ಪಿ ಪಿ ಉಪಾಧ್ಯ
29
ಅಂತ್ಯನ ಆಳವಾದ ಜ್ಞಾನವನ್ನು ಕಂಡವರು ದಿಗ್ಭ್ರಮೆ..
ಅಂತ್ಯನಿಗೆ ಒಂದು ಪ್ರತ್ಯೇಕ ಕೋಣೆ. ಶಾಸ್ತ್ರೀಗಳೇ ಖುದ್ದಾಗಿ ಅವನ ಅನುಕೂಲತೆ ಅನನುಕೂಲತೆಗಳನ್ನು ವಿಚಾರಿಸುತ್ತಿರುವುದನ್ನು ನೋಡಿದ ಉಳಿದವರಿಗೂ ಅಂತ್ಯನ ಬಗ್ಗೆ ಗೌರವ. ವಯಸ್ಸಿನಲ್ಲಿ ಬಹಳ ಮಂದಿ ವಿದ್ಯಾರ್ಥಿಗಳು ಇವನಿಗಿಂತ ಹಿರಿಯರು. ಓದಿನಲ್ಲಿಯೂ. ಒಂದಿಬ್ಬರು ಎಮ್ ಎ ಮಾಡಿದವರೂ ಇದ್ದರು. ಜೊತೆಗೇ ಎಂಟನೇ ಕ್ಲಾಸು ಪಾಸು ಮಾಡಿದವರೂ ಇದ್ದಾರೆ.
ಕಲಿತವರು, ಶ್ರೀಮಂತರು ಹವ್ಯಾಸವೆಂದು ಕಲಿಯಲು ಬಂದರೆ ಎಂಟು ಒಂಭತ್ತನೇ ತರಗತಿ ಮುಗಿಸಿ ಬಂದವರು, ಸ್ವಲ್ಪ ವಯಸ್ಸಾದವರು ಹೊಟ್ಟೆಪಾಡಿನ ದಾರಿಯಾಗಲೆಂದು ಕಲಿಯಲು ಬಂದವರು. ಇಲ್ಲಿ ಶಾಸ್ತ್ರೀಗಳಿಂದ ತರಬೇತಾದವರೆಂದರೆ ಮೇಳಕ್ಕೆ ಸೇರಿಕೊಳ್ಳಲು ಸುಲಭವಾಗಬಹುದೆನ್ನುವ ಆಸೆ ಕೆಲವರಿಗೆ. ಅದರಿಂದಲೇ ಮುಂದಿನ ಬದುಕು ಸುಗಮವಾಗುವ ಭರವಸೆ. ಆದರೆ ಎಲ್ಲರಿಗೂ ಯಜಮಾನರ ಮಗನೇ ಇಲ್ಲಿಗೆ ಬಂದು ಸೇರಿದ್ದಾನೆಂದಾದಾಗ ಒಂದು ರೀತಿಯ ಸಂಭ್ರಮ. ಲವಲವಿಕೆ.
ಮೊದಲ ವಾರವೆಲ್ಲ ಆ ಸಂಭ್ರಮದಲ್ಲೇ ಕಳೆದಿತ್ತು. ನಂತರವೇ ಕ್ರಮ ಬದ್ಧವಾದ ತರಬೇತಿ. ನಾಲ್ಕು ಮಂದಿ ತರಬೇತುದಾರರೂ ಪ್ರಶಸ್ತವಾಗಿ ತಮ್ಮ ಕಾರ್ಯ ನಿರ್ವಹಿಸುತ್ತಿದ್ದರು. ಪ್ರತಿಯೊಬ್ಬ ಅಭ್ಯರ್ಥಿಗೂ ಎರಡು ವರ್ಷಗಳ ಕಾಲ ತರಬೇತಿ. ಆ ಅವಧಿ ಮುಗಿಯುವಾಗ ಪ್ರತಿಯೊಬ್ಬನೂ ತಾನು ಆಯ್ದುಕೊಂಡ ಕ್ಷೇತ್ರದಲ್ಲಿ ಪರಿಣಿತಿಯನ್ನು ಸಾಧಿಸಿರಬೇಕು. ಶಾಸ್ತ್ರೀಗಳು ಮತ್ತು ಆ ನಾಲ್ವರು ತರಬೇತುದಾರರೂ ಸೇರಿಕೊಂಡು ನಡೆಸುವ ಪರೀಕ್ಷೆಯಲ್ಲಿ ಪಾಸಾಗಬೇಕು.
ಅನಂತರ ಪ್ರತಿಯೊಬ್ಬನೂ ಮಂಗಳೂರು ವಿಶ್ವವಿದ್ಯಾನಿಲಯದ ಜನಪದ ಕಲೆಯ ವಿಭಾಗದ ಪ್ರೊಫೆಸರರೊಬ್ಬರು ನಡೆಸುವ ಮೌಖಿಕ ಪರೀಕ್ಷೆಯನ್ನು ಎದುರಿಸಬೇಕು. ಅವರು ಇಲ್ಲಿಗೇ ಬರುತ್ತಾರೆ. ಮತ್ತು ಅವರೇ ವಿದ್ಯಾರ್ಥಿಗಳ ಪರಿಣಿತಿಯ ಮಟ್ಟವನ್ನು ನಿರ್ಧರಿಸುವವರು. ತೃಪ್ತಿಯಾಗದ ಕೆಲವು ಸಂದರ್ಭಗಳಲ್ಲಿ ಅವರು ಅಭ್ಯರ್ಥಿಗಳನ್ನು ಮರು ತರಬೇತಿಗೆ ಶಿಫಾರಸು ಮಾಡಿದ್ದೂ ಇತ್ತು. ಅಲ್ಲಿ ಅನುತ್ತೀರ್ಣ ಎನ್ನುವ ಮಾತಿರಲಿಲ್ಲ.

ತರಬೇತಾದವನು, ತರಬೇತಾಗಬೇಕಾದವನು ಎನ್ನುವುದಷ್ಟೇ ಅಲ್ಲಿನ ವ್ಯತ್ಯಾಸ. ನಿರೀಕ್ಷಿತ ಮಟ್ಟವನ್ನು ಮುಟ್ಟದವನನ್ನು ತರಬೇತಾಗಬೇಕಾದವನು ಎಂದು ವರ್ಗೀಕರಿಸಿ ಇನ್ನೊಂದು ಅವಧಿಗೆ ಅಲ್ಲಿಯೇ ಉಳಿಸಿಕೊಳ್ಳುತ್ತಾರೆ. ಆ ಅವಧಿಯಲ್ಲಿ ಅವರ ಖರ್ಚೆಲ್ಲವನ್ನೂ ಸಂಸ್ಥೆಯೇ ವಹಿಸಿಕೊಳ್ಳುತ್ತದೆ. ಹಾಗೆಂದು ಯಾರೂ ಇನ್ನೂ ತರಬೇತಾಗಬೇಕಾದವನು ಎನ್ನುವ ಹಣೆಪಟ್ಟಿಯನ್ನು ಕಟ್ಟಿಕೊಳ್ಳಲು ತಯಾರಿರುವುದಿಲ್ಲ. ಎಲ್ಲರೂ ಎರಡು ವರ್ಷಗಳ ಅವಧಿಯಲ್ಲಿಯೇ ತರಬೇತಾದವನು ಎನ್ನುವ ಅರ್ಹತಾ ಪತ್ರದೊಂದಿಗೆ ಅಲ್ಲಿಂದ ಹೊರ ಹೋಗಲು ಬಯಸುತ್ತಾರೆ.
ತರಬೇತಿ ಪ್ರಾರಂಭವಾದಾಗ ಅಂತ್ಯನಿಗೆ ಯಾವ ಶಾಖೆಯಲ್ಲಿ ತಾನು ತರಬೇತಿ ಪಡೆದುಕೊಳ್ಳಬೇಕೆಂದು ನಿರ್ಧರಿಸಲು ಆಗಿರಲಿಲ್ಲ. ಅದರಿಂದ ಅಂತಹ ತೊಂದರೆಯೂ ಆಗಿರಲಿಲ್ಲ. ಯಾಕೆಂದರೆ ಮೊದಲ ಆರು ತಿಂಗಳು ಎಲ್ಲರೂ ಎಲ್ಲ ವಿಷಯಗಳಲ್ಲೂ ಕನಿಷ್ಠ ಜ್ಞಾನ ಪಡೆದುಕೊಳ್ಳಬೇಕೆಂಬುದು ನಿಯಮ. ಆ ಅವಧಿಯಲ್ಲಿಯೇ ಮುಂದೆ ಯಾವ ಶಾಖೆಯಲ್ಲಿ ಪರಿಣಿತಿ ಪಡೆಯಬೇಕೆಂಬುದನ್ನು ನಿರ್ಧರಿಸಬೇಕು. ಆ ಲೆಕ್ಕದಲ್ಲಿ ನೋಡಿದರೆ ಅಂತ್ಯ ಮೊದಲ ಆರು ತಿಂಗಳಲ್ಲಿ ಏನು ಕಲಿಯಬೇಕಾಗಿತ್ತೋ ಅಷ್ಟು ಜ್ಞಾನವನ್ನು ಆಗಲೆ ಸಂಪಾದಿಸಿಯಾಗಿತ್ತು.
ಅವನಾಗಿಯೇ ಹೇಳದಿದ್ದರೂ ತರಬೇತುದಾರರ ಗಮನಕ್ಕೆ ಅದು ಬಂದಿತ್ತು. ಆದರೂ ಅಂತ್ಯ ವಿಧೇಯನಾಗಿ ಕುಳಿತು ಕೇಳುತ್ತಿದ್ದ. ಅಲ್ಲಲ್ಲಿ ಟಿಪ್ಪಣಿ ಮಾಡಿಕೊಳ್ಳುತ್ತ ಹೊಸತಾಗಿ ಕಲಿಯಲು ಬಂದ ಅಭ್ಯರ್ಥಿಗಳಿಗಿಂತ ಹೆಚ್ಚು ಆಸಕ್ತಿಯಿಂದ ಗಮನ ಕೊಡುತ್ತಿದ್ದ. ಆದರೆ ಆ ಅವಧಿಯಲ್ಲಿ ತನ್ನ ತಿಳಿವಿನಲ್ಲಿನ ಕೊರತೆಯೂ ಅನುಭವಕ್ಕೆ ಬರತೊಡಗಿತ್ತು. ಕ್ರಮಬದ್ಧವಾಗಿ ಕಲಿಯುವುದಕ್ಕೂ ಸಂದರ್ಭದ ಅಗತ್ಯಕ್ಕನುಗುಣವಾಗಿ ಅಲ್ಲಲ್ಲಿ ತೇಪೆ ಹಾಕುವ ಉದ್ದೇಶದಿಂದ ಅಭ್ಯಾಸ ಮಾಡುವುದಕ್ಕೂ ಇರುವ ವ್ಯತ್ಯಾಸ ಅರಿವಾಗುತ್ತಿತ್ತು.
ಆ ಆರು ತಿಂಗಳ ಅವಧಿಯ ತರಬೇತಿ ಮುಗಿದಾಗ ಅಂತ್ಯ ನಿರ್ಧರಿಸಿದ್ದ. ತಾನಿಲ್ಲಿ ಸೇರಿರುವುದು ಎಲ್ಲರಂತೆ ಸರ್ಟಿಫಿಕೇಟು ಪಡೆಯಲು ಅಲ್ಲ. ಅಂತಹ ಸರ್ಟಿಫಿಕೇಟಿನಿಂದ ತನಗೆ ಆಗಬೇಕಾದದ್ದೇನೂ ಇಲ್ಲ. ತನಗೆ ಬೇಕಾಗಿರುವುದು ಯಕ್ಷಗಾನದ ಜ್ಞಾನ. ಎಲ್ಲ ವಿಭಾಗಗಳಲ್ಲೂ ಪರಿಣಿತಿ. ಜೊತೆಗೆ ತಪ್ಪು ಹೆಜ್ಜೆ ಹಾಕುತ್ತ ಮಾವನೂರಿನ ಮೇಷ್ಟರಿಂದ ತಿದ್ದಿಸಿಕೊಳ್ಳುತ್ತಿದ್ದಾಗಲೇ ತನ್ನಲ್ಲಿ ಉದ್ಭವಿಸುತ್ತಿದ್ದ ಪ್ರಶ್ನೆಗಳಿಗೆ ಉತ್ತರ.
ಹಾಗಾಗಿ ಉಳಿದವರಂತೆ ಯಾವುದೋ ಒಂದು ವಿಭಾಗದಲ್ಲಿ ಪರಿಣಿತಿ ಪಡೆದು ಅರ್ಹತಾ ಪತ್ರ ತೆಗೆದುಕೊಳ್ಳುವುದರ ಬಗ್ಗೆ ಗಮನ ಕೊಡದೆ ಎಲ್ಲ ಶಾಖೆಗಳಲ್ಲೂ ತಾನು ಪರಿಣಿತಿ ಪಡೆಯಬೇಕೆಂದು ನಿರ್ಧರಿಸಿದ. ಉಳಿದವರಿಗಿದ್ದಂತೆ ಸಮಯದ ಪರಿಮಿತಿಯೂ ಇಲ್ಲದ್ದರಿಂದ ಎಲ್ಲವನ್ನೂ ಒಂದೊಂದಾಗಿ ಕಲಿಯಲು ಸುರು ಮಾಡಿದ. ಅದೆಲ್ಲವನ್ನೂ ಶಾಸ್ತ್ರೀಗಳಿಗೆ ಹೇಳಿ ಅವರ ಒಪ್ಪಿಗೆ ಪಡೆದುಕೊಂಡ ಮತ್ತು ತನ್ನ ಪ್ರಶ್ನೆಗಳಿಗೆ ತಾನೇ ಉತ್ತರ ಹುಡುಕಿಕೊಳ್ಳುವ ಪ್ರಯತ್ನವನ್ನೂ ಮಾಡಹತ್ತಿದ.
ಕೇಂದ್ರದಲ್ಲಿಯೂ ಅವನಿಗೆ ವಿಶೇಷ ಸ್ಥಾನವಿತ್ತಾದ್ದರಿಂದ ಅವನ ಬಯಕೆಯ ದಾರಿಯಲ್ಲಿ ಮುಂದುವರಿಯಲು ತೊಂದರೆಯೇನು ಆಗಿರಲಿಲ್ಲ. ಅಷ್ಟೇ ಅಲ್ಲ. ಸಾಮಾನ್ಯವಾಗಿ ತರಬೇತಿಯಲ್ಲಿರುವವರಿಗೆ ಮೌಖಿಕ ಪರೀಕ್ಷೆಯ ಹೊರತಾಗಿ ಲಭ್ಯವಿಲ್ಲದ ಯುನಿವರ್ಸಿಟಿ ಪ್ರೊಫೆಸರರ ಹತ್ತಿರ ಹೋಗಲೂ ಅವನಿಗೆ ಅನುಮತಿಯಿತ್ತು. ಒಂದೆರಡು ಬಾರಿ ಪ್ರೊಫೆಸರ್ ಸಾಹೇಬರು ಅವನೊಂದಿಗೆ ಮಾತನಾಡಲು ಹಿಂಜರಿದರೂ ಒಮ್ಮೆ ಮಾತಿಗೆ ಕುಳಿತ ಮೇಲೆ ಅವನ ಆಳವಾದ ಜ್ಞಾನವನ್ನು ಕಂಡವರು ದಿಗ್ಭ್ರಮೆ ಹೊಂದಿದ್ದರು ಮತ್ತೆ ಮುಂದೆಂದೂ ಅಂತ್ಯನ ಹತ್ತಿರ ಮಾತನಾಡುವ ಅವಕಾಶವನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಅಷ್ಟೇ ಅಲ್ಲ ಎಂದಾದರೂ ಇಲ್ಲಿಗೆ ಬಂದಾಗ ಅಂತ್ಯ ತನ್ನನ್ನು ಭೇಟಿ ಮಾಡಲು ಬರಲಿಲ್ಲವೆಂದರೆ ಉಳಿದವರೆಲ್ಲರಿಗೂ ಆಶ್ಚರ್ಯವಾಗುವಂತೆ ಇವರೇ ಹುಡುಕಿಕೊಂಡು ಹೋಗುತ್ತಿದ್ದರು.
ಪ್ರ್ಯಾಕ್ಟೀಸಿನ ಹೊತ್ತನ್ನು ಬಿಟ್ಟು ಉಳಿದ ಸಮಯದಲ್ಲಿ ಬೇರೆಯವರು ಪಟ್ಟಾಂಗ ಹೊಡೆಯುತ್ತಲೋ ಹೊರಗಡೆ ಆ ಹಳ್ಳಿಯ ನಡುವಿನ ಪೇಟೆಯನ್ನು ಸುತ್ತುತ್ತಲೋ ಕಳೆದರೆ ಅಂತ್ಯ ಮಾತ್ರ ಕೇಂದ್ರದ ಲೈಬ್ರೆರಿಯಲ್ಲಿ ಕಳೆಯುತ್ತಾನೆ. ಆ ದಪ್ಪ ದಪ್ಪ ಗ್ರಂಥಗಳು ಆ ಶೆಲ್ಫನ್ನು ಸೇರಿದ ಮೇಲೆ ಕೆಳಗಿಳಿಯದೇ ಇದ್ದಂಥವುಗಳನ್ನು ಇವನೇ ಧೂಳು ಕೊಡವಿ ಬಿಡಿಸಿ ಓದುತ್ತಾನೆ. ಎಷ್ಟೋ ಸಲ ಶಾಸ್ತ್ರೀಗಳೇ ಗಮನಿಸಿದ್ದಾರೆ.
ಗ್ರಂಥಾಲಯದ ಕೊಠಡಿಯೊಳಗೆ ಹೊಕ್ಕ ಅವನನ್ನು ಹಿಂಬಾಲಿಸಿ ಹೋದ ಅವರು ಅಂತ್ಯ ತನ್ನನ್ನು ಗಮನಕ್ಕೇ ತೆಗೆದುಕೊಳ್ಳದೆ ಓದುವುದರಲ್ಲಿ ತಲ್ಲೀನನಾಗಿರುವುದನ್ನು ನೋಡಿದ್ದಾರೆ. ಬರೀ ಎಸ್‌ಎಸ್‌ಎಲ್‌ಸಿ ಓದಿದ ಇನ್ನೂ ಹದಿನೆಂಟನ್ನು ದಾಟದ ಹುಡಗ ಅದೂ ಮನೆಯಲ್ಲಿ ಧಂಡಿಯಾಗಿ ಉಂಡು ಉಡಲು ಇರುವವನೊಬ್ಬ ಯಕ್ಷಗಾನದಂತಹ ಜನಪದ ಕಲೆಯೊಂದರ ಬಗ್ಗೆ ಇಷ್ಟು ಆಸಕ್ತಿ ತೋರಿಸುವುದೆಂದರೆ… ಅವರಿಗೆ ಆಶ್ಚರ್ಯವೇ.
|ಇನ್ನು ನಾಳೆಗೆ |






0 Comments