ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಿ ಪಿ ಉಪಾಧ್ಯ ಸರಣಿ ಕಥೆ 25 – ಯಕ್ಷಗಾನದ ಗೀಳನ್ನು ಅಂಟಿಸಿಕೊ೦ಡು ಬಂದ ಅಂತ್ಯ…

ಪಿ ಪಿ ಉಪಾಧ್ಯ

25

ಮತ್ತೆ ಶಾಮಣ್ಣನವರ ಬಾಯಿಯಿಂದ ಮಾತಿಲ್ಲ...

ಹುಟ್ಟಿನಿಂದಲೇ ಯಕ್ಷಗಾನದ ಗೀಳನ್ನು ಅಂಟಿಸಿಕೊ೦ಡು ಬಂದ ಅಂತ್ಯ ಅದನ್ನೇ ಬೆಳೆಸಿಕೊಂಡಿದ್ದ. ಹೆಜ್ಜೆ ಮುಂದಿಡುತ್ತ ನಡೆಯುವುದನ್ನು ಕಲಿಯುತ್ತಿರುವಾಗಲೇ ಎಲ್ಲಿಯಾದರೂ ಚಂಡೆಯ ಶಬ್ದ ಕೇಳಿಸಿದರೆ ಇವನ ಹೆಜ್ಜೆಯೂ ಅದನ್ನು ಅನುಸರಿಸಿಯೇ ಇರುತ್ತಿತ್ತು. ಮಾತು ಕಲಿಯುವ ಮುಂಚೆಯೇ ಪಾತ್ರೆಗಳನ್ನು ಕವುಚಿ ಹಾಕಿಕೊಂಡು ಚಂಡೆಯ೦ತೆ ಬಡಿಯಲು ಆರಂಭಿಸಿದ್ದ.

ಕೊನೆಯ ಅಳಿಯನ ಮೇಲೆ ಹೆಚ್ಚು ಪ್ರೀತಿಯಿದ್ದ ಆ ದೊಡ್ಡ ಮಾವ ಇವರೂರಿಗೆ ಬಂದಾಗ ಅಮ್ಮನ ಕಣ್ಣು ತಪ್ಪಿಸಿ ಅನ್ನದ ತಪ್ಪಲೆಯೊಂದನ್ನು ಎಳೆದುಕೊಂಡು ಬಂದು ತನ್ನ ಪುಟ್ಟ ಬೆರಳುಗಳಿಂದ ಬಡಿಯುತ್ತಿದ್ದ ಮಗುವನ್ನು ಕಂಡ ಆ ಮಾವನಿಗೆ ಸಂಭ್ರಮವೋ ಸಂಭ್ರಮ. ಆಗಲೇ ನಮ್ಮ ಅಂತ್ಯ ಶೇಣಿಯೋ ಚಿಟ್ಟಾಣಿಯೋ ಆಗುತ್ತಾನೆ' ಎಂದು ಭವಿಷ್ಯ ನುಡಿದಿದ್ದ. ಅಷ್ಟೇ ಅಲ್ಲ ತಂಗಿಯ ಹತ್ತಿರ ಮಕ್ಕಳಿಲ್ಲದ ತಾನು ಅವನನ್ನು ಕರೆದುಕೊಂಡು ಹೋಗಿ ಸಾಕಿಕೊಳ್ಳುವುದಾಗಿಯೂ ಶಾಲೆಗೂ ಅಲ್ಲೇ ಕಳಿಸುವುದರ ಜೊತೆಗೆ ಯಕ್ಷಗಾನ ತರಬೇತಿಯನ್ನೂ ಕೊಡಿಸುವುದಾಗಿ ಹೇಳಿದ್ದ. ಹೆಣ್ಣು ಮಗು ಬೇಕೇ ಬೇಕು ಮತ್ತು ಈ ಸಲವಂತೂ ಅದೇ ಆಗುವುದೆಂದು ಅಚಲವಾಗಿ ನಂಬಿದ್ದ ಕಮಲಮ್ಮನ ಮನಸ್ಸಿನ ಮೂಲೆಯಲ್ಲಿದ್ದ ನಿರಾಸೆ ಹೆಚ್ಚು ತಕರಾರೇನೂ ಮಾಡದೆ ತನಗೆ ಬೇಡವಾಗಿದ್ದ ಆ ಗಂಡು ಮಗುವನ್ನು ಅಣ್ಣನೊಂದಿಗೆ ಕಳುಹಿಸಲು ಒಪ್ಪುವಂತೆ ಮಾಡಿತ್ತು.. ಗಂಡನನ್ನೊ೦ದು ಮಾತು ಕೇಳಬೇಕೆಂದು ಆಕೆಗೂ ಅನ್ನಿಸಿರಲಿಲ್ಲ.

ಶಾಮಣ್ಣನವರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಹಾಗೆ ಮಾವನೊಂದಿಗೆ ತನ್ನೂರನ್ನು ಬಿಡುವಾಗ ಅಂತ್ಯನಿಗೆ ಎರಡು ವರ್ಷ. ಮಕ್ಕಳಿಲ್ಲದ ಮಾವನ ಮತ್ತು ಅತ್ತೆಯ ಮುಚ್ಚಟೆತನದಲ್ಲಿ ಅಂತ್ಯ ಚನ್ನಾಗಿಯೇ ಬೆಳೆದ. ಜೊತೆಗೆ ಹುಟ್ಟಿನಿಂದಲೇ ಬಂದ ಯಕ್ಷಗಾನದ ಖಯಾಲಿ ಇಲ್ಲಿ ಮಾವನ ಪ್ರೋತ್ಸಾಹವೂ ಸೇರಿ ನಾಲ್ಕನೇ ವಯಸ್ಸಿಗೆ ಕಾಲಿಡುತ್ತಿದ್ದ ಅಂತ್ಯನ ಹೆಜ್ಜೆಗಳು ಯಕ್ಷಗಾನದ ವೇಷಧಾರಿಗಳ ಹೆಜ್ಜೆಯಂತೆಯೇ ಕಾಣಿಸುತ್ತಿದ್ದುವು. ಆ ಮಾವನಿಗಂತೂ ತಾನು ನುಡಿದ ಭವಿಷ್ಯವನ್ನು ನಿಜ ಮಾಡುವ ನಿಟ್ಟಿನಲ್ಲಿ ಅಂತ್ಯ ತನ್ನ ಪ್ರತೀ ಹೆಜ್ಜೆಯನ್ನೂ ಇಡುತ್ತಿದ್ದಾನೆ ಎಂದು ಎಲ್ಲಿಲ್ಲದ ಸಂಭ್ರಮ.

ವರ್ಷ ಕಳೆದು ಶಾಲೆಗೆ ಹೋಗಲು ಪ್ರಾರಂಭಿಸಿದಾಗಲೂ ಅವನ ಆ ಚಟುವಟಿಕೆ ನಿಲ್ಲಿಲ್ಲ. ಬದಲಿಗೆ ಹೆಚ್ಚಾಗಿತ್ತು. ಮಾವನ ಜೊತೆಗೆ ಸುತ್ತ ಮುತ್ತಲ ಊರುಗಳ ಬಯಲಾಟಕ್ಕೆ ತಪ್ಪದೇ ಹೋಗುತ್ತಿದ್ದ. ಶಾಲೆಯ ರಜಾ ದಿನಗಳಲ್ಲಿ ಹೋಗಲಿ ಶಾಲೆಯಿದ್ದ ದಿನಗಳಲ್ಲೂ ತಪ್ಪಿಸುತ್ತಿರಲಿಲ್ಲ. ಮಾವನ ಜೊತೆ ಜೊತೆಗೆ ನಡೆಯಲು ಸಾಧ್ಯವಾಗುವವರೆಗೆ ನಡೆಯುತ್ತಾನೆ. ಆಗುವುದಿಲ್ಲವೆಂದಾಕ್ಷಣ ಮಾವನ ಬಂಟ ಮಂಜನ ಹೆಗಲನ್ನೇರುತ್ತಾನೆ. ವಾಪಾಸು ಬರುವಾಗಂತೂ ಮಂಜನ ಹೆಗಲೇ. ಆಟದ ಗರದಿಂದ ಹೊರಡುವಾಗ ಹಾಗೆ ಹೆಗಲೇರಿದವನಿಗೆ ಮನೆ ಮುಟ್ಟಿದಾಗಲೇ ಎಚ್ಚರ. ಮಂಜನಿಗೂ ಆ ಬಗ್ಗೆ ಚಿಂತೆಯಿರಲಿಲ್ಲ. ಒಡೇರ ಅಳಿಯ, ಬಹುಶಃ ವಾರೀಸು ಇಲ್ಲದ ಅವರ ಆಸ್ತಿಗೆ ಮುಂದೆ ಹಕ್ಕುದಾರನಾಗಬಲ್ಲ ಆ ಚಿಕ್ಕ ಹುಡುಗ ಅವನಿಗೂ ಧನಿಯೇ.

ಈಗಿನಿಂದಲೇ ಅವರಿಗೆ ತನ್ನ ನಿಯತ್ತನ್ನು ತೋರಿಸುತ್ತ ಬರದಿದ್ದರೆ ತನಗೆ ವಯಸ್ಸಾದ ಕಾಲಕ್ಕೆ ಹೊರ ಹಾಕಿದರೆ ಎನ್ನುವ ಹೆದರಿಕೆಯ ಜೊತೆ ಧನಿಗಳ ಮನೆಯ ಬಗ್ಗೆ ಎಂದಿ೦ದಲೂ ಇದ್ದ ಆ ವಿಧೇಯತೆ. ಹಾಗಾಗಿ ಅತ್ತೆಯ ಆರೈಕೆಯಲ್ಲಿ ಬೆಣ್ಣೆ ತುಪ್ಪ ಮೊಸರುಗಳನ್ನು ಧಾರಾಳವಾಗಿ ತಿಂದು ಗುಂಡು ಗುಂಡಾಗಿ ಬೆಳೆದ ಅಂತ್ಯನ ಭಾರ ಕೆಲವೊಮ್ಮೆ ಹೆಚ್ಚಾಗಿ ಕಂಡರೂ ಗೊಣಗುತ್ತಿರಲಿಲ್ಲ. ಅಂತ್ಯನ ತಲೆಯೊಳಗೆ ಹೊಕ್ಕಿದ್ದ ಯಕ್ಷಗಾನದ ಹುಳ ಆ ತೆರನಲ್ಲಿ ಮಾವನ ಪೋಷಣೆಗೊಳಗಾಗಿ ಬೆಳೆಯುತ್ತಲೇ ಇತ್ತು. ಹಾಗಿರುವಾಗಲೇ ಮನೆಯಿಂದ ಫರ್ಲಾಂಗು ದೂರದ ಎಲಿಮೆಂಟರಿ ಶಾಲೆಗೆ ಕರಾವಳಿ ಪ್ರದೇಶದ ಮೇಷ್ಟರೊಬ್ಬರು ವರ್ಗವಾಗಿ ಬಂದದ್ದು ಮತ್ತು ಮಕ್ಕಳನ್ನೆಲ್ಲ ಕಟ್ಟಿಕೊಂಡು ಯಕ್ಷಗಾನದ ಪ್ರಸಂಗಗಳನ್ನು ಆಡಿಸತೊಡಗಿದ್ದು.

ಸುರು ಸುರುವಿಗೆ ವಾರದ ರಜಾದಿನಗಳಲ್ಲಿ ಸಾಹುಕಾರರ ಮನೆಗಳಲ್ಲಿ ಸಂಜೆಯ ಹೊತ್ತು ಗಂಟೆ ಅರ್ಧ ಘಂಟೆಯ ಕಾರ್ಯಕ್ರಮ. ಖರ್ಚೆಲ್ಲ ಆ ಸಾಹುಕಾರರದ್ದೇ. ಮೇಷ್ಟ್ರು ಸ್ವಂತ ಖರ್ಚಿನಲ್ಲಿ ಮಾಡಿಸಿಟ್ಟುಕೊಂಡ ಅಂತಹ ಅದ್ದೂರಿಯದಲ್ಲದ ವೇಷಭೂಷಣಗಳು. ಚಿಕ್ಕ ಮಕ್ಕಳೇ ಪಾತ್ರಧಾರಿಗಳು. ಮೂರು ನಾಲ್ಕು ಗಂಟೆಯ ಪ್ರಸಂಗಗಳನ್ನು ಒಂದು ಒಂದೂವರೆ ಗಂಟೆಗೆ ಇಳಿಸಿ ಮೇಷ್ಟ್ರೇ ಸಂಕ್ಷಿಪ್ತಗೊಳಿಸಿದ೦ತಹವು. ಅವರದ್ದೇ ಭಾಗವತಿಕೆ. ಸಂಜೆಯ ಹೊತ್ತು ಸಾಹುಕಾರರ ಮನೆಯ ಹೆಬ್ಬಾಗಿಲುಗಳಲ್ಲಿ. ಮಳೆ ಬರದಿದ್ದರೆ ಅಡಿಕೆ ಒಣಗಿಸುವ ಚಪ್ಪರದಡಿಯಲ್ಲಿ.

ಮನೆಯ ಹೆಂಗಸರು ಮತ್ತು ಸುತ್ತ ಮುತ್ತಲಿದ್ದ ಕೆಲಸಗಾರರಿಗೆ ಖರ್ಚಿಲ್ಲದ ಮನರಂಜನೆ. ನೋಡಲು ಕುಳಿತವರಲ್ಲಿ ಕೆಲವರ ಮಕ್ಕಳಾದರೂ ವೇಷ ಕಟ್ಟಿಕೊಂಡು ಕುಣಿಯುತ್ತಿದ್ದುದರಿಂದ ಎಲ್ಲರಿಗೂ ಆಸ್ಥೆ. ಮನೆಯಲ್ಲಿನ ಚಿಕ್ಕ ಪುಟ್ಟ ಕೆಲಸಗಳ ಹೊರತಾಗಿಯೂ ಕುಳಿತು ನೋಡುತ್ತಿದ್ದರು ಮತ್ತು ಶಾಭಾಸ್ ಗಿರಿ ಕೊಡುತ್ತಿದ್ದರು. ಅಂತಹ ಕಾರ್ಯಕ್ರಮಗಳಲ್ಲಿ ಅತಿ ಹೆಚ್ಚು ಶಾಭಾಸ್ ಗಿರಿ ಪಡೆಯುತ್ತಿದ್ದುದು ಗುಂಪಿನಲ್ಲೇ ಚಿಕ್ಕವನಾಗಿದ್ದ ಅಂತ್ಯ. ವೇಷ ಕಳಚಿದರೆ ಅವನು ಇವನೇಯೇ ಎಂದು ಯಾರೂ ಆಶ್ಚರ್ಯಪಡಬೇಕು. ಅಭಿಮನ್ಯು, ವೃಷಸೇನ ಮೊದಲಾದ ಪಾತ್ರಗಳಲ್ಲಿನ ಅವನ ವೇಷ ಆ ಸುತ್ತ ಮುತ್ತಲಿನಲ್ಲಿ ಅವನನ್ನು ಪ್ರಸಿದ್ಧನನ್ನಾಗಿಸಿತ್ತು. ಅಭಿಮನ್ಯು ಅಂದರೆ ಅಂತ್ಯ.. ವೃಷಸೇನ ಎಂದರೆ ನಮ್ಮ ಸಾಹುಕಾರರ ಅಳಿಯ ಎನ್ನುವಷ್ಟರ ಮಟ್ಟಿಗೆ ಮನೆ ಮಾತಾಗಿತ್ತು.

ಪ್ರಹ್ಲಾದ ಮತ್ತು ನಚಿಕೇತನ ವೇಷದಲ್ಲಿ ಬಂದ ಅಂತ್ಯ ರಂಗಸ್ಥಳದಲ್ಲಿ ಗಿರಕಿ ಹೊಡೆದು ದಿಗಣ ಹಾಕಿದರೆ ಜನ ಸರಿಯಾಗಿ ಉಸಿರು ಬಿಡಲೂ ಬಾರದ ಬಾಯಿಯಲ್ಲಿ ಶಿಳ್ಳೆ ಹಾಕುತ್ತಿದ್ದರು. ಅಷ್ಟೇ ಅಲ್ಲ ಕೊನೆಯಲ್ಲಿ ಕಣ್ಣೀರು ಹಾಕದ ಪ್ರದರ್ಶನವೇ ಇಲ್ಲ. ಇಂತಹ ಒಬ್ಬ ಮಗ ನಮಗೂ ಇದ್ದಿದ್ದರೆ ಎಂದುಕೊಳ್ಳುವವರೇ ಎಲ್ಲ. ಅಂತ್ಯ ಅಲ್ಲಿ ಎಲ್ಲರ ಮಗು. ಮೊದ ಮೊದಲು ಸಾಹುಕಾರರ ಮನೆಯಲ್ಲಿ ಮಾತ್ರ ಅದೂ ವಾರಾಂತ್ಯದ ದಿನಗಳಲ್ಲಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದ್ದರು ಮೇಷ್ಟ್ರು. ಸುತ್ತಲಿನ ಜನ ಬರುತ್ತಿದ್ದರು. ಯಕ್ಷಗಾನದ ಪ್ರದರ್ಶನದ ಜೊತೆಗೆ ಸಾಹುಕಾರರ ಔದಾರ್ಯದ ತಿಂಡಿ ತೀರ್ಥಗಳ ಆಕರ್ಷಣೆಯೂ ಇದ್ದೀತು.

ಹಾಗೆ ದಿನ ಕಳೆಯುತ್ತಿದ್ದಂತೆ ಯಾಕೆ ಸಾಹುಕಾರರೊಬ್ಬರಿಗೇ ತೊಂದರೆ ಕೊಡುವುದು, ಬೇರೆಯವರ ಮನೆಗಳಲ್ಲೂ ಒಂದೆರಡು ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಎಂದುಕೊ೦ಡ ಮೇಷ್ಟ್ರು ಸುರು ಸುರುವಿಗೆ ಈ ವಾರ ನಿಮ್ಮ ಮನೆಯಲ್ಲಿ ಕಾರ್ಯಕ್ರಮ ಇಟ್ಟುಕೊಳ್ಳೋಣವೇ’ ಎಂದು ಇವರಾಗಿಯೇ ಮನೆ ಮನೆಗೆ ತಿರುಗುತ್ತ ಕೇಳಿಕೊಂಡು ಹೋಗಿದ್ದರು. ಆದರೆ ವರ್ಷ ಕಳೆಯುವುದರೊಳಗೆ ಮೂರು ನಾಲ್ಕು ವಾರ ಮುಂದಾಗಿಯೇ ನಮ್ಮಲ್ಲಿ ಒಂದು ಕಾರ್ಯಕ್ರಮ ಇಟ್ಟುಕೊಳ್ಳಬೇಕಲ್ಲ ಯಾವಾಗ ಪುರುಸೊತ್ತಿದೆ' ಎಂದು ಜನರೇ ಕೇಳುವ ಪರಿಸ್ಥಿತಿ ಉಂಟಾಗಿತ್ತು.

ಮೊದಲೆಲ್ಲ ಘಟ್ಟದ ಕೆಳಗಿನಿಂದ ಮಳೆಗಾಲದ ದಿನಗಳಲ್ಲಿ ಬಂದು ಇಲ್ಲಿ ಕ್ಯಾಂಪು ಮಾಡಿ ಸಾಹುಕಾರರ ಕೃಪೆಯಲ್ಲಿ ಆಟ ಆಡುತ್ತಿದ್ದ ಉದ್ಯೋಗೀ ಮೇಳಗಳ ಆಟಗಳನ್ನು ಮಾತ್ರ ನೋಡುತ್ತಿದ್ದ ಅಲ್ಲಿನ ಜನರಲ್ಲಿ ಈ ಕರಾವಳಿಯ ಮೇಷ್ಟ್ರ ಹೊಸ ಪ್ರಯೋಗ ಹುಚ್ಚೆಬ್ಬಿಸಿತ್ತು. ಪುಕ್ಕಟೆ ಆಟ. ಜೊತೆಯಲ್ಲಿ ಆಟದ ವ್ಯವಸ್ಥೆ ಮಾಡುವ ಮನೆಯ ಯಜಮಾನರುಗಳಿಗೆ ಲಹರಿ ಬಂದರೆ ನೆರೆದವರಿಗೆಲ್ಲ ಅವಲಕ್ಕಿ ಉಪ್ಕರಿ ಮತ್ತು ಕಾಫಿ. ಎಲ್ಲಕ್ಕಿಂತ ಹೆಚ್ಚಾಗಿ ತಮ್ಮದೇ ಮಕ್ಕಳು ವೇಷ ಕಟ್ಟಿಕೊಂಡು ಕುಣಿಯುವದನ್ನು ನೋಡುವ ಆನಂದ. ಅರೆಬರೆ ಯಕ್ಷಗಾನದ ಜ್ಞಾನವಿದ್ದ ಘಟ್ಟದ ಮೇಲಿನವರು 'ಸಾಂಪ್ರದಾಯಿಕ ಕಲೆಯ ಪ್ರಕಾರದಲ್ಲಿ ಇದೊಂದು ಕ್ರಾಂತಿ' ಎಂದರು. 'ರಾತ್ರಿ ಹೊತ್ತಿನಲ್ಲಿ ಮಾತ್ರ ಆಟವಾಡಿಸಿ ಎಲ್ಲರಿಗೂ ಸಿಗದ ಹಾಗೆ ಮಾಡುತ್ತಿದ್ದ ಆಟ ಎಲ್ಲರಿಗೂ ಸಿಗುವ ಹಾಗೆ ಮಾಡುವಲ್ಲಿ ಇದೊಂದು ದಿಟ್ಟ ಹೆಜ್ಜೆ' ಎಂದರು ಇನ್ನು ಕೆಲವರು. ಆದರೆ ಮೇಷ್ಟ್ರು ಮಾತ್ರ ಇದು ಯಾವುದರ ಪರಿವೆಯೂ ಇಲ್ಲದೆ ತಮ್ಮ ಕೈಂಕರ್ಯವನ್ನು ಮುಂದುವರಿಸಿಕೊ೦ಡೇ ಹೋಗುತ್ತಿದ್ದರು.

ಅಂತ್ಯನಿಗ೦ತೂ ಬಹಳ ಆನಂದ. ಸ್ಟೇಜಿನ ಮೇಲೆ ಗೆಜ್ಜೆ ಕಟ್ಟಿ ವೇಷ ತೊಟ್ಟು ಕುಣಿದ ಹಾಗೆಯೇ ಮನೆಯಲ್ಲಿ ಅವೆರಡು ಇಲ್ಲದೆಯೂ ಹೆಜ್ಜೆ ಹಾಕುತ್ತಿದ್ದ. ಸಾಲದ್ದಕ್ಕೆ ಎಲ್ಲಿಯಾದರೂ ಆ ಮಾವ ತಾ ಧೀಂ.. ತಕ ಧೀಂ ಎಂದು ಕೈಗಳನ್ನು ಹಿಂದೆ ಮುಂದೆ ಮಗುಚುತ್ತ ತಾಳ ಹಾಕಲು ಸುರು ಮಾಡಿದನೋ ಆ ಮರಿ ಅಭಿಮನ್ಯುವನ್ನು ತಡೆಯಲು ಅತ್ತೆಯೇ ಬರಬೇಕು. ಅಂತಹ ಅಂತ್ಯ ಪ್ರೈಮರಿ ಕಳೆದು ಹೈಸ್ಕೂಲಿಗೆ ಹೋಗಬೇಕೆನ್ನುವಾಗ ಅವನ ಅತ್ತೆ ಮಾವ ಇಬ್ಬರಿಗೂ ಚಿಂತೆ ಸುರುವಾಗಿತ್ತು. ಇಲ್ಲಿಯವರೆಗೆ ಆ ಮನೆಯ ಹುಡಗರು ಹೈಸ್ಕೂಲು ಕಲಿಯಬೇಕೆಂದರೆ ಅವರಿಗೆಂದೇ ಮಾಡಿದ ತೀರ್ಥಳ್ಳಿಯ ಮನೆಯಲ್ಲಿ ಇದ್ದುಕೊಂಡೇ ಹೋಗುತ್ತಿದ್ದುದು.

ಅಡಿಗೆ ಮಾಡಿ ಹಾಕಿಕೊಂಡು ಅವರ ಬೇರೆ ಅಗತ್ಯಗಳನ್ನು ನೋಡಿಕೊಳ್ಳಲು ಹೆಂಗಸೊಬ್ಬಳನ್ನು ಇಟ್ಟಿದ್ದರು ಮತ್ತು ವಾರಕ್ಕೊಮ್ಮೆ ಹದಿನೈದು ದಿನಗಳಿಗೊಮ್ಮೆ ಅಪ್ಪನೇ ಬಂದು ಹಣಕಾಸಿನ ವ್ಯವಸ್ಥೆಯನ್ನು ಮಾಡಿ ಹೋಗುತ್ತಿದ್ದರು. ಅಡಿಕೆ ಸೀಸನ್ನು ಬಂತೆ೦ದರೆ ಅಪ್ಪ ವಾರಗಟ್ಟಲೆ ಆ ಮನೆಯಲ್ಲಿಯೇ ಉಳಿದು ಬಿಡುತ್ತಿದ್ದರು. ಜೊತೆಯಲ್ಲಿ ಊರಿನವರೇ ಆದ ಬೇರೆ ಒಂದಿಬ್ಬರು ಬಂದಿದ್ದರೆ ಅವರೂ ಉಳಿದರೇ. ಆಗೆಲ್ಲ ಈ ಮಕ್ಕಳ ತುಂಟಾಟಕ್ಕೆ ತೆರೆ. ಊಟ ತಿಂಡಿಗಳಲ್ಲಿ ಶಿಸ್ತು. ಇವರೇ ಆಗಿದ್ದಾಗ ದಿನವೂ ಬಾಯಿ ಚಪ್ಪರಿಸುತ್ತ ತಿನ್ನುತ್ತಿದ್ದ ಕಾಮತರ ಹೋಟೆಲಿನ ಸಿಹಿ ಬನ್ನು ಮತ್ತು ಬಿಸಿ ಬಿಸಿ ಗೋಳಿಬಜಿ ಅಪ್ಪನಿದ್ದಾಗ ಅವರು ತರಿಸಿದರೆ ಮಾತ್ರ. ಅದೂ ವಾರಕ್ಕೊಂದು ಸಲ.ಹಾಗೆ ಯಾವಾಗಲೂ ಆ ಹೋಟೆಲಿನ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಿಂದರೆ ದೇಹಕ್ಕೆ ಯಾಕಾಗುತ್ತದೆ’ ಎನ್ನುವ ಮಾತು ಬೇರೆ.

ಆಗ ಯಾವುದೇ ವರ್ಷವೂ ಇವರು ಅಣ್ಣ ತಮ್ಮಂದಿರಲ್ಲದೆ ಪುಕ್ಕಟೆಯಾಗಿ ಇವರೊಂದಿಗೆ ಸೇರಿಕೊಂಡ ಅವರ ದೊಡ್ಡಪ್ಪ ಚಿಕ್ಕಪ್ಪಂದಿರ ಮಕ್ಕಳೂ ಸೇರಿ ನಾಲ್ಕೈದು ಮಂದಿಯಾದರೂ ಇರುತ್ತಿದ್ದರು. ಆದರೆ ಈಗ ಹಾಗಿಲ್ಲ. ಬಿಡುವುದಾದರೆ ಅಂತ್ಯನೊಬ್ಬನನ್ನೇ ಬಿಡಬೇಕು. ಮಾವನಿಗೆ ಮನಸ್ಸಿರಲಿಲ್ಲ. ಅಷ್ಟೇ ಅಲ್ಲ ಅವರ ಹೆಂಡತಿಯೂ `ಅಲ್ಲ ಅಂತ್ಯನನ್ನು ತೀರ್ಥಳ್ಳಿಯಲ್ಲಿ ಬಿಡಲೇಬೇಕೇ’ ಎಂದು ಕೇಳಿದ್ದಳು. ಮಕ್ಕಳಿಲ್ಲದ ಆಕೆ ಅಂತ್ಯನನ್ನು ಸ್ವಂತ ಮಗುವಿಗಿಂತ ಹೆಚ್ಚು ಹಚ್ಚಿಕೊಂಡಿದ್ದಳು.

ವಾರಗಟ್ಟಲೆ ಮಗುವನ್ನು ಬಿಟ್ಟಿರಬೇಕಾಗುತ್ತದಲ್ಲ ಎನ್ನುವ ಚಿಂತೆ ಅವಳದ್ದು. ಗಂಡ ಹೆಂಡತಿ ಅದೇ ಚಿಂತೆಯಲ್ಲಿರುವಾಗಲೇ ಶಂಕರ ಕಂಪೆನಿಯವರು ತೀರ್ಥಳ್ಳಿಯಿಂದ ಕೊಪ್ಪಕ್ಕೆ ಹೋಗುವ ತಮ್ಮ ಒಂದು ಸರ್ವೀಸನ್ನು ಇವರ ಮನೆಯೆದುರಿಗಿನ ರಸ್ತೆಯ ಮೇಲೇ ಪ್ರಾರಂಭಿಸಿದ್ದು ಇವರಿಬ್ಬರಿಗೂ ನಿರಾಳವಾಗಿತ್ತು. ಶಾಲೆಯ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ಶುರು ಮಾಡಿದ ಆ ಬಸ್ಸು ತೀರ್ಥಳ್ಳಿಯ ಶಾಲೆಗೆ ಹೋಗುವ ಮಕ್ಕಳಿಗೆ ಬೆಳಿಗ್ಗೆ ಮತ್ತು ಸಂಜೆ ಬಹಳ ಅನುಕೂಲಕರವಾಗಿ ಪರಿಣಮಿಸಿತು. ಅಂತೂ ಅಂತ್ಯನ ಹೈಸ್ಕೂಲು ವಿದ್ಯಾಭ್ಯಾಸ ನಿರಾತಂಕವಾಗಿ ಪ್ರಾರಂಭವಾದದ್ದು ಹಾಗೆಯೇ ಮುಂದುವರಿಯಿತು.

|ಇನ್ನು ನಾಳೆಗೆ |

‍ಲೇಖಕರು Admin

27 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading