ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಿ ಪಿ ಉಪಾಧ್ಯ ಸರಣಿ ಕಥೆ 41- ಆದಿಯ ಮಧ್ಯ ಪ್ರವೇಶ…

ಪಿ ಪಿ ಉಪಾಧ್ಯ

ಸುತ್ತ ಮುತ್ತ ಊರುಗಳಲ್ಲಿ ಆದಿಗೆ ಇರುವ ಗೌರವ ಅಂತಹುದು. ಆ ಊರುಗಳಲ್ಲಿ ಇರುವವರಲ್ಲಿ ಒಬ್ಬರಲ್ಲ ಒಬ್ಬರು ಒಂದಲ್ಲ ಒಂದು ಸಂದರ್ಭದಲ್ಲಿ ಅವನಿಂದ ಲಾಭ ಪಡೆದುಕೊಂಡವರೇ. ಈಗ ಪ್ರತಿಭಟನೆ ನಡೆಸಲು ಬಂದ ಗುಂಪಿನಲ್ಲಿದ್ದವರಲ್ಲಿಯೂ ಹಲವರು ಅವನಿಂದ ಉಪಕೃತರಾದವರೇ. ಪಕ್ಕದೂರಿನ ಶೆಟ್ಟರ ಮನೆಯಲ್ಲಿ ಸಣ್ಣ ಪುಟ್ಟ ಕಳ್ಳತನಗಳಾದಾಗ ಸುಳ್ಳು ಸುಳ್ಳೇ ದೂರುಕೊಟ್ಟು ಪೋಲೀಸರಿಂದ ಹಿಡಿಸಿಕೊಂಡು ಹೋದವರನ್ನು ಬಿಡಿಸಿಕೊಂಡು ಬರುವುದರಿಂದ ಹಿಡಿದು ಸರಕಾರದಿಂದ ಬರಬೇಕಾಗಿದ್ದ ಸಹಾಯವನ್ನು ತರಿಸಿಕೊಡುವುದರ ವರೆಗೆ ಊರಿನ ಜನರಿಗೆ ಸಹಾಯ ಮಾಡಿದ್ದ.

ಕೆಲವೊಮ್ಮೆ ಒಬ್ಬರ ಮನೆಯ ಕೋಳಿ ಇನ್ನೊಬ್ಬರ ಹಿತ್ತಿಲಿನಲ್ಲಿ ಕಾಳು ಹೆಕ್ಕಲು ಹೋಯ್ತೆಂದು ಸುರುವಾದ ಜಗಳ ದೊಡ್ಡದಾಗಿ ಒಬ್ಬರೊಬ್ಬರೊಂದಿಗೆ ಕೈ ಕೈ ಮಿಲಾಯಿಸುವ ವರೆಗೆ ಹೋದಾಗಲೂ ಕರೆ ಬರುವುದು ಆದಿಗೇ. ಇಬ್ಬರಿಗೂ ತೃಪ್ತಿಯಾಗುವಂತೆ ಜಗಳ ಬಗೆಹರಿಸುವುದಷ್ಟೇ ಅಲ್ಲದೆ ಇನ್ನು ಮುಂದೆ ಹಾಗಾಗಬಾರದೆಂದು ಸಂಬoಧಪಟ್ಟವರಿಗೆ ಎಚ್ಚರಿಕೆ ಹೇಳಿಯೂ ಬರುತ್ತಿದ್ದ. ಹಾಗಾಗಿ ಅವನಿಗೆ ಸುತ್ತಿನ ಊರುಗಳಲ್ಲಿ ಮರ್ಯಾದೆ.

ಸಾವಿರ ಸಾವಿರ ಸುರಿದು ಬಗೆಹರಿಸಿಕೊಳ್ಳಬೇಕಾದ ಸಮಸ್ಯೆಗಳನ್ನು ಕಾಸಿನ ಖರ್ಚಿಲ್ಲದೆ ಬಗೆಹರಿಸುತ್ತಿದ್ದುದು ಜನರಿಗೆ ಆಪ್ಯಾಯಮಾನವಾಗಿದ್ದುದು. ಅಷ್ಟೇ ಅಲ್ಲ ಅಂತಹ ಗಲಾಟೆಗಳಲ್ಲಿ ಸಿಕ್ಕಿದವರಲ್ಲಿ ಯಾರಾದರೂ ತೀರಾ ಬಡವರಿದ್ದರೆಂದಾದರೆ ಅಂಥವರಿಗೆ ತಾನೇ ಕೈಯ್ಯಿಂದ ಹಣ ಕೊಟ್ಟು ಬರುತ್ತಿದ್ದ. ಅಂಥವನ ಮಾತಿಗೆ ಇಲ್ಲ ಎನ್ನುವ ಮನಸ್ಸು, ಧೈರ್ಯ ಯಾರಿಗೂ ಇಲ್ಲ. ಹಾಗಾಗಿಯೇ ಆದಿಯ ಮಧ್ಯ ಪ್ರವೇಶ ದೊಡ್ಡ ಸಮಸ್ಯೆಯೊಂದನ್ನು ಬಗೆ ಹರಿಸಿತು. ಶಾಸ್ತ್ರೀಗಳಿಗೂ ನಿರಾಳವಾಯ್ತು.

ಎಲ್ಲರನ್ನೂ ಒಳಗೊಂಡು ತರಬೇತಿ ಪ್ರಾರಂಭವಾಯ್ತು. ಅದೆಲ್ಲಿಂದ ಬಂದಿತೋ ಆ ಆವೇಷ ಅವರಿಬ್ಬರಿಗೆ. ದೆವ್ವ ಮೈಮೇಲೆ ಬಂದವರoತೆ ತರಬೇತಿಯಲ್ಲಿ ಪಾಲ್ಗೊಳ್ಳಹತ್ತಿದ್ದರು. ಸುಮಾರು ಎರಡು ವರ್ಷಕ್ಕೂ ಮೀರಿದ ದಿನಗಳಿಂದ ಅಲ್ಲಿಯೇ ಇದ್ದ ಅವರು ಹಿಂದೆoದೂ ತೋರದಂತಹ ಆಸಕ್ತಿ ತೋರಿಸಲಾರಂಭಿಸಿದ್ದರು. ಅಷ್ಟೇ ಅಲ್ಲ ಶಾಸ್ತಿçಗಳಿಗೇ ಆಶ್ಚರ್ಯವಾಗುವಷ್ಟು ನಿಷ್ಠೆ ಮತ್ತು ಪ್ರತಿಭೆಯನ್ನು ತೋರಿಸಹತ್ತಿದ್ದರು. ಮತ್ತೊಂದೆoಟು ದಿನಗಳ ನಂತರ ಹೀಗೇ ನೋಡಿಕೊಂಡು ಹೋಗುವ ಎಂದು ಬಂದ ಆದಿಯೊಡನೆ ಅದನ್ನು ಹೇಳಿಯೂ ಬಿಟ್ಟರು. ‘ಹೀಗೇ ಮುಂದುವರಿದರೆ ನಾವು ಬೇರೆ ಯಾರನ್ನಾದರೂ ಬಿಡಬೇಕಾಗಬಹುದೇನೋ’ ಎನ್ನುವ ತಮ್ಮ ಅಳಲನ್ನು ತೋಡಿಕೊಂಡಿದ್ದರು.

‘ಇಲ್ಲ ಶಾಸ್ತ್ರೀಗಳೇ ಗುಂಪಿನಲ್ಲಿ ಯಾರನ್ನೂ ಬಿಡುವುದು ಬೇಡ. ಈಗ ತರಬೇತಿ ಪಡೆಯುತ್ತಿರುವ ಟೀಮಿನ ಎಲ್ಲರನ್ನೂ ಕರೆದುಕೊಂಡು ಹೋಗುವುದೇ. ನಿಮ್ಮ ಹಣದ ಲೆಕ್ಕಾಚಾರ ತಪ್ಪುತ್ತಿದೆ ಎನ್ನಿಸಿದರೆ ಹೇಳಿ ಕಮ್ಮಿ ಬಿದ್ದುದನ್ನು ನಾನು ತುಂಬಿಸಿಕೊಡುತ್ತೇನೆ’ ಶಾಸ್ತ್ರೀಗಳಿಗೆ ಆಶ್ಚರ್ಯ. ಆದಿಯ ಔದಾರ್ಯ ಅವರಿಗೇನೂ ಹೊಸತಲ್ಲ ನಿಜ. ಆದರೂ ಈ ಮಟ್ಟದ ಔದಾರ್ಯವೇ… ಅವರ ಬಾಯಿಯಿಂದ ಮಾತೇ ಹೊರಡಲಿಲ್ಲ.

ಅಂತೂ ಅಮೆರಿಕಕ್ಕೆ ಹೋಗುವ ಗುಂಪಿನಲ್ಲಿ ಅಂತಿಮವಾಗಿ ಆ ಇಬ್ಬರನ್ನೂ ಸೇರಿಸಿಕೊಂಡು ಎಲ್ಲರೂ ಹೊರಡುವುದೆಂದಾಯ್ತು. ಹೆಚ್ಚುವರಿ ತರಬೇತಿಯ ಅಷ್ಟೂ ದಿನಗಳಲ್ಲಿ ಆ ಇಬ್ಬರೂ ಆಗಾಗ್ಗೆ ಅಲ್ಲಿಗೆ ಬರುತ್ತಿದ್ದ ಆದಿಯನ್ನು ತಪ್ಪದೇ ಭೇಟಿ ಮಾಡಿ ತಮ್ಮ ಕೃತಜ್ಞತೆ ತೋರಿಸುವುದನ್ನು ಮಾಡುತ್ತಿದ್ದರು. ಅವರು ಅಷ್ಟೊಂದು ವಿನೀತರಾಗಿ ಇವನೆದುರಿಗೆ ಬಾಗಿ ನಿಲ್ಲುವಾಗ ಆದಿಯೇ ಗದರಿದ್ದ. ‘ನಿಮ್ಮಲ್ಲಿ ಪ್ರತಿಭೆಯಿದೆ. ಇಷ್ಟು ದಿನ ನೀವೇ ತೋರಿಸಿಕೊಳ್ಳುತ್ತಿರಲಿಲ್ಲ. ಈಗ ಸಿಕ್ಕಿದ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೀರಿ ಅಷ್ಟೆ. ಅದರಲ್ಲಿ ನನ್ನದೇನು ಹೆಚ್ಚಳ’ ಎಂದರೂ ಅವರು ಮಾತ್ರ `ನಿಮ್ಮಿಂದಾಗಿಯೇ ನಮಗೆ ಇಂತಹ ಅವಕಾಶ ಸಿಕ್ಕಿದ್ದು’ ಎನ್ನುವುದನ್ನು ಬೇರೆ ಬೇರೆ ತೆರನಲ್ಲಿ ಪ್ರಕಟಪಡಿಸುವುದನ್ನು ನಿಲ್ಲಿಸಲಿಲ್ಲ.

ತಮ್ಮಲ್ಲಿ ಕಾರ್ಯಕ್ರಮ ಬೇಕೆಂದು ಕೇಳಿಕೊಂಡ ಅಮೆರಿಕದ ಕನ್ನಡ ಸಂಘಗಳಲ್ಲಿ ಮೊದಲಿನವರು ಬೋಸ್ಟನ್ ಕನ್ನಡ ಸಂಘದವರು. ಶಾಸ್ತಿçಗಳೊಡನೆ ಇದ್ದ ಆ ಪತ್ರವನ್ನು ನೋಡಿದ ಅಂತ್ಯನಲ್ಲಿ ಅಮೆರಿಕಕ್ಕೆ ಹೋಗುವ ಅವಕಾಶದ ಬಗ್ಗೆ ತಿಳಿದಾಗಲೇ ಹುಟ್ಟಿದ್ದ ಆಸೆಯೊಂದು ದಿನ ದಿನಕ್ಕೆ ಬೆಳೆಯುತ್ತಿತ್ತು. ಆಗಲೇ ಅನಂತ ಕಲಿಯುತ್ತಿರುವ ಮಸಾಚುಸೆಟ್ಸ್ ಅಕ್ಕ ಪಕ್ಕ ಮತ್ತು ಅದಕ್ಕೆ ಹತ್ತಿರವಿರುವ ಎಲ್ಲ ಊರುಗಳ ಬಗ್ಗೆಯೂ ಮಾಹಿತಿಯನ್ನು ತುಸು ತುಸುವಾಗಿ ಸಂಗ್ರಹಿಸಲು ಪ್ರಾರಂಭಿಸಿದ್ದ ಅವನು. ಅದೂ ಆ ಊರುಗಳಲ್ಲಿರಬಹುದಾದ ಕನ್ನಡ ಸಂಘಗಳ ಬಗ್ಗೆ. ಅವುಗಳಲ್ಲಿ ಯಾವುದಾದರೂ ತಮಗೆ ಆಹ್ವಾನ ನೀಡಿದರೆ ಅಲ್ಲಿನ ಕಾರ್ಯಕ್ರಮದ ಸಂದರ್ಭದಲ್ಲಿ ತುಸು ಬಿಡುವು ಮಾಡಿಕೊಂಡು ಅಣ್ಣನನ್ನು ನೋಡಿಕೊಂಡಾದರೂ ಬರಬಹುದೇನೋ ಎನ್ನುವ ಆಸೆ ಅವನಿಗೆ.

ಬೋಸ್ಟನ್ ಮತ್ತು ಮಸಾಚುಸೆಟ್ಸ್ಗಳ ನಡುವಿನ ದೂರ ನೋಡಿದ. ಸುಮಾರು ೫೦ – ೬೦ ಮೈಲಿಗಳ ದೂರ. ಟ್ರೈನ್ ಅಥವಾ ರಸ್ತೆಯ ಮೂಲಕ ಬಂದರೆ ಹೆಚ್ಚೆಂದರೆ ಮುಕ್ಕಾಲು ಗಂಟೆಯ ದಾರಿ. ಅನಂತನಿಗೆ ಸುದ್ದಿ ಮುಟ್ಟಿಸಿದರೆ ಅವನೇ ಬಂದರೂ ಬಂದಾನು ಅಥವಾ ತಾನೇ ಒಂದೆರಡು ಘಂಟೆಯ ಮಟ್ಟಿಗೆ ಪುರುಸೊತ್ತು ಮಾಡಿಕೊಂಡು ಹೋಗಿ ಬಂದರೂ ಆಗಬಹುದು ಎನ್ನುವ ಆಲೋಚನೆ.

|ಇನ್ನು ನಾಳೆಗೆ |

‍ಲೇಖಕರು Admin

14 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading