ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಿ ಪಿ ಉಪಾಧ್ಯ ಸರಣಿ ಕಥೆ 33- ಆದಿ ಹೇಳುತ್ತಿದ್ದ ಸುದ್ದಿಯೇ ಗಟ್ಟಿ…

ಪಿ ಪಿ ಉಪಾಧ್ಯ

33

ಆದಿ ಹೇಳುತ್ತಿದ್ದ ಸುದ್ದಿಯೇ ಗಟ್ಟಿ...

ನಿಗದಿತ ವೇಳೆಗೆ ಕಾರ್ಯಕ್ರಮ ಪ್ರಾರಂಭ. ಅದೇ ಶಾಲೆಯ ಮಕ್ಕಳಿಂದ ಪ್ರಾರ್ಥನೆ. ಸಂಘದ ಕಾರ್ಯದರ್ಶಿಯಿಂದ ಸ್ವಾಗತ. ಸ್ವಾಗತ ಭಾಷಣದ ಉದ್ದಕ್ಕೂ ಅವನು ಆದಿಯನ್ನು ಕೊಂಡಾಡಿದ್ದ. ಬಂದ ಮಂತ್ರಿಗಳಿಗಿಂತ ಹೆಚ್ಚಾಗಿ ಆದಿಯ ಬಗ್ಗೆಯೇ ಹೇಳಿದ್ದ. ಊರಿನಲ್ಲಿ ಆದಿಯಂತಹವರಿದ್ದರೆ ಸರಕಾರದ ಅಗತ್ಯವೇ ಇಲ್ಲ ಎಂದ. ಮಂತ್ರಿಗಳೂ ತಮ್ಮ ಭಾಷಣದಲ್ಲಿ ಆದಿಯನ್ನು ಹೊಗಳಿದರು. ಆದಿ ಉತ್ತರ ಕೊಡುತ್ತ ತಾನು ಖಂಡಿತವಾಗಿಯೂಆ ಹೊಗಳಿಕೆಗೆ ಅರ್ಹನಲ್ಲವೆಂದೂ ಅದೆಲ್ಲ ಊರಿನ ಜನರು ತನ್ನ ಬಗ್ಗೆಯಿಟ್ಟ ಒಳ್ಳೆಯ ಭಾವನೆಯೆಂದೂ ಹೇಳಿದ. ಈ ಎಲ್ಲದರಿಂದ ತಾನು ಇನ್ನೂ ವಿನೀತನಾಗಿ ಹೆಚ್ಚಿನ ಸೇವೆ ಮಾಡುವ ಶಕ್ತಿ ದೊರೆಯಲಿ ಎಂದು ಕೇಳಿಕೊಂಡ.

ಮಗನಿಗೆ ಮಾಡುತ್ತಿರುವ ಸನ್ಮಾನ ಮತ್ತು ಅಂತ್ಯನ ಯಕ್ಷಗಾನವನ್ನು ನೋಡಲೆಂದು ಬಂದ ಕಮಲಮ್ಮನನ್ನು ಮುಂದಿನ ಸಾಲಿನಲ್ಲಿ ಕುಳ್ಳಿರಿಸಿದ್ದರು ಹುಡುಗರು.

ಆದಿಯನ್ನು ಹೊಗಳುವಾಗ ಮತ್ತು ಆದಿ ವಿನೀತನಾಗಿ ಅವರ ಸನ್ಮಾನಕ್ಕೆ ಉತ್ತರಿಸುವಾಗ ಕಣ್ಣಂಚನ್ನು ಒದ್ದೆಯಾಗಿಸಿಕೊಳ್ಳುತ್ತಲೇ ಇದ್ದ ಆಕೆ ಅಂತ್ಯ ಅಭಿಮನ್ಯುವಿನ ಪಾತ್ರ ಧರಿಸಿ ಸ್ಟೇಜಿನ ಮೇಲೆ ಬಂದಾಗ ದಂಗಾಗಿದ್ದಳು. ಅವ ತರಬೇತಿ ಕೇಂದ್ರವನ್ನು ಹೊಕ್ಕು ಆಗಲೇ ಎರಡು ವರ್ಷದ ಮೇಲಾಗಿರಬೇಕು. ಅದರ ನಂತರ ಒಮ್ಮೆಯೂ ಮನೆಗೆ ಬಂದಿರಲಿಲ್ಲ. ಹಾಗೆಲ್ಲ ಹೊರ ಹೋಗುವ ಅಭ್ಯಾಸವಿರದ ಕಮಲಮ್ಮನೂ ಅವನನ್ನು ನೋಡಲು ಹೋಗಿರಲಿಲ್ಲ. ಆ ತಾಯಿಯ ಮಟ್ಟಿಗೆ ಆಗೀಗ್ಗೆ ಅವನನ್ನು ನೋಡಿಕೊಂಡು ಬಂದು ಆದಿ ಹೇಳುತ್ತಿದ್ದ ಸುದ್ದಿಯೇ ಗಟ್ಟಿ.

ಗಿರಗಿಟ್ಟಿಯಂತೆ ಸ್ಟೇಜಿನ ಮೇಲೆ ಮಂಡಿಯೂರಿ ಸುತ್ತಿದ ಅವ ಯುದ್ಧಕ್ಕೆ ಹೊರಟು ನಿಂತು ತಾಯಿಯ ಅಪ್ಪಣೆಯನ್ನು ಬೇಡುವ ದೃಶ್ಯ.

`ಆಶಿರ್ವದಿಸಿ ಕಳುಹಿಸು ತಾಯೀ.. ನಿನ್ನ ಮಗನ್ನು ಜಯಶಾಲಿಯಾಗುವಂತೆ ಹರಸು ತಾಯೀ’ ಎಂದು ಮಂಡಿಯೂರಿ ಕೇಳುತ್ತಿದ್ದ ಅಂತ್ಯನೆದುರಿಗೆ ತಾನೇ ನಿಂತಿದ್ದೆನೇನೋ ಅನ್ನಿಸಿತ್ತು ಕಮಲಮ್ಮನಿಗೆ.

`ಚಕ್ರವ್ಯೂಹವನ್ನು ಭೇದಿಸಿ, ಶತ್ರುಗಳ ತಲೆಯನ್ನು ಛೇದಿಸಿ ನಮ್ಮಪ್ಪನ ಮರ್ಯಾದೆಯನ್ನು ಕಾಪಾಡುವಂತೆ ಆಶೀರ್ವದಿಸು ಅಮ್ಮ’

`ನನ್ನ ಮಗನಿಗೆಲ್ಲಿಯ ಸೋಲು. ಅವನಿರುವುದೇ ಗೆಲ್ಲಲು. ನೀನೆಂದೂ ಜಯಶಾಲಿಯೇ ಮಗು’ ಎಂದು ಭಾಗವತರ ಹಾಡಿಗೆ ಒಂದು ಸುತ್ತು ಕುಣಿದು ಬಂದ ಆ ತಾಯಿ ನಿಂತು ಹೇಳುವಾಗ ಹೆಮ್ಮೆಯಿಂದ ಕೇಳುತ್ತ ನಿಂತ ಮಗ. ಕಮಲಮ್ಮನಿಗೆ ತಾನು ಏನೋ ಕಳೆದು ಕೊಂಡಂತಹ ಭಾವ. ಹೆಣ್ಣು ಮಗು ಬೇಕೆಂದು ಬಯಸಿದಾಗ ನಿರೀಕ್ಷೆಯ ಹೊರತಾಗಿಯೂ ಗಂಡಾಗಿ ಹುಟ್ಟಿ ಅವಜ್ಞೆಗೆ ಒಳಗಾದ ಮಗು. ಕೈ ಕೂಸಿದ್ದಾಗಲೇ ಮಕ್ಕಳಿಲ್ಲದ ಅಣ್ಣ ಅತ್ತಿಗೆ ಕೇಳಿದರೆಂದು ಅವರಿಗೆ ಕೊಟ್ಟ ಮಗು. ಮುಂದೆ ಅವರ ಮಗುವಾಗಿ ಬೆಳೆಯಿತೇ ವಿನಃ ತನ್ನ ಮಡಿಲಿನಲ್ಲೆಂದೂ ಕೂರಲಿಲ್ಲ. ಹದಿನಾರರ ಪೋರನಾಗಿ ಬಂದಾಗಲೂ ತಾನು ಅವನನ್ನು ತೆಕ್ಕೆಗೆ ತೆಗೆದುಕೊಳ್ಳಲೇ ಇಲ್ಲ. ಬಹುಶಃ ತಾನು ಆ ಹಕ್ಕನ್ನು  ಕಳೆದುಕೊಂಡೇ ಬಿಟ್ಟಿದ್ದೇನೆ ಎಂದು ಒಳ ಮನಸ್ಸು ಹೇಳುತ್ತಿತ್ತೇನೋ.. ಹಾಗೆಯೇ ಯಕ್ಷಗಾನ ತರಬೇತಿ ಕೇಂದ್ರಕ್ಕೆ ಸೇರಿದ. ಉಣ್ಣುವುದಕ್ಕೆ ಉಡುವುದಕ್ಕೆ ತೊಂದರೆಯಿಲ್ಲ. ಏನಾದರೂ ಕಡಿಮೆಯಾದರೆ ಆದಿಯಿದ್ದಾನೆ ನೋಡಿಕೊಳ್ಳುವುದಕ್ಕೆ. ಆದರೆ ತಾಯಿಯ ಪ್ರೀತಿ….? ಕೊನೆಗೂ ಅದರಿಂದ ವಂಚಿತನೇ ಆದ. ಈಗ ಸ್ಟೇಜಿನ ಮೇಲೆ ತಾಯಿಯೊಡನೆ ಸೆರಗೊಡ್ಡಿ ಬೇಡಿಕೊಳ್ಳುತ್ತಿದ್ದ ಅಂತ್ಯನನ್ನು ಕಂಡದ್ದೇ ಕಮಲಮ್ಮನ ಕಣ್ಣಲ್ಲಿ ನೀರು ಧಾರೆಯಾಗಿ ಹರಿಯ ತೊಡಗಿತ್ತು.

ಸಭಾ ಕಾರ್ಯಕ್ರಮ ಮುಗಿದು ಸ್ಟೇಜಿನ ಮೇಲಿದ್ದವರೆಲ್ಲ ಯಕ್ಷಗಾನವನ್ನು ನೋಡುವ ಸಲುವಾಗಿಯೇ ಕೆಳಗೆ ಎದುರಿನ ಸಾಲಿನಲ್ಲಿ ಕುಳಿತಿದ್ದರು. ಅಮ್ಮನ ಪಕ್ಕದಲ್ಲಿಯೇ ಕುಳಿತಿದ್ದ ಆದಿ ಸುರಿಯುತ್ತಿದ್ದ ಕಣ್ಣೀರನ್ನೂ ಒರೆಸಿಕೊಳ್ಳದೆ ಕುಳಿತಿದ್ದ ತಾಯಿಯನ್ನು ಕಂಡು ಸಂಕಟಪಟ್ಟಿದ್ದ. ತಾಯಿಕರುಳಿನ ನೋವು ಅರ್ಥವಾಗಿತ್ತು. `ಅಮ್ಮ…. ಅಂತ್ಯನನ್ನು ಕಾರ್ಯಕ್ರಮ ಮುಗಿದ ಮೇಲೆ ಮನೆಗೇ ಬರಲು ಹೇಳಿದ್ದೇನೆ. ಒಂದೆಂಟು ದಿನ ಇರುತ್ತಾನೆ’ ಎಂದಿದ್ದ.

`ಆದರೂ ಆದಿ… ಮಗುವಿಗೆ ಕಳೆದು ಹೋದ ದಿನಗಳನ್ನು ತಿರುಗಿ ಕೊಡಲಾದೀತೇ ನನ್ನಿಂದ…’

ಆದಿಯ ಹತ್ತಿರ ಉತ್ತರವಿರಲಿಲ್ಲ. ಅಷ್ಟರಲ್ಲಿ ಸ್ಟೇಜಿನ ಮೇಲೆ ಗಟ್ಟಿಯಾಗಿ ಬಡಿಯಲಾರಂಭಿಸಿದ್ದ ಚಂಡೆಯ ಸದ್ದಿಗೆ ಅಭಿಮನ್ಯು ಪುನಃ ಹೆಜ್ಜೆ ಹಾಕಲು ಪ್ರಾರಂಭಿಸಿದ. ಅವರ ಗಮನ ಅತ್ತ ಹೋಗಿತ್ತು. ಚಕ್ರವ್ಯೂಹವನ್ನು ಪ್ರವೇಶಿಸಿದ ಹದಿನಾಲ್ಕರ ಪೋರ ಅತಿರಥ ಮಹಾರಥರುಗಳನ್ನು ಸೋಲಿಸುತ್ತ, ಎದುರು ಬಂದವರನ್ನು ತರಿಯುತ್ತ ಮುಂದುವರಿಯುತ್ತಿದ್ದಾನೆ. ಭಾಗವತರ ಹಾಡು. ರಣ ಚಂಡಿಯೇ ಅವತಾರವೆತ್ತಿ ಬಂದಳೇನೋ ಎನ್ನುವಂತೆ ಹಿಂದೆ ಮುಂದೆ ಎಡಕ್ಕೆ ಬಲಕ್ಕೆ ಕತ್ತಿ ಬೀಸುತ್ತ ನಡು ನಡುವೆ ಬತ್ತಳಿಕೆಯಿಂದ ಸೆಳೆದ ಬಾಣಗಳನ್ನು ಹೆದೆಯೇರಿಸುತ್ತ ಮುಂದುವರಿಯುತ್ತಿದ್ದ ಈ ಬಾಲಕ ಯಾರು… ಯಮನೇ ನಮ್ಮೆದುರಿಗೆ ಬಂದನೇ… ಎಂದು ತೆರೆದ ಬಾಯಿ ಬಿಟ್ಟಂತೆ ನೋಡುತ್ತಿದ್ದಾರೆ ಕೌರವರು. ಆದರೆ ಚಕ್ರವ್ಯೂಹವನ್ನು ರಚಿಸಿದ ದ್ರೋಣಾಚಾರ್ಯರು ಮೂಲೆಯಲ್ಲಿ ನಿಂತು ಕುಹಕದ ನಗುವನ್ನು ನಗುತ್ತಲೇ ಇದ್ದರು. ವ್ಯೂಹದಲ್ಲಿ ನುಗ್ಗಿದ ಮಗುವಿನ ಕೈ ಸೋಲ ತೊಡಗಿತ್ತು. ಹೆದೆಯೆತ್ತಿ, ಗದೆ ಬೀಸಿ ತೋಳು ಜೋತು ಬಿದ್ದಿತ್ತು. ಪಲಾಯನಕ್ಕಲ್ಲದಿದ್ದರೂ ಸಹಾಯಕ್ಕೆ ತನ್ನವರಿದ್ದಾರೆಯೇ ಎಂದು ನೋಡಿದರೆ ಸುತ್ತಲೂ ವೈರಿಗಳೇ. ತಮ್ಮವರ ಮುಖವೇ ಇಲ್ಲ. ಹಾಹಾಕಾರ. ಕೇಕೇ… ಶಕುನಿ, ದ್ರೋಣರೇ ಮೊದಲಾದವರು. ಕರ್ಣ ಶಲ್ಯರೇ ಮೊದಲಾದ ಸೇನಾ ಪಟುಗಳು. ಅಸಹಾಯಕ ಮಗುವಿನ ಎದೆಯನ್ನು ಹೊಕ್ಕಿತ್ತು ಕರ್ಣನ ಬಾಣ. ‘ಹಾ ಅಮ್ಮಾ..’ ಎನ್ನುತ್ತ ಅಭಿಮನ್ಯು ಧರೆಗುರುಳಿದಾಗ ಕಿರಿಚಿಯೇ ಬಿಡುವವರಿದ್ದರು ಕಮಲಮ್ಮ. ಪಕ್ಕದಲ್ಲಿಯೇ ಕುಳಿತಿದ್ದ ಆದಿ ಅಮ್ಮನ ಕೈ ಒತ್ತಿದ್ದ. ಅದರೊಂದಿಗೆ ಅಂದಿನ ಪ್ರಸಂಗ ಮುಗಿದಿತ್ತು.

ಮುಂದೆ ಕುಳಿತುಕೊಳ್ಳಲಾಗದ ಕಮಲಮ್ಮ ಆ ಕಾರ್ಯಕ್ರಮ ಮುಗಿದೊಡನೆಯೇ ಯಾರಿಗೂ ಕಾಯದೆ ಮನೆಗೆ ಹೊರಟಿದ್ದರು. ಆದಿ `ಸ್ವಲ್ಪ ಆಚೀಚೆ ನೋಡಿಕೊಂಡು ಬರುತ್ತೇನೆ ಅಮ್ಮ. ಅಷ್ಟರಲ್ಲಿ ಅಂತ್ಯ ರೆಡಿಯಾಗಿದ್ದರೆ ಅವನನ್ನೂ ಕರೆದುಕೊಂಡು ಬರುತ್ತೇನೆ’ ಎಂದಿದ್ದ.

ಆದರೆ ಹುಡುಗರೆಲ್ಲ ಸೇರಿ ಆದಿಯನ್ನು ಕೂಡಲೇ ಕಳುಹಿಸಿದ್ದರು. `ಇವತ್ತು ನೀವು ಯಾವ ಕೆಲಸವನ್ನೂ ಮಾಡಬಾರದು. ನಾವೇ ಎಲ್ಲ ನೋಡಿಕೊಳ್ಳುತ್ತೇವೆ’ ಎಂದು ಒತ್ತಾಯ ಬೇರೆ ಮಾಡಿದರು. ಶಾಲೆಯ ಹತ್ತಿರವೇ ಮನೆ. ಹತ್ತು ನಿಮಿಷದ ಹಾದಿ. ಯುವಕ ಸಂಘದವರ ಉತ್ಸಾಹದಿಂದಾಗಿ ಊರಿನ ಓಣಿ ಓಣಿಗಳೆಲ್ಲ ಅಗಲವಾದ ದಾರಿಗಳಾದದ್ದಷ್ಟೇ ಅಲ್ಲ ವಿದ್ಯುತ್ ದೀಪಗಳನ್ನೂ ಹಾಕಿಸಿದ್ದರು. ರಾತ್ರಿಯ ಹೊತ್ತೂ ತಿರುಗಲಡ್ಡಿಯಿಲ್ಲ. ಹಾಗಾಗಿ ಅಂತ್ಯನನ್ನು ಕರೆದುಕೊಂಡೇ ಹೋಗುತ್ತೇನೆಂದು ಒಳಗೆ ಹೋದ ಆದಿ ಇನ್ನೂ ತಯಾರಾಗಿರದಿದ್ದ ಅಂತ್ಯನನ್ನು ಕಂಡು `ವೇಷ ಕಳಚಿ, ಬಣ್ಣ ಅಳಿಸಿಕೊಂಡು ಮನೆಗೆ ಬರಲೇಬೇಕು’ ಎಂದು ಒತ್ತಾಯ ಮಾಡಿ ತಾನೊಬ್ಬನೇ ಹೊರಟ.

ಅಂತ್ಯನಿಗೂ ಹಾಗೆಯೇ. ಆದಿಯಣ್ಣ ಅಂದರೆ ಈಗೀಗ ಸ್ವಲ್ಪ ಸ್ವಲ್ಪವೇ ಹೆಚ್ಚಾಗುತ್ತಿದ್ದ ಅಭಿಮಾನ. ಸ್ವಲ್ಪ ಸ್ವಲ್ಪ ಪ್ರೀತಿ. ಮನೆಯ ಉಳಿದವರ ಬಗ್ಗೆ ಇಲ್ಲದ ಸಲಿಗೆಯೂ. ತರಬೇತಿ ಕೇಂದ್ರಕ್ಕೆ ಆಗಾಗ ಬರುತ್ತಿದ್ದವನೂ ಆದಿ. ಮತ್ತು ಹಾಗೆ ಬಂದಾಗೆಲ್ಲ ತಪ್ಪದೇ ತನ್ನನ್ನು ಮಾತನಾಡಿಸುತ್ತಿದ್ದವನೂ. ಹಾಗಾಗಿ ಇಲ್ಲಿಯವರೆಗೆ ಬಂದು ಮನೆಗೆ ಬಾ ಎಂದ ಅಣ್ಣನ ಮಾತನ್ನು ಅಲ್ಲಗಳೆಯಲು ಮನಸ್ಸಾಗಿರಲಿಲ್ಲ. ಅದು ಬಿಟ್ಟರೆ ಅಂತ್ಯನಿಗೆ ಮನೆಗೆ ಹೋಗುವ ತರಾತುರಿಯೇನೂ ಇರಲಿಲ್ಲ. 

| ಇನ್ನು ನಾಳೆಗೆ |

‍ಲೇಖಕರು Admin

5 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading