ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಿ ಪಿ ಉಪಾಧ್ಯ ಸರಣಿ ಕಥೆ 19- ಶಾಮಣ್ಣನವರ ಮಕ್ಕಳೆಂದರೆ ಗೌರವ…

ಪಿ ಪಿ ಉಪಾಧ್ಯ

19

ಶಾಮಣ್ಣನವರ ಮಕ್ಕಳೆಂದರೆ ಗೌರವ…

ನೋಡು ನೋಡುತ್ತಲೇ ಗಿಡಗಳು ದೊಡ್ಡದಾದುವು. ಹೂವೂ ಬಿಟ್ಟವು. ಇಡೀ ಗದ್ದೆಗೆ ಗದ್ದೆಯೇ ಅರಸಿನ ಬಣ್ಣದ ಹೂಗಳ ಹಾಸಿಗೆ. ಮಿಡಿ ಕಚ್ಚಿದುವು. ಕಚ್ಚಿದ ಮಿಡಿಗಳು ಬಲಿತು ಕಾಯಿಯಾದುವು. ಗದ್ದೆಯ ತುಂಬಾ ಬೂದಿ ಕಟ್ಟಿದ ಕುಂಬಳ ಕಾಯಿಗಳು. ಎಲ್ಲಿ ನೋಡಿದರೆ ಅಲ್ಲಿ ಮಲಗಿದ್ದ ಕಾಯಿಗಳು. ಒಂದೊ೦ದೂ ಹದಿನೈದು ಇಪ್ಪತ್ತು ಕೇಜಿಗಳಾಗಬಹುದು. ಎಲ್ಲವನ್ನು ಕೊಯ್ದು ಬದಿಗೆ ರಾಶಿ ಹಾಕಿ ಪೈಗಳ ಲಾರಿಯನ್ನು ಬರ ಹೇಳಿದರೆ ಲಾರಿಯ ಬದಲಿಗೆ ಪೈಗಳೇ ಬಂದರು.

ನಮ್ಮ ಶಾಮಣ್ಣನ ಗದ್ದೆಗಳಲ್ಲಿ ಬೆಳೆದ ಕುಂಬಳಕಾಯಿಗಳೆ೦ದರೆ ಕೇಳಬೇಕೇ.. ಕೇಜಿಗೆ ಹತ್ತು ರೂಪಾಯಿ ಕೊಟ್ಟರೂ ಕೊಡಬಹುದು' ಎಂದು ಊರೆಲ್ಲ ಹೇಳಿಕೊಂಡು ಬರುತ್ತಿದ್ದ ಪೈಗಳು ಗರಬಡಿದ ಮುಖ ಹೊತ್ತು ಬಂದವರುಮೋಸ ಆಯ್ತಲ್ಲ ಆದಿ… ನಿನ್ನೆ ಮೊನ್ನೆ ವರೆಗೆ ಕೇಜಿಗೆ ನಾಲ್ಕೈದು ರೂಪಾಯಿ ಇದ್ದುದು ಇವತ್ತು ಸಡನ್ ಒಂದು ರೂಪಾಯಿಗೆ ಇಳಿದಿದೆಯಂತೆ. ಇನ್ನೊಂದೆರಡು ದಿನಗಳಲ್ಲಿ ಐವತ್ತು ಪೈಸೆಗೆ ಬಂದರೂ ಬಂದೀತು ಎನ್ನುತ್ತಿದ್ದಾರೆ. ಬೊಂಬಾಯಿಯ ಮಾರ್ಕೆಟ್ ಫುಲ್ ಡೌನ್ ಅಂತೆ’ ಎಂದು ಏದುಸಿರು ಬಿಡುತ್ತಲೇ ಹೇಳಿದರು. ಕೇಳಿದ ಆದಿಗೆ ಉಸಿರು ನಿಲ್ಲುವುದೊಂದೇ ಬಾಕಿ.

ಸಾವಿರ ಸಾವಿರಗಳ ಲೆಕ್ಕದಲ್ಲಿ ಕೊಯ್ದು ಹಾಕಿದ್ದ ಕುಂಬಳ ಕಾಯಿಗಳ ರಾಶಿ. ಸಾಗಿಸಲು ಹತ್ತಿಪ್ಪತ್ತು ಲಾರಿಗಳೇ ಬೇಕು. ಪೈಗಳಿಗೂ ಒಂದು ದೊಡ್ಡ ವ್ಯವಹಾರವಾಗುತ್ತಿತ್ತು. ಕೇಜಿಯ ಮೇಲೆ ಅವರಿಗೆ ಮಾಮೂಲಿಯಾಗಿ ಸಿಕ್ಕುತ್ತಿದ್ದ ಎರಡು ರೂಪಾಯಿ ಹೋಗಲಿ ಒಂದೇ ರೂಪಾಯಿಯಂತೆ ಲೆಕ್ಕ ಹಾಕಿದ್ದರೂ ಲಕ್ಷಕ್ಕಿಂತ ಹೆಚ್ಚು ಬರುತ್ತಿತ್ತು.. ಈಗ ಕುಳಿತಲ್ಲೇ ಅಷ್ಟು ನಷ್ಟ ಅವರಿಗೆ. ಹಾಗಾದರೆ ಆದಿಗಾದ ನಷ್ಟವೆಷ್ಟು…. ತೀವ್ರ ನಿರಾಸೆಯಿಂದ ಪೈಗಳು ವಾಪಾಸು ಹೋಗುತ್ತ ನೋಡುವ ಅಯ್ಯ.. ವಾರವೆರಡು ವಾರದಲ್ಲಿ ಹೆಚ್ಚಾದರೂ ಆದೀತು. ಅದೇನೋ ಮಹಾರಾಷ್ಟçದಲ್ಲಿಯೂ ಸಾರಾ ಸಗಟಾಗಿ ಬೆಳೆಯುವದಕ್ಕೆ ಪ್ರಾರಂಭಿಸಿದ್ದಾರ೦ತೆ. ಅವೆಲ್ಲ ಈಗಲೇ ಮಾರ್ಕೆಟಿಗೆ ಬಂದಿದ್ದಾವ೦ತೆ.. ನೋಡೋಣ... ಒಂದೆರಡು ವಾರ ಕಳೆಯಲಿ' ಎಂದು ಹೇಳಿದರು.

ಆದಿ ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತ. ಹಾಕಿದ ಖರ್ಚೂ ಬರಲಿಕ್ಕಿಲ್ಲವಲ್ಲ ಎಂದಲ್ಲ. ತನ್ನ ಕನಸೆಲ್ಲ ನುಚ್ಚು ನೂರಾಯಿತಲ್ಲ ಎಂದು. ಮು೦ದೆಯೂ ಅಷ್ಟೆ. ಪೈಗಳು ಆಸೆಪಟ್ಟಂತೆ ದರವೇನೂ ಹೆಚ್ಚಾಗಲಿಲ್ಲ. ಬದಲಿಗೆ ದಿನಕ್ಕೆ ಎಂಟು ಹತ್ತು ಪೈಸೆಗಳಂತೆ ಕಡಿಮೆಯಾಗುತ್ತ ಬಂದದ್ದು ನಾಲ್ಕೇ ದಿನಕ್ಕೆ ಹದಿನೈದು ಪೈಸೆಗೆ ಬಂದು ನಿಂತಿತ್ತು. ಈಗಂತೂ ಆದಿಯೇ ಪೈಗಳನ್ನು ಹುಡುಕಿಕೊಂಡು ಹೋಗಿಪೈಗಳೇ, ಬೆಲೆ ಎಷ್ಟೇ ಬರಲಿ.

‘ಈ ಬಾರಿ ನಮ್ಮ ಕುಂಬಳ ಕಾಯಿಗಳನ್ನು ಮಾರಾಟ ಮಾಡುವುದಿಲ್ಲ’ ಎಂದು ಹೇಳಿದ. ಪೈಗಳು ಅಡಿ ಹಾಕಿದ ಮುಖವನ್ನು ಎತ್ತಲೇ ಇಲ್ಲ. ಆದಿಯೇ ಸಮಾಧಾನ ಪಡಿಸಬೇಕಾಯ್ತು. ಇರಲಿ ಬಿಡಿ ಪೈಗಳೇ... ಮಾರುಕಟ್ಟೆಯೇ ಕುಸಿದಾಗ ನೀವೇನು ತಾನೇ ಮಾಡಬಲ್ಲಿರಿ... ಚಿಂತೆ ಮಾಡಬೇಡಿ' ಎಂದು ಅವರಿಗೆ ಹೇಳಿ ಮನೆಗೆ ಬಂದವ ಆಳುಗಳನ್ನು ಕರೆದು ಆ ಕುಂಬಳ ಕಾಯಿಗಳನ್ನೆಲ್ಲ ಮನೆಗೆ ಸಾಗಿಸಿದ ಮತ್ತು ಕಂಬಳದ ಕೋಣಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಆಳನ್ನು ಕರೆದು ದಿನಾ ಎರಡೆರಡು ಕಾಯಿಗಳನ್ನು ಕತ್ತರಿಸಿ ಕೋಣಗಳಿಗೆ ಹಾಕು ಎಂದು ತಾಕೀತು ಮಾಡಿದ. ಆಗಲೇ ತಮ್ಮ ಬೆಳೆಗಳನ್ನು ಹೆಚ್ಚಿನ ದರದಲ್ಲಿ ಮಾರಿದ ನೂರಿನ್ನೂರು ಕಾಯಿಗಳನ್ನು ಬೆಳೆದ ಮಂದಿಯಾವುದೂ ಅತಿರೇಕಕ್ಕೆ ಹೋಗಬಾರದು ಎನ್ನುವುದು ಇದಕ್ಕೇ’ ಎಂದುಕೊಳ್ಳುತ್ತ ಒಳಗೊಳಗೇ ಖುಶಿ ಪಟ್ಟದ್ದಂತೂ ಹೌದು.

ಶಾಮಣ್ಣನವರು ಒಳಗೊಳಗೇ ಸಂಕಟಪಟ್ಟರೂ ಮಗನಿಗೆ ಬೈಯ್ಯಲಾರರು. ಕಂಬಳದ ಕೋಣ ಸಾಕುವ ಮೂಲಕ ತಮಗೆ ಗೌರವ ತಂದು ಕೊಟ್ಟದ್ದು ಒಂದಾದರೆ ‘ಮೀಸೆ ಬಲಿತು ಮದುವೆಗೆ ತಯಾರಾದ ಮಗನಿಗೆ ಇನ್ನೂ ನಿಮ್ಮ ಹಳೇ ಮಾತನ್ನೇ ಹೇಳುತ್ತ ಕುಳಿತರೆ ಮಗ ಖಾಯಂ ಆಗಿ ಕೈ ಬಿಟ್ಟು ಹೋಗುತ್ತಾನೆ’ ಎಂದು ಹೆಂಡತಿ ಹೆದರಿಸಿದ್ದು ಇನ್ನೊಂದು.

ಕಮಲಮ್ಮನಿಗ೦ತೂ ಕೆಲವು ದಿನಗಳ ಮಟ್ಟಿಗೆ ಒಂದು ತಲೆ ನೋವು ತಪ್ಪಿತ್ತು. ದಿನ ಬೆಳಗಾದರೆ ಇವತ್ತು ಏನು ಅಡಿಗೆ ಮಾಡಲಿ' ಎಂದು ಪೀಡಿಸುತ್ತಿದ್ದ ಅಡಿಗೆ ನೀಲಮ್ಮನಿಗೆ ನೇರವಾಗಿ ಕಂಬಳದ ಕೋಣಗಳನ್ನು ಕಟ್ಟಿದ್ದ ಹಟ್ಟಿಯ ಪಕ್ಕದ ದೊಡ್ಡ ಕೋಣೆಯಲ್ಲಿ ಮಾಡಿಗೆ ತಗಲುವವರೆಗೆ ಕೂಡಿಟ್ಟಿದ್ದ ಕುಂಬಳ ಕಾಯಿಯ ರಾಶಿಯನ್ನು ತೋರಿಸುತ್ತಿದ್ದರು. ಒಂದು ದಿನ ಕುಂಬಳ ಕಾಯಿಯ ಹುಳಿ, ಇನ್ನೊಂದು ದಿನ ಪಲ್ಯ, ಮತ್ತೊಂದು ದಿನ ಅದರದ್ದೇ ಪಳಿದ್ಯ, ಮಗದೊಂದು ದಿನ ಗೊಜ್ಜು ಹೀಗೆ ಕುಂಬಳ ಕಾಯಿಯದ್ದೇ ಪದಾರ್ಥಗಳು. ತಿಂದು ತಿಂದು ಬೇಜಾರಾಗಿ ಅನಂತನೇನೀಲಮ್ಮ ಇವತ್ತೇನು ಕುಂಬಳ ಕಾಯಿ ಸ್ಪೆಷಲ್’ ಎಂದು ಗೇಲಿ ಮಾಡಲು ಸುರು ಮಾಡಿದ್ದ. ಅಷ್ಟೇ ಅಲ್ಲ ಅಮ್ಮ ಈ ಕುಂಬಳಕಾಯಿ ಅಂದರೇ ವಾಂತಿ ಬರುವ ಹಾಗಾಗಿದೆ' ಎನ್ನತೊಡಗಿದ. ಹಿಂದಿನಿAದಈ ಅಣ್ಣ ಯಾಕಾದರೂ ಕುಂಬಳಕಾಯಿ ಬೆಳೆಸಲು ಮನಸ್ಸು ಮಾಡಿದನೋ’ ಎಂದು ಅಲವತ್ತುಕೊಳ್ಳಲೂ ಪ್ರಾರಂಭಿಸಿದ.

ಮು೦ದೆ ಕೆಲವು ದಿನಗಳ ವರೆಗೆ ಊರಿನ ಕೆಲ ಬಾಯಿ ತುರಿಸುತ್ತಿರುವ ಮಂದಿಗೂ ಆಡಿಕೊಳ್ಳಲು ಇದೊಂದು ಗ್ರಾಸವಾಗಿತ್ತು. ಆದಿಯ ಬಗ್ಗೆ ಅಭಿಮಾನವಿದೆ ಅವರಿಗೆಲ್ಲ. ಒಳ್ಳೆಯ ಹುಡುಗ. ಕರೆದಾಗ ತಾನು ದೊಡ್ಡ ಮನೆಯ ಹುಡುಗ ಎನ್ನುವ ಯಾವುದೇ ದೊಡ್ಡಸ್ತಿಕೆಯನ್ನೂ ತೋರದೆ ತಮ್ಮ ಸಹಾಯಕ್ಕೆ ಧಾವಿಸಿ ಬರುತ್ತಾನೆ ಎನ್ನುವುದನ್ನೂ ಎಲ್ಲರೂ ಒಪ್ಪುತ್ತಾರೆ. ಆದರೆ ಆಡಿಕೊಳ್ಳುವ ಸಂದರ್ಭ ಬಂದರೆ ಅವನನ್ನೂ ಬಿಡರು. ಹಾಗಾಗಿಯೇ ಅತಿ ನಿರೀಕ್ಷೆಯಿಂದ ಬೆಳೆಸಿದ ಕುಂಬಳ ಮಾರಾಟವಾಗದೇ ಇದ್ದಾಗ ಆದಿಯ ಬಗ್ಗೆಯೂ ಜನ ಆಡಿಕೊಂಡರು.

ಶಾಮಣ್ಣನವರ ಎರಡನೆಯ ಮಗ ಅನಂತ ಮೊದಲಿನಿಂದಲೂ ಹಾಗೆಯೇ. ಮನೆಯ ವಾತಾವರಣದಲ್ಲಿ ಬೆರೆತವನೇ ಅಲ್ಲ. ಚಿಕ್ಕವನಿದ್ದಾಗ ಅಣ್ಣನೊಂದಿಗೆ ಅಥವಾ ತಮ್ಮ ಮನೆಯಲ್ಲಿದ್ದಾಗ ಅವನೊಂದಿಗೆ ಉಟ ತಿಂಡಿಗೂ ಕುಳಿತವನಲ್ಲ. ಅಣ್ಣ ಹೀಯಾಳಿಸಿದ್ದಿತ್ತು ಬೆಕ್ಕಿನ ಬಿಡಾರ ಬೇರೆ ಎಂದು. ಅಷ್ಟು ದೊಡ್ಡ ಮನೆಯಿದ್ದೂ ಎಲ್ಲರ ಊಟ ಆ ಮನೆಗೆ ತಕ್ಕುದಾಗಿಯೇ ಇದ್ದ ದೊಡ್ಡ ಅಡಿಗೆ ಮನೆಯಲ್ಲೇ. ಅದೂ ನೆಲದ ಮೇಲೆ ಕುಳಿತೇ. ಅಪ್ಪ ಮಕ್ಕಳು ಸಾಲಾಗಿ ಊಟಕ್ಕೆ ಕೂರಬೇಕು. ಅಡಿಗೆಯವಳು ಬಡಿಸುವಾಗ ಅಮ್ಮ ಅವರನ್ನು ವಿಚಾರಿಸಿಕೊಳ್ಳುತ್ತ ತನ್ನ ಯಜಮಾನಿಕೆಯ ಗತ್ತನ್ನು ತೋರಿಸುತ್ತ ಅವರಿಗೆ ಒತ್ತಾಯ ಮಾಡಿ ಹಾಕಿಸಬೇಕು. ಅಪ್ಪ ಆದಿ ಮತ್ತು ಅಪರೂಪಕ್ಕೊಮ್ಮೆ ರಜೆಯಲ್ಲಿ ಬರುವ ಅಂತ್ಯ ಪಂಕ್ತಿಯಲ್ಲಿ ಕುಳಿತರೆ ಅನಂತ ಮಾತ್ರ ಬೇರೆಯೇ. ಕೇಳಿದರೆ ಆದಿ ಊಟ ಮಾಡುವಾಗ ಪಚ ಪಚ ಸದ್ದು ಮಾಡುತ್ತಾನೆ ಅಂತ್ಯ ಊಟ ಮಾಡುವಾಗ ಆಚೀಚೆ ಹಾರಿಸುತ್ತಾನೆ ಎನ್ನುವುದು ಅವನ ದೂರು. ಹಾಗಾಗಿ ಒಂದು ಮೂಲೆಯಲ್ಲಿ ಕುಳಿತು ಅಗುಳನ್ನೂ ಕೆಳಗೆ ಕೆಡವದೆ ಬೇಗ ಊಟ ಮಾಡಿಕೊಂಡು ಎದ್ದು ಬಿಡುತ್ತಿದ್ದ.

ಊಟದ ಸಮಯದಲ್ಲಿ ಬೇರೆಯೇನೂ ಗಲಾಟೆ ಮಾಡದೆ ಇದ್ದರೂ ಆತ ಒಂಟಿಯಾಗಿ ಬೆಳೆಯುವುದು ನೋಡಿ ಹೆತ್ತ ಕರುಳಿಗೆ ಸಂಕಟವಾಗುತ್ತಿತ್ತು. ತಾನೇನೂ ಒಂದೇ ಹೆತ್ತದ್ದಲ್ಲವಲ್ಲ. ಅವನಿಗಿಂತ ದೊಡ್ಡದು ಒಂದಿದೆ. ಚಿಕ್ಕದೂ ಇದೆ. ಯಾಕೆ ಅವನು ಒಂಕು೦ಟಿಯಾಗಿ ಬೆಳೆಯಬೇಕು ಎನ್ನುವುದೇ ಆಕೆಯ ಪ್ರಶ್ನೆ.

ಅದರೆ ಅದೆಲ್ಲ ಅನಂತನ ಚಿಂತೆಯಲ್ಲವಲ್ಲ. ಎಲಿಮೆಂಟರಿ ಶಾಲೆ ಮನೆಯ ಹತ್ತಿರವೇ. ಯಾವುದೇ ಸಮಸ್ಯೆ ಇಲ್ಲದೆ ಕಳೆದಿತ್ತು. ಆದಿ ಅನಂತ ಒಟ್ಟೊಟ್ಟಿಗೇ ಹೋಗುತ್ತ ಬರುತ್ತ ಇದ್ದರೂ ಮನೆ ಬಿಟ್ಟು ಹತ್ತು ಹೆಜ್ಜೆ ಹಾಕಿದರೆ ಶಾಲೆ. ತಿರುಗಿ ಅದೇ ಹತ್ತು ಹೆಜ್ಜೆಗೆ ಮನೆ ಆದ್ದರಿಂದ ದಾರಿಯ ಮೇಲೆ ಅಣ್ಣ ತಮ್ಮಂದಿರಿಗೆ ತಕರಾರು ಮಾಡಲೂ ಅವಕಾಶವಿರುತ್ತಿರಲಿಲ್ಲ. ಅದೇ ಹೈಸ್ಕೂಲಿಗೆ ಹೋಗಿ ಬರಲು ಪ್ರಾರಂಭವಾದ ಮೇಲೆಯೇ ಸಮಸ್ಯೆ ಬಂದದ್ದು. ಹಿರಿಯನಾದ ಆದಿ ಮೊದಲೇ ಎಲಿಮೆಂಟರಿ ಮುಗಿಸಿ ಎರಡು ಮೈಲು ದೂರದ ಹೈಸ್ಕೂಲಿಗೆ ಸೇರಿದವನನ್ನು ಅನಂತ ಎಲಿಮೆಂಟರಿ ಮುಗಿಸಿ ಸೇರಿಕೊಂಡಿದ್ದ. ಎಲಿಮೆಂಟರಿಯಾದರೆ ಸುತ್ತ ಮುತ್ತ ಹತ್ತಾರು ಮನೆಗಳ ಮಕ್ಕಳೇ ಬರುತ್ತಿದ್ದುದು. ಎಲ್ಲ ಗೊತ್ತಿದ್ದವರೇ.

ಶಾಮಣ್ಣನವರ ಮಕ್ಕಳೆಂದರೆ ಮೇಷ್ಟ್ರುಗಳನ್ನೂ ಸೇರಿ ಎಲ್ಲ ಗೌರವ ಕೊಡುವವರೇ. ಹೈಸ್ಕೂಲಿನಲ್ಲಿ ಹಾಗಿಲ್ಲ. ಶಾಮಣ್ಣನವರ ಹೆಸರು, ಅವರ ಶ್ರೀಮಂತಿಕೆ ಮೇಷ್ಟ್ರುಗಳಿಗೆ ತಿಳಿದಿದೆ. ಆದರೆ ಸುತ್ತ ಮುತ್ತಿನ ನಾಲ್ಕೆಂಟು ಮೈಲಿಗಳ ದೂರದ ಊರುಗಳಿಂದ ಬರುವ ಮಕ್ಕಳಿಗೆಲ್ಲ ತಿಳಿದಿರಬೇಕೆಂದಿಲ್ಲವಲ್ಲ. ಹೆಚ್ಚಿನ ಮಕ್ಕಳು ಶಾಮಣ್ಣನವರ ಶ್ರೀಮಂತಿಕೆ ಬಿಡಿ. ಅವರ ಹೆಸರೂ ಕೇಳಿರಲಿಕ್ಕಿಲ್ಲ. ಅಂತಹವರಿಗೆ ಈ ನರಪೇತಲನಂತಿದ್ದ ಅನಂತನನ್ನು ಕಂಡರೆ ಒಂದು ರೀತಿಯ ತಮಾಷೆ. ಆದಿಯಾದರೋ ಬಲಿಷ್ಠ. ದೇಹಧಾರ್ಢ್ಯವಿದ್ದಷ್ಟೇ ಬಲವಾದ ಸ್ವರವೂ ಇದ್ದವನು.

। ಇನ್ನು ನಾಳೆಗೆ ।

‍ಲೇಖಕರು Admin

21 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading