ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಿ ಪಿ ಉಪಾದ್ಯ ಸರಣಿ ಕಥೆ 22- ಅನಂತನ ಸುಳಿವೇ ಇರಲಿಲ್ಲ.

ಪಿ ಪಿ ಉಪಾದ್ಯ

22

ಮಕ್ಕಳೋ ಅರ್ಧ ದಿನ ತರಗತಿಗಳು ತಪ್ಪಿದುವಲ್ಲ ಎಂಬ ಆನಂದದಿಂದ ಊಟ ಮುಗಿಸಿದವರು ಗುಂಪು ಗುಂಪಾಗಿ ಸಭಾಗೃಹಕ್ಕೆ ತೆರಳಿದರು. ಆದಿ ಸಮಯಕ್ಕೆ ಸರಿಯಾಗಿ ಹಾಜರಾಗಿದ್ದ. ಮುಖ್ಯೋಪಾಧ್ಯಾರೂ ಸೇರಿದಂತೆ ಇಡೀ ಅಧ್ಯಾಪಕ ವರ್ಗದವರು ಅವನನ್ನು ಸ್ವಾಗತಿಸಿ ಸಭಾಗೃಹಕ್ಕೆ ಕರೆದೊಯ್ದರು.

ರಿವಾಜಿನಂತೆ ಪ್ರಾರ್ಥನೆ, ಸ್ವಾಗತದ ನಂತರ ಸಹಾಯಕ ಅಧ್ಯಾಪಕ ಪಡಿಯಾರರು ಅಂದಿನ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿ ಅನಂತನಿಗೆ ಸನ್ಮಾನ ಮಾಡುವುದರ ಮೂಲಕ ಶಾಲೆ ತನ್ನನ್ನು ತಾನೇ ಸನ್ಮಾನ ಮಾಡಿಕೊಂಡ ಹಾಗಾಗುತ್ತದೆ. ಅಂತಹ ಮೇಧಾವಿಯೊಬ್ಬ ತಮ್ಮ ನಡುವೆ ಇದ್ದುದು ಮತ್ತು ಅವನಿಂದಾಗಿ ಶಾಲೆಯ ಹೆಸರು ರಾಜ್ಯ ಮಟ್ಟದಲ್ಲೇನು ಒಂದು ದಿನ ರಾಷ್ಟ್ರ ಮಟ್ಟದಲ್ಲೂ ಕೇಳಿ ಬರಬಹುದು. ಅದು ಬೇರೆ  ಈ ಶಾಲೆಯ ಅನ್ನದಾತರೇ ಆದ ಶಾಮಣ್ಣನವರ ಮಗನಾಗಿಯೂ ಯಾವುದೇ ದೊಡ್ಡಸ್ತ್ತಿಕೆ ತೋರಿಸದೆ ತೀರಾ ಸಾಮಾನ್ಯನಂತೆ ವರ್ತಿಸುತ್ತಿರುವುದು ಅನಂತನಂತಹವರಿಗೆ ಮಾತ್ರ ಸಾಧ್ಯ ಎಂದು ಇನ್ನೂ ಏನೇನೋ ಹೇಳ ಹೊರಟರೆ ಮಧ್ಯದಲ್ಲಿಯೇ ಬಾಯಿ ಹಾಕಿದ ಮುಖ್ಯೋಪಾಧ್ಯಾಯರು ಅನಂತನ ಬಗ್ಗೆ ಹೇಳುತ್ತ ಹೋದರೆ ಇಡೀ ದಿನವೇ ಸಾಲದು ಅಂತಹ ಪ್ರತಿಭಾವಂತ, ವಿಧೇಯ. ಅಂತಹವನೊಬ್ಬ ತಮ್ಮ ವಿದ್ಯಾರ್ಥಿಯಾಗಿದ್ದುದು ತಮ್ಮೆಲ್ಲರ ಅದೃಷ್ಟ ಎಂದು ಹೇಳಿ ಅನಂತನನ್ನು ವೇದಿಕೆಗೆ ಕರೆಯುವಂತೆ ಹೇಳಿದರು.

ಪಡಿಯಾರರು ತನ್ನೆಲ್ಲ ಪ್ರೀತಿ ಮತ್ತು ಅಭಿಮಾನವನ್ನು ಸೇರಿಸಿ `ಈಗ ಶ್ರೀ ಅನಂತ ನಾರಾಯಣನನ್ನು ವೇದಿಕೆಗೆ ಬರಬೇಕೆಂದು ಕೇಳಿಕೊಳ್ಳುತ್ತೇನೆ’ ಎಂದು ಕರೆದಿದ್ದರು. ಒಂದು ಬಾರಿ. ಎರಡು ಬಾರಿ. ಕೋರ್ಟಿನಲ್ಲಿ ಕರೆಯುವಂತೆ ಮೂರನೇ ಬಾರಿ. ಆದರೆ ಮೂರನೇ ಬಾರಿ ಕರೆಯುವಾಗ ಅವರ ಸ್ವರದಲ್ಲಿ ಆತಂಕ ತುಂಬಿತ್ತು. ಅಷ್ಟು ಕರೆದರೂ ಸುಮಾರು ಸಾವಿರದಷ್ಟಿದ್ದ ವಿದ್ಯಾರ್ಥಿ ಸಮೂಹದಲ್ಲಿ ಚಟುವಟಿಕೆಯೇ ಕಂಡು ಬಂದಿರಲಿಲ್ಲ.

ಎಲ್ಲ ವಿದ್ಯಾರ್ಥಿಗಳು ತಮ್ಮ ತಮ್ಮಲ್ಲೇ ಮುಖ ನೋಡಿಕೊಳ್ಳುತ್ತಿದ್ದರೇ ವಿನಃ ಅನಂತನ ಸುಳಿವೇ ಇರಲಿಲ್ಲ. ಪಡಿಯಾರ ಮೇಷ್ಟ್ರು ಬೆವರು ಒರೆಸಿಕೊಳ್ಳ ಹತ್ತಿದ್ದರು. ತಾಳ್ಮೆ ಕಳೆದುಕೊಂಡ ಮುಖ್ಯೋಪಾಧ್ಯಾಯರು  ಕಿರುಚಿಯೇ ಬಿಟ್ಟಿದ್ದರು. ಏನು ಅನಂತನಿಗೆ ಹೇಳಿದ್ದಿರೋ ಇಲ್ಲವೋ' ಉಗುಳು ನುಂಗುತ್ತ ಪಡಿಯಾರ ಮೇಷ್ಟ್ರುಹೇಳಿದ್ದೆ ಸರ್. ಇವತ್ತು ಬೆಳಿಗ್ಗೆ ಪುನಃ ನೆನಪು ಕೂಡ ಮಾಡಿದ್ದೆ’ ಮುಖ್ಯ ಅತಿಥಿಯ ಎದುರಿಗೆ ಅವಮಾನ. ಹೆಡ್ ಮಾಷ್ಟರಿಗೆ ಬಂದ ಕೋಪದಲ್ಲಿ ಬೇರೆ ಯಾರೇ ಆಗಿದ್ದರೂ ಅಲ್ಲಿಯೇ ಬಲಿ ಹಾಕಿ ಬಿಡುತ್ತಿದ್ದರು.

ಇಲ್ಲಿ ಸನ್ಮಾನ ಮಾಡಿಸಿಕೊಳ್ಳುವವ ಅನಂತನಾರಾಯಣ. ಸನ್ಮಾನ ಮಾಡುವವ ಆದಿ. ಸಿಟ್ಟನ್ನು ನುಂಗಿಕೊಳ್ಳದೆ ಬೇರೆ ದಾರಿಯೇ ಇರಲಿಲ್ಲ. ಆದರೂ ಪಡಿಯಾರ ಮೇಷ್ಟ ಕಡೆಗೆ ಒಂದು ಕೆಟ್ಟ ದೃಷ್ಟಿಯನ್ನು ಹರಿಸಿಯೇ ಬಿಟ್ಟಿದ್ದರು. ಆದಿಯೇ ಅವರನ್ನು ಸುಮ್ಮನಿರಿಸಬೇಕಾಯ್ತು. ‘ಪಾಪ ಅನಂತನಿಗೆ ಏನೂ ತೊಂದರೆಯೋ..  ತಲೆನೋವೇನಾದರೂ ಸುರುವಾಗಿತ್ತೇನೋ… ಇರಲಿ ಬಿಡಿ’ ಎಂದವ ದೈನ್ಯತೆಯ ನೋಟ ಬೀರುತ್ತಿದ್ದ ಅವರನ್ನೆಲ್ಲ ಸಮಾಧಾನ ಪಡಿಸುವ ಸಲುವಾಗಿ ಏನೂ ನಡೆದೇ ಇಲ್ಲವೇನೋ ಎನ್ನುವಂತೆ ಮುಖ್ಯ ಅತಿಥಿಯ ಭಾಷಣ ಮಾಡಿದ.

ಹತ್ತಿಪ್ಪತ್ತು ನಿಮಿಷಗಳ ಕಾಲ ವಿದ್ಯಾರ್ಥಿಗಳಿಗೆ ಹೇಗಿರಬೇಕು ಭವಿಷ್ಯತ್ತಿನಲ್ಲಿ ಒಳ್ಳೆಯ ಪ್ರಜೆಗಳಾಗಿ ಬಾಳುವುದಕ್ಕೆ ಈಗಲೇ ಭದ್ರ ಬುನಾದಿ ಹಾಕಿಕೊಳ್ಳಬೇಕು ಎಂದೆಲ್ಲ ಹೇಳುತ್ತ ನನ್ನ ತಮ್ಮನೆಂದು ಹೇಳುತ್ತಾ ಇಲ್ಲ. ವಿದ್ಯಾರ್ಥಿಗಳೆಂದರೆ ಅನಂತನಂತಿರಬೇಕು' ಎಂದು ಹೇಳುತ್ತ ಮಾತನ್ನು ಮುಗಿಸಿದ. ಆದರೆ ಅವನಿಗೆ ಗೊತ್ತಿತ್ತು. ತಾನು ಬರುತ್ತೇನೆಂದಾದ್ದರಿಂದಲೇ ಅವ ತಪ್ಪಿಸಿಕೊಂಡದ್ದು ಎಂದು. ಕಾರ್ಯಕ್ರಮ ಮುಗಿದು ಹೊರ ಹೋಗುವಾಗ ಮಕ್ಕಳೆಲ್ಲ ಮಾತನಾಡಿಕೊಳ್ಳುತ್ತಿದ್ದುದು ಎಲ್ಲರಿಗೂ ಕೇಳಿಸಿತ್ತು.ಅಲ್ಲ ಮಧ್ಯಾಹ್ನದವರೆಗೆ ನಮ್ಮೊಂದಿಗೇ ಇದ್ದ ಅನಂತ ನಾವೆಲ್ಲ ಸಭಾಂಗಣದತ್ತ ಬರುತ್ತಿರುವಾಗ ಹಿಂದೆಯೇ ಉಳಿದವ ಮತ್ತೆ ಕಾಣ ಸಿಗಲೇ ಇಲ್ಲ. ಬಹುಶಃ ಮನೆಗೇ ಹೋಗಿರಬೇಕು’

ತಪ್ಪಾಯಿತು. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ' ಎಂದು ಅಂಗಲಾಚುತ್ತಿದ್ದ ಮುಖ್ಯೋಪಾಧ್ಯಾಯರು ಮತ್ತು ಇತರ ಅಧ್ಯಾಪಕರುಗಳಿಗೆ ಸಮಾಧಾನ ಹೇಳಿ ಮನೆಗೆ ಬಂದರೆ ಆಗಲೇ ಬಂದಿದ್ದ ಅನಂತ ತನ್ನ ಕೋಣೆಯಲ್ಲಿ ಏನೋ ಶಾಲೆಯ ಕೆಲಸ ಮಾಡುತ್ತ್ತ ಕುಳಿತಿದ್ದ.ಯಾಕೆ ಹೀಗೆ ಮಾಡಿದೆ’ ಎಂದು ಕೇಳಬೇಕೆಂದು ಕೊಂಡರೂ ಕೇಳದೆ ಅಮ್ಮ ಕೊಟ್ಟಿದ್ದ ಕಾಫಿ ಕುಡಿದಿದ್ದ. ನಡೆದದ್ದನ್ನು ಅಮ್ಮನೊಂದಿಗೂ ಹೇಳಲಿಲ್ಲ. ಆದರೆ ಅಮ್ಮನೇ ಆ ವಿಷಯ ಎತ್ತಿದಳು. `ಅಲ್ಲ ಆ ಮಾಣಿ ಹೀಗೇಕೆ ಮಾಡುತ್ತಿದ್ದಾನೆ. ಅವನೇ ಹೇಳಿದ. ಈ ಅಣ್ಣನ ಕೈಯ್ಯಲ್ಲಿ ಬಹುಮಾನ ಅದೂ ಇದೂ ತೆಗೆದುಕೊಳ್ಳುವುದು ಇಷ್ಟ ಇಲ್ಲ ನನಗೆ.

ಮುಂದೆಲ್ಲ ಶಾಲೆಯ ಕಾರ್ಯ ಕ್ರಮಕ್ಕೆ ಬರುವುದು ಬೇಡ ಎಂದು ನೀನೇ ಅವನಿಗೆ ಹೇಳಿಬಿಡು ಎಂದೂ ಹೇಳಿದ’ ಎಂದಿದ್ದಳು. ‘ಹಾಗಾದರೆ ತಾನು ಅಂದುಕೊಂಡದ್ದು ಸರಿಯೇ’ ಎನಿಸಿದ ಆದಿಗೆ ಶಾಲೆಯ ಮೇಷ್ಟ್ರುಗಳು ಅದರಲ್ಲೂ ಮುಖ್ಯೋಪಾಧ್ಯಾಯರು ತೀರಾ ನೊಂದ ದನಿಯಲ್ಲಿ ತನ್ನೊಡನೆ ಕ್ಷಮಾಪಣೆ ಕೇಳಿದ್ದು ನೆನಪಾಗಿ ಸಂಕಟವಾಯ್ತು.  

ತನ್ನನ್ನು ಅದೇಕೆ ದ್ವೇಷಿಸುತ್ತಿದ್ದಾನೆ ಇವ.. ಎಂದು ಆದಿಗೆ ಅರ್ಥವಾಗಿರಲಿಲ್ಲ. ಆದರೂ ಸುಮ್ಮನೇ ಇದ್ದ. ಮುಂದೆ ತಮ್ಮ ಆ ಶಾಲೆಯಲ್ಲಿರುವ ವರೆಗೂ ಅಲ್ಲಿನ ಕಾರ್ಯಕ್ರಮಕ್ಕೆ ಆಹ್ವಾನ ಬಂದರೆ ಒಪ್ಪಿಗೆ ಕೊಡುವ ಮೊದಲು ಉಪಾಯವಾಗಿ ಅನಂತನದೇನಾದರೂ ಪಾತ್ರವಿದೆಯೇ ಎನ್ನುವುದನ್ನು ತಿಳಿದುಕೊಳ್ಳುತ್ತಿದ್ದ. ಒಂದು ವೇಳೆ ಅವನಿದ್ದಾನೆಂದಾದರೆ ಏನಾದರೂ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದ.

|ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

24 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading