ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಎಚ್ಚರಿಕೆಯ ಆ ಹಾಡು…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಇಂದಿನಿಂದ ಅವರ ಹೊಸ ಕಾದಂಬರಿ ಅಂಕಣವಾಗಿ ಆರಂಭ. ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

10

ಅವತ್ತು ಸಹಾರ ಜೊತೆ ಬಂದುಬಿಟ್ಟೆನಲ್ಲಾ! ಅಂಥಾ ನಿರ್ಧಾರವನ್ನು ತೆಗೆದುಕೊಳ್ಳುವಾಗ ಪರಿಸ್ಥಿತಿ ಎಷ್ಟು ದಾರುಣವಾಗಿತ್ತು. ಕಣ್ಣ ಎದುರೇ ಸುಂದರ ಕನಸೊಂದು ಮಣ್ಣ ಪಾಲಾಗಿ ಕರಗಿ ಹೋಗುವಂತೆ ಸತೀಶನ ಸಾವು ನನ್ನ ಕಂಗೆಡಿಸಿ, ಸರಿ ತಪ್ಪುಗಳ ಲೆಕ್ಕವನ್ನೇ ಮರೆಸುವಂತೆ ಮಾಡಿಬಿಟ್ಟಿತ್ತು. ಕಣ್ಣು ಬಿಟ್ಟು ಜಗತ್ತನ್ನು ನೋಡುವ ಸಣ್ಣ ವಯಸ್ಸಿನಲ್ಲೇ ಗಂಡನನ್ನು ಕಳಕೊಂಡ ನೋವು ಒಂದು ಕಡೆಯಾದರೆ, ಕಂಕುಳ ಕಂದಮ್ಮ ಇನ್ನೊಂದು ಕಡೆ, ವಯಸ್ಸಾದ ಅತ್ತೆ ಮಾವರನ್ನು ನೋಡಿಕೊಳ್ಳುವ ಹೊಣೆಗಾರಿಕೆಯ ಜೊತೆ ಒಂಟಿಯಾಗಿದ್ದ ಅಮ್ಮನೂ ನನ್ನ ಹೆಗಲಿಗೆ. ನೋವು ಎಲ್ಲರಿಗೂ ಸಮಾನವೇ. ಮಗನನ್ನು ಕಳಕೊಂಡ ಅತ್ತೆ ಮಾವ ಸೋತು ಹೋಗಿದ್ದರು. ಬೆಳಗಾದರೆ ಸತೀಶ ಎಂದೆ ಏಳುತ್ತಿದ್ದ ಅತ್ತೆಗೆ ಎಂಥಾ ಶೂನ್ಯ ಕಾಡಿದ್ದಿರಬೇಕು? ಮಾವ ಮುಂಚಿಗಿ೦ತಲು ಹೆಚ್ಚು ಕುಡಿಯುವುದಕ್ಕೆ ಶುರು ಮಾಡಿದರು. ಅಮ್ಮನಿಗೆ ಈಚೆಗೆ ಕಣ್ಣು ಕಾಣದ ಕಾರಣ ನೋಡಿಕೊಳ್ಳಲು ಜೊತೆಗೆ ಯಾರೋ ಒಬ್ಬರು ಬೇಕೇ ಬೇಕು ಎನ್ನುವ ಕಾರಣಕ್ಕೆ ವರಸೆಯಲ್ಲಿ ಅಣ್ಣನಾಗಬೇಕಿರುವ ದೂರದ ಸಂಬ೦ಧಿಯೊಬ್ಬರಿಗೆ ಹಣ ಕೊಟ್ಟು ನೋಡಿಕೊಳ್ಳಲು ಹೇಳಿದ್ದೆ. ಅಮ್ಮನದ್ದು ಒಂದೇ ವರಾತ. ನನ್ನ ನೋಡಬೇಕು ಆಶಾನ್ನ ನೋಡಬೇಕು ಅಂತ. ಅವಳಿಗೆ ಅಂತ ಯಾರಿದ್ದಾರೆ? ಗಿರೀಶ ಕುಡುಕನಾಗಿಬಿಟ್ಟಿದ್ದ. ಅಜ್ಜಿ ಇರುವಷ್ಟು ದಿನ ಮನೆಗೆ ಬರುತ್ತಿದ್ದ ಅವಳೂ ಸತ್ತ ಮೇಲೆ ಮನೆಗೆ ಬರುವುದನ್ನೇ ಬಿಟ್ಟುಬಿಟ್ಟ. ಇನ್ನು ಹರೀಶ ಆಡು, ದನಗಳ ದಲ್ಲಾಳಿಯಾಗಿದ್ದ ಹರೀಶ ಮದುವೆಯಾಗಿ ಚಂದದ ಸಂಸಾರ ಮಾಡಿಕೊಂಡು ಪೇಟೆಯಲ್ಲಿ ಉಳಿದ. ಅವನ ಹೆಂಡತಿಗೆ ಹಳ್ಳಿ ಮನೆ, ಕೊಳಕು ಆಗಿಬರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಜವಾಬ್ದಾರಿ ತೆಗೆದುಕೊಳ್ಳುವುದು ಬೇಕಿರಲಿಲ್ಲ. ಇದೆಲ್ಲಾ ಸಹಜವೇ ತಾನೇ? ಅಕ್ಕನನ್ನು ಮರೆತ ಹಾಗೆ ಹರೀಶನನ್ನೂ ಮರೆಯಬೇಕಿತ್ತು. ಆದರೆ ಅಮ್ಮನಿಗೆ ಗಂಡುಮಕ್ಕಳ ಮೋಹ ಏನು ಮಾಡುವುದು ಕೊರಗಿದಳು. ಈಗ ಎಲ್ಲವೂ ಆಗಿ ಉಳಿದಿರುವುದು ನಾನು ಮಾತ್ರ. ಹಾಗೆಂದು ಅವಳು ಬಾ ಎಂದ ತಕ್ಷಣ ಹೋಗಲಿಕ್ಕಾಗುತ್ತದೆಯೇ. ನಾನು ಹೋಗದೆ ಇದ್ದರೆ ರಾಶಿ ಬೈಯ್ಯುತ್ತಾ ಕುಳಿತಿರುತ್ತಾಳೆ. ನನ್ನನ್ನು ನೋದಿದ ತಕ್ಷಣ ಅವಳ ಕೋಪ ಕರಗಿ ಹೋಗುತ್ತಿತ್ತು. ಬಂದ್ಯಾ ಕೂಸೆ ಎನ್ನುತ್ತಾ ತಬ್ಬಿಕೊಂಡು ಬಿಡುತ್ತಿದ್ದಳು. ಇಳಿವಯಸ್ಸಿನ ಸಂಕಟಗಳೇ ಅಂಥಾದ್ದು, ನಮ್ಮವರು ನಮ್ಮ ಹತ್ತಿರ ಇರಬೇಕು ಎನ್ನುವ ಬಯಕೆ ಗಾಢವಾಗುವುದು ಆಗಲೇ.

ಸತೀಶನನ್ನು ಕಳಕೊಂಡ ಆ ಕ್ಷಣವಂತೂ ನನ್ನ ಜೀವನದ ಅತ್ಯಂತ ಕಷ್ಟದ ದಿನಗಳು. ಕಳೆದುಕೊಂಡೆ ಎಂದು ಕೊರಗಲಿಕ್ಕೂ ಆಗದೆ ಹೋಯಿತಲ್ಲಾ ಅದೆಂಥಾ ಸ್ಠಿತಿ! ಎನ್ ಕೌಂಟರ್‌ ಹೆಸರಿನಲ್ಲಿ ಜೀವ ತೆತ್ತ ಸತೀಶನಿಗಿಲ್ಲದಿದ್ದ ಚಳುವಳಿಯ ನಂಟನ್ನು ಸರಕಾರಕ್ಕೆ ಮನವರಿಕೆ ಮಾಡಬೇಕಾಗಿತ್ತು. ಸ್ಟೇಷನ್‌ನಲ್ಲಿ ದಿನಗಟ್ಟಲೆ ಕಾಯುತ್ತಾ ಕೂರಬೇಕಿತ್ತು. ಊರನ್ನು ಬಿಟ್ಟು ಹೋಗುವ ಹಾಗಿರಲಿಲ್ಲ. ಕಾಡುರಾಮನ ಹಳ್ಳಿ ಬದಲಾಗಿ ಈಗ ಊರಾಗಿದೆ. ಆದರೆ ಅವತ್ತು ಸಂಜೆ ಆಯಿತೆಂದರೆ ಆ ದಾರಿಗಳಲ್ಲಿ ಓಡಾಡುವುದು ಅತ್ಯಂತ ಅಪಾಯಕಾರಿ ಎನ್ನುವಂತಿತ್ತು. ಅದನ್ನು ಪೊಲೀಸರಿಗೆ ಮನವರಿಕೆ ಮಾಡಲಿಕ್ಕೆ ನೋಡುತ್ತಿದ್ದೆ. ಅವರು, ‘ಸಾಹೇಬ್ರು ಬರ್ಲಿ ಕುತ್ಕೊಳಮ್ಮಾ’ ಎಂದು ಗದರುತ್ತಿದ್ದರು. ಒಮ್ಮೊಮ್ಮೆ ರಾತ್ರಿಯೂ ಆಗಿಬಿಡುತ್ತಿತ್ತು. ಪರಿಚಿತರ ಮನೆಗಳಿಗೆ ಎಡತಾಕಬೇಕಾಗುತ್ತಿತ್ತು. ಹಾಗೆ ಹೋದರೂ ಅವರು ಮನೆ ಸೇರಿಸುತ್ತಿರಲಿಲ್ಲ. ಸುಮ್ಮನೆ ನಮಗ್ಯಾಕೆ ಇಲ್ಲದ ಸಂಕಷ್ಟ ಎಂದು.

ಪೊಲೀಸರ ಎನ್ ಕ್ವಾಯರಿಯಿಂದ ನಾನು ಹೈರಾಣಾಗಿದ್ದೆ. ಎಲ್ಲರಿಗೂ ತಾವು ತಾವು ಅಂದುಕೊ೦ಡ ಸತ್ಯವನ್ನು ಪ್ರೂವ್ ಮಾಡುವ ಹುಚ್ಚು. ಪುಟ್ಟ ಕಂದನನ್ನು ಬಗಲಲ್ಲಿ ಎತ್ತಿಕೊಂಡ ನನಗೆ ಅದಕ್ಕೆ ಹಾಲನ್ನೂಡಿಸಲಾದರೂ ತಿನ್ನಲೇಬೇಕಾದ ಅನಿವಾರ್ಯತೆ. ಯಾವ ಸಂಕಟವನ್ನು ಹೇಗೆ ತಡೆದುಕೊಳ್ಳುವುದು. ಪಾಪ ಎಂದು ಯಾರಾದರೂ ತಿನ್ನಲು ತಂದುಕೊಟ್ಟರೆ ಉಂಟು ಇಲ್ಲದಿದ್ದರೆ ಅದೂ ಇಲ್ಲ. ಕೈಲಿ ಹಣ ಇಲ್ಲ, ಹೇಳಿಕೊಳ್ಳಲಿಕ್ಕೆ ಜನ ಇಲ್ಲ. ಆಗ ಸಹಾ ಇಲ್ಲದೆ ಹೋಗಿದ್ದರೆ ನಾನು ಬದುಕುವುದು ಖಂಡಿತಾ ದುಸ್ತರವಾಗುತ್ತಿತ್ತು. ಇದ್ದ ಬದ್ದ ಎಲ್ಲ ತೊಡಕುಗಳನ್ನು ತನ್ನ ಪೊಲಿಟಿಕಲ್ ಪವರ್ ಬಳಸಿ, ಮಂತ್ರಿಗಳಿಗೆ ಹೇಳಿಸುವುದರ ಮೂಲಕ ಪರಿಹರಿಸಿ ನನಗೊಂದು ದೀರ್ಘ ಶ್ವಾಸ ತೆಗೆದುಕೊಳ್ಳುವಂತೆ ಮಾಡಿದ್ದರು. ಆಗ ಅವರ ಬಗ್ಗೆ ಎಂಥಾ ಕೃತಜ್ಞತೆ ಇತ್ತು!

ಸಹದೇವ ಮೊದಲು ಈ ಹೆಸರನ್ನು ಸತೀಶನಿಂದ ಕೇಳಿದಾಗ ಯಾವುದೋ ಮಂತ್ರದ ತುಣುಕನ್ನು ಕೇಳಿದೆ ಎನ್ನುವ ಆನಂದ ನನ್ನ ಮೈಯ ನರನಾಡಿಗಳಲ್ಲಿ ಹರಿದಾಡಿತ್ತು. ಅವರನ್ನು ನೋಡುವ ಉತ್ಸಾಹದಲ್ಲಿ ರಾತ್ರಿಯಿಡೀ ನಿದ್ದೆ ಮಾಡಲು ಸಾಧ್ಯವಾಗದೇ ಹೋಗಿತ್ತು. ನನ್ನ ಈ ಉತ್ಸಾಹವನ್ನು ಗಮನಿಸಿದ್ದ ಸತೀಶ ನನ್ನ ಛೇಡಿಸಿದ್ದ, ‘ಅವರು ಹಾಡಲಿಕ್ಕೆ ನನ್ನ ಜೊತೆ ಬಾ ಎಂದು ನಿನ್ನ ಕರೆದರೆ ಎಲ್ಲವನ್ನೂ- ನನ್ನನ್ನೂ ಬಿಟ್ಟು ಹೊರಟೇಬಿಡುತ್ತೀಯ ಅನ್ನಿಸುತ್ತಿದೆ’ ಎಂದು. ನಾನು ಮುಖ ಉಬ್ಬಿಸಿ ಹೇಳಿದ್ದೆ, ‘ನೀನಾದರೆ ಹೋಗಬಹುದು ನಾನು ಮಾತ್ರ ಯಾಕೆ ಅಲ್ಲ’ ಎಂದು. ‘ಹೋಗು ಮಾರಾಯ್ತಿ, ಆದ್ರೆ ಈ ಬಡಪಾಯಿಯನ್ನು ಮರೆಯಬೇಡ’ ಎಂದಿದ್ದ. ಆಗ ಗಂಡ ಹೆಂಡತಿ ಸಂಬ೦ಧ ಗಟ್ಟಿಗೊಂಡಿರಲಿಲ್ಲ. ಇನ್ನೂ ದೇಹಗಳನ್ನು ಅರ್ಥ ಮಾಡಿಕೊಳ್ಳುವ ತಹತಹ ಆರಿರಲೇ ಇಲ್ಲ. ಬರೀ ಹುಡುಗಾಟದ ದಿನಗಳೇ ಅವು. ಅವನ ಆ ಮಾತುಗಳನ್ನು ನೆನೆಪಾದಾಗಲೆಲ್ಲಾ, ‘ಸತೀಶ ನಿನ್ನ ಮರೆತು ಇವರ ಜೊತೆಯೇ ಇದ್ದು ಬಿಟ್ಟಿದ್ದೇನೆ ನೋಡು’ ಎಂದು ಬಿಕ್ಕಬೇಕೆನ್ನಿಸುತ್ತದೆ.

ಸಂಪ್ರದಾಯದ ಹಾಡುಗಳನ್ನು ನಾನು ಚೆನ್ನಾಗಿ ಹಾಡುತ್ತೇನೆ ಎಂದು ನಮ್ಮ ಊರನ್ನೂ ಬಿಟ್ಟು ಬೇರೆ ಕಡೆಗೆ ಹಬ್ಬತೊಡಗಿತ್ತು. ಅಪ್ಪ ಮನೆ ಬಿಟ್ಟು ಹೊರಟು ಹೋದಂದಿನಿ೦ದ ಶಾಲೆಯ ನಂಟನ್ನು ಕಳೆದುಕೊಂಡೆ. ಮೇಷ್ಟುç ಮನೆಯ ವರೆಗೂ ಬಂದು ತುಂಬಾ ಚುರುಕಾದ ಹುಡುಗಿ ಶಾಲೆಗೆ ಕಳಿಸಿ ಎಂದರೆ ಅಜ್ಜಿ ಹೇಳಿದ ಕರುಣಾಜನಕ ಕಥೆಗೆ ಮೇಷ್ಟ್ರು ಕಣ್ಣಿರು ಹಾಕಿಬಿಟ್ಟಿದ್ದರು. ದುರ್ಭರವಾಗುತ್ತಿದ್ದ ಮನೆಯ ಪರಿಸ್ಥಿತಿಯಿಂದ ನನಗೆ ದುಡಿಯುವುದು ಮುಖ್ಯವಾಗಿತ್ತು. ಹಾಡಲು ಕರೆದ ಕಡೆಯೆಲ್ಲಾ ನನ್ನ ವಯಸ್ಸಿಗೆ ಮೀರಿ ಸೀರೆಯುಟ್ಟೇ ಹೋಗುವುದನ್ನು ಅಭ್ಯಾಸ ಮಾಡಿಕೊಂಡುಬಿಟ್ಟಿದ್ದೆ- ಚಿಕ್ಕ ಹುಡುಗಿ ಏನು ಹಾಡ್ತಾಳೆ ಎನ್ನುವ ಅಸಡ್ಡೆ ನೋಡಿದವರಿಗೆ ಬರಬಾರದಲ್ಲ ಅದಕ್ಕೆ. ಜೀವನ ನಡೆಸಲು ನನ್ನ ಕಂಠ ನನಗೆ ದೊಡ್ಡ ದಾರಿಯನ್ನು ಮಾಡಿಕೊಟ್ಟಿತ್ತು. ಅಮ್ಮ ಜೀವನದ ಬೇಗುದಿಯಲ್ಲಿ ಬಿದ್ದು ಹೆಚ್ಚು ವಯಸ್ಸಾದವಳಂತೆ ಕಾಣುತ್ತಿದ್ದಳು. ಅಜ್ಜಿಯ ಇಚ್ಚಾಶಕ್ತಿ ಈಗಲೂ ನನಗೆ ನಿಗೂಢವೇ. ಗಂಡನನ್ನು ಕಳಕೊಂಡಳು, ಇದ್ದೊಬ್ಬ ಮಗ ಎಲ್ಲಿ ಹೋದ ಗೊತ್ತಿಲ್ಲ. ಮೊಮ್ಮಕ್ಕಳ ಸ್ಥಿತಿ ಹೀಗೆ. ಆದರೂ ಒಮ್ಮೆಯೂ ಸಾಯುವ ಯೋಚನೆ ಮಾಡಲಿಲ್ಲ. ಈ ನಡುವೆ ಸಾಲ ತೀರಿಸಲಿಕ್ಕಾಗದೆ ನಮ್ಮ ಮನೆಯನ್ನು ಗೌಡರ ಕಡೆಯವರು ಆಡು ಕುರಿಗಳ ಸಮೇತ ತಮ್ಮ ವಶಕ್ಕೆ ತೆಗೆದುಕೊಂಡರು. ಇರಲಿಕ್ಕೆ ಮನೆ ಬೇಕು, ಮಾತಂಗಿಯ ಮನೆಯ ಪಕ್ಕಕ್ಕೆ ಬಿದ್ದ ಮನೆಯ ಮೋಟು ಗೋಡೆಯನ್ನು ಸ್ವಲ್ಪವ್ವೇ ಏರಿಸಿ, ಸೋಗೆ ಮಾಡು ಹಾಕಿಕೊಂಡು ಇರಲು ಜಾಗ ಮಾಡಿಕೊಂಡೆವು. ಆದರೆ ಬದುಕುವುದಕ್ಕೆ ಮಾಡಿಕೊಂಡ ಸಾಲ ಮಾತ್ರ ಬಡ್ಡಿ, ಚಕ್ರಬಡ್ಡಿಯ ಸಮೇತ ನಮ್ಮ ಮೇಲೆ ಇತ್ತು. ಆದರೂ ಅನಿವಾರ್ಯ, ಬದುಕು ನಡೆಸಲೇಬೇಕಿರುವ ತುರ್ತು. ಒಂದು ದಿನ ಹೀಗೇ ಯಾವುದೋ ಕಾರಣಕ್ಕೆ ಅಮ್ಮನಿಗೆ ಹೇಳದೆ ಹೋಗಿದ್ದಕ್ಕೆ, ‘ನಮ್ಮ ರಾಜ್ಯನ್ನ ನೋಡಿದ್ರಾ?’ ಊರೆಲ್ಲಾ ಹುಡುಕಿದ್ದಳಂತೆ. ನಾನು ಕಾಣಕಾಣುತ್ತಲೇ ಅಲ್ಲೆ ಇದ್ದ ಬಡಿಗೆಯಿಂದ ನನ್ನ ಹೊಡೆಯಲಾರಂಭಿಸಿದಳು. ಅಜ್ಜಿ ತಡೆಯುತ್ತಾ, ‘ಅವಳ ಅನ್ನ ಅವಳು ದುಡಕೊಂಡು ನಮ್ಮನ್ನೂ ಸಾಕುತ್ತಿದ್ದಾಳೆ. ಹೊಡೀಲಿಕ್ಕೆ ನಿನಗೆ ಹೇಗೆ ಮನಸ್ಸು ಬಂತು’ ಎಂದು ಕೈಲಿದ್ದ ಬಡಿಗೆಯನ್ನು ಕಸಿದುಕೊಂಡಿದ್ದಳು. ಊರವರೇ ‘ತಾಯೀ ಮಗಳನ್ನು ಹೀಗೆ ಹೊಡೆಯೋದಾ? ಪಾಪ ಇವತ್ತೊ ನಾಳೆಯೋ ದೊಡ್ಡವಳಾಗುವ ಹುಡುಗಿ, ಬುದ್ಧಿ ಬೇಡವಾ?’ ಎಂದು ಬೈದಾಗ, ‘ಕೈಲಾಗದವಳಿಗೆ ಎಲ್ಲಾ ಬುದ್ದಿ ಹೇಳುವುದು’ ಎಂದು ಗೊಣಗುತ್ತಾ ಮನೆಯ ಒಳಗೆ ನಡೆದಿದ್ದಳು. ಅಮ್ಮನ ಪ್ರತಿ ಹೆಜ್ಜೆಯೂ ಭಾರವಾದ ಹಾಗೆ ಕಾಣುತ್ತಿತ್ತು. ಯಾವ ತಾಕಲಾಟಕ್ಕೆ ಅಮ್ಮ ಸಿಕ್ಕಳು? ನಾನು ಕಾಣದೇ ಹೋಗಿದ್ದಕ್ಕೆ ಗಾಬರಿಯಾದಳಾ? ಇಲ್ಲ ತನಗೆ ಹೇಳದೆ ಹೋಗಿದ್ದಕ್ಕಾ? ಇದೆಲ್ಲಕ್ಕಿಂತ ನನ್ನ ಕಾಡಿಸಿದ್ದು ನಾನು ದೊಡ್ಡವಳಾಗಿಲ್ಲ ಅಂತ ಊರ ಜನ ತಿಳಿದಿದ್ದು. ಈ ಸುಳ್ಳುಗಳಿಗೆ ಯಾವಾಗ ರೆಕ್ಕೆ ಬರುತ್ತದೋ ಎತ್ತ ಕಡೆಗೆ ಹೇಗೆ ಹಾರುತ್ತದೋ ಯಾರು ಬಲ್ಲರು?

ಸತೀಶನನ್ನು ಮೊದಲು ನೋಡಿದ್ದು ಈ ದಿನಗಳಲ್ಲೇ. ನಾನು ಆಡು ಮೇಯಿಸುತ್ತಾ ನನ್ನ ಪಾಡಿಗೆ ನಾನು ಹಾಡುತ್ತಿದ್ದಾಗ. ಅವತ್ತು ಮನಸ್ಸು ನಿರಾಳವಾಗಿತ್ತು. ಕಂಠಕ್ಕೆ ಎಂಥದ್ದೋ ಹುಮ್ಮಸ್ಸು. ಎಲ್ಲೋ ಹಕ್ಕಿಯೊಂದು ಹಾಡಿತು ಅದರೊಂದಿಗೆ ನಾನೂ ಹಾಡಿದೆ. ನನ್ನ ಹಾಡಿನ ಹುಕಿಗೆ ರಾಗ ಬಂಡೆಗಳಿಗೆ ತಾಕಿ ಪ್ರತಿಧ್ವನಿಸಿತ್ತು. ಹರಿವ ನೀರು, ಬೀಸುವ ಗಾಳಿ ಎಲ್ಲವೂ ನನ್ನ ಹಾಡಿಗೆ ಸಾಥ್ ನೀಡಿತ್ತು. ಅವತ್ತು ಏನು ಹಾಡಿದೆ ಗೊತ್ತಿಲ್ಲ. ಆದರೆ ಹಾಡಿದ್ದು ಮಾತ್ರ ನನ್ನ ಎದೆಯಲ್ಲಿ ಹರಿದ ಸಂತೋಷವನ್ನು ಎನ್ನುವುದನ್ನು ಮಾತ್ರ ಬಲ್ಲೆ. ಹಾಡನ್ನು ನಿಲ್ಲಿಸುವಾಗ ಭಾವಪರವಶಳಾಗಿದ್ದೆ. ನನ್ನ ಕಣ್ಣುಗಳಲ್ಲಿ ನೀರು ಸುರಿಯುತ್ತಿತ್ತು. ಚಪ್ಪಾಳೆಯ ಶಬ್ದಕೇಳಿಸಿತು. ನೋಡಿದರೆ ಯಾರೋ ಅಪರಿಚಿತ ವ್ಯಕ್ತಿ. ಇನ್ನೂ ಗಾಢವಾಗಿ ಮೂಡಬೇಕಿದ್ದ ಗಡ್ಡಮೀಸೆ, ತೋರವಾದ ದೇಹ, ಹೆಗಲಲ್ಲಿ ಒಂದು ಚೀಲ, ಕಣ್ಣುಗಳಲ್ಲಿ ಯಾವುದೋ ಅಚಂಚಲಿತ ಸಂಕಲ್ಪ. ಥಟ್ಟನೆ ನಾಚಿದೆ. ‘ಎಂಥಾ ರೇಂಜ್ ಇದೇರಿ ನಿಮ್ಮ ಕಂಠಕ್ಕೆ, ಎಲ್ಲಿ ಇನ್ನೊಂದು ಹಾಡನ್ನು ಹಾಡಿ, ಕೇಳಿಕೊಂಡು ಹೋಗಿ ಬಿಡುತ್ತೇನೆ’ ಎಂದು ಉದ್ಗರಿಸಿದ್ದ. ನಾನು ಉತ್ತರಿಸದೇ ಓಡಿ ಹೋಗಿದ್ದೆ- ‘ರೀ ನಿಮ್ಮ ಹೆಸರೇನು?’ ಎಂದಿದ್ದು ಕೇಳಲಿಲ್ಲ ಎನ್ನುವಂತೆ. ನಂತರ ಸುಮಾರು ದಿನಗಳು ಅವನು ನನಗೆ ಎದುರಾಗಲೂ ಇಲ್ಲ.

ಭೂಮಿ ಇಲ್ಲದವರಿಗೆ ಭೂಮಿ, ಮನೆಯಿಲ್ಲದವರಿಗೆ ಮನೆ ಕೊಡುಸ್ತಾರಂತೆ ಅಂಥಾ ಜನ ಊರಿಗೆ ಬಂದಿದ್ದಾರೆ ಎನ್ನುವ ಸಂಗತಿ ಕೇಳಿದಾಗ ಪ್ರತಿಯೊಬ್ಬರ ಮನಸ್ಸಿನಲ್ಲೂ ತಮ್ಮ ಜೀವನ ಉದ್ಧಾರ ಆಗುವ ಏನೇನೋ ಕನಸುಗಳು. ಸಂಪ್ರದಾಯದ ಸೋಬಾನೆಯ ಹಾಡುಗಳನ್ನು ಹಾಡುತ್ತಿದ್ದ ನನ್ನನ್ನು ಹೋರಾಟದ ಹಾಡುಗಳನ್ನು ಹಾಡಲಿಕ್ಕೆ ಕರೆದದ್ದು ಕಾಕತಾಳೀಯವೇ. ಸಭೆಯೊಂದರಲ್ಲಿ ಕೋರಸ್ ಹಾಡುವ ಹಾಡುಗಾರರಿಗೆ ತೊಂದರೆ ಆಗಿ ಬರದ ಕಾರಣ ಏನು ಮಾಡುವುದು ಎನ್ನುವ ಆತಂಕಕ್ಕೆ ಒಳಗಾಗಿದ್ದ ಕಾರ್ಯಕ್ರಮದ ಆಯೋಜಕರಿಗೆ, ನಮ್ಮೂರಿನವರು ‘ಹೀಗೊಬ್ಬ ಹುಡುಗಿ ಇದ್ದಾಳೆ. ಸಂಪ್ರದಾಯದ ಹಾಡುಗಳನ್ನ ತುಂಬಾ ಚೆನ್ನಾಗಿ ಹಾಡ್ತಾಳೆ. ಕರೀಬಹುದಾ ನೋಡಿ, ಇವತ್ತಿಗೆ ಮ್ಯಾನೇಜ್ ಮಾಡಿದ್ರೆ ಆಗುತ್ತೆ’ ಎಂದಿದ್ದರ೦ತೆ. ನನಗೆ ಕರೆ ಬಂದಾಗ ದಿಕ್ಕು ತೋಚದಾದೆ. ಆದರೂ ನನ್ನ ಲಕ್ಷ್ಯವೆಲ್ಲಾ ಗಳಿಕೆಯ ಮೇಲೆ ಇದ್ದಿದ್ದರಿಂದ ‘ದುಡ್ಡುಕೊಡ್ತೀರಾ?’ ಎಂದ ನನಗೆ ಏನು ಹೇಳಬೇಕೆನ್ನುವ ಗೊಂದಲ ಬಂದವರಿಗೂ. ಜನರನ್ನು ಒಟ್ಟು ಹಾಕಲು ಹಾಡು ಮಾಧ್ಯಮ ಆಗಿದ್ದರಿಂದ, ಅನಿವಾರ್ಯವಾಗಿ ನನ್ನ ಬೇಡಿಕೆಗೆ ಒಪ್ಪಿದ್ದರು. ಆ ಸಭೆಯಲ್ಲಿ ಮತ್ತೆ ಸತೀಶನನ್ನು ನೋಡಿದೆ. ಅದು ನಮ್ಮ ಎರಡನೆಯ ಭೇಟಿ. ಅವತ್ತು ನಾನು ಹೇಳದಿದ್ದರೂ ನನ್ನ ಎಲ್ಲ ವಿವರಗಳು ಅವನಿಗೆ ಗೊತ್ತಾಗಿತ್ತು ಎನ್ನುವುದು ಅವನ ಮೀಸೆಯ ಸಂದಿಯಲ್ಲಿ ಕಂಡೂ ಕಾಣದಂಥ ನಗು ಹೇಳಿತ್ತು. ಸುಮ್ಮನೆ ಜೊತೆ ನಿಂತು ಹಾಡು ಎಂದು ನಿಲ್ಲಿಸಿ ಕೊಂಡಿದ್ದರೂ ಮುಖ್ಯ ಹಾಡುಗಾರನಿಗಿಂತ ನಾನೇ ಚೆನ್ನಾಗಿ ಹಾಡಿದೆ ಎಂದು ಜನ ಹೇಳಿದ್ದರು. ಕಾರ್ಯಕ್ರಮ ಮುಗಿದ ಮೇಲೆ ಮನೆಯವರೆಗೂ ನನ್ನ ಬಿಡಲು ಬಂದಿದ್ದ ಸತೀಶ ಪಕ್ಕೆಂದು ನಕ್ಕಿದ್ದ. ನಾನು ಹುಸಿ ಮುನಿಸಿದಂದ ನಕ್ಕಿದ್ದರ ಕಾರಣ ಕೇಳಿದ್ದೆ. ‘ಅಲ್ಲಾರೀ ಅವತ್ತು ಇನ್ನೊಂದು ಹಾಡು ಹೇಳಿ ಅಂದ್ರೆ ಹೇಳದೆ ಹೋದಿರಿ. ಇವತ್ತು ನನ್ನೆದುರು ಗಂಟೆಗಟ್ಟಲೆ ಹಾಡಿದಿರಲ್ಲಾ’ ಎಂದಾಗ ನನ್ನ ಕೆನ್ನೆಗಳು ಕೆಂಪಾಗಿದ್ದವು. ‘ನಿಜ ಹೇಳ್ತೀನಿ, ಅವತ್ತು ನಿಮ್ಮ ಹಾಡನ್ನು ಕೇಳಿ ಕಳೆದು ಹೋಗಿದ್ದೆ. ಇವತ್ತು ಮತ್ತೆ ಖಚಿತವಾಯ್ತು, ನಿಮ್ಮ ಕಂಠದಲ್ಲಿ ಯಾವುದೋ ಮಾರ್ದವತೆ ಇದೆ, ಅದು ಕೇಳುಗರನ್ನು ಸೆಳೆಯುತ್ತೆ’ ಎಂದಿದ್ದ. ನಾನು ಉತ್ತರಿಸದೆ ನಾಚಿದ್ದೆ. ಅವನು ನನ್ನನ್ನು ಮನೆಗೆ ಬಿಟ್ಟು ಹೊರಡುವಾಗ ನೆನಪಿಸಿಕೊಂಡವಳ೦ತೆ, ‘ಇವತ್ತು ಹಾಡಿದೆನಲ್ಲಾ? ಏನಿದು ಹಾಡಿನ ಅರ್ಥ?’ ಎಂದು ಕೇಳಿದ್ದೆ. ಅವನು ಗಹನವಾಗಿ ಏನನ್ನೋ ಹೇಳಿದ್ದ. ಅವನ ಮಾತುಗಳು ನನಗೆ ನೆನಪಿಲ್ಲ. ಆದರೆ ನಮ್ಮನ್ನು ತುಳಿಯಲಿಕ್ಕೆ ಕಾಯುತ್ತಿರುವವರಿಗೆ ಎಚ್ಚರಿಕೆ ಸಾಲುಗಳೆಂದು ಗೊತ್ತಾಗಿತ್ತು. ಅಂಥಾ ಸಾಲುಗಳನ್ನು ನನ್ನ ಜೀವನದಲ್ಲಿ ಮೊದಲ ಬಾರಿಗೆ ಕೇಳಿದ್ದೆ
ಜನರ ರಕ್ತ ಹೀರುವವರೇ
ನಾವೇ ಇಲ್ಲದೆ ರಾಜರಾದೀರಾ ನೀವು ರಾಜರಾದೀರಾ
ನಿಮ್ಮ ಕೋವಿಗೆ ಎದೆಯ ಒಡ್ಡಿದ್ದೇವೆ.
ಬರಲಿದೆ ಆ ದಿನ ನಿಮ್ಮ ಹೆಗಲ ಕೋವಿಗಳು ನಮ್ಮ ಮಕ್ಕಳ ಹೆಗಲಿಗೆ
ಹೇಳಿ ನಿಮ್ಮ ಮಕ್ಕಳ ರಕ್ತಕ್ಕೆ ಬೆಲೆ ಕಟ್ಟಬಲ್ಲಿರಾ?
ಹುಚ್ಚಮ್ಮ, ಮಾಯಮ್ಮ. ಮಾರಮ್ಮರ ಬಗ್ಗೆ ರಮ್ಯವಾದ ಮಾಯಾಲೋಕವನ್ನು ಸೃಷ್ಟಿಸುವ ಹಾಡುಗಳಲ್ಲೇ ಮೈ ಮರೆತಿದ್ದ ನನಗೆ ಎಚ್ಚರಿಕೆಯನ್ನು ಕೊಡುವ ಇಂಥಾದ್ದೊ೦ದು ಹಾಡಿದೆ ಎನ್ನುವುದೇ ಗೊತ್ತಿರಲಿಲ್ಲ. ಇದೇ ಮುಂದೊ೦ದು ದಿನ ನನ್ನ ಜೀವನದ ಪಾಲಿಗೆ ದೂಡ್ಡ ತಿರುವನ್ನು ತಂದುಕೊಡುತ್ತೆ ಎನ್ನುವ ಗುಟ್ಟನ್ನು ಮಾತ್ರ ಬಿಟ್ಟುಕೊಡದೆ ಮನದಲ್ಲಿ ಮಾರ್ದನಿಸುತ್ತಿತ್ತು.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

11 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading