ಪಿ ಪಿ ಉಪಾಧ್ಯ
37
ಅನಂತನನ್ನು ನೆನಸಿಕೊಂಡು ಮರುಗಿದಳು ಆ ತಾಯಿ…
ಅಂತ್ಯ ಈಗ ಅವನ ಅಂತರ್ಮುಖೀ ಬದುಕಿನಿಂದ ಪೂರ್ತಿಯಾಗಿ ಹೊರಬಂದಿದ್ದ. ತರಬೇತಿ ಕೇಂದ್ರದಲ್ಲಿ ಎಲ್ಲರೊಂದಿಗೆ ಸರಿಸಮನಂತೆಯೇ ಬೆರೆಯುವುದರ ಜೊತೆಗೆ ಮನೆಯಲ್ಲೂ ತಾನು ಅದೇ ಮನೆಗೆ ಸೇರಿದವನೆಂದು ತೋರಿಸಿಕೊಳ್ಳತೊಡಗಿದ್ದ. ವಾರಕ್ಕೊಮ್ಮೆ ಕೆಲವೊಮ್ಮೆ ಪುರುಸೊತ್ತಿದ್ದರೆ ವಾರದ ನಡುವೆಯೂ ಮನೆಗೆ ಬರುತ್ತಿದ್ದವ ಅಮ್ಮನ ಮೂಲಕ ಅಡಿಗೆಯವಳಿಗೆ ಹೇಳಿಸಿ ತನಗೆ ಬೇಕಾದುದನ್ನು ಮಾಡಿಸಿಕೊಂಡು ತಿನ್ನುತ್ತಿದ್ದ ಮತ್ತು ಕೆಲವೊಮ್ಮೆ ತನ್ನ ಗೆಳೆಯರಿಗೋಸ್ಕರ ಕಟ್ಟಿಸಿಕೊಂಡೂ ಹೋಗುತ್ತಿದ್ದ.
ಬೈಕಿಗೆ ಪೆಟ್ರೋಲು ಹಾಕಿಸಲು ಹಣ ಬೇಕಾದಾಗ ಮೊದಲಿನಂತೆ ನಾಚಿಕೊಳ್ಳುತ್ತಿರಲಿಲ್ಲ. ಆದಿಯೊಂದಿಗೆ ತಾನೇ ಕೇಳುತ್ತಿದ್ದ ಮತ್ತು ಕೇಳಿದ್ದಕ್ಕಿಂತ ತುಸು ಹೆಚ್ಚಾಗಿಯೇ ಇರುತ್ತಿದ್ದ ಆ ಹಣವನ್ನು ಖುಶಿಯಿಂದಲೇ ತೆಗೆದುಕೊಳ್ಳುತ್ತಿದ್ದ. ಹಾಗೆ ಹಣ ತೆಗೆದುಕೊಳ್ಳುವಾಗ ಅಣ್ಣನಿಗೆ ಪುರುಸೊತ್ತಿದೆಯೆಂದು ಕಂಡರೆ ತರಬೇತಿ ಕೇಂದ್ರದ ಚಟುವಟಿಕೆಗಳ ಬಗ್ಗೆ ಮಾತನಾಡುತ್ತಿದ್ದ. ಶಾಸ್ತ್ರೀಗಳ ನೇತೃತ್ವದಲ್ಲಿ ತಾವು ಅಂದು ಊರ ಯುವಕ ಸಂಘದ ಸಲುವಾಗಿ ಆಡಿದ ಅಭಿಮನ್ಯು ಕಾಳಗದ ಪ್ರಸಂಗವನ್ನು ಇನ್ನೂ ಪರಿಷ್ಕರಿಸಿ ತರಬೇತಿ ಪಡೆಯುತ್ತಿದ್ದುದನ್ನೂ ಅದರೊಂದಿಗೆ ಇನ್ನೊಂದೆರಡು ಪ್ರಸಂಗಗಳನ್ನೂ ತಯಾರಿ ಮಾಡಿಕೊಂಡು ದೇಶವಿಡೀ ಸುತ್ತುವ ಯೋಜನೆಯನ್ನು ಹಾಕಿಕೊಳ್ಳುತ್ತಿದ್ದುದರ ಬಗ್ಗೆಯೂ ಹೇಳಿದ್ದ. ಇಷ್ಟರಲ್ಲೇ ಕೇಂದ್ರ ನೃತ್ಯ ನಾಟಕ ಅಕಾಡೆಮಿ ತಮ್ಮ ಕಾರ್ಯಕ್ರಮವನ್ನು ಪ್ರಾಯೋಜಿಸಿದ ಪರವಾನಿಗಿ ಬರುತ್ತದೆ. ಹಾಗೆಯೇ ಶಾಸ್ತ್ರೀಗಳ ಮತ್ತು ಕೇಂದ್ರಕ್ಕೆ ಭೇಟಿಕೊಡುತ್ತಿದ್ದ ಪ್ರೊಫೆಸರ ಪ್ರಯತ್ನ ಫಲಿಸಿದರೆ ತಮ್ಮ ಗುಂಪು ವಿದೇಶ ಪ್ರವಾಸವನ್ನು ಕೈಗೊಳ್ಳಬೇಕಾಗಿ ಬಂದರೂ ಬರಬಹುದು ಎಂದಿದ್ದ. ಆದಿಗೆ ಸಂತೋಷವೋ ಸಂತೋಷ. ತಮ್ಮ ಆಶ್ರಯದಲ್ಲಿದ್ದ ಕೇಂದ್ರವೊAದು ಇಷ್ಟು ಮುಂದುವರಿಯುತ್ತಿದೆಯೆನ್ನವುದು ಒಂದಾದರೆ ತನ್ನ ತಮ್ಮನೇ ಅದರ ಮಂಚೂಣಿಯಲ್ಲಿದ್ದಾನೆ ಎನ್ನುವುದು ಅದಕ್ಕಿಂತ ಹೆಚ್ಚಿನದು.
ಆದಿ ತಮ್ಮನನ್ನು ಆಚೆಗೆ ಕಳುಹಿಸಿ ಆ ಸಂತೋಷವನ್ನು ಅಮ್ಮನೊಂದಿಗೆ ಹಂಚಿಕೊಳ್ಳಹತ್ತಿದ. ತಮ್ಮನ ಅದೃಷ್ಟವನ್ನು ಕಂಡು ಸಂತೋಷಪಡುವoತಹ ಅಣ್ಣಂದಿರು ಎಷ್ಟೊಂದು ಮಂದಿಯಿರುತ್ತಾರೆ. ಇಂತಹ ಅಣ್ಣನನ್ನು ಅರ್ಥಮಾಡಿಕೊಳ್ಳುವ ಮತ್ತು ಅವನೊಂದಿಗೆ ಬದುಕುವ ಅದೃಷ್ಟ ಆ ನತದೃಷ್ಟನಿಗೆ ಇಲ್ಲವಲ್ಲ ಎಂದು ಅನಂತನನ್ನು ನೆನಸಿಕೊಂಡು ಮರುಗಿದಳು ಆ ತಾಯಿ ಅಷ್ಟೆ.

ಅಂತ್ಯ ತನ್ನ ಸಂಶೋಧನೆಯ ನಡುವೆಯೂ ಪ್ರಸಂಗಗಳಲ್ಲಿ ಮುತುವರ್ಜಿಯಿಂದ ಪಾತ್ರ ನಿರ್ವಹಣೆ ಮಾಡುತ್ತಿದ್ದ. ಮಾತಿನಲ್ಲಿನ ಸಂಸ್ಕಾರ ಮತ್ತು ಅಭಿನಯದಲ್ಲಿನ ಲಾಲಿತ್ಯ ಅವನ ಪಾತ್ರವೊಂದು ವಿಶೇಷ ಎನ್ನುವಂತೆ ಮಾಡಿದ್ದುವು. ಅದರಲ್ಲಿಯೂ ಮುಖ ಮತ್ತು ವಿಶೇಷವಾಗಿ ಕಣ್ಣುಗಳಲ್ಲಿ ಹೊರ ಹೊಮ್ಮಿಸುವ ಭಾವನೆ ಪ್ರೇಕ್ಷಕರನ್ನು ನೇರವಾಗಿ ಮುಟ್ಟುತ್ತಿದ್ದುವು. ಅಭಿಮನ್ಯುವಿನ ವೇಷದಲ್ಲಿ ಅವನು ರಂಗಸ್ಥಳಕ್ಕಿಳಿದರೆ ಚಪ್ಪಾಳೆ ಶಿಳ್ಳೆಗಳನ್ನು ಬಿಡಿ ತರಬೇತಿ ಕೇಂದ್ರದ ಆಟಗಳಿಗೆ ಮುಂದಿನ ಬೆಂಚಿನಲ್ಲಿ ಆಹ್ವಾನಿತರಾಗಿ ಬಂದು ಕೂರುವ ವಿಮರ್ಶಕರ ಬಾಯಿಯೂ ಬಂದ್. ಹೊಗಳುವಿಕೆಯಲ್ಲದೆ ಬೇರೆ ಮಾತೇ ಬರುತ್ತಿರಲಿಲ್ಲ ಅವರಿಂದ. ಕೊನೆಗೆ ಅವರೇ ಹೇಳುವಂತೆ ಬರೀ ಹೊಗಳಿಕೆಯನ್ನೇ ಬರೆದರೆ ಅದು ವಿಮರ್ಶೆಯಾಗಲಿಕ್ಕಿಲ್ಲ ಎನ್ನುವ ಹೆದರಿಕೆಯಿಂದ ನಾವು ಸ್ಟೇಜಿನ ಉದ್ದಗಲ ಮತ್ತು ಹಿನ್ನೆಲೆಗೆ ಹಾಕಿದ ಪರದೆಯ ಬಗ್ಗೆ ಒಂದೆರಡು ಕಟು ಮಾತುಗಳನ್ನು ಬರೆಯಬೇಕಾಯ್ತ’ ಎನ್ನುತ್ತಿದ್ದರು.
ಅಂತ್ಯ ಸಂಶೋಧನೆಗೆ ಆರಿಸಿಕೊಂಡ ವಿಷಯ ಘಟ್ಟದ ಮೇಲಿನ ದಿನಗಳಿಂದಲೂ ಅವನನ್ನು ಕಾಡುತ್ತಿದ್ದ ಯಕ್ಷಗಾನ ಜಾನಪದ ಕಲೆಯಾಗಿಯೂ ಪುರುಷ ಪ್ರಧಾನವಾಗಿಯೇ ಉಳಿಯಿತು ಹೇಗೆ ಮತ್ತು ಜಾನಪದ ಕಲೆಯಾಗಿ ಹುಟ್ಟಿಕೊಂಡೂ ಇಷ್ಟೊಂದು ಶಾಸ್ತ್ರೀಯ ಲಕ್ಷಣಗಳನ್ನು ಹೇಗೆ ಅಳವಡಿಸಿಕೊಂಡಿತು ಎನ್ನುವುದು. ತನ್ನ ಯೋಜನೆಯನ್ನು ಶಾಸ್ತ್ರೀಗಳೊಂದಿಗೆ ದೀರ್ಘವಾಗಿ ಸಮಾಲೋಚಿಸಿದ್ದ. ಸುರು ಸುರುವಿಗೆ ಅಷ್ಟೊಂದು ಮುಂದುವರಿದ ವಿದ್ಯಾಭ್ಯಾಸವೂ ಇಲ್ಲದ ಈ ಹುಡುಗ ಇಂತಹ ಗುರುತರವಾದ ಕಾರ್ಯವನ್ನು ನಿಭಾಯಿಸಿಯಾನೇ ಎನ್ನುವ ಸಂಶಯ ಬಂದದ್ದಿತ್ತು ಅವರಿಗೆ. ಆದರೂ ಒಂದು ರೀತಿಯ ಅನ್ನದ ಋಣ ಅವರ ಬಾಯಿಯನ್ನು ಕಟ್ಟಿ ಹಾಕಿತ್ತು. ಆದರೆ ದಿನ ಕಳೆದಂತೆ ಅವನು ಇವರೊಂದಿಗೆ ಚರ್ಚಿಸುವಾಗ ಮಂಡಿಸುತಿದ್ದ ವಿಷಯದ ಅಗಾಧತೆ, ತೋರಿಸುತ್ತಿದ್ದ ಜ್ಞಾನದ ಆಳ ಅವರನ್ನು ದಂಗುಬಡಿಸಿತ್ತು. ಅಷ್ಟೇ ಅಲ್ಲ ಒಂದು ದಿನ ತಾನೇ ಸಂಶಯ ಬಂದರೆ ಇವನನ್ನು ಕೇಳಬೇಕಾದೀತೇನೋ ಎಂದೂ ಅನ್ನಿಸಲಿಕ್ಕೆ ಸುರುವಾಗಿತ್ತು. ಯಾವುದೇ ಪೂರ್ವಗ್ರಹವಿಲ್ಲದೆ ಅವನೊಂದಿಗೆ ಸಹಕರಿಸತೊಡಗಿದ್ದರು. ತನ್ನ ಸಂಶೋಧನಾ ಪ್ರಬಂಧಕ್ಕೆ ಹೆಸರೊಂದನ್ನು ಇಡಬೇಕೆಂದಾಗ ಮಾತ್ರ ಅವ ಶಾಸ್ತಿçಗಳ ಸಂಸ್ಕೃತ ಜ್ಞಾನದ ಲಾಭ ಪಡೆದಿದ್ದ.ಶಾಸ್ತ್ರೀಯವಲ್ಲದ ಶಾಸ್ತ್ರೀಯ ಕಲೆ – ಯಕ್ಷಗಾನ. ಎನ್ನುವುದಕ್ಕಿಂತ `ಶಾಸ್ತ್ರವಲ್ಲದ ಶಾಸ್ತ್ರೀಯ ಕಲೆ – ಯಕ್ಷಗಾನ’ ಎಂದು ಶಾಸ್ತ್ರೀಗಳು ಪರಿಷ್ಕರಿಸಿ ಸೂಚಿಸಿದ ಹೆಸರನ್ನೇ ಇಟ್ಟಿದ್ದ. ಜಿಜ್ಞಾಸೆಯುಂಟಾಗಬಾರದೆAದು ಹೆಸರಿನ ಬಗ್ಗೆಯೇ ಒಂದು ಪುಟದ ಟಿಪ್ಪಣಿಯನ್ನು ಬರೆದು ಶಾಸ್ತಿçಗಳಿಗೆ ತೋರಿಸಿದ.
ಮುಂದೆಲ್ಲ ಅಂತ್ಯನ ಪಾಂಡಿತ್ಯಪೂರ್ಣ ಬರಹ. ಯಾವುದನ್ನೂ ಕಲ್ಪಿಸಿಕೊಂಡು ಬರೆದದ್ದಲ್ಲ. ಯಕ್ಷಗಾನದ ಮೂಲಕ್ಕೇ ಹತ್ತೆಂಟು ಪುಟಗಳನ್ನು ಮೀಸಲಿಟ್ಟಿದ್ದ. ಆಟ, ಬಯಲಾಟವೆಂದು ಕರೆಸಿಕೊಳ್ಳುತ್ತಿದ್ದ ದಿನಗಳಿಂದ ಅವು ಯಕ್ಷಗಾನ ಬಯಲಾಟವಾಗುವರೆಗೆ. ಯಾರದೋ ದೊಡ್ಡವರ ಮನೆಯ ಜಗುಲಿಯನ್ನೇ ಚೌಕಿ ಮಾಡಿಕೊಂಡು ಅವರ ಹೊರಗಿನ ಅಂಗಳದಲ್ಲೇ ರಂಗಸ್ಥಳ ಕಟ್ಟಿಕೊಂಡು ಹೊನ್ನೆ ಎಣ್ಣೆಯ ಬುಡ್ಡಿ ದೀಪಗಳ ಬೆಳಕಿನಲ್ಲಿ ಬೆಳಗಾಗುವವರೆಗೆ ಆಡುತ್ತಿದ್ದ ಆಟದಿಂದ ಸುರುಮಾಡಿ ಇವತ್ತಿನ ಐನೂರು ರೂಪಾಯಿ ಟಿಕೆಟ್ಟಿನ ಟೆಂಟುಗಳಲ್ಲಿ ಆಡುವ ಎರಡು ಮೂರು ಗಂಟೆಗಳ ಆಟದವರೆಗೆ ವಿಸ್ತೃತವಾಗಿ ಬರೆದಿದ್ದ.
ಈ ವಿಕಾಸದ ಪ್ರತಿಯೊಂದು÷ಹೆಜ್ಜೆಯಲ್ಲೂ ಅಸ್ಥಿತ್ವವಾದಿಗಳಿಗೂ ಪ್ರಗತಿಗಾಮಿಗಳಿಗೂ ನಡೆದ ಯುದ್ಧ ವಾಗ್ಯುದ್ಧಗಳ ಬಗ್ಗೆ ಹೇಳುತ್ತ ಮಾನವನ ವಿಕಸನದ ಪ್ರಕ್ರಿಯೆಯಲ್ಲಿ ಬಹುಜನರ ವಿರೋಧದ ಹೊರತಾಗಿಯೂ ತೀರ ಜನಪದವಾಗಿದ್ದ ಯಕ್ಷಗಾನದಂತಹ ಕಲೆಯೂ ಅಪವಾದವಾಗಲು ಸಾಧ್ಯವಾಗಲಿಲ್ಲ ಎಂದು ಬರೆದಿದ್ದ. ಹೆಚ್ಚಾಗಿ ಮಳೆಯನ್ನೇ ನಂಬಿ ಬೇಸಾಯ ಮಾಡುತ್ತಿದ್ದ ರೈತಾಪಿ ಜನರು ಬೆಳೆ ಕೊಯ್ದಾದ ಮೇಲೆ ಖಾಲಿಯಿರುತ್ತಿದ್ದ ಗದ್ದೆಗಳಲ್ಲಿ ಆಡುತ್ತಿದ್ದ ಆಟವೆ ಬಯಲಾಟ. ಒಂದೇ ಬೆಳೆ ಬೆಳೆಯುತ್ತಿದ್ದು ಇನ್ನೊಂದು ಮಳೆಗಾಲ ಪ್ರಾರಂಭವಾಗುವ ವರೆಗೆ ಕೆಲಸವೇನೂ ಇಲ್ಲದ ಜನರಿಗೂ ಕಾಲ ಕಳೆಯಲು ಒಂದು ಸಾಧನ. ಜೊತೆಗೆ ಮನರಂಜನೆಯೂ. ಕಥೆಯೆಂದರೆ ರಾಮಾಯಣ ಮಹಾಭಾರತವೇ ಆಗಿದ್ದ ಕಾಲದಲ್ಲಿ ಬಯಲಾಟದ ಪ್ರಸಂಗಗಳೂ ಅದರಿಂದ ಆಯ್ದುಕೊಂಡವೇ.
ಪುರುಷ ಪ್ರಧಾನ ಸಮಾಜದಲ್ಲಿ ಮನರಂಜನೆಯಲ್ಲೂ ಪುರುಷ ವೇಷಗಳಿಗೇ ಪ್ರಾಧಾನ್ಯ. ಅವರ ಗಡಸಿನ ವೀರ್ಯವತ್ತಾದ ಸಂಭಾಷಣೆಗಳೇ ಆಕರ್ಷಣೆ. ಅಗಲವಾದ ಭುಜ ದಪ್ಪದ ತೊಡೆಗಳೇ ಪುರುಷ ಲಕ್ಷಣ ಎನ್ನುವ ನಂಬಿಕೆಯನ್ನು ಪುಷ್ಟೀಕರಿಸುವಲ್ಲಿ ಸಹಾಯಕವಾಗುವಂತಹ ವೇಷ ಭೂಷಣಗಳು. ಪ್ರಾರಂಭದ ಆಟಗಳಲ್ಲಿ ಸ್ತ್ರೀವೇಷ ಒಂದು ಪೋಷಕ ಪಾತ್ರವಷ್ಟೆ. ಏನಿದ್ದರೂ ಪುರುಷ ವೇಷಧಾರಿಗಳಿಗೆ ಆಕೆ ಅಡಿಯಾಳೇ. ಈ ಪ್ರವರ್ತಿ ಇಂದಿಗೂ ಪೂರ್ತಿಯಾಗಿ ಹೋಗದಿದ್ದರೂ ಅಲ್ಲಲ್ಲಿ ಸ್ತ್ರೀ ಪ್ರಧಾನ ಪಾತ್ರಗಳ ಪ್ರಸಂಗಗಳೂ ರೂಪಿತಗೊಳ್ಳುತ್ತಿವೆ. ಆದರೂ ಅವರ ಸಂಭಾಷಣೆಯಲ್ಲಿ ಸ್ತ್ರೀ ಸಹಜ ಮೆಲುಮಾತಿನ ಬದಲು ಮೂಲದ ಪುರುಷ ವೇಷಗಳ ಮಾತಿನಲ್ಲಿನ ಗತ್ತೇ ಕಾಣಿಸುತ್ತಿದೆ.
ಪ್ರತಿ ಅಧ್ಯಾಯ ಮುಗಿದಾಗಲೂ ಅದನ್ನು ಮೊದಲು ಶಾಸ್ತ್ರೀಗಳಿಗೆ, ಅವರಿಂದ ಒಪ್ಪಿಗೆ ಪಡೆದ ಮೇಲೆ ಯುನಿವರ್ಸಿಟಿಯ ಪ್ರೊಫೆಸರಿಗೆ ತೋರಿಸುತ್ತಿದ್ದ. ಅಧ್ಯಾಯದ ಕೊನೆಯಲ್ಲಿ ಅವನು ಸೂಚಿಸುತ್ತಿದ್ದ ಆಕರ ಗ್ರಂಥಗಳ ಪಟ್ಟಿಯೇ ಶಾಸ್ತ್ರೀಗಳನ್ನು ಬೆರಗುಗೊಳಿಸುತ್ತಿತ್ತು.
ಪ್ರಸಂಗದ ಮೊದಲ ವೇಷಧಾರಿಗಳಾದ ಕೋಡಂಗಿ ಮತ್ತು ಬಾಲ ಗೋಪಾಲರ ಪಾತ್ರದ ಬಗ್ಗೆ ಅಂತ್ಯನ ಅನಿಸಿಕೆ ಸ್ವತಃ ಶಾಸ್ತ್ರೀಗಳನ್ನೇ ಚಿಂತಿಸುವoತೆ ಮಾಡಿತ್ತು. ಅವರ ತಿಳುವಳಿಕೆ ಪ್ರಕಾರ ಆ ವೇಷಧಾರಿಗಳನ್ನು ತರುವುದರ ಉದ್ದೇಶ ಮೊದಲಿಗೆ ಗಣಪತಿಯನ್ನು ಪೂಜಿಸಿ ಎರಡನೆಯದಾಗಿ ಶ್ರೀಕೃಷ್ಣ ಬಲರಾಮರನ್ನು ಸ್ವಾಗತಿಸಿ ಪೂಜಿಸುವುದು ಜನಪದ. ಯಾವುದೇ ಕಾರ್ಯಕ್ಕೆ ಮೊದಲು ಮತ್ತು ಅಂತ್ಯದಲ್ಲಿ ದೇವರ ಪೂಜೆ ಸ್ವಾಭಾವಿಕ. ಅಲ್ಲದೆ ಸಂಜೆಯ ಊಟ ಮುಗಿಸಿ ಬಣ್ಣ ಹಚ್ಚಲು ಕುಳಿತ ಹಿರಿಯ ವೇಷಧಾರಿಗಳಿಗೆ ಸ್ವಲ್ಪ ಸಮಯಾವಕಾಶವೂ ಬೇಕು. ಹೊತ್ತು ಮುಳುಗಿದ ಕೂಡಲೇ ಅಬ್ಬರಚಂಡೆ ಬಾರಿಸಿ ಊರಿನವರನ್ನು ಆಹ್ವಾನಿಸಿದ ಮೇಲೆ ರಂಗಸ್ಥಳವನ್ನು ಖಾಲಿ ಬಿಡುವ ಹಾಗೂ ಇಲ್ಲ. ಹಾಗೆಂದು ಮಂಗನ ಹಾಗೆ ಕುಣಿಯುವ ಕೋಡಂಗಿಯನ್ನು ಎಷ್ಟೆಂದು ಕುಣಿಸುವುದು. ಅದಕ್ಕೇ ಜನರಿಗೆ ಬೇಜಾರಾಗಬಾರದೆಂದು ಈ ಕೃಷ್ಣ ಬಲರಾಮರು.
ಆದರೆ ಅಂತ್ಯ ಅದಕ್ಕೆ ಬೇರೆಯೇ ಭಾಷ್ಯ ಬರೆದಿದ್ದ. ಬಾಲ ಗೋಪಾಲರೆಂದರೆ ಇನ್ನೂ ತರಬೇತಿ ಪಡೆಯುತ್ತಿರುವ ವೇಷಧಾರಿಗಳು. ಈಗಿನ ಹಾಗೆ ತರಬೇತಿ ಕೇಂದ್ರಗಳಿಲ್ಲದ ಕಾಲದಲ್ಲಿ ಸ್ಟೇಜಿನ ಮೇಲೆಯೇ ತರಬೇತಿ ಕೊಡುತ್ತಿದ್ದುದು ಈ ಬಾಲ ಗೋಪಾಲರ ವೇಷಗಳ ಮೂಲಕ. ಹೆಸರೇ ಸೂಚಿಸುವಂತೆ ಅವರು ಬಾಲಕರು. ಯಾವುದರಲ್ಲೂ ನುರಿತ ಕೌಶಲ್ಯವಿಲ್ಲದ ಹೊಸಬರೆಂದೇ ಹೇಳಬಹುದಾದವರು. ಅವರನ್ನು ಕೃಷ್ಣ ಬಲರಾಮರೆಂದು ಕರೆಯಲು ಪ್ರಾರಂಭಿಸಿದ್ದೂ ಕಲೆಯ ಪ್ರಾರಂಭದಲ್ಲಲ್ಲ. ತುಂಬ ದಿನಗಳ ನಂತರ. ಅದೂ ಎಲ್ಲ ಕಡೆಗಳಲ್ಲಲ್ಲ. ಹಾಗೆಂದು ಬೇರೆ ಯಾವುದೇ ಹೆಸರುಗಳಿಂದ ಕರೆಯದೆ ಆ ಜೋಡಿಯನ್ನು ಬಾಲಗೋಪಾಲರೆಂದು ಕರೆದದ್ದೂ ಕಾರಣವಿಲ್ಲದೆಯಲ್ಲ.
ಯಕ್ಷಗಾನ ಪ್ರಸಂಗಗಳಲ್ಲಿ ಬಹುಪಾಲು ಮಹಾಭಾರತದ ಮತ್ತು ಭಾಗವತದ ಘಟನೆಗಳನ್ನು ಆಧರಿಸಿದವು. ಅಂದ ಮೇಲೆ ಆ ಕಾರ್ಯಕ್ರಮದ ಸುರು ಮಾಡುವುದಕ್ಕೂ ಅವುಗಳ ಸಂಬಂಧ ಬೇಕಲ್ಲವೇ. ಮಹಾಭಾರತದಲ್ಲಿ ಆ ಮೇರುಕೃತಿಯ ಕಾರಣ ಮತ್ತು ಹೂರಣವೇ ಎನ್ನಬಹುದಾದ ಕೃಷ್ಣನನ್ನು ಬಿಟ್ಟರೆ ಬೇರೆ ಯಾರನ್ನು ವ್ಯಾಪಕವಾಗಿ ಬಳಸಿಕೊಳ್ಳಬಹುದು? ಅದು ಬೇರೆ ಮುಂದಾಳು ಅಷ್ಟು ಪ್ರಬಲನಾಗಿದ್ದೂ ಸಹ ಗೋಪಾಲಕರಷ್ಟು ನಿರ್ಲಿಪ್ತರಾದ ಹಿಂಬಾಲಕರು ಮಹಾಭಾರತದಲ್ಲಿ ಯಾರಿಗಿದ್ದಾರೆ. ಇದೆಲ್ಲ ಸೇರಿ ಬಹುಶಃ ಆ ಪ್ರಾರಂಭದ ವೇಷಧಾರಿಗಳಿಗೆ ಬಾಲ ಗೋಪಾಲರೆಂದೇ ಹೆಸರಿಟ್ಟದ್ದು. ತುಸು ಅಡ್ಡ ದಿಡ್ಡ ಹೆಜ್ಜೆಯಿಟ್ಟು ಅಸಂಬದ್ಧವಾಗಿ ನಡೆದುಕೊಂಡರೂ ಸಭಿಕರು ಕ್ಷಮಿಸುತ್ತಾರೆ ಎನ್ನುವ ದೃಷ್ಟಿಯೂ ಇರಬಹುದು. ಎಷ್ಟೆಂದರೂ ಬಾಲಕರಲ್ಲವೇ!
ಜನಪದ ಕಲೆ ಶಾಸ್ತ್ರೀಯವಾದದ್ದರ ಬಗ್ಗೆಯೂ ಅಂತ್ಯನ ವಿವರಣೆ ವಿಶಿಷ್ಠವಾಗಿತ್ತು. ಜನ ವಿರಾಮ ಕಾಲವನ್ನು ಕಳೆಯುವ ಸಲುವಾಗಿ ಪ್ರಾರಂಭಿಸಿದ ಒಂದು ಮನರಂಜನೆಯ ಕಾರ್ಯಕ್ರಮ ಹುಟ್ಟಿ ಬೆಳೆದು ಬಂದ ರೀತಿಯನ್ನು ವಿಶದವಾಗಿ ವಿವರಿಸಿದ ಅವ ಕಲೆಯಲ್ಲಿ ವಿದ್ಯಾವಂತರು ಭಾಗವಹಿಸುತ್ತ ಬಂದ0ತೆ ಶಾಸ್ತ್ರೀಯ ರೂಪ ತಳೆಯಲು ಪ್ರಾರಂಭಿಸಿರಬೇಕು ಎಂದಿದ್ದ. ಆದರೆ ಶಿಷ್ಠ ಸಮಾಜ ಯಕ್ಷಗಾನವನ್ನು ಒಂದು ಕಲೆಯೆಂದು ಒಪ್ಪಲು ತೆಗದುಕೊಂಡ ಅವಧಿಯೂ ದೀರ್ಘವಾದುದು.
ಬಹುಶಃ ತೀರ ಜನಪದದಿಂದ ಶಾಸ್ತ್ರೀಯವಾಗಲು ಇನ್ನೊಂದು ಕಾರಣ ಕಲೆ ಶಿಷ್ಠ ಸಮಾಜಕ್ಕೆ ಸ್ವೀಕಾರ್ಹವಾಗಬೇಕು ಎನ್ನುವ ಆತುರವೂ ಇದ್ದಿರಬಹುದು. ಮೊದಲು ಯಾವುದೋ ಒಂದು ಪ್ರಾಸಕ್ಕೆ ಹೆಜ್ಜೆ ಹಾಕುತ್ತಿದ್ದ ಪಾತ್ರಧಾರಿಗಳನ್ನು ಶಿಸ್ತಿಗೆ ಒಳಪಡಿಸುತ್ತ ಸಂಗೀತದ ವಿವಿಧ ರಾಗಕ್ಕೆ ಪಕ್ಕಾಗಿಸುತ್ತ ಅದಕ್ಕೆ ಒಪ್ಪುವ ತಾಳವನ್ನೂ ರೂಪಿಸಿ ಪಾತ್ರಧಾರಿಗಳ ಹಾವ ಭಾವ ಹೆಜ್ಜೆಗಳನ್ನೂ ಅದಕ್ಕೆ ಒಗ್ಗಿಸುತ್ತ ಕಲೆ ನಿಧಾನವಾಗಿ ಶಾಸ್ತ್ರೀಯತೆಯತ್ತ ವಾಲಿತು. ಪ್ರಸಂಗಗಳನ್ನು ಲಿಖಿತ ರೂಪಕ್ಕೆ ಇಳಿಸಲು ತೊಡಗಿದಾಗ ಅದು ಇನ್ನೂ ಶಾಸ್ತ್ರೀಯವಾಗುತ್ತ ಹೋಯಿತು. ಆದರೆ ಯಕ್ಷಗಾನದ ಒಂದು ವೈಶಿಷ್ಟ್ಯವೆಂದರೆ ಅದು ಎಷ್ಟು ಶಾಸ್ತ್ರೀಯವಾಗುತ್ತ ಹೋದರೂ ತನ್ನ ಜನಪದದ ಸೊಗಡನ್ನು ಬಿಟ್ಟು ಕೊಡದಿದ್ದುದು.
ವೇಷ ಭೂಷಣಗಳಲ್ಲಿ ಒಂದು ತೆರನ ಶಿಸ್ತು ಮತ್ತು ಸಮಾನ ಗುಣ ಕಂಡು ಬಂದರೂ ಅದು ತನ್ನ ಮೂಲ ಜನಪದ ರೂಪವನ್ನು ಕಳೆದುಕೊಳ್ಳಲಿಲ್ಲ. ಸಂಭಾಷಣೆಯ ಧಾಟಿಯೂ ಅಷ್ಟೆ. ಜನಪದಕ್ಕೆ ತೀರ ಒಗ್ಗುವ ವೀರರಸ ಪ್ರಾಧಾನ್ಯತೆ. ಹಳ್ಳಿಯ ಜನತೆಯಲ್ಲಿ ಯಾವುದು ಇಲ್ಲವೋ ಯಾವುದನ್ನು ಬಯಸುತ್ತಾರೋ ಅದನ್ನು ನಟನೆಯಲ್ಲಾದರೂ ಅನುಭವಿಸುವ, ನೋಡುವ ಆಸೆ. ಅವೆಲ್ಲ ಇಷ್ಟು ಕಾಲದ ನಂತರವೂ ತನ್ನ ಮೂಲ ಸೊಗಡನ್ನು ಕಳೆದುಕೊಳ್ಳದಿದ್ದುದೂ ಇದೇ ಕಾರಣಕ್ಕಾಗಿ. ಹಾಗೆಯೇ ಒಟ್ಟಂದದ ಪ್ರಸಂಗವೂ ಮೊದಲನೇ ವೇಷ, ಎರಡನೇ ವೇಷ ಹಿಮ್ಮೇಳ ಮುಮ್ಮೇಳ ಎನ್ನುವ ಯಕ್ಷಗಾನಕ್ಕೇ ವಿಶಿಷ್ಠವಾದ ಕಲ್ಪನೆಯನ್ನು ಉಳಿಸಿಕೊಂಡು ಬಂದುದು.
ಹೀಗೇ ಎಲ್ಲ ವಿಷಯಗಳ ಬಗ್ಗೆಯೂ ವಿಶದವಾಗಿ ಹೊಸ ಹೊಸ ದೃಷ್ಟಿಯಲ್ಲಿ ಅವನ್ನು ವಿಶ್ಲೇಷಿಸುತ್ತ ಬರೆದ ಆ ಪುಟಗಳನ್ನು ಓದುವುದೇ ಒಂದು ವಿಶೇಷ ಅನುಭವವಾಗಿತ್ತು ಶಾಸ್ತ್ರೀಗಳಿಗೆ. ಮೊದ ಮೊದಲು ಬರವಣಿಗೆಯಲ್ಲೇನಾದರೂ ತಪ್ಪುಗಳು ನುಸುಳಿರಬಹುದೋ ಎಂದು ಹುಡುಕುವ ದೃಷ್ಟಿಯಿಂದ ಓದುತ್ತಿದ್ದ ಶಾಸ್ತ್ರೀಗಳು ಒಂದೆರಡು ಅಧ್ಯಾಯಗಳ ನಂತರ ಮುಂದಿನ ಕಂತಿಗಾಗಿ ಕಾಯತೊಡಗಿದ್ದರು. ತಪ್ಪು ಹುಡುಕಲು ಅಲ್ಲ. ಹೊಸತನ್ನು ಓದಿದಾಗ ಆಗುವ ಆನಂದವನ್ನು ಸವಿಯಲು.
ಸುಮಾರು ಇನ್ನೂರೈವತ್ತು ಪುಟಗಳ ಆ ಹೊತ್ತಗೆಯಲ್ಲಿ ಯಕ್ಷಗಾನ ತುಸು ತಡವೇ ಆದರೂ ಹೊರದೇಶದವರ ಗಮನ ಸೆಳೆದುದನ್ನು ಹೇಳುತ್ತ ಆ ಜನಗಳ ಅಭಿರುಚಿಗೆ ಹೊಂದಿಕೊಳ್ಳುವ ಪ್ರಯತ್ನದಲ್ಲಿ ಇನ್ನೂ ತುಸು ಬದಲಾವಣೆ ಹೊಂದಿ ಹೆಚ್ಚು ಶಾಸ್ತ್ರೀಯವಾದರೂ ಅಲ್ಲಿಯೂ ತನ್ನ ಜನಪದ ಮೂಲವನ್ನು ಮರೆಯಲಿಲ್ಲ. ಅದೂ ಜರ್ಮನಿಯ ಇಬ್ಬರು ಹೆಂಗಸರು ಇಲ್ಲಿಗೇ ಬಂದು ಉಳಿದು ಆ ಕಲೆಯನ್ನು ಅಭ್ಯಾಸ ಮಾಡಿ ತಮ್ಮ ಭಾಷೆಗೆ ಹಲವು ಪ್ರಸಂಗಗಳನ್ನು ತರ್ಜುಮೆ ಮಾಡುವಾಗ ಸುಲಭದಲ್ಲಿ ಮಾಯವಾಗಬಹುದಾಗಿದ್ದ ಜನಪದದದ ಸೊಗಡನ್ನು ಹಿಡಿದಿಟ್ಟ ಅವರ ಪ್ರಯತ್ನ ಶ್ಲಾಘನೀಯ ಎಂದಿದ್ದ. ಇದನ್ನು ಓದಿದ ಪ್ರೊಫೆಸರ್ ಗಣೇಶ ಅವರು ಯುನಿವರ್ಸಿಟಿಗೆ ತಿರುಗಿ ಹೋದವರೇ ಲೈಬ್ರೆರಿಯನ್ನು ಜಾಲಾಡಿ ಅಂತ್ಯ ಪ್ರಸ್ತಾವಿಸಿದ್ದ ಆ ಭಾಷಾಂತರವನ್ನು ಹುಡುಕಿ ಓದಿದ್ದರು.
| ಇನ್ನು ನಾಳೆಗೆ |






0 Comments