ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ನಾನು ಹಕ್ಕಲ್ಲ ಬರಿ ಪ್ರೀತಿ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಇಂದಿನಿಂದ ಅವರ ಹೊಸ ಕಾದಂಬರಿ ಅಂಕಣವಾಗಿ ಆರಂಭ. ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

12

ಮನೆಗೆ ಬರುವತನಕ ಏನಾಗಿರಬಹುದು ಎನ್ನುವ ಕುತೂಹಲ. ಮುದುಕಿಯ ಮಾತಿಂದ ಸಹಾ ತಡಬಡಾಯಿಸಿದ್ದರು ಎಂದರೆ ಆ ಮುದುಕಿ ಏನನ್ನು ಹೇಳಿರಬೇಕು. ಸಿಗರೇಟಿನ ಮೇಲೆ ಸಿಗರೇಟನ್ನು ಹಚ್ಚಿ ಎಳೆಯುತ್ತಿದ್ದರೆ ಬೂದಿ ಅವರ ಷರ್ಟಿನ ಮೇಲೆ ಬೀಳುತ್ತಿತ್ತು. ನನಗೆ ಅಕಸ್ಮಾತ್ ಕಿಡಿಯೊಂದು ಬಿದ್ದು ಬಿಟ್ಟರೆ ಎನ್ನುವ ಭಯವೂ ಆಗಿ ಆಷ್ ಟ್ರೇಯನ್ನು ಹುಡುಕಿ ತಂದು ಅವರ ಮುಂದೆ ಇಟ್ಟೆ. ಸಹಾ ನನ್ನ ಮುಖ ನೋಡಿದರು ದೀರ್ಘವಾಗಿ- ಮಗುವೊಂದು ಕಂಗಾಲಾಗಿ ತಾಯ ಕಡೆನೋಡುವಂತೆ. ಯಾಕೋ ಸಹಾರ ತಾಯಿ ಸಾಯುವಾಗ ಹೇಳಿದ್ದರೆಂದು ನನಗೆ ಹೇಳುತ್ತಿದ್ದ ಮಾತು ತಟ್ಟೆಂದು ನೆನಪಾಯಿತು. ಯಾಕೆ ನೆನಪಾಯಿತು? ಗೊತ್ತಿಲ್ಲ. ಸಾಯುತ್ತಾ ಮಲಗಿದ್ದವರಿಗೆ, ‘ನಾಳೆ ಮಗನ ಬೆನ್ನನ್ನು ಉಜ್ಜುವವರು ಯಾರು’ ಎನ್ನುವ ಚಿಂತೆ. ‘ನಾಳೆಯಿಂದ ನಿನ್ನ ಹೆಂಡ್ತಿ ಕೈಲಿ ಬೆನ್ನುಜ್ಜಿಸಿಕೋ ಮಗಾ’ ಎಂದಿದ್ದರ೦ತೆ. ಅದನ್ನು ಅವರು ತುಂಬಾ ಎಮೋಷನಲ್ ಆಗಿ ಹೇಳಿಕೊಳ್ಳುತ್ತಿದ್ದರು. ನಾನು ಸಹಾರ ಜೊತೆ ಬರುವ ಮೊದಲೇ ಅವರು ತೀರಿಕೊಂಡಿದ್ದರು. ನಾನು ನಕ್ಕಿದ್ದೆ, ನನ್ನ ಕಡೆಗೆ ತೀಕ್ಷ್ಣವಾಗಿ ನೋಡಿದ ಸಹಾ, ‘ಯಾಕೆ ನಗ್ತಾ ಇದೀರಿ’ ಎಂದಿದ್ದರು ಗಂಭೀರವಾಗಿ. ಅವರ ಪ್ರಶ್ನೆಯಲ್ಲಿ ನಾನೇನೋ ತಪ್ಪು ಮಾಡುತ್ತಿದ್ದೇನೆ ಎನ್ನುವ ಭಾವವಿತ್ತು.

‘ನಿಮ್ಮಮ್ಮ ಕೂಡಾ ಹೆಣ್ಣು ಮಕ್ಕಳು ಇರುವುದೇ ಗಂಡ೦ದಿರ ಬೆನ್ನು ತಿಕ್ಕಲಿಕ್ಕೆ ಅಂತ ನಿರ್ಧಾರ ಮಾಡಿದ್ದರಲ್ಲಾ ನೀವಾದರೂ ಹೇಳಬಾರದಿತ್ತಾ’ ಎಂದಿದ್ದೆ. ನನ್ನ ಮಾತಿಗೆ ಕೋಪ ಬರಲೂಬಹುದು ಎನ್ನಿಸಿದ್ದರಿಂದ ಯಾಕೆ ಬೇಕು ಎಂದು ತಿಳಿಯಾಗಿಸುವಂತೆ, ‘ಗಂಡಸರೇನೋ ಹೆಣ್ಣು ಮಕ್ಕಳ ಕೈಲಿ ಬೆನ್ನು ತಿಕ್ಕಿಸಿಕೊಳ್ಳುತ್ತಾರೆ ಹೆಣ್ಣು ಮಕ್ಕಳು ನಮ್ಮ ಬೆನ್ನನ್ನು ನಾವೇ ತಿಕ್ಕಿಕೊಳ್ಳಬೇಕಲ್ಲವಾ’ ಎಂದೆ. ಸಹಾ ಜಗತ್ತಿನ ತಪ್ಪೆಲ್ಲಾ ನನ್ನ ಮಾತಲ್ಲೆ ಇದೆ ಎನ್ನುವ ಹಾಗೆ ನನ್ನ ಕಡೆಗೆ ನೋಡಿ, ‘ಏನಿದು ಅಸಹ್ಯ?’ ಎಂದಿದ್ದರು. ಯಾವುದು ಅಸಹ್ಯ ಹೆಣ್ಣು ಬೆನ್ನು ತಿಕ್ಕಿಸಿಕೊಳ್ಳುವುದಾ? ಸಣ್ಣವಳಿದ್ದಾಗ ಸ್ನಾನಕ್ಕೆ ಇಳಿವ ಗಂಡಸರು ದಾರಿಯಲ್ಲಿ ಹೋಗುವ ಮುದುಕಿಯರನ್ನು, ಪುಟ್ಟ ಮಕ್ಕಳನ್ನು, ವಯಸ್ಸಾದವರಾದರೆ ಯುವತಿಯರನ್ನು ಬೆನ್ನುಜ್ಜುವಂತೆ ಬೇಡಿಕೊಳ್ಳುತ್ತಿದ್ದರು. ಮಾತಂಗಿಯ ಅಪ್ಪನಂತೂ ಬಿಸಿಲಿನ ಝಳದಲ್ಲೂ ಸುಡು ಸುಡುವ ನೀರನ್ನು ರಸ್ತೆ ಬದಿಯ ಕಲ್ಲಿನ ಮೇಲೆ ಇಟ್ಟು ಬರುವವರನ್ನು- ಬೆನ್ನು ತಿಕ್ಕಿಸಿಕೊಳ್ಳದಿದ್ದರೆ ಸ್ನಾನವೇ ಆಗಲಿಲ್ಲವೇನೋ ಎನ್ನುವಂತೆ- ಬೆನ್ನು ತಿಕ್ಕುವಂತೆ ಕೇಳುತ್ತಿದ್ದ ಚಿತ್ರ ಇನ್ನೂ ಕಣ್ಣಮುಂದಿದೆ. ಚಪ್ಪಟೆಯಾದ ಸ್ವಲ್ಪವೇ ಒರಚಾದ ಕಲ್ಲುಗಳನ್ನು ಮಕ್ಕಳಾದ ನಾವೇ ಆರಿಸಿತರುತ್ತಿದ್ದೆವು. `ನಿಂದೊಳ್ಳೆ ವರಾತಾ ಆಯ್ತು, ನಿನ್ನ ಎಂಡ್ರುನ ಕರ್ಯೋ, ನಿನ್ನ ಮಕ್ಕಳ್ನ ಕರ್ಯೋ’ ಎನ್ನುತ್ತಲೇ ಊರ ಹೆಣ್ಣುಮಕ್ಕಳು ಬೆನ್ನು ತಿಕ್ಕಿ ಹೋಗುತ್ತಿದ್ದರು. ಹಾಗೆ ತಿಕ್ಕಿಸಿಕೊಳ್ಳುವವರ ಮುಖದಲ್ಲಿ ಸುಖ ಕೆನೆಗಟ್ಟಿ ತೇಲುತ್ತಿತ್ತು. ಇಂಥಾದ್ದೆಲ್ಲಾ ನೆನಪಾದರೆ ಬಾಲ್ಯಕ್ಕೆ ಜಾರಿಬಿಡಬೇಕು ಎನ್ನಿಸುತ್ತದೆ. ಸಹ ಸಿಗರೇಟನ್ನು ಸುಡುತ್ತಲೇ ಇದ್ದರು.

ಗಂಡಸರೇ ಹೀಗೆ; ಅವರಿಗೆ ಬೇಕಿಲ್ಲದಿದ್ದರೂ ತುಂಬಾ ಬೇಗ ಅಭ್ಯಾಸಕ್ಕೆ ಬೀಳುತ್ತಾರೆ. ಬಿದ್ದವರು ಅಲ್ಲಿಂದ ಎದ್ದು ಬರುವುದಕ್ಕೆ ಕಷ್ಟಪಡುತ್ತಾರೆ. ‘ಒಂದೊ೦ದು ಅಭ್ಯಾಸವನ್ನು ಬಿಡಿಸಲಿಕ್ಕೆ ಒಂದೊ೦ದು ಡಿ ಅಡಿಕ್ಷನ್ ಸೆಂಟರ್ ತೆಗೆದರೆ ಮನುಷ್ಯರಿಗಿಂತ ಅವೇ ಜಾಸ್ತಿ ಆಗುತ್ತೆ ಎಂದು ಹಾಸ್ಯ ಮಾಡುತ್ತಿರುತ್ತೇನೆ. ಆದರೆ ಸಹಾ ಇವತ್ತು ಅಭ್ಯಾಸಕ್ಕೆ ಬಿದ್ದು ಸಿಗರೇಟು ಸೇದುತ್ತಿದ್ದಾರೆ ಎನ್ನಿಸಲಿಲ್ಲ. ಇದ್ಯಾಕೋ ಅತಿ ಆಯ್ತು ಎಂದು ಅವರ ಕೈಯ್ಯಿಂದ ಸಿಗರೇಟನ್ನು ಕಸಿದುಕೊಂಡೆ. ಸಹಾ ಸ್ವಲ್ಪ ಕೊಸರಾಡಿ ಬಿಟ್ಟುಕೊಟ್ಟರು. ಇಲ್ಲ ಅವರ ಆಳವನ್ನು ಏನೋ ಕಲಕಿದೆ, ಮುದುಕಿಯ ದುಃಖ ಅಥವಾ ಕಷ್ಟ ಹೀಗೆ ಏನೋ. ನಿಧಾನವಾಗಿ ಅವರ ಬಳಿ ಕುಳಿತು ಅತ್ಯಂತ ಕಕ್ಕುಲಾತಿಯಿಂದ ‘ಹಾ ಏನಾಯಿತು ಹೇಳಿ?’ ಎಂದೆ

ಸಹಾ ಒಮ್ಮೊಮ್ಮೆ ವಿಚಿತ್ರವಾಗಿ ತಮ್ಮನ್ನು ಪರೀಕ್ಷೆಗೆ ಒಡ್ಡಿಕೊಳ್ಳುತ್ತಾರೆ ಎಂದೆನಲ್ಲಾ ಅವರ ಮನಸ್ಸಿನಲ್ಲಿ ನಾನು ಎಲೆಕ್ಷನ್ನಿಗೆ ನಿಂತರೆ ಗೆಲ್ಲುತ್ತೇನಾ? ಎನ್ನುವ ಪ್ರಶ್ನೆ ಮೂಡಿದೆ. ತಮ್ಮ ಸುತ್ತಾ ಇರುವ ವಂದಿ ಮಗಧರನ್ನು ಕೇಳಿದರೆ ಸಿಗುವ ಉತ್ತರ ಏನೆಂದು ಗೊತ್ತಿತ್ತು. ಇನ್ನು ನನ್ನ ಕೇಳಲಿಕ್ಕೆ ಈಗೋ ಅಡ್ಡಬರುತ್ತೆ. ಹಾಗಾಗಿ ತಾನು ಯಾರೆಂದು ಗೊತ್ತೇ ಇರದ ಯಾರನ್ನಾದರೂ ಕೇಳುವ ತೀರ್ಮಾನಕ್ಕೆ ಬಂದು, ನನ್ನ ಜೊತೆ ಮಾರ್ಕೇಟಿಗೆ ಬಂದದ್ದು. ಯಾರನ್ನ ಕೇಳಿದ್ರೆ ಸರಿಯಾಗುತ್ತೆ ಎಂದು ಹುಡುಕುವಾಗ ಆ ಮುದುಕಿ ಕಂಡಿದ್ದಾಳೆ. ಹೂ ಕೊಳ್ಳುವ ನೆಪದಲ್ಲಿ ಅವಳನ್ನು ಮಾತಿಗೆಳೆದ ಸಹಾ ಈ ಸಲ ಎಲೆಕ್ಷನ್‌ನಲ್ಲಿ ಯಾರಿಗೆ ಓಟು ಹಾಕ್ತೀಯಾ? ಅದೂ ಇದೂ ಎಂದೆಲ್ಲ ಕೇಳಿದ್ರಂತೆ. ‘ಯಾರಿಗೆ ಹಾಕಿದ್ರೂ ಒಂದೇ. ನಮ್ಮ ಬದುಕುಗಳೇನು ಬದಲಾಗುತ್ತಾ ಸಾಮಿ ಹೂವು ಕೊಳ್ಳೋದು ತಪ್ಪಲ್ಲ ಕಟ್ಟೋದು ತಪ್ಪಲ್ಲ. ಬದುಕಿರೋ ತಂಕ ಗೇಮೆ ಮಾಡೋದು ತಪ್ಪಲ್ಲ’ ಎಂದು ಮುದುಕಿ ಲೋಕಾಭಿರಾಮವಾಗಿ ತನ್ನ ಅಳಲನ್ನು ತೋಡಿಕೊಂಡಳ೦ತೆ. ಸಹಾ ಅದನ್ನು ಗಂಭೀರವಾಗಿ ಭಾವಿಸಿ, ತಮ್ಮ ಬಗ್ಗೆ ಎಂದು ಹೇಳದೆ, ‘ವ್ಯವಸ್ಥೆ ಎಲ್ಲಾ ಹಾಳಾಗಿದೆ. ಅದನ್ನ ಸರಿ ಮಾಡಬೇಕು. ಸಹದೇವ ಎನ್ನುವ ಒಬ್ಬ ಕವಿ ಇದ್ದಾರಲ್ಲ ಅವರು ನಿಂತರೆ ಓಟು ಹಾಕಿದರೆ ಒಳ್ಳೆಯದಾದ್ದರೂ ಆಗಬಹುದೇನೋ?’ ಎಂದಿದ್ದಾರೆ. ಅದಕ್ಕೆ ಆ ಮುದುಕಿ, ‘ಅದ್ಯಾರು ನಾನು ಹೆಸ್ರನ್ನೇ ಕೇಳಿಲ್ವಲ್ಲಾ’ ಎಂದಿದ್ದಾಳೆ. `ಅವ್ರು ಒಬ್ಬ ದೊಡ್ಡ ರೈಟರ್, ಸಮಾಜಕ್ಕೆ ಬೇಕಾದ ಚಿಂತನೆ ಮಾಡ್ತಾರೆ, ಅಂಥಾವ್ರು ಬಂದ್ರೆ ದೇಶ ಉದ್ಧಾರ ಆಗುತ್ತೆ’ ಎಂದಿದ್ದಾರೆ. ‘ಸುಮ್ನೆ ಕೇಳ್ತೀನಿ ದೇಶ ಉದ್ದಾರ ಆಗಿ ನಮಗೇನಾಗ್ಬೇಕಾಗಿದೆ? ನಮ್ಮ ಕಷ್ಟಕ್ಕೆ ನಾಕು ಕಾಸು ಕೊಡೋನು, ತೊಂದ್ರೆ ಆದಾಗ ಏನಾರ ಅನುಕೂಲ ಮಾಡಿಕೊಡೋನು ನಮ್ಮ ಏರಿಯಾದಲ್ಲಿ ಎಂ ಎಲ್ ಎ ರಾಜಣ್ಣ. ಕಾಲಾಂತ್ರದಿ೦ದ ಅವನಿಗೆ ಮಾತ್ರ ನಾವು ಓಟು ಹಾಕ್ತಾ ಬಂದಿರೋದು. ಗೊತ್ತಿಲ್ದಿರೋ ದೇವ್ರಿಗಿಂತ ಗೊತ್ತಿರೋ ದೆವ್ವ ವಾಸಿ, ಗುದ್ದಾಡ್ಬಹ್ದು. ಇಷ್ಟು ವರ್ಷಗಳಿಂದ ಎಲೆಕ್ಷನ್‌ನಲ್ಲಿ ದುಡ್ಡುಕೊಡುತ್ತಾ ಬಂದಿದ್ದಾನೆ. ಈಗ ಹಾಕಲ್ಲಾಂದ್ರೆ ಯಾವ ದೇವರೂ ಮೆಚ್ಚಲ್ಲ ಅಲ್ವಾ? ನಿಯತ್ತು ಬೇಡ್ವಾ ಸ್ವಾಮೀ?’ ಎಂದಿದ್ದಾಳೆ. ‘ಅವ್ವಾ ಹಂಗೆಲ್ಲಾ ಹಣ ತಗೊಂಡ್ ಓಟ್ ಹಾಕ್ಬಾರ್ದು’ ಎಂದ ಸಹಾಗೆ, ‘ಅಲ್ಲ್ ಸಾಮಿ ಅವ್ರೇನು ಸುಮ್ನೆಕೊಟ್ತಾರ್ಯೆ? ನಮ್ಮ ಓಟಿಗೆ ಬೆಲೆ ಇದೆ ಅಂತ ಎಲ್ಲಾ ಏಳ್ತಾನೇ ಇದಾರಲ್ಲ? ಈ ವಯ್ಯಂಗೆ ಹಾಕಿದ್ರೆ ಇಷ್ಟಾದ್ರೂ ಸಿಗುತ್ತೆ. ಅದ್ಯಾರ್ನೋ ಏಳಿದ್ಯಲ್ಲ ಅವ್ನಿಗೆ ಓಟ್ ಹಾಕಿದ್ರೆ ಏನ್ ಸಿಗುತ್ತೆ ಏಳಪ್ಪ? ಇಷ್ಟಕ್ಕೂ ಈ ಸಹದೇವ ಯಾರು? ಯಾವತ್ತೂ ಬಂದು ನನ್ನ ಮಾತೇ ಆಡ್ಸಿಲ್ಲ. ಕಷ್ಟ ಕೇಳಿಲ್ಲ ಸುಖ ಕೇಳಿಲ್ಲ. ಬದುಕಿದ್ದೀಯಾ? ಸತ್ತಿದ್ದೀಯಾ? ಅಂತ ವಿಚಾರಿಸಿಲ್ಲ. ಏಕಾಏಕಿ ಓಟು ಬೇಕು ಅಂದ್ರೆ ಹೆಂಗಪ್ಪ ಹಾಕುವುದು? ರಾಜಕಾಣಿ ಆಗ್ಬೇಕ೦ದ್ರೆ ಜನರ ಮಧ್ಯೆ ಇರಬೇಕು. ನೀವು ಹೇಳಿದ್ರಲ್ಲ ಆಯಪ್ಪ ಏನಾದ್ರೂ ನಿಂತರೆ ಗ್ಯಾರೆಂಟಿ ಹತ್ತು ಓಟೂ ಹುಟ್ಟಲ್ಲ, ಠೇವಣ ಕಳ್ಕೊಂಡ್ ಬಿಡ್ತಾನೆ ಹೋಗ್ ಹೋಗು’ ಎಂದಿದ್ದಳ೦ತೆ.

ಸಹಾನ ಈ ಮಾತುಗಳನ್ನು ಕೇಳಿ ಬಿದ್ದು ಬಿದ್ದು ನಕ್ಕಿದ್ದೆ. ಅವರು ಅವತ್ತಿನಿಂದ ಸರಿಯಾಗಿ ಮೂರು ದಿನ ಊಟ ಕೂಡಾ ಮಾಡಲಿಲ್ಲ. ಹಾಗಾದರೆ ತಾನು ಯಾರಿಗೂ ಗೊತ್ತಿಲ್ಲವಾ? ಎನ್ನುವ ಕೊರಗು ಅವರನ್ನು ಆವರಿಸಿಬಿಟ್ಟಿತ್ತು. ನಾನು ತುಂಬಾ ಸಮಾಧಾನ ಮಾಡಿದ್ದೆ, ‘ಅಲ್ಲ ಗೊತ್ತಾಗೋಕ್ಕೆ ನಾವೇನು ಸಿನಿಮಾದವರಾ? ಸಹಾ ಪಾಪ್ಯುಲಾರಿಟಿಯೇ ಬೇರೆ, ಇನ್‌ಟಲೆಕ್ಚುಯಲ್ ಆಗಿರೋದೇ ಬೇರೆ. ನೀವು ಕಾಣ ಸಿಕೊಳ್ಳುವವರಲ್ಲ, ಸಂಗತಿಗಳನ್ನು ಕಾಣ ಸುವಂತೆ ಮಾಡುವವರು. ನಿಮ್ಮನ್ನು ಯಾರೋ ಗುರುತಿಸಲಿಲ್ಲ ಅಂತ ಯಾಕೆ ಕೊರಗ್ತೀರ?’ ಎಂದು ಸಮಾಧಾನ ಮಾಡಿದ್ದೆ. ಅವರಿಗೆ ಸಮಾಧಾನ ಆಗಿತ್ತು ಎಂದು ಹೇಳಲಾರೆ. ಮತ್ತೆ ನಾಲ್ಕಾರು ಜನರನ್ನು ಹೀಗೇ ಕೇಳಿದ್ದರು. ಎಲ್ಲರ ಅಭಿಪ್ರಾಯವೂ ಹೆಚ್ಚೂ ಕಡಿಮೆ ಒಂದೇ ಆಗಿತ್ತು. ಠೇವಣ ಕಳೆದುಕೊಳ್ಳುವುದು ಅನ್ನುವುದಕ್ಕಿಂತ ಈ ಮಾತುಗಳು ಅವರೊಳಗಿನ ಅಹಂ ಅನ್ನು ಒಡೆದು ಹಾಕಿತ್ತು. ಆಮೇಲೆ ಯಾರು ಎಷ್ಟೇ ಬಲವಂತ ಮಾಡಿದ್ರೂ ಅವರದ್ದು ಅಚಲವಾದ ನಿರ್ಧಾರವಾಗಿತ್ತು, ‘ನಾನು ಯಾವತ್ತೂ ಎಲೆಕ್ಷನ್ನಿಗೆ ನಿಲ್ಲೋದಿಲ್ಲ. ನಾನೇನಿದ್ದರೂ ಇನ್ನು ಕಿಂಗ್ ಮೇಕರ್ ಮಾತ್ರ’ ಎಂದು. ಮತ್ತು ಯಾವತ್ತೂ ಅದರಿಂದ ಅವರು ಹಿಂದೆ ಸರಿಯಲೂ ಇಲ್ಲ.

ಸಭೆಯಲ್ಲಿ ಇಂಥಾ ಕೆಲವು ಮಾತುಗಳು ಬಂದವು, ‘ಸರ್ ನಿಲ್ಲದಿದ್ದರೆ ಏನಂತೆ ಮೇಡಂ ನೀವು ನಿಲ್ಲಿ’ ಎಂದರು ಕೆಲವರು. ಸಹಾ ‘ಅವರೊಪ್ಪುವುದಾದ್ರೆ ನನಗೇನೂ ಅಭ್ಯಂತರ ಇಲ್ಲ ಎಂದಿದ್ದರು. ‘ನನಗೆ ಯಾವತ್ತು ರಾಜಕೀಯ ಒಪ್ಪಿತವಾಗಿರಲೇ ಇಲ್ಲ. ವ್ಯವಸ್ಥೆಯನ್ನು ಸರಿ ಪಡಿಸಲಿಕ್ಕೆ ಇರುವ ಜನ ನಾವು ಒಮ್ಮೆ ವ್ಯವಸ್ಥೆಯ ಒಳಗೆ ಪ್ರವೇಶಿಸಿಬಿಟ್ಟರೆ ಅದರ ಜೊತೆ ಹೊಂದಾಣ ಕೆ ಮಾತ್ರ ಸಾಧ್ಯವಾಗುವುದು. ನಾನು ರಾಜಕೀಯ ಪ್ರವೇಶಿಸಲಾರೆ, ಇಷ್ಟು ವರ್ಷಗಳ ಜೀವನದಲ್ಲಿ ಕಾಂಪ್ರಮೈಸ್ ಮಾಡಿಕೊಳ್ಳದೇ ಬದುಕಿದ್ದೇವೆ. ಆದ್ದರಿಂದ ಹೋರಾಟವೊಂದು ರಾಜಕೀಯಕ್ಕೆ ಇಳಿಯುವುದು ಬೇಕಿರಲಿಲ್ಲ’ ಎಂದೆ. ನಾನೇನು ಮಾತಾಡಿದೆ ಎನ್ನುವುದು ನನಗೆ ಸ್ಪಷ್ಟವಾಗಿ ಗೊತ್ತಿತ್ತು. ಆದರೆ ಸಭೆಯಲ್ಲಿ ಗುಜುಗುಜು ಶುರುವಾಗಿತ್ತು. ಸಹಾರ ಮುಖ ಕಳೆಗುಂದಿತ್ತು.

ರೂಮಿಗೆ ಬಂದ ತಕ್ಷಣ ನನ್ನ ಕೈಗಳನ್ನು ಹಿಡಿದು ಜೋರಾಗಿ ನೂಕಿಬಿಟ್ಟರು. ನಾನು ಹಾ ಎಂದು ಕೂಗುತ್ತಾ ಕೆಳಗೆ ಬಿದ್ದೆ. ಅವರ ಮುಖದಲ್ಲಿ ದೊಡ್ಡ ಅಸಹನೆ ಇಣುಕುತ್ತಿತ್ತು. ಹೀಗೆಲ್ಲ ಯಾಕೆ ಎಂದು ಕೇಳುವ ಮೊದಲೇ ಸಹಾ ತಮ್ಮ ಅಸಮಾಧಾನಕ್ಕೆ ಮಾತು ಕೊಡಲಿಕ್ಕೆ ಆರಂಭಿಸಿದ್ದರು. `ನನ್ನ ಅವಮಾನ ಮಾಡಬೇಕು ಅನ್ನುವುದೇ ನಿಮ್ಮ ಉದ್ದೇಶಾನಾ ಚೈತನ್ಯಾ? ಸುಮ್ಮನೆ ರಾಜಕೀಯ ನನಗೆ ಇಷ್ಟವಿಲ್ಲ ಎಂದುಬಿಟ್ಟಿದ್ದರೆ ಆಗ್ತಾ ಇತ್ತು. ನಿಮಗೆ ನನ್ನ ಬಗ್ಗೆ ವಿರೋಧ ತೋರಿಸದೇ ಇದ್ದರೆ ಆಗುವುದೇ ಇಲ್ಲವಾ?’ ಎಂದು ಹರಿ ಹಾಯ್ದರು. ‘ಅರೆ! ನಾನೇನು ಮಾತಾಡಿದೆ ಅಂತ ಹೀಗೆ ಬೈತಾ ಇದೀರಿ? ಅನ್ನಿಸಿದ್ದನ್ನು ನೇರವಾಗಿ ಹೇಳಬೇಕು ಅಂತ ನೀವೇ ತಾನೆ ನನಗೆ ಹೇಳಿದ್ದು’ ಎಂದೆ ಅಚ್ಚರಿಯಲ್ಲಿ. ಸಹಾ ಸಹನೆಯ ಕಟ್ಟೆ ಒಡೆದವರಂತೆ ಕೂಗತೊಡಗಿದರು. ‘ನಿಮಗೆ ವಯಸ್ಸಾಗುತ್ತ ಬಂತು, ಬುದ್ಧಿ ಬೆಳೆಯಲೇ ಇಲ್ಲ. ನಾನೊಂದು ರಾಜಕೀಯ ಪಾರ್ಟಿಯನ್ನು ಕಟ್ಟಿ ಬೆಳುಸ್ತಾ ಇದೀನಿ. ನೀವು ನೋಡಿದ್ರೆ ಅಂತಹ ವ್ಯವಸ್ಥೆಯೇ ತಪ್ಪು ಅಂತ ಮಾತಾಡ್ತಿದ್ದೀರ. ನಮ್ಮಿಬ್ಬರ ಮಧ್ಯೆಯೇ ಇಷ್ಟು ಭಿನ್ನಾಭಿಪ್ರಾಯ ಇದೆ ಎಂದರೆ ಬೇರೆಯವರಿಗೆ ಹೇಗೆ ನಂಬಿಕೆ ಬರುತ್ತೆ ಹೇಳಿ?’ ಎಂದರು. ನನಗೆ ನಿಜಕ್ಕೂ ಇದು ಆಘಾತಕಾರಿ. ‘ಅಂದರೆ ನೀವು ಹೇಳಿದ್ದನ್ನೆಲ್ಲಾ ನಾನು ಕೇಳಬೇಕಾ? ಒಂದು ಮನೆಯಲ್ಲಿದ್ದೀವಿ ಒಂದಾಗಿ ಬದುಕ್ತಾ ಇದೀವಿ ಅಂದಾಕ್ಷಣ ನಾನು ನಿಮ್ಮ ಹಕ್ಕಲ್ಲ. ಪ್ರೀತಿಯಾಗಿ ಸಿಗಬೇಕು ಅಂದರೆ ಖಂಡಿತಾ ತಪ್ಪಲ್ಲ. ಅದಷ್ಟು ಮಾತ್ರವೇ ನಮ್ಮ ಒಪ್ಪಂದ. ಯಾರು ಇಲ್ಲ ಅಂದರೂ ಹೇಳುವ ಅಧಿಕಾರ, ಹಕ್ಕು ಎರಡು ನನಗೂ ಇದೆ’ ಎಂದು ದೃಢವಾಗಿ. ಆಮೇಲೆ ನಡೆದದ್ದು ಯುದ್ಧವೇ. ಅದು ಹೆಣ್ಣಿಗೂ ಗಂಡಿಗೂ ಅನಾದಿ ಕಾಲದಿಂದಲೂ ನಡೆಯುತ್ತಿರುವ ಯುದ್ಧವೇ. ಅದಕ್ಕೆ ಖಂಡಿತಾ ವಿವರಣೆ ಬೇಕಿಲ್ಲ. ಸಹಾ ಮನುಷ್ಯ ಎನ್ನುವ ಗಡಿಗಳನ್ನು ದಾಟಿಬಿಟ್ಟಿದ್ದರು.

ಆಶಾ ಅಷ್ಟು ಹೊತ್ತಿಗೆ ನಾಲ್ಕಾರು ಸಲ ಫೋನ್ ಮಾಡಿದ್ದಳು. ಅವಳಿಗೆ ಅಜ್ಜಿ ತಾತನ ಜೊತೆ ಅದ್ಭುತವಾದ ಕ್ಷಣಗಳು ಸಿಕ್ಕಿದ್ದವು. ಆ ಖುಷಿಯಲ್ಲಿ ಅವಳು ಟೇಲುತ್ತಿದ್ದಳು. ಅವಳಿಗೆ ನಮ್ಮ ಜಗಳವನ್ನು ಹೇಳುವುದರಲ್ಲಿ ಅರ್ಥ ಇರಲಿಲ್ಲ. ‘ಬಂದೆ ಪುಟ್ಟ ಮೀಟಿಂಗ್ ಲೇಟಾಯ್ತು’ ಎಂದು ಸಮಜಾಯಿಷಿ ಹೇಳಿದೆ. ಜಗಳದ ನಡುವೆಯೂ, ‘ನಾನು ಅತ್ತೆ ಮಾವರನ್ನು ನೋಡಲಿಕ್ಕೆ ಹೋಗಬೇಕು, ಆಶಾ ಕಾಯ್ತಾ ಇದ್ದಾಳೆ’ ಎಂದೆ. ಇಷ್ಟೆಲ್ಲಾ ಆದ ಮೇಲೆ ಸಹಾಗೆ ಸತೀಶನ ತಂದೆ ತಾಯಿನ್ನು ನೋಡಲು ಹೋಗುವುದು ಇಷ್ಟ ಇತ್ತೋ ಇಲ್ಲವೋ ಗೊತ್ತಾಗಲಿಲ್ಲ. ಅದನ್ನೆಲ್ಲಾ ಅವರು ಹಾಗೆ ತೋರಿಸಿಕೊಳ್ಳುತ್ತಿರಲಿಲ್ಲ. ನನಗೆ ಬೇಸರವಾಗುತ್ತೆ ಅನ್ನುವುದಕ್ಕಿಂತ ಎಲ್ಲರಿಗೂ ತಾನು ಎಷ್ಟು ಉದಾತ್ತ ಅಂತ ತೋರಿಸಿಕೊಳ್ಳುವ ಇರಾದೆ ಇದ್ದ ಹಾಗಿತ್ತು ಅವರ ನಡತೆ. ಮಾತಾಡದೆ ಹೋಗಿ ಕಾರಲ್ಲಿ ಕುಳಿತರು.

ಮಾತುಗಳು ಅರ್ಥ ಕಳಕೊಂಡಿದ್ದವು, ಹಾಗಾಗಿ ಇಬ್ಬರೂ ಮಾತಾಡಲಿಲ್ಲ. ಕಾಡರಾಮನ ಹಳ್ಳಿಯ ಕಾಡಿನ ದಾರಿಗಳು ಡಾಂಬರಾಗಿದ್ದವು. ಸೈಕಲ್ಲಿನ ಚಕ್ರ ಕಲ್ಲಿನ ಮೇಲೆ ಏರಿ ನಾನೂ ಸತೀಶ ಇಬ್ಬರೂ ಬಿದ್ದ ಜಾಗ ಎಲ್ಲಿದೆ? ಎಂದು ಹುಡುಕಿದೆ, ಸಿಗಲಿಲ್ಲ. ಹೇಗೆ ಸಿಗುತ್ತೆ? ಕಾಲದ ಉರುಳಿನಲ್ಲಿ ಎಲ್ಲವೂ ಬದಲಾಗಿ ಬಿಟ್ಟಿದೆ. ಬರಿಯ ರಸ್ತೆ ಮಾತ್ರವಲ್ಲ ಅಕ್ಕಪಕ್ಕದಲ್ಲಿದ್ದ ಮರ ಗಿಡ -ಎಲ್ಲವೂ. ಕಾರು ಓಡುತ್ತಿರುವಾಗಲೇ ದೂರದಲ್ಲಿನ ಅ ದೊಡ್ಡ ಬಂಡೆ ಅಲುಗಾಡದೆ ನಿಂತಿತ್ತು. ಕಂಡಿದ್ದು, ‘ನಾನೂ ನೆನಪಾಗಲಿಲ್ಲವೇ ನಿನ್ನ ಮತ್ತು ಸತೀಶನ ಗುರುತಿಗೆ ನಾನಿಲ್ಲೇ ನಿಂತಿದ್ದೇನೆ’ ಎಂದ೦ತಾಗಿ, ‘ಒಂದು ನಿಮಿಷ ಗಾಡಿ ನಿಲ್ಲಿಸಿ’ ಎಂದು ಹೇಳಿದೆ ಇಲ್ಲ ಇಲ್ಲ ಹೆಚ್ಚೂ ಕಮ್ಮಿ ಕೂಗಿದ್ದೆ.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

25 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading