ಪಿ ಪಿ ಉಪಾಧ್ಯ
24
ಮತ್ತೆ ಶಾಮಣ್ಣನವರ ಬಾಯಿಯಿಂದ ಮಾತಿಲ್ಲ...
ಮನಸ್ಸು ಮಾಡಿದ ಮೇಲೆ ಮತ್ತೆ ತಡಮಾಡುವ ಜಾಯಮಾನದವನಲ್ಲ ಆದಿ. ಕೂಡಲೇ ಅರಾಲು ಗದ್ದೆಗಳನ್ನು ಸಮತಟ್ಟು ಮಾಡಿಸಿದ. ಹಾಗೆಯೇ ಬೇಸಗೆಯಲ್ಲಿ ಸರಿಯಾಗಿ ನೀರು ಬಿಡದಿದ್ದರೆ ಬಳ್ಳಿಗಳು ಬಾಡಿ ಸತ್ತರೂ ಸತ್ತಾವು ಎನ್ನುವ ಮುನ್ನೆಚ್ಚರಿಕೆಯಿಂದ ಕುಂಬಳ ನೆಡುವಾಗ ತೋಡಿಸಿದ್ದ ಅದೇ ಬಾವಿಗೆ ನೀರೆತ್ತುವ ವಿದ್ಯುತ್ ಪಂಪನ್ನೂ ಜೋಡಿಸಿದ. ಎಲ್ಲ ಸೇರಿ ಆಗಿದ್ದ ಖರ್ಚುಗಳ ಬಿಲ್ಲನ್ನು ತಂದು ಅಪ್ಪನಿಗೆ ತೋರಿಸಿದರೆ ಅಪ್ಪ ಹೌಹಾರಿದ್ದರು. ಆದರೂ ಕಂಬಳದ ಯಶಸ್ಸಿನ ಗುಂಗಿನಿ೦ದ ಇನ್ನೂ ಹೊರಬರದಿದ್ದ ಅವರು ಮರು ಮಾತನಾಡದೆ ಕೊಟ್ಟಿದ್ದರು.
ವೆನಿಲ್ಲಾ ಬಳ್ಳಿಗಳನ್ನು ತರಲು ಘಟ್ಟದ ಮೇಲೆ ಹೋಗಬೇಕು. ಒಂದಡಿ ಉದ್ದದ ಬಳ್ಳಿಗೆ ನೂರು ಇನ್ನೂರು ಎನ್ನುತ್ತಿದ್ದರು. ತಮ್ಮ ಜಾಗದಲ್ಲಿ ಕನಿಷ್ಟ ಹತ್ತು ಸಾವಿರ ಬಳ್ಳಿಗಳನ್ನಾದರೂ ಹಾಕಬಹುದು ಎಂದು ಅಂದಾಜಿಸಿದ್ದ ಆದಿ ತನ್ನ ಎಸ್ಟಿಮೇಟನ್ನು ಅಪ್ಪನೆದುರಿಗೆ ಇಟ್ಟರೆ ಅದನ್ನು ನೋಡಿದ ಶಾಮಣ್ಣನವರಿಗೆ ಕಂಬಳದ ಯಶಸ್ಸಿನ ಅಮಲೆಲ್ಲ ಹಾರಿ ಹೋಗಿತ್ತು. ಅಲ್ಲ ಮಾರಾಯ ಇದೆಲ್ಲ ಆಗು ಹೋಗುವ ವ್ಯಾಪಾರವೇ..' ಎಂದು ಕೇಳಿದರೆ ಆದಿ ಅಲ್ಲಿ ಇಲ್ಲಿ ಕೇಳಿದ್ದರ ಜೊತೆಗೆ ತನ್ನ ಜ್ಞಾನವನ್ನೂ ಸೇರಿಸಿ ಲೆಕ್ಕ ಮಾಡಿಅಪ್ಪ ಎಲ್ಲ ಸರಿಯಾಗಿ ನಡೆದರೆ ಇನ್ನು ಮೂರು ವರ್ಷಕ್ಕೆ ಹತ್ತರಿಂದ ಇಪ್ಪತ್ತು ಸಾವಿರ ಕೇಜಿ ವೆನಿಲ್ಲಾ ಬೀಜಗಳು ಸಿಗುತ್ತವೆ. ಈಗಿನಷ್ಟಲ್ಲದಿದ್ದರೂ ಇದರ ಅರ್ಧ ರೇಟು ಬಂದರೂ ವರ್ಷಕ್ಕೆ ಎರಡು ಕೋಟಿಗೆ ಮೋಸವಿಲ್ಲ.
ಈಗೆಲ್ಲ ಕೃಷಿಯೆಂದರೆ ಒಂದು ವ್ಯಾಪಾರವೇ. ದುಡ್ಡು ಹಾಕಿ ದುಡ್ಡು ತೆಗೆಯಬೇಕು’ ಎಂದಿದ್ದ. ಮಗ ಹೇಳುತ್ತಿದ್ದ ಸಂಖ್ಯೆ ಬಹಳ ಆಕರ್ಷಕವಾಗಿ ಕಂಡರೂ ಈಗ ದುಡ್ಡು ಬಿಚ್ಚುವುದೇ ಕಷ್ಟವಾಗಿತ್ತು ಶಾಮಣ್ಣನವರಿಗೆ. ಆದರೆ ಇದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದ ಕಮಲಮ್ಮ ಸುಮ್ಮನಿದ್ದಾರೆಯೇ. ಅಲ್ಲ ಮಾಣಿ ಏನೋ ಮಾಡುತ್ತೇನೆಂದು ಹೊರಟರೆ ಅಡ್ಡ ಹೇಳುತ್ತೀರಲ್ಲ. ನಮ್ಮಪ್ಪನ ಮನೆಯಲ್ಲಿಯೂ ಕಳೆದ ವರ್ಷ ಅಡಿಕೆ ಮತ್ತು ಕಾಳುಮೆಣಸಿಗಿಂತ ಹೆಚ್ಚು ದುಡ್ಡು ವೆನಿಲ್ಲಾದಲ್ಲೇ ಬಂದಿದ್ದ೦ತೆ. ಅದಕ್ಕೇ ಈ ವರ್ಷ ನಮ್ಮಣ್ಣ ಮತ್ತು ತಮ್ಮ ಸೇರಿ ಇನ್ನೊಂದು ಹತ್ತು ಎಕ್ರೆ ವೆನಿಲ್ಲಾವನ್ನೇ ಹಾಕುತ್ತಿದ್ದಾರಂತೆ. ಆದಿಯೂ ಬೇಕಾದರೆ ಬೀಜದ ಬಳ್ಳಿಗಳನ್ನು ಅಲ್ಲಿಂದಲೇ ತಂದರೆ ಸ್ವಲ್ಪ ಕಡಿಮೆಯಲ್ಲೂ ಸಿಕ್ಕೀತು' ಎಂದಿದ್ದಳು. ಹೆಂಡತಿ ಹೇಳಿದಳೆಂದರೆ ಮುಗಿಯಿತು.
ಮತ್ತೆ ಶಾಮಣ್ಣನವರ ಬಾಯಿಯಿಂದ ಮಾತಿಲ್ಲ. ದುಡ್ಡು ಎಣಿಸಿ ಕೊಡುವುದೊಂದೇ. ಅಷ್ಟೂ ದುಡ್ಡನ್ನು ತೆಗೆದುಕೊಂಡು ಆದಿನಾರಾಯಣ ತೀರ್ಥಹಳ್ಳಿಯ ಬಸ್ಸು ಹತ್ತಿದ್ದ. ವಂಡಾರು ಕಂಬಳದ ಯಶಸ್ಸಿನ ಸುದ್ದಿ ಅವನ ಮಾವನನ್ನ್ನೂ ತಲುಪಿತ್ತಾದ್ದರಿಂದ ಆದಿಗೆ ಅದ್ಭುತ ಸ್ವಾಗತವೇ ಕಾದಿತ್ತು ಅಲ್ಲಿ. ತಮ್ಮ ಮನೆ ಮಗಳ ಗಂಡ ಮತ್ತು ಅವಳ ಮಗ ಕಂಬಳದ ಕೋಣ ಕಟ್ಟಿದ್ದಾರೆ ಮತ್ತು ಕಂಬಳದಲ್ಲಿ ಗೆದ್ದೂ ಬಂದಿದ್ದಾರೆ ಎನ್ನುವುದು ಅವರೂ ತಮ್ಮವರೊಂದಿಗೆ ಬಹಳಷ್ಟು ದಿನ ಹೇಳಿಕೊಂಡು ಬಂದ ಮಾತೇ. ಅದೇ ಅಳಿಯ ಈಗ ತಮ್ಮ ಮನೆಗೆ ಬಂದಿದ್ದಾನೆ. ಅದೂ ಲಾರಿಯಲ್ಲಿ ತುಂಬಿಸಿಕೊ೦ಡು ಹೋಗಬೇಕೆನಿಸುವಷ್ಟು ವೆನಿಲ್ಲಾ ಬಳ್ಳಿಯನ್ನು ಖರೀದಿಸಲು. ಅಲ್ಲಿ ಇಲ್ಲಿ ವಿಚಾರಿಸಿ ಚೌಕಾಸಿ ಮಾಡಿ ಅವನಿಗೆ ಬೇಕಾದಷ್ಟು ತುಂಡುಗಳನ್ನು ಒಟ್ಟು ಮಾಡಿದ್ದರು. ಕಮ್ಮಿ ಬಿತ್ತೆಂದು ತಮ್ಮಲ್ಲಿದ್ದ ಬಲಿತ ಬಳ್ಳಿಯನ್ನೂ ತುಂಡರಿಸಿ ಲಾರಿಗೆ ತುಂಬಿಸಿದ್ದರು. ಆದಿ ಎಷ್ಟೇ ಒತ್ತಾಯ ಮಾಡಿದರೂ ತಮ್ಮ ತೋಟದಿಂದ ಕತ್ತರಿಸಿದ ಬಳ್ಳಿಗಳಿಗೆ ದುಡ್ಡು ತೆಗೆದುಕೊಳ್ಳಲು ಒಪ್ಪಿರಲಿಲ್ಲ. ಅದೇ ಸುಮಾರು ಲಕ್ಷದಷ್ಟಾಗಿದ್ದಿರಬಹುದು.

ಅಂತೂ ಮಾವಂದಿರೇ ಸೇರಿ ಮಾಡಿಕೊಟ್ಟ ಲಾರಿಯಲ್ಲಿಯೇ ಆ ಬಳ್ಳಿಯ ತುಂಡುಗಳನ್ನೆಲ್ಲ ತುಂಬಿಸಿಕೊ೦ಡು ಹೊರಟಿದ್ದ. ಹೊರಡುವಾಗ ಕಾಲ ಕಾಲದಿಂದ ಇದೇ ಕೃಷಿ ಮಾಡಿಕೊಂಡು ಬಂದಿದ್ದರೂ ಅದೂ ಅಳಿಯ ಎಸ್ಎಸ್ಎಲ್ಸಿ ಮಾತ್ರ ಆದವನೇ ಅದರೂ ಘಟ್ಟದ ಕೆಳಗಿನ ಮಂದಿ ತುಂಬಾ ಜಾಣರು ಎನ್ನುವ ಹೆದರಿಕೆಯಿದ್ದ ಆ ಮಾವಂದಿರು ಒಂದೆರಡು ಸಲಹೆಗಳನ್ನು ಅಂಜುತ್ತಲೇ ಕೊಟ್ಟಿದ್ದರು.ಅಲ್ಲ ಆದಿ ನೀನು ಓದು ಬರಹ ಬಲ್ಲವನು. ಕೃಷಿಯಲ್ಲಿಯೂ ತಿಳುವಳಿಕೆಯಿದ್ದವನೇ. ಆದರೂ ನೋಡು ಬೆಳೆ ಒಳ್ಳೇದಾಗಿ ಬರಬೇಕಾದರೆ ವೆನಿಲ್ಲಾಕ್ಕೆ ಹೀಗೆಲ್ಲ ಮಾಡಬೇಕು’ ಎಂದು ತಮಗೆ ತೋಚಿದ್ದನ್ನು ಹೇಳಿದವರು ವರ್ಷವೆರಡು ವರ್ಷಕ್ಕೆ ಬೆಳೆ ಬರುತ್ತದಲ್ಲ ಆಗ ಹೇಳಿ ಕಳುಹಿಸು. ಅದನ್ನು ಒಣಗಿಸಲು ನಮ್ಮ ಜನಗಳನ್ನೇ ಕಳುಹಿಸುತ್ತೇವೆ’ ಎಂದು ಹೇಳಿದ್ದರು. ಎಲ್ಲದಕ್ಕೂ ತಲೆಯಲ್ಲಾಡಿಸಿದ ಆದಿ ಹೊರಟಿದ್ದ.
ವೆನಿಲ್ಲಾ ಬಳ್ಳಿಗಳಿಗೇ ಚಿನ್ನದ ಬೆಲೆ ಮಾರಾಯಾ. ನೀನು ಹೋಗುವಾಗ ಸ್ವಲ್ಪ ಜಾಗ್ರತೆ' ಎಂದವರು ರಾತ್ರಿ ಪ್ರಯಾಣ ಮಾಡುತ್ತೇನೆ ಎಂದಿದ್ದ ಅವನನ್ನು ತಡೆದದ್ದೇ ಅಲ್ಲದೆ ಬೆಳಿಗ್ಗೆಯೆದ್ದು ಹೊರಟಾಗ ಅವನ ಜೊತೆಗೆ ಇಬ್ಬರು ಆಳುಗಳನ್ನುಅಯ್ಯನನ್ನು ಊರಿಗೆ ತಲುಪಿಸಿ ಇದೇ ಲಾರಿಯಲ್ಲಿ ವಾಪಾಸು ಬನ್ನಿ’ ಎಂದು ಹೇಳಿ ಲಾರಿಯ ಹಿಂದುಗಡೆ ಟಾರ್ಪಾಲು ಹೊದೆಸಿದ ಬಳ್ಳಿಗಳ ಮೇಲೆ ಹತ್ತಿಸಿ ಕಳುಹಿಸಿದ್ದರು.
ಆದಿಯನ್ನು ಕ್ಷೇಮವಾಗಿ ಊರು ತಲುಪಿಸಿದ ಲಾರಿ ಬಳ್ಳಿಗಳನ್ನೆಲ್ಲ ಕೆಳಗಿಳಿಸಿ ಜೊತೆಗೆ ಬಂದ ಆಳುಗಳನ್ನು ಕರೆದುಕೊಂಡು ತಿರುಗಿ ಹೋಗಿತ್ತು. ಬಂದ ಆಳುಗಳಿಗೆ ಮಾಡಿದ ಸನ್ಮಾನದಲ್ಲಿ ಲಾರಿ ಡ್ರೈವರನಿಗೂ ಪಾಲು. ತವರೂರಿನಿಂದ ಬಂದ ಮಂದಿಗೆ ಸಂಭ್ರಮದ ಉಪಚಾರ ಮಾಡದೆ ಕಳಿಸಿಯಾರೆ ಕಮಲಮ್ಮ? ಈ ಹುಡುಗರ ಅಪ್ಪ ಅಮ್ಮ ಚಿಕ್ಕಪ್ಪ ಎಲ್ಲರನ್ನು ವಿಚಾರಿಸುತ್ತ ಕಮಲಮ್ಮ ಉಪಚರಿಸಿದ್ದೇ ಉಪಚರಿಸಿದ್ದು. ಜೊತೆಗೆ ಹೋಗುವಾಗ ಆದಿಯ ಎರಡೆರಡು ಹಳೆ ಅಂಗಿಗಳನ್ನು ಅವರಿಗೆ ಕೊಟ್ಟದ್ದೇ ಅಲ್ಲದೆ ಜೇಬಿಗೆ ಹತ್ತರ ಐದೈದು ನೋಟುಗಳನ್ನು ತುರುಕಿ ಕಳುಹಿಸಿದ್ದರು.
ಹಣ ನೀರಿನಂತೆ ಖರ್ಚಾಗುತ್ತಿದೆಯೆಂಬ ಸಂಕಟವಿದ್ದರೂ ಶಾಮಣ್ಣನವರೂ ಮಗನ ಜೊತೆ ಕೈಗೂಡಿಸಿದ್ದರು. ಹತ್ತಿಪ್ಪತ್ತು ಸಾವಿರ ಬಳ್ಳಿಗಳನ್ನು ನೆಡುವುದೆಂದರೆ ಸುಮ್ಮನೆಯೇ. ಅದರ ಜೊತೆಯಲ್ಲಿಯೇ ಚಿಗುರುವ ಬಳ್ಳಿಗಳಿಗೆ ಹಬ್ಬಿಕೊಳ್ಳಲು ಆಸರೆ ಬೇಕು ಜೊತೆಗೆ ಈ ಊರಿನ ಬಿಸಿಲಿನ ಬೇಗೆಗೆ ನೆರಳಿನ ಗಿಡಗಳೂ ಆಗಬೇಕು. ವೆನಿಲ್ಲಾಕ್ಕಿಂತ ತೀವ್ರವಾಗಿ ಬೆಳೆಯುವವಾದರೆ ಬಳ್ಳಿ ಚಿಗುರಿ ಗಿಡ ದೊಡ್ಡದಾಗುವ ಹೊತ್ತಿಗೆ ಅವು ನೆರಳು ಕೊಡುವಷ್ಟು ದೊಡ್ಡವಾಗಿ ಬೆಳೆದಿರುತ್ತವೆ. ಹಾಗೆಂದು ಯಾವ ಯಾವುದೋ ಗಿಡಗಳನ್ನು ಹಾಕಲು ಮನಸ್ಸಿಲ್ಲ. ಅವುಗಳಿಂದಲೂ ಆದಾಯ ಬರುವಂತಿದ್ದರೆ ಅನುಕೂಲವೇ ಎಂದುಕೊ೦ಡು ನುಗ್ಗೆ ಗಿಡಗಳನ್ನು ಹಾಕಿದ್ದರು. ನಡು ನಡುವೆ ಹೆಚ್ಚಿನ ನೆರಳಿಗಾಗಿ ಹೊಂಗಾರ ಗಿಡಗಳನ್ನೂ ಹಾಕಿದ್ದ.
ಹಿಂದಿನಿ೦ದಲೂ ಖಾಯಂ ಆಗಿ ಮನೆ ಕೆಲಸಕ್ಕೆ ಬರುತ್ತಿದ್ದ ಹತ್ತಿಪ್ಪತ್ತು ಮಂದಿಯೇ ಕೆಲಸ ಪೂರೈಸಿದ್ದರು. ವೆನಿಲ್ಲಾ ಎಂದರೆ ಏನೆಂಬುದರ ಸುಳಿವೂ ಇಲ್ಲದ ಮಂದಿ ಆ ಬಳ್ಳಿಯ ತುಂಡನ್ನು ನೆಟ್ಟಿದ್ದರು. ಅವರಿಗೆ ತಿಳಿದ ಒಂದೇ ವಿಷಯವೆಂದರೆ ತಾವು ನೆಡುತ್ತಿದ್ದ ಆ ಬಳ್ಳಿಗಳ ತುಂಡುಗಳೇ ಒಂದೊ೦ದಕ್ಕೆ ನೂರಾರು ರೂಪಾಯಿಗಳು ಎಂದು. ಜೊತೆಗೆಒಂದು ಕಾಲಕ್ಕೆ ಆ ಬಳ್ಳಿಗಳು ಚಿಗುರಿ ಬೆಳೆದು ಹೂ ಬಿಟ್ಟು ಕಾಯಿಯಾಗಿ ಅವು ಬಲಿತರೆ ಅವುಗಳಿಗೆ ಸಾವಿರ ರೂಪಾಯಿ ಬೆಲೆಯಂತೆ’ ಎಂದು. ಎಲ್ಲವನ್ನೂ ನೋಡುತ್ತಿದ್ದ ಜನ ತೋಚಿದ್ದನ್ನು ಆಡಿಕೊಂಡಿದ್ದರು. ಶಾಮಣ್ಣನವರ ಆಸ್ತಿಯನ್ನು ಕರಗಿಸಲೆಂದೇ ಈ ಆದಿ ಹುಟ್ಟಿಕೊಂಡಿದ್ದಾನೆ' ಎಂದವರೂ ಇದ್ದರು. ಆಗಲೇ ಪೇಪರುಗಳಲ್ಲಿ ನೋಡಿ, ಅಲ್ಲಿ ಇಲ್ಲಿ ಆಡುತ್ತಿದ್ದ ಮಾತುಗಳನ್ನು ಕೇಳಿ ವೆನಿಲ್ಲಾದ ಬಗ್ಗೆ ತಿಳಿದುಕೊಂಡಿದ್ದ ಮಂದಿ ಮಾತ್ರ ಹೊಟ್ಟೆಕಿಚ್ಚಿನ ಮಾತುಗಳನ್ನು ಆಡಿದ್ದರು. ಅಷ್ಟೊಂದು ಜಾಗದಲ್ಲಿ ಅದೂ ಘಟ್ಟದ ಮೇಲಿನಿಂದ ಬಳ್ಳಿಗಳನ್ನು ತಂದು ನೆಟ್ಟ ಆದಿ ಇನ್ನೊಂದೆರಡು ವರ್ಷದಲ್ಲಿ ಗಳಿಸಬಹುದಾದ ದುಡ್ಡನ್ನು ಲೆಕ್ಕ ಹಾಕಿಯೇ ದಂಗು ಬಡಿದಿದ್ದರು. ತಮ್ಮದೇ ಲೆಕ್ಕಾಚಾರವನ್ನು ಅರಗಿಸಿಕೊಳ್ಳಲಾರದೆ ಹೊಟ್ಟೆ ಉರಿಸಿಕೊಂಡ ಅವರುಇದೆಲ್ಲ ಈ ಊರಿನಲ್ಲಿ ಆಗುವಂತಹದೇ.. ಈ ಮಣ್ಣಿನಲ್ಲಿ ಹಾಗೆಲ್ಲ ವೆನಿಲ್ಲ ಬೆಳೆದರೆ ಇನ್ನೇನು’ ಎನ್ನುತ್ತ ತಮ್ಮ ಅಸಹನೆಯನ್ನು ತೋಡಿಕೊಂಡಿದ್ದರು.
ಆದರೆ ವೆನಿಲ್ಲಾ ಬಳ್ಳಿ ಮಾತ್ರ ಅವರೆಲ್ಲರ ದುಷ್ಟ ಬಯಕೆಯನ್ನೂ ಮೀರಿ ಚಿಗುರೊಡೆದಿತ್ತು ಮತ್ತು ಬೆಳೆದಿತ್ತು. ನೆಟ್ಟ ತಿಂಗಳೆರಡು ತಿಂಗಳೊಳಗೇ ಬಳ್ಳಿಯ ಬೆಳವಣಿಗೆಯ ಪರಿ ನೋಡುವವರಲ್ಲಿ ಆಶ್ಚರ್ಯ ಹುಟ್ಟಿಸಿತ್ತು. ಹೊಟ್ಟೆ ಕಿಚ್ಚು ಪಡುವವರ ಹೊಟ್ಟೆಯಲ್ಲಿ ಅರಳು ಭತ್ತ ಕಲೆಸಿದಂತಾಗುವ ಮಟ್ಟಿಗೆ ನಳನಳಿಸತೊಡಗಿತ್ತು. ಸ್ವತಃ ಆದಿಗೇ ಆಶ್ಚರ್ಯ. ದಿನಾ ಇಬ್ಬರು ಆಳುಗಳನ್ನು ಹಾಕಿಕೊಂಡು ಅವಕ್ಕೆ ನೀರು ಬಿಡುತ್ತಿದ್ದ ಅವ ತನ್ನ ಪ್ರಯತ್ನ ಹುಸಿ ಹೋಗಲಿಲ್ಲ ಎಂದು ತೃಪ್ತಿಪಡುವಂತಾಗಿತ್ತು. ಅಪ್ಪನಿಗೂ ಅಷ್ಟೆ. ಮಗನ ಯಶಸ್ಸು ಸಮಾಧಾನ ತಂದಿತು. ದುಡ್ಡು ನೀರಿನಂತೆ ಖರ್ಚಾಗುತ್ತಿದೆಯೆಂದು ಮೊದ ಮೊದಲು ಹೊಗೆಯಾಡುತ್ತಿದ್ದ ಅಸಮಾಧಾನ ತುಸು ತುಸುವಾಗಿ ಮರೆಯಾಗತೊಡಗಿದ್ದುದು ಈಗ ಪೂರ್ತಿಯಾಗಿ ಮರೆಯಾಯ್ತು. ಮಗ ನೀರು ಬಿಡುತ್ತಿರುವಾಗ ಮತ್ತೆ ನೀರು ಬಿಟ್ಟು ಮುಗಿದು ಕೆಲಸದವರನ್ನು ಆಚೆಗೆ ಕಳುಹಿಸಿ ತಾನೊಬ್ಬನೇ ಚಿಗುರುತ್ತಿರುವ ಬಳ್ಳಿಯನ್ನು ಸವರುತ್ತ ಅವುಗಳೊಂದಿಗೆ ಮಾತನಾಡುತ್ತಿರುವಾಗ ಈ ಅಪ್ಪನೂ ಸೇರಿಕೊಳ್ಳುತ್ತಾರೆ.
ವೆನಿಲ್ಲಾ ಅಂದರೆ ಇವತ್ತು ಬಿತ್ತಿ ನಾಳೆ ಫಲ ತೆಗೆಯುವಂತಹ ಬೆಳೆಯಲ್ಲ. ಕನಿಷ್ಟ ಎರಡು ವರ್ಷಗಳಾದರೂ ಕಾಯಬೇಕು. ಸರಿಯಾದ ಗೊಬ್ಬರ ನೀರು ಸಿಕ್ಕಿ ಬೆಳೆದರೆ ಎರಡನೇ ವರ್ಷ ಹೂ ಬಿಡಲು ಪ್ರಾರಂಭಿಸಿ ಮತ್ತೆರಡು ತಿಂಗಳಿಗೆ ಕೋಡು ಬರಲು ಪ್ರಾರಂಭ ಆ ಕೋಡುಗಳು ಬೆಳೆದು ಅವುಗಳೊಳಗಿನ ಬೀಜ ಬಲಿಯಲು ಇನ್ನರಡು ತಿಂಗಳು ಆಮೇಲೆಯೆ ಆ ಕೋಡುಗಳನ್ನು ಕೊಯ್ದು ಒಣಗಿಸಿ ಒಳಗಡೆಯ ಕಾಳುಗಳನ್ನು ಬೇರ್ಪಡಿಸುವುದು. ದರ ತೀರ ಹೆಚ್ಚಿದ್ದ ಕಾಲದಲ್ಲಿ ಆ ಕೋಡುಗಳನ್ನು ಬಿಡಿಸಿ ಕಾಳುಗಳನ್ನು ಬೇರ್ಪಡಿಸುವ ವರೆಗೆ ವ್ಯಾಪಾರಿಗಳು ಕಾಯುವುದೂ ಇಲ್ಲ. ಬೆಳೆಗಾರರೂ ಕಾಯುವುದಿಲ್ಲ.
ವ್ಯಾಪಾರಿಗಳಿಗೆ ವ್ಯಾಪಾರ ಮಾಡಿ ಲಾಭ ಗಳಿಸುವ ಆತುರವಿದ್ದರೆ ಬೆಳೆಗಾರರಿಗೆ ಸಿಕ್ಕಿದಷ್ಟು ಹಣವನ್ನು ಬಾಚಿಕೊಳ್ಳುವ ಆತುರ. ಕಾದರೆ ಬೆಲೆ ಎಲ್ಲಿ ಕಡಿಮೆಯಾದೀತೋ ಎನ್ನುವ ಹೆದರಿಕೆ. ಹಾಗಾಗಿ ಹಸಿರು ಕೋಡುಗಳನ್ನೇ ಮಾರಾಟ ಮಾಡುತ್ತಾರೆ. ಆದಿಯ ವೆನಿಲ್ಲ ಬಳ್ಳಿಗಳಲ್ಲಿ ಹೂಗಳು ತೊನೆದಾಡಲು ಪ್ರಾರಂಭಿಸಿದ್ದುವು. ಕೈ ಬಿಟ್ಟು ಖರ್ಚು ಮಾಡಿದ ಆದಿಯ ಮುತುವರ್ಜಿಯಿಂದಾಗಿ ಇಡೀ ತೋಟವೇ ನೋಡುವವರ ದೃಷ್ಟಿ ತಾಗುವಂತೆ ಆಗಿತ್ತು. ಹೊಟ್ಟೆ ಕಿಚ್ಚು ಪಡುವವರ ಹೊಟ್ಟೆಯಲ್ಲಂತೂ ಅರಳು ಭತ್ತ ಕಲಸಿದಂತೆ ಆಗುವಷ್ಟರ ಮಟ್ಟಿಗೆ.
ವೆನಿಲ್ಲಾ ಖರೀದಿಸುವ ವ್ಯಾಪಾರಿಗಳು ಆದಿಯೊಡನೆ ವ್ಯವಾಹಾರ ಮುಗಿಸಲು ಮುಗಿ ಬೀಳಹತ್ತಿದ್ದರು. ಕೋಡು ಬಲಿತು ಒಣಗಿ ಕಾಳುಗಳು ತಯಾರಾಗಲು ಇನ್ನೂ ತಿಂಗಳೆರಡು ತಿಂಗಳು ಬೇಕು. ಆಗಲೇ ಆತುರ ಅವರಿಗೆ. ಒಣ ಕೋಡುಗಳನ್ನೇ ಖರೀದಿಸುವ ಮಾತಾಡುತ್ತಿದ್ದರು. ಆದಿ ಮಾತ್ರ ಅಂತಹ ಆತುರದಲ್ಲೇನೂ ಇರಲಿಲ್ಲ. ಈಗಲೇ ವ್ಯಾಪಾರ ಕುದುರಿಸಿದರೆ ಅದು ಅಂದಾಜಿನ ವ್ಯಾಪಾರವಾಗುತ್ತದೆ. ಅಂತಹ ವ್ಯಾಪಾರ ಯಾವಾಗಲೂ ಖರೀದಿಸುವವರಿಗೇ ಅನುಕೂಲಕರವಾಗಿರುತ್ತದೆ. ಸ್ವಲ್ಪ ಕಾಲ ಕಳೆದರೆ ಬೆಳೆಯೇ ಕೈಗೆ ಬರುತ್ತದೆ. ಆವಾಗಲಾದರೆ ಬೆಳೆಗೆ ತಕ್ಕ ಬೆಲೆ ಬರುತ್ತದೆ. ಅದು ಬೇರೆ ಆದಿಗೆ ಹಣದ ಅಗತ್ಯವೇನೂ ಇಲ್ಲವಲ್ಲ. ಹಾಗಾಗಿ ಕೊಳ್ಳಲು ತಯಾರಿದ್ದವರ ಆತುರದ ಹೊರತಾಗಿಯೂ ಆದಿ ಬೆಳೆಯನ್ನು ಮಾರಾಟ ಮಾಡಲು ಮನಸ್ಸು ಮಾಡಲಿಲ್ಲ. ಕೆಲವರಾದರೂ ಹೊಟ್ಟೆಕಿಚ್ಚಿನವರು ಹೇಳಿಕೊಂಡಿದ್ದಾರು ‘ಆದಿಗೆ ರಾವು ಬಡಿದಿದೆ. ಇನ್ನೂ ಹೆಚ್ಚು ಬರಬೇಕೆಂದು ಕಾಯುತ್ತಿದ್ದಾನೆ’ ಎಂದು. ಅಂತಹವರಿಗೆ ಈಗಲೇ ಕೊಳ್ಳುತ್ತೇನೆಂದು ಬಂದು ಆದಿಯಿಂದ ನಕಾರಾತ್ಮಕ ಉತ್ತರ ಪಡೆದ ವ್ಯಾಪಾರಿಗಳ ಕುಮ್ಮಕ್ಕೂ ಇದ್ದೀತು.
ವೆನಿಲ್ಲಾ ಕೊಯ್ಲಿಗೆ ಬಂತು. ಕೆಲಸಗಾರರನ್ನು ಇಟ್ಟುಕೊಂಡು ಕೊಯ್ಲು ಮಾಡಲು ಪ್ರಾರಂಭಿಸಿದ. ಏನಿಲ್ಲವೆಂದರೂ ಒಣಗಿಸಿದ ಕೋಡುಗಳು ಒಂದು ಮೂವತ್ತು ಟನ್ನಿನಷ್ಟಾದರೂ ಆದೀತು ಎನ್ನುವ ಅಂದಾಜು. ಇಲ್ಲಿಯ ವರೆಗೆ ಏರುತ್ತಿರುವ ರೇಟನ್ನು ನೋಡಿದರೆ ಇವು ಮಾರಾಟಕ್ಕೆ ರೆಡಿ ಆಗುವಾಗ ಟನ್ನಿಗೆ ಎರಡು ಲಕ್ಷವಾದರೂ ಬಂದೀತು. ಅಂದರೆ ಒಟ್ಟು ಬೆಳೆಗೆ ಅರುವತ್ತು ಲಕ್ಷ. ಖರ್ಚೆಲ್ಲ ಕಳೆದು ಐವತ್ತು ಲಕ್ಷವಾದರೂ ಉಳಿದೀತು. ಮನಸ್ಸಿನಲ್ಲಿಯೇ ಲೆಕ್ಕ ಹಾಕಿದ ಆದಿ ತೀರಾ ಹತ್ತಿರದವರೊಂದಿಗೆ ಅದನ್ನೇ ಹೇಳಿಯೂ ಬಿಟ್ಟ. ಅಪ್ಪನೊಂದಿಗೂ.
ಇತ್ತ ವೆನಿಲ್ಲಾ ಕೋಡುಗಳನ್ನು ಕೊಯ್ಯಲು ಆರಂಭಿಸಿದ್ದೇ ಅತ್ತಲಿಂದ ಶಾಕಿಂಗ್ ಸುದ್ದಿ ಬರಲಾರಂಭಿಸಿತ್ತು. ಮೊದಲನೆಯದು ಅದ್ಯಾವುದೋ ದೇಶದಲ್ಲಿ ಬೆಳೆ ತೀರಾ ಉತ್ತಮವಾಗಿ ಬಂದು ಅಂತರರಾಷ್ಟ್ರೀಯ ಮಾರುಕಟ್ಟೆಗೆ ವೆನಿಲ್ಲಾದ ಮಹಾಪೂರವೇ ಹರಿದು ಬರಲು ತೊಡಗಿದೆ ಎಂಬುದು. ಮತ್ತೆ ಅದರಿಂದಾಗಿ ಅದರ ಬೆಲೆ ಇಳಿಯುತ್ತಿದ್ದುದರ ಕುರಿತು. ಭಾರತದಲ್ಲಂತೂ ಆ ಬೆಲೆ ಕುಸಿತ ತೀರ ವೇಗ ಗತಿಯಲ್ಲಿದೆ ಎನ್ನುವುದು ಮತ್ತೊಂದು. ಕಂಗಾಲಾದ ವೆನಿಲ್ಲಾ ಬೆಳೆಗಾರರು ವ್ಯಾಪಾರಗಾರರು ಕೇಳಿದ ದರಕ್ಕೆ ಮಾರಾಟ ಮಾಡತೊಡಗಿದರು. ದಿನದಿಂದ ದಿನಕ್ಕೆ ಬೆಲೆ ಕುಸಿಯುತ್ತಲೇ ಇದೆ. ಒಂದು ಕಾಲಕ್ಕೆ ಬೆಳೆಗಾರರ ಮನೆಗೆ ಎಡತಾಕುತ್ತಿದ್ದ ವ್ಯಾಪಾರಿಗಳು ಈಗ ಬೆಳೆಗಾರರನ್ನು ಕಂಡರೇ ದೂರ ಓಡತೊಡಗಿದ್ದರು. ಅಂಗಡಿಯಲ್ಲಿ ಕುಳಿತಾಗ ಎಲ್ಲಿಯಾದರೂ ವೆನಿಲ್ಲಾ ಬೆಳೆಗಾರರು ಬಂದರೆ ಹೊರಗಡೆ ಹುಡುಗರ ಹತ್ತಿರ ‘ತಾನು ಇಲ್ಲವೆಂದು ಹೇಳಿ ಕಳುಹಿಸಿ’ ಎಂದು ಒಳಗಡೆ ಕೋಣೆಯಲ್ಲಿ ಅಡಗಿ ಕುಳಿತುಕೊಳ್ಳತೊಡಗಿದರು.

ಇದರಿಂದ ಅತೀ ದೊಡ್ಡ ಶಾಕ್ ಆಗಿದ್ದು ಆದಿಗೆ. ಅದಕ್ಕಿಂತ ಹೆಚ್ಚು ಅವನಪ್ಪನಿಗೆ. ಅವರಿಗೆ ಈ ಬೆಳೆಯಿಂದ ಅಂತಹ ಸಂಪಾದನೆ ಆಗಬೇಕೆನ್ನುವ ಇರಾದೆಯಿದ್ದಿರದಿದ್ದರೂ ಊರವರ ಮುಂದೆ ನಗೆಪಾಟಲಾಗುವ ಪರಿಸ್ಥಿತಿ ಬರಬಹುದೆನ್ನುವ ಹೆದರಿಕೆ ಅವರನ್ನು ಕಂಗೆಡಿಸಿದ್ದು. ಅದೂ ಅಷ್ಟೊಂದು ಆಸ್ಥೆ ಮತ್ತು ಉತ್ಸಾಹದಿಂದ ಇಂತಹ ಸಾಹಸಕ್ಕಿಳಿದ ಮಗನಿಗೆ ನಿರಾಸೆಯುಂಟಾದರೆ ಎನ್ನುವ ಹೆದರಿಕೆಯೂ. ಇವೆಲ್ಲದರ ಹೊರತಾಗಿಯೂ ವೆನಿಲ್ಲಾದ ಬೆಲೆ ಮಾತ್ರ ಇಳಿಯುತ್ತಲೇ ಇತ್ತು. ಎಲ್ಲಿಯವರೆಗೆಂದರೆ ವೆನಿಲ್ಲಾ ಎಂದರೆ ಕೇಳುವವರೇ ಇಲ್ಲ ಎನ್ನುವಷ್ಟರ ಮಟ್ಟಿಗೆ. ಬಂದಷ್ಟು ಬರಲಿ ಎಂದುಕೊ೦ಡು ತಿಂಗಳ ಹಿಂದೆ ತಮ್ಮ ಮನೆಗೆ ಎಡತಾಕುತ್ತಿದ್ದ ವೆನಿಲ್ಲಾ ವ್ಯಪಾರಿಗಳನ್ನು ಹುಡುಕಿಕೊಂಡು ಹೋದರೆ ಅವರೆಲ್ಲ ತಲೆ ಮರೆಸಿಕೊಂಡಿದ್ದರು. ಅವರೆಲ್ಲರೂ ಆದಿಗೆ ನೇರವಾಗಿ ಇಲ್ಲ ಎನ್ನುವ ಧೈರ್ಯ ಮತ್ತು ಮನಸ್ಸು ಎರಡೂ ಇಲ್ಲದವರೇ.
ಅಂತೂ ಟನ್ನುಗಟ್ಟಲೆ ವೆನಿಲ್ಲ ಕೊಳ್ಳುವವರಿಲ್ಲದೇ ಇಲ್ಲಿಯೇ ಉಳಿದು ಹಾಳಾಗುತ್ತೇನೋ ಅಂದುಕೊ೦ಡದ್ದನ್ನು ಕೊಳ್ಳಲು ಅದೆಲ್ಲಿಂದಲೋ ಒಬ್ಬ ಲಾರಿ ಹಿಡಿದುಕೊಂಡು ಬಂದಿದ್ದ. ಯಾವುದೋ ದೂರದ ಊರಿನ ಹೆಸರನ್ನು ಹೇಳಿದ್ದ. ತಮ್ಮಲ್ಲಿ ಇದರ ಹತ್ತು ಪಟ್ಟು ವೆನಿಲ್ಲಾವನ್ನು ಕೊಳ್ಳುವ ತಾಕತ್ತಿದ್ದವರೂ ಇದ್ದಾರೆಂದು ಬೊಗಳೆ ಹೊಡೆದಿದ್ದ. ಗಿರಾಕಿಯೇ ಬರುತ್ತದೋ ಇಲ್ಲವೋ ಎನ್ನುವ ಹೆದರಿಕೆಯಲ್ಲಿದ್ದ ಆದಿಗೆ ಅವನು ಹಾಗೆ ಕೇಳಿಕೊಂಡು ಬಂದದ್ದೇ ಸಾಕಾಗಿತ್ತು.
ಉಳಿದ ಹಾಗೆ ಅವನನ್ನು ಬೇರೆ ಏನಾದರೂ ಕೇಳಬೇಕೆಂದು ಅನ್ನಿಸಲೂ ಇಲ್ಲ ಅವನಿಗೆ. ತೂಕ ಹಾಕಿಸಿ ಕೊಟ್ಟೇ ಬಿಟ್ಟ. ದರ ಏನೆಂದು ಕೇಳಲೂ ಇಲ್ಲ. ತೂಕ ಎಲ್ಲ ಆದ ಮೇಲೆ ಇಂತಿಷ್ಟು ಎಂದು ಅವನು ಎಣಿಸಿ ಕೊಟ್ಟ ದುಡ್ಡನ್ನು ತೆಗೆದುಕೊಂಡವ ತುಸು ಹೊತ್ತು ಮುಖ ಅಡಿ ಹಾಕಿ ಕುಳಿತ ಅಷ್ಟೆ. ಉತ್ಸಾಹದಿಂದ ಬಳ್ಳಿ ನೆಡಲು ಅವನು ಹೊರಟಾಗ ಇದ್ದ ರೇಟಿನ ಹತ್ತರಲ್ಲಿ ಒಂದು ಪಾಲು! ಘಟ್ಟದ ಮೇಲಿನಿಂದ ಬಳ್ಳಿ ತಂದದ್ದರಿ೦ದ ಹಿಡಿದು ಇಂದಿನವರೆಗೆ ಆದ ಖರ್ಚು ಈಗ ಬಂದ ದುಡ್ಡಿನ ನಾಲ್ಕು ಪಾಲು!
ಹಿಂದೊಮ್ಮೆ ಬೂದುಗುಂಬಳ ನೆಟ್ಟಾಗಲೂ ಇದೇ ಕಥೆಯಾಗಿತ್ತು. ಅಲ್ಲೂ ನಷ್ಟವೇ. ಆದರೆ ಬೆಳೆದದ್ದೆಲ್ಲವನ್ನೂ ಮನೆಯಲ್ಲಿಯೇ ಕೂಡಿಟ್ಟುಕೊಂಡು ಉಳುವ ಕೋಣಗಳಿಗೆ ಕಡಿದು ಹಾಕಿದ್ದೇ ಅಲ್ಲದೆ ದಿನಕ್ಕೆರಡು ಪದಾರ್ಥಗಳನ್ನು ಅದರಿಂದಲೇ ಮಾಡಿ ತಿಂದದ್ದು ನೆನಪಿನಲ್ಲಿಯೇ ಇದೆ. ಅಂದರೆ ಕೃಷಿ ಮೂಲಕ ಹಣ ಮಾಡುತ್ತೇನೆ ಎನ್ನುವುದು ನನ್ನ ಹಣೆಯ ಮೇಲೆ ಬರೆಯಲೇ ಇಲ್ಲವೇನೋ ಅನ್ನಿಸ ಹತ್ತಿತು ಆದಿಗೆ.
|ಇನ್ನು ನಾಳೆಗೆ |






0 Comments