1
ಇಂದಿಗೂ ನಾಗರಹೊಳೆ ಅಭಯಾರಣ್ಯ ಅತಿ ಹೆಚ್ಚು ಹುಲಿಗಳನ್ನು ಹೊಂದಿದ್ದು ವಿಶ್ವದಲ್ಲೇ ಪ್ರಸಿದ್ಧಿ ಹೊಂದಿದೆ. ಹುಲಿ ಸಂರಕ್ಷಣಾ ಯೋಜನೆಯಡಿಯಲ್ಲಿ ನಾಗರಹೊಳೆ ಅಭಯಾರಣ್ಯದಲ್ಲಿ ೧೯೯೯ ರಲ್ಲಿ ಪ್ರಾಜೆಕ್ಟ್ ಟೈಗರ್ ಅನ್ನು ಶುರು ಮಾಡಲಾಯಿತು. ಇಂದಿಗೂ ಹುಲಿಗಳ ಸಂಖ್ಯೆ ನಾಗರಹೊಳೆ ಅಭಯಾರಣ್ಯದಲ್ಲಿ ಬಹಳವಾಗೇ ಇರುವುದು ವಿಶೇಷ.
ವಿಷಾದವೆಂದರೆ, ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿರುವ ವಿಷಯಗಳು ಅಲ್ಲಲ್ಲಿ ಕೇಳಿ ಬರುವುದು. ಇಂದಿಗೂ ಅಲ್ಲಿನ ಅಧಿಕಾರಿಗಳು ಒಳ್ಳೆಯ ಶಸ್ತ್ರಾಸ್ತ್ರ ಗಳಿಲ್ಲದೆ ಜೀವದ ಹಂಗು ತೊರೆದು ಕಾಡನ್ನು ರಕ್ಷಿಸುವ ಪರಿಸ್ಥಿತಿಯಿರುವುದನ್ನು ನಾವ್ಯಾರು ಅಲ್ಲೆಗಳೆಯುವಂತಿಲ್ಲ. ಮತ್ತೆ ಕರ್ನಾಟಕ ಅರಣ್ಯ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಅರಣ್ಯ ಇಲಾಖೆಯ ಮಿತ್ರರಿಂದ ಅನೇಕ ಬಾರಿ ಕೇಳಿದ್ದೇನೆ ಕೂಡ.
ಬೇರೆಯ ವಿಷಯ ತಿಳಿಯದು, ಆದರೆ ಪ್ರಾಣಿ ಸಂರಕ್ಷಣೆ ವಿಷಯಕ್ಕೆ ಬಂದಾಗ ಅರಣ್ಯ ಇಲಾಖೆ ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ ಕೆಲಸ ಮಾಡಿರುವುದು ಒಂದು ವಿಶೇಷವೇ ಸರಿ. 2006 ರಿಂದ 2009ರ ಸಮಯದಲ್ಲಿ ಕೊಡಗಿನ ಕಾಡುಗಳಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿನ ಜೇನು ಕುರುಬ ಕುಟುಂಬಗಳ ಜೊತೆ ಬೆಳೆಸಿಕೊಂಡಿದ್ದ ಒಡನಾಟ ನೆನೆಯುತ್ತಾ ಹೆಣೆದ ಕಥೆಯಿದು.
ಕಾಡಿನ ಸೈನಿಕರಿಗೆ (ಅರಣ್ಯ ಇಲಾಖೆ ಸಿಬ್ಬಂದಿ) ಧನ್ಯವಾದ ಹೇಳುತ್ತಾ, ಕಾಡಿನ ಜೊತೆ ಹೊಂದಿಕೊಂಡು ಬದುಕನ್ನು ಕಟ್ಟಿಕೊಂಡಿರುವ ಜೇನು ಕುರುಬರನ್ನು ಮತ್ತೊಮ್ಮೆ ನೆನೆಯುತ್ತಾ ಈ ಕಥೆಯನ್ನು ಮುಂದಿನ ಓದಿಗೆ ಪ್ರೀತಿಯ ಓದುಗರಿಗೆ ಬಿಟ್ಟು ಕೊಡುತ್ತೇನೆ!
—
ರಾತ್ರಿಯೆಲ್ಲ ನಿದ್ದೆಯೇ ಮಾಡದ ಶಂಕರನ ಕೈಯಲ್ಲಿ ಸಿಗರೇಟು ಹತ್ತಿ ಉರಿದಿತ್ತು. ಶಂಕರ ಅಲ್ಲೇ ಗೋಡೆಗೆ ನೇತು ಹಾಕಿದ್ದ ಕ್ಯಾಲೆಂಡರ್ ಕಡೆ ನೋಡಿದ. 1990 ರ ಅಕ್ಟೋಬರ್ ತಿಂಗಳ 17ನೇ ದಿನ, ಅಂದರೆ ಅದು ಅವನ ಹುಟ್ಟಿದ ದಿನ. ನಾಳಿನ ಬೆಳಿಗ್ಗೆ ನೋಡುವುದೇ ಅನುಮಾನ ಎನ್ನಿಸುತ್ತಿರುವಾಗ ಇನ್ನ ಹುಟ್ದಬ್ಬದ ಸುಗ್ಗಿಯ ಮಾತೇಕೆ? .
ಕತ್ತಲು ಸರಿದು ಬೆಳಕು ಮೂಡುತಿದ್ದರೂ ಇನ್ನು ಶಂಕರನಿಗೆ ಅರಿವೇ ಆಗಿರಲಿಲ್ಲ. ಕಾಡಿನ ಭಯಾನಕ ಚಳಿಯಲ್ಲೂ ಬೆವರಿ ನಡುಗಿ ಹೋಗಿದ್ದ ಶಂಕರನ ಎದೆಯ ಬಡಿತ ಇನ್ನೂ ಜೋರಾಗಿಯೇ ಇತ್ತು ಮೂಲೆಯಲ್ಲಿ ಕುಳಿತು ಸಿಗರೇಟು ಹೊಗೆ ಬಿಡುತ್ತಿದ್ದವನಿಗೆ ಸ್ವಲ್ಪ ಹೊತ್ತಿನ ನಂತರ ಸ್ಮಶಾನ ಮೌನದ ಅರಿವಾಗತೊಡಗಿತು.

ಸ್ವಲ್ಪ ಸಮಯದ ಹಿಂದೆ ಬಿಚ್ಚಿಟ್ಟಿದ್ದ ಕೈ ಗಡಿಯಾರ ಮೇಜಿನ ಮೇಲೆ ಟಿಕ್ ಟಿಕ್ ಮಾಡುತ್ತಿದ್ದುದು ಕೇಳಿಸಿ ಮೇಜಿನ ಕಡೆ ನೋಡಿದ. ತಾನು ಕೆಲಸ ಗಿಟ್ಟಿಸಿಕೊಂಡಿದ್ದಕ್ಕೆ ಅಣ್ಣ ಕೊಡಿಸಿದ್ದ ಎಚ್ಎಂಟಿ ವಾಚ್ ಅದು. ತಟ್ಟನೆ ಅಮ್ಮ ನೆನಪಾದಳು, ಅಮ್ಮ ಮತ್ತು ಅಣ್ಣ ತನಗೆ ಅರಣ್ಯ ಇಲಾಖೆಯಲ್ಲಿ ರೇಂಜ್ ಫಾರೆಸ್ಟ್ ಆಫೀಸರ್ ಕೆಲಸ ಸಿಕ್ಕಾಗ ಇಡೀ ಊರಿಗೆ ಸಿಹಿಯನ್ನಂಚಿ ಸಂಭ್ರಮಿಸಿದ್ದರು.
ಎರಡು ವರ್ಷ ಡೆಹ್ರಾಡೂನಿನಲ್ಲಿ ಫಾರೆಸ್ಟ್ ಟ್ರೈನಿಂಗ್ ಮುಗಿಸಿ ಮತ್ತೆ ಕರ್ನಾಟಕ ಸರ್ಕಾರದ ಅಧಿಕೃತ ಸೇವೆಗೆ ಹಾಜಾರಾಗಿದ್ದ. ನಿಯಮದ ಪ್ರಕಾರ ಇವನನ್ನು ನಾಗರಹೊಳೆ ವೈಲ್ಡ್ ಲೈಫ್ ಡಿವಿಷನ್ಗೆ ಹಾಕಲಾಗಿತ್ತು. ಮೈಸೂರಿನಿಂದ ಹೆಗ್ಗಡ ದೇವನ ಕೋಟೆ ಹ್ಯಾಂಡ್ ಪೋಸ್ಟ್ ತಲುಪಿ ಮುಂದೆ ಹಳ್ಳಿ ದಾರಿಗಳಲ್ಲಿ ಸಾಗುತ್ತಾ ಹೋದರೆ ಅಲ್ಲಿ ಸಿಗುವುದೇ ಶಂಕರ ಕೆಲಸ ಮಾಡುವ ಅಂತರಸಂತೆ ರೇಂಜ್ ಫಾರೆಸ್ಟ್ ಆಫೀಸು. ಅಲ್ಲಿಂದ ಶುರುವಾದ ಕಾಡು ಸಾವಿರಾರು ಎಕರೆಗಳಲ್ಲಿ ಬೆಳೆದು ಕೇರಳದವರೆಗೂ ಮುಂದುವರೆದು ಹುಲಿಗಳಿಗೆ ಪ್ರಸಿದ್ದಿ ಹೊಂದಿತ್ತು.
ಟ್ರೈನಿಂಗ್ ಮುಗಿಸಿ ಸೇವೆಗೆ ಸೇರಿ ವರ್ಷವಾಗಿತ್ತಷ್ಟೇ, ಆದ್ದರಿಂದ ಕಾಡಿನ ಅಂಚಿಂಚುಗಳು ಅಷ್ಟು ತಿಳಿದಿರಲಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬಂದ ಸಮಯದಲ್ಲೂ ಹುಲಿಗಳು ಯಥೇಚ್ಛವಾಗಿದ್ದು, ಮ್ಯಾನ್ ಈಟರ್ ಗಳ ಸಮಸ್ಯೆ ಬಹಳವಾಗಿಯೇ ಇತ್ತು. ವರ್ಷಗಳು ಉರುಳಿದಂತೆ ಮನುಷ್ಯನ ದುರಾಸೆಗೆ ಹುಲಿಗಳ ಸಂಖ್ಯೆ ಎಷ್ಟು ಕ್ಷೀಣವಾಗತೊಡಗಿತೆಂದರೆ ಇನ್ನತ್ತು ವರ್ಷಗಳಲ್ಲಿ ಭಾರತದಲ್ಲಿ ಸಂಪೂರ್ಣವಾಗಿ ಹುಲಿಗಳು ಮರೆಯಾಗುವ ಪರಿಸ್ಥಿತಿ ನಿರ್ಮಾಣವಾಗತೊಡಗಿತು.
ಇದನ್ನರಿತ ಭಾರತ ಸರ್ಕಾರ 1973 ರ ಹೊತ್ತಿಗೆ ಹುಲಿ ಸಂರಕ್ಷಣಾ ಪ್ರದೇಶಗಳನ್ನು ಜಾರಿಗೊಳಿಸಲು ಶುರು ಮಾಡಿತ್ತು. ಕರ್ನಾಟಕದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಗಳು ಯಥೇಚ್ಛವಾಗಿದ್ದರಿಂದ ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಅರಣ್ಯ ಇಲಾಖೆಯಡಿ ಪ್ರಾಜೆಕ್ಟ್ ಟೈಗರ್ ಅನ್ನು ಶುರು ಮಾಡಿದ್ದರು. ಈ ಪ್ರಾಜೆಕ್ಟ್ ಟೈಗರ್ ಕೆಳಗೆ ನಿರ್ಮಾಣಗೊಂಡದ್ದೇ ಎಪಿಸಿ ಗಳು ಅಥವಾ ಕಳ್ಳ-ಬೇಟೆ ತಡೆ ಶಿಬಿರಗಳು(ಆಂಟಿ-ಪೋಚಿಂಗ್ ಕ್ಯಾಂಪ್ ).

ಈ ಕ್ಯಾಂಪುಗಳಲ್ಲಿ ಅರಣ್ಯ ಇಲಾಖೆಯ ವಾಚಾರ್ ಗಳನ್ನ ಉಳಿಸಿ ಕಾಡಿನ ಪ್ರಾಣಿಗಳನ್ನು ರಕ್ಷಿಸಲು ಕ್ರಮ ತೆಗೆದುಕೊಳ್ಳಲಾಗಿತ್ತು. ಕಾಡಿನ ಒಳಗೆ ಅಲ್ಲಲ್ಲೇ ಸಣ್ಣ ಪುಟ್ಟ ಹಾಡಿಗಳಲ್ಲಿ ಇನ್ನು ಜೇನು ಕುರುಬರು ಬದುಕು ಕಟ್ಟಿಕೊಂಡಿದ್ದರು. ಸರ್ಕಾರ ಅವರನ್ನ ಕಾಡಿನಿಂದ ನಾಡಿಗೆ ತರಲು ಬಹಳ ಪ್ರಯತ್ನ ಪಟ್ಟಿದ್ದು ಕೆಲವು ಬಾರಿ ವಿಫಲವೂ ಆಗಿದ್ದಿದೆ. ಹೊಸದಾಗಿ ಬಂದಿದ್ದ ಭಾರತ ಸರ್ಕಾರದ ಟ್ರೈಬಲ್ ಪೈಲಟ್ ಪ್ರಾಜೆಕ್ಟ್ ವಿಚಾರವಾಗಿ ಕಾಡಿನಲ್ಲಿ ಓಡಾಡಲು ಅನುಮತಿ ನವೀಕರಣಕ್ಕಾಗಿ ಫಾರಿನ್ ಎನ್ಜಿಒ ಒಂದು ಅಂತರಸಂತೆ ಫಾರೆಸ್ಟ್ ಆಫೀಸಿಗೆ ಅರ್ಜಿ ಹಾಕಿತ್ತು. ಅದರ ವಿಚಾರಣೆಗೆ ಶಂಕರ ಅಂದು ಹಾಡಿಗೆ ಭೇಟಿ ನೀಡಿ ವಾಪಸ್ಸು ಬರುವುದಿತ್ತು.
ಜೀಪಿನ ಡ್ರೈವರ್ ತಮ್ಮಯ್ಯ ಬಹಳ ನಿಪುಣ ಮತ್ತು ಅನುಭವಿ ಆದ್ದರಿಂದ ಶಂಕರನಿಗೆ ತಲೆ ಬಿಸಿಯಿರಲಿಲ್ಲ. ಬೆಳಿಗ್ಗೆ ಎದ್ದವನೇ ಗೆಸ್ಟ್ ಹೌಸಿನಲ್ಲಿ ತಿಂಡಿ ಮುಗಿಸಿ ಆಫೀಸಿನ ಕಡೆ ತಮ್ಮಯ್ಯನ ಜೊತೆ ಜೀಪಿನಲ್ಲಿ ಹೊರಟ. ಬಂದವನಿಗೆ ಎದುರಾಗಿದ್ದು ಆಫೀಸಿನ ಮುಂದೆ ಎನ್ಜಿಒ ದಿಂದ ಬಂದು ಕುಳಿತಿದ್ದ ಸಾ.ರಾ.ಡಿಸೋಜಾ ಮತ್ತು ವೀರಣ್ಣ ದೊಡ್ಡಮನಿ.
ಸಾ.ರಾ.ಡಿಸೋಜ ಭಾರತೀಯಳೇ ಆಗಿದ್ದು ಸುಮಾರು ಇಪ್ಪತೈದರ ಹರೆಯವಿದ್ದರಬೇಕು, ಮೈ-ಕೈ ತುಂಬಿಕೊಂಡು ಉತ್ಸಾಹದ ಚಿಲುಮೆಯಂತಿದ್ದಳು ಮತ್ತು ಅವಳ ಜೊತೆಗಿದ್ದ ವೀರಣ್ಣನವರಿಗೆ ಸುಮಾರು ಐವತ್ತಾಗಿರಬೇಕು. ಇಬ್ಬರು ಶಂಕರನನ್ನು ನೋಡಿ ಎದ್ದು ನಿಂತರು. ಅವರಿಬ್ಬರಿಗೂ ನಮಸ್ಕರಿಸಿ ತನ್ನ ಜೀಪ್ ಡ್ರೈವರ್ ತಮ್ಮಯ್ಯನನ್ನ ಕರೆದ. ನಾಲ್ಕು ಜನ ಹಾಡಿಯ ಕಡೆ ಹೊರಟಾಗ ಸಮಯ ಬೆಳಿಗ್ಗೆ ಹತ್ತಾಗಿತ್ತು. ತಮ್ಮ ಕೆಲಸಗಳನ್ನು ಮುಗಿಸಿ ಹಾಡಿ ಜನರ ಬಳಿ ಚರ್ಚೆ ಮಾಡಿ ಅಲ್ಲಿಯೇ ಹಾಡಿಯ ಗುಡಿಸಲೊಂದರಲ್ಲಿ ಊಟ ಮುಗಿಸಿ, ಊಟ ಬಡಿಸಿದವರಿಗೆ ಧನ್ಯವಾದ ಹೇಳಿ, ಸ್ವಲ್ಪ ಹಣ ನೀಡಿ ಹೊರಟಾಗ ಸಂಜೆ ಐದಾಗಿತ್ತು.
ಹಾಡಿಯಿಂದ ಸುಮಾರು ಹತ್ತು ಕಿಲೋ ಮೀಟರ್ ಮುಂದೆ ಬಂದಿರಬೇಕು ತಮ್ಮಯ್ಯ ಜೀಪನ್ನು ನಿಲ್ಲಿಸಿ ಗಾಡಿಯನ್ನು ತಣ್ಣಗೆ ಮಾಡಿದರು. ಶಂಕರ ದಿಟ್ಟಿಸಿ ಹೊರ ನೋಡಿದ. ಸಾಮಾನ್ಯವಾಗಿ ಆನೆಗಳ ಗುಂಪು ಅಥವಾ ಇನ್ಯಾವ ಸೂಕ್ಷ್ಮ ಪ್ರಾಣಿಗಳು ಎದುರಿಗೆ ಬಂದರೆ ಗಾಡಿ ನಿಲ್ಲಿಸಿ ಅವುಗಳು ಹೋದ ಮೇಲೆ ಮುಂದೆ ಹೋಗುವುದು ಅರಣ್ಯ ರಕ್ಷಕರಿಗಿರುವ ತರಬೇತಿ ಮತ್ತು ಅನುಭವದಿಂದ ಬಂದಂಥದ್ದು.
ಯಾವ ಪ್ರಾಣಿಗಳಿಗೂ ತೊಂದರೆ ಕೊಡದೆ ತಮ್ಮ ರಕ್ಷಣೆಯ ಕೆಲಸವನ್ನೂ ಮುಗಿಸುವ ಜವಾಬ್ದಾರಿ ಮತ್ತು ಚಾಣಾಕ್ಷತೆ ಕಾಡಿನ ಸೂಕ್ಷ್ಮತೆ ಅರಿತು ಅಲ್ಲಿನ ಪ್ರಾಣಿಗಳನ್ನು ಗಮನಿಸಿರುತ್ತಾರೋ ಅಂತಹ ಅಧಿಕಾರಿಗಳಿಗೆ ಸಾಮಾನ್ಯವಾಗಿ ತಿಳಿದು ಬಿಡುತ್ತದೆ.
ಶಂಕರ ಹೊಸಬನಾದರೂ ಬಹಳ ಸೂಕ್ಷ್ಮ ಬುದ್ಧಿ ಮತ್ತು ತಮ್ಮಯ್ಯ ಒರಟನಾದರೂ ಬಹಳ ಅನುಭವಿ. ದೂರದಲ್ಲಿ ಆನೆಯ ಹಿಂಡೊಂದು ಚಲಿಸುತ್ತಿತ್ತು. ಜೀಪಿನ ಹಿಂದೆ ಸಾರಾ ಮತ್ತು ವೀರಣ್ಣನವರು ಕುಳಿತಿದ್ದರು. ಒಂದೆರಡು ಕ್ಷಣವಾದ ಮೇಲೆ ಸಾರಾ ಜೀಪಿನಿಂದ ಇಣುಕಿ ನೋಡಿದಳು. ಅವಳ ಕೈಲಿದ್ದ ತಾಮ್ರದ ನೀರಿನ ಬಾಟಲು ಕೈ ಜಾರಿ ರಸ್ತೆಯ ಪಕ್ಕದಲ್ಲಿದ್ದ ಕಲ್ಲಿಗೆ ಬಡಿದು ಟಳ್ಳನೆ ಸದ್ದು ಮಾಡಿ ಬಂಡೆಯ ಮೇಲೆ ಹಾಗೆಯೇ ಸದ್ದು ಮಾಡಿಕೊಂಡು ಉರುಳುತ್ತಾ ಗುಂಡಿಗೆ ಇಳಿಯಿತು.
ಇದ್ದಕ್ಕಿದ್ದಂತೆ ಹಿಂಡಿನಲ್ಲಿದ್ದ ದೈತ್ಯ ಗಂಡಾನೆಯೊಂದು ಸೊಂಡಿಲನ್ನು ಎತ್ತಿ ಘೀಳಿಡುತ್ತಾ ಜೀಪಿನ ಕಡೆ ಓಡಲು ಶುರುವಾಯಿತು. ತಮ್ಮಯ್ಯ ಮುಂದೇನು ಮಾಡುವುದು ಎನ್ನುವುದನ್ನು ಕ್ಷಣಾರ್ಧದಲ್ಲಿ ಯೋಚನೆ ಮಾಡಿ ಗಾಡಿಯನ್ನು ಆನ್ ಮಾಡಿದವನೇ ರಿವರ್ಸ್ ಗೇರ್ ಹಾಕಿ ಜೀಪನ್ನು ಹಿಂದಕ್ಕೆ ಚಲಾಯಿಸಿದ್ದ. ಆನೆ ಮತ್ತೆ ಚಕ್ಕನೆ ನಿಂತು ಒಮ್ಮೆ ಇವರನ್ನೇ ದಿಟ್ಟಿಸಿ ನೋಡಿ ಮತ್ತೆರಡು ಕ್ಷಣಗಳ ನಂತರ ವಾಪಸಾಯಿತು. ಆದರೆ ತಮ್ಮಯ್ಯ ಗಾಡಿಯನ್ನು ಆಫ್ ಮಾಡಲಿಲ್ಲ. ಇನ್ನೇನು ಹೋಯಿತಲ್ಲ ಎಂದು ತಿಳಿಯುವಾಗ ಮತ್ತೊಮ್ಮೆ ದಿಢೀರನೆ ತಿರುಗಿ ಜೀಪಿನ ಕಡೆ ಚಾರ್ಜ್ ಮಾಡಿತು.

ಸಾಂದರ್ಭಿಕ ಚಿತ್ರ
ಹಿಂದೆ ಕುಳಿತಿದ್ದ ವೀರಣ್ಣನವರ ಚಡ್ಡಿಯಲ್ಲಿ ಉಪ್ಪಿನ ನೀರಿಳಿಯುತ್ತಿರುವುದು ಸಾರಾ ಗಮನಕ್ಕೆ ಬಂದಿರಲಿಲ್ಲ. ಸಾರಾ ಮುಖದಲ್ಲಿ ಅಷ್ಟೇನು ಗಾಬರಿಯಾಗದ್ದನ್ನು ಶಂಕರ ಗಮನಿಸಿದ್ದ ಆದರೂ ಮುಖ ನೋಡಿದೊಡನೆ ಹೆದರಿದಂತೆ ನಟಿಸಿದ್ದಳು. ಜೀಪಿನ ತುಂಬಾ ಹತ್ತಿರದವರೆಗೂ ಬಂದ ಆನೆ ಅಲ್ಲೇ ನಿಂತಿತು. ಈ ಬಾರಿ ತಮ್ಮಯ್ಯ ಗಾಡಿಯನ್ನ ಚಲಾಯಿಸದೆ ಸುಮ್ಮನೆ ನಿಲ್ಲಿಸಿದ್ದ. ಅಲ್ಲಿಗೆ ಆನೆಗೆ ಇವರೇನು ತೊಂದರೆ ಕೊಡುವವರಲ್ಲ ಎಂದು ಅರಿವಾಗಿರಬೇಕು ಮತ್ತೆ ವಾಪಸಾಯಿತು.
ಅನುಭವದ ಮೇಲೆ ತಮ್ಮಯ್ಯ ಗಾಡಿಯನ್ನು ಚಲಾಯಿಸದೇ ಅಲ್ಲಿಯೇ ಒಂದರ್ಧ ಗಂಟೆ ಕಾಯೋಣವೆಂದು ತೀರ್ಮಾನಿಸಿ ಗಾಡಿಯನ್ನು ಮತ್ತೆ ತಣ್ಣಗೆ ಮಾಡಿದ. ಹಿಂದೆ ತಿರುಗಿದ ಶಂಕರ, ಸಾರಾ ಮತ್ತು ವೀರಣ್ಣನವರಿಗೆ ಧೈರ್ಯ ಹೇಳಿ ಒಮ್ಮೆ ಕಾಡನ್ನು ಗಮನಿಸಿದ. ಮೋಡ ತುಸು ಹೆಚ್ಚಾಗಿಯೇ ಕವಿದಿದ್ದು, ಹಿಂದಿನ ರಾತ್ರಿ ಮಳೆ ಬೇರೆ ಬಿದ್ದು ಆಗಲೇ ರಸ್ತೆ ಜಾರುತ್ತಿತ್ತು. ಇವರು ಕಾಯುತ್ತಾ ಹದಿನೈದು ನಿಮಿಷವಾಗಿರಬೇಕು. ನಿಧಾನಕ್ಕೆ ಶುರುವಾದ ಮಳೆ ಕ್ರಮೇಣ ಜೋರಾಗಿ ಸುರಿಯತೊಡಗಿತು. ಮಳೆ ಸುರಿಯುವುದು ಸಾಮಾನ್ಯವೇ ಆಗಿದ್ದರು ಅಂದು ಅದೆಷ್ಟು ಜೋರಾಗಿ ಸುರಿಯಿತೆಂದರೆ ಇವರ ಜೀಪೊಂದನ್ನು ಬಿಟ್ಟು ಸುತ್ತ-ಮುತ್ತ ಮತ್ತೇನು ಕಾಣುತ್ತಿರಲಿಲ್ಲ.
ಗಾಡಿ ತಣ್ಣಗೆ ಮಾಡಿ ಸುಮಾರು ಒಂದು ಗಂಟೆಯಾದರೂ ಆಗಿರಬೇಕು ಮಳೆ ನಿಲ್ಲುವ ಯಾವುದೇ ಸೂಚನೆಗಳು ಕಾಣುತ್ತಿರಲಿಲ್ಲ. ಸಾಮಾನ್ಯವಾಗಿ ಕಾಡಿನ ಕತ್ತಲೆ ಬೇಗನೆ ಶುರುವಾಗುವುದೇನೋ ಅಷ್ಟೊತ್ತಿಗಾಗಲೇ ದಾರಿ ಮಬ್ಬಾಗಿತ್ತು. ಇನ್ನರ್ಧ ಗಂಟೆ ಮಳೆ ಸುರಿದು ನಿಂತು ಹೋಯಿತು. ಶಂಕರ ತನ್ನ ಗಡಿಯಾರದ ಕಡೆ ನೋಡಿದ ಸಮಯ ರಾತ್ರಿ ಎಂಟಾಗಿತ್ತು. ಸಾರಾ ಮತ್ತು ವೀರಣ್ಣ ಸ್ವಲ್ಪ ಗಾಬರಿಗೊಂಡಿದ್ದರು. ತಮ್ಮಯ್ಯ ಮುಂದಿನ ದಾರಿಯ ಬಗ್ಗೆ ಯೋಚಿಸುತ್ತಾ ಕುಳಿತಿದ್ದ, ಕಾರಣ ಬೆಳಗ್ಗೆ ಬರುವಾಗಲೇ ದಾರಿಯಲ್ಲಿರುವ ಸೇತುವೆ ಅಲುಗಾಡಿದ್ದು ಇವನ ಗಮನಕ್ಕೆ ಬಂದಿತ್ತು.
ಈಗ ಎರಡು ಗಂಟೆಯಿಂದ ಸುರಿದ ಮಳೆಗೆ ಸೇತುವೆ ಉಳಿದಿರುವುದು ಇವನ ನಂಬಿಕೆಯಲ್ಲಿ ಇರಲಿಲ್ಲ. ಮತ್ತೆ ಜೀಪ್ ಸ್ಟಾರ್ಟ್ ಮಾಡಿ ಮುನ್ನಡೆಸುತ್ತಾ ಸುಮಾರು ಒಂದು ಕಿಲೋಮೀಟರ್ ಬಂದಿರಬೇಕು ಸೇತುವೆ ಮುರಿದು ಬಿದ್ದು ಹಳ್ಳ ಬಹಳ ಜೋರಾಗಿ ಹೋಗುತ್ತಿರುವುದು ಇವರ ಕಣ್ಣಿಗೆ ಬಿತ್ತು. ಆಗ ತಮ್ಮಯ್ಯ ಶಂಕರನ ಮುಖ ನೋಡಿದ. ಇಂದಿನ ರಾತ್ರಿ ಹಾಡಿಯಲ್ಲೇ ಕಳೆಯುವ ದೃಶ್ಯಗಳು ಎದುರಿಗೆ ಬಂದು ಶಂಕರ ಮೈಮುರಿದು ಒಮ್ಮೆ ಹಿಂದೆ ನೋಡಿದ.

ವೀರಣ್ಣನವರ ಮುಖವು ಪ್ರಶ್ನಾರ್ಥಕ ಚಿಹ್ನೆಯಂತೆ ಸೆಟೆದು ಹೋಗಿತ್ತು, ಸಾರಾ ರಾತ್ರಿ ಉಳಿಯುವ ಯೋಚನೆಯಿಂದ ಚಿಂತಿತಳಾದಂತೆ ಕಂಡಳಾದರೂ ಉಳಿಯುವುದಾದರೆ ಹಾಡಿಯ ಯಾವುದಾದರೂ ಗುಡಿಸಲೊಂದರಲ್ಲಿ ಉಳಿಯುವುದು ಎಂದಾದ್ದರಿಂದ ಸಾರಾಳಿಗೆ ಅಷ್ಟೇನೂ ಕಷ್ಟವೆನಿಸಲಿಲ್ಲ. ತಮ್ಮಯ್ಯನಿಗೆ ಗಾಡಿ ಹಿಂತಿರುಗಿಸಿ ಹಾಡಿಯ ಕಡೆ ಹೊರಡಲು ತಿಳಿಸಿದ.
ಜೀಪಿನಲ್ಲಿ ಫಸ್ಟ್ ಯೆಡ್ ಕಿಟ್ ಮತ್ತು ಒಂದು ಟಾರ್ಚ್ ಬಿಟ್ಟರೆ ಮತ್ತೆ ಬೇರೇನಿರಲಿಲ್ಲ. ಶಂಕರ ತನ್ನ ಬಳಿಯಿದ್ದ ಬಂದೂಕನ್ನು ಒಮ್ಮೆ ಸವರಿದ, ಅದು ಇವನ ಪ್ಯಾಂಟಿಗೆ ಅಂಟಿಕೊಂಡಿದ್ದು ಬಿಟ್ಟರೆ ಅದನ್ನು ಇಂದಿಗೂ ಬಳಸಿರಲಿಲ್ಲ. ಕಾರಣ ಕಾಡಿನಲ್ಲಿ ಸಾಮಾನ್ಯವಾಗಿ ಬಂದೂಕುಗಳನ್ನು ಬಳಸುವುದು ಕಡಿಮೆಯೇ. ಅದನ್ನು ಸರ್ವಿಸ್ ಮಾಡುತ್ತಿದ್ದು ಬಿಟ್ಟರೆ ಬಳಸಿ ವರ್ಷಗಳೇ ಆಗಿತ್ತೇನೋ!. ಆದ್ದರಿಂದ ಅದು ಸಮಯಕ್ಕೆ ಉಪಯೋಗಕ್ಕೆ ಬರುವುದು ಅನುಮಾನಕಾರ ವಿಷಯವೇ ಎಂದು ಶಂಕರನಿಗೆ ಅರಿವಿತ್ತು.
ಬಂದೂಕು ಕೆಲಸ ಮಾಡುವುದೋ.. ಬಿಡುವುದೋ.. ಆದರೆ ಯಾವ ಸಮಯದಲ್ಲಿ ಅದು ಯಾವ ಕೈನಲ್ಲಿದೆ ಎಂಬುದು ಬಂದೂಕಿನ ಶಕ್ತಿಯನ್ನು ನಿರ್ಧರಿಸುತ್ತದೆ. ಹಾಡಿಯ ಕಡೆ ವಾಪಸಾಗಿ ಹದಿನೈದು ನಿಮಿಷಗಳಾಗಿರಬೇಕು ದೂರದಲ್ಲಿ ನೀರು ಜೋರಾಗಿ ಹರಿಯುತ್ತಿರುವುದು ಕೇಳಿಸತೊಡಗಿತು. ಅಂತರಸಂತೆ ಕಾಡಿನಲ್ಲಿ ಕಬಿನಿ ಡ್ಯಾಮಿನ ಹಿನ್ನೀರು ವಿಶಾಲವಾಗಿ ಹರಡಿದೆ. ಮಳೆ ಬಂದಾಗ ತೊರೆಗಳು ಹೆಚ್ಚಾಗಿ ಹಾಡಿಗಳಿಗೆ ಸಂಪರ್ಕ ಕಡಿದು ಹೋಗುವುದು ಸಾಮಾನ್ಯವೇ. ಹಾಡಿಯ ಕಡೆ ಹೋಗುವ ಹಳ್ಳ ಮೈದುಂಬಿ ಹರಿಯುತ್ತಿದ್ದುದು ನೋಡಿ ತಮ್ಮಯ್ಯ ಮತ್ತೆ ಶಂಕರನ ಮುಖ ನೋಡಿದ.
ತಮ್ಮಯ್ಯ ಜೀಪನ್ನು ಇಳಿದು ತೊರೆಯನ್ನು ಪರೀಕ್ಷಿಸಿದ. ಶಂಕರನು ಕೂಡ ಜೀಪಿನಲ್ಲಿದ್ದ ಬ್ಯಾಟರಿಯನ್ನು ಹೊತ್ತಿಸಿ ಕೆಳಗಿಳಿದು ನೋಡಿದಾಗ ತಿಳಿದಿದ್ದು ಆ ತೊರೆಯನ್ನು ದಾಟುವುದು ಅಸಾಧ್ಯವೆಂದು. ಸಮಯ ಆಗಲೇ ರಾತ್ರಿ ಒಂಬತ್ತರ ಆಸುಪಾಸಾಗಿತ್ತು. ಹಾಡಿಗೆ ದಾರಿ ಸಾಗುವುದಿಲ್ಲ ಎಂದು ತಿಳಿದ ಶಂಕರ, ತಮ್ಮಯ್ಯನನ್ನು ಬೇರೆ ಯಾವುದಾದರೂ ದಾರಿಯಿದೆಯಾ ಎಂದು ಕೇಳಿ ನೋಡಿದ. ಅಕ್ಟೋಬರ್ ಹೊತ್ತಿಗಾಗಲೇ ಅಂತರಸಂತೆ ಕಾಡು ಚಳಿಯಿಂದ ಥರಗುಟ್ಟಿ ಹೋಗಿತ್ತು.

ಈ ಚಳಿಯಲ್ಲಿ ಹುಲಿ ಅಭಯಾರಣ್ಯದಲ್ಲಿ ರಾತ್ರಿ ಜೀಪಿನಲ್ಲಿ ತಂಗುವುದು ಅಸಾಧ್ಯ. ಆದ್ದರಿಂದ ತಮ್ಮಯ್ಯನ ಬಳಿ ಮಾತನಾಡಿದ ನಂತರ ಉಳಿದಿದ್ದು ಒಂದೇ ದಾರಿ ಅಲ್ಲಿಂದ ಉತ್ತರಕ್ಕೆ ಹದಿನೈದು ಕಿಲೋಮೀಟರ್ ನಲ್ಲಿರುವ ಐದಾರು ವರುಷಗಳಿಂದ ತ್ಯಜಿಸಿದ್ದ ಆಂಟಿ-ಪೋಚಿಂಗ್ ಕ್ಯಾಂಪೊಂದು ಮಾತ್ರ.
ಸಾರಾ ಮತ್ತು ವೀರಣ್ಣನವರಿಗೆ ತಿಳಿಸಿ ತಮ್ಮಯ್ಯನಿಗೆ ಆ ಕಡೆ ಗಾಡಿ ಚಲಾಯಿಸಲು ಹೇಳಿದ. ತಮ್ಮಯ್ಯನಿಗೆ ಆ ಕಡೆ ಹೋಗಲು ಸುತಾರಾಂ ಇಷ್ಟವಿಲ್ಲವಾದರೂ ಅವನ ಸಾಹೇಬನಿಗೆ ಇಲ್ಲವೆನ್ನುವಂತಿಲ್ಲ. ಬಹಳ ವರ್ಷಗಳಿಂದ ಆ ಕ್ಯಾಂಪಿನಲ್ಲಿ ಯಾರೂ ಉಳಿದಿರಲಿಲ್ಲ ಮತ್ತು ಕಾಡಿನ ಯಾವುದೇ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿರಲಿಲ್ಲ, ಕಾರಣಗಳು ಅನೇಕ.
ತಮ್ಮಯ್ಯ ಒಲ್ಲದ ಮನಸ್ಸಿನಿಂದಲೇ ಗಾಡಿ ಚಲಾಯಿಸಿದ. ಮಾರ್ಗ ಮಧ್ಯದಲ್ಲಿ ಸಾರಾ, ಶಂಕರನಿಗೆ ಆ ಕ್ಯಾಂಪಿನ ಹಿನ್ನೆಲೆಯ ಬಗ್ಗೆ ಅರಿವಿದೆಯಾ ಎಂದು ಕೇಳಿದಳು. ಶಂಕರನು ಮಾತನಾಡದೆ ದಾರಿಯನ್ನು ಹುಡುಕುವಲ್ಲಿ ಮಗ್ನನಾಗಿದ್ದ. ಸಾರಾ ಮುಂದುವರೆಸಿದ್ದಳು “ನಾವು ಹೋಗುತ್ತಿರುವ ಕ್ಯಾಂಪನ್ನು ಸೂಳೇಬಾವಿ ಕ್ಯಾಂಪ್ ಅಂತಾರೆ..
ಸೂಳೇಬಾವಿ ಹೆಸರು ಬಂದದ್ದು ಅಲ್ಲಿದ್ದು ನಾಶವಾಗಿ ಹೋದ ಹಾಡಿಯಿಂದ. ಪ್ಲೇಗ್ ಬಂದು ಇಡೀ ಹಾಡಿಯೇ ಸ್ಮಶಾನವಾಗಿ ಇಲ್ಲಿಗೆ ಮೂವತ್ತು ವರ್ಷಗಳೇ ಕಳೆದಿರಬೇಕು. ಅಲ್ಲಿಂದ ಹಾಡಿಯಲ್ಲಿ ಯಾರು ಜನ ಉಳಿಯದೆ ಅಲ್ಲಿದ್ದ ಗುಡಿಸಲುಗಳು ನಾಶವಾಗಿ ಈಗ ಈ ಕ್ಯಾಂಪನ್ನು ಬಿಟ್ಟರೆ ಬೇರೇನಿಲ್ಲ. ಸುಮಾರು ಐದಾರು ವರ್ಷದಿಂದೆ ಈ ಕ್ಯಾಂಪಿನಲ್ಲಿ 3 ವಾಚರ್ ಗಳಿದ್ರು. ತುಂಬಾ ಸಲ ಮೇಲಿನ ಅಧಿಕಾರಿಗಳಿಗೆ ಅಲ್ಲಿ ನಡೆಯೋ ವಿಚಿತ್ರ ಘಟನೆಗಳನ್ನು ವಿವರಿಸಿ ಹೇಳಿದ್ರೂ, ಅಧಿಕಾರಿಗಳು ನಿರ್ಲಕ್ಷಿಸಿದ್ರು. ಆದರೆ ಒಂದಿನ ಮೂವರು ವಿಚಿತ್ರ ರೀತಿಯಲ್ಲಿ ಸತ್ತು ಹೋಗಿದ್ದರ ಬಗ್ಗೆ ನಾನು ಪತ್ರಿಕೆಯಲ್ಲಿ ಓದಿದ್ದು ನೆನಪಿದೆ.
ಮುಂದಿನ ದಿನ ರಮೇಶ್ ಜಿಗಜಿಣಗಿ ಸಾರ್ ಅಲ್ಲಿಗೆ ಭೇಟಿ ನೀಡಿದಾಗ ಇದು ಕೊಲೆಯಲ್ಲ ಯಾವುದೋ ವಿಚಿತ್ರ ಸಾವು ಅನ್ನಿಸಿ ಕ್ಯಾಂಪನ್ನು ತ್ಯಜಿಸಿದ ಮೇಲೆ ನಮ್ಮ ಸಂಸ್ಥೆಗೆ ಆ ಕಡೆ ಹೋಗೋದನ್ನು ತಡೆದಿದ್ರು. ಆಮೇಲೆ ಅಧಿಕಾರಿಗಳು ಆ ಕಡೆ ಹೋಗಿದ್ದು ನಾ ಕಾಣೆ. ಅದು ಆದ್ಮೇಲೆ ಮುಂದಿನ ಕೆಲವು ತಿಂಗಳು ಹಾಡಿಯ ಜನರಿಗೂ ಇದೇ ವಿಚಿತ್ರ ರೀತಿಯ ಅನುಭವಗಳು ಆಗಿದ್ದು ನಾ ಅವರ ಬಾಯಿಂದನೆ ಕೇಳಿದ್ದೆ. ಅದಾಗಿ ಮತ್ತೆರಡು ಮೂರು ವರ್ಷ ಯಾರು ಆ ಕಡೆ ಸುಳಿದಿರಲಿಲ್ಲ.
ಆದರೆ ಇತ್ತೀಚೆಗೆ ಬೇಟೆಗೆ ಹೋದ ಜನರು ಅಲ್ಲಿ ಉಳಿದು ಬಂದಿದ್ದಾರೆ ಅಂತಹ ತೊಂದರೆಗಳೇನು ಆಗಿರುವುದನ್ನು ನಾ ಕೇಳಿಲ್ಲ.”ಇದನ್ನೆಲ್ಲ ಕೇಳಿದ ವೀರಣ್ಣನವರಿಗೆ ಮತ್ತೆ ಚಡ್ಡಿ ಒದ್ದೆಯಾದಂತಾಯಿತು. ಆದರೆ ಆ ಕರಾಳ ಕತ್ತಲಿನಲ್ಲಿ – ಕಬಿನಿ ಹಿನ್ನೀರಿನಲ್ಲಿ ನಿಲ್ಲುವ ಯಾವುದೇ ಸಾಧ್ಯತೆಗಳಿಲ್ಲ. ಮಳೆ ಬಿದ್ದು ನೀರು ಹೆಚ್ಚಾದರೆ ಹಿನ್ನೀರು ಮುಳುಗುತ್ತದೆ.

ಮಳೆ ಬೇರೆ ಜೋರಾಗಿ ಸುರಿದಿದ್ದರಿಂದ ಕಬಿನಿಗೆ ಹರಿಯುವ ನೀರು ಹೆಚ್ಚಾಗುವ ಸಾಧ್ಯತೆ ಹೆಚ್ಚು. ಎರಡನೆಯದು ಪ್ರಾಣಿಗಳ ಭಯ. ಆದ್ದರಿಂದ ಇವರು ಹೇಗಾದರೂ ಮಾಡಿ ಒಂದು ಸ್ಪಷ್ಟ ಜಾಗಕ್ಕೆ ತಲುಪಲೇಬೇಕು. ಜೊತೆಗೆ ಶಂಕರ ಇಂತಹ ಊಹಾಪೋಹಗಳಿಗೆ ತಲೆ ಕೊಟ್ಟಿದ್ದವನಲ್ಲ ಜೊತೆಗೆ ಸೂಳೇಬಾವಿ ಕ್ಯಾಂಪು ಇವನ ಸುಪರ್ದಿಗೆ ಬರುವುದರಿಂದ ಅಲ್ಲಿ ಉಳಿದು ನೋಡಿದರೆ ವಿಷಯವಾದರೂ ತಿಳಿದು ಮತ್ತೆ ಅದನ್ನು ಪುನರ್ಚೇತನಗೊಳಿಸಬಹುದೆಂದೂ ಯೋಚಿಸಿದ್ದ.
ಹಾಡಿಯ ದಾರಿ ಮುಚ್ಚಿ, ಆಫೀಸಿನ ದಾರಿಯ ಸೇತುವೆ ಬಿದ್ದಿದ್ದರಿಂದ ಬೆಳಗ್ಗೆಯವರೆಗೂ ಹೇಗೋ ತಳ್ಳಿ ಬಿಡೋಣ ಎಂದೆನಿಸಿ, ಆ ತ್ಯಜಿಸಿ ಹೋಗಿದ್ದ ಕ್ಯಾಂಪಿನ ಕಡೆ ನಡೆದಿದ್ದರು. ಕ್ಯಾಂಪ್ ಅಂದರೆ ಪುಟ್ಟ ಮನೆಯೇ. ಮೂರ್ನಾಲ್ಕು ರೂಮುಗಳಿದ್ದು, ವಾಸವಿರಲು ಕಟ್ಟಿದ್ದ ಮನೆಯದು.
ಕಡು ಕತ್ತಲು ವಿಪರೀತ ಚಳಿ ಮತ್ತು ಗೊತ್ತಿಲ್ಲದ ದಾರಿ ಕಡೆ ಹೋಗುತ್ತಿರುವುದನ್ನು ನೆನೆದು ಶಂಕರ ಆಗಾಗ ರಿವಾಲ್ವರನ್ನು ಸವರಿ ಧೈರ್ಯ ಹೆಚ್ಚಿಸಿಕೊಳ್ಳುತ್ತಿದ್ದ. ಸುಮಾರು ಎರಡು ಗಂಟೆಯ ನಂತರ ಜೀಪು ಕ್ಯಾಂಪಿಗೆ ತಲುಪಿತು. ಮೊದಲು ಇಳಿದ ಶಂಕರ ಕ್ಯಾಂಪಿನ ಬಾಗಿಲನ್ನು ತೆರೆದ. ಕಿಟಾರನೆ ಸದ್ದುಮಾಡುತ್ತಾ ಎರಡು ಬಾವಲಿ ಮತ್ತು ಮೂರು ಮೊಲದ ಗಾತ್ರದ ಹೆಗ್ಗಣಗಳು ಹೊರ ನುಗ್ಗಿದವು. ಶಂಕರ ರಕ್ಷಣೆಗೆಂದು ನೆಲದಲ್ಲಿ ಕುಳಿತಿದ್ದು ನೋಡಿ ತಮ್ಮಯ್ಯ ಹೆದರಿದ.
ಶಂಕರ ಸಾವರಿಸಿಕೊಂಡು ಎದ್ದು ಟಾರ್ಚ್ ಬೆಳಕು ಬಿಟ್ಟು ರೂಮುಗಳನ್ನು ಪರೀಕ್ಷಿಸಿ ನೋಡಿದಾಗ ಧೂಳು ಬಿಟ್ಟರೆ ಮತ್ತೆ ಇನ್ನೇನು ಕಾಣಸಿಗಲಿಲ್ಲ. ಶಂಕರ ಮತ್ತೆ ಜೀಪಿನ ಬಳಿ ನಡೆದು ಎಲ್ಲರಿಗೂ ಇಳಿಯಲು ಹೇಳಿ ತಮ್ಮಯ್ಯನಿಗೆ ಜೀಪಿನಲ್ಲೇ ಇಟ್ಟುಕೊಂಡಿದ್ದ ಹೊದಿಕೆಗಳನ್ನು ತರಲು ಹೇಳಿ ಮತ್ತೆ ಸಾರಾಳನ್ನು ರೂಮಿನ ಕಡೆ ಕರೆದೊಯ್ಯುವಾಗ ಇವರನ್ನೇ ಯಾರೋ ನೋಡುತ್ತಿರುವಂತೆ ಭಾಸವಾಗಿ ಒಮ್ಮೆ ಪಕ್ಕಕೆ ತಿರುಗಿದ. ಯಾವುದೋ ಎರಡು ಕಣ್ಣುಗಳು ಇವನನ್ನೇ ನೋಡುತ್ತಿವೆ ಎಂದನಿಸಿದರೋ ಅಲ್ಲಿಯೇ ನಿಂತು ಗಮಸಿದವನಿಗೆ ಏನೂ ಕಾಣಲಿಲ್ಲ.
ಸಾರಾ ಕೇಳಿದಳು “ಇಂದು ಬದುಕುಳಿದು ಬೆಳಿಗ್ಗೆ ಮನೆಗೆ ಹೋಗುವ ನಂಬಿಕೆಯಿದೆಯೇ? ” ಶಂಕರ ಒಮ್ಮೆ ನಕ್ಕು ಮುನ್ನೆಡೆದ. ತಮ್ಮಯ್ಯ ಮತ್ತು ವೀರಣ್ಣ ಹೊದಿಕೆಗಳನ್ನು ಹಿಡಿದು ರೂಮಿಗೆ ಬಂದಾಗ ಸಾರಾ ಅಲ್ಲಿಯೇ ಬಿದ್ದಿದ್ದ ಪೊರಕೆಯಿಂದ ಹಿಡಿದು ಸದ್ಯಕ್ಕೆ ಬೇಕಾದ ಜಾಗವನ್ನು ಅಚ್ಚುಕಟ್ಟು ಮಾಡಿದ್ದಳು. ತಮ್ಮಯ್ಯ ಜೀಪಿನಲ್ಲಿದ್ದ ಮೇಣದಬತ್ತಿ ತಂದು ಅದಕ್ಕೆ ಬೆಂಕಿ ತಗುಲಿಸಿ ರೂಮಿನಲ್ಲಿ ಹಚ್ಚಿಟ್ಟಿದ್ದರಿಂದ ಸಾಕಷ್ಟು ಬೆಳಕಾಯಿತು.

ಯಾರೂ ಇಲ್ಲಿನವರಿಗೆ ಹೆಚ್ಚು ಮಾತನಾಡುವ ಅವಕಾಶ ಒದಗಿ ಬಂದಿರಲಿಲ್ಲ. ವೀರಣ್ಣನವರ ಮನಸ್ಸು ಬೋನಿಗೆ ಸಿಕ್ಕ ಇಲಿಯಂತಾಗಿತ್ತು. ಕಾಡನ್ನು ಬಿಟ್ಟು ಓಡಿ ಹೋಗುವಂತೆಯೂ ಇರಲಿಲ್ಲ, ಇವರ ಜೊತೆ ಈ ಪಾಳು ಬಿದ್ದಿರುವ ಕ್ಯಾಂಪಿನಲ್ಲಿ ಇರುವ ಮನಸ್ಸೂ ಇರಲಿಲ್ಲ. “ಸಾಹೇಬ್ರೇ, ನೀವು ನಿಜವಾಗಿಯೂ ದೆವ್ವ-ಭೂತ ನಂಬೋದಿಲ್ವೇ? ಇಲ್ಲ, ಸಾರಾ ಮೇಡಂ ಬೇರೆ ಹರೆಯದ ಹುಡುಗಿ ಅಂತ ಅವರನ್ನ ಮೆಚ್ಸೋಕೆ ಹಾಗೆ ನಾಟಕ ಆಡ್ತಿದೀರಾ? ” ಎಂದು ಮನದಲ್ಲಿದ್ದ ಪ್ರಶ್ನೆಯನ್ನ ಹೊರ ಹಾಕಿಯೇ ಬಿಟ್ಟರು.
ಸಾರಾ ಒಂದು ಕ್ಷಣ ನಾಚಿದವಳಂತೆ ತಲೆ ತಗ್ಗಿಸಿದಳು. “ರೀ , ವೀರಣ್ಣ ಅವ್ರೆ, ಅಲ್ಲಿ ಮೂಲೆಯಲ್ಲಿ ಬಿದ್ದಿರೋ ಮರದ ತುಂಡು ಮತ್ತೆ ಒಳಗಡೆ ಸ್ವಲ್ಪ ಪೇಪರ್ ಇದೆ; ಎರಡು ತಂದು ಬೆಂಕಿ ಹಚ್ಚಿಸಿ, ಸಂಜೆ ಒದ್ದೆಯಾಗಿರೋ ಪ್ಯಾಂಟು ಒಣಗಿಸಿಕೊಳ್ಳೋಗ್ರಿ” ಎಂದು ಖಾರವಾಗಿಯೇ ಹೇಳಿದ.
ತಮ್ಮಯ್ಯ ಸಾಹೇಬರನ್ನು ಒಮ್ಮೆ ನೋಡಿ ನಕ್ಕು ಒಳ ಹೋಗಿ ಪೇಪರ್ ತಂದು ವೀರಣ್ಣನವರ ಸಹಾಯದಿಂದ ಅಲ್ಲಿಯೇ ಬಿದ್ದಿದ್ದ ತುಂಡನ್ನು ಹೊರ ಎಳೆದು ಹಜಾರಕ್ಕೆ ಸಮ ಮಾಡಿದ. ಜೀಪಿನ ಬಳಿ ನಡೆದು ಸ್ವಲ್ಪ ಡೀಸೆಲ್ ಎಳೆದು ತಂದವನೆ ತುಂಡಿನ ಮೇಲೆ ಸಿಂಪಡಿಸಿ ಪೇಪರ್ ಹೊತ್ತಿಸಿ ತುಂಡಿನ ಮೇಲೆ ಎಸೆದು ಬೆಂಕಿ ಹೊತ್ತಿಸಿದ. ತಮ್ಮಯ್ಯ ಡೀಸೆಲ್ ಗೆಂದು ಹೋದಾಗ ತಮ್ಮ ಚಾಳಿ ಬಾಟಲೊಂದನ್ನು ಸರಕ್ಕನೆ ಜೇಬಿಗಿಳಿಸಿ ಒಳ ಬಂದಿದ್ದ. ಬೆಂಕಿ ಹೊತ್ತಿಸಿ ತಮ್ಮಯ್ಯ ಮತ್ತೆ ವೀರಣ್ಣ ಎರಡು ಗುಟುಕು ಒಳಗೇರಿಸಿದರು.
ಶಂಕರ ಮತ್ತು ಸಾರಾ ಒಳಗೆ ಕುಳಿತಿದ್ದು ನೋಡಿ ವೀರಣ್ಣ ಮತ್ತೆರಡು ಗುಟುಕು ಏರಿಸಿ ತಮ್ಮಯ್ಯನ ಬಳಿ ಇದ್ದ ಬಿಸ್ಕತ್ ಎರಡನ್ನು ಬಾಯಿಗೆ ಹಾಕಿ ಮೆಲ್ಲುತ್ತ ಕುಳಿತರು. ಹಾಡಿಗೆ ಹೋದಾಗ ಅಲ್ಲಿಯ ಜನ ಪ್ರೀತಿಗೆಂದು ಎರಡು ಬಾಳೆಗೊನೆ, ಜೇನು ಬಾಟಲು, ಮರಗೆಣಸು ತುಂಬಿ ಕಳುಹಿಸಿದ್ದರು. ಶಂಕರನಿಗೆ ಅದು ನೆನಪಾಗಿ ಗಾಡಿಯ ಬಳಿ ನಡೆದು ಒಂದು ಬಾಳೆಗೊನೆ ಎತ್ತಿ ಹೊರತೆಗೆದ. ಶಂಕರನ ಹಿಂದೆ ನಡೆದು ಬಂದಿದ್ದ ತಮ್ಮಯ್ಯ ಶಂಕರನ ಕೈನಿಂದ ಬಾಳೆಗೊನೆ ತೆಗೆದುಕೊಂಡು ವಾಪಸ್ ನಡೆದ.
ಜೇನಿನ ಬಾಟಲು ಮತ್ತೆ ಗೆಣಸನ್ನು ಎತ್ತಿಕೊಂಡ ಶಂಕರನು ಮತ್ತೆ ಯಾರೋ ಇವರನ್ನು ಗಮನಿಸಿದಂತಾಗಿ ಹಿಂದೆ ತಿರುಗಿದ. ಮತ್ತೆ ಏನು ಕಾಣಲಿಲ್ಲ ಆದ್ದರಿಂದ ವಾಪಸ್ ನಡೆದು ಬೆಂಕಿಯ ಮುಂದಿರಿಸಿದ. ತಮ್ಮಯ್ಯ ಗೆಣಸನ್ನು ಕೈನಲ್ಲಿಯೇ ಅಚ್ಚುಕಟ್ಟು ಮಾಡಿ ಬೆಂಕಿಯಲ್ಲಿ ಸುಟ್ಟು ಎಲ್ಲರಿಗೂ ಒಂದೊಂದು ಗೆಣಸನ್ನು ನೀಡಿದ. ಜೇನಿನ ಜೊತೆ ಗೆಣಸು ಮತ್ತು ಬಾಳೆಹಣ್ಣು ಬಲು ರುಚಿಸಿದವು.
ಆ ಸಮಯದಲ್ಲಿ ಸಾರಾಳ ಎನ್ಜಿಒ ಬಗ್ಗೆ ಮತ್ತಷ್ಟು ತಿಳಿಯುವ ಮನಸ್ಸಾಗಿ ಹೆಚ್ಚಿನ ಮಾಹಿತಿ ಕೇಳಿದ್ದಕ್ಕೆ ಸಾರಾ ಪಟಪಟನೆ ಮಾತುಗಳನ್ನು ಉದುರಿಸಿದ್ದಳು. ಮಾತನಾಡುತ್ತಿರುವಂತೆಯೇ ಸಾರಾಳಿಗೆ ಹಿಂದೆ ಏನೋ ಇರುವುದು ಎಂದನಿಸಿ ಶಂಕರನ ಹತ್ತಿರ ಸರಿದಳು. ಶಂಕರ ಪ್ರಶ್ನಿಸಿದ “ಏನಾಯ್ತು ಸಾರಾ?” ಸಾರಾ ಹೆದರುತ್ತಲೇ ಹೇಳಿದಳು “ಹಿಂದೆ ಯಾರೋ ಓಡಾಡಿದಂತಾಯಿತು”. ಶಂಕರ ಎದ್ದು ಟಾರ್ಚ್ ಹೊತ್ತಿಸಿ ಒಳ ನಡೆದಾಗ ಅವನ ಜೊತೆ ತಮ್ಮಯ್ಯನು ಕೂಡ ಒಳ ನಡೆದ.
ಇದ್ದಕ್ಕಿದ್ದಂತೆ ಕಾಡು ಬೆಕ್ಕೊಂದು ಇವರ ಮೇಲೆರಗಿತು. ದಿಢೀರನೆ ಆದ ಆಘಾತಕ್ಕೆ ಶಂಕರನು ಘಾಸಿಗೊಂಡ. ಸಾವರಿಸಿಕೊಳ್ಳುವಷ್ಟರಲ್ಲಿ ಬೆಕ್ಕು ತಮ್ಮಯ್ಯನ ಕಾಲು ಸಂಧಿಯಲ್ಲಿ ನುಸಿದು ಕಿಟಕಿಯಿಂದ ಹಾರಿಹೋಯಿತು. ಅದು ಓಡಿದ ದಾರಿಯಲ್ಲಿ ರಕ್ತದ ಕಲೆಗಳು ಮೂಡಿದ್ದವು ಅಂದರೆ ಏನನ್ನೋ ಎಳೆದು ತಂದು ತಿನ್ನುತ್ತಿದ್ದ ಬೆಕ್ಕು ಓಡಿಹೋಗಿರಬಹುದೆಂದು ಶಂಕರ ಅದನ್ನು ನಿರ್ಲಕ್ಷಿಸಿ ತಮ್ಮಯ್ಯನ ಜೊತೆ ಹೊರನಡೆದ. ಅದು ಕಾಡು ಬೆಕ್ಕು ಎಂದು ತಿಳಿಸಿದಾಗ ವೀರಣ್ಣನವರಿಗೆ ನಿರಾಳವಾಯಿತು.

ವೀರಣ್ಣನವರಿಗೆ ಆಗಲೇ ಎರಡು ಗ್ಲಾಸು ಸಾರಾಯಿ ಏರಿದ್ದರಿಂದ ನಿದ್ದೆ ಏರುತ್ತಿತ್ತು ಆದ್ದರಿಂದ ಒಳನಡೆದು ಅಲ್ಲಿ ಹಾಸಿದ್ದ ಚಾಪೆಯ ಮೇಲೆ ತಲೆ ನೀಡಿದರು. ಅವರ ಜೊತೆ ತಮ್ಮಯ್ಯನು ಕೂಡ ಬೆಳಗ್ಗೆಯಿಂದ ಸುಸ್ತಾಗಿದ್ದರಿಂದ ಒಂದು ಮೂಲೆಯಲ್ಲಿ ಉರುಳಿದ. ಮತ್ತರ್ಧ ಗಂಟೆ ಸಾರಾ, ಶಂಕರನಿಗೆ ತನ್ನ ಎನ್ಜಿ ಒ ಬಗ್ಗೆ ವಿವರಣೆ ನೀಡುವಲ್ಲಿ ಮಗಳಾಗಿದ್ದಳು. ಸ್ವಲ್ಪ ಹೊತ್ತಿನ ನಂತರ ಮಲಗುವುದು ಎಂದು ನಿರ್ಧರಿಸಿ ಎದ್ದು ಒಳ ನಡೆದರು.
ಸಾರಾಳಿಗೆ ಮಲಗುವ ಮುನ್ನ ಹೊರಹೋಗುವ ಅಭ್ಯಾಸ ಆದರೆ ಕಾಡಿನಲ್ಲಿ ಅದರಲ್ಲೂ ಆಂಟಿ ಪೋಚಿಂಗ್ ಕ್ಯಾಂಪಿನಲ್ಲಿ ಶೌಚಾಲಯ ನಿರ್ಮಿಸಿದ್ದ ಉದಾಹರಣೆ ಇರಲಿಲ್ಲ. ಸಾರಾಳಿಗೆ ಹೋಗಲು ಭಯ ಆದುದ್ದರಿಂದ ಶಂಕರ ಹೇಳಿದ “ನೀವು ಹೋಗಿ ನಾನು ಟಾರ್ಚ್ ಬೆಳಕನ್ನು ನಿಮ್ಮ ಕಡೆ ಬಿಡುತ್ತಾ ಬೆನ್ನು ಮಾಡಿ ನಿಲ್ಲುತ್ತೇನೆ” ಸಾರಾಳು ಆ ಕಡೆ ಹೋಗಿ ಒಂದು ನಿಮಿಷವಾದರೂ ಆಗಿರಬೇಕು ಕಿಟಾರನೆ ಕಿರುಚುತ್ತಾ ಓಡಿ ಬಂದು ಶಂಕರನನ್ನು ಹಿಂದಿನಿಂದ ತಬ್ಬಿ ಹಿಡಿದಳು.
(ಮುಂದುವರಿಯುವುದು)






0 Comments