಇವನಿಗೆ ಹೆಚ್ಚಿನದನ್ನು ಹೇಳಲಿಲ್ಲ. ಕಾರನ್ನತ್ತಿ ವಾಪಸಾಗುತ್ತಿರಬೇಕಾದರೆ ಊರಿನ ಹೊರವಲಯದಲ್ಲಿ ಒಬ್ಬ ಮುದುಕ ನಡೆದು ಹೋಗುತ್ತಿದ್ದ , ಮೈಮೇಲೆ ಬಟ್ಟೆ ಹರಿದಿದೆ ತಲೆ ಕೂದಲು ಕೆದರಿದೆ, ಹತ್ತಿರ ಹೋದಂತೆ ಆನಂದ ಅವನನ್ನು ಗಮನಿಸಿದ. ಪರಿಚಯದವನೇ ಅನಿಸಿದ್ದರಿಂದ ಕಾರನ್ನು ಬದಿಗೆ ನಿಲ್ಲಿಸಿ, ಗಮನಹರಿಸಿದಾಗ ತಿಳಿದದ್ದು ಅವರು ಬೇರೆ ಯಾರಲ್ಲ, ತಾನು ಹಾಡಿಯಲ್ಲಿ ತಂಗಿದ್ದ ಮನೆಯೊಡೆಯ ಭೋಗಯ್ಯ ಎಂದು.
ಕಾರನ್ನುಇಳಿದು ಅವನ ಜೊತೆ ಮಾತನಾಡಿದ ಬಳಿಕ ಪ್ರೀತಿಯಿಂದ ಮುದುಕನನ್ನು ಹತ್ತಿಸಿಕೊಂಡು ಮುಂದಿನ ಟೌನ್ ನಲ್ಲಿ ಹೋಟೆಲೊಂದರ ಮುಂದೆ ನಿಲ್ಲಿಸಿ ಇವನಿಗೆ ಊಟ ಕೊಡಿಸಿ ನಂತರ ಕೇಳಿದ ಕಥೆಗೆ ಬೆಚ್ಚಿ ಬಿದ್ದಿದ್ದ. ಇವರು ಬೆಟ್ಟದ ಮೇಲೆ ಚಿತ್ರೀಕರಣ ಮುಗಿಸಿ ಬಂದಾದ ನಂತರ ಬೆಟ್ಟದ ಮೇಲೆ ಏಕಾಂತ ಬಯಸಿ ಸುತ್ತಮುತ್ತಲ ಬಹಳಷ್ಟು ಪ್ರೇಮಿಗಳು ಹೋಗುತ್ತಿದುದು ಹೊಸದೇನಲ್ಲ. ಆದರೆ ಮೇಲೆ ಹೋಗಿದ್ದ ಪ್ರೇಮಿಗಳಲ್ಲೊಬ್ಬರು ಆ ನಾಗರಕಲ್ಲಿಗೆ ಪೂಜೆ ಸಲ್ಲಿಸಿ ಬಂದಿದ್ದರು ನಂತರ ಹೋದವರೆಲ್ಲರೂ ಪೂಜೆ ಸಲ್ಲಿಸಿಲು ಶುರುಮಾಡಿ ಬಂದವರೆಲ್ಲ ನಾಲ್ಕು ಕಲ್ಲು ಜೋಡಿಸಿ ಬರುವುದನ್ನು ವಾಡಿಕೆ ಮಾಡಿಕೊಂಡಿದ್ದರು .
ತಿರುನೆಲ್ಲಿ ಬೆಟ್ಟದ ಬುಡದಲ್ಲಿದ್ದ ಮಹಾ ವಿಷ್ಣುವಿನ ದೇವಸ್ಥಾನದಲ್ಲಿ ಕಸ ಹೊಡೆದುಕೊಂಡಿದ್ದ ಕೆಲಸಗಾರನ ಮಗ ನಂಜುಂಡ ಹಣ ಮಾಡುವ ಉದ್ದೇಶದಿಂದ, ಶಾಸ್ತ್ರ ಹೇಳುವನೊಬ್ಬನನ್ನು ಅರಳೀಮರದ ಬುಡದಲ್ಲಿ ತಂದು ಕೂರಿಸಿದ್ದ. ಕ್ರಮೇಣ ಆ ಶಾಸ್ತ್ರಿ ಸಾಮಾನ್ಯ ಶಾಸ್ತ್ರ ಹೇಳುವನಿಂದ ಕಲ್ಸ್ವಾಮಿ ಮಹಾತ್ಮನಾಗಿ ಬೆಳೆದು ಅರಳೀಮರದ ಬುಡಕ್ಕೆ ಹೋದ ಜನರ ಇಚ್ಛೆಗಳು ಕಾಕತಾಳೀಯವಾಗಿ ಪೂರೈಕೆಗೊಂಡಿದ್ದರಿಂದ ಅದೇ ಘಟನೆಗಳನ್ನು ಕಲ್ಸ್ವಾಮಿ ಮಹಾತ್ಮೆಯೆಂದು ಹಬ್ಬಿಸಿ ಬಹಳ ಪ್ರಚಾರ ಗಿಟ್ಟಿಸಿಕೊಂಡಿದ್ದು ನಂಜುಂಡನ ಕಲೆಯೆನ್ನಬಹುದು .
ಅದು ಕ್ರಮೇಣ ಬೃಹತ್ ಆಶ್ರಮವಾಗಿ, ದೇವಸ್ಥಾನವಾಗಿ, ರಾಜಕಾರಣಿಗಳು, ಸಿನಿಮಾ ತಾರೆಯರು ಬರಲು ಶುರು ಮಾಡಿದ್ದರು .ಇದರ ಹಿಂದಿನ ಸತ್ಯ ಗೊತ್ತಿದ್ದ ಭೋಗಯ್ಯನ ಮನೆಯವರು ಇದಕ್ಕೆ ವಿರೋಧಿಸಿದಾಗ ಭೋಗಯ್ಯನ ಮನೆಯವರನ್ನೆಲ್ಲ ಅಪಹರಿಸಿ ಇವನನ್ನು ಬಡಿದು ಬಳಲಿಸಿ ಹುಚ್ಚನ ಪಟ್ಟ ಕಟ್ಟಿ ಊರೂರು ಅಲೆಯುವಂತೆ ಮಾಡಿದ್ದರು .ಹಣ ವ್ಯಯಿಸಿ ಕೋರ್ಟು ಕಛೇರಿಗಳಲ್ಲಿ ಕೇಸುಗಳನ್ನು ಗೆದ್ದು ಹಾಡಿಯ ಜನರ ಹಕ್ಕು ಕಿತ್ತುಕೊಂಡು ಅಲ್ಲಿದ್ದವರನ್ನು ಸಂಪೂರ್ಣವಾಗಿ ವರ್ಗಾಯಿಸಿದ್ದರು.
ನಂತರ ಸಾವಿರಾರು ಭಕ್ತಾದಿಗಳು ಹರಿದು ಬಂದು, ಹಣ ದೇಶದ ಮೂಲೆ ಮೂಲೆಯಿಂದ ಹರಿದು ಬಂದಿತ್ತು . ಆನಂದನಿಗೆ ಕಣ್ಣೀರು ಉಕ್ಕಿ ಹರಿಯುತ್ತಿತ್ತು. ಇವನು ಚಿತ್ರೀಕರಣಕ್ಕಾಗಿ ಮಾಡಿದ್ದ ರಾಕ್ ಬ್ಯಾಲೆನ್ಸಿಂಗ್ ಆರ್ಟ್ ಸಾವಿರಾರು ಜನರನ್ನು ಮೂಢರನ್ನಾಗಿ ಮಾಡುವುದೆಂದು ಕನಸಿನಲ್ಲಿಯೂ ಎಣಿಸಿರಲಿಲ್ಲ . ಇನ್ನು ತಡಮಾಡದೆ ಭೋಗಯ್ಯನನ್ನು ಹತ್ತಿಸಿಕೊಂಡು ಹೊರಟು ಬೆಂಗಳೂರನ್ನು ತಲುಪಿ ತನ್ನ ವಿಡೀಯೋ ತುಣುಕುಗಳನ್ನು ತೋರಿಸಿ ಭೋಗಯ್ಯನನ್ನು ಪರಿಚಯ ಮಾಡಿಕೊಟ್ಟಾಗ ಅಂಗಡಿ ಶಾಂತಪ್ಪನವರಿಗೆ ಕೋಪ ನೆತ್ತಿಗೇರಿತ್ತು .
ಕಾರಣ ಶಾಂತಪ್ಪನವರಂತಹ ನೂರಾರು ಶ್ರೀಮಂತರು ಇದರ ಬಲೆಗೆ ಬಿದ್ದು ಮರುಳರಾಗಿದ್ದರು . ಇದರಿಂದ ರೊಚ್ಚಿಗೆದ್ದ ಶಾಂತಪ್ಪನವರು, ಸತ್ಯವನ್ನು ಬಯಲಿಗೆಳೆಯಲು ಆನಂದನಿಗೆ ಅದೇ ಚಿತ್ರವನ್ನು ಮುಂದುವರೆಸಲು ಹೇಳಿದ್ದರು. ಆದರೆ ಚಿತ್ರಕ್ಕೆ ಕಥೆಯನ್ನು ಆನಂದನಿಗೆ ಬರೆಯಲು ಹೇಳಿದ್ದರು . ಆನಂದ ಚಿತ್ರಕ್ಕೆ ಕಲ್ಸ್ವಾಮಿ ಮಹಾತ್ಮೆ!? ಎಂದೇ ಹೆಸರಿಟ್ಟು ಕಲ್ಸ್ವಾಮಿ ಮಹಾತ್ಮೆಯ ಮೂಲಕ ಹಬ್ಬಿದ್ದ ಕಥೆಗಳನ್ನೇ ಚಿತ್ರಕಥೆಗೆ ಸೇರಿಸಿ ಕೊನೆಯಲ್ಲಿ ತಾನು ಚಿತ್ರಿಸಿಕೊಂಡು ಬಂದಿದ್ದ ವಿಡಿಯೊ ತುಣುಕುಗಳನ್ನು ಸೇರಿಸಿ ಕ್ಲೈಮ್ಯಾಕ್ಸ್ ನಲ್ಲಿ ಕಲ್ಸ್ವಾಮಿ ಜೊತೆಗೆ ನಂಜುಂಡನ ಮಹಾತ್ಮೆಯನ್ನು ಸಾಕ್ಷಿ ಸಮೇತ ಚಿತ್ರಿಸಿ ಸಿನಿಮಾವೊಂದನ್ನು ತಯಾರಿಸಿದ್ದ.
ದೇವರ ಸಿನಿಮಾ ಅದರಲ್ಲೂ ಕಲ್ಸ್ವಾಮಿ ಸಿನಿಮಾವನ್ನು ನೋಡಲು ಮೊದಲ ದಿನವೇ ಜನರು ಚಿತ್ರಮಂದಿರಗಳಿಗೆ ನೂಕು ನುಗ್ಗಲಾಗಿ ಬಂದಿದ್ದರು . ಚಿತ್ರ ಬಿಡುಗಡೆಯಾಗಿ ಮೂರೇ ದಿನಕ್ಕೆ ಸಿನಿಮಾವನ್ನು ಸರ್ಕಾರ ನಿಷೇಧಿಸಿತ್ತು. ಆದರೆ ಆನಂದನ ಕೀರ್ತಿಯೂ , ಅಂಗಡಿ ಶಾಂತಪ್ಪನವರ ನಿರ್ಮಾಪಕ ಬಲವೂ ಸೇರಿ ನಡೆಸಿದ ಹೋರಾಟಕ್ಕೆ ಸಾಮಾನ್ಯ ಜನರ ಜೊತೆ ಚಿತ್ರರಂಗ ಬೆನ್ನೆಲುಬಾಗಿ ನಿಂತಿತ್ತು . ಇದರಿಂದ ಸರ್ಕಾರ ಮಣಿಯದೆ ಬೇರೆ ದಾರಿಯಿರಲಿಲ್ಲ.
ಚಿತ್ರ ಮರು ಬಿಡುಗಡೆಗೊಂಡಿತ್ತು. ಆನಂದ ವಾರವಾದ ನಂತರ ಮೆಜೆಸ್ಟಿಕ್ ನ ಸಂತೋಷ್ ಥಿಯೇಟರ್ ಗೆ ಭೇಟಿ ನೀಡುವ ಸಲುವಾಗಿ ತನ್ನ ಕಾರಿನಲ್ಲಿ ಕಾರ್ಪೊರೇಷನ್ ಸಿಗ್ನಲಿನಲ್ಲಿ ಕಾಯುತ್ತಿದ್ದ . ಅಲ್ಲೇ ಮುಂದೆ ಸರ್ಕಲ್ ನಲ್ಲಿ ಯಾವುದೊ ಸಂಘದವರು ಗಲಾಟೆ ಮಾಡುತ್ತಾ ವಾಹನಗಳನ್ನು ತಡೆಗಟ್ಟಿದ್ದರು . ಅವರನ್ನು ನೋಡಲು ತನ್ನ ಕಾರಿನ ಕಿಟಕಿಯಿಂದ ತಲೆ ಹೊರಹಾಕಿದ . ಆ ಕ್ಷಣ ದೂರದಿಂದ ಕಲ್ಲೊಂದು ತೂರಿ ಬರುತ್ತಿರುವುದು ಕಾಣಿಸಿತು , ಆನಂದ ಒಮ್ಮೆಲೇ ತಲೆ ಕಾರಿನೊಳಗೆ ಎಳೆದುಕೊಂಡ, ಕಲ್ಲು ತನ್ನ ಕಾರಿನ ಮೇಲಿನಂದಲೇ ಹಾಯುತ್ತಾ ಮುಂದೆ ಹೋಗಿ ಹೊಡೆದದ್ದು ವರ್ಷದ ಹಿಂದೆ ಸ್ಥಾಪಿತವಾಗಿದ್ದ ಕಲ್ಸ್ವಾಮಿ ಪ್ರತಿಮೆಗೆ !

ಗಮನಿಸಬೇಕಾದದ್ದು : ಕಳೆದ ಬಾರಿ ನವೆಂಬರ್ ನಲ್ಲಿ ಹೋದಾಗ ತಿರುನೆಲ್ಲಿ ಬೆಟ್ಟ ಹಸಿರಿನಿಂದ ಕಂಗೊಳಿಸುತ್ತಿತ್ತು. ಅಲ್ಲಿರುವ ವಿಷ್ಣು ದೇವಸ್ಥಾನದ ಹಿಂದಿನ ಪರ್ವತಗಳು ಕಣ್ಣಿಗೆ ಹಬ್ಬ ನೀಡಿದ್ದವು. ಪಾಪನಾಶಿನಿ ಕೂಡ ಅಲ್ಲಿ ಬಹಳ ಶುಭ್ರವಾಗಿ ಹರಿಯುತ್ತಿತ್ತು. ಪಾಪನಾಶಿನಿ ನದಿಯ ಜಾಡು ಹಿಡಿದು ಬೆಟ್ಟ ಹತ್ತುತ್ತಾ ಮುಂದೆ ಹೋಗಿದ್ದೆವು.
ಕೊನೆಗೆ ಅಲ್ಲೊಂದು ಕೊಳ ಸಿಕ್ಕಿ ಅಲ್ಲಿಯೇ ವಿಶ್ರಾಂತಿ ತೆಗೆದುಕೊಂಡು ವಾಪಸ್ ಇಳಿಯುವಾಗ ಫೋಟೋಗಳನ್ನು ಕ್ಲಿಕ್ಕಿಸಲು ನದಿಯ ಬದಿಯಲ್ಲಿ ಸುತ್ತಾಡಿದ್ದೆ. ದಾರಿಯಿಂದ ಸ್ವಲ್ಪ ಕಾಡಿನೊಳಗೆ ನುಗ್ಗಿದಾಗ ಅಲ್ಲೊಂದು ಸಣ್ಣ ದೇವಸ್ಥಾನದ ಸುತ್ತ ನೂರಾರು ಕಡೆ ಕಲ್ಲು ಜೋಡಿಸಿದ್ದರು. ಸುತ್ತಲೂ ನೋಡಿದರೆ ಯಾರೂ ಕಾಣ ಸಿಗಲಿಲ್ಲ, ಬಹಳ ದೂರದವರೆಗೂ ಹೋದ ಮೇಲೆ ಅಲ್ಲೊಂದು ಹೆಂಗಸು ಕಂಡಾಗ ಕನ್ನಡದಲ್ಲೇ ಕೇಳಿದ್ದಕ್ಕೆ ಅವರ ಬಾಯಲ್ಲಿ ಬಂದ ಮೊದಲ ಪದ ಪ್ರಯೋಜನ ಇಲ್ಲ (ಮಲಯಾಳಂ ಶೈಲಿಯಲ್ಲಿ ಓದಿಕೊಳ್ಳಿ ).
ನಂತರ ಒಂದೆರಡು ನಿಮಿಷ ಹುರುಳಿ ಕಾಳುರಿದಂತೆ ಮಾತುದುರಿಸಿದ್ದರು . ಅರ್ಥವಾಗದೆ ಅಲ್ಲಿಯೇ ಇದ್ದ ಇನ್ನೊಬ್ಬರನ್ನ ಕೇಳಿ ಅವರು ಅರ್ಧ ಕನ್ನಡದಲ್ಲಿ ವಿವರಿಸಿದಾಗ ತಿಳಿದದ್ದು ನಮಗೆಲ್ಲಾ ನಗು ತರಿಸಿತ್ತು. ಕೆಲವು ತಿಂಗಳುಗಳಿಂದೆ ಸಿನಿಮಾ ತಂಡವೊಂದು ಬಂದು ಹೀಗೆ ಕೆಲವು ಕಡೆ ಕಲ್ಲನ್ನು ಜೋಡಿಸಿಕೊಂಡು ಚಿತ್ರೀಕರಣ ಮಾಡಿ ಬಿಟ್ಟುಹೋದ ಮೇಲೆ ಬಂದ ಜನರೆಲ್ಲಾ ಕಲ್ಲು ಜೋಡಿಸುವುದನ್ನು ಮುಂದುವರೆಸಿ ಇಂದು ನೂರಾರು ಗುಡ್ಡೆಗಳಾಗಿವೆ .
ಈ ನೂರಾರು ಕಲ್ಲಿನ ಗುಡ್ಡೆಗಳೇ ಈ ಕಾಲ್ಪನಿಕ ಕಥೆಯ ಮೂಲ ಎನ್ನುವುದನ್ನು ಬಿಟ್ಟರೆ ಈ ಕಥೆ ಯಾವುದೇ ವ್ಯಕ್ತಿಗೆ ಅಥವಾ ಸ್ಥಳಕ್ಕೆ ಸಂಬಂಧಿಸಿಲ್ಲ. ಈ ಕಥೆಗೂ , ಪಾಪನಾಶಿನಿ ನದಿಗೂ ಮತ್ತು ತಿರುನೆಲ್ಲಿಯಲ್ಲಿರುವ ಮಹಾವಿಷ್ಣು ದೇವಸ್ಥಾನಕ್ಕೂ ಸಂಬಂಧವಿರುವುದಿಲ್ಲ. ಕಥೆ ಹೆಣೆಯುವುದಕ್ಕೆ ಮಾತ್ರ ಜಾಗಗಳನ್ನು, ವ್ಯಕ್ತಿಗಳನ್ನು ಬಳಸಿಕೊಳ್ಳಲಾಗಿರುವುದು ಕಾಕತಾಳೀಯವಷ್ಟೇ .

‍ಲೇಖಕರು

January 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: