
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.
‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.
ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.
ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.
34
ಮಳೆಗಾಲದಲ್ಲಿ ಕಡಲ ಕೊರೆತದಿಂದ ಪಾತುಮ್ಮನ ಬಾಡಿಗೆಯ ಮನೆಯೂ ಬಿದ್ದು ಹೋಗಿ, ತನ್ನ ಸ್ವಂತ ಸೂರಿನಕನಸನ್ನು ಕಾಣುತ್ತಿದ್ದ ಅವಳು ದೊಡ್ಡ ಆಘಾತಕ್ಕೆ ಒಳಗಾಗುತ್ತಾಳೆ. ಈ ಸಂಗತಿ ಶ್ರೀನಿವಾಸಾಚಾರಿಗೆ ತಿಳಿದು ಅವನು ಪಾತುಮ್ಮಳಲ್ಲಿಗೆ ಹೋಗಿ, `ನೀನು ನನ್ನಲ್ಲಿ ವಿಶ್ವಾಸ ಇಟ್ಟಿದ್ದೀಯ, ನಿನ್ನ ಜೊತೆಗೆ ನಾನು ಇದ್ದೇನೆ’ ಎನ್ನುವ ಭರವಸೆಯನ್ನು ಕೊಡಬೇಕು. ಇದು ಕಥಾ ಭಾಗ. ಶತಮಾನಗಳಿಂದ ಒಟ್ಟಿಗೆ ಬದುಕುತ್ತಿರುವವರ ನಂಬಿಕೆ ಇದು ಇಂದು ರಾಜಕೀಯ ಷಡ್ಯಂತ್ರಕ್ಕೆ ಒಳಗಾಗಿ ನಶಿಸುವ ಸ್ಥಿತಿಯನ್ನು ತಲುಪಿದೆ.
ಈ ದುರಂತದಿಂದ ಸಮಾಜವನ್ನು ಮೇಲೆತ್ತಲಿಕ್ಕೆ ಇರುವ ದಾರಿ ಒಟ್ಟಾಗಿ ನಡೆಯುವುದು ಮಾತ್ರ ಎನ್ನುವುದು ತಿಳುವಳಿಕೆ ಇರುವವರೆಲ್ಲರ ಅಭಿಪ್ರಾಯ. ಯಾವತ್ತೋ ಬರೆದು ಚಿತ್ರೀಕರಿಸಿ ಆಗಿ ಹೋಗಿರುವಕಥೆ ಇದು. ಆದರೆ ಒಂದು ಸೃಜಶೀಲ ಪ್ರಕಾರಕ್ಕೆ ಯಾಅವತ್ತೂ ಈ ಸಮಾಜಕ್ಕೆ ಬೇಕಾಗುವ ಸಂದೇಶವನ್ನು ತನ್ನ ಒಡಲಲ್ಲಿ ಹುದುಗಿಸಿಕೊಳ್ಳುವ ಅಪಾರವಾಅದ ಶಕ್ತಿ ಇರುತ್ತದೆ ಎನ್ನುವುದನ್ನು ಈಗಲೂ ನನಗೆ ಈ ಕಥೆಕಾಣಿಸುತ್ತಲೇ ಇದೆ.
ಪಾತುಮ್ಮಳ ಮನೆ ಬಿದ್ದು ಹೋಗಿದೆ ಎಂದು ಶ್ರೀನಿವಾಸಾಚಾರಿಗೆ ತಿಳಿಸಲಿಕ್ಕೆ ಒಂದು ದಾರಿ ಬೇಕಲ್ಲ? ಪಾತ್ರ ಬೇಕಲ್ಲಾ? ಕತೆಯಲ್ಲಾದರೆ ಅವನಿಗೆ ತಿಳಿಯಿತು ಅಂತ ಬರೆದರೆ ಆಗಿ ಹೋಗುತ್ತದೆ. ಆದರೆ ಸಿನೆಮಾ ಸವಿವರಗಳ, ಸದೇಹಿಯಾದ್ದರಿಂದ ಅದಕ್ಕೆ ಎಲ್ಲಾ ವಿವರಗಳನ್ನು ತುಂಬುತ್ತಾ ಪೂರ್ಣ ಮಾಡಬೇಕಾಗುತ್ತದೆ. ಸಂಗತಿಯೊಂದನ್ನು ಸ್ಪಷ್ಟಗೊಳಿಸಲಿಕ್ಕೆ ಒಂದು ಸಾಲಿರುವ ಕಡೆಗೆ ಎಷ್ಟೋ ಡೈಲಾಗ್ ಸೇರಿದರೆ, ಎಷ್ಟೋ ವಿವರಗಳಿರುವ ಕಡೆ ಒದೇ ಒಂದು ದೃಶ್ಯ ಸಾಕಾಗುತ್ತದೆ. ಇದು ಕಥೆಗಳನ್ನು ಚಿತ್ರವಾಗಿಸುವಾಗ ಎಲ್ಲರೂ ಎದುರಿಸುವ ಸಾಮಾನ್ಯವಾದ ಸವಾಲು. ಹೀಗೆ ವಿವರಗಳಿಗಾಗಿ ಅನೇಕ ಪಾತ್ರಗಳು ಹುಟ್ಟಿಕೊಳ್ಳುತ್ತದೆ.
ಹುಟ್ಟಿಕೊಂಡ ಪಾತ್ರಗಳಿಗೆ ಅವನ ಸಾಮಾಜಿಕ ಹಿನ್ನೆಲೆ, ಅವನ ದಿನ ನಿತ್ಯದ ವ್ಯವಹಾರಗಳು, ಭಾಷೆ… ಹೀಗೆ ಎಲ್ಲದರ ಜೊತೆಗೆ ಕ್ರಿಯೆಯೂ ಸೇರಿಯೇ ಕಟ್ಟಿಕೊಡಬೇಕಾಗುತ್ತದೆ. ಜೀವನ ವಿವರಗಳ ಸೂಕ್ಷ್ಮಸ್ಥಿತಿ ಸಿಗುವುದೂ ಇಂತಲ್ಲೆ. ಕೆಲವೊಮ್ಮೆ ದಿನ ನಿತ್ಯ ನಾವು ನೋಡುವ ಅನೇಕ ಸಂಗತಿಗಳು ನಮ್ಮನ್ನು ಪ್ರಭಾವಿಸುತ್ತಿರುತ್ತದೆ. ಒಂದು ವಿಷಯವನ್ನು ಯಾರೂ ಹೇಳಬಹುದು. ಆದರೆ ಯಾರು ಹೇಳಿದರೆ ಪರಿಣಾಮದಲ್ಲಿ ಹೆಚ್ಚು ಗಾಢವಾಗುತ್ತದೆ ಎನ್ನುವುದೂ ಗಣನೆಗೆ ಬರುತ್ತದೆ.

ಹಾಲಿನವನು ನಮ್ಮ ಕಥೆಗೆ ಬಂದು ಸೇರಿದ್ದು ಸ್ವಾರಸ್ಯಕರವಾಗಿ. ಸಿನೆಮಾ ಮಾಡಲಿಕ್ಕೆ ಮೊದಲು ನಮ್ಮ ಟೀಂ ಮುಲ್ಕಿಯನ್ನು ನೋಡಲಿಕ್ಕೆ ಹೋಗಿತ್ತಲ್ಲ? ಆಗ ಹಗಲು ರಾತ್ರಿ ಸಂಜೆ ಮುಂಜಾವುಗಳಲ್ಲಿ ನಾವು ಚಿತ್ರೀಕರಿಸುವ ಊರು, ಜಾಗಗಳು ಹೇಗಿರುತ್ತದೆ ಎನ್ನುವುದನ್ನು ಅಭ್ಯಾಸ ಮಾಡಬೇಕಾಗುತ್ತದೆ. ಸಿನೆಮಾ ಇರುವುದೇ ಕಾಣಿಸುವುದರಲ್ಲಿ ಆದ್ದರಿಂದ ಇಲ್ಲಿ ಕಲ್ಪನೆಗೆ ಹೆಚ್ಚು ಅವಕಾಶವಿಲ್ಲ. ಆ ಊರಿನ ಜೀವನ ಸಹಜ ಕ್ರಿಯೆಗಳು, ವಿದ್ಯಮಾನಗಳನ್ನು ನೋಡಿದ ಮೇಲೆ ಇಂಥಾ ಹೊತ್ತಲ್ಲಿ ನಾವು ಈ ದೃಶ್ಯವನ್ನು ಚಿತ್ರೀಕರಿಸಬಹುದು ಎನ್ನುವ ಲೆಕ್ಕಾಚಾರ ಶುರುವಾಗುತ್ತದೆ. ದೃಶ್ಯವೊಂದು ಫ್ರೇಂ ಆಗುವುದೇ ಹೀಗೆ.
ಬೆಳಗ್ಗೆ ಆರು ಗಂಟೆಯ ಹೊತ್ತಿಗೆ ಮುಲ್ಕಿಯ ಬೀದಿಗಳಲ್ಲಿ ಸೈಕಲ್ನಲ್ಲಿ ಹಾಲಿನ ಕ್ಯಾನುಗಳನ್ನು ಕಟ್ಟಿಕೊಂಡು, ಆ ಕ್ಯಾನಿನ ಮೇಲೆ ಪಾತ್ರೆಯನ್ನು ಮೊಗಚಿ ಹಾಕಿ, ಬೆಲ್ ಮಾಡುತ್ತಾ ಮನೆಗಳ ಮುಂದೆ ಹೋದರೆ, ಮನೆಯ ಜನ ಯಾರೋ ಒಬ್ಬರು ಬಂದು ಹಾ;ಲನ್ನು ಹಾಕಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ವಾಕಿಂಗ್ ಹೋಗುತ್ತಿದ್ದ ನಮಗೆ ಇಂಥಾ ಬೇರೆ ಬೇರೆ ಅನೇಕ ದೃಶ್ಯಗಳು ಕಾಣಸಿಗುತ್ತಿದ್ದವು. ಎಲ್ಲಕ್ಕಿಂತ ವಿಶೇಷವಾಗಿ ಕಂಡಿದ್ದು ಹಾಲು ಹಾಕುವದೃಶ್ಯ ಅದು ನೋಡಲಿಕ್ಕೆ ಚೆನ್ನಾಗಿ ಕಾಣುತ್ತಿತ್ತು. ಹಾಗೆ ಹಾಲು ಹಾಕುವುದು ಅವರ ಜೀವನ ಆಗಿದ್ದರಿಂದಲೋ ಏನೋ ಹಾಲನ್ನು ಕ್ಯಾನಿನ ಒಳಗಿನಿಂದ ಉದ್ದ ಹಿಡಿಕೆಯ ಬಟ್ಟಲಿನಿಂದ ತೆಗೆದು, ಅಳತೆಯ ಪಾತ್ರೆಗೆ ಸುರಿದು ನಂತರ ಮನೆಯವರ ಪಾತ್ರೆಗೆ ಹಾಕಲಾಗುತ್ತಿತ್ತು.
ನಮಗೆ ಇದನ್ನು ಹೇಘಾದರೂ ನಮ್ಮ ಸಿನೆಮಾದಲ್ಲಿ ತರಬೇಕು ಅನ್ನಿಸಿತ್ತು. ಇದು ತುಂಬಾ ಮಹತ್ವದ್ದು ಅಂತ ಅಲ್ಲ ಕೆಲವೊಮ್ಮೆ ಚಿಕ್ಕ ಚಿಕ್ಕ ವಿವರಗಳು ಸಿನೆಮಾಗೆಗಾಢತೆಯನ್ನು ತಂದುಕೊಡುತ್ತದೆ ಎನ್ನುವ ಕಾರಣಕ್ಕೆ. ವಾಕಿಂಗ್ ಹೋದಾಗ ಹಾಲು ಹಾಕುವವನೊಬ್ಬ ಸಿಕ್ಕು, ನಮ್ಮ ಅಗತ್ಯಗಳಿಗೆ ಸ್ಪಂದಿಸುವುದಾಗಿ ಹೇಳಿದ. ಹಳೆಯದಾದ ನೆಗ್ಗಿ ಹೋದ ಅವನ ಕ್ಯಾನು ನಮ್ಮನ್ನು ವಿಶೇಷವಾಗಿ ಆಕರ್ಷಿಸಿತ್ತು. ಫೋನ್ ನಂಬರ್ ಕೇಳಿದ್ದಕ್ಕೆ, `ನಾನು ಯಾವಾಗಲೂ ದುರ್ಗಾಪರಮೇಶ್ವರಿಯ ದೇವಾಲಯದ ಹಿಂದಿನ ಬೀದಿಯಲ್ಲಿರುತ್ತೇನೆ. ಬನ್ನಿ, ಹಾಲು ಹಾಕಿದ ಮೇಲೆ ನನಗೆ ಬೇರೆ ಯಾವ ಕೆಲಸವೂ ಇರುವುದಿಲ್ಲ’ ಎಂದಿದ್ದ. ಸಿಕ್ಕೇಸಿಗುತ್ತಾನೆ ಎನ್ನುವ ಭರವಸೆಯ ಮೇಲೆ ನಾವೂ ಅವನನ್ನು ಮತ್ತೆ ಮಾತಾಡಿಸುವುದಕ್ಕೆ ಹೋಗಲಿಲ್ಲ.
ಹಾಲಿನವನು ಬಂದು ಪಾತುಮ್ಮಳ ಮನೆ ಬಿದ್ದ ವಿಷಯವನ್ನು ಶ್ರೀನಿವಾಸಾಚಾರಿಗೆ ಹೇಳಬೇಕು. ಅದಕ್ಕಾಗಿ ನಮ್ಮ ಟೀಂನ ಪುನೀತ ತಾನೇ ಹಾಲಿನವನ ಪಾತ್ರವನ್ನು ಮಾಡುವ ಹುಮ್ಮಸ್ಸಿನಲ್ಲಿದ್ದ. ಎಂಥೆಂಥಾ ಡೈರೆಕ್ಟರ್ ಹತ್ತಿರ ಕೆಲಸ ಮಾಡಿದ್ದೇನೆ ಎನ್ನುವುದು ಅವನ ಹೆಮ್ಮೆ. ನಟನೆಮಾಡಲಿಕ್ಕೆ ಪೂರ್ಣಪ್ರಮಾಣದ ಸಿದ್ಧತೆಯನ್ನೂ ಮಾಡಿಕೊಂಡಿದ್ದ. ಮೊದಲೇ ನನ್ನ ಕಡೆಯಿಂದ ಡೈಲಾಗ್ ಕೇಳಿ ಉರು ಹೊಡೆದಿದ್ದ. ಇನ್ನೇನು ಹಾಲಿನವ ಸಿಕ್ಕ ತಕ್ಷಣ ಅವನ ಪೂರ್ತಿ ವ್ಯವಸ್ಥೆಯನ್ನು ಬಳಸಿಕೊಂಡು ಶೂಟ್ ಮಾಡುವುದಷ್ಟೇ ಕೆಲಸ. `ಹಾಲಿನವನನ್ನು ನೀವು ಕರೆದು ತನ್ನಿ, ನಾವು ಮನೆಯ ಒಳಗೆ ಶೂಟ್ ಮಾಡ್ತಾ ಇರ್ತೀವಿ. ಹಾಲಿನವನೊಂದಿಗೆ ಕೇವಲ ಎರಡು ಪುಟ್ಟ ದೃಶ್ಯಗಳು ಮಾತ್ರವಲ್ಲವ ಬೇಗ ಮುಗಿದುಹೋಗುತ್ತೆ’ ಎಂದರು ಪಂಚಾಕ್ಷರಿ. ನಾನು ಮತ್ತು ಪುನೀತ ಹಾಲಿನವನನ್ನು ಹುಡುಕುತ್ತಾ ಹೊರಟೆವು. ಆರ್ಟ್ ಡೈರೆಕ್ಷನ್ ಸುಲಭದ ಕೆಲಸ ಅಂದುಕೊಂಡಿದ್ದ ನನಗೆ ಯಾವುದೂ ಪುಗಸಟ್ಟೆಯಾಗಿ ಸಿಗಲ್ಲ, ಅತಿಯಾದ ಆತ್ಮವಿಶ್ವಾಸವೂ ಒಳ್ಳೆಯದಲ್ಲ ಎಂದು ಅರ್ಥ ಮಾಡಿಸಿದ ಪ್ರಸಂಗವಿದಾಗಿ ಬಿಟ್ಟಿತ್ತು.
ಯಾವುದಕ್ಕೂ ಇರಲಿ ಎಂದು ನಾನು ಊರಿಂದ ತೂತಾಗಿದ್ದ ಹಳೆಯ ಅಲ್ಯೂಮಿನಿಯಮ್ನ ಕ್ಯಾನೊಂದನ್ನು ತಂದಿದ್ದೆ. ಅದನ್ನೇ ಅಡ್ಜಸ್ಟ್ ಮಾಡುವ ಎಂದರೆ ಪಂಚಾಕ್ಷರಿ ಕೇಳಲಿಲ್ಲ. ಅವನ ಹಾಗೆ ಪೂರ್ತಿ ವ್ಯವಸ್ಥೆ ಮಾಡಲಿಕ್ಕೆ ನಿಮಗೆ ಆಗಲ್ಲ. ಸೈಕಲ್ನಿಂದ ಹಿಡಿದು ಎಲ್ಲವೂ ಬೇಕು ಎಂದಿದ್ದರು. ಏನು ಮಾಡಲಿಕ್ಕಾಗುತ್ತೆ? ನಾನೂ ಪುನೀತ ಹುಡುಕಿ ಹೊರಟೆವು.
ಹಾಲಿನವನು ಹುಡುಕಿಕೊಂಡು ಹೋದರೆ ಅವನು ಬೆಳಗ್ಗೆಯೇ ಹಾಲನ್ನು ಹಾಕಿ ಅವನ ಅಕ್ಕನ ಮನೆಯಲ್ಲಿ ಕಾರ್ಯಕ್ರಮ ಎಂದು ಹೊರಟಾಗಿತ್ತು. ಈಗ ನಮಗೆ ಏನು ಮಾಡಬೇಕೆಂದು ದಿಕ್ಕು ತೋಚದ ಸ್ಥಿತಿ. ಸುತ್ತಾ ಸುತ್ತಾ ಯಾರು ಹೀಗೆ ಹಾಲು ಹಾಕುವವರಿದ್ದಾರೆ ಅವರ ಮನೆಗಳಿಗೂ ಹೋಗಿ ಬಂದೆ. ಒಬ್ಬೊಬ್ಬರದ್ದು ಒಂದೊಂದು ಕಥೆ. ಕೆಲವರು ಕ್ಯಾನನ್ನೇ ಇಟ್ಟಿರಲಿಲ್ಲ, ಸ್ಟೀಲ್ ಕ್ಯಾರಿಯರ್ ಬಳಸಿದರೆ ಕೆಲವರು ಪ್ಲಾಸ್ಟಿಕ್ ಕ್ಯಾನ್ಗಳನ್ನು ಬಳಸುತ್ತಿದ್ದರು.

ಕ್ಯಾನ್ ಒಂದೇ ಅಲ್ಲವಲ್ಲ ಜೊತೆಗೆ ಅಳತೆಗಾಗಿ ಸೇರು. ಹಾಲನ್ನು ಹೊರಗೆ ತೆಗೆಯಲಿಕ್ಕೆ ಉದ್ದ ಹಿಡಿಕೆಯ ಬಟ್ಟಲು ಇವನ್ನೆಲ್ಲಾ ತರುವುದು ಎಲ್ಲಿಂದ? ನಾಲ್ಕಾರು ಕಡೆ ಓಡಾಡಿದೆವು ಅಲ್ಲೇ ಅಕ್ಕಪಕ್ಕದಲ್ಲಿದ್ದ ಹಳ್ಳಿಗೂ ಹೋಗಿ ಬಂದೆವು. ಅಲ್ಲೆಲ್ಲಾ ಇಲ್ಲವೆಂತಲ್ಲ; ಇದ್ದರೂ ಕೊಟ್ಟು ಕಳೆದುಹೋದರೆ ನಾಳಿನ ಗತಿ ಏನು? ಎನ್ನುವುದು ಅವರ ಚಿಂತೆ. ಒಂದಿಬ್ಬರಲ್ಲಿ ಗೋಗರೆದದ್ದಕ್ಕೆ ಅವರು ನಮ್ಮನ್ನು, `ಎಂಥಾ ನೀವು ಹೀಗೆ ಮಂಡೆ ಜೀವತಿನ್ನುವುದು’ ಎಂದು ಬೈದುಬಿಟ್ಟಿದ್ದರು. ನನಗೂ ರೋಸಿಹೋಗಿತ್ತು. ಪಂಚಾಕ್ಷರಿ ಮೇಲೆ ಮೇಲೆ ಫೋನ್ ಬೇರೆ ಮಾಡುತ್ತಿದ್ದರು. `ನಡಿ ಪುನೀತ ಇವರು ಕೊಡದಿದ್ದರೇನು? ನಾವು ನಮ್ಮದೇ ಸೆಟ್ ಅಪ್ ಮಾಡಿಕೊಳ್ಳೋಣ’ ಎಂದು ಆಟೋ ಹತ್ತಿ ಹೊರಟೇಬಿಟ್ಟೆವು.
ಬೋಳಾ ರಂಗನಾಥ್ ರಾವ್ ಅವರ ಮನೆಯ ಮುಂದೆ ಇಳಿಯುವಾಗ ಪಂಚಾಕ್ಷರಿ `ಎಲ್ಲಿ ಹಾಲಿನವ?’ ಎಂದರು. `ಬರುತ್ತಾನಂತೆ’ ಎಂದು ಹೇಳಿದವರೇ, ಮನೆಯ ಪಕ್ಕದಲ್ಲಿ ನಿಲ್ಲಿಸಿದ್ದ ಬಾಡಿಗೆಗೆ ತಂದಿದ್ದ ಚಂದ್ರಣ್ಣ ಬಳಸುತ್ತಿದ್ದ ಸೈಕಲ್ ಅನ್ನೇ ತಂದು ಅದರ ಕ್ಯಾರಿಯರ್ಗೆ ನಮ್ಮ ಬಳಿ ಇದ್ದ ತೂತಿನ ಕ್ಯಾನನ್ನೆ ಕಟ್ಟಿದೆವು. ಪುಟ್ಟಣ್ಣ `ಯಾಕೆ ಮೇಡಂ ಸಿಗಲಿಲ್ಲವಾ?’ ಎಂದ. ಅಂದುಕೊಂಡ ಹಾಗೆ ಆಗಿಬಿಟ್ಟರೆ ಸ್ವಾರಸ್ಯ ಏಣಿದೆ ಈಗ ನಮಗೆ ಚಾಲೆಂಜ್ ಕಡಿಮೆ ಸಮಯದಲ್ಲಿ ಎಲ್ಲವನ್ನೂ ಜೋಡಿಸಬೇಕು ಎಂದ್. ಅವನೂ ನಮ್ಮ ಜೊತೆ ಕೈಜೋಡಿಸಿದ.
ರಂಗನಾಥ್ ರಾವ್ ಅವರನ್ನು ಕೇಳಿ ಅದರೊಳಗೆ ಹಿಡಿಯುವ ಪಾತ್ರೆಯನ್ನು ಇಟ್ಟು ಒಂದು ಲೀಟರ್ ಹಾಲನ್ನು ಆ ಪಾತ್ರೆಗೆ ಸುರಿದೆವು. ಸಮಾರಾಧನೆಯಲ್ಲಿ ಸಾರನ್ನು ಬಡಿಸುವ ವಿಶೇಷವಾದ ಸೌಟನ್ನು ಹುಡುಕಿ ತೆಗೆದೆವು. ನಾವು ಕೇಳಿದ್ದಕ್ಕೆಲ್ಲಾ ರಂಗನಾಥ ರಾವ್ ಇಲ್ಲ ಎನ್ನದಂತೆ ಹುಡುಕಿ ಹುಡುಕಿ ಕೊಟ್ಟರು. ಕ್ಯಾನಿನ ಮೇಲೆ ಒಂದು ಪಾತ್ರೆಯನ್ನೂ ಬಾರಲು ಹಾಕಿ ಥೇಟ್ ಹಾಲಿನವನ ಸೆಟ್ ಅಪ್ ಥರಾನೇ ಇರುವ ಹಾಗೆ ನೋಡಿಕೊಂಡೆವು. ಉಸ್ಸೆಂದು ನಿಟ್ಟುಸಿರಿಟ್ಟು, ನಾವು `ರೆಡಿ’ ಎಂದ ತಕ್ಷಣ ಬಂದು ನೋಡಿದ ಪಂಚಾಕ್ಷರಿಯ ಹದ್ದಿನಕಣ್ಣಿಗೆ ಇದು ಚಂದ್ರಣ್ಣನ ಸೈಕಲ್ ಎನ್ನುವುದು ಗೊತ್ತಾಗಿಬಿಟ್ಟಿತು. ಬಿಲ್ಕುಲ್ ಆಗಲ್ಲ ಅಂದುಬಿಟ್ಟರು. `ಎಲ್ಲಾಸೈಕಲ್ಲುಗಳು ಒಂದೇ ಚಂದ್ರಣ್ಣನ ಹತ್ತಿರ ಇರುವ ಸೈಕಲ್ ಥರದ್ದೆ ಸೈಕಲ್ ಹಾಲಿನವನ ಹತ್ತಿರ ಇರಬಾರದೇಕೆ?’ ಎನ್ನುವುದು ನಮ್ಮ ವಾದ.
`ಪ್ರತಿಯೊಂದು ಪ್ರಾಪರ್ಟಿಗೂ ಒಂದೊಂದು ಚಹರೆ ಇರುತ್ತೆ, ಹಾಗೆಲ್ಲ ಅನ್ನಲಿಕ್ಕೆ ಆಗಲ್ಲ’ ಎನ್ನುವುದು ಅವರ ನಿಲುವು. ಬೆಳಗಿನಿಂದ ಒಂದೇ ಸಮನೆ ಹಾಲಿನವನಿಗಾಗಿ ಸುತ್ತಿದ್ದ ಸಿಟ್ಟು ಇದ್ದಕ್ಕಿದ್ದ ಹಾಗೆ ನೆತ್ತಿಗೇರಿತು. ಸೈಕಲ್ನ ಚಹರೆ ನೋಡಿ ತಾನೆ ಗುರುತಿಸುವುದು ಎಂದು ಬೇಕಾಬಿಟ್ಟಿಯಾಗಿ ಬದಲಿಸಿಬಿಟ್ಟೆವು ಎಲ್ಲೆಲ್ಲೋ ಏನೇನೋ ಸುತ್ತಿ, ಮೆತ್ತಿ, ಅಲ್ಲಲ್ಲಿ ಬಣ್ಣ ಹಚ್ಚಿ… ಮಳೆಗಾಲವಾದ್ದರಿಂದ ಕೆಸರನ್ನು ಸುರಿದು… ಹೀಗೆ. ನಂತರ ಅವರ ಮುಂದೆ ಸೈಕಲ್ ಅನ್ನು ತಂದು ನಿಲ್ಲಿಸಿ, `ಇದು ಚಂದ್ರಣ್ಣ ಸೈಕಲ್ ಇದ್ದ ಹಾಗೆ ಇದ್ಯಾ ಈಗ ಹೇಳಿ?’ ಎಂದೆ. ಮಾತನಾಡುವುದ್ಯಾಕೋ ಸರಿ ಬರಲ್ಲ ಎಂದು ಅವರೂ ಸುಮ್ಮನೆ ಹೊರಟರು. ಅಂತೂ ಇಂತೂ ಒಂದು ಯುದ್ಧದಲ್ಲಿ ಗೆದ್ದ ಹಾಗೆ ಆಯಿತು.
ಎಲ್ಲಾ ಸರಿಯಾಯಿತು, ಇನ್ನೇನು ಎಲ್ಲವೂ ಸಲೀಸು ಎನ್ನುವಾಗ ಪುನೀತ ಡೈಲಾಗ್ ಹೇಳಲು ನಿಂತ. ಅವನ ಕಣ್ಣುಗಳಲ್ಲಿ ಅತಿಯಾದ ಆತ್ಮವಿಶ್ವಾಸ; ನನಗೂ ಕೂಡಾ, ಯಾಕೆಂದರೆ ಡೈಲಾಗ್ ಉರು ಹೊಡೆಸಿದವಳೆ ನಾನಲ್ಲವಾ? ಅದೇ ವಿಶ್ವಾಸದಿಂದ ಗೇಟನ್ನು ತೆಗೆದುಕೊಂಡು ಒಳಗೆ ಬಂದ ಬಾಗಿಲ ಹತ್ತಿತ್ರ ನಿಂತು ಹಾಲೂ ಎಂದು ಕೂಗಿದ ಯಾವ ತಾಪತ್ರಯವೂ ಇಲ್ಲ. ಸೀನ್ ಮುಗಿದ ತಕ್ಷಣ ಅಮ್ಮಾ ಹೇಗಿತ್ತು ಎಂದ. `ಸೂಪರ್’ ಎಂದು ನಾನೂ ನಕ್ಕೆ. ಎಲ್ಲರೂ `ಏನ್ರಿ ನಿಮ್ಮ ಹುಡುಗ ಹೀಗೆ ಸಿನನ್ನು ತಿಂದು ಹಾಕ್ತಾ ಇದಾನೆ’ ಎಂದು ಎಲ್ಲರೂ ಹೊಗಳಿದರು.

ನಾನೂ ಹಮ್ಮಿನಿಂದ ಬೀಗುತ್ತಿದ್ದೆ- ನಾನು ಪಳಗಿಸಿದ ನಟ ಎಂದು. ಎರಡನೇ ದೃಶ್ಯಕ್ಕೆ ಶ್ರೀನಿವಾಸಾಚಾರಿ ಖಾಲಿ ಪಾತ್ರೆಯನ್ನು ಹಿಡಿದು ಬಂದಾಗ ಆಕ್ಷನ್ ಎಂದರು ಪಂಚಾಕ್ಷರಿ. ಪುನೀತ ಪಟ್ ಪಟ್ ಎಂದು ಡೈಲಾಗ್ ಹೇಳಿಬಿಟ್ಟ. ಪಂಚಾಕ್ಷರಿಗೆ ಸಮಾಧಾನ ಆಗಲಿಲ್ಲ, `ಸುಮ್ಮನೆ ನಿಂತು ಡೈಲಾಗ್ ಒಪ್ಪಿಸುವುದಲ್ಲ ವಿಉತ್ ಆಕ್ಷನ್ ಹೇಳಪ್ಪಾ. ನೋಡು ಹಾಲನ್ನು ಡಬ್ಬದಿಂದ ತೆಗೆದು ಪಾತ್ರೆಗೆ ಹಾಕುತ್ತಾ ಹೇಳಬೇಕು’ ಎಂದರು. ಎಡವಟ್ಟಾಗಿಬಿಟ್ಟಿತು, ಕೈ ಆಡಿದರೆ ಬಾಯಾಡಲ್ಲ, ಬಾಯಾಡಿದರೆ ಕೈ ಸಾಗಲ್ಲ. ಸ್ಟಾಂಡ್ ಹಾಕ್ಕೊಂಡು ಸೈಕಲ್ ಹೊಡೆದೇ ಹೊಡೆದ. ಕೊನೆಗೆ ಪಂಚಾಕ್ಷರಿ `ಡೈಲಾಗೆಲ್ಲಾ ಕಟ್ ಮಾಡಿ ಒಂದೊಂದೇ ಸಾಲು ಬರಬೇಕು ಹಾಗೆ ಬರೆದುಕೊಡಿ’ ಎಂದರು. `ಕಟ್ ಷಾಟ್ಸ್ ಮಾಡಿ’ ಎಂದೆ.
`ಚೆನ್ನಾಗಿರಲ್ಲ ಮೇಡಂ, ನಿಮ್ಮ ಶಿಷ್ಯನಿಗಾಗಿ ಏನೇನೋ ಮಾಡಲಿಕ್ಕಾಗಲ್ಲ, ಕಡಿಮೆ ಮಾಡಿಕೊಡಿ. ಹೀಗಾದರೆ ಈ ಸಣ್ಣ ಸೀನಿಗೆ ಇವತ್ತೆಲ್ಲಾ ಇಲ್ಲೇ ಇರಬೇಕಾಗುತ್ತೆ’ ಎಂದರು. ನಾನು ಕಷ್ಟ ಪಟ್ಟು ಎಲ್ಲಾ ಮಾತುಗಳನ್ನೂ ಕಡಿಮೆ ಮಾಡಿದೆ. ಆದರೂ ಅವನಿಗೆ ಹೇಳಲು ಕಷ್ಟವಾಯಿತು. ಕಡೆಗೆ ಅವನ ಬೆನ್ನಿಗೆ ಕ್ಯಾಮೆರಾ ಇಟ್ಟು, ಶ್ರೀನಿವಾಸಾಚಾರಿಯ ಪ್ರತಿಕ್ರಿಯೆಯ ಮೇಲೆ ಡೈಲಾಗ್ ಹಾಕುವ ಯೋಚನೆ ಮಾಡಿ, ಅಷ್ಟನ್ನು ಮಾತ್ರ ಪ್ರತ್ಯೇಕ ವಾಯ್ಸ್ ತೆಗೆದುಕೊಳ್ಳಲಾಯಿತು.
ಸೀನ್ ಮುಗಿದ ಮೇಲೆ, `ಏನೋ ಪುನೀತಾ?’ ಎಂದೆ. `ಏನ್ ಮಾಡೋದಮ್ಮಾ ಅವರು ಸುಮ್ಮನೆ ಮಾತು ತಗೋಬೇಕಿತ್ತು ತಾನೆ? ಅದನ್ನ ಬಿಟ್ಟು, ಹೀಗೆ ಮಾಡು ಹಾಗೆ ಮಾಡು ಎಂದರೆ ಏನು ಮಾಡೋದು ಎಲ್ಲಾ ಮರೆತು ಹೋಯ್ತು’ ಎಂದ. `ಆಗ ದೇವರನ್ನು ನೆನೆಸಿಕೊಳ್ಳಬೇಕಿತ್ತು’ ಎಂದು ರೇಗಿಸಿದ ಪುಟ್ಟಣ್ಣ. `ಕಲಾವಿದ ಆಗೋದು ಅಷ್ಟು ಸುಲಭಾ ಅಲ್ಲ ಆಂಗಿಕ, ವಾಚಿಕ ಜೊತೆಗೆ ಭಾವ ಪ್ರಕಾಶ ಸುಮ್ಮನೆ ಮಾತಲ್ಲ’ ಎಂದೆ. ಪುನೀತನಿಗೆ ಅವನದ್ದೇ ವಾದವಿತ್ತು. ಅಂಥಾ ವಾದಗಳ ಜೊತೆ ನನಗೆ ಕಷ್ಟ. ಕಲಾವಿದರಲ್ಲದವರನ್ನು ಕರೆತಂದಾಗ ಅವರು ಪ್ರತಿಭಾವಂತರಾದರೆ ನಾವು ಗೆಲ್ಲುತ್ತೇವೆ. ಇಲ್ಲದಿದ್ದರೆ ಅದು ಯಾವಾಗಲೂ ಕಷ್ಟವೇ.
। ಇನ್ನು ಮುಂದಿನ ವಾರಕ್ಕೆ ।






0 Comments