ಪಿ ಪಿ ಉಪಾಧ್ಯ
20
ಅವ ಮಾತ್ರ ಕೆಳ ಹಾಕಿದ ಮುಖವನ್ನು ಎತ್ತಿರಲೇ ಇಲ್ಲ.
ಸಾಮಾನ್ಯದ ಹುಡುಗರು ಅವನ ಹತ್ತಿರ ಮಾತನಾಡಲೂ ಹೆದರುತ್ತಿದ್ದರು. ಅದೇ ತದ್ವಿರುದ್ಧ ತಮ್ಮನ ಜೊತೆಗೆ. ಅಣ್ಣ ಜೊತೆಯಲ್ಲಿಲ್ಲದ ಸಮಯ ನೋಡಿ ಅನಂತನಿಗೆ ಕೀಟಲೆ ಮಾಡುತ್ತಿದ್ದರು. ಅದನ್ನು ಅಣ್ಣನೊಂದಿಗೆ ಹೇಳಿಕೊಳ್ಳುವುದನ್ನೂ ಅವಮಾನ ಎಂದು ಭಾವಿಸುತ್ತಿದ್ದ ಆ ತಮ್ಮನ ರಕ್ಷಣೆಯನ್ನು ತನ್ನ ಕರ್ತವ್ಯ ಎಂದು ಭಾವಿಸಿದ್ದ ಅಣ್ಣ ಮನೆಯಿಂದ ಹೋಗುವಾಗ ಮತ್ತು ಬರುವಾಗ ತಮ್ಮ ತನ್ನ ಜೊತೆಗೇ ಇರಬೇಕೆಂದು ಬಯಸಿದರೆ ಅನಂತ ತಪ್ಪಿಸುತ್ತಿದ್ದ. ಒತ್ತಾಯ ಮಾಡಿದರೆ ಅವನ ಉತ್ತರ ತೀಕ್ಷ್ಣವಾಗಿರುತ್ತಿತ್ತು. ನೀನೇನೂ ನನ್ನ ಜೊತೆಗೆ ಬರುವ ಅಗತ್ಯವಿಲ್ಲ. ನನ್ನನ್ನು ನಾನೇ ನೋಡಿಕೊಳ್ಳಬಲ್ಲೆ' ತರಗತಿಗಳಲ್ಲೂ ಅಷ್ಟೆ.ಅಲ್ಲ ಅನಂತ, ನಿಮ್ಮಣ್ಣ ಆದಿ ಅದರಲ್ಲಿ ಹುಷಾರಿದ್ದ. ಇದರಲ್ಲಿ ಅವ ಛಾಂಪಿಯನ್ಶಿಪ್ಪನ್ನು ಯಾರಿಗೂ ಎರಡು ವರ್ಷಗಳ ಕಾಲ ಬಿಟ್ಟುಕೊಟ್ಟದ್ದೇ ಇಲ್ಲ’ ಎಂದು ಮೇಷ್ಟರೆಲ್ಲಿಯಾದರೂ ಹೇಳಿದರೆ ಕಿರುಚಿಯೇ ಬಿಡುತ್ತಿದ್ದ. ‘ನನ್ನನ್ನು ನನ್ನಷ್ಟಕ್ಕೆ ಬಿಡಿ. ನಾನು ಅನಂತ. ಆದಿಯಲ್ಲ’ ಎಂದು ಮುಖ ಮುರಿಯುವಂತೆ ಹೇಳುತ್ತಿದ್ದ. ಶಾಲೆಯಲ್ಲಿ ಬೇರೆ ಯಾರಾದರೂ ಅಂತಹ ಮಾತಾಡಿದ್ದರೆ ಮೇಷ್ಟರ ಬೆತ್ತ ಪುಡಿಯಾಗುತ್ತಿತ್ತು. ಅನಂತ ಶಾಮಣ್ಣನವರ ಮನೆಯವನಾದ್ದರಿಂದ ಆ ಬಗ್ಗೆ ಮಾಫಿ. ಜೊತೆಗೆ ಯಾವ ಸಬ್ಜೆಕ್ಟಿನಲ್ಲಿಯೂ ಮೊದಲನೆಯ ಸ್ಥಾನವನ್ನು ಯಾರಿಗೂ ಬಿಡದಂಥವ. ಆದ್ದರಿಂದ ಬೆತ್ತ ಮೇಷ್ಟ್ರ ಮೇಜಿನ ಡ್ರಾದಿಂದ ಹೊರ ಬರುತ್ತಿರಲಿಲ್ಲ.
ಆದರೆ ಅನಂತನ ಈ ಪ್ರವರ್ತಿಯಿಂದ ನೊಂದವನೆ೦ದರೆ ಆದಿ. ಗೆಳೆಯರೊಂದಿಗೆ ಗುಂಪಾಗಿ ಶಾಲೆಗೆ ಹೋಗುವಾಗ ಮತ್ತು ಬರುವಾಗ ತಮ್ಮ ಬೇರೆಯಾಗಿ ಹಿಂದೆ ಅಥವಾ ಮುಂದೆ ಇರುತ್ತಿದ್ದರೆ ಗೆಳೆಯರು ತಮಾಷೆ ಮಾಡುತ್ತಿದ್ದರು. ಆಗೆಲ್ಲ ಆದಿಯ ನೋವು ತೀವ್ರವಾಗುತ್ತಿತ್ತು. ಇವನೇಕೆ ಬೇರೆಯೇ ಇರಲು ಬಯಸುತ್ತಾನೆ ಎನ್ನುವ ಉತ್ತರ ಸಿಗದ ಪ್ರಶ್ನೆ ಎದುರಾಗುತ್ತಿತ್ತು.
ಅಂತಹ ಅನಂತ ಎಸ್ ಎಸ್ಎಲ್ಸಿಗೆ ಬಂದಾಗ ಆದಿ ಹೈಸ್ಕೂಲು ಮುಗಿಸಿ ಮೂರು ವರ್ಷವೇ ಆಗಿತ್ತು. ಯಾವುದೇ ಪ್ರಯತ್ನವಿಲ್ಲದೆ ಜನ ಮೂಗಿನ ಮೇಲೆ ಬೆರಳಿಡುವಷ್ಟು ಮಾರ್ಕುಗಳನ್ನು ಎಸ್ಎಸ್ಎಲ್ಸಿ ಯಲ್ಲಿ ಪಡೆದುಕೊಂಡಿದ್ದರೂ ಆದಿ ಮುಂದೆ ಓದುವ ಇಚ್ಛೆಯನ್ನೇ ತೋರಿಸಿರಲಿಲ್ಲ. ಪರೀಕ್ಷೆಯನ್ನು ಎಂದೂ ಗಂಭೀರವಾಗಿ ಪರಿಗಣಿಸದ ಅವನಿಗೆ ಬಂದ ಮಾರ್ಕುಗಳು ಅವನ ಅಧ್ಯಾಪಕ ವರ್ಗದವರೂ ಸೇರಿದಂತೆ ಜನರಿಗೆ ಆಶ್ಚರ್ಯ ಹುಟ್ಟುವಷ್ಟಿದ್ದವು.
ಇದೇ ಮಟ್ಟದ ಮಾರ್ಕುಗಳು ಪಿ ಯು ಸಿ ಯಲ್ಲಿಯೂ ಬಂದರೆ ಎಂಜಿನಿಯರಿ೦ಗಿಗೋ ಮೆಡಿಕಲ್ಲಿಗೋ ಸೀಟು ಸಿಗುವುದೇನೂ ಕಷ್ಟವಾಗಲಾರದು ಎಂದು ಮಾತಾಡಿಕೊಳ್ಳ ಹತ್ತಿದ್ದರು. ಒಂದು ವೇಳೆ ಅವನಿಗೆ ಸಿಕ್ಕುವ ಮಾರ್ಕು ಸಾಕಾಗಲಿಲ್ಲವೆಂದರೂ ಹಣ ಕೊಟ್ಟು ಕಳುಹಿಸುವುದಕ್ಕೆ ಅದಕ್ಕೆಲ್ಲ ತಲೆ ಹಾಕದ ಅಪ್ಪನಲ್ಲದಿದ್ದರೂ ಅಮ್ಮ ತಯಾರಾಗಿದ್ದಳು. ಆದರೆ ಆದಿಯೇ ಬೇಡವೆಂದಿದ್ದ. ಮೊದಲಿನಿಂದಲೂ ಕಲಿಯುವುದರಲ್ಲಿ ಅಷ್ಟೊಂದು ಆಸಕ್ತಿಯಿಲ್ಲದ ಅವ ಮುಂದೆ ಕಲಿಯುವ ಆಸಕ್ತಿಯನ್ನು ತೋರಿಸಲೇ ಇಲ್ಲ. ಶಾಲೆಗೆ ಹೋಗುವ ದಿನಗಳಲ್ಲಿಯೇ ಸಾಕಷ್ಟು ಬೆಳೆಸಿಕೊಂಡಿದ್ದ ಅವನ ವರ್ಚಸ್ಸು ಈಗ ಸುತ್ತ ಮುತ್ತಲ ಊರುಗಳಲ್ಲಿ ಇನ್ನೂ ಹೆಚ್ಚಾಗಿತ್ತು. ಮತ್ತು ಅದನ್ನೇ ತನ್ನ ಮುಂದಿನ ಬದುಕೆಂದು ನಿರ್ಧರಿಸಿದ್ದ.

ಊರಿನಲ್ಲಿ ಏನೇ ಒಳ್ಳೆಯ ಕಾರ್ಯವಿರಲಿ ಕೆಟ್ಟದಿರಲಿ ಅಲ್ಲಿ ಆದಿ ಇರುತ್ತಿದ್ದ. ಸಂಕಷ್ಟದಲ್ಲಿದ್ದ ಮಂದಿಗೆ ಮೊದಲು ಮೊರೆಹೋಗಬೇಕೆನ್ನಿಸುತ್ತಿದ್ದುದು ಆದಿಯನ್ನೇ. ಅವನಪ್ಪನೂ ಇಲ್ಲವೆನ್ನುತ್ತಿರಲಿಲ್ಲ ನಿಜ. ಆದರೆ ಆದಿಯ ಹಾಗೆ ಮುಂದೊತ್ತಿಕೊ೦ಡು ಹೋಗಿ ಸಹಾಯ ಮಾಡಬೇಕೆನ್ನುವ ಉತ್ಸಾಹ ಅವರಲ್ಲಿರಲಿಲ್ಲ. ಆದಿ ಮಾತ್ರ ತಾನಾಗಿಯೇ ಹೋಗಿ ಸಹಾಯ ಹಸ್ತ ಚಾಚುತ್ತಿದ್ದ. ಮತ್ತು ಜನ ದುಡ್ಡಿದ್ದರೆ ಸಾಕೇ ಅದನ್ನು ನಾಲ್ಕು ಜನರಿಗೆ ಸಹಾಯವಾಗುವಂತೆ ಉಪಯೋಗಿಸುವ ಮನಸ್ಸು ಬೇಕು. ದುಡ್ಡಿದ್ದವರೆಲ್ಲ ನಮ್ಮ ಆದಿಯನ್ನು ನೋಡಿ ಕಲಿತುಕೊಳ್ಳಬೇಕು' ಎನ್ನತೊಡಗಿದ್ದರು. ಅದರೆ ಅವನ ಈ ಚಟುವಟಿಕೆಗಳಿಗೆ ವಿರೋಧ ಬಂದದ್ದು ಮನೆಯಿಂದಲೇ. ಅದೂ ಅನಂತನಿ೦ದ. ವಿವರಣೆಯೇ ಇಲ್ಲದ ಕಾರಣಗಳಿಗಾಗಿ ಅವ ಆದಿಯನ್ನು ವಿರೋಧಿಸುತ್ತಿದ್ದ. ಅಣ್ಣ ಮಾಡುವ ಖರ್ಚುಗಳಿಂದಾಗಿ ಮನೆಯ ಆಸ್ತಿ ಪೋಲಾಗುತ್ತದೆ ಎನ್ನುವ ಕಾಳಜಿಯಿಂದ೦ತೂ ಖಂಡಿತ ಅಲ್ಲ. ಇವನಿಗೆ ಯಾಕೆ ಬೇಡದ ಉಪದ್ಯಾಪ.. ಊರಿನವರೆಲ್ಲರ ಉಸಾಬರಿ ಕಟ್ಟಿಕೊಂಡು ಇವನಿಗೇನಾಗಬೇಕು’ ಎನ್ನುವ ಪೀಠಿಕೆಯೊಂದಿಗೆ ಪ್ರಾರಂಭವಾದ ಅವನ ಟೀಕೆ ಆದಿಯ ಪ್ರತಿಯೊಂದು ಚಟುವಟಿಕೆಯನ್ನೂ ಹೀಯಾಳಿಸುವಷ್ಟು ಮುಂದುವರಿದಿತ್ತು. ಹಾಗೆಂದು ಅಣ್ಣನ ಎದುರಿಗೆ ನಿಂತು ಮಾತನಾಡುತ್ತಿರಲಿಲ್ಲ. ಎಲ್ಲ ಅಮ್ಮನ ಎದುರಿಗೆ. ಆ ಅಮ್ಮ ಅದನ್ನೆಲ್ಲ ಅಣ್ಣನಿಗೆ ಹೇಳಬೇಕೆಂಬುದು ಅವನ ಬಯಕೆ. ಇದೆಲ್ಲ ತಾನಾಗಿಯೇ ಅಮ್ಮನಿಗೆ ಹೊಳೆಯುವುದಿಲ್ಲ' ಎಂದು ಅವನೇ ಎಣಿಸಿದ್ದರಿಂದ ತಾನೇ ಆ ಜವಾಬ್ದಾರಿಯನ್ನು ವಹಿಸಿಕೊಂಡು ಅಮ್ಮನಿಗೆ ಹೇಳಿದರೆ ಆಕೆ ಅಣ್ಣನಿಗೆ ತಲುಪಿಸಬಹುದು ಅಲ್ಲ ತಲುಪಿಸಬೇಕು ಎನ್ನುವುದು ಅವನ ಇರಾದೆ.
ಮಕ್ಕಳಿಬ್ಬರಲ್ಲೂ ಬೇಧವೆಣಿಸದ ಆ ತಾಯಿಗೆ ಉಭಯ ಸಂಕಟ. ಆದಿಯ ಮೇಲೆ ತುಂಬ ಅಭಿಮಾನ ಆಕೆಗೆ. ಗಂಡನಲ್ಲಿಲ್ಲದ ಕಾರ್ಯೋತ್ಸಾಹ ಮತ್ತು ವ್ಯವಹಾರ ನೈಪುಣ್ಯವನ್ನು ಆಕೆ ಮೆಚ್ಚಿದ್ದು ಎಷ್ಟು ಸಲವೋ. ತನ್ನ ಅಪ್ಪನ ಮನೆಯಲ್ಲಿ ಅಪ್ಪ ಮತ್ತು ಅಣ್ಣನಲ್ಲಿ ಕಂಡಿದ್ದ ಅದೇ ಸಾಹಸೀ ಪ್ರವರ್ತಿ ತನ್ನ ದೊಡ್ಡ ಮಗನಲ್ಲಿ ಕಂಡಿದ್ದನ್ನು ಆಕೆ ತನ್ನ ಅಣ್ಣನೊಂದಿಗೆ ಬಹಳಷ್ಟು ಸಲ ಹೇಳಿಕೊಂಡು ಹೆಮ್ಮೆ ಪಟ್ಟದ್ದಿದೆ.ನಮ್ಮ ಆದಿ ಎಲ್ಲ ನಿನ್ನ ಹಾಗೆಯೇ ಅಣ್ಣ. ಯಾವುದಕ್ಕೂ ಮುಂದೊತ್ತಿ ಹೋಗುತ್ತಾನೆ. ಹೆದರಿಕೆಯೆಂಬುದೇ ಇಲ್ಲ ನೋಡು ಅವನಿಗೆ’ ಎಂದು. ಹಾಗಿರುವಾಗ ಈಗ ಈ ತಮ್ಮನಿಗೆ ಅದು ಇಷ್ಟವಿಲ್ಲವೆಂದು ಅದೆಲ್ಲ ಚಟುವಟಿಕೆಗಳನ್ನು ನಿಲ್ಲಿಸಲು ಹೇಳಿಯಾಳೇ. ಹಾಗೆಂದು ಕಲಿಯುವುದರಲ್ಲಿ ಚುರುಕಾಗಿದ್ದು ಶಾಲೆಯಿಂದ ಮೆಡಲುಗಳ ಮೇಲೆ ಮೆಡಲು ತಂದು ಮನೆಯನ್ನು ಒಂದು ತೆರನ ಮೆಡಲುಗಳ ಪ್ರದರ್ಶನಾಲಯವನ್ನಾಗಿ ಮಾಡಿದ ಸಣ್ಣವನನ್ನು ಬಿಡಲುಂಟೇ. ಅವನು ಹೇಳುವಾಗೆಲ್ಲ ಹುಂ.. ಹುಂ...' ಎನ್ನುತ್ತಿದ್ದ ಆಕೆ ಒಂದನ್ನೂ ಆದಿಯ ಹತ್ತಿರ ಹೇಳಲು ಹೋಗುತ್ತಿರಲಿಲ್ಲ.
ಒಟ್ಟಿನಲ್ಲಿ ಆ ಅಣ್ಣ ತಮ್ಮಂದಿರ ನಡುವೆ ಆಕೆ ಕಂಗೆಟ್ಟದ್ದ೦ತೂ ಹೌದು. ಒಮ್ಮೆಯಂತೂ ಶಾಲೆಯಿಂದ ಮನೆಗೆ ಬಂದ ಅನಂತ ಕುದಿಯುತ್ತಿದ್ದ. ಮಾಮೂಲಿಯಾಗಿ ಸಂಜೆ ಮನೆಗೆ ಬಂದವನೇ ಶಾಲೆಯ ಚೀಲವನ್ನು ಮೇಜಿನ ಮೇಲೆ ಎಸೆದು ಕೈ ಕಾಲು ತೊಳೆದುಕೊಂಡು ಅಡಿಗೆ ಮನೆಗೆ ಕಾಫಿಗೆಂದು ಬರುತ್ತಿದ್ದವ ಅಂದು ಮನೆಗೆ ಬಂದವನೇ ಅಮ್ಮನನ್ನು ಹುಡುಕಿಕೊಂಡು ಹೋಗಿದ್ದ. ಹೊಟ್ಟೆ ಕಂತುವ ಮಾತುಗಳನ್ನು ಆಡಲು ಎಂದೋ ಕಲಿತಿದ್ದ ಅವ ಸಿಟ್ಟನ್ನು ತೋರಿಸದಿರುವುದನ್ನೂ ಕಲಿತಿದ್ದ.ಅಲ್ಲ ಅಮ್ಮ, ಈ ಆದಿಗೆ ಹೇಳು ಅಂತ ಎಷ್ಟು ಸಲ ಹೇಳಿದ್ದೇನೆ. ನೀನು ಹೇಳಲಿಲ್ಲವೋ ಅಥವಾ ಅವ ನೀನು ಹೇಳಿದ್ದನ್ನು ತೆಗೆದುಕೊಳ್ಳಲಿಲ್ಲವೋ ‘ಕಮಲಮ್ಮನಿಗೆ ಗೊಂದಲ. ಇವತ್ತು ಅಣ್ಣನ ಬಗ್ಗೆ ಇನ್ನೇನೋ ದೂರು ತಂದಿದಾನೋ ಅನ್ನಿಸಿತ್ತು. ಏನಾಯ್ತು ಮಗಾ.. ಯಾಕೆ ಹೀಗೆ ಸಿಟ್ಟು ಸಿಟ್ಟು ಹಾರುತ್ತೀಯ..' ಅಲ್ಲ, ಇವನು ಶಾಲೆ ಬಿಟ್ಟು ಮೂರು ವರ್ಷ ಆಯಿತಲ್ಲ. ಇನ್ನೂ ಯಾಕೆ ಅವನಿಗೆ ಶಾಲೆ ಮಕ್ಕಳ ಉಪದ್ವಾö್ಯಪ… ಒಟ್ಟಾರೆ ಇವನಿಂದಾಗಿ ನಾನು ಶಾಲೆಯಲ್ಲಿ ತಲೆಯೆತ್ತಿ ತಿರುಗುವ ಹಾಗೆ ಇಲ್ಲ’...

'ಆ ಬನ್ನಾಡಿ ಮಕ್ಕಳ ಗುಂಪು ಮತ್ತು ಕೋಟದ ಪೇಟೆಯ ಮಕ್ಕಳ ಗುಂಪಿನ ನಡುವೆ ಜಗಳ ಈಗೇನು ಹೊಸತೇ.. ಇವ ಆ ಬನ್ನಾಡಿ ಮಕ್ಕಳ ಪರ ವಹಿಸಿ ಕೋಟದ ಪೇಟೆಯ ಮಕ್ಕಳಿಗೆ ಬೈದನಂತೆ. ಇನ್ನೇನಾದರೂ ಹೀಗೆ ಮಾಡಿದರೆ ಚನ್ನಾಗಿರುವುದಿಲ್ಲ ಎಂದು ಹೆದರಿಸಿದನಂತೆ. ಈಗ ಪೇಟೆಯ ಮಕ್ಕಳ ಜೊತೆಗೆ ಅವರ ಮನೆಯವರೂ ಸೇರಿ ನಮ್ಮ ಮೇಲೆ ಕತ್ತಿ ಮಸೆಯುತ್ತಿದ್ದಾರೆ’
‘ಅಯ್ಯೋ.. ಆದಿ ಹಾಗೆ ಮಾಡಿದನೇ...' ಎಂದು ಕಮಲಮ್ಮ ಉದ್ಗಾರವೆತ್ತುತ್ತಿದ್ದಂತೆಯೇ ಏನು ತಾಯಿ ಮಗ ಗಹನವಾದ ಚರ್ಚೆಯಲ್ಲಿದ್ದ ಹಾಗೆ ಕಾಣುತ್ತಿದೆ’ ಎನ್ನುತ್ತಲೇ ಆದಿ ಒಳ ಬಂದಿದ್ದ.
ಅಣ್ಣನನ್ನು ಕಂಡದ್ದೇ ಬಾಲ ಮಡಚಿಕೊಂಡು ಅನಂತ ಅಲ್ಲಿಂದ ಜಾಗ ಖಾಲಿ ಮಾಡಲು ನೋಡಿದ. ಆದಿಯೇ ತಡೆದ.
‘ಅಲ್ಲ ಅದೇನೋ ಬನ್ನಾಡಿಯವರು ಕೋಟದವರು ಎನ್ನುತ್ತಿದ್ದೆಯಲ್ಲ...' ಎಂದು ಕೇಳುವಾಗ ಕಮಲಮ್ಮನೇ ಉತ್ತರಿಸಿದರು ಅಲ್ಲ ಆದಿ ಆ ಶಾಲೆ ಮಕ್ಕಳ ಜಗಳದಲ್ಲಿ ನಿನಗೇನೋ ಕೆಲಸ.. ಈಗ ಪೇಟೆಯ ಮಕ್ಕಳು ಜೊತೆಗೆ ಅವರ ಮನೆಯವರೂ ಸೇರಿ ನಿನ್ನ ವಿರುದ್ಧವಾಗಿ ಏನೋ ಮಾಡಲು ಹೊರಟಿದ್ದಾರಂತಲ್ಲ’ಅಮ್ಮ, ಯಾರು ಹೇಳಿದರು ನಿನಗೆ... ಇದನ್ನೆಲ್ಲ ಈ ಅನಂತ ಹೇಳಿದನೇ... ಕೇಳು, ಈಗ ಪೇಟೆಯಿಂದಲೇ ಬರುತ್ತಿದ್ದೇನೆ. ಅದೂ ಕೋಟದ ಪೇಟೆಯ ಮಂದಿಗೆಲ್ಲ ಲೀಡರಾದ ಕಮ್ತೀರ ಅಂಗಡಿಯಿ೦ದಲೇ. ಅವರು ಏನು ಹೇಳಿದರು ಗೊತ್ತಾ...ಆದಿ ನೀವಾದ್ದರಿಂದ ಈ ಜಗಳ ಇಷ್ಟು ಸುಲಭದಲ್ಲಿ ಬಗೆ ಹರಿಯಿತು.
ಇನ್ನು ಯಾರೇ ಆಗಿದ್ದರೂ ಒಂದು ಇಬ್ಬರು ಮೂರು ಜನರ ಕೈ ಕಾಲಾದರೂ ಮುರಿದು ಹೋಗುತ್ತಿತ್ತು. ಹೆಣ ಬಿದ್ದಿದ್ದರೂ ಹೆಚ್ಚಲ್ಲ. ಈ ಹುಡುಗರಿಗೆ ಬುದ್ಧಿಯಿಲ್ಲ. ನಮ್ಮ ಹುಡುಗರು ಇನ್ನು ಬಾಲ ಬಿಚ್ಚುವುದಿಲ್ಲ ಬಿಡಿ. ಸರಿಯಾಗಿ ಬುದ್ಧಿ ಕಲಿಸಿದ್ದೀರಿ. ನಾನೂ ಕರೆದು ಮಾತಾಡುತ್ತೇನೆ. ಹಾಗೇ ಆ ಬನ್ನಾಡಿಯ ಮಕ್ಕಳೂ ಜಗಳ ಮಾಡುವುದಿಲ್ಲ ಎಂದಿದ್ದಾರೆ’ ಎಂದೂ ಹೇಳಿದರು. ಇಷ್ಟಕ್ಕೂ ನಾನು ಅಲ್ಲಿಗೆ ಹೋಗಿದ್ದೂ ಶಾಲೆಯ ಹೆಡ್ಮಾಷ್ಟ್ರು ಗೋಗರೆದು ಬರ ಹೇಳಿದ್ದರಿಂದಲೇ’ ಅಷ್ಟೆಲ್ಲ ಹೇಳುತ್ತ ಆದಿ ನಡು ನಡುವೆ ಅನಂತನ ಕಡೆಗೆ ನೋಡಿದರೆ ಅವ ಮಾತ್ರ ಕೆಳ ಹಾಕಿದ ಮುಖವನ್ನು ಎತ್ತಿರಲೇ ಇಲ್ಲ.
ಅನಂತ ದೂರು ತಂದಾಗ ಪ್ರಪಂಚವೇ ತಲೆ ಮೇಲೆ ಬಿದ್ದಿತೇನೋ ಎಂದು ಚಿಂತೆ ಹೊಂದಿದ್ದ ಕಮಲಮ್ಮನವರಿಗೆ ಈಗ ನಿರಾಳವೆನಿಸಿತು. `ನೋಡು ನೀನು ಹೇಳಿದ ಹಾಗೆ ಬೇಡದ್ದಕ್ಕೆ ತಲೆ ಹಾಕುವವನಲ್ಲ ಆದಿ. ನೀನು ಸುಮ್ಮನೆ ಅವನ ಬಗ್ಗೆ ಇಲ್ಲದ್ದನ್ನು ಕಲ್ಪಿಸಿಕೊಂಡು ತಲೆ ಕೆಡಿಸಿಕೊಳ್ಳಬೇಡ’ ಎಂದು ಅನಂತನಿಗೆ ಹೇಳಬೇಕೆಂದರೆ ಅವ ಆಗಲೇ ಅಲ್ಲಿಂದ ಜಾರಿಕೊಂಡಾಗಿತ್ತು.
। ಇನ್ನು ನಾಳೆಗೆ ।






0 Comments