
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.
‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.
ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.
ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.
ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ
ಅಥವಾ 70191 82729ಗೆ ಸಂಪರ್ಕಿಸಿ
ಇಂದಿನಿಂದ ಅವರ ಹೊಸ ಕಾದಂಬರಿ ಅಂಕಣವಾಗಿ ಆರಂಭ. ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.
13
ಕರೆದದ್ದು ಬಂಡೆಯೇ ಸತೀಶನೇ. ಅರೆ! ಜಗತ್ತಿನ ಎಲ್ಲವೂ ಬದಲಾಗಿರುವಾಗ ಇದ್ಯಾಕೆ ಹೀಗೆ ನಿಂತಿದೆ? ಈ ಬಂಡೆಯನ್ನು ಒಡೆಯದೆ ಯಾಕೆ ಹೀಗೆ ಬಿಟ್ಟು ಬಿಟ್ಟಿದ್ದಾರೆ? ನನ್ನ, ಸತೀಶನ ಪ್ರೀತಿಯನ್ನು ಕಂಡಿದ್ದ ಈ ಬಂಡೆ ಒಮ್ಮೆಯೂ ನೆನೆಪಿಗೇ ಬಾರದ ಹಾಗೆ ನನಗ್ಯಾಕೆ ಮರೆತು ಹೋಗಿತ್ತು? ಸಂಗತಿಗಳು ನನ್ನ ಹೃದಯವನ್ನು ಕಲಕಿದಂತೆಲ್ಲಾ, ಜಗತ್ತಿನ ಎಲ್ಲವೂ ಮರೆತು ಹೋಗಿತ್ತು. ಆ ಬಂಡೆಯ ತುದಿಯಲ್ಲಿ ಸತೀಶ ನಿಂತು ಕರೆದಂತೆನ್ನಿಸಿದಾಗಲಂತೂ ಈ ಕ್ಷಣವೇ ಅವನನ್ನು ಸೇರಿ ಬಿಡಬೇಕು ಎನ್ನಿಸಿಬಿಟ್ಟಿತ್ತು. ನಾನು ಹಾಗೆ ಓಡುತ್ತಿದ್ದರೆ ಎಡವುವ ಕಾಲಿಗೂ ಎಚ್ಚರಿಕೆಯನ್ನು ಹೇಳುವ ಜಾಗದ ನೆನಪುಗಳು ಮಾಸುವಂತೆ ಅಲ್ಲಲ್ಲಿ ಮೇಲೆದ್ದು ಬಂದು ಅಡ್ಡಲಾಗಿದ್ದ ಬೇರುಗಳು, ಕಾಲಿಗೆ ತೊಡರಿ ಗಾಯವಾದಾಗ, ನೋವೂ ನೆತ್ತಿಯ ಮೂಲಕ್ಕೆ ತಲುಪುತ್ತಿತ್ತು. ನೋವು- ಕಾಲು ಎಡವಿದ್ದೆ, ಹೃದಯ ತಳಮಳಿಸಿದ್ದೇ ತಿಳಿಯದೆ ಹೋದೆ. ವಯಸ್ಸು ಮರೆತು ಜಿಗಿ ಜಿಗಿದು ಓಡಿ ಬಂಡೆಯ ಮೇಲೇರಿ ನಿಂತಾಗ ತಣ್ಣನೆಯ ಗಾಳಿ ಸತೀಶನ ಜೀವವೇ ಎನ್ನುವ ಹಾಗೆ ನನ್ನ ತಾಕಿ, ಈ ಕ್ಷಣ ಸತೀಶನನ್ನು ನೋಡದಿದ್ದರೆ ನನಗೆ ಉಳಿಗಾಲವೇ ಇಲ್ಲವೇನೋ ಅನ್ನಿಸಿಬಿಟ್ಟಿತ್ತು.
ಇಲ್ಲೇ ಇದೇ ಬಂಡೆಯ ಮೇಲೆ `ಜೀವಮಾನವಿಡೀ ನನ್ನ ಜೊತೆ ನಡಿತೀಯಾ ರಾಜಾ’ ಅಂತ ಕೇಳಿದ್ದ ಅವನು. ಅದನ್ನ ಹೇಗೆ ಮರೆಯಲಿ? ಪ್ರೀತಿಯನ್ನು ಒಪ್ಪಿಸಿಕೊಂಡಾಗ ದೇಹವನ್ನು ಬಳಸಿ ಹಿಡಿದ ಅವನ ತೋಳುಗಳು ಈಗಲೂ ನನ್ನ ಮೇಲೆ ಇದೆ ಎನ್ನಿಸಿಬಿಟ್ಟಿತ್ತು. ಮೈ ನಲುಗಿಸುವ ಕಾಮದ ಹಸಿತನ ಆರದಿರುವಾಗಲೇ ಹೇಳದೆ ಎದ್ದು ಹೊರಟುಬಿಟ್ಟ ಸತೀಶ ನನ್ನ ಪಾಲಿಗೆ ಏನು? ಪ್ರೀತಿಯಾ? ತತ್ವವಾ? ಬದುಕಾ? ಇಡೀ ಮೈ ಕಂಪಿಸಿ ಕುಸಿದು ಕುಳಿತೆ. ಅಂದು ನಕ್ಕ ಸತೀಶನ ನಗು ನನ್ನ ನಗುವಿನ ಜೊತೆ ಸೇರಿ ಪ್ರತಿಧ್ವನಿಸತೊಡಗಿತು.
ಸಹಾ ಬಂಡೆಯ ಕೆಳಗೆ ನಿಂತು ತುಂಬಾ ಸಲ ಕೂಗಿದ್ದಿರಬೇಕು. ಕೊನೆಗೆ ಕಷ್ಟಪಟ್ಟು ಬಂಡೆಯನ್ನು ಹತ್ತಿ ಬಂದಿದ್ದರು ಏದುಸಿರು ಅವರ ಕಷ್ಟವನ್ನು ಹೇಳುತ್ತಿತ್ತು. `ಚೈತನ್ಯ ನಿಮಗೆ ಹುಚ್ಚು ಹಿಡಿದಿದೆಯಾ? ಹೀಗೆಲ್ಲಾ ಆಡಿದರೆ ನಾನು ಏನು ಮಾಡಲಿ?’ ಎಂದು ಅಳುತ್ತಿದ್ದ ನನ್ನ ಭುಜವನ್ನು ಒತ್ತಿ ಭರವಸೆ ತುಂಬಲು ಯತ್ನಿಸಿದರು. ಊಹುಂ ನನಗದು ಬೇಕಿರಲಿಲ್ಲ. ಅವರ ಕೈಗಳನ್ನು ಕೊಸರಿದೆ. ಅವರಿಗೆ ಏನೂ ಮಾಡಲು ತೋಚದೆ ನನಗಿಂತ ಸ್ವಲ್ಪ ದೂರದಲ್ಲಿ ಕೂತರು. ಮನಸೋಇಚ್ಚೆ ಅತ್ತು ಸಮಾಧಾನವಾದ ಮೇಲೆ ಅಲ್ಲಿಂದ ಹೊರಟೆ. ಸಹಾ ನಾನು ಎದ್ದದ್ದನ್ನು ನೋಡಿ, `ನಿಲ್ಲಿ ನಾನು ಬರ್ತೇನೆ’ ಎನ್ನುತ್ತಾ ನನ್ನ ಜೊತೆಯಾದರು. ಎನ್ನಿಸಿತು, ಕಾಲಲ್ಲಿ ಬಲವಿಲ್ಲ – ಮನಸ್ಸಿನಲ್ಲಿ ಕೂಡಾ.
ಕಾರು ಮನೆಯ ಮುಂದೆ ನಿಂತಾಗ ಒಂದು ಕ್ಷಣ ಶೂನ್ಯ ಆವರಿಸಿತು. ಅದೇ ಮಣ್ಣಿನ ಗೋಡೆ ಬಿಸಿಲು ಹಾಯದಂತೆ ತಡಿಕೆಯನ್ನು ಕಟ್ಟಿತ್ತು. ಏನೂ ಬದಲಾವಣೆ ಇಲ್ಲ, ಎಲ್ಲವೂ ಅವತ್ತಿನ ಹಾಗೇ ಇದೆ. ನನ್ನನ್ನು ಹೊರತುಪಡಿಸಿ. ಅಂದು ನನ್ನ ಪ್ರತಿ ಹೆಜ್ಜೆಯಲ್ಲಿದ್ದ ಲವಲವಿಕೆ ಇಂದಿಲ್ಲ, ಕಾರಣ ನನ್ನ ನಾನೇ ಕೇಳಿಕೊಳ್ಳುತ್ತಿದ್ದ ಉತ್ತರವೇ ಇಲ್ಲದ ಪ್ರಶ್ನೆ, ‘ಈ ಮನೆಗೆ ಈಗ ನಾನು ಏನು? ಯಾವ ಅಧಿಕಾರದಲ್ಲಿ ನಾನು ಈ ಮನೆಯನ್ನು ಪ್ರವೇಶಿಸಲಿ? ಸಹಾ ನನ್ನೊಳಗೆ ನಡೆಯುತ್ತಿದ್ದ ಯುದ್ಧಕ್ಕೂ ತನಗೂ ಸಂಬಂಧವೇ ಇಲ್ಲ ಎನ್ನುವಂತೆ ಸಿಗರೇಟನ್ನು ಹಚ್ಚಿ, ಕಾರಿಗೆ ಒರಗಿ ನಿಂತು ‘ಇದು ಮುಗಿದ ಮೇಲೆ ಬರುತ್ತೇನೆ’ ಎಂದಿದ್ದರು.

ಕಾರು ನಿಂತ ಶಬ್ದ ಕೇಳಿದ್ದರಿಂದ ಅತ್ತೆ ಹೊರಗೆ ಓಡಿಬಂದರು. ಪಾದಗಳಲ್ಲಿನ ಅವರ ಉತ್ಸಾಹ ಇಡೀ ದೇಹಕ್ಕೆ ಪುಟಿಯುವ ಹಾಗೇ ಕಾಣುತ್ತಿತ್ತು, ಕಣ್ಣುಗಳ ಹೊಳಪು ಮಗುವಿನ ಹಾಗೆ ಇದ್ದವು. ಬಂದವರೇ ನನ್ನ ತಬ್ಬಿಕೊಂಡು, ‘ಅಂತೂ ಬಂದ್ಯಾ ಮಗೂ…’ ಎಂದರು. ಸಂಕಟ ಹೊಕ್ಕುಳ ಒಳಗೆ ಸುಳಿಯಾಗಿ ಸುತ್ತಿ ಗಂಟಲನ್ನು ಬಿಗಿಹಿಡಿದ ಹಾಗಾಯಿತು. ನನ್ನ ನೋಡಿ ಅತ್ತೆಯ ಕಣ್ಣುಗಳೂ ತೇವವಾದವು. ಇಬ್ಬರೂ ಮಾತಿಲ್ಲದೆ ತಬ್ಬಿ ನಿಂತೆವು. ಅವರ ಬೆಚ್ಚಗಿನ ದೇಹ ನನ್ನೊಳಗೆ ಆಪ್ಯಾಯತೆಯನ್ನು ಹರಿಸುತ್ತಿದ್ದರೆ, ಜಗತ್ತಿನ ಅತ್ಯಂತ ಸುಖೀ ಜೀವಿ ಎನ್ನುವ ಹಾಗೆ ನಿಂತಿದ್ದೆ. ‘ಅಮ್ಮಾ ಬಾಗಿಲಲ್ಲೇ ಎಲ್ಲಾ ಮುಗಿಸುತ್ತೀರೋ ಒಳಗಿನ ತನಕ ಉಳಿಸಿಕೊಳ್ಳುತ್ತೀರೋ?’ ಎಂದು ಆಶಾ ಹಾಸ್ಯ ಮಾಡಿದಾಗಲೇ ನಮಗೆ ಈ ಕಡೆಗೆ ಗಮನ. ಅತ್ತೆ ಕಾರಿನ ಬಳಿಯೇ ನಿಂತಿದ್ದ ಸಹಾರನ್ನು ನೋಡಿ, ‘ಒಳಗೆ ಬನ್ನಿ’ ಎಂದು ಕರೆದಾಗ, ಕೈಲಿದ್ದ ಸಿಗರೇಟನ್ನು ಎಸೆದು ನಗುತ್ತಾ, ‘ಚೆನ್ನಾಗಿದ್ದೀರಾ?’ ಎಂದು ಕೇಳಿದರು. ‘ನಮ್ಮ ಚೆನ್ನದ ಕಥೆ ಏನು ಹೇಳ್ತೀರಾ? ಇರೋದು ಇಬ್ಬರೂ ಮುದುಕರೇ, ಬಾ ಅಂತ ಕರೆ ಬಂದರೆ ಹೊರಡಬೇಕಲ್ಲವಾ? ಅದಕ್ಕೆ ತಯಾರಿ ನಡುಸ್ತಾ ಇದ್ದೀವಿ. ಈ ತಯಾರಿ ಈ ಕ್ಷಣಕ್ಕೆ ಮುಗಿಯಿತು ಅಂತ ಅಲ್ಲ. ಅದು ಇರುವವರೆಗೂ ನಿರಂತರ’ ಎಂದು ನಕ್ಕರು ಅತ್ತೆ. ಆ ನಗುವಲ್ಲಿ ಕಾಲ ಅವರನ್ನು ಈ ವಯಸ್ಸಲ್ಲಿ ನಿರಾಧಾರರನ್ನಾಗಿಸಿದ ನೋವು ಕಾಣಿಸಿತೇ? ಎಂದು ಹುಡುಕಿದೆ. ಇಲ್ಲ ಎಲ್ಲವೂ ಆಕಾಶವೇ. ಉದ್ದೇಶಗಳಲ್ಲಿ ಇರುವ ತಿಳಿತನಕ್ಕೆ ಯಾವ ಬಣ್ಣ ಹಚ್ಚಲಿ? ಖಚಿತ ಗೊತ್ತು. ಈ ತಳಮಳವೆಲ್ಲಾ ನನ್ನೊಳಗಿನ ಅಪರಾಧಿ ಭಾವನೆಯಿಂದ ಬಂದವೇ… ಹೀಗೆ ಯೋಚಿಸುತ್ತಲೇ ಎಲ್ಲರ ಜೊತೆ ಒಳನಡೆದೆ.
ಮಾವ ಮೂಲೆಯಲ್ಲಿ ಕೂತು ಅಲ್ಲಿಂದಲೇ ಕೈ ಬೀಸಿ ಕರೆದರು. ಹೌದು ಇವರೂ ಓಡಿಬರಬೇಕಿತ್ತಲ್ಲಾ ಅತ್ತೆಯ ಹಾಗೇ! ಎಂದು ಯೋಚಿಸಿ, `ಮಾವ ಹುಷಾರಿದ್ದೀರಾ ತಾನೇ?’ ಎಂದು ಆತಂಕದಿಂದ ಹತ್ತಿರ ಹೋದೆ. ಕಾಲಿಗೆ ಪಟ್ಟಿ ಹಾಕಿರುವುದು ಕಂಡಿತು. `ಅಮ್ಮಾ ತಾತ ಸಾಹಸ ಮಾಡಲಿಕ್ಕೆ ಹೋಗಿ ಕಾಲು ಮುರಿದುಕೊಂಡಿದ್ದಾರೆ’ ಎಂದಳು ಆಶಾ. `ಏಯ್ ಆಶಮ್ಮಾ ಸುಮ್ಮನಿರು, ನೀನೂ ನಿಮ್ಮಜ್ಜಿಯ ಜೊತೆ ಸೇರಿಬಿಟ್ಟೆಯಾ? ನನ್ನ ಮರ್ಯಾದೆ ಕಳೀಲಿಕ್ಕೆ’ ಎಂದು ಮಾವ ಗದರುತ್ತಿದ್ದರು. ಅವಳು ಅವರ ಮಾತನ್ನೂ ಕೇಳದೆ ತಮಾಷಿ ಮಾಡುತ್ತಲೇ ಇದ್ದಳು. ಯಾಕೋ ಮರ್ಯಾದೆ ಎನ್ನುವ ಪದ ನನ್ನನ್ನು ಹೆಚ್ಚಾಗಿ ಬಾಧಿಸಿ, `ಆಶಾ ಸುಮ್ಮನಿರು’ ಎಂದೆ. ಎಲ್ಲಾ ಸಂಭಾಷಣೆ ಕೇಳುತ್ತಿದ್ದ ಅತ್ತೆ, `ಪಾಪ ಅವಳನ್ಯಾಕೆ ಅನ್ನುತ್ತೀಯ? ಇವರಿಗೆ ಹರೆಯ ವಾಪಾಸು ಬರ್ತಾ ಇದೆ ನೋಡು, ಆ ಚಿಕ್ಕೋಳಿಯ ಮಗ ಕಾಟ್ರಿಯ ಜೊತೆ ಸೇರಿ ಈಚಲು ಮರಕ್ಕೆ ಮಡಿಕೆ ಕಟ್ಟಿದ್ದರು. ಹೊತ್ತೇರಿದ್ರೆ ಹುಳಿಯಾಗುತ್ತೆ ಅಂತ ಬೆಳಗ್ಗೇನೇ ಅವನಿಗೆ ಬಾ ಅಂತ ಹೇಳಿದ್ರು. ಅವನೂ `ಬರ್ತೀನಿ ಇರಯ್ಯ’ ಅಂತ ತಡಮಾಡಿದ. ಎಷ್ಟು ಹೇಳಿದ್ರೂ ಕೇಳದೆ ತಾವೇ ಮಡಿಕೆ ಇಳಿಸುತ್ತೀನಿ ಅಂತ ಹೋಗಿ ಈ ಸ್ಥಿತಿ ತಂದುಕೊಂಡಿದ್ದಾರೆ. ಈ ವಯಸ್ನಲ್ಲಿ ಇದೆಲ್ಲಾ ಯಾಕೆ ಎಂದರೆ ಕೇಳಲ್ಲ, ಈ ನಡುವೆ ಚಟ ಜಾಸ್ತಿ ಆಗಿದೆ’ ಎಂದು ಅತ್ತೆ ಬೈಯ್ಯುತ್ತಿದ್ದರೆ ಮಾವನ ಹತ್ತಿರ ಕೂತು ಅವರ ಕಾಲನ್ನು ನೀವುತ್ತಾ, ‘ಇಷ್ಟು ನೋವಿಟ್ಟುಕೊಂಡೂ ಇಲ್ಲೇ ಇದ್ದೀರಲ್ಲಾ? ಒಂದು ಮಾತು ಹೇಳುವುದಲ್ಲವಾ ಮಾವ? ಒಳ್ಳೆಯ ಆಸ್ಪತ್ರೆಗೆ ತೋರಿಸುತ್ತಿದ್ದೆನಲ್ಲಾ’ ಎಂದೆ. `ಇದ್ಯಾವ ನೋವು? ನನಗೆ ಯಾವ ನೋವೂ ಇಲ್ಲ. ಈಗ ಮೊಮ್ಮಗಳು ಬಂದಿದ್ದಾಳೆ. ಅವಳನ್ನ ನೋಡಿದಾಗಿನಿಂದ ನೋವೆಲ್ಲಾ ಹೊರಟೇ ಹೋಯಿತು ಅಲ್ವ ಆಶಮ್ಮಾ’ ಎಂದು ಹುಸಿ ನಗೆಯಾಡಿದರು. `ಮತ್ತೆ ಹೇಗ್ ಓಡಾಡ್ತಾ ಇದೀರಾ? ನಿಮ್ಮನ್ನ ಒಳಗೆ ಹೊರಗೆ ಕರೆದೊಯ್ಯುವವರು ಯಾರು?’ ಎಂದೆ. ಅತ್ತಿತ್ತ ನೋಡಿ ಯಾರೂ ಇಲ್ಲ ಎನ್ನುವುದನ್ನು ಖಚಿತ ಮಾಡಿಕೊಂಡು, `ನಿಮ್ಮತ್ತೆ ಇಲ್ವಾ, ನನಗೆ ವಯಸ್ಸು ತಿರುಗ್ತಾ ಇದೆ ಅಂತಾಳೆ. ವಯಸ್ಸು ತಿರುಗಿರೋದು ಅವಳಿಗೆ. ಹುಡುಗಿಯ ಹಾಗೆ ನನ್ನ ಎಲ್ಲ ಭಾರಾನೂ ಅವಳೇ ಹೊರ್ತಾಳೆ ಅಂತೀನಿ’ ಎಂದು ಗುಟ್ಟು ಹೇಳುವವರ ಹಾಗೆ ಪಿಸುಗುಟ್ಟಿದರು. ಯಾವ ಮಾಯದಲ್ಲೋ ಹಿಂದೆ ಬಂದು ನಿಂತಿದ್ದ ಅತ್ತೆ, `ಸಾಕ್ ನಿಮ್ಮ ಹುಡುಗಾಟ, ನೋಡಿದವರು ನಕ್ಕಾರು’ ಎನ್ನುತ್ತಾ ನನ್ನ ಕಡೆಗೆ ನೋಡಿದರು. ನನ್ನ ಕಣ್ಣ ತುದಿಯಲ್ಲಿ ಹನಿಯೊಡೆದು ನಿಂತಿತ್ತು. ಗಮನಿಸಿದ ಅತ್ತೆ, `ಅಯ್ಯಾ ಯಾಕ್ ಅಳ್ತಾ ಇದೀಯಾ? ನೋಡಿದ್ರಾ ಪಾಪ ಅವಳು ಇನ್ನೂ ಒಳಗೇ ಬಂದಿಲ್ಲ. ಆಗಲೇ ನಮ್ಮ ಕಷ್ಟಗಳನ್ನ ಹೇಳಿ ಕಣ್ಣೀರು ಹಾಕುಸ್ತಿದ್ದೀರಲ್ಲಾ’ ಎಂದು ಗದರಿದ್ದರು. ಮನಸ್ಸು ದುಃಖದಿಂದ ಒದ್ದೆಯಾಗಿತ್ತು, `ಅತ್ತೆ ಇದನ್ನೆಲ್ಲಾ ನಾನೇ ನೋಡಿಕೊಳ್ಳಬೇಕಿತ್ತು, ಆದರೆ…’ ಎನ್ನುವಾಗ ಎದುರಿದ್ದ ಸಹಾ ತಮ್ಮ ಮುಖದ ಭಾವನೆಗಳು ಕಾಣದಂತೆ ಮರೆಮಾಚಲು ಯತ್ನಿಸುತ್ತಿದ್ದರು. ಇದೆಲ್ಲದರಲ್ಲಿ ಅವರದೂ ಪಾಲುಗಾರಿಕೆ ಇತ್ತಲ್ಲ. ಅತ್ತೆ ತುಂಬಾ ಸೂಕ್ಷ್ಮ. ಇದೆಲ್ಲವನ್ನೂ ಗಮನಿಸಿ, `ಏನಾಗಿದೆ ಅಂತ ಇಷ್ಟು ಬೇಜಾರು ಮಾಡ್ಕೋತೀಯ? ಇಲ್ಲಿ ಜನ ಇದ್ದಾರೆ ನಮಗೆ ಸಹಾಯ ಮಾಡಲಿಕ್ಕೆ. ನಮ್ಮ ಜೀವನ ಹೇಗೋ ನಡೆದು ಹೋಗುತ್ತೆ. ನೀನೂ, ಆಶಮ್ಮ ಇಬ್ಬರೂ ಚೆನ್ನಾಗಿದ್ದೀರಲ್ಲಾ ಅಷ್ಟೇ ಸಾಕು. ಅಪರೂಪಕ್ಕೆ ಬಂದಿದ್ದೀ ನಗುತ್ತಾ ಒಂದು ದಿನ ಇದ್ದು ಹೋಗುವಂತೆ ಏಳು ತಿಂಡಿ ಮಾಡಿದ್ದೀನಿ’ ಎಂದು ಅವಸರಿಸಿದರು.

`ಚೆನ್ನಾಗಿ ಈರುಳ್ಳಿ ಹಾಕಿದ ಅಕ್ಕಿರೊಟ್ಟಿ ನಿನಗೆ ತುಂಬಾ ಇಷ್ಟಾಂತ ಮಾಡಿದೆ’ ಎಂದು ಕಾವಲಿಯ ಮೇಲೆ ಹಾಕುವಾಗ, ಸಹಾ `ನನಗೆ ತಿಂಡಿ ಬೇಡ ಟೀ ಮಾತ್ರ ಸಾಕು’ ಎಂದಿದ್ದರು. ಅತ್ತೆ, `ಬಡವರ ಮನೆ ಏನೋ ಪ್ರೀತಿಯಿಂದ ಮಾಡಿದ್ದನ್ನ ತಿನ್ನಿ’ ಎಂದು ಬಲವಂತ ಮಾಡಿದಾಗ, ನಾನೇ, `ಬಿಡಿ ಅತ್ತೆ ಅವರಿಗೆ ಮಧ್ಯಾಹ್ನದ ಊಟ ಜಾಸ್ತಿ ಆಗಿದೆ’ ಎಂದಿದ್ದೆ. `ಅಲ್ಲ ಕಣೆ ಮನೆಗೆ ಬಂದವರು ಏನೂ ತಿನ್ನದೆ ಹೋದರೆ ಏನು ಚೆನ್ನ, ಸಂಜೆಗೆ ಒಳ್ಳೆ ಕೋಳಿ ಸಾರು ಮಾಡಿದ್ರಾಯ್ತು’ ಎಂದು ಅತ್ತೆ ಮಾತಾಡುವಾಗ ಅವರ ಧ್ವನಿಯಲ್ಲಿ ತನ್ನ ಮಗನ ಜಾಗದಲ್ಲಿ ಇನ್ನೊಬ್ಬ ಇದ್ದಾನೆ ಎನ್ನುವ ಸಣ್ಣ ಕಹಿಯೂ ಕಾಣಲಿಲ್ಲ. ಸಹಾ ಟೀ ಕುಡಿಯುತ್ತಾ ಅತ್ತೆ ಮಾವರಿಗೆ `ಇಲ್ಲೇನು ಮಾಡ್ತೀರ ಹೀಗೆ ನೀವೂ ನಮ್ಮೊಂದಿಗೆ ಬಂದು ಬಿಡಿ, ನಿಮ್ಮ ಆಶಮ್ಮ ಯಾವಾಗಲೂ ನಿಮ್ಮ ಜೊತೆಯೇ ಇರ್ತಾಳೆ’ ಎಂದರು. ಮಾತು ಔಪಚಾರಿಕವೇ, ನಿಜವಾದ ಕಾಳಜಿ ಇದೆಯೇ? ಸಹಾರ ಮಾತಿನ ಬಣ್ಣಗಳನ್ನು ಮಾತ್ರ ನನ್ನ ಕೈಲಿ ಇಷ್ಟು ವರ್ಷಗಳ ನಂತರವೂ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಒಮ್ಮೊಮ್ಮೆ ಅಂತಃಕರಣಪೂರ್ವಕವಾಗಿ ಮಾತುಗಳನ್ನು ಆಡಿಬಿಡುತ್ತಿದ್ದರು. ಕೆಲವೊಮ್ಮೆ ನಾಲಿಗೆಯ ತುದಿಯಲ್ಲಿ. ಆಶಾ, `ಹೌದು ತಾತ ಬಂದು ಬಿಡಿ’ ಎಂದು ಹಠ ಮಾಡತೊಡಗಿದಳು. `ಅಲ್ಲಿ ಬಂದು ನಾವು ಮಾಡುವುದಾದರೂ ಏನು? ಬೆಳಗೆದ್ದರೆ ಏನಪ್ಪಾ ಅಂತ ಕೇಳೋ ಜನ ಇಲ್ಲಿ ನನ್ನ ಸುತ್ತಾ ಇದ್ದಾರೆ. ಅಷ್ಟು ಸಾಕಲ್ವಾ ಇಲ್ಲೇ ಇರೋಕ್ಕೆ. ನೀನೇ ಬಂದು ಬಿಡು’ ಎಂದು ನಕ್ಕಿದ್ದರು ಮಾವ.
ಮಾತು ಮಾತು ಕಟೆಯುತ್ತಾ ಸತೀಶನ ಹತ್ತಿರಕ್ಕೆ ಸುಳಿಯುವಾಗ ಸಹಾ ತಮ್ಮ ಭೇಟಿಗಾಗಿ ಜನ ಕಾಯ್ತಾ ಇರ್ತಾರೆ ಎಂದು ಎದ್ದರು. ಅತ್ತೆಗೆ ತಾನು ತಪ್ಪಾಗಿ ಮಾತನಾಡಿದೆನಾ? ಎಂದು ಗಾಬರಿಯಾಯಿತು. ಸಹಾರನ್ನು ಉದ್ದೇಶಿಸಿ, `ಅಲ್ಲಾ ಎಲ್ಲರೂ ಇವತ್ತು ಇಲ್ಲೇ ಇರಬಹುದಿತ್ತಲ್ಲ? ನಮ್ಮ ಮನಸ್ಸಿಗೂ ನೆಮ್ಮದಿ ಅನ್ನಿಸ್ತಾ ಇತ್ತು’ ಎಂದರು. ಸಹಾ ನಗುತ್ತಲೇ, `ನಿಮ್ಮ ಮೊಮ್ಮಗಳು ಇರ್ತಾಳೆ, ಚೈತನ್ಯ ನಿಮಗೂ ಇರಬೇಕನ್ನಿಸಿದರೆ ನೋಡಿ’ ಎಂದು ಕೇಳಿದಾಗ ನಾನು ತಬ್ಬಿಬ್ಬು. ಅರೆ ಇವತ್ತು ನಾನು ಇರಬೇಕು ಅಂತಲೇ ತಾನೇ ಅಂದುಕೊಂಡಿದ್ದು? ಅದನ್ನ ಹೇಳುತ್ತಲೇ ಬಂದಿದ್ದೆನಲ್ಲಾ! ಆದರೂ ಯಾಕೆ ಹೀಗೆಲ್ಲ ಮಾತಾಡುತ್ತಿದ್ದಾರೆ ಅನ್ನಿಸಿ, ಬಾಡಿದ ಅತ್ತೆಯ ಮುಖವನ್ನು ನೋಡುತ್ತಾ, `ನೀವು ಹೊರಡಿ, ನಿಮ್ಮ ಫ್ರಂಡ್ಸ್ ಕಾಯ್ತಾ ಇರ್ತಾರೆ. ನಾನು ಇಲ್ಲೇ ಇದ್ದು ನಾಳೆ ಬರ್ತೇನೆ’ ಎಂದಿದ್ದೆ. ಸಹಾಗೆ ಬೇಸರವೋ, ಅಸಹನೆಯೋ, ಸಮ್ಮತವೋ? ಏನೂ ಗೊತ್ತಾಗಲಾಗದ ಸ್ಥಿತಿಗೆ ನಾನು ಹೋಗಿದ್ದೇನೆ ಎಂಬುದೇ ಸತ್ಯ.
ಆಶಾ ಆಗಲೇ ಅಜ್ಜಿ ತಾತರ ಮುದ್ದಿನಲ್ಲಿ ತೊಯ್ದು ಹೋಗಿದ್ದಳು. ಅವಳ ಅಂದ-ಚಂದ, ಮಾತು ಎಲ್ಲವೂ ಅವರಿಗೆ ಬೆರಗಾಗೇ ಕಂಡಿದ್ದವು. ಅವಳು ಚಟಪಟ ಮಾತಾಡುತ್ತಾ ತಾತನ ಎಲ್ಲ ಕೆಲಸಗಳಿಗೆ ನೆರವಾಗುತ್ತಾ, ಮನೆ ತುಂಬುವ ಹಾಗೇ ಮಾಡಿದ್ದಳು. ಅವಳನ್ನೇ ನೋಡುತ್ತಾ ಕೂತ ಅತ್ತೆ, `ಎಲ್ಲಾ ಸತೀಶನ ಹಾಗೇ ಅಲ್ವಾ’ ಎಂದಿದ್ದರು. `ನಿಮಗಿಂತ ನಿಮ್ಮ ಮಗನ ಬಗ್ಗೆ ನಂಗೆ ಗೊತ್ತಾ ಅತ್ತೆ?’ ಎಂದೆ. `ಅದೂ ನಿಜಾನ್ನು ಮದುವೆಯಾಗಿ ವರ್ಷ ಕಳೆಯುವಷ್ಟರಲ್ಲಿ ಹೋಗೇಬಿಟ್ಟ, ಪಾಪ ನೀನಾದರೂ ಅವನನ್ನು ಇನ್ನೆಷ್ಟು ಅರ್ಥ ಮಾಡಿಕೊಂಡಿರಲಿಕ್ಕೆ ಸಾಕು’ ಎಂದು ನಿಟ್ಟುಸಿರಿಟ್ಟರು. ಅವರಿಗೆ ಕೇಳಲೋ ಬೇಡವೋ ಎನ್ನುವ ಸಂದಿಗ್ಧ. ಅವರೇನು ಕೇಳುತ್ತಾರೆ ಎಂದು ನನಗೂ ಅದು ಗೊತ್ತು, `ನೀನಲ್ಲಿ ಚೆನ್ನಾಗಿದ್ದೀಯಾ?’ ಅದನ್ನು ತಪ್ಪಿಸಿಕೊಳ್ಳಲಿಕ್ಕೆ ಅದಕ್ಕೆ ಟೇಬಲ್‌ನ ಪಕ್ಕದಲ್ಲಿ ನೀಟಾಗಿ ಜೋಡಿಸಿದ್ದ ಪುಸ್ತಕದ ಬೀರುವಿನಲ್ಲಿದ್ದ ಪುಸ್ತಕವನ್ನು ತೆಗೆದೆ. ಓದುವ ಇರಾದೆ ಖಂಡಿತಾ ನನಗಿರಲಿಲ್ಲ. ಕಾರ್ಲ್‌ಮಾರ್ಕ್ಸ್‌ನ ಪುಸ್ತಕದಲ್ಲಿ ಸಾಲು ಸಾಲುಗಳಲ್ಲಿ ಕೆಂಪುಬಣ್ಣದ ಪೆನ್‌ನಿಂದ ಮಾರ್ಕ್ ಮಾಡಿದ್ದು ಕಾಣಿಸಿತು. ಅತ್ತೆ ಹಿಂದಿನಿಂದ, `ಸತೀಶನ ನೆನಪು’ ಎಂದರು. ಧ್ವನಿ ಭಾರವಾಗಿತ್ತು. ನನ್ನ ಬದುಕಿಗೆ ಆಯ್ಕೆಗಳಿದ್ದವು ಅತ್ತೆಗಲ್ಲ. ಪುಸ್ತಕ ಮುಚ್ಚುವಾಗ ಅಚಾನಕ್ ಆಗಿ ಮೊದಲ ಪುಟ ನನ್ನ ಕಣ್ಣಿನ ಎದುರು ತೆರೆದುಕೊಂಡಿತ್ತು. `ಬಳ್ಳಿಯಾಗಬೇಡ ದೃಢವಾದ ಮರವಾಗು. ಪ್ರೀತಿಯಿಂದ ರಾಜಲಕ್ಷ್ಮಿಗೆ- ಸತೀಶ’ ಎನ್ನುವ ಹಸ್ತಾಕ್ಷರ ಕಾಣಿಸಿತು. ಜಗತ್ತಿನ ಎಲ್ಲವೂ ಸ್ತಬ್ಧವಾದಂತೆ ಅನ್ನಿಸಿತು. ಅದು ನನಗೆ ಅವನು ಕೊಟ್ಟ ಮೊದಲ ಕಾಣಿಕೆ.
। ಇನ್ನು ಮುಂದಿನ ವಾರಕ್ಕೆ ।






0 Comments