
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.
‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.
ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.
ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.
19
ಸೀರೆಯ ಹುಡುಕಾಟದಿಂದ ಶುರುವಾದ ಅಲೀಮಮ್ಮ ಮತ್ತು ನನ್ನ ಸಂಬಂಧ ಯಾವಾಗ ಆಪ್ತವಾಗಿ ಮಾತಾಡಲು ಶುರುವಾಯಿತು ಎನ್ನುವುದು ನನಗೂ ನೆನಪಾಗುತ್ತಿಲ್ಲ. ಶೂಟಿಂಗ್‌ನ ಕೆಲಸ ಮುಗಿದು ಒಂದು ಕಡೆ ಕುಳಿತಾಗ ಅಲೀಮಮ್ಮ ಬೀಡಿ ಕಟ್ಟುವ ತನ್ನ ಮೊರದೊಂದಿಗೆ ನನ್ನ ಜೊತೆ ಬಂದು ಕೂಡುತ್ತಿದ್ದರು. ಕೂತವಳ ಜೊತೆ ಮಾತಾಡುವಾಗ ತನ್ನ ಜೀವನದ ಎಷ್ಟೆಷ್ಟೋ ಕಥೆಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು. ‘ಅಲ್ಲಾ ಅಲೀಮಮ್ಮ ನೀವು ಈಗಲೇ ಇಷ್ಟು ಚೆನ್ನಾಗಿದ್ದೀರಿ. ವಯಸ್ಸಿನಲ್ಲಿದ್ದಾಗ ಇನ್ನೆಷ್ಟು ಚೆನ್ನಾಗಿದ್ದಿರೋ? ನಿಮ್ಮ ಯಜಮಾನರು ನಿಮ್ಮನ್ನು ನೋಡಿದ ತಕ್ಷಣ ಒಪ್ಪಿಬಿಟ್ಟರಾ?’ ಎಂದೆ.
‘ನಮ್ಮ ಕಾಲದಲ್ಲಿ ನಾವು ನೋಡುವುದು ಅಂತೆಲ್ಲಾ ಇರಲಿಲ್ಲ. ಅವರ ತಾಯಿ ಬಂದು ನನ್ನ ನೋಡಿ ಕಬೂಲ್ ಹೇಳಿದರು. ನಿಖಾ ಆಯಿತು ಅಷ್ಟೆ’ ಎಂದರು. ನಾನು ತಮಾಷೆಯಾಗಿ ‘ನಿಮ್ಮ ಗಂಡ ನಿಮಗಿಂತ ಚೆಂದ ಇರಲಿಕ್ಕಂತೂ ಸಾಧ್ಯವಿಲ್ಲ. ನಿಮ್ಮಂಥ ಸುಂದರಿಯನ್ನು ಪಡೀಲಿಕ್ಕೆ ಆತ ಅದೆಷ್ಟು ಪುಣ್ಯ ಮಾಡಿದ್ದರೋ’ ಎಂದೆ. ‘ತೋಬಾ ತೋಬಾ, ನನ್ನ ಸಾಬ್‌ದು ನನ್ನನ್ನೂ ಮೀರಿ ಚೆಂದ. ನನ್ನ ಮಗಳು ನುಸೈಬಾ ಇದ್ದಾಳಲ್ಲಾ, ಅವಳೆಲ್ಲ ಥೇಟು ಅವಳ ಅಬ್ಬಾನ ಹಾಗೆ. ನಿಮಗೆ ಅವರ ಬಗ್ಗೆ ಹೇಳಬೇಕು ಅಂದ್ರೆ ಒಂದು ದಿನವಾದ್ರೂ ಆಗುತ್ತೆ’ ಎಂದರು. ಗಂಡನ ಬಗ್ಗೆ ದಿನವಿಡೀ ಹೇಳುವಂಥಾದ್ದು ಏನಿರುತ್ತೆ? ಅಬ್ಬಬ್ಬಾ ಎಂದರೆ ಅರ್ಧಗಂಟೆ. ನನ್ನ ಗಂಡನ ಬಗ್ಗೆ ಯಾರಾದರೂ ಕೇಳಿದರೆ ನಾನು ಹೇಳುವುದೂ ಅಷ್ಟೇ. ಅದೇ ಹೇಳಿ, ಹೇಳಿ ಬೇಸರವಾದ ಕೆಲವು ಮಾತುಗಳು. ಆದರೆ ಅಲೀಮಮ್ಮನದ್ದು ತೀರದ ಉತ್ಸಾಹ ತನ್ನ ಗಂಡ ಪಚ್ಚಿಲ ಮಹಮದ್‌ನ ಹುಟ್ಟಿನಿಂದ ಎಲ್ಲವನ್ನು ಸಾದ್ಯಂತವಾಗಿ ವಿವರಿಸಿದ್ದರು. ಅವರ ಗಂಡನ ಹುಟ್ಟೂ ಕೂಡಾ ಒಂದು ಅಪೂರ್ವ ಘಟನೆಯಾಗಿತ್ತು.
‘ಮದುವೆಯಾಗಿ ನಾಲ್ಕು ವರ್ಷ ಕಳೆದರೂ ಮಕ್ಕಳಿಲ್ಲದ ತನ್ನ ಅತ್ತೆ ತನ್ನ ಗಂಡನಿಗೆ ಇನ್ನೊಂದು ಮದುವೆ ಮಾಡಿಬಿಡಬಹುದು ಎನ್ನುವ ಭಯದಲ್ಲಿ, ಯಾರಿಗೂ ಕಾಣದಂತೆ ತವರು ಮನೆಯವರು ತನಗಾಗಿ ಕೊಟ್ಟ ಗಂಡು ಆಡಿಗೆ ತಗಡಿನಲ್ಲಿ ಉಲ್ಲಾಳ ದರ್ಗಾ ಎಂದು ಬರೆದು ಅದನ್ನು ಆ ಆಡಿನ ಕತ್ತಿಗೆ ಕಟ್ಟಿ ಹರಕೆಗೆ ಅಟ್ಟಿಬಿಟ್ಟಿದ್ದರಂತೆ. ಆಗೆಲ್ಲಾ ಹಾಗೆ ಬರೆದ ಆಡನ್ನು ಯಾರೂ ಮುಟ್ಟುತ್ತಿರಲಿಲ್ಲವಂತೆ. ಯಾರು ದರ್ಗಾಗೆ ಹೊರಟಿರುತ್ತಾರೋ ಅಥವಾ ಆ ದಿಕ್ಕಿಗೆ ಹೋಗುವವರಿರುತ್ತಾರೋ ಅವರು ಅದನ್ನು ಅಟ್ಟಿಕೊಂಡು ಹೋಗುತ್ತಿದ್ದರಂತೆ. ಹಾಗೆ ನನ್ನ ಅತ್ತೆ ಅವರ ಮಕ್ಕಳ ಬಯಕೆಗಾಗಿ ಆಡನ್ನು ಉಲ್ಲಾಳ ದರ್ಗಾಕ್ಕೆ ಹರಕೆ ಒಪ್ಪಿಸಿ ಬಿಟ್ಟಿದ್ದರಂತೆ. ಇತ್ತ ಅತ್ತೆಯ ಮನೆಯವರು ಆಡು ಎಲ್ಲಿ ಎಂದು ಹುಡುಕತೊಡಗಿದ್ದರಂತೆ.

ಆಡು ಸಿಗಲಿಲ್ಲ, ಅತ್ತೆ ಮಾತ್ರಾ ಯಾವುದೇ ಗುಟ್ಟನ್ನೂ ಬಿಟ್ಟುಕೊಡದೆ ‘ನನ್ನ ತವರಿಗೆ ಹೇಳಿ ಇನ್ನೊಂದು ಆಡನ್ನು ತರಿಸಿಕೊಳ್ಳುತ್ತೇನೆ ಬಿಡಿ’ ಎಂದಿದ್ದರಂತೆ. ದಿನಾ ಅಲ್ಲಾನಲ್ಲ್ಲಿ ಮಕ್ಕಳಿಗಾಗಿ ಪ್ರಾರ್ಥನೆ ಮಾಡುತ್ತಾ, ಗಂಡನಿಗೂ ಮಾಡುವಂತೆ ಪ್ರೇರೇಪಿಸುತ್ತಾ ಇರುತ್ತಿದ್ದರಂತೆ. ಯಾವ ದೇವರಿಗೆ ಪ್ರಾರ್ಥನೆ ಇಷ್ಟವಾಗುವುದಿಲ್ಲ. ಪ್ರಾರ್ಥಿಸುವವರ ಕಡೆಗೆ ಅಲ್ಲಾ ತಿರುಗಿ ನೋಡುತ್ತಾನಂತೆ. ನನ್ನ ಅತ್ತೆಯ ಮೇಲೆ ಅಲ್ಲಾನಿಗೆ ಕರುಣೆ ಬಂದು ಹುಟ್ಟಿದವರೇ ನನ್ನ ಗಂಡ. ಅಲ್ಲಾನ ಆಣತಿ, ಪೈಗಂಬರರ ಕೃಪೆ ಮತ್ತು ಸೈಯದ್ ಮದನಿಯವರ ಆಶೀರ್ವಾದದಿಂದ ಹುಟ್ಟಿದ ಮಗುವಿಗೆ ಮಹಮದ್ ಅಂತಾ ಹೆಸರನ್ನಿಟ್ಟರು.
ಅತ್ತೆಗೆ ಹುಟ್ಟಿದ್ದು ಒಂದೇ ಮಗು. ಮಕ್ಕಳ ಫಲವಿಲ್ಲದ ತನಗೆ ಹರಕೆಯ ಕಾರಣಕ್ಕೆ ಈ ಮಗು ಹುಟ್ಟಿದೆ ಎಂದು ಆಕೆ ಎಲ್ಲರ ಬಳಿ ಮಗುವಿನ ಜನ್ಮ ರಹಸ್ಯವನ್ನು ಆಗ ಬಿಚ್ಚಿಟ್ಟಳಂತೆ. ಮೊಹಮದ್ ಎಂದು ನಾಮಕರಣ ಮಾಡಿಸಿಕೊಂಡ ಆ ಕೂಸು ದಿನ ಕಳೆದಂತೆಲ್ಲಾ ಅಪೂರ್ವ ಕಾಂತಿಯಿಂದ ಕಂಗೊಳಿಸತೊಡಗಿತ್ತಂತೆ. ಎಲ್ಲರ ಕಣ್ಣೂ ಆ ಮಗುವಿನ ಮೇಲೆ, ಅಂಥಾ ಚಂದದ ಕೂಸು! ಮಸೀದಿಯ ಭಾಂಗ್ ಅಥವಾ ಅಮ್ಮಿ ಹಾಡುವ ಅಲ್ಲಾನ ಹಾಡುಗಳನ್ನು ಕೇಳಿದರೆ ಸಾಕು ಮೈಮರೆತು ಕೇಳುತ್ತಿತ್ತಂತೆ.
ದಿನ ಕಳೆದಂತೆಲ್ಲಾ ಅಲ್ಲಾನಲ್ಲೇ ಮನಸ್ಸಿಟ್ಟು, ಕುರಾನ್ ಪಠಣ, ನಮಾಜುಗಳಲ್ಲಿ ಕಾಲ ಕಳೆಯುತ್ತಿದ್ದ ಮಗನನ್ನು ನೋಡಿ ಅತ್ತೆಗೆ ಸಂಕಟವಾಗುತ್ತಿತ್ತು. ಏನಾದರೂ ಸರಿ ಕೆಲಸವನ್ನು ಮಾಡುವಂತೆ ಮಗನಿಗೆ ಬುದ್ದಿ ಹೇಳಿದರೆ ಮಗ ಕೇಳುವ ಆಸಾಮಿಯೇ? ‘ನನಗಿಷ್ಟೇ ಸಾಕು’ ಎಂದು ಸುಮ್ಮನಾಗಿ ಬಿಡುತ್ತಿದ್ದರಂತೆ. ಮಸೀದಿಗೆ ಹೋಗುವುದು ಭಾಂಗ್ ಕೂಗುವುದು ಅಭ್ಯಾಸ ಮಾಡತೊಡಗಿದ್ದರಿಂದ ಧಾರ್ಮಿಕ ಶ್ರದ್ಧೆ ಇನ್ನಷ್ಟು ಜಾಸ್ತಿ ಆಗತೊಡಗಿತು. ಇಪ್ಪತ್ತಾದರೂ ಮದುವೆಯ ಕಡೆಗೆ ಮನಸ್ಸು ಮಾಡದ ಮಗನಿಗೆ ಹೇಗಾದರೂ ಸರಿಯೇ ಮದುವೆ ಮಾಡಿಬಿಟ್ಟರೆ ಎಲ್ಲವೂ ಸರಿಯಾಗುತ್ತೆ ಎಂದು ಮದುವೆಯ ಪ್ರಸ್ತಾಪ ಮಾಡಿದಾಗ, ಅದೆಲ್ಲಾ ಬೇಡ ನನಗೇ ದುಡಿಮೆ ಇಲ್ಲ ಎಂದು ತಳ್ಳಿಬಿಟ್ಟಿದ್ದರಂತೆ. ಮತ್ತೆ ಅತ್ತೆಯ ಕಣ್ಣಿಗೆ ಕಂಡಿದ್ದು ಉಲ್ಲಾಳದ ದರ್ಗಾ. ‘ನೀನೇ ಕೊಟ್ಟ ಮಗುವಿಗೆ ಸರಿಯಾದ ದಾರಿ ತೋರು, ಈ ಮನೆಗೆ ಒಬ್ಬ ವಾರಸುದಾರನನ್ನು ಕರುಣಿಸು’ ಎಂದು ಮತ್ತೆ ಹರಕೆ ಹೊತ್ತು ಮತ್ತೊಂದು ಆಡನ್ನು ಕಾಣಿಕೆಯಾಗಿ ಬಿಟ್ಟರಂತೆ.
ಆಗೆಲ್ಲಾ ಉಲ್ಲಾಳ ದರ್ಗಾಕ್ಕೆ ಹೀಗೆ ಕಾಂಪೌಂಡ್ ಇರಲಿಲ್ಲವಂತೆ. ಉರುಸ್ಸು ನಡೆಯುವಾಗ ಬಯಲಿನಲ್ಲಿ ಮರದ ಕಂಬಗಳನ್ನು ನೆಟ್ಟು ಸುತ್ತಾ ಹಗ್ಗವನ್ನು ಕಟ್ಟಿ ಒಳಗೆ ಅಂಗಳವನ್ನು ಸ್ವಚ್ಚಮಾಡಿ ಊಟಕ್ಕೆ ಹಾಕುತ್ತಿದ್ದರಂತೆ. ಎಲ್ಲೆಲ್ಲಿಂದಲೋ ಜನ ಬರುತ್ತಿದ್ದರೆ ನಮ್ಮ ಅಬ್ಬಾ ಕೂಡಾ ಒಮ್ಮೆ ಬಂದಿದ್ದರಂತೆ. ಅವರು ಹೇಳುತ್ತಿದ್ದರು- ಒಂದು ಸಲಕ್ಕೆ ೨೦೦೦ ಜನ ಊಟಕ್ಕೆ ಕೂಡುತ್ತಿದ್ದರಂತೆ. ಇವರು ಊಟಕ್ಕೆ ಕೂತಿದ್ದು ೫೨ನೆಯ ಸರತಿಯಲ್ಲಿ. ಹೀಗೆ ಬಿಟ್ಟ ಆಡುಗಳು ಉರುಸ್ಸಿನ ಜಾಗಕ್ಕೆ ಬಂದು ಸೇರುತ್ತಿದ್ದವಲ್ಲ, ಅವುಗಳನ್ನು ಮಾತ್ರ ಕಡಿದು ಪದಾರ್ಥ ತಯಾರು ಮಾಡುತ್ತಿದ್ದರಂತೆ. ಮತ್ತೆ ತುಪ್ಪವನ್ನೇ ಬಳಸಿ ಅನ್ನವನ್ನು ಮಾಡುತ್ತಿದ್ದರಂತೆ. ಊಟ ಮಾಡಿದ್ದವರ ಲೆಕ್ಕಕ್ಕೆ ಸಿಗದೆ ಹೋಗುತ್ತಿತ್ತಂತೆ.
ಇದೆಲ್ಲಾ ನಡೆಯುವಾಗ ಒಂದು ದಿನ ಇದ್ದಕ್ಕಿದ್ದ ಹಾಗೆ ನನ್ನ ಸಾಬ್ ಸ್ನೇಹಿತನ ದೋಣಿಗೆ ಮೀನು ಹಿಡಿಯಲಿಕ್ಕೆಂದು ಹೋದರಂತೆ. ಆಗೆಲ್ಲಾ ಮೂರು ನಾಕು ದಿನ ಸಮುದ್ರದ ನಡುವೆ ಹೋಗುತ್ತಿದ್ದದ್ದು ವಾಡಿಕೆ. ಇನ್ನೂ ಸ್ವಲ್ಪ ದೂರವಷ್ಟೇ ಹೋಗಿದ್ದರಂತೆ. ಸಮುದ್ರ ಆಳವಾಗುತ್ತಾ ಹೋಗುತ್ತಿತ್ತು. ಆಗ ಇವರಿಗೆ ಮನಸ್ಸಿಗೆ ಮಂಕು ಕವಿದಂತಾಗಿ ಆಕಾಶವನ್ನೇ ದಿಟ್ಟಿಸುತ್ತಾ ಕುಳಿತುಬಿಟ್ಟರಂತೆ. ಹಾಗೆ ನೋಡುವಾಗ ಆಕಾಶದಲ್ಲಿ ದೊಡ್ಡದೊಂದು ಬೆಳಕು ಕಾಣಿಸಿಕೊಂಡು ಹೇಳಲಿಕ್ಕೆ ಶುರು ಮಾಡಿತಂತೆ. ಇದ್ದಕ್ಕಿದ್ದ ಹಾಗೆ ದೋಣಿಯ ತುದಿಗೆ ಬಂದು ಸಮುದ್ರಕ್ಕೆ ಹಾರೇಬಿಟ್ಟರಂತೆ. ಕರೆದುಕೊಂಡು ಹೋಗಿದ್ದ ಸ್ನೇಹಿತನಿಗೋ ದೊಡ್ಡ ಆಘಾತ. ಇಂಥಾ ಕೆಲಸ ಮಾಡಿದ? ಅನುಭವಿ ಅಲ್ಲದಿದ್ದರೆ ಹೀಗೆ ನೀರಿಗೆ ಹಾರುವುದು ಅಸಾಧ್ಯ. ಇನ್ನವನು ಬದುಕಿ ಬರುತ್ತಾನಾ? ಈಗ ಇವರ ಮನೆಗೆ ಹೇಳುವುದು ಹೇಗೆ? ಇವರ ಅಮ್ಮಿ ಇವನ ಮೇಲೇ ಜೀವ ಇಟ್ಟುಕೊಂಡಿದ್ದಾರೆ ಎಂದು ಭಯಭೀತನಾದನಂತೆ.
ಸಮುದ್ರಕ್ಕೆ ಹಾರಿದ ಇವರನ್ನು ಯಾವ ಶಕ್ತಿಯೋ ಎಳೆದುಕೊಂಡು ಹೋದಂತೆ ತಳವನ್ನು ತಲುಪಿದ್ದರಂತೆ. ಕೆಳಗೆ ನೋಡಿದರೆ ತುಂಬಾ ಅಪರೂಪವಾದ ಪಚ್ಚಿಲ (ಹಸಿರು ಬಣ್ಣದ ದೊಡ್ಡ ಚಿಪ್ಪುಗಳಲ್ಲಿನ ಮೃದ್ವಂಗಿ)ಗಳ ರಾಶಿಯೇ ಕಂಡಿತಂತೆ. ‘ಏನು ಕೆಲಸ ಮಾಡುವುದು ಎಂದು ಕೇಳುತ್ತಿದ್ದೆಯಲ್ಲಾ? ನೋಡು ನಿನಗಾಗಿ ಈ ಪಚ್ಚಿಲಗಳು ಇವೆ. ಇವುಗಳನ್ನು ಕಡೆದು ಮಾರು. ಇದೇ ನಿನ್ನ ಜೀವನಕ್ಕೆ ದಾರಿಯಾಗುತ್ತದೆ. ಇನ್ನು ನೀನು ಮದುವೆಯನ್ನೂ ಆಗಬಹುದು’ ಎಂದು ಹೇಳಿದ ಹಾಗಾಯಿತಂತೆ. ಮತ್ತೆ ಅದೇ ಶಕ್ತಿ ಅವರನ್ನು ಮೇಲೆಯೂ ತಂದುಬಿಟ್ಟಿತಂತೆ. ಆ ಅನುಭವವನ್ನು ಅವರ ಬಾಯಿಂದಲೇ ಕೇಳಬೇಕು. ನನ್ನ ಬಳಿ ಎಷ್ಟು ಬಾರಿ ಹೇಳಿದ್ದಾರೋ? ನಾನೂ ಅಷ್ಟೇ. ಮೊದಲ ಬಾರಿ ಕೇಳುತ್ತಿದ್ದೇನೆ ಎನ್ನುವಂತೆಯೇ ಕೇಳಿದ್ದೇನೆ!’ ಎಂದರು ಅಲೀಮಮ್ಮ.
‘ಇದೆಲ್ಲಾ ಆದಮೇಲೆ ನನ್ನ ಸಾಬ್‌ಗೆ ಸಮುದ್ರದ ಆಳಕ್ಕೆ ಜಿಗಿಯುವುದು, ದೊಡ್ಡ ದೊಡ್ಡ ಬಂಡೆಗಳಿಗೆ ಅಂಟಿಕೊಂಡಿದ್ದ ಪಚ್ಚಿಲಗಳ ಗುಚ್ಚನ್ನು ಜೋಪಾನವಾಗಿ ಕಡಿದು ತರುವುದು ಸಲೀಸಾಗಿ ಹೋಯ್ತು. ಅದಕ್ಕಾಗಿ ಕಾಯುತ್ತಿದ್ದ ಜನ ಒಂದೇ ಕ್ಷಣದಲ್ಲಿ ಮುಗಿಬಿದ್ದು ತೆಗೆದುಕೊಂಡುಬಿಡುತ್ತಿದ್ದರು. ವ್ಯಾಪಾರವೂ ಜೋರಾಯ್ತು, ಕೈತುಂಬಾ ಹಣವೂ ಓಡಾಡತೊಡಗಿತು. ಅಪಾರ ಧರ್ಮ ಶ್ರದ್ಧೆಯ ನನ್ನ ಸಾಬ್ ತಮ್ಮ ನಮಾಜನ್ನು ಎಂದೂ ತಪ್ಪಿಸಿಲ್ಲ. ದೋಣಿಗೆ ಹೋದಾಗಲೂ ಸರಿಯೇ. ಮಕ್ಕಳಿಗೂ ಅದೇ ಹೇಳಿಕೊಟ್ಟಿದ್ದಾರೆ. ನನ್ನ ಅತ್ತೆಗೆ ನನ್ನ ಕಂಡರೆ ತುಂಬಾ ಇಷ್ಟ, ಇಷ್ಟು ಮಕ್ಕಳನ್ನು ಕೊಟ್ಟಿದ್ದೇನೆ ಎಂದು. ನನ್ನ ಗಂಡನಂತೂ ಸಾಧ್ಯವಾದಾಗಲೆಲ್ಲಾ ಅಲೀಖತ್ತುಗಳನ್ನು ಕೊಡಿಸುತ್ತಲೇ ಬಂದಿದ್ದಾರೆ’ ಎಂದು ಕಿವಿಯ ತುಂಬಿದ ಅಲೀಖತ್ತುಗಳನ್ನು ತೋರಿಸಿರು ಹೆಮ್ಮೆಯಿಂದ. ‘ಇಂಥವರ ಹೆಂಡತಿಯಾಗಿ ಬದುಕಲಿಕ್ಕೆ ನಾನು ಪುಣ್ಯ ಮಾಡಿದ್ದೇನೆ. ಈಗ ಹೇಳಿ ನಾನು ಚಂದವಾ ನನ್ನ ಸಾಬ್ ಚಂದವಾ?’ ಎಂದಿದ್ದರು ಅಲೀಮಮ್ಮ- ಚಂದ ಎನ್ನುವ ಪದಕ್ಕೆ ಹೊಸತೇ ರೂಪ ಕೊಟ್ಟು.

ಇನ್ನೊಂದು ದಿನ ಇನ್ನೊಂದು ಕಥೆ, ಒಮ್ಮೆ ಸಮುದ್ರ ವಿಕೋಪವಾಗಿ ಸಮುದ್ರಕ್ಕೆ ಹೋಗಿದ್ದ ತನ್ನ ಗಂಡ ಇದ್ದ ದೋಣಿ ಮೊಗಚಿ ಬಿದ್ದಿತ್ತಂತೆ. ಆಗ ಈಕೆ ಮೊದಲ ಮಗುವಿಗೆ ಬಸುರಿ. ದೋಣಿ ಮಗಚುವಾಗ ನಮಾಜಿಗೆ ಕೂತಿದ್ದ ಗಂಡ ದೋಣಿ ಮುಳುಗುತ್ತಿದ್ದುದು ಗೊತ್ತಾದರೂ ಕಣ್ಣೆ ಬಿಡಲಿಲ್ಲವಂತೆ. ಯಾವ ಮಾಯವೋ ಏನೋ? ಎಲ್ಲರೂ ಆ ದುರಂತದಲ್ಲಿ ಸತ್ತರೆ, ಈಕೆಯ ಗಂಡ ಮಾತ್ರ ಸಮುದ್ರದ ತಡದಲ್ಲಿ ಪ್ರಜ್ಞಾನಹೀನ ಸ್ಥಿತಿಯಲ್ಲಿ ಬಿದ್ದಿದ್ದನಂತೆ! ಕಣ್ಣು ತೆರೆದಾಗ ಆತ ಹೇಳಿದ ಕತೆ ಆಕೆಯಲ್ಲಿ ಇನ್ನಷ್ಟು ರೋಮಾಂಚನವನ್ನು ಉಂಟುಮಾಡಿತ್ತು. ಬೆಳಕಿನ ಕೈಗಳು ಆತನನ್ನು ಎತ್ತಿಕೊಂಡಿತ್ತಂತೆ. ಅಲ್ಲಾಹ್‌ನ ಅದೇ ಕೈಗಳು ತನ್ನ ಸಾಬ್‌ನನ್ನು ಸಮುದ್ರದ ತಡಿಗೆ ತಂದುಬಿಟ್ಟಿತ್ತಂತೆ. ನನಗೆ ಅಲೀಮಮ್ಮ ಹೇಳುವುದು ಕಥೆಯಾ? ಪುರಾಣವಾ? ಅಥವಾ ಗಂಡನ ಬಗ್ಗೆ ದೊಡ್ಡ ಭ್ರಮೆಯಾ? ಅರ್ಥವಾಗದೇ ಹೋಗಿತ್ತು.
ಪ್ರತಿ ಸಲ ಮಾತಾಡುವಾಗಲೂ ಹೀಗೆ ವಿವರಗಳು… ಹೀಗೆ ಅದ್ಭುತವಾದುದ್ದನ್ನು ಹೇಳುವ ಸಂಭ್ರಮವನ್ನು ಕಂಡು ಅಚ್ಚರಿಗೊಂಡಿದ್ದೆ. ಆಕೆಯ ಕಣ್ಣುಗಳು ಆರ್ದ್ರವಾಗುವುದನ್ನು ನೋಡಿದ್ದೆ. ಗಂಡ ಎಂದರೆ ಹೀಗೂ ಸಂಭ್ರಮ ಸಾಧ್ಯವಾ? ಎಂದು ಕೇಳಿಕೊಂಡಿದ್ದೇನೆ. ನನಗ್ಯಾಕೆ ಯಾವತ್ತು ಹೀಗನ್ನಿಸಲೇ ಇಲ್ಲವಲ್ಲ ಎಂದು ಅಚ್ಚರಿಪಟ್ಟಿದ್ದೇನೆ. ಹಗಲುಗಳಲ್ಲಿ, ಸಂಜೆಗಳಲ್ಲಿ, ಯಾವಾಗ ಸಾಧ್ಯವಾದರೆ ಆಗೆಲ್ಲಾ ಮಾತಾಡಿದ್ದೇವೆ. ಆಕೆ ಹಾಕುತ್ತಿದ್ದ ಉಪ್ಪಿನಕಾಯನ್ನು ಕೊಂಡು ಊಟದ ಹೊತ್ತಿನಲ್ಲಿ ಹಂಚಿದ್ದೆ. ‘ಇದ್ಯಾವುದು ಉಪ್ಪಿನಕಾಯಿ? ಹೊಟೇಲಿನವರು ಕೊಟ್ಟಂತಿಲ್ಲವಲ್ಲ. ತುಂಬ ಡಿಫರೆಂಟಾಗಿದೆ’ ಎಂದು ಎಲ್ಲರೂ ಚಪ್ಪರಿಸುವಾಗ ‘ಸಮುದ್ರದ ದೇವತೆ’ ತಂದುಕೊಟ್ಟಿದ್ದು ಎಂದು ಹಾಸ್ಯ ಮಾಡಿದ್ದೆ. ಅದನ್ನ ಕೇಳಿ ‘ಎಂಥಾ ಮಾತು’ ಎಂದು ಅಲೀಮಮ್ಮ ನಾಚಿಕೊಂಡಿದ್ದರು. ಇಂಥಾ ಅಲೀಮಮ್ಮ ನನ್ನ ಬಳಿ ಒಂದು ಮಾತನ್ನು ಹೇಳಿದ್ದರು ಅದೂ ಶೂಟಿಂಗ್ ಇನ್ನೆರಡು ದಿನಗಳಲ್ಲಿ ಮುಗಿಯುತ್ತೆ ಎನ್ನುವಾಗ. ಅದನ್ನು ಮಾತ್ರ ನಾನು ಯಾವತ್ತು ಮರೆಯಲ್ಲ. ಈಗಲೂ ಅದನ್ನು ನನ್ನ ಎದೆಯಲ್ಲಿ ಹಸಿಯಾಗಿಸಿಕೊಂಡು ಮತ್ತೆ ಉಸಿರಾಡಬೇಕು ಅನ್ನಿಸುತ್ತದೆ.






ಅವಧಿ ಅಂಕಣ ಬರೆಹ ಓದು ಆಪ್ತ ತೆ ತಂತು.ಮುಸ್ಲಿಂ ಸಮುದಾಯದ ಪರಿಭಾಷೆ ಮತ್ತಷ್ಟು ಓದಿನ ಉತ್ಸುಕತೆ ಹೆಚ್ಚಿಸುತ್ತೆ. ಮಹಮದ್ ನ ಹುಟ್ಟು ಕುತೂಹಲ ವನ್ನು ಮೂಡಿಸುತ್ತದೆ. ಅಂತ್ಯ ಹೇಗೆ ಕೊನೆಯಾಗುತ್ತದೆ………